‘ಸಂಕ್ರಮಣ’ಕ್ಕೂ ಮುನ್ನವೇ ನಿರ್ಗಮಿಸಿದ ಚಂಪಾ
champa
‘ಸಂಕ್ರಮಣ’ಕ್ಕೂ ಮುನ್ನವೇ ನಿರ್ಗಮಿಸಿದ ಚಂಪಾ
ಬೆಂಗಳೂರು : ಕವಿ, ನಾಟಕಕಾರ, ಅಂಕಣಕಾರ, ಕನ್ನಡ ಹೋರಾಟಗಾರ, ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸುದೀರ್ಘ ಅವಧಿಗೆ ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯನ್ನು ನಿರಂತರ ಸಂಪಾದಿಸಿ- ಪ್ರಕಟಿಸಿ ದಾಖಲೆ ಮಾಡಿದ ಮೊನಚು ಮಾತು ಮತ್ತು ಬರವಣಿಗೆಗೆ ಹೆಸರಾದ ‘ಚಂಪಾ” ಖ್ಯಾತಿಯ ಡಾ.ಚಂದ್ರಶೇಖರ ಪಾಟೀಲ ಸಂಕ್ರಮಣಕ್ಕೆ ನಾಲ್ಕು ದಿನಗಳಿರುವಾಗಲೇ ನಮ್ಮನ್ನೆಲ್ಲ ಅಗಲಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರೂ ಆಗಿದ್ದ ಡಾ.ಚಂದ್ರಶೇಖರ ಪಾಟೀಲ (83) ವಯೋಸಹಜ ಅನಾರೋಗ್ಯದಿಂದಾಗಿ ರಾಜಧಾನಿಯ ಕೋಣನಕುಂಟೆಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು ಅಲ್ಲೇ ಸೋಮವಾರ ಮುಂಜಾನೆ ಅಸುನೀಗಿದರು. .
ಚಂಪಾ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಒಡನಾಡಿಗಳನ್ನು ಅಗಲಿದ್ದಾರೆ. ಕನಕಪುರ ರಸ್ತೆಯ ಎಲಚೇನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿ ಚಂಪಾ ಕನ್ನಡದ ಪ್ರಕಾಶಕರನ್ನು ಉತ್ತೇಜಿಸಲು ಪುಸ್ತಕ ಸಂತೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹುಟ್ಟುಹಾಕಿ ಕನ್ನಡವನ್ನು ಅಜರಾಮರವಾಗಿ ಉಳಿಸುವ ಕಾಯಕವನ್ನು ನಿರ್ವಹಿಸಿದರು. ಗೋಕಾಕ್ ಚಳುವಳಿಯಲ್ಲಿ ಕೆಲಸ ಮಾಡಿದ್ದ ಚಂಪಾ ಅವರು ಕನ್ನಡಕ್ಕೆ ಎಲ್ಲಿ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು. ನಾಡು - ನುಡಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಇವರ ಭೌತಿಕ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಚಂಪಾರವರ ಪಾರ್ಥಿವ ಶರೀರದ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಂದ್ರಶೇಖರ ಪಾಟೀಲರವರು ನಮ್ಮನ್ನು ಅಗಲಿದ್ದಾರೆ. ಅವರ ಸ್ವತಂತ್ರ ಚಿಂತನೆಯ ಲೇಖನದಲ್ಲಿ ಮೊನಚು ಇರುತ್ತಿತ್ತು. ಪ್ರಸ್ತುತ ವಿಷಯಗಳ ಬಗ್ಗೆ ವಿಮರ್ಶಿಸಿ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಹ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಚಂಪಾ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರು ತಮ್ಮ ತಂದೆಯವರಿಗೆ ಬಹಳ ಆತ್ಮೀಯರಾಗಿದ್ದರು. ತಮಗೆ ಮಾರ್ಗದರ್ಶಕರಾಗಿದ್ದ ಚಂಪಾ ಅಗಲಿಕೆ ಸಾಹಿತ್ಯ ಲೋಕಕ್ಕೆ ಬಹಳ ದೊಡ್ಡ ನಷ್ಟವಾಗಿದೆ ಎಂದು ಅವರು ಸಂತಾಪ ಸೂಚಿಸಿದರು.
ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅವರ ಹುಟ್ಟೂರು ಹತ್ತಿಮತ್ತೂರಿನಲ್ಲಿ ಮಂಗಳವಾರ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ ಎಂದು ಹೇಳಲಾಗಿತ್ತಾದರೂ, ಸೋಮವಾರ ಸಂಜೆ ನಗರದ ಚಾಮರಾಜಪೇಟೆಯ ರುದ್ರಭೂಮಿಯಲ್ಲೇ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು.