ಸ್ಥಳೀಯ ಸಂಸ್ಥೆಗಳ ಚುನಾವಣೆ: ಬೀಸುವ ಕತ್ತಿ ಪಾರಾಗಲು ಸಿಎಂ ಗೇಮ್ ಪ್ಲಾನ್ ! ಆರ್ ಹೆಚ್ ಎನ್
ಸ್ಥಳೀಯ ಸಂಸ್ಥೆಗಳ ಚುನಾವಣೆ: ಬೀಸುವ ಕತ್ತಿ ಪಾರಾಗಲು ಸಿಎಂ ಗೇಮ್ ಪ್ಲಾನ್ ! ಆರ್ ಹೆಚ್ ಎನ್
ಸ್ಥಳೀಯ ಸಂಸ್ಥೆಗಳ ಚುನಾವಣೆ: ಬೀಸುವ ಕತ್ತಿ ಪಾರಾಗಲು ಸಿಎಂ ಗೇಮ್ ಪ್ಲಾನ್ !
ಆರ್ ಹೆಚ್ ಎನ್
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳು ಕುತೂಹಲದ ಘಟ್ಟ ತಲುಪಿವೆ.ಸಂಪುಟ ವಿಸ್ತರಣೆ ಕುರಿತಂತೆ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ನಾಯಕತ್ವ ಬದಲಾವಣೆ ಪ್ರಸ್ತಾಪವೂ ಕೇಳಿಬಂದಿದ್ದು ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಬೊಮ್ಮಾಯಿ ಚಾಣಾಕ್ಷ ರಾಜಕೀಯ ನಡೆ ಇಡಲು ಮುಂದಾಗಿದ್ದಾರೆ.
ಸಿಎಂ ತಮ್ಮ ಎರಡು ದಿನದ ದೆಹಲಿ ಭೇಟಿಯ ವೇಳೆ ಛಲದಂಕ ಮಲ್ಲನಂತೆ ಕಾದು ಕೇಂದ್ರ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು. ಇವರಿಬ್ಬರ ಭೇಟಿಗೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಮುಖ್ಯಮಂತ್ರಿಗಳಿಗೆ ಕಹಿ ಸುದ್ದಿಯೊಂದನ್ನು ಹೇಳಿದ್ದು,ಇದರಿಂದ ವಿಚಲಿತರಾದ ಬೊಮ್ಮಾಯಿ ನಂತರ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಹತ್ತು ನಿಮಿಷದ ಈ ಭೇಟಿಯಲ್ಲಿ ಅಮಿತ್ ಶಾ ಅವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತ ಕೋರ್ಟ್ ಆದೇಶ ವಿವರಿಸಿ ಸಂಪುಟ ವಿಸ್ತರಣೆಗೆ ಅನುಮತಿ ಕೋರಿದರು.ಆದರೆ ಅಮಿತ್ ಶಾ ಇದಕ್ಕೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಸದ್ಯದಲ್ಲೇ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿ ಪಕ್ಷದ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಲು ಸೂಚಿಸಿದರು.
ಅದರಂತೆ ಸಿಎಂ ಬೊಮ್ಮಾಯಿ ಪಕ್ಷದ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದರು. ಈ ವೇಳೆ ನಡ್ಡಾ ಕೂಡಾ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇದರಿಂದ ವಿಚಲಿತರಾದ ಸಿಎಂ ಬೇಸರದಿಂದಲೇ ಹೊರ ಬಂದಿದ್ದಾರೆ.ನಂತರದಲ್ಲಿ ಸುದ್ದಿಗಾರರ ಮುಂದೆ ಸಂಪುಟ ಸರ್ಜರಿ ಸದ್ಯಕ್ಕಿಲ್ಲ ಎಂದವರು ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂಬ ಗೇಮ್ ಪ್ಲಾನ್ ಪ್ರಯೋಗಿಸಲು ಮುಂದಾಗಿದ್ದಾರೆ.
ಇವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ವರದಾನವಾಗಿ ಬಂದಿದೆ. ಈಗ ಸಿಎಂ ಬೊಮ್ಮಾಯಿಯವರು ಬಾಕಿಯಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಮುಂದಾಗಿದ್ದಾರೆ.
ಇದರೊಂದಿಗೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಸಹ ನಡೆಯುತ್ತಿದ್ದು ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ ಎರಡು ತಿಂಗಳಾದರೂ ಬೇಕು, ಅಲ್ಲಿಯವರೆಗೆ ಪಕ್ಷ ಸಂಪುಟ ವಿಸ್ತರಣೆಯೂ ಸೇರಿದಂತೆ ಯಾವುದೇ ರಾಜಕೀಯ ತೀರ್ಮಾನ ಕೈಗೊಳ್ಳುವುದಿಲ್ಲ ಎನ್ನುವುದು ಸಿಎಂ ಬೊಮ್ಮಾಯಿ ಅವರ ಲೆಕ್ಕಾಚಾರವಾಗಿದೆ.
