ಗ್ರಾಮದ ಮನೆ ಮನೆಗೆ ಉದ್ಯೋಗ ಖಾತರಿ ಅಭಿಯಾನ: ಜಿಲ್ಲಾ ಪಂಚಾಯತಿ ಸಿಇಒ ಡಾ. ವಿದ್ಯಾಕುಮಾರಿ
CEO
ಗ್ರಾಮದ ಮನೆ ಮನೆಗೆ ಉದ್ಯೋಗ ಖಾತರಿ ಅಭಿಯಾನ:
ಜಿಲ್ಲಾ ಪಂಚಾಯತಿ ಸಿಇಒ ಡಾ. ವಿದ್ಯಾಕುಮಾರಿ
ತುಮಕೂರು: ಮಹಾತ್ಮಗಾಂಧಿ ನರೇಗಾ ಯೋಜನೆಯ 2022-23ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ `ಮನೆ ಮನೆಗೆ ಉದ್ಯೋಗ ಖಾತರಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಅಕ್ಟೋಬರ್ ಮಾಹೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ, ನರೇಗಾ ಯೋಜನೆಯಡಿ ದೊರೆಯುವ ಕೂಲಿ ಮೊತ್ತ, ಗಂಡು-ಹೆಣ್ಣಿಗೆ ಸಮಾನ ಕೂಲಿ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಶೇ. 50ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳ ಸಂಪೂರ್ಣ ಮಾಹಿತಿಯುಳ್ಳ ಕರಪತ್ರ ನೀಡಿ ಗ್ರಾಮೀಣ ಜನರನ್ನು ಕೆಲಸಕ್ಕೆ ಬರುವಂತೆ ಪ್ರೇರೇಪಣೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಅಕ್ಟೋಬರ್ 31ರವರೆಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮನೆಮನೆಗೂ ಭೇಟಿ ನೀಡಿ ಯೋಜನೆ ಕುರಿತು ಮಾಹಿತಿ ನೀಡುವುದು. ಅಲ್ಲದೆ ಜಾಗೃತಿ ವಾಹನದ ಮೂಲಕ ಗ್ರಾಮಸ್ಥರು ಹಾಗೂ ರೈತರಿಗೆ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಪ್ರಚಾರ ಆಂದೋಲನ ಕೈಗೊಳ್ಳಲಾಗುವುದು. ಗ್ರಾಮಸ್ಥರಿಂದ ಕಾಮಗಾರಿ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲು ಎಲ್ಲಾ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ, ಜಾಗೃತಿ ವಾಹನದಲ್ಲಿ ಹಾಗೂ ಎಲ್ಲಾ ಗ್ರಾಮಗಳಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆಯನ್ನು ಇಟ್ಟು ಕಾಮಗಾರಿ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಈ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರು ಭಾಗವಹಿಸಿ ತಮ್ಮ ವಾರ್ಡ್ಗಳ ಪ್ರತಿಯೊಂದು ಮನೆಗೂ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ನವೆಂಬರ್ 10ರೊಳಗೆ ಎಲ್ಲಾ ವಾರ್ಡ್ಗಳಲ್ಲಿಯೂ ವಾರ್ಡ್ ಸಭೆ ಹಾಗೂ ನವೆಂಬರ್ 30ರೊಳಗೆ ಎಲ್ಲಾ ಗ್ರಾಮಗಳಲ್ಲಿಯೂ ಗ್ರಾಮ ಸಭೆಗಳನ್ನು ಆಯೋಜಿಸಿ, ಡಿಸೆಂಬರ್ 5ರೊಳಗೆ ಗ್ರಾಮ ಪಂಚಾಯಿತಿಯ ವಾರ್ಷಿಕ ಕ್ರಿಯಾಯೋಜನೆಯನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು. ಡಿಸೆಂಬರ್ 20ರೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳು ಗ್ರಾಮ ಪಂಚಾಯಿತಿಗಳ ಕ್ರಿಯಾಯೋಜನೆಗಳನ್ನು ಕ್ರೋಢೀಕರಿಸಿ, ಅನುಮೋದಿಸಿ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳಿಗೆ ಸಲ್ಲಿಸಬೇಕು. ಜನವರಿ 20ರೊಳಗೆ ತಾಲ್ಲೂಕು ಪಂಚಾಯಿತಿಯು ತಾಲ್ಲೂಕಿನ ವಾರ್ಷಿಕ ಕ್ರಿಯಾಯೋಜನೆಯನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳ ಮುಂದೆ ಪ್ರಾತ್ಯಕ್ಷಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜನವರಿ 31ರೊಳಗೆ ಜಿಲ್ಲಾ ಪಂಚಾಯಿತಿಯು ಜಿಲ್ಲಾ ವಾರ್ಷಿಕ ಯೋಜನೆಯನ್ನು ಅನುಮೋದಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ನೀಡಿರುವ ನಮೂನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.
ವಾರ್ಡ್ಸಭೆ ಹಾಗೂ ಗ್ರಾಮಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಕೋವಿಡ್-19ರ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಅಲ್ಲದೆ ವೈಯಕ್ತಿಕ ಕಾಮಗಾರಿಗಳನ್ನು ನೀಡುವ ಸಲುವಾಗಿ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮಸಭೆಯಲ್ಲಿ ಮಂಡಿಸಿ ಒಂದೇ ಬಾರಿಗೆ ಅನುಮೋದನೆ ಪಡೆದುಕೊಳ್ಳಬೇಕು. ಈ ರೀತಿ ಅನುಮೋದನೆಗೊಂಡ ಯಾವುದೇ ಫಲಾನುಭವಿಯು ತನ್ನ ಜೀವಿತಾವಧಿಯಲ್ಲಿ ಗರಿಷ್ಟ 2.5 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಪಡೆದುಕೊಳ್ಳಲು ಅರ್ಹರಿರುತ್ತಾರೆ. ಕೂಲಿ ಸಾಮಗ್ರಿ ಅನುಪಾತವು ಕಡ್ಡಾಯವಾಗಿ ಶೇ. 60:40 ಮೀರತಕ್ಕದ್ದಲ್ಲ. ವಾರ್ಷಿಕ ಕ್ರಿಯಾಯೋಜನೆಯ ಒಟ್ಟು ಅಂದಾಜು ವೆಚ್ಚದಲ್ಲಿ ಕನಿಷ್ಟ ಶೇ. 65ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕು. ರಸ್ತೆ ಕಾಮಗಾರಿಗಳಿಗೆ ಮೀಸಲಿಟ್ಟ ಅಂದಾಜು ಮೊತ್ತವು ವಾರ್ಷಿಕ ಕ್ರಿಯಾಯೋಜನೆಯ ಒಟ್ಟು ಅಂದಾಜು ವೆಚ್ಚದ ಶೇ. 10ರಷ್ಟನ್ನು ಮೀರತಕ್ಕದ್ದಲ್ಲ. ಈ ಎಲ್ಲಾ ಅಂಶಗಳ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸಭೆಗಳನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಿಇಓ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ.