“ಮೇಸ್ಟ್ರೇ ನಮ್ಮುಡಗ ಏನಾದ್ರೂ ಓದ್ತಾನೋ ಇಲ್ವೊ?” -ಡಾ.ಹೆಚ್.ವಿ.ರಂಗಸ್ವಾಮಿ - (ಹಿಂದಿನ ‘ಕಿನ್ನರಿ’ಯಿಂದ)
“ಮೇಸ್ಟ್ರೇ ನಮ್ಮುಡಗ ಏನಾದ್ರೂ ಓದ್ತಾನೋ ಇಲ್ವೊ?” ಡಾ.ಹೆಚ್.ವಿ.ರಂಗಸ್ವಾಮಿ (ಹಿಂದಿನ ‘ಕಿನ್ನರಿ’ಯಿಂದ)
“ಮೇಸ್ಟ್ರೇ ನಮ್ಮುಡಗ ಏನಾದ್ರೂ ಓದ್ತಾನೋ ಇಲ್ವೊ?”
ಡಾ.ಹೆಚ್.ವಿ.ರಂಗಸ್ವಾಮಿ
(ಹಿಂದಿನ ‘ಕಿನ್ನರಿ’ಯಿಂದ)
ಒಂದು ಬಾರಿ ಪಕ್ಕದ ಬೆಲಗೂರಿಗೆ ʼಭೂತಯ್ಯನ ಮಗ ಅಯ್ಯುʼ ಸಿನಿಮಾ ಬಂದಿತ್ತು. ನಮ್ಮೂರಿನ ಸ್ವಲ್ಪ ಜನ ಹೆಗಲ ಮೇಲೆ ಟವಲ್ ಎಸ್ಕೊಂಡು ಬೆಲಗೂರು ದಾರಿ ಹಿಡಿದು ಬಿರ ಬಿರನೆ ಹೋಗುತ್ತಿದ್ದರು. ತೇರು ಬೀದಿಯಲ್ಲಿ ಆಡುತ್ತಿದ್ದ ನಮಗೆ ಅವರೆಲ್ಲಾ ಸಿನಿಮಾಕ್ಕೆ ಹೋಗ್ತಿರೋದು ಅಂತ ಗೊತ್ತಾಗತಿದ್ದಂತೆ ನಮ್ಮ ಪಂಚೇAದ್ರಿಯಗಳು ಅದೆಷ್ಟು ಚುರುಕಾದವೆಂದರೆ, ಓಂಕಾರ ಮನೆಯ ಅಟ್ಟದ ಮೇಲಿಂದ ತೆಂಗಿನ ಕಾಯಿ ಇಳಿಸಿ ಚಂದ್ರಪ್ಪನ ಅಂಗಡಿಯಲ್ಲಿ ಆರು ಕಾಸಿಂದ ಮೂರು ಕಾಸಿಗೆ ಮಾರಿದ. ನಾನು ಅಪ್ಪ ಕಟ್ಟಿದ್ದ ಹರಕೆ ಕಟ್ಟು ಬಿಚ್ಚಿದೆ. ನಾಗಾಲೋಟದಿಂದ ಎಲ್ಲರಿಗೂ ಮೊದಲೆ ಬೆಲಗೂರು ತಲುಪಿದ್ದೆವು. ಭೂತಯ್ಯನ ಮಗ ಅಯ್ಯು ಸಿನಿಮಾದ ಪ್ರವಾಹದ ಸೀನು ಮತ್ತು ಭವಾನಿ ವಿಷ್ಣುವರ್ಧನ್‌ರ ಮಲೆನಾಡ ಹೆಣ್ಣ ಮೈ ಬಣ್ಣ…. ನಡುಸಣ್ಣ.” ಇನ್ನೂ ಕಣ್ಣಿಗೆ ಕಟ್ಟಿದಂಗಿದೆ. ಮಾರನೆ ದಿನ ಮನೆಗಳಲ್ಲಿ ಮಂಗಳಾರತಿ.
ಆಮೇಲೆ ಬಂಗಾರದ ಮನುಷ್ಯ ಸಿನಿಮಾ. ರಾಜಕುಮಾರ್ ಹೆಸರು ಕೇಳಿದ್ರೆ ನಮ್ಮೂರಲ್ಲಿ ವಿದ್ಯುತ್ಸಂಚಾರವಾದAತೆ! ಬಂಗಾರದ ಮನುಷ್ಯನಿಗಿಂತ ರಾಜಕುಮಾರ್-ಭಾರತಿ ನೋಡೋದಕ್ಕೆ ಸಿನಿಮಾಕ್ಕೆ ಹೋಗಿದ್ವಿ.
