ಅನುಭಾವ  -ಸರಳವಾಗಿರುವ ಜೀವನವನ್ನು ಜಟಿಲ ಮಾಡಿಕೊಳ್ಳುತ್ತಿದ್ದೇವೆ ಏಕೆ?     -ಒಡನಾಡಿ ಸ್ಟ್ಯಾನ್ಲಿ

ಅನುಭಾವ  ಸರಳವಾಗಿರುವ ಜೀವನವನ್ನು ಜಟಿಲ ಮಾಡಿಕೊಳ್ಳುತ್ತಿದ್ದೇವೆ ಏಕೆ?    -ಒಡನಾಡಿ ಸ್ಟ್ಯಾನ್ಲಿ

ಅನುಭಾವ   -ಸರಳವಾಗಿರುವ ಜೀವನವನ್ನು  ಜಟಿಲ ಮಾಡಿಕೊಳ್ಳುತ್ತಿದ್ದೇವೆ ಏಕೆ?      -ಒಡನಾಡಿ ಸ್ಟ್ಯಾನ್ಲಿ

ಅನುಭಾವ

 ಸರಳವಾಗಿರುವ ಜೀವನವನ್ನು

ಜಟಿಲ ಮಾಡಿಕೊಳ್ಳುತ್ತಿದ್ದೇವೆ ಏಕೆ?

                                      -ಒಡನಾಡಿ ಸ್ಟ್ಯಾನ್ಲಿ

 

ಶ್ರಮಿಕ ವರ್ಗದವರಿಗಾವ ಧರ್ಮ?  ನಿಜಾರ್ಥದಲ್ಲಿ ಜಗವನ್ನು ಮುನ್ನಡೆಸುತ್ತಿರುವ ಕಾಯಕ ಧರ್ಮವಲ್ಲವೇ ನಿಜವಾದ ಶ್ರೇಷ್ಠ ಧರ್ಮ? ಉಳಿದೆಲ್ಲಾ ಧರ್ಮಗಳು ಹಸಿದವರಿಗೆ ಉಪದೇಶವನ್ನಷ್ಟೇ ಮಾಡುವವು. ಪಾಪಗಳನ್ನು ಮರೆಯಲು, ಅಪೇಕ್ಷಿಸಿದುದ್ದನ್ನು ಸಿದ್ಧಿಸಿಕೊಳ್ಳಲು ಪೂಜೆ- ಪುರಸ್ಕಾರಗಳನ್ನು ಮಾಡಿಸುತ್ತವೆ. ಆದರೆ ಕಾಯಕ ಧರ್ಮದಲ್ಲಿ ತೊಡಗಿದವರು ತನ್ನ ವೃತ್ತಿಯನ್ನು ಘನತೆಯಿಂದ ಮಾಡುತ್ತಾ  ತಮಗಷ್ಟೇ ಅಲ್ಲದೆ ಇತರರ ಜೀವನವನ್ನೂ ಕಟ್ಟಿ  ಕೊಡುತ್ತಾರೆ. ಮೆದುಳನ್ನು ತರ್ಕಬದ್ಧವಾದ ಚಿಂತನೆಗೆ ಹಚ್ಚಲು ಶಕ್ತಿ ನೀಡಿ, ದುಡಿದು ಬಳಲಿದ ದೇಹವನ್ನು ಚಿಂತೆಯಿಲ್ಲದ ನಿದ್ರೆಗೆ ಒಪ್ಪಿಸುತ್ತಾರೆ. ಹಾಗಾಗಿಯೇ ಕಾಯಕವೇ ಕೈಲಾಸವೆಂದರು ಅಣ್ಣ ಬಸವಣ್ಣ. ಹಸಿದವರಿಗೆ ಉಪದೇಶ ಸಲ್ಲದು ಎಂದ ಬುದ್ಧ ಗುರು! ಕಾಯಕವನ್ನು ನಂಬಿದವನಿಗೆ ಮಡಿಯಿಲ್ಲ. ಹೊಲೆಯಿಲ್ಲ. ಜಾತಿ, ಪಂಥಗಳ ಬೇಧವಿಲ್ಲ. ಕಾಯಕದಲ್ಲಿ ಸಂಪೂರ್ಣ ಮಗ್ನರಾದವರಿಗೆ ವರ್ಗ ಬೇಧಗಳು ಕಾಣವು. ಅವರಿಗೆ ಅದೊಂದು ಧ್ಯಾನ! ಹಾಗಾಗಿ ಕಾಯಕದಲ್ಲಿ ತೊಡಗಿದವ ಕರ್ಮಯೋಗಿ ಅನಿಸಿಕೊಳ್ಳುತ್ತಾನೆ. ಆತ ಇತರ ಯೋಗಿಗಳೊಂದಿಗೆ ಒಳಗೊಳ್ಳುತ್ತಾ, ಅವರೊಳಗೆ ತನ್ನನ್ನೂ, ತಾನು ಆರಾಧಿಸುವ ದೇವರನ್ನೂ ಕಾಣುತ್ತಾ, ಅವರು ನೀಡುವ ಕಾಯಕ ಫಲವನ್ನು ಪ್ರಸಾದವಾಗಿ ಸ್ವೀಕರಿಸುತ್ತಾ ಕಣ್ಣಿಗೊತ್ತಿಕೊಂಡು ಜೀವನ ಸಾಗಿಸುತ್ತಾನೆ. 

