ದೊರೆಯ ಹೃದಯಹೀನತೆಯನ್ನು ಬಿಚ್ಚಿಡುವ ಎರಡು ಭೂತಕನ್ನಡಿಗಳು 

ಕೇಸರಿ ಹರವೂ ಅವರ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈ ಮೊದಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ, ತನ್ನ ಉಸ್ತುವಾರಿಯಲ್ಲಿಯೇ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿಸಲು ತೀರ್ಮಾನಿಸಿತ್ತು. ಆದರೆ, ಕೊನೇ ಕ್ಷಣದಲ್ಲಿ ಕೇಂದ್ರದ ವಾರ್ತಾ ಇಲಾಖೆಯಿಂದ ಬಂದ ‘ಸಂದೇಶ’ಕ್ಕೆ ತಲೆಬಾಗಿ ಪ್ರದರ್ಶನದಿಂದ ಹೊರಗಿಡಲಾಯಿತು.

ದೊರೆಯ ಹೃದಯಹೀನತೆಯನ್ನು ಬಿಚ್ಚಿಡುವ ಎರಡು ಭೂತಕನ್ನಡಿಗಳು 

ಬಯಾಸ್ಕೋಪ್

ಬಸವರಾಜು ಮೇಗಲಕೇರಿ




ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ, ನಿಧಾನವಾಗಿ ಕಾವು ಕೂಡ ಏರತೊಡಗಿದೆ. ಈ ಸಂದರ್ಭದಲ್ಲಿ ಬಿಡುಗಡೆಯಾದ ಎರಡು ಚಿತ್ರಗಳು ನಮ್ಮನ್ನಾಳುವ ದೊರೆಯ ಹೃದಯಹೀನತೆಯನ್ನು ಬಿಚ್ಚಿಡುತ್ತಿವೆ. ಹತ್ತು ಹಲವು ಪ್ರಶ್ನೆಗಳನ್ನು ಎತ್ತುತ್ತಿವೆ. ಜನತೆಯಲ್ಲಿ ಜಾಗೃತಿ ಮೂಡಿಸುತ್ತಿವೆ.


ಒಂದು, ಕಿಸಾನ್ ಸತ್ಯಾಗ್ರಹ- ಸಾಕ್ಷ್ಯಚಿತ್ರ; ಮತ್ತೊಂದು, ಫೋಟೋ- ಚಲನಚಿತ್ರ. ಎರಡೂ ಚಿತ್ರಗಳು ದಾಖಲಿಸಿರುವುದು ದೇಶ ದಾಟಿ ಬಂದ ಕೊರೋನ ಕಾಲದ ಮರೆಯಲಾರದ ಎರಡು ವಿದ್ಯಮಾನಗಳನ್ನು. ಒಂದು ದೇಶದ ಅನ್ನದಾತರ ಒಡಲಾಳದ ವೇದನೆಯನ್ನು ಹೊರಹಾಕಿದರೆ, ಮತ್ತೊಂದು ಬಡ ಕಾರ್ಮಿಕರ ಕಷ್ಟವನ್ನು ಕಂಡಿರಿಸುತ್ತದೆ.


ಕೇಸರಿ ಹರವೂ ಅವರ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈ ಮೊದಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ, ತನ್ನ ಉಸ್ತುವಾರಿಯಲ್ಲಿಯೇ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿಸಲು ತೀರ್ಮಾನಿಸಿತ್ತು. ಆದರೆ, ಕೊನೇ ಕ್ಷಣದಲ್ಲಿ ಕೇಂದ್ರದ ವಾರ್ತಾ ಇಲಾಖೆಯಿಂದ ಬಂದ ‘ಸಂದೇಶ’ಕ್ಕೆ ತಲೆಬಾಗಿ ಪ್ರದರ್ಶನದಿಂದ ಹೊರಗಿಡಲಾಯಿತು.


ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೊರಗಿಟ್ಟಿದ್ದಕ್ಕೆ ಕಾರಣವೂ ಇತ್ತು. ದಿಲ್ಲಿಯ ದೊರೆಯ ಹೃದಯಹೀನತೆಯನ್ನು ಈ ಸಾಕ್ಷ್ಯಚಿತ್ರ ತೆರೆದು ತೋರಿತ್ತು. ಅದನ್ನು ದೇಶದ ಜನತೆ ನೋಡಿದರೆ, ದೊರೆಯ ಐವತ್ತಾರಿಂಚಿನ ಎದೆ, ಆ ಎದೆಯಲ್ಲಿ ಹೃದಯವೇ ಇಲ್ಲವೆಂಬುದು ತಿಳಿಯುತ್ತಿತ್ತು. ಆ ಕಾರಣಕ್ಕಾಗಿ ‘ಕಿಸಾನ್ ಸತ್ಯಾಗ್ರಹ‘ವನ್ನು ಪ್ರದರ್ಶನದಿಂದ ಹೊರಗಿಡಲಾಗಿತ್ತು.