ಈ ಮಧ್ಯೆ ಇನ್ನೊಂದು ಅನಾಹುತ ಜರುಗಿ ಹೋಯ್ತು. ನಮ್ಮೂರಿನ ದೊಡ್ಡವರು ಕೆಲವರು ಜಗುಲಿ ಮೇಲೆ ಕೂತು ತುಟಿಯಲ್ಲಿ ಬೀಡಿ ಇಟ್ಟುಕೊಂಡು ಸುರುಳಿ-ಸುರುಳಿಯಾಗಿ ಬಾಯಿಂದ ಹೊಗೆ ಬಿಡುತ್ತಾ, ಒಂದೊಂದು ಬಾರಿ ಮೂಗಿನಿಂದಲೂ ಬಿಡುತ್ತಿದ್ದುದು, ಪಡ್ಡೆ ಹುಡುಗರಾದ ನಮಗೆ ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ನಾನೂ, ಓಂಕಾರ ಇವತ್ತು ಒಂದು ಕೈ ನೋಡೇ ಬಿಡೋಣ ಅಂತ ತೀರ್ಮಾನಿಸಿ ಬೀಡಿ ಕಟ್ಟೊಂದನ್ನ ಕೊಂಡು ʼಕುರುಡು ಮಾರಿ ಈಚಲಿʼಗೆ ತಲುಪಿದೆವು-ಯಾರೂ ನೋಡಬಾರದು ಅಂತ. ಒಂದೆರಡು ದಮ್ ಹೊಡೆದ ಮೇಲೆ, ಒಂದು ಪ್ರಳಯಾಂತಕ ಪ್ರಶ್ನೆ ನಮ್ಮ ಮುಂದೆ ಉದ್ಭವವಾಯ್ತು. ಈ ರೀತಿ ಸುಖಾ ಸುಮ್ಮನೆ ಸೇದಿ ಹೊಗೆ ಹೊರಗೆ ಬಿಡುವುದರಿಂದ ಲಾಭವಾದರೂ ಏನು? ದುಡ್ಡು ಕೊಟ್ಟು ಹೊಗೆ ಹೊರಗೆ ಬಿಟ್ಟರೆ ಇದು ಬಾರೀ ನಷ್ಟವೆಂದು ಭಾವಿಸಿ ಹೊಗೆಯನ್ನ ಒಳಗೇ ಎಳ್ಕೊಳ್ಳೋದು ಅಂತ ತೀರ್ಮಾನಿಸಲಾಯ್ತ.ಈ ಯೋಚನೆ ಬಂದದ್ದೇ ತಡ ಒಳಗೆ ಬೀಡಿ ಹೊಗೆ ಆಘ್ರಾಣಿಸಲು ಶುರು ಮಾಡುತ್ತಿದ್ದಂತೆ, ನವರಂಧ್ರಗÀಳಲ್ಲೆಲ್ಲಾ ಉರಿಯುತ್ತಾ ಮೂಗು-ಬಾಯಿಗಳಿಂದೆಲ್ಲಾ ಒಂದೇ ಸಮನೆ ಕೆಮ್ಮು-ಸೀನುಗಳು ಅವ್ಯಾಹತವಾಗಿ ಚಿಮ್ಮಲಾಗಿ, ಕಣ್ಣಾಲಿಗಳಲ್ಲಿ ನೀರುಕ್ಕಿ ಕೆಂಪಾಗಿಬಿಟ್ಟವು.
ಹೆಸರೇ ಸೂಚಿಸುವಂತೆ ಇದು ಈಚಲ ವನ. ಆಗೆಲ್ಲಾ ಇಂತಹ ಜಾಗಗಳಲ್ಲಿ ನೀರಾ ಇಳಿಸುವುದು ಸರ್ವೇ ಸಾಮಾನ್ಯವಾಗಿತ್ತು. ಈಡಿಗರ ಮುನಿಯಪ್ಪನಿಗೂ ನಮ್ಮಪ್ಪನಿಗೂ ಸ್ನೇಹವಿರಲಾಗಿ ನೀರಾ ಇಳಿಸುವ ಸಂದರ್ಭದಲ್ಲಿ ಅಪ್ಪನ ಕೂಡ ಹಾಜರಾದರೆ, ನನಗೂ ಒಂದಷ್ಟು ನೀರಾ ಕುಡಿಯಲು ಅವಕಾಶವಿತ್ತು. ಈ ನೀರಾ ಕುಡಿದಾಗ ದೇಹ ಚೇತೋಹಾರಿಯಾಗುತ್ತಿತ್ತು. ಆದರೆ ಇದೇ ನೀರಾದಿಂದಲೇ ಸೇಂದಿ ಮಾಡುತ್ತಾರೆಂದು ತಿಳಿದಾಗ ನಿರಾಸೆಯಾಯ್ತು. ಯಾಕಂದರೆ ಅಪ್ಪನ ಜೊತೆ ನಾನೂ ಎಷ್ಟೋ ಬಾರಿ ಸೇಂದಿ ಅಂಗಡಿಗೆ ಹೋಗುತ್ತಿದ್ದೆ. ಅಲ್ಲಿ ಬಾಟಲಿ ಆರಿಸಿ ಅಪ್ಪನಿಗೆ ತಂದುಕೊಡುವ ಕಾಯಕ ನನ್ನದಾಗಿರುತ್ತಿತ್ತು. ಸಾಮಾನ್ಯವಾಗಿ ಮುತ್ತುಗದ ಎಲೆಯ ಮೇಲೆ ಛಾಪೀಸು ಮತ್ತು ಕಡಲೆ ಉಸಲಿ ಹಾಕಿ ಸೇಂದಿ ಕುಡಿಯುವವರಿಗೆ ಹಾಕಿ ಕೊಡುತ್ತಿದ್ದ ಅಜ್ಜಿಯ ಆ ಕೈ ರುಚಿ ಸವಿಯುವುದು ನನ್ನ ಆದ್ಯತೆಯಾಗಿತ್ತು.
