ಎರಡು ಮಹಾಕಾವ್ಯಗಳು ಮತ್ತು ಧರ್ಮದ ವ್ಯಾಖ್ಯಾನ- ನಾ ದಿವಾಕರ

ಧರ್ಮಶಾಸ್ತ್ರ ಮತ್ತು ಇತಿಹಾಸದ ರಚನೆಗಳು ಕ್ರಿಶ 300ರ ಆಸುಪಾಸಿನಲ್ಲಿ ಆರಂಭವಾದವು. ಇದೇ ಅವಧಿಯಲ್ಲೇ ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಭಾಷೆಯಲ್ಲಿ ತಮ್ಮ ಅಂತಿಮ ಸ್ವರೂಪ ಪಡೆದುಕೊಂಡವು.  ಧರ್ಮಶಾಸ್ತ್ರಗಳು ಮೇಲ್ಪದರದ ಗಣ್ಯ ಸಮಾಜಕ್ಕಾಗಿ ರಚಿತವಾದರೆ ಮಹಾಕಾವ್ಯಗಳು ಸಾಮಾನ್ಯ ಜನರಿಗಾಗಿ ಇದ್ದವು. ಉಪಖಂಡದಲ್ಲಿ ಹೊಸದಾಗಿ ಉಗಮಿಸುತ್ತಿದ್ದ ಪ್ರಾದೇಶಿಕ ದೊರೆಗಳಿಗೆ ಅರಿವು ಮೂಡಿಸುವ  ಸಾಧನಗಳಾಗಿ ಮಹಾಕಾವ್ಯಗಳು ರೂಪುಗೊಂಡವು. ಬ್ರಾಹ್ಮಣರನ್ನು ಅಪಮಾನಗೊಳಿಸುವುದರಿಂದ ಉಂಟಾಗುವ ವ್ಯತ್ಯಯಗಳ ಬಗ್ಗೆಯೂ, ಅವರ ಶಾಪದಿಂದ ರಾಜರು ಸರ್ವನಾಶವಾಗುವ ಬಗ್ಗೆಯೂ ಕತೆಗಳನ್ನು ಹೇಳತೊಡಗಿದರು. ಇದರಿಂದ ಬ್ರಾಹ್ಮಣರು ರಾಜ್ಯಾಡಳಿತದ ಸಲಹೆಗಾರರಾಗಿ ಸ್ಥಾಪನೆಯಾಗಲು ಸಾಧ್ಯವಾಯಿತು.  

ಎರಡು ಮಹಾಕಾವ್ಯಗಳು ಮತ್ತು ಧರ್ಮದ ವ್ಯಾಖ್ಯಾನ- ನಾ ದಿವಾಕರ

 

 ಇತಿಹಾಸದ  ಇತಿಹಾಸ - ದೇವದತ್ತ ಪಟ್ಟನಾಯಕ್‌

 

     ರಾಮಾಯಣದ ಆರಂಭಿಕ ಪುನರಾವರ್ತನೆಗಳಲ್ಲಿ ಲಕ್ಷ್ಮಣರೇಖೆಯ ಉಲ್ಲೇಖ ಕಂಡುಬರುವುದಿಲ್ಲ. ಹಾಗೆಯೇ ಆರಂಭಿಕ ಮಹಾಭಾರತದ ಪುನರಾವರ್ತನೆಗಳಲ್ಲಿ ದ್ರೌಪದಿಯ ವಸ್ತ್ರಾಪಹರಣದ ಉಲ್ಲೇಖ ಕಾಣುವುದಿಲ್ಲ. ಈ ಎರಡೂ ಆಲೋಚನೆಗಳನ್ನು ಮಹಾಕಾವ್ಯಗಳ ನಂತರದ ಆವೃತ್ತಿಗಳಲ್ಲಿ ಗುರುತಿಸಬಹುದು. ಅಂದರೆ, ಸಂಸ್ಕೃತದಲ್ಲಿ ರಚಿಸಲ್ಪಟ್ಟ ಹಳೆಯ ಆವೃತ್ತಿಗಳು ಅಧಿಕೃತ ನಿರೂಪಣೆಗಳು ಎಂದೂ ಆನಂತರದಲ್ಲಿ ಉದ್ದೇಶಿತ ಜನರನ್ನು ತಲುಪುವ ಸಲುವಾಗಿ ಹೊಸ ಪದರಗಳನ್ನು ಸೇರ್ಪಡೆ ಮಾಡಲಾಯಿತು ಎಂದು ಭಾವಿಸಬಹುದೇ ?