ಇದಕ್ಕೆ ಪೂರಕವೆಂಬಂತೆ ದೆಹಲಿಯಿಂದ ಬರುತ್ತಿದ್ದಂತೆ ಸಿಎಂ ಬೊಮ್ಮಾಯಿ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತಂತೆ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಜೊತೆ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ , ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ. ಸುಪ್ರೀಂ ಕೋರ್ಟ್ ನ ಎರಡೂ ತೀರ್ಪುಗಳ ಬಗ್ಗೆಯೂ ಚರ್ಚಿಸುತ್ತೇವೆ. ಒಬಿಸಿ ಮೀಸಲಾತಿ ಇಟ್ಟುಕೊಂಡೇ ಚುನಾವಣೆ ಮಾಡಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ನ ಎರಡು ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ ಎಂದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಈಗಾಗಲೇ ಸಮಿತಿ ಕೂಡ ನೇಮಿಸಿದ್ದೇವೆ. ಅದರ ಬಗ್ಗೆಯೂ ಹಾಗೂ ವಿಪಕ್ಷ ನಾಯಕರ ಪತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ಮುಂದೆ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಇದುವರೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಂವಿಧಾನದ ಪ್ರಕಾರವೇ ಓಬಿಸಿಯವರಿಗೆ ಪ್ರಾತಿನಿಧ್ಯ ಕೊಡುತ್ತಾ ಬಂದಿದ್ದೇವೆ. ಈಗ ಒಬಿಸಿ ಇಟ್ಟುಕೊಂಡೇ ಚುನಾವಣೆ ಮಾಡಬೇಕೆಂಬುದು ನಮ್ಮ ಉದ್ದೇಶ ಆಗಿದೆ. ಹೀಗಾಗಿ ಓಬಿಸಿ ಇಟ್ಟುಕೊಂಡು ಯಾವ ರೀತಿ ಚುನಾವಣಾ ಪ್ರಕ್ರಿಯೆ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.
ಇದನ್ನು ನೋಡಿದಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರ ದೊಡ್ಡ ರಾಜಕೀಯ ಲೆಕ್ಕಾಚಾರ ಮಾಡಿದ್ದೇನೆ ಎಂದು ಕೊಳ್ಳಬಹುದಾದರೂ ರಾಜಕೀಯದಲ್ಲಿ ಇಂತಹ ಲೆಕ್ಕಾಚಾರಗಳೆಲ್ಲಾ ಇದೇ ಫಲಿತಾಂಶ ತರಲಿವೆ ಎಂದು ಹೇಳಲು ಸಾಧ್ಯವಿಲ್ಲ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಗಡಿ ನಿಗದಿ ಸಂಬಂಧ ಅಧ್ಯಯನ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಇನ್ನೂ ವರದಿ ನೀಡಿಲ್ಲ ಮತ್ತು ಕ್ಷೇತ್ರ ಪುನರ್ ವಿಂಗಡಣೆಯಾಗಿಲ್ಲ.
ಇನ್ನು ಬಿಬಿಎಂಪಿ ಸೇರಿದಂತೆ ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ದೊಡ್ಡ ಸಮಸ್ಯೆಯಾಗಿದೆ. ಸುಪ್ರೀಂಕೋರ್ಟ್ ಈ ಮೀಸಲಾತಿ ಇಲ್ಲದೆ ಹೋದರೆ ಎಲ್ಲವನ್ನೂ ಸಾಮಾನ್ಯ ವರ್ಗ ಎಂದು ಪರಿಗಣಿಸಲು ಸೂಚಿಸಿದೆ. ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಕೋರ್ಟ್ ಆದೇಶವನ್ನು ಈ ರೀತಿ ಪಾಲಿಸುವ ಧೈರ್ಯ ತೋರಲಿದೆಯಾ ಎನ್ನುವುದು ಮತ್ತೊಂದು ಪ್ರಶ್ನೆ.
ಹೀಗಾಗಿ ಮುಖ್ಯಮಂತ್ರಿ ಬಿಕ್ಕಟ್ಟಿನಿಂದ ಪಾರಾಗಾಲು ಯಾವ ದಂಡ ದಾಳ ಎಸೆದರೂ ಅಂತಿಮ ತೀರ್ಪು ನೀಡುವುದು ದೆಹಲಿಯ ವರಿಷ್ಟರು , ಹೀಗಾಗಿ ಹೈಕಮಾಂಡ್ ಲೆಕ್ಕಾಚಾರದ ಮೇಲೆ ಎಲ್ಲಾ ಫಲಿತಾಂಶ ನಿಂತಿದೆ..