ಆಗ ಅಪ್ಪ ʼ ನೀನು ಓದೋ ಹುಡುಗ, ನೀನೆಲ್ಲಾದರೂ ಕುಡಿಯೋದು ಕಲಿತು ಬಿಟ್ಟೀಯʼ ಅಂತಾನೆ ಸೇಂದಿ ಬಾಟಲಿನ ಮೊದಲನೆ ಗುಟುಕು ನನಗರ್ಪಿಸಿ ತನ್ನ ವಶಕ್ಕೆ ಪಡೆಯುತ್ತಿದ್ದುದು. ಆದ್ದರಿಂದ ಹೆಂಡ ಮತು ನೀರಾ ರುಚಿ ಎರಡನ್ನು ಆಗಲೇ ಬಲ್ಲವನಾಗಿದ್ದೆ ನಾನು, ಸ್ವಲ್ಪ ಕುಲೀನ ಜಾತಿಯವರು ಅನ್ನಿಕೊಂಡವರು ಶರಾಬು ಕುಡಿಯುವುದು, ಅದಕ್ಕೂ ಸ್ವಲ್ಪ ಮುಂದುವರೆವರು ಬ್ರಾಂದಿ ಕುಡಿಯುತ್ತಾರೆಂದು ನಮಗಾಗಲೇ ತಿಳುವಳಿಕೆ ಇತ್ತು. ಆಗಾಗ ನಮಗೆ ಕೆಮ್ಮು ನೆಗಡಿಯಾದಾಗ ಅಪ್ಪ ನಮಗೆಲ್ಲಾ ಬ್ರಾಂದಿಯಿAದಲೇ ಪ್ರಥಮ ಚಿಕಿತ್ಸೆ ಮಾಡಿದ್ದಿದೆ.
ಈ ಎಲ್ಲಾ ನಮೂನೆ ಕೀಟಲೆಗಳು ನಮಗಷ್ಟೇ ಗೊತ್ತು ಅಂದುಕೊAಡರೆ, ಬೆಳಗಾಗುವಷ್ಟರಲ್ಲಿ ಊರಲ್ಲೆಲ್ಲಾ ಯಾರೋ ಪತ್ತೇದಾರಿಗಳು ಸುದ್ಧಿ ಮಾಡಿಬಿಟ್ಟಿರುತ್ತಿದ್ದರು. ಈ ಎಲ್ಲಾ ಪುಂಡ-ಪೋಕರಿ ಆಟಗಳಿಂದ, ಅದುವರೆಗೂ ದೈವಾಂಶ ಸಂಭೂತರಾಗಿದ್ದ ನಾವು ಪೋಲಿ ಹುಡುಗರಾಗಿಬಿಟ್ಟೆವು. ಆದರೂ ಒಂದು ಬಾರಿಯೂ ಫೇಲಾಗದೆ ನಾಲ್ಕನೆ ಕ್ಲಾಸ್ ಪಾಸಾಗಿ ಐದನೆ ಕಾಸಿಗೆ ಆಣೆಗೆರೆಗೆೆ ಬಡ್ತಿ ಪಡೆದೆವು.
ಇಂಗ್ಲಿಷ್ ಬಾಗಿಲು ತಟ್ಟಿದ್ದು
5 ನೇ ಕ್ಲಾಸಿಗೆ ನಮ್ಮ ಪಕ್ಕದ ಮುಕ್ಕಾಲು ಮೈಲು ದೂರದ ಆಣೆಗೆರೆಗೆ ಹೋಗಬೇಕಿತ್ತು. ನಮ್ಮೂರಿನ ಅಂಗಡಿಗಳಲ್ಲಿ ಎಲ್ಲಾ ಸಾಮಗ್ರಿಗಳೂ ಸಿಗುತ್ತಿರಲಿಲ್ಲವಾಗಿ, ಹೆಚ್ಚಿನದನ್ನೇನಾದರೂ ಕೊಳ್ಳಬೇಕಿದ್ದರೆ ಆಣೇಗೆರೆ ಸಲ್ಲಪ್ಪನ ಅಂಗಡಿ, ಕರೀ ಸಾಬ್ರ ಅಂಗಡಿಗೇ ಹೋಗಬೇಕಿತ್ತು. ಅಲ್ಲಿಗೆ ಹೋಗಿ ಬರೋದಕ್ಕೆ ನಮಗೆ ಒಂದು ಮಿಠಾಯಿಯದೋ, ಬತ್ತಾಸಿನದೋ ಆಸೆ ತೋರಲಾಗುತ್ತಿದ್ದಾಗಿ ನಾವು ಈ ಅವಕಾಶವನ್ನು ಎಂದೂ ತಪ್ಪಿಸುತ್ತಿರಲಿಲ್ಲ. ಆದರೆ ಈಗಿನ ಸನ್ನಿವೇಶ ಅಂತಹ ಖುಷಿ ನೀಡುವಂತದ್ದಾಗಿರಲಿಲ್ಲ. ಐದನೆ ಕ್ಲಾಸಿನಿಂದ ಇಂಗ್ಲಿಷ್ ಕಲಿಕೆ ಪ್ರಾರಂಭವಾಗುತ್ತೆ ಅನ್ನುವುದೇ ನಮಗೆ ಭಯಾನಕವಾಗಿತ್ತು. ನಮ್ಮ ಸೀನಿಯರ್‌ಗಳೆಲ್ಲಾ ಈ ಕಾರಣಕ್ಕೆ ಜಿಆರ್‌ಎಂ ಮಾಸ್ತರಿಂದ ಇಂಗ್ಲಿಷ್ ಕಾರಣಕ್ಕೆ, ಮಹೇಶ್ವರಪ್ಪ ಮಾಸ್ತರಿಂದ ಗಣಿತದ ಕಾರಣಕ್ಕೆ ಒದೆ ತಿಂದದ್ದನ್ನ ಆಗಾಗ ವರದಿ ಮಾಡುತ್ತಿದ್ದುದರಿಂದ ಒಂದು ರೀತಿಯ ಅವ್ಯಕ್ತ ಭಯ. ನಾವೆಲ್ಲಾ ಇಂಗ್ಲಿಷ್ ಬಗ್ಗೆ ಇಷ್ಟೊಂದು ಭಯ-ಭೀತರಾಗಿರುವಾಗ 7ನೇ ಕ್ಲಾಸಿನಲ್ಲಿ ಓದುತ್ತಿದ್ದ ಎ.ಜಿ. ಬಸವರಾಜು-ಛೇರ್ಮನ್ ಗೋವಿಂದಪ್ಪನ ಮಗ, ಇಂಗ್ಲಿಷ್ ಪದ್ಯ ಕಂಠಪಾಠ ಮಾಡಿ ಅದೆಲ್ಲಿಂದಲೋ ಒಂದು ʼಪ್ರೈಜ್ʼ ಗಿಟ್ಟಿಸಿದ್ದು ಜಗಜ್ಜಾಹೀರಾಗಿತ್ತು. ನಾನು ಒಂದು ಬಾರಿ ಈತನನ್ನು ಅದು ಯಾವ ಪದ್ಯ ಅಂತ ಕೇಳಿದ್ದಕ್ಕೆ ಅದೇ ದಾಟಿಯಲ್ಲಿ ಶುರುಮಾಡಿಬಿಟ್ಟ.ಅವನು ಹೇಳಿದ ವೈಖರಿ, ಅದೂ ಅರ್ಥವಾಗದ ಭಾಷೆಯಲ್ಲಿ ನಿರರ್ಗಳವಾಗಿ ಫರಂಗಿಯವರನ್ನೂ ಮೀರಿಸುವಂತಿತ್ತು.
ಆಣೇಗೆರೆ ಶಾಲೆ ನಮ್ಮೂರಿನ ಶಾಲೆಗಿಂತ ದೊಡ್ಡದಾದ ಏಳನೇ ತರಗತಿವರೆಗಿನ ಮಾಧ್ಯಮಿಕ ಶಾಲೆಯಾದರೂ, ಆಟದ ಮೈದಾನವೇ ಇರಲಿಲ್ಲ. ಪುರಾತೇಶ್ವರ ದೇವಸ್ಥಾನ,ಸಲ್ಲಪ್ಪನ ಅಂಗಡಿ ಮತ್ತು ಆಯುರ್ವೇದ ಆಸ್ಪತ್ರೆಯ ಮುಂಭಾಗದ ಬೀದಿ ಮತ್ತು ಆಟದ ಮೈದಾನ ಒಂದೇ ಆಗಿದ್ದವು.ನಾನು ಐದನೇ ಕ್ಲಾಸಿಗೆ ಆಣೆಗೆರೆಗೆ ಸೇರುವುದಕ್ಕೂ ಮೊದಲೇ ಅಪ್ಪ ಆಣೇಗೆರೆ ದೇವರ ಹೊಸಹಳ್ಳಿ ಮಾರ್ಗದ ರಸ್ತೆ ಬದಿಯ; ಆಣೇಗೆರೆಗೆ ಒಂದು ಫರ್ಲಾಂಗಷ್ಟೆ ಸಮೀಪ ಇದ್ದ ಶಂಕರಪ್ಪನ ತೋಟದಲ್ಲಿ ಹಂದಿ ಮಂದೆಗೆ ಒಪ್ಪಿ ಕೊಂಡದ್ದರಿಂದ ನಮ್ಮ ಗುಡಿಸಲು ಹೊಸಹಳ್ಳಿಯ ದೇವಸ್ಥಾನದ ಮುಂಭಾಗದಿAದ ಇಲ್ಲಿಗೆ ವರ್ಗಾವಣೆಗೊಂಡಿತ್ತು.