ನಾವು ಉಣ್ಣುವ ಅನ್ನದ ಮೂಲ ಹುಡುಕಬಲ್ಲೆವೇ?  ಸಾಧ್ಯವಿಲ್ಲದ ಮಾತು. ಅದು ಯಾರು ಬೆಳೆದಿದ್ದರೂ ಉಳುವ ಯೋಗಿಗಳ ಧ್ಯಾನದ, ಬೆವರಿನ ಫಲವದು.  ಹಾಗಾಗಿ ಅದು ಮುಲಾಜಿಲ್ಲದೆ ಗರ್ಭಗುಡಿ ಸೇರಿ ಪ್ರಸಾದವಾಗುತ್ತದೆ. ನಮ್ಮ ಪ್ರತಿಷ್ಠೆ ತೋರಲು ಮೃಷ್ಟಾನ್ನವಾಗುತ್ತದೆ .  ಕೋಟ್ಯಂತರ ಜೀವಿಗಳ ಜೀವರಕ್ಷಕವಾಗುತ್ತದೆ. ಹಸಿದು, ಬಳಲಿ ಹೋಟೆಲಿಗೆ ಹೋದಾಗ ನಾವು ಯಾರು ಭೋಜನ ಸಿದ್ಧಪಡಿಸಿದ್ದರು ಎಂಬುದನ್ನರಿತು ಉಣ್ಣುತ್ತೇವೆಯೇ? ಆಧುನಿಕ ಖಾನಾವಳಿಗಳ ಒಳಗಂತೂ ಪ್ರಪಂಚದ ಸರ್ವ ಸದಸ್ಯರೂ ಇರುತ್ತಾರೆ. ಒಬ್ಬ ಚೀನಾದವನಾದರೆ ಮತ್ತೋರ್ವ ಥಾಯ್ಲೆಂಡ್ ನವನು. ಮಗದೊಬ್ಬ ಮುಸಲ್ಮಾನ, ಬ್ರಾಹ್ಮಣ, ದಲಿತ, ಶೂದ್ರ ! ಇವರು ಬೆವರು ಸುರಿಸಿ, ಪ್ರೀತಿಯಿಂದ ತಯಾರಿಸಿದ, ಚಾಪಲ್ಯ ನೀಗಿಸುವ ಭಕ್ಷ್ಯಗಳು ನಮಗೆ ಬೇಕು. ಆದರೆ ಅವರು ಮಾತ್ರ ಬೇಡ ಎನ್ನುವವವರ ಮಾತಿಗೆ ತರ್ಕವಿದೆಯೇ?

ಇದು ಕೇವಲ ಅನ್ನದ ಋಣ ಮಾತ್ರವಲ್ಲ. ನಮ್ಮ ಮನೆಯ ಹುಟ್ಟು-ಸಾವುಗಳಲ್ಲಿ, ಸಂಭ್ರಮಾಚರಣೆಗಳಲ್ಲಿ, ನಿತ್ಯದ ಸುಖಕರ, ನಿರಾಯಾಸದ ಜೀವನ ಸೃಷ್ಟಿಸುವಲ್ಲಿ ನೇರವಾಗಿ ಪಾತ್ರವಹಿಸುವ ನೂರಾರು ಜೀವಗಳಿಗೆ ನಾವು ಸಲ್ಲಿಸಬೇಕಾಗಿರುವ ಋಣ ಸಂದಾಯ! ನಮ್ಮ ಸುತ್ತ ಈ ವಿಭಿನ್ನ ಕಾಯಕ ಜೀವಿಗಳು ಇರದಿದ್ದಲ್ಲಿ  ಸುಗಮವಾಗಿರುತಿತ್ತೆ ನಮ್ಮ ಪಯಣ?

