ಹಿಂದುಳಿದ ವರ್ಗಗಳ ನಿಜ ನಾಯಕ ದಿ.ಲಕ್ಷ್ಮಿನರಸಿಂಹಯ್ಯ (ಲಚ್ಚಣ್ಣ)
ಹಿಂದುಳಿದ ವರ್ಗಗಳ ನಿಜ ನಾಯಕ ದಿವಂಗತ ಲಕ್ಷ್ಮಿ ನರಸಿಂಹಯ್ಯನವರ ಸಂಸ್ಮರಣೆ ಮತ್ತು ವಿವೇಕಾನಂದ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬ
ಹಿಂದುಳಿದ ವರ್ಗಗಳ ನಿಜ ನಾಯಕ
ದಿ.ಲಕ್ಷ್ಮಿನರಸಿಂಹಯ್ಯ (ಲಚ್ಚಣ್ಣ)
ತುಮಕೂರು: ಇಲ್ಲಿನ ಸ್ವಾಮಿ ವಿವೇಕಾನಂದ ಸಹಕಾರ ಸಂಘವು 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬ ಸಮಾರಂಭವನ್ನು ಡಿ.24ರ ಶನಿವಾರ ಬೆಳಿಗ್ಗೆ 10.00 ಗಂಟೆಗೆ ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಆಚರಿಸುತ್ತಿದೆ ಹಾಗೂ ಇದೇ ವೇದಿಕೆಯಲ್ಲಿ 1996ರಲ್ಲಿ ಈ ಸಂಘವನ್ನು ಸ್ಥಾಪಿಸಲು ಪ್ರೇರಣೆ ನೀಡಿ ಆರಂಭದ ವರ್ಷಗಳಲ್ಲಿ ಮುನ್ನೆಡೆಸುವ ಶಕ್ತಿಯಾದ ಮಾಜಿ ಸಚಿವ ದಿವಂಗತ ಲಕ್ಷ್ಮಿನರಸಿಂಹಯ್ಯನವರ ಸಂಸ್ಮರಣೆಯನ್ನೂ ಹಮ್ಮಿಕೊಂಡಿದೆ.
ತುಮಕೂರು ವಿಧಾನ ಸಭಾ ಕ್ಷೇತ್ರದಿಂದ ಎರಡು ಅವಧಿಗೆ ವಿಧಾನ ಸಭೆಗೆ ಚುನಾಯಿತರಾಗಿ, ವಿಧಾನ ಸಭೆಯ ಡೆಪ್ಯುಟಿ ಸ್ಪೀಕರ್ ಹಾಗೂ ಇಂಧನ ಮತ್ತು ರೇಷ್ಮೆ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ಲಕ್ಷ್ಮಿನರಸಿಂಹಯ್ಯನವರು ತೀರಿಕೊಂಡೇ ಇದೇ ಡಿಸೆಂಬರ್ 21ಕ್ಕೆ 22 ವರ್ಷಗಳು ಕಳೆದು ಹೋಗಿವೆ. ಹೀಗಾಗಿ ಹೊಸ ಪೀಳಿಗೆಗೆ ಅತ್ಯಂತ ಜನಪರ ಹಾಗೂ ದೂರದರ್ಶಿ ರಾಜಕಾರಣಿಯಾಗಿದ್ದ ಲಕ್ಷ್ಮಿನರಸಿಂಹಯ್ಯನವರ ಪರಿಚಯ ಮಾಡಿಕೊಡುವುದು ಅಗತ್ಯವಾಗಿದೆ.