ಹಂದಿ ಜೋಗಿ ಅರೆ ಅಲೆಮಾರಿ ಜಾತಿಯವರಾದ ನಮಗೆ ಒಂದೇ ಕಡೆ ನೆಲೆ ಇರಬೇಕಾದ ಯಾವ ಅಗತ್ಯವೂ ಇರಲಿಲ್ಲ. ನಮ್ಮ ವಾಸಕ್ಕೆ ಒಂದು ಗುಡಿಸಲು, ಹಂದಿ ಕೂಡಲು ಒಂದು ಗೂಡು ಮತ್ತು, ಮಂದೆಗೆ ಒಬ್ಬ ತೋಟದ ಮಾಲೀಕ ಒಪ್ಪಿಕಂಡರೆ ಮತ್ತೆಲ್ಲಾ ಸಲೀಸು.ಹಂದಿ ಮಂದೆ ಬಿದ್ದ ತೆಂಗಿನ ತೋಟಗಳು ಹಸಿರು ತುಂಬಿ ನಳ ನಳಿಸುತ್ತಾ ಗೊನೆ ತುಂಬಾ ದಪ್ಪದ ತೆಂಗಿನ ಕಾಯಿ ಬಿಡುತ್ತಿರಲಾಗಿ, ನಮ್ಮೂರಿನ ಅಕ್ಕ-ಪಕ್ಕದ ತೆಂಗಿನ ತೋಟದ ಮಾಲೀಕರುಗಳು ಮಂದೆಗೆ ಅಪ್ಪನನ್ನು ಒತ್ತಾಯಿಸುತ್ತಿದ್ದರು. ಕುರಿ ಮಂದೆ ಹಾಕಿಸಿದ್ದ ತೋಟಗಳಿಗಿಂತ ಹಂದಿ ಮಂದೆ ಹಾಕಿಸಿದ ತೋಟಗಳು ಜರ್ಭಾಗಿ ಕಾಣುತ್ತಿದ್ದವು. ದೇವರ ಹೊಸಹಳ್ಳಿ (ಡಿ.ಹೊಸಹಳ್ಳಿ ಅಂತ ಚುಟುಕಾಗಿ) ಆಣೇಗೆರೆ ಮತು ಗರುಗದಹಳ್ಳಿಯ ಮಧ್ಯದ ಊರು. ಈ ಮೂರೂ ಊರುಗಳು ನಮ್ಮಪ್ಪನ ಜಾಗೀರಿಗೆ ಒಳಪಟ್ಟಂತಿದ್ದವು. ಅಂದರೆ ಬೇರೆಯಾರೂ, ಎಲ್ಲಿಂದಲಾದರೂ ಈ ಮೂರು ಹಳ್ಳಿಗಳಿಗೆ ಹಂದಿ ಮೇಯಿಸಲಾಗಲಿ, ಮಂದೆ ಹಾಕಿಸಲಾಗಲಿ ಸುತಾರಾಂ ಬರುವಂತಿರಲಿಲ್ಲ. ಒಂದೊAದು ಬಾರಿ ನಮಗಿಂತ ಜಾಸ್ತೀನೆ ಅಲೆಮಾರಿ ಜನಾಂಗದವರಾದ ಶಿಳ್ಳೇಕ್ಯಾತರು, ಪಿಚ್ಚುಗುಂಟಲವರು ಮತು ಬುಡು ಬುಡುಕೆ ಜನಾಂಗದವರು ಆಣೇಗೆರೆ ಕೆರೆ ಹಿಂದಿನ ತೋಪಿನಲ್ಲಿ ಬಂದು ತಂಗುತ್ತಿದ್ದರು. ನಮ್ಮ ಹಂದಿಗಳ ಸಂಖ್ಯೆ ಐವತ್ತರಿಂದ ನೂರರವರೆಗೆ ಇರುತ್ತಿದ್ದವು. ಒಂದೊಂದು ಬಾರಿ ಇವರೂ ಕೆಲವಾರಷ್ಟೆ ಹಂದಿಗಳನ್ನು ತಮ್ಮೊಂದಿಗೆ ಸಾಗಿಸಿಕಂಡು ಬರುತ್ತಿದ್ದರು. ಆದರೆ ಇವರೆಲ್ಲಾ ನನ್ನ ಅಪ್ಪನ ಕಾನ್ ದಾನ್ ಪ್ರವೇಶಿಸಿದ್ದಕ್ಕಾಗಿ ಒಂದು ಬಾಟಲಿ ಸೇಂದಿಯನ್ನೋ, ಒಂದು ಗೌಜಿನ ಹಕ್ಕಿಯನ್ನೋ ಕೊಟ್ಟು ಸ್ವಲ್ಪ ಸಂಭಾಳಿಸಬೇಕಿತ್ತು.
ಇವರೆಲ್ಲಾ ಸಾಮಾನ್ಯವಾಗಿ ಸೇರುತಿದ್ದುದು ಆಣೇಗೆರೆ ದೇವಣ್ಣನ(ದೇವರಾಜಪ್ಪ) ಹೆಂಡದ ಅಂಗಡಿಯಲ್ಲಿ. ಸಾಮಾನ್ಯವಾಗಿ ಸಂಜೆ ಐದು ಗಂಟೆಯಾದರೆ ಕೆಳ ಜಾತಿಯ ಮಜಾದಾರಿ ಗಂಡಸರೆಲ್ಲಾ ಇಲ್ಲಿ ಜಮಾಯಿಸುತ್ತಿದ್ದರು. ಈ ಸೇಂದಿ ಅಂಗಡಿಯ ವಾತಾವರಣ ಸಂಜೆಯಾಗುತ್ತಾ, ಆಗುತ್ತಾ ಅದೆಷ್ಟು ರಂಗೇರುತ್ತಿತು ಅಂದರೆ……ಜಾತ್ಯತೀತವಾಗಿ ಅನುಭವ ಮಂಟಪವನ್ನೂ., ಕಲಾತ್ಮಕವಾಗಿ ಯಾವುದೇ ಸಂಗೀತ ಕಚೇರಿ ಅಥವಾ ಬಯಲು ನಾಟಕವನ್ನೂ ನಾಚಿಸುವಂತಿರುತ್ತಿತ್ತು.