ಸಾಬರ ಪಾಳ್ಯ ರಸ್ತೆ ವಿಸ್ತರಣೆ ಆಸ್ತಿದಾರರಿಂದ ಸ್ವಯಂಪ್ರೇರಿತ ಕಟ್ಟಡ ತೆರವು
sabara palya
ಸಾಬರ ಪಾಳ್ಯ ರಸ್ತೆ ವಿಸ್ತರಣೆ
ಆಸ್ತಿದಾರರಿಂದ ಸ್ವಯಂಪ್ರೇರಿತ ಕಟ್ಟಡ ತೆರವು
ತುಮಕೂರು: ನಗರದ ಬಟವಾಡಿ ಮತ್ತು ಶೆಟ್ಟಿಹಳ್ಳಿ ರಿಂಗ್ ರಸ್ತೆ ನಡುವೆ ನೇರ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆಯಲ್ಲಿ ರೈಲ್ವೆ ಗೇಟ್ ಬಳಿ ಇರುವ ಸಾಬರ ಪಾಳ್ಯದ ಭಾಗದಲ್ಲಿ ರಸ್ತೆ ವಿಸ್ತರಣೆಗಾಗಿ ಅಲ್ಲಿದ್ದ ಮನೆ ಇತ್ಯಾದಿ ಕಟ್ಟಡಗಳನ್ನು ತುಮಕೂರು ಮಹಾನಗರ ಪಾಲಿಕೆಯು ಅ. 8 ರಂದು ಬೆಳಗ್ಗೆ ಅಂತಿಮ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತು.
ಮೇಯರ್ ಬಿ.ಜಿ. ಕೃಷ್ಣಪ್ಪ ಮತ್ತು ಪಾಲಿಕೆ ಆಯುಕ್ತೆ ರೇಣುಕಾ ಅವರ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಾಚರಣೆ ಆರಂಭಗೊAಡು, ಸಂಜೆವರೆಗೂ ನಡೆಯಿತು. ಅದೇ ಸಂದರ್ಭದಲ್ಲಿ ಆ ಮಾರ್ಗವಾಗಿ ಬರುತ್ತಿದ್ದ 20 ನೇ ವಾರ್ಡ್ ಕಾರ್ಪೊರೇಟರ್ ಎ. ಶ್ರೀನಿವಾಸ್ (ಜೆಡಿಎಸ್) ಸಹ ಕೆಲಕಾಲ ಸ್ಥಳದಲ್ಲಿ ಹಾಜರಿದ್ದರು. 31 ನೇ ವಾರ್ಡ್ ಕಾರ್ಪೋರೇಟರ್ ಸಿ.ಎನ್. ರಮೇಶ್ (ಬಿಜೆಪಿ) ಸಹ ಭೇಟಿ ನೀಡಿದ್ದರು.
ಬಟವಾಡಿ ವೃತ್ತದ ಮಿರ್ಜಿ ಪೆಟ್ರೋಲ್ ಬಂಕ್ ಪಕ್ಕದಿಂದ ಸಾಬರ ಪಾಳ್ಯದ ರೈಲ್ವೆ ಗೇಟ್‌ವರೆಗೂ ದ್ವಿಪಥ ರಸ್ತೆಯನ್ನು ಮರ‍್ನಾಲ್ಕು ವರ್ಷಗಳ ಹಿಂದೆಯೇ ಅಭಿವೃದ್ಧಿಪಡಿಸಲಾಗಿದೆ. ಸದರಿ ರೈಲ್ವೆಗೇಟ್‌ನಿಂದ ಮುಂದಕ್ಕೆ ರಿಂಗ್ ರಸ್ತೆಯವರೆಗೂ (ರೋಟಿಘರ್‌ವರೆಗೆ) ರಸ್ತೆ ಅಭಿವೃದ್ಧಿ ಆಗದೆ ನೆನೆಗುದಿಗೆ ಬಿದ್ದಿತ್ತು. ಕಳೆದ ವರ್ಷದಿಂದ ಈ ಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿ ನಡೆದಿದ್ದು, ರಿಂಗ್ ರಸ್ತೆಯಿಂದ ಸಾಬರಪಾಳ್ಯದವರೆಗೂ ದ್ವಿಪಥ ರಸ್ತೆ ಸಿದ್ಧವಾಗಿತ್ತು. ಸಾಬರ ಪಾಳ್ಯದ ಬಳಿ ರಸ್ತೆ ವಿಸ್ತರಣೆಗೆ ಅನೇಕ ಮನೆಗಳು, ಕಟ್ಟಡಗಳು ಅಡ್ಡಿಯಾಗಿದ್ದವು. ಇದೀಗ ಆ 24 ಆಸ್ತಿದಾರರ ಜೊತೆ ತುಮಕೂರು ಮಹಾನಗರ ಪಾಲಿಕೆಯು ಮಾತುಕತೆ ನಡೆಸಿ, ಕಾನೂನಿನ ಪ್ರಕಾರ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ, ಅಂತಿಮವಾಗಿ ರಸ್ತೆ ವಿಸ್ತರಣೆಗೆ ಅನುಕೂಲವಾಗುವಂತೆ ಅಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿದೆ.
