ಗುತ್ತಿಗೆದಾರರ 40% ಲಂಚದ ದೂರಿಗೆ 6 ತಿಂಗಳಾದರೂ ಸ್ಪಂದಿಸದ ಪ್ರಧಾನಿ: ಕೆಂಪಣ್ಣ  

ಗುತ್ತಿಗೆದಾರರ 40% ಲಂಚದ ದೂರಿಗೆ 6 ತಿಂಗಳಾದರೂ ಸ್ಪಂದಿಸದ ಪ್ರಧಾನಿ: ಕೆಂಪಣ್ಣ

ಗುತ್ತಿಗೆದಾರರ 40% ಲಂಚದ ದೂರಿಗೆ 6 ತಿಂಗಳಾದರೂ ಸ್ಪಂದಿಸದ ಪ್ರಧಾನಿ: ಕೆಂಪಣ್ಣ   

ಗುತ್ತಿಗೆದಾರರ 40% ಲಂಚದ ದೂರಿಗೆ 6 ತಿಂಗಳಾದರೂ ಸ್ಪಂದಿಸದ ಪ್ರಧಾನಿ: ಕೆಂಪಣ್ಣ


ತುಮಕೂರು: “ ರಾಜ್ಯದ 2018-19ರ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು “ ಯೇ ದಸ್ ಪರ್ಸೆಂಟ್ ಸರ್ಕಾರ್” (ಹತ್ತು ಪರ್ಸೆಂಟ್ ಲಂಚ ಪಡೆಯುವ ಸರ್ಕಾರ) ಎಂದು ಆಪಾದಿಸಿದ್ದರು. ಆದರೆ, ರಾಜ್ಯದಲ್ಲಿರುವ ಅವರದೇ ಪಕ್ಷದ ಸರ್ಕಾರವು 40% ಲಂಚ ಪಡೆಯುತ್ತಿದೆ ಎಂದು ಇದೇ ಪ್ರಧಾನಿಯವರಿಗೆ ಪತ್ರ ತಲುಪಿಸಿ ಆರು ತಿಂಗಳಾದರೂ ಮಾರುತ್ತರ ಬಂದಿಲ್ಲ.” 


“ರಾಜ್ಯದ ಬಿಜೆಪಿ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಮೂರು ಪತ್ರಗಳಿಗೂ ಉತ್ತರ ನೀಡಲೇ ಇಲ್ಲ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಕ್ಯಾರೇ ಎಂದಿಲ್ಲ, ಜೊತೆಗೆ ಸಂದರ್ಶನ ಕೊಡಲೂ ಸಿದ್ದರಿಲ್ಲ. ಬದಲಿಗೆ ಇದೇ ಸರ್ಕಾರದ ಮಂತ್ರಿಗಳು ನಮ್ಮ ವಿರುದ್ದವೇ ಆಕ್ಷೇಪಣೆ ಎತ್ತಿದ್ದಾರೆ.”  
ಹೌದು, ಇದೆಲ್ಲ ಸತ್ಯ ಸಂಗತಿ ಎನ್ನುತ್ತಾರೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು.


ತುಮಕೂರು ನಗರ ಗುತ್ತಿಗೆದಾರರ ಸಂಘ ಉದ್ಘಾಟನೆಗೆ ನಗರಕ್ಕೆ ಬಂದಿದ್ದ ವಯೋವೃದ್ಧ ಕೆಂಪಣ್ಣನವರು ತಮ್ಮ ಖಡಕ್ ಮಾತುಗಳಲ್ಲಿ ಇಂಜಿನಿಯರ್‌ಗಳು- ಜನಪ್ರತಿನಿಧಿಗಳೂ ಸೇರಿದಂತೆ ಒಟ್ಟಾರೆ ಭಂಡ ಸರ್ಕಾರದ ಬಂಡವಾಳವನ್ನು ಸುದ್ದಿಗೋಷ್ಟಿಯಲ್ಲಿ ಬಯಲು ಮಾಡಿದರು. ಎಲ್ಲವನ್ನೂ ಅವರ ಮಾತುಗಳಲ್ಲೇ ಕೇಳಿ:


ನಾನು ಕಾಂಗ್ರೆಸ್ ಪಕ್ಷದವನು ಎಂದು ಆಪಾದಿಸುತ್ತಿದ್ದಾರೆ, ನಾನು ಯಾವ ಪಕ್ಷಕ್ಕೂ ಸೇರಿಲ್ಲ,ಕೇವಲ ಗುತ್ತಿಗೆದಾರ ಮಾತ್ರ, ಚುನಾವಣೆಗಳಲ್ಲಿ ಬೇಕಾದವರಿಗೆ ಓಟು ಮಾಡುವ ಹಕ್ಕು ನನಗಿದೆ.