ಮೂಲ ಭೂಗೋಳಶಾಸ್ತ್ರ

 

    ನಾವು ವೇದಕಾಲದ ರಚನೆಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಅಲ್ಲಿ ದಶರಥ, ಶಂತನು, ಯಯಾತಿ, ಕೃಷ್ಣ ಮುಂತಾದ ಹೆಸರುಗಳು ಕಂಡುಬರುತ್ತವೆ. ಅಲ್ಲಿ ರಾಮಾಯಣ ಅಥವಾ ಮಹಾಭಾರತದ ಯಾವುದೇ ಕತೆಗಳನ್ನು ಕಾಣಲಾಗುವುದಿಲ್ಲ. ಈ ಕತೆಗಳ ಪ್ರಾಚೀನತೆಯ ಸಾಕ್ಷ್ಯ ಪುರಾವೆಗಳು ನಮಗೆ ಸ್ಪಷ್ಟವಾಗಿ ದೊರೆಯುವುದು ಗಂಗಾ ಜಲಾನಯನ ಪ್ರದೇಶದಿಂದ. 3000 ವರ್ಷಗಳ ಮುನ್ನ ಕೆಂಪು-ಕಪ್ಪು ವರ್ಣದ ಕುಂಬಾರಿಕೆಯ ಸ್ಥಾನವನ್ನು ಪೇಂಟ್‌ ಮಾಡಿದ Greyware ವಸ್ತುಗಳು ಆಕ್ರಮಿಸಿಕೊಂಡ ಕಾಲದಿಂದ ನಮಗೆ ಸಾಕ್ಷ್ಯಗಳು ಲಭ್ಯವಿದೆ. 21ನೆಯ ಶತಮಾನದ ಗ್ರಾಮಗಳ ಹೆಸರುಗಳು ಈ ಎರಡೂ ಕಾವ್ಯಗಳಲ್ಲಿ ಉಲ್ಲೇಖವಾಗುವುದನ್ನು ಇಲ್ಲಿ ಕಾಣಬಹುದು.

 

    ನಾವು ಸಾಮಾನ್ಯವಾಗಿ ಕ್ರಿ ಶ 800ರ ಆಸುಪಾಸಿನ ವೇದೋತ್ತರ  ಸಾಹಿತ್ಯಗಳಲ್ಲಿ ಇತಿಹಾಸ-ಪುರಾಣ ಎಂದ ಪದಬಳಕೆಯನ್ನು ಕಾಣುತ್ತೇವೆ. ಈ ಉಲ್ಲೇಖಗಳಲ್ಲಿ, ವೇದ ಸಾಹಿತ್ಯದ ನೂರಾರು ಕತೆಗಳನ್ನು ಕಾಣಬಹುದು. ಇವುಗಳಲ್ಲಿ ವಿವಿಧ ಮಂತ್ರಗಳು ಹೇಗೆ ಉಗಮಿಸಿದವು, ಈ ಮಂತ್ರಗಳು ಜನಸಾಮಾನ್ಯರಿಗೆ ಸಹಾಯಕವಾಗಲು ಹೇಗೆ ದೇವರನ್ನು ಆವಾಹನೆ ಮಾಡಲು ಬಳಕೆಯಾದವು, ವಿವಿಧ ಆಚರಣೆಗಳು ಹೇಗೆ ಉಗಮಿಸಿದವು ಎಂಬ ಉಲ್ಲೇಖಗಳು ದೊರೆಯುತ್ತವೆ. ಆದರೆ ಎಲ್ಲಿಯೂ ರಾಮಾಯಣ ಅಥವಾ ಮಹಾಭಾರತದ ಪ್ರಸ್ತಾಪ ಕಾಣಸಿಗುವುದಿಲ್ಲ.