ಮೈಸೂರಿಗೆ ಬಂದು ಮೂರು ದಶಕಗಳ ಮೇಲಾಯಿತು.

ಏನೂ ಅಲ್ಲದ ನಾನು ಊರಿಗೆ ಬರುವವನಿದ್ದೇನೆ ಅಂದರೆ ಇಂದಿಗೂ ಪಕ್ಕಾ ಬ್ರಾಹ್ಮಣ,  ಮುಸಲ್ಮಾನ,  ಚಮಗಾರ ಜನಾಂಗದ ನನ್ನ ಸ್ನೇಹಿತರು ಸಂಭ್ರಮದಿಂದ ಕಾಯುತ್ತಾರೆ.  ಬರಮಾಡಿಕೊಳ್ಳುತ್ತಾರೆ. ನಾನು ಅವರ ಜೀವನದಲ್ಲಿಲ್ಲ ನಿಜ. ಆದರೆ ಅವರು ತೋರುವ  ಒಂದಿಷ್ಟೂ ಮಾಸದ ಸ್ನೇಹಕ್ಕೆ ಬೆಲೆ ಕಟ್ಟಲಾದೀತೆ? ಒಂದು ಕಾಲದಲ್ಲಿ ನನ್ನೆಲ್ಲಾ ಕಷ್ಟ, ಇಷ್ಟಗಳಿಗೆ ಒದಗಿಬಂದ ಫಲಾಪೇಕ್ಷೆ ಇಲ್ಲದ ಗೆಳೆತನದವದು. ಮಡಿ, ಮೈಲಿಗೆ ಮೈಗೂಡಿಸಿಕೊಂಡಿರುವ ವೆಂಕಟಿ, ವಿಶ್ವೇಶ್ವರ ಹೆಗಡೆಯರ  ಅಡುಗೆ ಮನೆ ನುಗ್ಗಿ ತಿಂಡಿ ತಿಂದು, ಚಹಾ ಕುಡಿದು ಬರುವ ಮಟ್ಟದ ಸಲುಗೆ ಒಂದಿಷ್ಟೂ ಕಡಿಮೆಯಾಗಿಲ್ಲ. ಸದಾ ಹಿಜಾಬಿನಲ್ಲಿರುವ ನಾಸೀರನ ಹೆಂಡತಿ  ತನ್ನ ಅಣ್ಣನೇ ಬಂದಷ್ಟು ಸಂಭ್ರಮಿಸುತ್ತಾ, ಅಣ್ಣಾ.. ಯಾವಾಗ ಬಂದ್ರೀ? ಎನ್ನುತ್ತಾ ಒಳ ಕರೆದುಕೊಂಡು, ಅತ್ಯಂತ ಕಾಳಜಿಯಿಂದ, ತನ್ನೆಲ್ಲಾ ಪ್ರೀತಿಯಿಂದ ನನಗಿಷ್ಟವಾದ ಬಿರಿಯಾನಿ ಮಾಡಿ ಹೊಟ್ಟೆ ಬಿರಿಯುವಷ್ಟು ತಿನ್ನುವಂತೆ ಒತ್ತಾಯಿಸಿ ಬಡಿಸುತ್ತಾಳೆ. ನಾಸಿರ್ " ನಿನಗೊಂದು ವಿಷಯ ಗೊತ್ತಾ ಮಾರಾಯ? ಇವಳು ನಮ್ಮವರು ಬಂದರೂ ಹೊರಗೆ ಬರಲ್ಲ. ಮುಖ ತೋರಿಸುವ ಅಭ್ಯಾಸ ಇಟ್ಟುಕೊಂಡಿಲ್ಲ. ಅದೇನೋ ನೀನು ಬಂದರೆ  ಬಹಳ ಖುಷಿಪಡುತ್ತಾಳೆ" ಎನ್ನುತ್ತಾ ತನ್ನ ಸ್ನೇಹವನ್ನು ಹೆಮ್ಮೆಯಿಂದ ಸಂಭ್ರಮಿಸುತ್ತಾನೆ. ಸುತ್ತಮುತ್ತಲಿನ ಅನೇಕ ಬ್ರಾಹ್ಮಣರಿಗೂ ನಾಸೀರನೇ ಪ್ರಧಾನ ಟೇಲರ್.   ಇನ್ನೊಂದೆಡೆ ಉದಯ ಜೋಗಳೇಕರ್! ಕುಲ ಕಸುಬಾದ ಚಪ್ಪಲಿ, ಶೂ ಹೊಲೆದು ಮಾರುವುದನ್ನು ಗೌರವ, ಘನತೆಯೊಡನೆ ಇಂದಿಗೂ ಮಾಡುವವ.  ಮಕ್ಕಳನ್ನು ಮುತ್ತಿನಂತೆ ಸಾಕಿದವ. ಒಬ್ಬ ಮಗ ಸಾಗರ ತಳದ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾನೆ. "ಬಾರೋ ದೋಸ್ತಾ. ಎಂದು ಬಂದಿ? ಅಗದಿ ಚಂದ ಕಾಣ್ತೀ ಮಾರಾಯ" ಎನ್ನುತ್ತಾ ಮೈಕೈಯೆಲ್ಲಾ ತಡಕಾಡಿ " ಇದ್ಯಾಕೋ ಶೂ ಪಾಲೀಶೇ ಮಾಡಿಲ್ಲಾ? ತಾ ಇಲ್ಲಿ ಪಾಲೀಶ್ ಮಾಡಿ ಕೊಡ್ತೀನಿ ಅಂದಾಗ ನಾನು ಮುಜುಗರದಿಂದ ಬೆವರಿದ್ದೆ. ಹೇ ಬಿಡೋ. ಸ್ವಲ್ಪ ಧೂಳು ಹತ್ತಿದೆ ಅಷ್ಟೇ. ಮನೆಗೆ ಹೋಗಿ ಪಾಲಿಶ್ ಮಾಡ್ತೀನಿ ಅಂದೆ. ಅವ " ಲೇ ಮಾರಾಯ, ಅದ್ಯಾರ್ಯಾರದೋ ಶೂ ಪಾಲೀಶ್ ಮಾಡಿದ್ದೀನಿ. ದೋಸ್ತಂದು ಮಾಡ್ಲಿಕ್ಕೆ ಏನೋ?" ಅನ್ನುತ್ತಾ ಏನು ಹೇಳಿದರೂ ಕೇಳದೆ ಶೂ ಬಿಚ್ಚಿಸಿ, ಪ್ರೀತಿಯಿಂದ ಫಳ ಫಳ ಹೊಳೆಯುವಂತೆ ಪಾಲಿಷ್ ಮಾಡಿದ್ದಾಗ ಶಾಲಾ ದಿನಗಳಲ್ಲಿ ನನ್ನ ಶೂ ಪಾಲಿಷ್ ಮಾಡಿ ಸಂತೋಷ ಪಡುತ್ತಿದ್ದ ನನ್ನಪ್ಪ ನೆನಪಾಗಿದ್ದ! ಇವೆಲ್ಲವೂ ನನ್ನ ಮೇಲಿರುವ ಗೆಳೆತನದ ಋಣಗಳೇ ಅಲ್ವಾ?