ಉಪ್ಪು-ಖಾರ,ಮಸಾಲೆ ಸಹಿತ ಹದವಾಗಿ ಬೇಯಿಸಿದ ಛಾಪೀಸು ಅಥವಾ ಕಡಲೆ ಕಾಳು ಉಸ್ಲಿ ಸೇಂದಿಯ ಗುಟುಕಿನ ಮಧ್ಯೆ ಬಾಯಿ ಹೊಕ್ಕು, ನಾಲಿಗೆಯನ್ನ ಕೆಣಕಿ, ಜಠರಾಭಿಮುಖವಾಗಿ ಸಾಗುತ್ತಿದ್ದರೆ ರತ್ನನ ಪ್ರಪಂಚ ತೆರಕೊಂಡು ಬಿಡುತ್ತಿತು.ಅಲ್ಲಿ ಬಿಚ್ಚಿಕೊಂಡ ರತ್ನನ ಪ್ರಪಂಚ ಅಲ್ಲಿಗಷ್ಟೇ ಮುಗಿಯುತ್ತಿರಲಿಲ್ಲ! ಇಲ್ಲಿ ರಂಗ ಮಂಚಿಕೆಯಲ್ಲಿ ಸಾಂಘಿಕವಾಗಿ ತೆರೆದುಕೊಂಡ ಅಭಿವ್ಯಕ್ತಿ ರಾತ್ರಿಯಾಗುತ್ತಾ, ಆಗುತ್ತಾ ಬಿಡಿ-ಬಿಡಿಯಾಗಿ ಕವಲೊಡೆದು ಎಲ್ಲಾ ಅಕ್ಕ-ಪಕ್ಕದ ಊರ ದಾರಿ ಹಾದುಬೀದಿ ಬಯಲುಗಳನ್ನೆಲ್ಲಾ ಸೀಳಿಕೊಂಡು ಮನೆ ತಲುಪುತ್ತಿತ್ತು. ಹಿಂಗೆ ಚಿತ್ತಾದ ಅಪ್ಪ ಮನೆಗೆ ಬರುವಾಗ “ತಿಂಬ್ಯಾಡ ಕಣಮ್ಮಿ, ತಿಂಬ್ಯಾಡ ಕಣಮ್ಮಿ ನೆಲಗಡಲೆ ಕಾಯಾ, ತಿಂತ ತಿಂತ ತಿಮಿರು ಕಣಮ್ಮಿ ನೆಲಗಡಲೆ ಕಾಯಾ! ಬಾಗೂರಾಗೆ ಬಗೀತಾರೆ ಕಣಮ್ಮಿ ನೆಲಗಡಲೆ ಕಾಯಾ, ಸೂಗೂರಾಗೆ ಸುಲಿತಾರೆ ಕಣಮ್ಮಿ ನೆಲಗಡಲೆ ಕಾಯಾ. ನಿಮ್ಮಪ್ಪನೀ…ಕಾಯಾ” ಅಂತಲೋ; ಇಲ್ಲಾ “ಸೇಂದಿ ಶರಾಫ್, ಬ್ರಾಂದಿ ವಿಸ್ಕಿ ಸ್ವರ್ಗ ಸಮಾನ, ತಂಪಿನ ಬಾನ! ಸುರ ಸೊಂಪಿನ ಪಾನ!” ಅಂತಲೋ ತಟ್ಟಾಡುತ್ತಾ ಮನೆಗೆ ಬರುವುದು ನಮ್ಮ ಮನೆಯ ನಿತ್ಯೋತ್ಸವ!ಆಗ ಶುರುವಾಗುತ್ತಿತ್ತು ಅಮ್ಮನ ವರಾತ.
ನಾವೀಗ ಈ ಮೊದಲೇ ನಾನು ಉಲ್ಲೇಖಿಸಿರುವಂತೆ ಆಣೇಗೆರೆಗೆ ಪಕ್ಕದಲ್ಲೇ ಶಂಕರಪ್ಪನ ತೋಟದಲ್ಲಿ ಬೀಡುಬಿಟ್ಟಿದ್ದೆವು. ನಾನು ಆಗಲೇ ಹೆಸರಿಸಿದ ಇಂಗ್ಲಿಷ್ ಪಾಂಡಿತ್ಯವನ್ನು ಪದ್ಯದ ಮೂಲಕ ಪ್ರಕಟಿಸಿ ಹೆಸರುವಾಸಿಯಾಗಿದ್ದ ಎ.ಜಿ. ಬಸವರಾಜು ನಮಗೆ ಮಂದೆಗೆ ಅವಕಾಶ ನೀಡಿದ್ದ ಶಂಕರಪ್ಪನ ಅಣ್ಣನ ಮಗನಾಗಿರಲಾಗಿ, ಪಕ್ಕದ ತೋಟವೇ ಅವರದ್ದಾಗಿತ್ತಾಗಿ ನಾವಿಬ್ಬರೂ ಆಪ್ತ ಗೆಳೆಯರಾದೆವು. ಅಲ್ಲದೆ ಲೋಕೇಶಪ್ಪ ಅನ್ನುವ ಮತೊಬ್ಬರೂ ಈಗ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ-ಆಣೆಗೆರೆಯಿಂದ ನಾನು ನೆನಪಿಟ್ಟುಕೊಳ್ಳಬಹುದಾದ ಸ್ನೇಹಿತ.ನಾನು ಐದನೆ ತರಗತಿ ಒಂದು ವರ್ಷ ಮಾತ್ರ ಇಲ್ಲಿ ಮುಗಿಸಿದೆ. ನಾನು ಇಂಗ್ಲಿಷ್ ಕಲಿಯಲು ಈ ಹಿಂದೆ ಗಾಬರಿಯಾಗಿತ್ತಾದರೂ ಎ.ಜಿ.ಬಸವರಾಜು ಸಹವಾಸದಿಂದ ನನಗೆ ಅಷ್ಟೇನು ಕಷ್ಟವಾಗಲಿಲ್ಲ. ಅಲ್ಲದೆ ಜಿಆರ್‌ಎಂ ಮಾಸ್ತರಪಾಠದ ವೈಖರಿಯೂ ಚೆನ್ನಾಗಿರಲಾಗಿ ಇಂಗ್ಲಿಷ್ ಕಲಿಕೆ ನಾವು ಕಲ್ಪಿಸಿಕಂಡಷ್ಟು ತ್ರಾಸದಾಯಕ ಅನ್ನಿಸಲೇ ಇಲ್ಲ.ಈ ರೀತಿ ನನ್ನ ಕಲಿಕೆ ಹಿಂದೆ ನನ್ನ ಅಪ್ಪನ ಪಾತ್ರವನ್ನೂ ಇಲ್ಲಿ ಉಲ್ಲೇಖಿಸುವುದು ಸೂಕ್ತ.