 

   ಮಹಾಭಾರತ ಕಾವ್ಯವು ಇಂದಿನ ದೆಹಲಿ ಮತ್ತು ಗುಜರಾತ್‌ (ದ್ವಾರಕಾ) ನಡುವಿನ ಭೂ ಪ್ರದೇಶದಲ್ಲಿ ತೆರೆದುಕೊಳ್ಳುತ್ತದೆ. ರಾಮಾಯಣವು ಬಿಹಾರ (ವಿದೇಹ)ದಿಂದ ನರ್ಮದಾ ಕಡೆಗೆ ಚಲಿಸುವುದನ್ನು ಸೂಚಿಸುತ್ತದೆ. ರಾಮಾಯಣದ ಆರಂಭಿಕ ಹಸ್ತಪ್ರತಿಗಳಲ್ಲಿ ಎಲ್ಲಿಯೂ ಸಹ ಯಾವುದೇ ದಕ್ಷಿಣದ ನದಿಗಳ ಉಲ್ಲೇಖವನ್ನು ಕಾಣಲಾಗುವುದಿಲ್ಲ. ಪ್ರಾಚೀನ ಗ್ರಂಥಗಳ ಅನುಸಾರ ಕಿಷ್ಕಿಂದ ಮತ್ತು ಲಂಕಾ ಎರಡೂ ಪ್ರದೇಶಗಳು ಸಾಲ ವೃಕ್ಷಗಳಿಂದ (Sal trees) ಕೂಡಿದ್ದವು. ಈ ವೃಕ್ಷಗಳನ್ನು ಇಂದು ಒಡಿಷಾ, ಜಾರ್ಖಂಡ್‌ ಮತ್ತು ಛತ್ತಿಸ್‌ಘಡಗಳಲ್ಲಿ ಕಾಣಬಹುದೇ ಹೊರತು ದಕ್ಷಿಣ ಭಾರತದಲ್ಲಿ ಇಲ್ಲ.

  

ಮೌರ್ಯ ಅವಧಿಯ ಬಿಕ್ಕಟ್ಟು

 

     ಈ ಮಹಾಕಾವ್ಯಗಳನ್ನು ರಚಿಸಿದ್ದು ನಂತರದ ಕಾಲಘಟ್ಟದಲ್ಲಿ, ಸುಮಾರು 2000 ವರ್ಷಗಳ ಹಿಂದೆ. ಈ ವೇಳೆಗೆ ಹಿಮಾಲಯದಿಂದ ಕರಾವಳಿಯವರೆಗೆ ವ್ಯಾಪಾರ ಮಾರ್ಗಗಳು ತೆರೆದುಕೊಂಡಿದ್ದವು. ಮೌರ್ಯರ ಕಾಲಾವಧಿಯ ವೇಳೆಗೆ ( ಕ್ರಿಪೂ 300) ಬ್ರಾಹ್ಮಣರ ವಿಶೇಷ ಸ್ಥಾನಮಾನಗಳು ಇಲ್ಲವಾಗಿದ್ದವು. ಮೌರ್ಯ ದೊರೆಗಳು ಬೌದ್ಧ ಧಮ್ಮವನ್ನು ಪ್ರೋತ್ಸಾಹಿಸಿ, ಪೋಷಿಸಿದರೂ ಮೂಲತಃ ಅವರು ಕಾಸ್ಮೊಪಾಲಿಟನ್‌ ಆಗಿದ್ದರು, ಬಹುಮಟ್ಟಿಗೆ ಪರ್ಷಿಯಾ ಮತ್ತು ಗ್ರೀಕರಿಂದ ಪ್ರೇರಿತರಾಗಿದ್ದರು. 2300 ವರ್ಷ ಹಳೆಯದಾದ ಅಶೋಕನ ಶಾಸನಗಳಲ್ಲಿ ಬ್ರಾಹ್ಮಣರು ಮತ್ತು ಬೌದ್ಧರೊಡನೆ ನಿಕಟ ಸಂಬಂಧ ಹೊಂದಿರುವುದು ಸ್ಪಷ್ಟವಾಗುತ್ತದೆ ಅದರೆ ರಾಮಾಯಣ ಅಥವಾ ಮಹಾಭಾರತದ ಉಲ್ಲೇಖ ಕಾಣುವುದಿಲ್ಲ.

