“ಥ್ಯಾಂಕ್ಯೂ ಸೋ ಮಚ್”

ಜೀವಮಾನದ ಸಾಧನೆಗಾಗಿ 2018ರಿಂದ 2024ರವರೆಗಿನ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಮೊನ್ನೆ ರಾಜ್ಯ ಸರ್ಕಾರ ಘೋಷಿಸಿ, ಪ್ರದಾನ ಮಾಡಿತು. ದೇಶದ ಮಹಾನ್ ವಿದ್ವಾಂಸರೂ, ಅಂಬೇಡ್ಕರ್ ವಾದಿ ಲೇಖಕರೂ ಆಗಿರುವ ಪ್ರೊ. ಆನಂದ್ ತೇಲ್ತುಂಬ್ಡೆ ಅವರಿಗೆ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಬಸವ ರಾಷ್ಟ್ರೀಯ ಪುರಸ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ನೀಡಿ ಗೌರವಿಸಿದರು. ಬಸವ ಪ್ರಶಸ್ತಿ ಸ್ವೀಕರಿಸಿದ ಪ್ರೊ. ಆನಂದ್ ತೇಲ್ತುಂಬ್ಡೆ ಅವರು ವೇದಿಕೆಯಲ್ಲಿ ಆಡಿದ ಮಾತುಗಳು ಇಲ್ಲಿವೆ- ಸಂಪಾದಕ 

“ಥ್ಯಾಂಕ್ಯೂ ಸೋ ಮಚ್”


ಬಸವ ಪ್ರಶಸ್ತಿ ಸ್ವೀಕರಿಸಿದ ಪ್ರೊ. ಆನಂದ್ ತೇಲ್ತುಂಬ್ಡೆ


     “ನಾನು ಇರುವ ಸನ್ನಿವೇಶದಲ್ಲಿ ಈ ಪುರಸ್ಕಾರ ನನಗೆ ವೈಯಕ್ತಿಕವಾಗಿ ನೀಡಿದ ಪ್ರಶಸ್ತಿಯಲ್ಲ, ಈ ಜಗತ್ತನ್ನು ಜನರಿಗೆ ಸ್ವಲ್ಪ ಉತ್ತಮವಾಗಿಸಲು ಬಿಡುವಿಲ್ಲದೆ ದುಡಿಯುತ್ತಿರುವ ಅಸಂಖ್ಯ ಹೋರಾಟಗಾರರಿಗೆ ಈ ಗೌರವ ಸಲ್ಲುತ್ತದೆ. ಬಸವಣ್ಣ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನಾನು ಪಡೆಯುತ್ತಿರುವುದಂತೂ ನನಗೆ ಇನ್ನೂ ಸಂತೋಷವುಂಟುಮಾಡಿದೆ. ನಾನು ಬಸವಣ್ಣನವರ ವಚನಗಳನ್ನು ಓದಿದ್ದು ಸುಮಾರು 20 ವರ್ಷಗಳ ಹಿಂದೆ. ಇದರ ಜೊತೆ ಬಸವಣ್ಣ ಕುರಿತ ಕೆಲ ಸಾಹಿತ್ಯವನ್ನೂ ಓದಿದ್ದೆ. ಅವರ ಕುರಿತು ತಿಳಿದಾಗ ಬಹಳ ಇಂಪ್ರೆಸ್ ಆಗಿದ್ದೆ. ಯಾಕೆಂದರೆ 12 ನೇ ಶತಮಾನದಿಂದ ಇದುವರೆಗೂ ಬಸವಾದಿ ಶರಣರ ಚಿಂತನೆ ಹರಿದುಬಂದಿದೆ. ನನಗೆ ತಿಳಿದ ಮಟ್ಟಿಗೆ, ಬಸವಾದಿ ಶರಣರು ಲೋಕಾಯತ, ಬುದ್ಧರ ಚಿಂತನಾಕ್ರಮವನ್ನೇ ಮುಂದುವರೆಸಿಕೊಂಡು ಬಂದಿರುವಂತದು. ಮಾತ್ರವಲ್ಲದೆ ಅಂದು ಚಾಲ್ತಿಯಲ್ಲಿದ್ದಂತ ಎಲ್ಲಾ ಗೊಡ್ಡು ಸಂಪ್ರದಾಯಗಳನ್ನು ಅವರು ತಿರಸ್ಕರಿಸಿದರು, ಸಾಮಾಜಿಕ ತಾರತಮ್ಯವನ್ನು ತಿರಸ್ಕರಿಸಿದರು, ದೇವರನ್ನೂ ನಿರಾಕರಿಸಿದರು, ಅವರ ಕಲ್ಪನೆಯ ದೇವರು ಭಿನ್ನವಾದುದು ಮತ್ತು ಸಂಕೀರ್ಣವಾದುದು. ಅವರು ಉತ್ತೇಜಿಸಿದ್ದು ದಯೆಯನ್ನು. ಇಂತಹವರ ಹೆಸರಿನಲ್ಲಿ ನಾನು ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ಅಪಾರ ಸಂತೋಷವಿದೆ. 