ಅಪ್ಪ ನಿರಕ್ಷರಕುಕ್ಷಿಯಾಗಿದ್ದನಾದರೂ ಒಂದೊಂದು ಬಾರಿ ಹಠಾತ್ತನೆ ನಮ್ಮ ಕ್ಲಾಸ್ ಮುಂದೆ ಪ್ರತ್ಯಕ್ಷವಾಗಿ “ಮೇಸ್ಟ್ರೇ ನಮ್ಮುಡಗ ಏನಾದ್ರೂ ಓದ್ತಾನೋ ಇಲ್ವೊ?” ಅಂತ ಕೇಳುತಿದ್ದುದು ಆ ಸಂದರ್ಭಕ್ಕೆ ಸರಿ ಕಾಣದಿದ್ದರೂ, ಎಲ್ಲೋ ಆಳದಲ್ಲಿಅವ್ಯಕ್ತ ಜವಾಬ್ದಾರಿ ಕೆಲಸ ಮಾಡಿರುತ್ತಿತ್ತು. ಅಪ್ಪನಿಗೆ ತನ್ನ ಮಕ್ಕಳು ವಿದ್ಯಾವಂತರಾಗಿ ಈ ಕುಲಕಸುಬಿನಿಂದ ಹೊರ ಬರಲಿ ಅನ್ನುವುದು ಮನಸ್ಸಿನಲ್ಲಿತ್ತು ಅನ್ನಿಸುತ್ತೆ.
ಅವಿದ್ಯಾವಂತರ ನೆನಪಿನ ಶಕ್ತಿ ಅದ್ಭುತವಾದ್ದು. ನಮಗೆಲ್ಲಾ ರಾಮಾಯಣ, ಮಹಾಭಾರತದ ಘಟನಾವಳಿಗಳು ನನ್ನ ಅಪ್ಪ ಮತ್ತು ತಾತಂದಿರ ಬಾಯಿಂದ ಕೇಳಿದ ನೆನಪು ಇನ್ನೂ ಮಾಸದಂತಿದೆ. ಅಪ್ಪ ಪೌರಾಣಿಕ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಹಾವ-ಭಾವ ಭರಿತವಾಗಿ ಹೇಳುತ್ತಿದ್ದುದರ ಜೊತೆಗೆ, ತಾನು ನಾಟಕಗಳನ್ನು ನೋಡಿ ನೋಡಿಯೇ ಕಂಠ ಪಾಠ ಮಾಡಿದ್ದ ದಪ್ಪಿನ ಹಾಡುಗಳನ್ನೂ ಈ ಪೌರಾಣಿಕ ಪ್ರಸಂಗಗಳಿಗೆ ತಳುಕು ಹಾಕಿ ಹೇಳುತಿದ್ದುದು ಮೈ ನವಿರೇಳುವಂತೆ ಮಾಡುತ್ತಿತ್ತು.