ಸಾಬರ ಪಾಳ್ಯದ ಈ ಪ್ರದೇಶವು 35ನೇ ವಾರ್ಡ್ (ಬಂಡೆಪಾಳ್ಯ-ದೇವರಾಯಪಟ್ಟಣ) ವ್ಯಾಪ್ತಿಗೆ ಒಳಪಡುತ್ತಿದ್ದು, ಬಿಜೆಪಿಯ ನಿರ್ಮಲ ಶಿವಕುಮಾರ್ ಇಲ್ಲಿನ ಕಾರ್ಪೊರೇಟರ್ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ವಿಷಯ ಗಮನ ಸೆಳೆದಿತ್ತು. ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮನೆಗಳನ್ನು ತೆರವುಗೊಳಿಸಿಕೊಳ್ಳುವಂತೆ ಸೂಚಿಸಿದ್ದರು. ಬಳಿಕ ಅಲ್ಲಿನ ನಿವಾಸಿಗಳು ತಮಗೆ ಸೂಕ್ತ ಪರಿಹಾರ ಕೊಡುವಂತೆ ಕೇಳಿಕೊಂಡಿದ್ದರು. ಪಾಲಿಕೆ ಕಚೇರಿಗೆ ಆಗಮಿಸಿ ಆಯುಕ್ತರಿಗೆ ಮನವಿಯನ್ನೂ ಮಾಡಿಕೊಂಡಿದ್ದರು. ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರಿಗೂ ಸದರಿ ನಾಗರಿಕರು ಮನವಿ ಮಾಡಿದ್ದರು. ಈ ನಾಗರಿಕರ ತಂಡದೊAದಿಗೆ ಸೈಯದ್ ನಯಾಜ್ ಅವರು ಪಾಲಿಕೆಯ ಆಯುಕ್ತೆ ರೇಣುಕಾ ಅವರನ್ನು ಭೇಟಿಯಾಗಿ ಮನೆ ತೆರವುಗೊಳಿಸುವುದಾದರೆ ಸೂಕ್ತ ಪರಿಹಾರ ಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಆಯುಕ್ತರೂ ಸ್ಪಂದಿಸಿದ್ದರು. ಸೈಯದ್ ನಯಾಜ್ ಸ್ಥಳಕ್ಕೆ ಭೇಟಿ ನೀಡಿಯೂ ಪರಿಶೀಲನೆ ನಡೆಸಿದ್ದರು. ಇವೆಲ್ಲ ಪ್ರಕ್ರಿಯೆ ನಡೆಯುವಾಗ ಕಾರ್ಪೊರೇಟರ್ ನಿರ್ಮಲ ಶಿವಕುಮಾರ್ ಹಾಜರಿದ್ದರು.
ಇದೀಗ ಪಾಲಿಕೆಯು ಸದರಿ 24 ಆಸ್ತಿದಾರರ ಮನವೊಲಿಸಿ, ಸೂಕ್ತ ಪರಿಹಾರದ ಭರವಸೆ ನೀಡಿ ಕಟ್ಟಡಗಳನ್ನು ತೆರವುಗೊಳಿಸಿದೆ.
ಸೂಕ್ತ ಪರಿಹಾರ: ಆಯುಕ್ತರ ಸ್ಪಷ್ಟನೆ
ಈ ಸಂದರ್ಭದಲ್ಲಿ “ಬೆವರಹನಿ” ಪತ್ರಿಕೆ ಜೊತೆ ಮಾತನಾಡಿದ ಪಾಲಿಕೆಯ ಆಯುಕ್ತೆ ರೇಣುಕಾ ಅವರು, “ಇಲ್ಲಿ ಯಾವುದೇ ಒತ್ತುವರಿ ಆಗಿಲ್ಲ. 24 ಜನ ಆಸ್ತಿದಾರರ ಬಳಿ ಸೂಕ್ತ ದಾಖಲೆ ಪತ್ರಗಳಿವೆ. ಆದ್ದರಿಂದ ಅವರ ಮನವೊಲಿಸಲಾಗಿದೆ. ಅಲ್ಲದೆ ಮೇಯರ್ ಸಹ ಇಲ್ಲಿನ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆಯೂ, ಅಲ್ಲಿನ ಆಸ್ತಿದಾರರಿಗೆ ಸೂಕ್ತ ಪರಿಹಾರವನ್ನು ನೀಡುವಂತೆಯೂ ಪತ್ರ ನೀಡಿದ್ದು ಅದರಂತೆ ಈಗ ಕ್ರಮ ಜರುಗಿಸಲಾಗಿದೆ. 24 ಜನ ಆಸ್ತಿದಾರರು ತಾವಾಗಿಯೇ ಕಟ್ಟಡದ ಕಿಟಕಿ, ಬಾಗಿಲು ಇತ್ಯಾದಿಗಳನ್ನು ಒಯ್ದಿದ್ದು, ಮಿಕ್ಕ ಕಟ್ಟಡದ ಭಾಗಗಳನ್ನು ಮಾತ್ರ ಪಾಲಿಕೆಯಿಂದ ತೆರವು ಮಾಡಲಾಗಿದೆ. ಈ 24 ಜನ ಆಸ್ತಿದಾರರ ಬಳಿ ಇರುವ ದಾಖಲಾತಿಗಳನ್ನು ಸ್ವೀಕರಿಸಿ, ಭೂಸ್ವಾಧೀನ ಕಾಯ್ದೆ ಪ್ರಕಾರ ಅವರೆಲ್ಲರಿಗೂ ಸೂಕ್ತ ಪರಿಹಾರವನ್ನು ಪಾಲಿಕೆಯಿಂದ ಕೊಡಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.