ಏನಾಗಿದೆ ನಮಗೆ? ಸರಳವಾಗಿರುವ ಜೀವನವನ್ನು ಜಟಿಲ ಮಾಡಿಕೊಳ್ಳುತ್ತಿದ್ದೇವೆ.  ಗುರಿಯಿಟ್ಟು  ಹೃದಯಗಳನ್ನೇ ತಿವಿಯುತ್ತಿದ್ದೇವೆ.  ರಷ್ಯಾದ ಅಧ್ಯಕ್ಷ ಉಕ್ರೇನ್ ಮೇಲೆ ದಾಳಿ ನಡೆಸಿದಾಗ, ಉಕ್ರೇನ್ ಪ್ರತಿದಾಳಿ ಮಾಡಿದಾಗ ಆದ ಸಾವುನೋವಿಗಳಿಂದ ಮನಸ್ಸು ನೊಂದುಕೊಂಡಿತ್ತು. ಆದರೆ ಇಂದು ದೇವರ ಸಮಕ್ಷಮ ಒಬ್ಬ ಬಡವನ ಬದುಕನ್ನು ನೆಲಕ್ಕಪ್ಪಳಿಸಿದಾಗ ನನ್ನೆದೆ ವಿಲವಿಲನೆ ಒದ್ದಾಡಿಬಿಟ್ಟಿತು. ಈ ರೀತಿಯೂ  ಧರ್ಮ ರಕ್ಷಣೆ ಮಾಡುವುದುಂಟೇ? ರಸ್ತೆಯುದ್ದಕ್ಕೂ ಬಿದ್ದಿದ್ದವಲ್ಲಾ ಭಾರತಮಾತೆಯ ಹೃದಯದ ತುಣುಕುಗಳು?!