ಹೊರಗಿಟ್ಟದ್ದನ್ನು ಸಹ ಸಹಿಸಿಕೊಂಡ ಸಹೃದಯ ನಿರ್ದೇಶಕ ಕೇಸರಿ ಹರವೂ, ಒಂದಷ್ಟು ಗೆಳೆಯರೊಂದಿಗೆ ಸೇರಿ ಕಳೆದ ವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಚಿತ್ರ ತೋರಿಸುವ ವ್ಯವಸ್ಥೆ ಮಾಡಿದ್ದರು.


ಒಂದು ವರ್ಷ ಕಾಲ, ದೆಹಲಿಯ ಗಡಿಭಾಗದಲ್ಲಿ ಚಳಿ, ಮಳೆ, ಗಾಳಿಗೂ ಹೆದರದ ದೇಶದ ಅನ್ನದಾತರು, ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟಕ್ಕಿಳಿದಿದ್ದರು. ಹೋರಾಟಕ್ಕಿಳಿದ ಅನ್ನದಾತರಿಗೆ ಆಳುವ ಮೋದಿ ಸರ್ಕಾರ ಕೊಡಬಾರದ ಕಾಟ ಕೊಟ್ಟಿತ್ತು. ರಸ್ತೆಗೆ ಮುಳ್ಳಿನ ಬೇಲೆ ಕಟ್ಟಿತ್ತು. ತಡೆಗೋಡೆ ನಿರ್ಮಿಸಿತ್ತು. ಲಾಠಿ, ಜಲಫಿರಂಗಿ, ಅಶ್ರುವಾಯು, ರಬ್ಬರ್ ಬುಲೆಟ್ ಹಾರಿಸಿ ದಿಕ್ಕೆಡಿಸಿತ್ತು. ಸಾಲದು ಎಂದು, ಮೋದಿಯ ಸಾಕುನಾಯಿಗಳಾದ ಪತ್ರಕರ್ತರು, ರೈತರನ್ನು ಭಯೋತ್ಪಾದಕರು, ಉಗ್ರವಾದಿಗಳು, ನಕಲಿ ಹೋರಾಟಗಾರರು ಎಂದು ಬಿಂಬಿಸಿದ್ದರು. ಸರ್ಕಾರದ ರೈತಪರ ನೀತಿಗಳನ್ನು ಬೇಕೆಂದೇ ತಿರಸ್ಕರಿಸಲಾಗುತ್ತಿದೆ, ವಿರೋಧಿಸುವುದೇ ಅವರ ಉದ್ದೇಶವಾಗಿದೆ ಎನ್ನುವುದನ್ನು ಜನಮಾನಸದಲ್ಲಿ ಬಿತ್ತಿದ್ದರು. ಖುದ್ದು ಪ್ರಧಾನಿ ಮೋದಿಯೇ ಅಡಿಗಡಿಗೂ ರೈತರನ್ನು ಅವಮಾನಿಸಿದ್ದರು. ಅವರ ಮಂತ್ರಿಗಳು ರೈತ ಹೋರಾಟವನ್ನು ದಾರಿ ತಪ್ಪಿಸಲು ಶಕ್ತಿ ಮೀರಿ ಶ್ರಮಿಸಿದ್ದರು.


ಇಂತಹ ವ್ಯವಸ್ಥಿತ ಪ್ರೊಪಗ್ಯಾಂಡಾದಿಂದಾಗಿ ದೇಶದ ಜನಸಾಮಾನ್ಯರು, ರೈತರ ಬೇಡಿಕೆಗಳ ಒಳಹೊರಗನ್ನು ಅರಿಯದಾದರು. ಅಷ್ಟೇ ಅಲ್ಲ, ಅವರ ಮನಸ್ಸಿನಲ್ಲಿ ಅದು ನಿಜ ಹೋರಾಟವಲ್ಲ, ಸಮರ್ಥನೀಯವಲ್ಲ, ಅವು ಎಲ್ಲ ರೈತರ ಬೇಡಿಕೆಗಳಲ್ಲ ಎನ್ನುವ ಭಾವನೆ ಬೆಳೆಯಲು ಕಾರಣವಾಯಿತು. ಕೊನೆಗೆ, ಇವರೆಲ್ಲರ ನಿಸ್ಸೀಮ ನಿರ್ಲಕ್ಷ್ಯದ ಫಲವಾಗಿ 700ಕ್ಕೂ ಹೆಚ್ಚು ರೈತರು ಅಸುನೀಗುವಂತಾಯಿತು.


