ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಇನ್ನಿಲ್ಲ
ಮಾಜಿ ಸಿಎಂ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ , ಪದ್ಮ ವಿಭೂಷಣ ಎಸ್‌ಎಂಕೆ ಇನ್ನು ನೆನಪು
3 ದಿನ ಶೋಕಾಚರಣೆ
ಬೆಂಗಳೂರು: ಕರ್ನಾಟಕ ರಾಜ್ಯದ 10ನೇ ಮುಖ್ಯಮಂತ್ರಿಯಾಗಿ , ನೆರೆಯ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿ, ಭಾರತ ಸರ್ಕಾರದಲ್ಲಿ ವಿದೇಶಾಂಗ ಖಾತೆ ಸಚಿವರಾಗಿ ಅತ್ಯುತ್ತಮ ಆಡಳಿತಗಾರ ಹಾಗೂ ಮುತ್ಸದ್ಧಿ ಎನಿಸಿದ್ದ ಪದ್ಮ ವಿಭೂಷಣ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ ಚಿರನಿದ್ರೆಗಿಳಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932ರ ಮೇ 1ರಂದು ಎಸ್.ಸಿ.ಮಲ್ಲಯ್ಯ ಅವರ ಹಿರಿಯ ಮಗನಾಗಿ ಜನಿಸಿದ ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದಾಗಿ ಕಳೆದ ಕೆಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಪ್ರೇಮ, ಮಾಳವಿಕಾ ಸಿದ್ದಾರ್ಥ, ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಕೃಷ್ಣ ಅಗಲಿದ್ದಾರೆ.
ಕೃಷ್ಣ ಅವರ ಹುಟ್ಟೂರು ಮದ್ದೂರು ಸಮೀಪದ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಅಂತ್ಯ ಸಂಸ್ಕಾರದ ಸ್ಥಳ ಪರಿಶೀಲಿಸಿದ ಅವರ ಸಂಬಂಧಿಕರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಕ ಮಾಧ್ಯಮ ಹೇಳಿಕೆ ನೀಡಿದರು.
ಕೃಷ್ಣ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ ಹಾಗೂ ಬುಧವಾರ ಶಾಲಾ,ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಒಂದು ದಿನ ರಜೆ ನೀಡಲಾಗಿದೆ.
ಸದಾಶಿವನಗರದ ಅವರ ನಿವಾಸದಲ್ಲಿ ಮಂಗಳವಾರ ಇಡೀ ದಿನ ಸಾರ್ವಜನಿಕ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು, ಕೃಷ್ಣ ಪ್ರಸ್ತುತ ಭಾರತೀಯ ಜನತಾ ಪಾರ್ಟಿ ಸದಸ್ಯರಾಗಿದ್ದರೂ ರಾಜ್ಯ ಕಾಂಗ್ರೆಸ್‌ನಲ್ಲೇ ಅವರ ಪ್ರಭಾವ ಹೆಚ್ಚಿಗೆ ಇದ್ದು, ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂಜೆ ಸಿಎಂ, ಡಿಸಿಎಂ ಉಪಸ್ಥಿತಿಯಲ್ಲಿ ಸಂತಾಪ ಸಭೆ ನಡೆಯಿತು.
ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆಯಲ್ಲಿ ವಿಧಾನ ಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಔತಣಕೂಟವನ್ನು ಮುಂದೂಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
“ನನ್ನ ರಾಜಕೀಯ ಬದುಕಿನ ಮಾರ್ಗದರ್ಶಕ”
ಕಂಬನಿ ಮಿಡಿದ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಕೃಷ್ಣ ಅವರ ನಿಧನ ವಾರ್ತೆ ತಿಳಿಯುತಿದ್ದಂತೆ ಬೆಳಗಾವಿಯಿಂದ ಬೆಂಗಳೂರಿಗೆ ಧಾವಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದು ಭಾವುಕರಾಗಿ ಕಂಬನಿ ಮಿಡಿದರು.
"ಎಸ್.ಎಂ ಕೃಷ್ಣ ಅವರು ನನಗೆ ತಂದೆ ಸಮಾನರು. ನನ್ನ ಬದುಕಿನಲ್ಲಿ ಆಗಿರುವ ಬದಲಾವಣೆ ಅವರ ಮಾರ್ಗದರ್ಶನಕ್ಕೆ ಸಾಕ್ಷಿ. ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಸ್.ಎಂ ಕೃಷ್ಣ" ಎಂದರು ಡಿಕೆಶಿ.
"ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು. ಎಸ್.ಎಂ ಕೃಷ್ಣ ಅವರು ವಿಕಾಸ ಸೌಧ ಕಟ್ಟಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ನೀಡಿದರು. ಅವರ ಕಡೆಯ ಬಜೆಟ್ ಗಾತ್ರ 26 ಸಾವಿರ ಕೋಟಿ. ಆದರೆ ಇಂದು ನಮ್ಮ ರಾಜ್ಯದ ಬಜೆಟ್ ಗಾತ್ರ 3.83 ಲಕ್ಷ ಕೋಟಿ. ಆಮೂಲಕ ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬಿದರು.ರಾಜ್ಯ ವಿಕಾಸವಾಗಲಿ ಎಂದು ವಿಕಾಸಸೌಧ, ಎಲ್ಲರಿಗೂ ಉದ್ಯೋಗ ಸಿಗಲಿ ಎಂದು ಉದ್ಯೋಗ ಸೌಧ ಕಟ್ಟಿದರು. ರಾಜ್ಯದಲ್ಲಿ ಪಾನೀಯ ನಿಗಮ ಸ್ಥಾಪಿಸಿ ರಾಜ್ಯದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಿದರು.ಕಾವೇರಿ ನೀರಿಗಾಗಿ ಅಧಿಕಾರ ತ್ಯಜಿಸಲು ಮುಂದಾಗಿದ್ದರು. ರಾಜಕುಮಾರ್ ಅವರು ಅಪಹರಣವಾದಾಗ ಅವರನ್ನು ಕರೆತರಲು ಪರಿಶ್ರಮ ನಮಗೆ ಮಾತ್ರ ಗೊತ್ತು.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸ್ತ್ರೀಶಕ್ತಿ ಕಾರ್ಯಕ್ರಮ, ಯಶಸ್ವಿನಿ ಕಾರ್ಯಕ್ರಮ, ರೈತರ ಜಮೀನಿಗಾಗಿ ಭೂಮಿ ಆಪ್, ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮೀನುಗುವಂತೆ ಮಾಡಿದರು. ದಕ್ಷ ಆಡಳಿತಕ್ಕೆ ಅವರು ಮಾದರಿಯಾಗಿದ್ದರು. ಬೆಂಗಳೂರು ಅಭಿವೃದ್ಧಿ, ಇಲ್ಲಿನ ಉದ್ಯೋಗ ಸೃಷ್ಟಿ ಸೇರಿದಂತೆ ಅವರ ಸಾಧನೆಗೆ ನಿಮ್ಮ ಕಣ್ಣುಗಳೇ ಸಾಕ್ಷಿ.
ಅವರು ನನ್ನ ಸಂಬಂಧಿ, ನನ್ನ ರಾಜಕೀಯ ಮಾರ್ಗದರ್ಶಕರು ಎಂಬುದು ಬೇರೆ ವಿಚಾರ. ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ಅವರು ನಮಗೆಲ್ಲ ದೊಡ್ಡ ಪರಂಪರೆ ಬಿಟ್ಟುಹೋಗಿದ್ದು, ನಾವು ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅವರಿಂದ ಸಾಕಷ್ಟು ವಿಚಾರ ಕಲಿತ ಹೆಮ್ಮೆ ನಮಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ನನ್ನ ಅವರ ನಡುವಣ ಸಂಬಂಧದ ಬಗ್ಗೆ ಬೇರೆ ದಿನ ಮಾತನಾಡುತ್ತೇನೆ ,ಎಸ್.ಎಂ ಕೃಷ್ಣ ಅವರು ದೂರದೃಷ್ಟಿಯುಳ್ಳ ಶ್ರೇಷ್ಠ ವ್ಯಕ್ತಿ. ರಾಜ್ಯಕ್ಕೆ ಅವರ ಕೊಡುಗೆ, ಅವರ ಜತೆಗಿನ ಒಡನಾಟದ ಬಗ್ಗೆ ಹೇಳಲು ಗಂಟೆಗಟ್ಟಲೆ ಸಮಯಬೇಕು" ಎಂದು ತಿಳಿಸಿದರು
“ಮುತ್ಸದ್ದಿ,ಅಪರೂಪದ ರಾಜಕಾರಣಿ”
ಸಿಎಂ ಸಿದ್ದರಾಮಯ್ಯ ಸಂತಾಪ
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ರಾಜ್ಯ ವಿಧಾನ ಸಭೆಯಲ್ಲಿ ಸಂತಾಪ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಸ್.ಎಂ.ಕೃಷ್ಣ ಅವರು, ಮುತ್ಸದ್ದಿ, ದೂರದೃಷ್ಟಿ ಉಳ್ಳವರಾಗಿದ್ದರು. ದೀರ್ಘಕಾಲ ರಾಜಕಾರಣ ಮಾಡಿದ್ದರು. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಿಂಗಾಪುರದಂತೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದರು.ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಬರಲು ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಒಳ್ಳೆ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಅವರ ಕಾಲದಲ್ಲೇ ಡಾ.ರಾಜ್ ಕುಮಾರ್ ಅವರ ಅಪಹರಣ ಆಗಿ ಆ ಸಂದರ್ಭದ ದೊಡ್ಡ ಸವಾಲನ್ನು ಎದುರಿಸಿದ್ದರು. ಅದನ್ನು ನಿಭಾಯಿಸಿದ್ದರು ಎಂದರು ಸಿಎಂ.