    ಕರ್ನಾಟಕದಲ್ಲಿ, ಇಲ್ಲಿ ಕುಳಿತಿರುವ ಮುಖ್ಯಮಂತ್ರಿಗಳ ಬಗ್ಗೆ ಹೇಳುವುದಾದರೆ, ಈ ವ್ಯಕ್ತಿಯ ಬಗ್ಗೆ ನನಗೆ ಒಂದು ತರದ ವಿಚಿತ್ರ ಭಾವನೆ ಉಂಟಾಗಿದೆ. ಅದೇನೆಂದರೆ ಇವರು ಪ್ರಾಯಶಃ ಬಸವಣ್ಣ ಅವರ ಪರಂಪರೆಯನ್ನೇ ಮುಂದುವರೆಸುತ್ತಿದ್ದಾರೆ ಎಂಬುದು. ಸಿದ್ದರಾಮಯ್ಯ ಅವರಂತೆ ಸಾಮಾಜಿಕ ನ್ಯಾಯದ ಕುರಿತು ಕಾಳಜಿ ಉಳ್ಳವರು, ಜನರ ಬಗ್ಗೆ ಕಾಳಜಿ ಉಳ್ಳವರು ಇಂದು ವಿರಳವಾಗಿದ್ದಾರೆ. ಕರ್ನಾಟಕದ ಜನರೊಂದಿಗೆ ನನಗೆ ಒಂದು ವಿಶೇಷ ಸಂಬಂಧವಿದೆ. ಅವರು ನನಗೆ ತೋರಿರುವ ಪ್ರೀತಿ ವಾತ್ಸಲ್ಯ ಹೇಳಲ ಸಾಧ್ಯ.


    ನಿಮ್ಮ ರಾಜ್ಯ ಮಹಾರಾಷ್ಟ್ರದಲ್ಲಿ ಸರ್ಕಾರ ನಿಮ್ಮನ್ನು ಪುರಸ್ಕರಿಸುವ ಮೊದಲೇ ನಮ್ಮ ಕರ್ನಾಟಕದಲ್ಲಿ ನಾವು ನಿಮ್ಮನ್ನು ಪುರಸ್ಕರಿಸಬೇಕು ಎಂದುಕೊಂಡಿದ್ದೆವು ಎಂದು ನೆನ್ನೆ ಕೆಲವರು ಹೇಳುತ್ತಿದ್ದರು. ಆದರೆ, ನನ್ನ ರಾಜ್ಯ ನನ್ನನ್ನು ಜೈಲಿಗೆ ಹಾಕಿ ಈಗಾಗಲೇ ಬಹಳ ದೊಡ್ಡ ಪುರಸ್ಕಾರ ನೀಡಿಬಿಟ್ಟಿದೆ ಎಂದೆ.


   ನಾನು ನಿಮಗೆಲ್ಲರಿಗೂ ಅದರಲ್ಲೂ ಸಿದ್ದರಾಮಯ್ಯನವರು, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಮತ್ತು ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜನರಿದ್ದರೆ ತಾನೆ ಸರ್ಕಾರ ಇರಲು ಸಾಧ್ಯ. ಈ ರೀತಿಯ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ನಾನು ಇದುವರೆಗೂ ಭಾಗಿಯಾಗಿರಲಿಲ್ಲ. ಥ್ಯಾಂಕ್ಯು ಸೋ ಮಚ್. ನಿಮಗೆಲ್ಲಾ ನಾನು ನಿಜಕ್ಕೂ ತುಂಬಾ ಆಭಾರಿಯಾಗಿದ್ದೇನೆ.