ತುಮಕೂರು ನಗರಕ್ಕೆ ಸಮೀಪದ ಕ್ಯಾತ್ಸಂದ್ರದಿಂದ ಕೆಸರಮಡು ಗ್ರಾಮಕ್ಕೆ ಸಾಗುವ ಹಾದಿಯಲ್ಲಿರುವ ಚೌಡಯ್ಯನಪಾಳ್ಯದಲ್ಲಿ ಚೌಡಯ್ಯ ಹಾಗೂ ಸಾಕಮ್ಮನವರ ಮಗನಾಗಿ ದಿನಾಂಕ 07.11.1935ರಲ್ಲಿ ಜನಿಸಿದರು. ಎಲೆಕ್ಟಿçಕಲ್ ಡಿಪ್ಲೊಮಾ ಪಡೆದು ವಿದ್ಯುತ್ ಗುತ್ತಿಗೆದಾರರಾಗಿ ವೃತ್ತಿ ಆರಂಭಿಸಿದ ಲಕ್ಷ್ಮಿನರಸಿಂಹಯ್ಯ ನವರು ವೃತ್ತಿಯ ಹೊರತಾಗಿಯೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಜನರ ಬಾಯಲ್ಲಿ ಪ್ರೀತಿಯ ‘ ಲಚ್ಚಣ್ಣ’ನವರಾಗಿ ಬೆಳೆದರು.
ರಾಜ್ಯಮಟ್ಟದ ಫುಟ್‌ಬಾಲ್ ಆಟಗಾರರಾಗಿದ್ದ ಲಚ್ಚಣ್ಣನವರು ಕ್ರೀಡಾ ಮನೋಭಾವದಿಂದಲೇ ರಾಜಕಾರಣ ರಂಗದಲ್ಲೂ ಮುಂದುವರೆದರು. 1969ರಲ್ಲಿ ಸಂಸ್ಥಾ ಕಾಂಗ್ರೆಸ್ ಮುಖಾಂತರ ಸಕ್ರಿಯ ರಾಜಕಾರಣ ಅರಂಭಿಸಿದ ಲಚ್ಚಣ್ಣನವರು ಲೋಕನಾಯಕ ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿಯ ಕರೆಗೆ ಮನಸೋತು ಜನತಾರಂಗಕ್ಕೆ ಒಲಿದರು. 1975-77ರ ಅವಧಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ 20 ತಿಂಗಳ ಕಾಲ ಜೈಲುವಾಸ ಅನುಭವಿಸಿದರು. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡಿಸ್, ಜನ ಸಂಘದ ಮುಖಂಡರಾದ ಮುಂದೆ ದೇಶದ ಪ್ರಧಾನ ಮಂತ್ರಿಯಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುಂದೆ ರಾಜ್ಯದ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆ ಮೊದಲಾದ ಹಿರಿಯ ನಾಯಕರ ಸಹವಾಸದಲ್ಲಿ ರಾಜಕೀಯ ಸಿದ್ಧಾಂತಗಳ ಚರ್ಚೆಯಲ್ಲಿ ಭಾಗವಹಿಸುತ್ತ ಪುಟಕ್ಕಿಟ್ಟ ವಜ್ರದಂತಾದರು.
1983 ಹಾಗೂ 1985ರಲ್ಲಿ ತುಮಕೂರು ವಿಧಾನ ಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಎರಡು ಅವಧಿಗೆ ಶಾಸಕರಾಗಿ ಲಚ್ಚಣ್ಣ ಚುನಾಯಿತರಾದರು. 1985ರಿಂದ ಎರಡು ವರ್ಷ ಕಾಲ ವಿಧಾನ ಸಭೆಯ ಡೆಪ್ಯುಟಿ ಸ್ಪೀಕರ್ ಆಗಿ , 1987ರಿಂದ ಒಂದೂಕಾಲು ವರ್ಷ ಇಂಧನ ಹಾಗೂ ರೇಷ್ಮೆ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು. ನಂತರ ಜನತಾಪಕ್ಷವು ವಿಭಜನೆಯಾಗಿ ಲಚ್ಚಣ್ಣನವರು 1989ರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದರೂ, ಜನತಾ ಪಕ್ಷದ ಅಭ್ಯರ್ಥಿಯಾಗಿ ಬಿ.ವಿಶ್ವೇಶ್ವರಯ್ಯನವರೂ ಸ್ಪರ್ಧಿಸಿದ ಪರಿಣಾಮ ಓಟು ವಿಭಜನೆಯಾಗಿ ಸೋತರು, 1994ರ ಚುನಾವಣೆಯಲ್ಲೂ ಲಚ್ಚಣ್ಣ ಸೋತರು.