ಇನ್ನೆರಡು ವಿಚಾರಗಳು. ನನ್ನ ಅನುಭವಕ್ಕೆ ಬಂದ, ನಾನೂ ಸಾಕ್ಷಿಯಾದ ಘಟನೆ. ಒಂದು ಪಾಳು ಬಿದ್ದಿದ್ದ ಐತಿಹಾಸಿಕ ವಿಷ್ಣು ದೇವಾಲಯ. ಅದರ ಅರ್ಧಕ್ಕಿಂತಲೂ ಹೆಚ್ಚು ಭಾಗ ಭೂಮಿಯಲ್ಲಿ ಹುದುಗಿ ಹೋಗಿತ್ತು. ಗರ್ಭಗುಡಿಯಲ್ಲಿರಬೇಕಾದ ವಿಷ್ಣುವಿನ ವಿಗ್ರಹ ಒಂದು ಕೈಯನ್ನೂ, ಇನ್ನೊಂದು ಕೈಯಲ್ಲಿದ್ದ ವಿಗ್ರಹವನ್ನೂ ಕಳೆದುಕೊಂಡು ಮೂಲೆಯೊಂದರಲ್ಲಿ ಒರಗಿತ್ತು. ನನಗೆ ಹತ್ತಿರದಿಂದ ಪರಿಚಯವಿರುವ ವ್ಯಕ್ತಿಯೊಬ್ಬರು ಆ ದೇವಸ್ಥಾನವನ್ನು ಮರು ಸಂಶೋಧನೆ ಮಾಡಿ, ಮುರಿದಿದ್ದ ಕೈಯನ್ನೂ, ಗದೆಯನ್ನೂ ಹುಡುಕಿ ತೆಗೆದು, ಮೂರ್ತಿಗೆ ಚಿಕಿತ್ಸೆ ನಡೆಸಿ, ಮೂಲಸ್ವರೂಪಕ್ಕೆ ತಂದು, ಮತ್ತೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ, ಸ್ವತಃ ಸಂಸ್ಕೃತದಲ್ಲಿ ಪೂಜೆ ಆರಂಭಿಸಿದರು. ನಾನು ಕೇಳಿದ್ದೆ.  ಭಂಗವಾದ ವಿಗ್ರಹವನ್ನು ಪೂಜಿಸಬಾರದಲ್ವಾ? ಅಂತ. ಅವರು ಮರು ಪ್ರಶ್ನೆ ಕೇಳಿದ್ದರು" ನಮ್ಮ ಮನೆಯಲ್ಲಿ ಯಾರಾದರೂ ಕಾಲು, ಕೈ ಮುರಿದುಕೊಂಡರೆ ಚಿಕಿತ್ಸೆ ನೀಡಿ ಸುಸ್ಥಿತಿಗೆ ತರುತ್ತೇವೆಯೋ? ಇಲ್ಲಾ ಮೂಲೆಗುಂಪು ಮಾಡುತ್ತವೆಯೋ? ಈಗ ಸಾವಿರಾರು ಮಂದಿ ಆ ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚನೆ ಮಾಡುತ್ತಿದ್ದರೂ ಆ ಅರ್ಚಕರು ಅಲ್ಲಿಲ್ಲ. ಅವರನ್ನು ಅಲ್ಲಿಂದ ಅಟ್ಟಲಾಗಿದೆ. ಏಕೆಂದರೆ ಆ ವ್ಯಕ್ತಿ  ಮೂಲತಃ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ, ಜ್ಞಾನವಿರುವ, ಪ್ರಾಚ್ಯ ಶಾಸ್ತ್ರವನ್ನು ಧ್ಯಾನಾವಸ್ಥೆಯಲ್ಲಿ ಅಭ್ಯಸಿಸುತ್ತಿದ್ದ ಉತ್ತರ ಕರ್ನಾಟಕದ  ಒಬ್ಬ ಮುಸಲ್ಮಾನರಾಗಿದ್ದರು. ಸಂಶೋಧನೆ, ದೇವಸ್ಥಾನದ ಜೀರ್ಣೋದ್ಧಾರದಂಥಹ ಸತ್ಕಾರಣಕ್ಕಾಗಿಯೇ ಆರ್ಯ ಸಮಾಜದಲ್ಲಿ  ದೀಕ್ಷೆ ಪಡೆದು, ಆರ್ಯರಾಗಿ, ಅರ್ಚಕರಾಗಿದ್ದರು!  ಅನೇಕ ದೇವಸ್ಥಾನಗಳನ್ನು, ಐತಿಹಾಸಿಕ ಶಾಸನಗಳನ್ನು ಸಂರಕ್ಷಿಸಿದ ಇತಿಹಾಸಕಾರ ನಾಗಮಂಗಲದ ಮಹಮ್ಮದ್ ಖಲೀಮುಲ್ಲಾರವರು ಈ ಸಾಲಿನಲ್ಲಿ ಬರುತ್ತಾರೆ. ಅನೇಕ ಸಂಘಟನೆಗಳು ಅವರನ್ನು ಗುರುತಿಸಿ ಸನ್ಮಾನಿಸಿವೆ. ಆದರೆ ಸಮಾರಂಭಗಳಲ್ಲಿ ಅವರನ್ನು ಹೊಗಳುವ ಭರದಲ್ಲಿ  " ಇವೆಲ್ಲವನ್ನು  ಮಾಡಿದವರು ಒಬ್ಬ ಮುಸಲ್ಮಾನ" ಎಂದಾಗ ಹೊನ್ನ ಚೂರಿಯಲ್ಲಿ ಎದೆಯನ್ನು ತಿವಿದಂತಾಗಿದೆ ಸಾಹೇಬರಿಗೆ! ನನ್ನನ್ನು ಭಾರತೀಯನಾಗಿ, ಇತಿಹಾಸಕಾರನನ್ನಾಗಿ ನೋಡಬಾರದೆ? ಎಂಬುದು ಅವರ ನೋವು.