ಸ್ವಾತಂತ್ರ‍್ಯಾನಂತರ ನಡೆದ ಹೋರಾಟಗಳಲ್ಲಿಯೇ ಇದು ಚಾರಿತ್ರಿಕ ಆಂದೋಲನ. ಇದನ್ನು ಖುದ್ದು ಕಂಡು ದಾಖಲು ಮಾಡುವ ಸಲುವಾಗಿಯೇ, ಕನ್ನಡದ ಸೃಜನಶೀಲ ಚಿತ್ರನಿರ್ದೇಶಕ ಕೇಸರಿ ಹರವೂ ಮತ್ತು ಕ್ಯಾಮರಾಮನ್ ಪ್ರವೀಣ್ ಕುಮಾರ್ ದೂರದ ದೆಹಲಿಗೆ ತೆರಳಿದ್ದರು. ತಿಂಗಳಾನುಗಟ್ಟಲೆ ರೈತರೊಂದಿಗೇ ಬದುಕಿ, ಅವರ ಕಷ್ಟ ಕಾರ್ಪಣ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಅದನ್ನು ‘ಕಿಸಾನ್ ಸತ್ಯಾಗ್ರಹ’ ಎಂಬ ಸಾಕ್ಷ್ಯಚಿತ್ರ ಮಾಡಿದ್ದರು.


ಈ ಚಿತ್ರದಲ್ಲಿ ದೇಶದ ರೈತರನ್ನು ಪ್ರಧಾನಿ ಮೋದಿಯವರು ನಡೆಸಿಕೊಂಡ ಬಗೆಯನ್ನು ಬಿಚ್ಚಿಡಲಾಗಿದೆ. ಮೋದಿ ಸರ್ಕಾರದ ಆರ್ಥಿಕ ನೀತಿ, ಕೃಷಿ ಕಾನೂನುಗಳು ಹೇಗೆ ದೇಶದ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕುಳಗಳ ಕೈಗೊಪ್ಪಿಸುತ್ತದೆ ಹಾಗೂ ರೈತರನ್ನು ನಿರ್ಗತಿಕರನ್ನಾಗಿಸುತ್ತದೆ ಎಂಬ ಸತ್ಯವನ್ನು ನಿಚ್ಚಳವಾಗಿ ತೆರೆದು ತೋರಲಾಗಿದೆ. ಈ ಸಾಕ್ಷ್ಯಚಿತ್ರವನ್ನು ದೇಶದ ರೈತರು ಕಡ್ಡಾಯವಾಗಿ ನೋಡಲೇಬೇಕು. ಈ ಚುನಾವಣೆಯಲ್ಲಿ ಮೋದಿಯ ಮೋಸಕ್ಕೆ ತಕ್ಕ ಉತ್ತರ ನೀಡಲೇಬೇಕು.


ಇಂಥದ್ದೇ ಮತ್ತೊಂದು ಚಿತ್ರ ‘ಫೋಟೋ‘. ಇದು ಕೂಡ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಉತ್ಸವ್ ಗೋನವಾರ ಎಂಬ ಯುವ ಉತ್ಸಾಹಿ ನಿರ್ದೇಶಕರ ‘ಫೋಟೋ’ ಕೂಡ ಕೊರೋನ ಕಾಲದ ಬಡವರ ಸ್ಥಿತಿಯನ್ನು ಬಿಡಿಸಿಡುವ ಚಿತ್ರ. ಕೊರೋನ ಕಾಲದಲ್ಲಿ ಆಳುವ ದೊರೆಯ ದಡ್ಡ ನಡೆ, ನಿರ್ಧಾರಗಳಿಂದಾಗಿ ಬಡವರ ಬದುಕು ಮೂರಾಬಟ್ಟೆಯಾಗುವ ಕತೆಯನ್ನು ನೋಡುಗರ ಎದೆಗೆ ದಾಟಿಸುತ್ತದೆ, ಕಣ್ಣೀರಾಕಿಸುತ್ತದೆ.


ದೂರದ ರಾಯಚೂರಿನ ಗೋನವಾರದ ಬಡವ ದುಡಿದು ಮಡದಿ-ಮಕ್ಕಳನ್ನು ಸಾಕಲು, ಸಾಲ ತೀರಿಸಲು ಬೆಂಗಳೂರಿಗೆ ಬರುತ್ತಾನೆ. ದಿನಗೂಲಿಯ ಕಟ್ಟಡ ಕಾರ್ಮಿಕನಾಗುತ್ತಾನೆ. ಅಪ್ಪನನ್ನು ನೋಡಲು, ಅವನೊಂದಿಗೆ ವಿಧಾನಸೌಧದ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಲು ಊರಿನಿಂದ ಮಗನೂ ಬರುತ್ತಾನೆ.


ಆದರೆ ದೇಶಕ್ಕೆ ಕೊರೋನ ವಕ್ಕರಿಸುತ್ತದೆ. ಇದ್ದಕ್ಕಿದ್ದಂತೆ ಲಾಕ್ ಡೌನ್ ವಿಧಿಸಲಾಗುತ್ತದೆ. ಬಡ ಕಾರ್ಮಿಕನ ಬದುಕು ಅತಂತ್ರವಾಗುತ್ತದೆ. ತೆರೆಯ ಮೇಲೆ ಚಿತ್ರ ಚಲಿಸಲಾರಂಭಿಸುತ್ತಿದ್ದAತೆ, ಆ ಬಡವನ ಕಷ್ಟ-ನಷ್ಟ, ಅಭದ್ರತೆ-ಅಸಹಾಯಕತೆ, ಸಾವು-ನೋವುಗಳು ನಮ್ಮವೂ ಆಗುತ್ತವೆ. ನೀರವತೆಯ ಆ ಖಾಲಿ ರಸ್ತೆಗಳಲ್ಲಿ ಆತನೊಂದಿಗೆ ನಾವು ಕೂಡ ಹೆಜ್ಜೆ ಹಾಕುತ್ತಿರುವಂತೆ ಭಾಸವಾಗುತ್ತದೆ. ನಮ್ಮದೇ ಸಂಕಟಗಳನ್ನು ನಮಗೇ ತೆರೆದು ತೋರುತ್ತ, ನಾವು ಕಂಡ ಕರಾಳ ದಿನಗಳನ್ನು ಮತ್ತೆ ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತದೆ.


ರಾಯಚೂರಿನ ನೆಲದ ಭಾಷೆಯನ್ನು ಬಳಸಿಕೊಂಡಿರುವ ಈ ಚಿತ್ರದಲ್ಲಿ ಹೆಚ್ಚಿಗೆ ಮಾತಿಲ್ಲ, ಹಿನ್ನೆಲೆ ಸಂಗೀತವೂ ಇಲ್ಲ. ಆದರೆ ನಮ್ಮ ಬದುಕಿದೆ. ಆ ಬದುಕಿಗೆ ಚಪ್ಪಲಿಯ ಸಪ್ಪಳ, ಎಲೆಗಳ ತೊಯ್ದಾಟ , ಗಾಳಿಯ ಸದ್ದು ಕೂಡ ಜೊತೆಯಾಗುತ್ತದೆ. ಜಾಲಿ ಮರ, ಸುಡುವ ಬಿಸಿಲು, ಉದ್ದದ ರಸ್ತೆ, ಬಯಲು ಹೊಲಗಳು, ಉಲ್ಟಾ ಇಟ್ಟ ಸಿಲಿಂಡರ್, ವಿಧಾನಸೌಧ ಕೂಡ ಪಾತ್ರವಾಗುತ್ತವೆ. ದೊರೆಯ ಗಂಭೀರ ಅಪೀಲು, ಭಕ್ತರ ಪಾಲನೆ ವ್ಯವಸ್ಥೆಯ ಹುಳುಕನ್ನು ಹೊರಗೆಡವುತ್ತದೆ. ಅಪ್ಪನ ಹತಾಶ ಸ್ಥಿತಿ, ಕೈಗೂಡದ ಮಗನ ಆಸೆ, ಕಾಯುವ ತಾಯಿ, ಮಗನ ಸಾವು ತರುವ ನೋವು- ನೋಡುಗರ ಕಣ್ಣಾಲಿಗಳಲ್ಲಿ ನೀರಾಡಿಸುತ್ತದೆ.