ನಾನು ವಿದ್ಯಾರ್ಥಿ ಆಗಿದ್ದಾಗ ಎಸ್.ಎಂ.ಕೃಷ್ಣ ಅವರು ಕರೆದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಸಭೆಯಲ್ಲಿ ಭಾಗವಹಿಸಿದ್ದೆ. ಬಳಿಕ ನಾನು ಲೋಹಿಯಾ ಅವರ ಸಮಾಜವಾದಿ ಪಕ್ಷ ಸೇರ್ಪಡೆಯಾದೆ. ಎಸ್.ಎಂ.ಕೃಷ್ಣ ಅವರು, 1962 ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದು, ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿ.
ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗಲೇ ನಾನು ಕಾಂಗ್ರೆಸ್ ಸೇರಿದ್ದು. ಅವರು ರಾಜ್ಯಪಾಲರಾಗಿದ್ದಾಗ ನಾನು ಅವರನ್ನು ಭೇಟಿಯಾಗಿ, ನಾನು ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರಿಗೆ ತಿಳಿಸಿದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದರು.
ಕಾಂಗ್ರೆಸ್ ಮೂಲಕ ಸುದೀರ್ಘ ರಾಜಕಾರಣ ಮಾಡಿ ಬಿಜೆಪಿ ಸೇರಿ ಒಂದು ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಿಸಿದ ದಕ್ಷ ಆಡಳಿತಗಾರ, ಸಜ್ಜನ-ಮುತ್ಸದ್ದಿ ರಾಜಕಾರಣಿ ಆಗಿದ್ದರು.
ಬೆಂಗಳೂರನ್ನು ಸಿಲಿಕಾನ್ ಸಿಟಿ, ಐಟಿ-ಬಿಟಿ
ನಗರಿಯನ್ನಾಗಿ ರೂಪಿಸಿದವರು“-ಡಿಕೆಶಿ
ನನ್ನ ರಾಜಕೀಯ ಬದುಕಿನ ಮಾರ್ಗದರ್ಶಕ ಎಸ್ ಎಂ ಕೃಷ್ಣ ಅವರ ಅಗಲಿಕೆ ಅಪಾರ ನೋವು ತಂದಿದೆ. ಕರ್ನಾಟಕ ರಾಜಕೀಯ ರಂಗದ ಧೃವ ನಕ್ಷತ್ರ ಕಳಚಿ ಬಿದ್ದಿದೆ ಎಂದು ಡಿ ಕೆ ಶಿವಕುಮಾರ್ ಬಣ್ಣಿಸಿದರು.
" ಅಂತಾರಾಷ್ಟ್ರೀಯ ಖ್ಯಾತಿಯ ರಾಜಕೀಯ ಮುತ್ಸದ್ದಿ, ಬೆಂಗಳೂರಿಗೆ ಸಿಲಿಕಾನ್ ಸಿಟಿ ಖ್ಯಾತಿ ತಂದ ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರೂ ಆದ ಎಸ್ ಎಂ ಕೃಷ್ಣ ಅವರು ಸಜ್ಜನ, ಸುಶಿಕ್ಷಿತ ರಾಜಕಾರಣಿ, ಅಜಾತಶತ್ರು. ದೂರದೃಷ್ಟಿಯ ಕನಸುಗಾರ. ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಸಾವಧಾನವಾಗಿ ಏರಿದವರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿನೋಡುವಂತೆ ಮಾರ್ಪಡಿಸಿದವರು. ಬೆಂಗಳೂರನ್ನು ಸಿಲಿಕಾನ್ ಸಿಟಿ, ಐಟಿ- ಬಿಟಿ ನಗರಿಯನ್ನಾಗಿಸಿ ದೇಶದ ಆರ್ಥಿಕತೆಗೆ ಅತಿದೊಡ್ದ ಹಾಗೂ ದೂರದೃಷ್ಟಿಯ ಕೊಡುಗೆ ನೀಡಿದವರು ಎಂದು ಡಿಸಿಎಂ ಅವರು ಸ್ಮರಿಸಿದರು.
ನಾಡಿನ ಹಲವು ಜನಪರ ಯೋಜನೆಗಳಿಗೆ ಅಡಿಗಲ್ಲು ಹಾಕಿದ ಪ್ರವರ್ತಕ. ಮೆಟ್ರೋ ರೈಲು, ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣದ ಹಿಂದಿನ ಶಕ್ತಿ. ಕೈಗಾರಿಕಾ ಹಾಗೂ ಕೃಷಿ ವಲಯಕ್ಕೆ ಸಮಾನ ಅವಕಾಶಗಳನ್ನು ನೀಡಿ ಅಭಿವೃದ್ಧಿಯಲ್ಲಿಯೂ ಸಮತೋಲನ ಕಾಯ್ದುಕೊಂಡ ಸಮಚಿತ್ತದ ಆಡಳಿತಗಾರ ಎಸ್ ಎಂ ಕೃಷ್ಣ ಅವರು.
ರಾಜ್ಯದ ವಿಚಾರ ಬಂದಾಗ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲಾ ಪಕ್ಷಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದರು. ಸದಾ ಅಭಿವೃದ್ಧಿ, ರಾಷ್ಟ್ರ ಹಾಗೂ ರಾಜ್ಯದ ಪರವಾಗಿ ಯೋಚನೆ ಮಾಡುತ್ತಿದ್ದ ಕಾಯಕ ಜೀವಿ ಎಂದು ಶಿವಕುಮಾರ್ ಅವರು ಕೊಂಡಾಡಿದ್ದಾರೆ.
ದ್ವಾಪರಯುಗದ ಕೃಷ್ಣನ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ರಾಜಕೀಯ ಮುತ್ಸದ್ದಿಯಾಗಿ 'ಆ' ಕೃಷ್ಣನಂತೆ ಈ ಎಸ್.ಎಂ. ಕೃಷ್ಣ ನಮ್ಮ ನಡುವೆ ಬದುಕಿದವರು. ಅವರ ರಾಜಕೀಯ ಉಚ್ಛ್ರಾಯ ಕಾಲದಲ್ಲಿ ಜೊತೆಯಾಗಿ ಇದ್ದವನು ನಾನು. ನನಗೆ ರಾಜಕೀಯ ಮಾರ್ಗದರ್ಶಕರಾಗಿ ಎಡವಿದಾಗ ಕೈ ಹಿಡಿಯುತ್ತಾ, ತಪ್ಪು ಮಾಡಿದಾಗ ತಿದ್ದುತ್ತಾ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುತ್ತಾ ಪ್ರೋತ್ಸಾಹ ನೀಡುತ್ತಿದ್ದ ರಾಜಕೀಯ ದಿಗ್ದರ್ಶಕ. ಅವರ ಆಲೋಚನೆಗಳು, ಅವರ ಚಿಂತನೆಗಳು ಹೊಸ ಜನಾಂಗಕ್ಕೆ, ಹಳೆ ತಲೆಮಾರನ್ನು ಬೆಸೆಯುವ ಕೊಂಡಿಯಾಗಿದ್ದವು ಎಂದಿದ್ಧಾರೆ.
ಕಾವೇರಿ ನೀರು ವಿಚಾರದಲ್ಲಿ ಅಧಿಕಾರ ಹೋದರೂ ಚಿಂತೆಯಿಲ್ಲ ಎಂದು ನಾಡಿನ ಹಿತಕ್ಕಾಗಿ ಹೋರಾಟ ಮಾಡಿದವರು. ಕಾವೇರಿಯ ವರಪುತ್ರನನ್ನು ಈ ನಾಡು ಕಳೆದುಕೊಂಡಿದೆ.ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಬಂಧುಗಳು, ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಎಸ್.ಎಂ.ಕೃಷ್ಣ ರಾಜಕೀಯ ಜೀವನ ನನಗೆ
ಅನುಕರಣೀಯ: ಗೃಹ ಸಚಿವ ಪರಮೇಶ್ವರ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ಕರ್ನಾಟಕ ಕಂಡಂತ ಮೇರು ವ್ಯಕ್ತಿತ್ವದ ಅಪ್ರತಿಮ ರಾಜಕಾರಣಿ, ದೂರದೃಷ್ಟಿಯುಳ್ಳ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿರುವುದು ಅತೀವ ನೋವನ್ನುಂಟು ಮಾಡಿದೆ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾಗದ ನಷ್ಟ.
ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ಅವರು ಕೈಗೊಂಡ ಜನಪರ ಕಾರ್ಯಗಳು ಅನನ್ಯ. ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕವನ್ನು, ಪ್ರಮುಖವಾಗಿ ಬೆಂಗಳೂರು ನಗರವನ್ನು ವಿಶ್ವಕ್ಕೆ ಪರಿಚಯಿಸಿದರು. ಈ ಮೂಲಕ ರಾಜ್ಯದ ಲಕ್ಷಾಂತರ ಯುವಕರಿಗೆ ಉದ್ಯೋಗ ಕಲ್ಪಿಸಿದರು. ರಾಜ್ಯದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಅವರ ರಾಜಕೀಯ ಜೀವನ ನನಗೆ ಅನುಕರಣೀಯ.ಮೃತರ ಆತ್ಮಕ್ಕೆ ಚಿರ ಶಾಂತಿ ಕೊರುತ್ತೇನೆ. ಅವರ ಕುಟುಂಬ ವರ್ಗ, ಅಭಿಮಾನಿಗಳು, ಆಪ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಸಚಿವರು ಸಂತಾಪದಲ್ಲಿ ಹೇಳಿದ್ದಾರೆ.
ಸಚಿವ ಎಂ ಬಿ ಪಾಟೀಲ ಸಂತಾಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರ ನಿಧನದಿಂದ ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಒಂದು ಪ್ರಮುಖ ಕೊಂಡಿ ಕಳಚಿ ಬಿದ್ದಂತಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಅಧಿಕೃತವಾಗಿ ಯೂರೋಪ್ ಪ್ರವಾಸದಲ್ಲಿ ಇರುವ ಅವರು, ಅಲ್ಲಿಂದಲೇ ತಮ್ಮ ಶೋಕ ಸಂದೇಶ ಕಳಿಸಿ, ಕಂಬನಿ ಮಿಡಿದಿದ್ದಾರೆ.
ಕೃಷ್ಣ ಅವರು ಸುಸಂಸ್ಕೃತಿ ಮತ್ತು ಸೌಜನ್ಯಗಳಿಗೆ ಹೆಸರುವಾಸಿಯಾದ ವರ್ಚಸ್ವಿ ರಾಜಕಾರಣಿಯಾಗಿದ್ದರು. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ದೇಶದ ಐ ಟಿ ರಾಜಧಾನಿಯಾಗಿ ಬೆಳೆದು, ಜಾಗತಿಕ ಮಟ್ಟದಲ್ಲಿ ಒಂದು ಬ್ರ್ಯಾಂಡ್ ಆಗಿ ಬೆಳೆಯಿತು. ಅವರಿಗಿದ್ದ ದೂರದೃಷ್ಟಿಯ ಫಲದಿಂದಾಗಿ ಕರ್ನಾಟಕ ಇಂದು ಬಿಟಿ, ಸ್ಟಾರ್ಟಪ್, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮುಂತಾದ ವಲಯಗಳಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇದಕ್ಕಾಗಿ ನಾಡು ಅವರನ್ನು ಅದಾ ನೆನಪಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಕೃಷ್ಣ ಅವರು ಸ್ಪೀಕರ್, ಸಚಿವ, ಕೇಂದ್ರ ಮಂತ್ರಿ, ರಾಜ್ಯಪಾಲ ಹುದ್ದೆ ಮತ್ತು ಕೆಪಿಸಿಸಿ ಅಧ್ಯಕ್ಷ ಪದವಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಅಪರೂಪದ ವ್ಯಕ್ತಿಯಾಗಿದ್ದರು. ಓರ್ವ ವ್ಯಕ್ತಿಯಾಗಿ ಕೂಡ ಅವರು ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಅವರ ನಿಧನದಿಂದ ಉಂಟಾಗಿರುವ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೂ ಅಭಿಮಾನಿಗಳಿಗೂ ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಎಂದು ಪಾಟೀಲ ಪ್ರಾರ್ಥಿಸಿದ್ದಾರೆ.