 

     ಬೌದ್ಧರಲ್ಲಿ ಧಮ್ಮ ಎಂಬ ಪದ ಜನಪ್ರಿಯವಾಗಿತ್ತು. ಇದು ಸನ್ಯಾಸಿಗಳ ಜೀವನ ಶೈಲಿಯನ್ನು ಸೂಚಿಸುವಂತಿತ್ತು. ಬ್ರಾಹ್ಮಣರು ಈ ದೃಷ್ಟಿಕೋನವನ್ನು ವಿರೋಧಿಸಿದ್ದೇ ಅಲ್ಲದೆ ಈ ಪರಿಕಲ್ಪನೆ ಕೌಟುಂಬಿಕ ಜವಾಬ್ದಾರಿಯನ್ನು ಪೂರೈಸುವ ಬಗ್ಗೆ ಹೇಳುವುದಾಗಿ ವಾದಿಸಿದ್ದರು. ಈ ಹಿನ್ನೆಲೆಯಲ್ಲೇ ಧರ್ಮ ಎಂಬ ಪದವನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ಆರಂಭವಾದವು. ಧರ್ಮಶಾಸ್ತ್ರ ಗ್ರಂಥಗಳು, ರಾಮಾಯಣ, ಮಹಾಭಾರತ ಗ್ರಂಥಗಳು ರಚನೆಯಾದವು. ಒಂದು ಕಾಲದಲ್ಲಿ ಅಲೆಮಾರಿ ಗಾಯಕರು ಹೇಳಿದ ಕತೆಗಳನ್ನೇ ರಾಜರ ಒಡ್ಡೋಲಗಗಳಲ್ಲಿ ಬ್ರಾಹ್ಮಣ ಪುರೋಹಿತರು ಪುನರುಚ್ಚರಿಸಲಾರಂಭಿಸಿದ್ದರು. ಈ ಕತೆಗಳ ಉದ್ದೇಶ ಇತಿಹಾಸದ ನಿರೂಪಣೆಯಾಗಿರಲಿಲ್ಲ ಬದಲಾಗಿ ಪ್ರಾಚೀನ ಕಾಲದಲ್ಲಿ, ವೇದಕಾಲದ ಜೀವನಶೈಲಿಯನ್ನು ಗೌರವಿಸುತ್ತಿದ್ದ ವೈಭವಯುತ ಕಾಲಘಟ್ಟವನ್ನು ರಾಜರಿಗೆ ನೆನಪಿಸುವುದಾಗಿತ್ತು. ಹಾಗೆಯೇ ಬ್ರಾಹ್ಮಣರ ಸಲಹೆಗಳಿಗೆ ಬೆಲೆ ಕೊಡುತ್ತಿದ್ದುದರಿಂದಲೇ ರಾಜರು ಯಶಸ್ವಿಯಾಗುತ್ತಿದ್ದರು ಎಂದು ಹೇಳುವುದಾಗಿತ್ತು.

 

ಬೌದ್ಧಿಕ ನಿರೂಪಣೆಗಳು

 

     ಧರ್ಮಶಾಸ್ತ್ರ ಮತ್ತು ಇತಿಹಾಸದ ರಚನೆಗಳು ಕ್ರಿಶ 300ರ ಆಸುಪಾಸಿನಲ್ಲಿ ಆರಂಭವಾದವು. ಗುಪ್ತ ಸಾಮ್ರಾಜ್ಯದ ದೊರೆಗಳ ಪ್ರೋತ್ಸಾಹದಿಂದ ಯಶಸ್ಸು ಗಳಿಸಿದವು. ಇದೇ ಅವಧಿಯಲ್ಲೇ ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಭಾಷೆಯಲ್ಲಿ ತಮ್ಮ ಅಂತಿಮ ಸ್ವರೂಪ ಪಡೆದುಕೊಂಡವು.  ಧರ್ಮಶಾಸ್ತ್ರಗಳು ಮೇಲ್ಪದರದ ಗಣ್ಯ ಸಮಾಜಕ್ಕಾಗಿ ರಚಿತವಾದರೆ ಮಹಾಕಾವ್ಯಗಳು ಸಾಮಾನ್ಯ ಜನರಿಗಾಗಿ ಇದ್ದವು. ಈ ಧರ್ಮಶಾಸ್ತ್ರಗಳು ರಾಜಧರ್ಮದ ಬಗ್ಗೆ, ಸ್ತ್ರೀ ಧರ್ಮದ ಬಗ್ಗೆ ಹಾಗೂ ಆಪದ್ಧರ್ಮದ ಬಗ್ಗೆ (ಬಿಕ್ಕಟ್ಟಿನ ಪರಿಸ್ಥಿತಿಯ ಕರ್ತವ್ಯಗಳು) ಸಾಮಾನ್ಯ ಜನರಿಗೆ ಅರಿವು ಮೂಡಿಸುವಂತಿದ್ದವು. ಉಪಖಂಡದಲ್ಲಿ ಹೊಸದಾಗಿ ಉಗಮಿಸುತ್ತಿದ್ದ ಪ್ರಾದೇಶಿಕ ದೊರೆಗಳಿಗೆ ಅರಿವು ಮೂಡಿಸುವ  ಸಾಧನಗಳಾಗಿ ಮಹಾಕಾವ್ಯಗಳು ರೂಪುಗೊಂಡವು. ಪರಶುರಾಮ ಮತ್ತು ಔರ್ವ ಮುಂತಾದ ಬ್ರಾಹ್ಮಣರನ್ನು ಅಪಮಾನಗೊಳಿಸುವುದರಿಂದ ಉಂಟಾಗುವ ವ್ಯತ್ಯಯಗಳ ಬಗ್ಗೆಯೂ, ಅವರ ಶಾಪದಿಂದ ರಾಜರು ಸರ್ವನಾಶವಾಗುವ ಬಗ್ಗೆಯೂ ಕತೆಗಳನ್ನು ಹೇಳತೊಡಗಿದರು. ಇದರಿಂದ ಬ್ರಾಹ್ಮಣರು ರಾಜ್ಯಾಡಳಿತದ ಸಲಹೆಗಾರರಾಗಿ ಸ್ಥಾಪನೆಯಾಗಲು ಸಾಧ್ಯವಾಯಿತು.

 

    ಕಾಲಕ್ರಮೇಣ ಪ್ರತಿಯೊಬ್ಬ ರಾಜನೂ ವೇದಕಾಲದ ರಾಜರನ್ನು ಅನುಕರಿಸತೊಡಗಿದ್ದ. ಈ ಕಾಲಘಟ್ಟದಲ್ಲೇ ರಾಮಾಯಣ ಮತ್ತು ಮಹಾಭಾರತದ ಪ್ರಾದೇಶಿಕ ಗ್ರಂಥಗಳನ್ನು ಪ್ರಾಯೋಜಿಸುವುದೇ ಅಲ್ಲದೆ ತಮ್ಮ ರಾಜಪ್ರಭುತ್ವ ಸ್ಥಾನಮಾನವನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಪಠಿಸಲು ಪ್ರೋತ್ಸಾಹಿಸಿದ್ದರು. ಮಹಾಕಾವ್ಯಗಳ ಬಗ್ಗೆ ಅತ್ಯಂತ ಪ್ರಾಚೀನ ಶಿಲ್ಪಕಲೆ ಕಾಣುವುದು ಕ್ರಿಶ 5ನೆಯ ಶತಮಾನದ ಆಸುಪಾಸಿನಲ್ಲಿ ಮಧ್ಯಪ್ರದೇಶದ ಪ್ರಾಂತ್ಯಗಳ ಸುತ್ತ ಮತ್ತು  8ನೆಯ ಶತಮಾನದಲ್ಲಿ ಡೆಕ್ಕನ್‌ ಪ್ರಾಂತ್ಯದಲ್ಲಿ. ಇದನ್ನು ಪ್ರಾಯೋಜಿಸಿದವರು ಗುಪ್ತರು ಮತ್ತು ಚಾಲುಕ್ಯ ದೊರೆಗಳು.

 

     ಈ ಮಹಾಕಾವ್ಯಗಳು ಆಗ್ನೇಯ ಏಷಿಯಾದ ದೊರೆಗಳನ್ನೂ ಪ್ರೇರೇಪಿಸಿದ್ದವು. 10ನೆಯ ಶತಮಾನದ ವೇಳೆಗೆ ಜಾವಾದಲ್ಲಿರುವ ಪರಾಂಬನನ್‌ ದೇವಾಲಯದ ಗೋಡೆಗಳಲ್ಲಿ, 12ನೆಯ ಶತಮಾನದ ವೇಳೆಗೆ ಕಾಂಬೋಡಿಯಾದ ಆಂಗ್‌ಕೊರ್‌ ವಾಟ್‌ನಲ್ಲಿ ಕೆತ್ತನೆ ಮಾಡಲಾರಂಭಿಸಿದರು. 18ನೆಯ ಶತಮಾನದ ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದ ಥಾಯ್‌ ದೊರೆ ರಾಮ್‌ಕೀನ್‌ ಗ್ರಂಥವನ್ನು ರಚಿಸಿ, ಆದರ್ಶಪ್ರಾಯ ರಾಜತ್ವದ ಬಗ್ಗೆ ತನ್ನ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದ.

     19ನೆಯ ನಂತರದಲ್ಲಿ ನಿರಂತರವಾಗಿ ಮಹಾಕಾವ್ಯಗಳನ್ನು ಚಾರಿತ್ರಿಕ ಘಟನೆಗಳ ಅಧಿಕೃತ ವಿವರಣೆಗಳು ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಕ್ರೈಸ್ತರು ಬೈಬಲ್‌ ಗ್ರಂಥಕ್ಕೆ, ಮುಸ್ಲಿಮರು ಕುರಾನ್‌ ಗ್ರಂಥಕ್ಕೆ ನೀಡಿರುವ ಸ್ಥಾನಮಾನವನ್ನು ಮಹಾಕಾವ್ಯಗಳಿಗೆ ನೀಡುವ ಪ್ರಯತ್ನಗಳು ನಡೆದಿವೆ. ಪ್ರತಿಯೊಂದು ಸಂದರ್ಭದಲ್ಲೂ ವಿಜ್ಞಾನಿಗಳು ಐತಿಹಾಸಿಕತೆಯಲ್ಲಿನ ನಂಬಿಕೆಯನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಆದರೆ ಆಸ್ತಿಕರು ಇಂತಹ ಪ್ರಶ್ನೆಗಳನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ಇದಕ್ಕೆ ಕಾರಣ ರಾಜಕೀಯ ಅಧಿಕಾರವನ್ನು ಪುಷ್ಟೀಕರಿಸುವುದು ನಂಬಿಕೆಯೇ ಹೊರತು ವಿಜ್ಞಾನ ಅಲ್ಲ. ವಿಜ್ಞಾನ ಯಾವುದೇ ಸಂದರ್ಭದಲ್ಲಾದರೂ ನಂಬಿಕೆಗೆ ದಾರಿ ಬಿಟ್ಟುಕೊಡುತ್ತದೆ.  ಮಹಾಕಾವ್ಯಗಳ ಚರಿತ್ರೆಯು ನಿರೂಪಿಸುವಂತೆ, ಏನು ನಡೆದಿದೆ ಎನ್ನುವುದು  ಮುಖ್ಯವಾಗುವುದೇ ಇಲ್ಲ. ಜನತೆ ಹೇಗೆ ಭಾವಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.

 

ಮೂಲ : Two epics and the Idea of Dharma -  The Hindu 21-01-2024

ಕನ್ನಡ ಅನುವಾದ : ನಾ ದಿವಾಕರ