ಪ್ರಧಾನಿ ಮೋದಿಯವರಿಗೆ ಮನೆಯಿಲ್ಲ, ಮಕ್ಕಳಿಲ್ಲ. ಹಾಗಾಗಿ ಈ ನೋವು, ಸಂಕಟಗಳು ಅವರಿಗೆ ಅರ್ಥವಾಗುವುದಿಲ್ಲ. ಅರ್ಥವಾಗಿದ್ದರೆ, ಚುನಾವಣಾ ಬಾಂಡ್ ಹೆಸರಿನಲ್ಲಿ ಇಷ್ಟೊಂದು ಅವ್ಯವಹಾರ ಮಾಡಿಯೂ ಸಭ್ಯಸ್ಥರ ಸೋಗು ಹಾಕುತ್ತಿರಲಿಲ್ಲ. ಸುಳ್ಳನ್ನು ಎದೆಯುಬ್ಬಿಸಿ ಹೇಳಿದರೂ ಕೇಳಿಸಿಕೊಂಡ ಜನ ಸುಮ್ಮನಿರುತ್ತಿರಲಿಲ್ಲ.


ದೇಶದ ಜನ ಸುಮ್ಮನಿರುವುದು ಅವರಿಗೆ ಕುಮ್ಮಕ್ಕು ಕೊಟ್ಟಂತಾಗಿದೆ. ಅವರು ಮಾಡುವುದೇ ಸರಿ ಎನಿಸಿದೆ. ಆ ಕಾರಣದಿಂದಾಗಿಯೇ ಹಿಂದುತ್ವ ಅಜೆಂಡಾಗಳನ್ನು ತೆರೆಯ ಮೇಲೆ ತಂದು ಮೆರೆಸುವ ಪ್ರೊಪಗ್ಯಾಂಡಾ ಚಿತ್ರಗಳನ್ನು ಮಾಡಿ, ಅದೇ ಸತ್ಯವೆಂದು ಸಾರಲಾಗುತ್ತಿದೆ. ಅದಕ್ಕೆ ಗೋದಿ ಮೀಡಿಯಾಗಳಿಂದ ಇನ್ನಿಲ್ಲದ ಪ್ರಚಾರ ಕೊಡಲಾಗುತ್ತಿದೆ. ಈಗಾಗಲೇ ದಿ ಕಶ್ಮೀರ್ ಫೈಲ್ಸ್, ಹರ್ ಹರ್ ಮಹದೇವ್, ಹಿಂದುತ್ವ, ದಿ ಕೇರಳ ಸ್ಟೋರಿಗಳನ್ನು ಮಾಡಿ ಜನರ ಮೇಲೆ ಪ್ರಯೋಗಿಸಿದ್ದಾಗಿದೆ. ಅವು ಬೀರಿದ ಪರಿಣಾಮಗಳನ್ನು ನೋಡಿದ್ದಾಗಿದೆ. ಈಗ ಮತ್ತೆ ಬಿಜೆಪಿಯ ಅಪಾರ ಹಣ ಮತ್ತು ಅಧಿಕಾರದ ನೆರವಿನಿಂದ ತಯಾರಾಗಿ ದೇಶದ ಜನರ ಮೇಲೆ ಅಪ್ಪಳಿಸಲು ಇನ್ನೂ ಕೆಲವು ಅಂಥದ್ದೇ ಸಿನೆಮಾಗಳು- ರಜಾಕಾರ್, ಜೆಎನ್‌ಯು, ಸಾವರ್ಕರ್, ಎಮರ್ಜೆನ್ಸಿ ಸಿದ್ಧವಾಗಿ ನಿಂತಿವೆ.


ಹೀಗಾಗಿ, ಇವರಿಗೆ ಸೆಡ್ಡು ಹೊಡೆಯಲು ಬಡವರ ಬದುಕಿನ ಕತೆ ಹೇಳುವ, ಬೇಸಾಯಗಾರರ ಬದುಕನ್ನು ಬಿಡಿಸಿಡುವ, ಮಾನವೀಯತೆಯನ್ನು ಸಾರುವ, ತಮ್ಮದೇ ಜೇಬಿನಿಂದ ಹಣ ಹಾಕಿ ನಿರ್ಮಿಸಿ ದೇಶದ ಜನರ ಒಳಿತಿಗಾಗಿ ಹಂಬಲಿಸುವ ‘ಕಿಸಾನ್ ಸತ್ಯಾಗ್ರಹ’ ಮತ್ತು ‘ಫೋಟೋ’ ಚಿತ್ರಗಳನ್ನು ಹೆಚ್ಚೆಚ್ಚು ಜನ ನೋಡುವಂತೆ ಮಾಡಬೇಕಿದೆ. ಮೋದಿಯ ಮೋಸಕ್ಕೆ ಮತ್ತೆ ಬಲಿಯಾಗದಂತೆ ನೋಡಿಕೊಳ್ಳುವುದು, ಎಲ್ಲ ಪ್ರಜ್ಞಾವಂತರ ಕೆಲಸವಾಗಬೇಕಿದೆ.