ನಾನುʼ ಅರವತ್ತರ ಹಿನ್ನೋಟʼ ದಲ್ಲಿ ದಾಖಲಿಸಲು ಬಯಸಿರುವುದು ನನ್ನ ವ್ಯಾಸಂಗ ಮತ್ತು ಉದ್ಯೋಗದ ವಿವರಗಳನ್ನು ಮಾತ್ರ. ನನ್ನ ಭಾನುವಾರದ ಮೊದಲ ಕಂತನ್ನು ಗಮನಿಸಿರುವ ಕೆಲವರು ʼ ಇದು ನಿನ್ನ ಜೀವನ ಕತೆಯಾಗಲಿ, ಅದು ಅಲೆಮಾರಿಯ ವಿಶಿಷ್ಟ ಜೀವನ ಕಥನವಾಗುತ್ತದೆʼ ಅಂತ ಸಲಹೆ ನೀಡಿದ್ದಿದೆ.ಆ ರೀತಿ ಮುಂದುವರೆದರೆ ಅದು ಘಟನಾವಳಿಗಳ ದಾಖಲೆಯಂತಾಗಿ, ಶುಷ್ಕವೆನಿಸಿಬಿಡಬಹುದು. ಆ ಕಟ್ಟುಪಾಡಿಗೆ ಒಳಗೊಳ್ಳದಂತೆ ಮುಂದುವರೆಯಲು ತೀರ್ಮಾನಿಸಿದ್ದಾಗಿದೆ. ಪ್ರಾಸಂಗಿಕವಾಗಿ ಈ ಬರವಣಿಗೆಯಲ್ಲಿ ಎತ್ತಿಕೊಂಡಂತೆ ಘಟನಾವಳಿಗಳು ಮೂಡಿ ಬರುವ ಮೂಲಕ ಒಂದು ಘನ ರೂಪು ಮೂಡಿ ಬರಬಹುದು. ಅಕ್ಷರ ಲೋಕಕ್ಕೆ ತೆರೆದುಕೊಳ್ಳದ ಅನಾಮಧೇಯ ಅಲೆಮಾರಿ ಜಾತಿಯವನೊಬ್ಬ ಅಕ್ಷರ ಜಗತ್ತಿಗೆ ಮುಖಾ-ಮುಖಿಯಾಗುವ ವಿಶಿಷ್ಟತೆಯನ್ನು ಇಲ್ಲಿ ಹಿಡಿದಿಡುವುದಷ್ಟೆ ನನ್ನ ಪ್ರಯತ್ನವಾಗಿದೆ. ಅದರ ಭಾಗವಾಗಿಯೇ ನಾನು ನನ್ನ ನೆನಪಿನ ಭಾಗವಾಗಿರುವ ಕೆಲವು ಪ್ರಸಂಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಓದು ಮತ್ತು ಉದ್ಯೋಗ ವಿವರಗಳನ್ನಷ್ಟೇ ಹೇಳ ಬೇಕೆಂದರೆ ಕುರುಡುಮಾರಿ ಈಚಲು, ದೇವಣ್ಣನ ಸೇಂದಿ ಅಂಗಡಿ ಮತ್ತು ಅಪ್ಪನ ಕುಡಿತ ಮತ್ತು ಪೌರಾಣಿಕ ಹಿನ್ನೆಲೆಯ ಅಗತ್ಯವೇನು ಅಂತ ಓದುಗರಲ್ಲಿ ಪ್ರಶ್ನೆ ಮೂಡಬಹುದು! ಆ ಪ್ರಶ್ನೆಗಳಿಗೆಲ್ಲಾ ಈ ಬರವಣೆಗೆಯ ಮುಂದಿನ ಕಂತುಗಳೆ ಉತ್ತರಿಸುತ್ತವೆ.ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು ಪ್ರಕೃತಿ ಅವಲಂಬಿತ ಜನಾಂಗಗಳು. ಈ ಜನಾಂಗಗಳು ಶಿಷ್ಟ ಸಮಾಜದ ರೀತಿ-ರಿವಾಜುಗಳಿಂದ ಬಹಳಷ್ಟು ದೂರವನ್ನೇ ಕಾಯ್ದುಕೊಂಡAತವು. ಪ್ರಾಕೃತಿಕ ಸಂಪನ್ಮೂಲಗಳು ನಾಗರೀಕತೆಯ ಕಾರಣದಿಂದ ಕ್ಷೀಣಿಸುತಿರಲಾಗಿ ತನ್ನ ಅಸ್ಮಿತೆಯನ್ನ ನಿಧಾನಕ್ಕೆ ಕಳೆದುಕೊಳ್ಳುತ್ತಲೆ ಸಮಾಜದ ಭಾಗವಾಗಿ ಮುಖ್ಯವಾಹಿನಿಗೆ ತವಕಿಸುತ್ತಿವೆ. ಆಸ್ತಿ ಪ್ರಜ್ಞೆ ಈ ಜನಾಂಗಗಳ ಮೂಲಭೂತ ಅಗತ್ಯವೇ ಆಗಿರಲಿಲ್ಲ.ಸೈಟು ಬೇಕಾಗಿರಲಿಲ್ಲ, ಮನೆ ಕಟ್ಟ ಬೇಕಿರಲಿಲ್ಲ, ಗುಡಿ ಗುಂಡಾರಗಳ ಅಗತ್ಯವೆ ಇರಲಿಲ್ಲ. ಆಲೆಮಾರಿಯೊಬ್ಬನಿಗೆ ʼನಿನ್ನ ವಿಳಾಸವೇನು? ನಿನ್ನ ಊರು ಯಾವುದು? ನಿನ್ನ ಜಾತಿ ಯಾವುದು? ನಿನ್ನ ಗೋತ್ರ ಯಾವುದು? ಅಂತ ಕೇಳುವುದೇ ಅತಿ ಗಾಬರಿ ಹುಟ್ಟಿಸುವಂತದ್ದು! ಇದಾವುದರ ಗೊಡವೆ ಅವನಿಗಿರಲಿಲ್ಲ. ಅವನು ತಾನು ಯಾವ ಸೀಮೆಯವನು ಅಂತ ಹೇಳಬಹುದು, ತಾನು ಯಾವ ಕುಲದವನು ಅಂತ ಹೇಳಬಹುದು ಅಷ್ಟೆ. ಅವನು ನಿಜಕ್ಕೂ ವಿಶ್ವ ಮಾನವ, ಕುವೆಂಪು ಹೇಳುವಂತೆ ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು ಅನ್ನುವುದು ಯಥಾರೀತಿ ಅನ್ವಯಿಸುವುದು ಈ ಅಲೆಮಾರಿಗೆ ಮಾತ್ರವೆ.
(ಮುಂದಿನ ‘ಕಿನ್ನರಿ’ಗೆ)