ಮೇಲ್ನೋಟಕ್ಕೆ ಲಚ್ಚಣ್ಣನವರ ಅಧಿಕಾರ ರಾಜಕೀಯ ಜೀವನದ ಅವಧಿ ತೀರಾ ಕಡಿಮೆ ಅಂತ ಅನ್ನಿಸಿದರೂ, ತುಮಕೂರು ವಿಧಾನ ಸಭಾ ಕ್ಷೇತ್ರದ ಬೆಳವಣಿಗೆ, ಅಭಿವೃದ್ಧಿಯಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತುಮಕೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿಯೂ ನಗರದ ಅಭಿವೃದ್ಧಿಗೆ ಶ್ರಮಿಸಿದರು. ಜೊತೆಗೆ ಇಂಡಿಯಾದ ಶ್ರೇಣೀಕೃತ ಜಾತಿಗ್ರಸ್ತ ಸಾಮಾಜಿಕ ಸನ್ನಿವೇಶದಲ್ಲಿ ಶಕ್ತಿ ರಾಜಕಾರಣದಲ್ಲಿ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟ ಜನತಾ ಪರಿವಾರದ ಮೂಲ ಆಶಯಗಳಿಗೆ ಅನುಗುಣವಾಗಿ, ಎಂದಿಗೂ ರಾಜಕೀಯ ಪ್ರಾತಿನಿಧ್ಯ ಪಡೆಯಲಾಗದ ಸಮುದಾಯಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳನ್ನು ಪರಿಶೋಧಿಸಿ ಆಯ್ದು ಜಿಲ್ಲಾ ಪರಿಷತ್ ಹಾಗೂ ನಗರ ಸಭೆಗಳಂಥ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗುವಂತೆ ಮಾಡಿದ ಹಿರಿಮೆ ಲಚ್ಚಣ್ಣನವರಿಗೆ ಸೇರುತ್ತದೆ. ಲಚ್ಚಣ್ಣನವರ ರಾಜಕೀಯ ಜೀವನ ಪರ‍್ಯಂತ ಅವರಷ್ಟೇ ಜನಪರವಾಗಿ ಹಗಲಿರುಳೆನ್ನೆದೆ ಜನರ ನೋವು ನಲಿವಿಗೆ ಸ್ಪಂದಿಸಿದವರು ಅವರ ಧರ‍್ಮಪತ್ನಿ ಶ್ರೀಮತಿ ಚೌಡಮ್ಮನವರು. ಲಚ್ಚಣ್ಣನವರು ಎಮರ‍್ಜೆನ್ಸಿ ಕಾಲದಲ್ಲಿ ಜೈಲು ವಾಸದಲ್ಲಿದ್ದಾಗ ಎದುರಾದ ಎಲ್ಲ ಸಂಕಷ್ಟಗಳನ್ನು ದೃತಿಗೆಡದೆ ಎದುರಿಸಿ ನಿಂತವರು ಈಕೆ. ಚೌಡಮ್ಮನವರ ಹೆಸರು ಹೇಳದೇ ಲಚ್ಚಣ್ಣನವರ ಪರಿಚಯ ಅಪೂರ‍್ಣವೆನಿಸಿಬಿಡುತ್ತದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಇಂಥ ತೀರಾ ಹಿಂದುಳಿದ ತಬ್ಬಲಿ ಜಾತಿಗಳ, ದಲಿತ ಸಮುದಾಯಗಳ ಅರ್ಹ ಯುವಕರನ್ನು ಹುಡುಕಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡುವುದಷ್ಟೇ ಅಲ್ಲದೇ ಅವರು ಗೆಲುವು ಸಾಧಿಸುವಂತೆಯೂ ಶ್ರಮಿಸುತ್ತಿದ್ದವರು ಲಚ್ಚಣ್ಣ ಎಂದು ಅವರ ಮುಖಾಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ಅನೇಕರು ನೆನಪಿಸಿಕೊಳ್ಳುತ್ತಾರೆ.
ಇವತ್ತು ಪ್ರತಿಯೊಂದು ಜಾತಿ, ವರ್ಗಗಳೂ ತಮ್ಮನ್ನು ಹಿಂದುಳಿದ ಅಥವಾ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರ್ಪಡೆ ಮಾಡಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ವರ್ಷಗಟ್ಟಲೆ ನಿರಂತರ ಹೋರಾಟ ಮಾಡುತ್ತಿರುವ ಈ ದಿನಗಳಲ್ಲಿ ಲಚ್ಚಣ್ಣನವರು ತಾವು ಜನಿಸಿದ ತಬ್ಬಲಿ ಜಾತಿಯನ್ನು ವೈಯಕ್ತಿಕ ಹಂತದಲ್ಲೇ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿದ್ದರಿಂದಾಗಿ ಹತಾರು ಮಂದಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಾಗೂ ಆಯ್ಕೆಯಾಗಲು ಅವಕಾಶ ದೊರಕಿದೆ. ಜೊತೆಗೆ 2ಎ ಮೀಸಲಾತಿ ಸೌಲಭ್ಯ ಬಳಸಿ ಹಳ್ಳಿಗಾಡಿನ ಈ ಸಮುದಾಯದ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್‌ಗಳು, ಉಪನ್ಯಾಸಕರಾಗಲು, ಸರಕಾರಿ ಸೇವೆಗೆ ಸೇರಲು ಅವಕಾಶ ದೊರಕಿದೆ. ಅದಕ್ಕಾಗಿ ಹಿಂದೂ ಸಾದರ ಸಮುದಾಯ ಲಕ್ಷ್ಮಿನರಸಿಂಹಯ್ಯನವರಿಗೆ ಸದಾ ರುಣಿಯಾಗಿರಬೇಕಾಗಿದೆ.
ಹೀಗೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಕಡೇ ಉಸಿರಿರುವರೆಗೂ ಸ್ವಲಾಭಕ್ಕೆಣಿಸದೇ, ಸ್ವಜನ ಪಕ್ಷಪಾತ ಮಾಡದೇ ದುಡಿದ ನಿಷ್ಕಾಮ ಕಾಮಿಯಂತೆ ಲಚ್ಚಣ್ಣನವರು ನಾಡಿನ ನೈಜ ಜಾತ್ಯತೀತ ಹಾಗೂ ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡರು. ಕೆಲ ಕಾಲದ ಅನಾರೋಗ್ಯದ ಬಳಿಕ ಲಚ್ಚಣ್ಣನವರು ದಿನಾಂಕ 21.12.2000ದಂದು ಇಹಲೋಕ ತ್ಯಜಿಸಿದರು. ಇವರು ನಿಧನರಾದ ಈ ದಿನವನ್ನು ಸ್ವಾಮಿ ವಿವೇಕಾನಂದ ಸಹಕಾರ ಸಂಘವು ಅವರ ಸಂಸ್ಮರಣಾ ದಿನವನ್ನಾಗಿ ಆಚರಿಸುತ್ತ ಬರುತ್ತಿದೆ.
ಹಿಂದೂ ಸಾದರು ‘2 ಎ’ಗೆ:
ಲಚ್ಚಣ್ಣನವರ ಹೆಗ್ಗಳಿಕೆ
ಜನಸಂಖ್ಯೆಯಲ್ಲೂ ತೀರಾ ಕಡಿಮೆ ಇರುವ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಜಿಲ್ಲೆಗಳ ಏಳೆಂಟು ತಾಲೂಕುಗಳಲ್ಲಿ ಮಾತ್ರವೇ ನೆಲೆಸಿರುವ, ಯಾವುದೇ ಮಠ ಮಾನ್ಯಗಳಿಲ್ಲದ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಹಿಂದೂ ಸಾದರ ಸಮುದಾಯವನ್ನು ಹಿಂದುಳಿದ 2ಎ ವರ್ಗಕ್ಕೆ ಸೇರ್ಪಡೆ ಮಾಡುವಲ್ಲಿ ಲಕ್ಷ್ಮಿನರಸಿಂಹಯ್ಯನವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.