ಮತ್ತೊಂದು ಮಾತು. ಪರ ಧರ್ಮೀಯರು ಕೆತ್ತಿದ  ವಿಗ್ರಹ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂಬುದು.   ಶಿಲೆಯನ್ನು ಅಪ್ಪಿ, ಮುದ್ದಾಡಿ ದೇವರನ್ನು ಸೃಷ್ಟಿಸುವ  ಶಿಲ್ಪಿಯನ್ನೋ, ಆಚಾರಿಯನ್ನೋ ಗರ್ಭಗುಡಿಯೊಳಗೆ ಬಿಟ್ಟುಕೊಂಡಿರುವ ಉದಾಹರಣೆ ಸಿಗಲಿಕ್ಕಿಲ್ಲ. ವಿಗ್ರಹಾರಾಧನೆಯನ್ನೇ ಒಪ್ಪಿಕೊಳ್ಳದ ಮುಸ್ಲಿಮನೊಬ್ಬ ಐದು ಬಾರಿ ಅಲ್ಲಾಹನನ್ನು ನೆನಪಿಸಿಕೊಂಡು, ನಮಾಜ್ ಮಾಡಿ ಬಂದು, ಶಿವನೊಪ್ಪುವಂತೆ,  ಭಕ್ತರು ಸಾಷ್ಟಾಂಗವೆರಗಿ ನಮಸ್ಕರಿಸಲು ಯೋಗ್ಯವಾದ ದೇವರ ವಿಗ್ರಹವನ್ನು ಹಗಲಿರುಳೂ ಕಡೆದು ಜೀವ ನೀಡುತ್ತಾನಲ್ಲಾ?  ಇದು ಸಾಂಸ್ಥಿಕ ಧರ್ಮಗಳನ್ನು ನಂಬಿದವರಿಗೆ ಸಾಧ್ಯವಿಲ್ಲ. ಕೇವಲ ಕಾಯಕ ಧರ್ಮೀಯರಿಗೆ ಮಾತ್ರ ಸಾಧ್ಯ. ಇಲ್ಲಿ ಹಣತೆ ಒಬ್ಬನದು. ಹತ್ತಿ ಇನ್ನೊಬ್ಬನದು. ತೈಲ ಗಾಣಿಗನದು. ಮತ್ಯಾರೋ ಒಬ್ಬನು ಹಚ್ಚುತ್ತಾನೆ. ಆದರೆ ಬೆಳಕು?

                 ---- ಒಡನಾಡಿ ಸ್ಟ್ಯಾನ್ಲಿ