ಬಿಜೆಪಿ ಸರ್ಕಾರದ ಕಾಲದಲ್ಲಿ ಮಾತ್ರವೇ ಅಲ್ಲ ಎಲ್ಲ ಸರ್ಕಾರಗಳ ಕಾಲದಲ್ಲೂ ಭ್ರಷ್ಟಾಚಾರವಿತ್ತು, ಆದರೆ ಪ್ರಮಾಣ ಮಾತ್ರ ಈಗ ಮಿತಿ ಮೀರಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ನಮ್ಮ ದೂರಿಗೆ ಸ್ಪಂದಿಸದೇ ಹೋದಾಗ ರಾಜ್ಯಪಾಲರನ್ನು ಭೇಟಿ ಮಾಡಿದೆವು, ನಂತರವಷ್ಟೇ ಪ್ರಧಾನಿಯವರಿಗೆ ಪತ್ರ ಬರೆದದ್ದು. ಅವರು ಚುನಾವಣಾ ಪ್ರಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ದಸ್ ಪರ್ಸೆಂಟ್ ಸರ್ಕಾರ್ ಎಂದು ದೂರುತ್ತಿದ್ದರು. ಪ್ರಧಾನಿ ಮೋದಿಯವರು ಭ್ರಷ್ಟಾಚಾರ ವಿರೋಧಿ ಎಂಬುದು ನಮ್ಮ ಭಾವನೆಯಾಗಿತ್ತು. ಆದ್ದರಿಂದ ಅವರಿಗೆ ಜುಲೈ ತಿಂಗಳಲ್ಲಿ ಪತ್ರ ಬರೆದಿದ್ದವು , ಅವರಿಂದ ಯಾವುದೇ ಪರಿಹಾರ ನಮಗೆ ಈವರೆಗೆ ದೊರಕಿಲ್ಲ. 


ರಾಜ್ಯದ ಹಾಲಿ ಮುಖ್ಯಮಂತ್ರಿ ಬೊಮ್ಮಾಯಿಯವರೂ ನಮ್ಮ ದೂರಿಗೆ ಸ್ಪಂದಿಸಿಲ್ಲ, ಒಂದು ತಿಂಗಳಾದರೂ ಸಂದರ್ಶನಕ್ಕೆ ಅವಕಾಶ ನೀಡಲಿಲ್ಲ.


ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ರೂ.22,000 ಕೋಟಿ ಬಾಕಿ ಕೊಡಬೇಕಾಗಿದೆ. ಇಂಜಿನಿಯರ್‌ಗಳು ಹಾಗೂ ಜನ ಪ್ರತಿನಿಧಿಗಳಿಗೆ 35-40% ಲಂಚ ಹಾಗೂ 17.5% ತೆರಿಗೆ ಸೇರಿ 57.5% ಹೋದರೆ ಉಳಿದ 47.5% ನಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ಗುತ್ತಿಗೆದಾರರು ಬದುಕುವುದು ಹೇಗೆ? 


ಸಚಿವರಾದ ಗೋವಿಂದ ಕಾರಜೋಳ ಹಾಗೂ ಅಶೋಕ್ ನಮ್ಮ ಸಂಘದಲ್ಲಿ ಕೇವಲ 800 ಸದಸ್ಯರಿದ್ದಾರೆ ಎಂದು ಟೀಕಿಸಿದ್ದಾರೆ.ಆದರೆ ರಾಜ್ಯದಲ್ಲಿ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಗುತ್ತಿಗೆದಾರರು ನಮ್ಮ ಸಂಘದ ಸದಸ್ಯರಾಗಿದ್ದಾರೆ. ಇವರಲ್ಲಿ 17 ಸಾವಿರ ಗುತ್ತಿಗೆದಾರರು ಕ್ಲಾಸ್ ಒನ್ ಮತ್ತು ಕ್ಲಾಸ್ ಟು, ಆದರೆ ಹೊರಗಿನ ಕೇವಲ 296 ಗುತ್ತಿಗೆದಾರರು ರಾಜ್ಯದ 90 % ಗುತ್ತಿಗೆ ಹಿಡಿದುಕೊಂಡಿದ್ದಾರೆ.ಹೀಗೇಕೆ?


ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪ್ಯಾಕೇಜ್ ಹೆಸರಿನಲ್ಲಿ ಎಲ್ಲ ಗುತ್ತಿಗೆಗಳನ್ನು ಹೊರಗಿನವರಿಗೆ ನೀಡಲಾಗುತ್ತಿದೆ. ವರ್ಷಗಳೇ ಕಳೆದರೂ ಈ ಯಾವ ಪ್ಯಾಕೇಜ್ ಕಾಮಗಾರಿಗಳೂ 25%ನಷ್ಟೂ ಮುಗಿದಿಲ್ಲ. ಬೇಕಿದ್ದರೆ ಗ್ಲೋಬಲ್ ಟೆಂಡರ್ ಕರೆಯಲಿ, ನಾವು ಸ್ಪರ್ಧಿಸಲು ಸಿದ್ದರಿದ್ದೇವೆ.


ಯಾವುದೇ ತಾಂತ್ರಿಕ ಪರಿಣಿತಿ ಇಲ್ಲದ ಜಿಲ್ಲಾ ನಿರ್ಮಿತಿ ಕೇಂದ್ರಗಳಿಗೆ ಬಹು ದೊಡ್ಡ ಮೊತ್ತದ ಗುತ್ತಿಗೆಗಳನ್ನು ಹೇಗೆ ನೀಡಲಾಗುತ್ತಿದೆ. 
ಕೆಆರ್‌ಐಡಿಎಲ್ ಎಂಬ ಸಂಸ್ಥೆಗೆ 25,000 ಕೋಟಿಯಷ್ಟು ಬೃಹತ್ ಮೊತ್ತದ ಕೆಲಸ ನೀಡಲಾಗಿದ್ದು ಈ ಸಂಸ್ಥೆ 25% ನಷ್ಟೂ ಕೆಲಸ ಮಾಡಿಲ್ಲ. ಕಾಮಗಾರಿ ಗುಣಮಟ್ಟ ಗ್ಯಾರಂಟಿಯೂ ಇಲ್ಲ.


ಗುತ್ತಿಗೆ ಅಕ್ರಮಗಳಲ್ಲಿ ಎಲ್ಲ ಸರ್ಕಾರಗಳೂ ಒಂದೇ, ಸರ್ಕಾರಗಳು ಬದಲಾದಂತೆಲ್ಲ ಲಂಚದ ಪ್ರಮಾಣ ಹೆಚ್ಚುತ್ತಲೇ ಇದೆ. ಶೋಷಣೆ, ಅನ್ಯಾಯ ಮಿತಿ ಮೀರಿದ್ದರಿಂದಾಗಿ ಗುತ್ತಿಗೆದಾರರ ಸಂಘವು ಬಾಯಿ ಬಿಟ್ಟು ಬೀದಿಗೆ ಬಂದು ನಿಂತಿದೆ.


ಅಧಿಕಾರಿಗಳು-ಜನಪ್ರತಿನಿಧಿಗಳ ಅತೀವ ಭ್ರಷ್ಟಾಚಾರದಿಂದ ಶೋಷಣೆಗೊಳಗಾಗುತ್ತಿರುವ, ಪ್ಯಾಕೇಜ್ ಗುತ್ತಿಗೆ ವ್ಯವಸ್ಥೆಯಿಂದಾಗಿ ಕೆಲಸವಿಲ್ಲದೇ ಮನೆಗಳಲ್ಲಿ ಕುಳಿತಿರುವ ರಾಜ್ಯದ ಗುತ್ತಿಗೆದಾರರ ಮೊರೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳುತ್ತಿಲ್ಲ, ರಾಜ್ಯಪಾಲರಿಗೆ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ, 


2018ರಿಂದ ಎಸ್ ಆರ್ ದರಗಳನ್ನು ಪರಿಷ್ಕರಣೆ ಮಾಡಿಲ್ಲ,
ಬೋಗಸ್ ಬ್ಯಾಂಕ್ ಗ್ಯಾರಂಟಿ ದಾಖಲೆ ಸಲ್ಲಿಸುವ ಹೊರಗಿನ ಗುತ್ತಿಗೆದಾರರು ಮತ್ತು ಸಂಸ್ಥೆಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಿಲ್ಲವೇಕೆ? ಅಕ್ಕಪಕ್ಕದ ಕೇರಳ, ತಮಿಳುನಾಡು ಮತ್ತು ಆಂಧ್ರ-ತೆಲAಗಾಣಗಳಲ್ಲಿ ಇತರ ರಾಜ್ಯಗಳ ಗುತ್ತಿಗೆದಾರರಿಗೆ ನೊಂದಣಿ ಮಾಡಿಕೊಳ್ಳಲೂ ಅವಕಾಶವಿಲ್ಲ.ನಮ್ಮ ಕರ್ನಾಟಕದಲ್ಲಿ ಮಾತ್ರ ಹೀಗೇಕೆ.


ಎಲ್ಲವೂ ಇಲ್ಲಿ ಓಪನ್ ಸೀಕ್ರೆಟ್ ಆಗಿದೆ. ಅಧಿಕಾರಿಗಳು ಇನ್ವಾಲ್ವ್ ಆಗದೇ ಏನೂ ನಡೆಯುವುದಿಲ್ಲ.ಎಲ್ಲ ಕಾಮಗಾರಿಗಳೂ ಗ್ಲೋಬಲ್ ಟೆಂಡರ್ ಕರೆಯಲಿ.
ಪ್ಯಾಕೇಜ್ ಗುತ್ತಿಗೆ ವಿರುದ್ದದ ನಮ್ಮ ಹೋರಾಟ ನಿಲ್ಲುವುದಿಲ್ಲ. ರಾಜ್ಯ ಸಮಾವೇಶ ಮಾಡುತ್ತೇವೆ. ಮಾರ್ಚಿ ತಿಂಗಳಲ್ಲಿ ಪ್ರಧಾನಿ ಭೇಟಿ ದೊರಕಲಿದೆ. 


ಪ್ಯಾಕೇಜ್ ಗುತ್ತಿಗೆ ಎಂದರೇನು?



ಒಂದು ಸಾವಿರದಿಂದ ಕೋಟಿಗಟ್ಟಲೆ ಮೊತ್ತದವರೆಗಿನ ಎಲ್ಲ ಕಾಮಗಾರಿಗಳನ್ನು ಒಟ್ಟುಗೂಡಿಸಿ ಅವರಿಗೆ ಬೇಕಾದ ಒಬ್ಬ ವ್ಯಕ್ತಿಗೋ ಸಂಸ್ಥೆಗೋ ಗುತ್ತಿಗೆ ನೀಡುವುದನ್ನು ಪ್ಯಾಕೇಜ್ ಎನ್ನುತ್ತಾರೆ.
ಕಳೆದ ಕಾಂಗ್ರೆಸ್ ಸರ್ಕಾರದ ಕಾಲಾವಧಿಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಮಹದೇವಪ್ಪನವರ ಆಡಳಿತಾವಧಿಯಲ್ಲಿ ಈ ಪ್ಯಾಕೇಜ್ ಸಿಸ್ಟಂ ಅನುಷ್ಟಾನಕ್ಕೆ ಬಂತು. ಅತಿ ಹೆಚ್ಚು ಮೊತ್ತದ ಪ್ಯಾಕೇಜ್ ಅವರ ಕಾಲದಲ್ಲೇ ಆದದ್ದು. ಇಂಥ ಗುತ್ತಿಗೆ ನೀಡುವಲ್ಲಿ ಯಾವ ನಿಯಮಗಳನ್ನೂ ಅನುಸರಿಸುವುದಿಲ್ಲ. ಅತ್ಯಂತ ಪಾರದರ್ಶಕ ಎನ್ನಲಾಗಿದ್ದ ಕೆಟಿಟಿಪಿ ಆಕ್ಟ್ ಅನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.
- ಡಿ.ಕೆಂಪಣ್ಣ
ಅಧ್ಯಕ್ಷರು, ರಾಜ್ಯ ಗುತ್ತಿಗೆದಾರರ ಸಂಘ