ಕೆಐಎಡಿಬಿ ನಿಯಮ ಮೀರಿ ಅನುಮತಿ ಕೊಡಲು ಪ್ರಭಾವಿಗಳ ಒತ್ತಡ - ಬೇಕರಿ ಬದಲಿಗೆ ಬಾರ್ & ರೆಸ್ಟೋರೆಂಟ್  !?

ಬೇಕರಿ ಬದಲಿಗೆ ಬಾರ್ & ರೆಸ್ಟೋರೆಂಟ್  !?

ಕೆಐಎಡಿಬಿ ನಿಯಮ ಮೀರಿ ಅನುಮತಿ ಕೊಡಲು ಪ್ರಭಾವಿಗಳ ಒತ್ತಡ     -    ಬೇಕರಿ ಬದಲಿಗೆ ಬಾರ್ & ರೆಸ್ಟೋರೆಂಟ್  !?

ಕೆಐಎಡಿಬಿ ನಿಯಮ ಮೀರಿ ಅನುಮತಿ ಕೊಡಲು ಪ್ರಭಾವಿಗಳ ಒತ್ತಡ

ಬೇಕರಿ ಬದಲಿಗೆ ಬಾರ್ & ರೆಸ್ಟೋರೆಂಟ್  !?

ತುಮಕೂರು: ಮನುಷ್ಯರ ಆರೋಗ್ಯಕ್ಕೆ ಪೂರಕವಾಗಿರುವ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಅನುಮತಿ ಇರುವ ಕೈಗಾರಿಕಾ ನಿವೇಶನದ ಕಟ್ಟಡಕ್ಕೆ ಮದ್ಯ ವ್ಯಸನಿಗಳನ್ನು ಸೃಷ್ಟಿಸುವ  ಬಾರ್ ಅಂಡ್ ರೆಸ್ಟೋರೆಂಟ್  ಸ್ಥಳಾಂತರಿಸಲು ಕೆಐಎಡಿಬಿ ವಿರೋಧದ ನಡುವೆಯೂ ಕೂಡಲೇ ಅನುಮತಿ ನೀಡುವಂತೆ ಸರಕಾರದ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆಂಬ ಸುದ್ದಿ ಬಂದಿದೆ.

ತುಮಕೂರು ನಗರದ ಅಂತರಸನಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ಶಿರಾ ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾದಂತೆ, ವಿಪ್ರೋ ಕಾರ್ಖಾನೆ ಹಿಂಭಾಗದಲ್ಲಿ ಕೈಗಾರಿಕಾ ನಿವೇಶನವೊಂದರಲ್ಲಿ ನಿರ್ಮಿಸಿರುವ ಸ್ವಂತ ಪಾಲುದಾರಿಕೆ ಕಟ್ಟಡಕ್ಕೆ ನಗರದ ಬಿಹೆಚ್ ರಸ್ತೆಯಲ್ಲಿ ಸಿಎಲ್‍9 ಪರವಾನಗಿ ಇರುವ ಬಾರ್ ಅಂಡ್ ರೆಸ್ಟೋರೆಂಟ್ ನ್ನು ಸ್ಥಳಾಂತರಿಸಲು ಬಾರ್  ಮಾಲೀಕರು ಮುಂದಾಗಿದ್ದಾರೆ. ಮತ್ತು ಹಾಲಿ ಬಾರ್ ಇರುವ ಕಟ್ಟಡದಲ್ಲಿ ಲಾಡ್ಜಿಂಗ್ ಕೂಡಾ ಇರುವುದರಿಂದ ಅಲ್ಲಿ ಸಿಎಲ್ 7 ಪರವಾನಗಿ ಪಡೆದು ಬಾರ್ ನಡೆಸಲು ಮುಂದಾಗಿದ್ದಾರೆ. ಆದರೆ ಅಬಕಾರಿ ಇಲಾಖೆ ಕೆಐಎಡಿಬಿ ಅಭಿಪ್ರಾಯ ಪಡೆದು , ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 2008ರಲ್ಲಿ ಈ ನಿವೇಶನವನ್ನು ಬೇಕರಿ ಉತ್ಪನ್ನಗಳನ್ನು ತಯಾರಿಸಲೆಂದೇ ಅನುಮತಿ ನೀಡಿ ಮಂಜೂರು ಮಾಡಿರುವುದರಿಂದ ಪ್ರಸ್ತುತ ಆ ನಿವೇಶನದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಇತರ ಚಟುವಟಿಕೆಗಳನ್ನು ನಡೆಸಲು ನಿಯಮಗಳಲ್ಲಿ ಅವಕಾಶವಿಲ್ಲವಾದ್ದರಿಂದ ಅಲ್ಲಿಗೆ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಳಾಂತರಿಸಲು ಅವಕಾಶವಿಲ್ಲ ಎಂದು ಆದೇಶ ಸಂ. ಇಎಕ್ಸ್ ಇ/ ಐಎಂಎಲ್ / ಸಿಎಲ್-9/ 29/104/2022-23ರಲ್ಲಿ ದಿ.24.08.2022ರಂದು ಹಿಂಬರಹ ನೀಡಿತ್ತು.

ಆದರೆ ಬಾರ್ ಪರವಾನಗಿದಾರರು ಪಟ್ಟು ಬಿಡದೇ ರಾಜ್ಯ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಂಖ್ಯೆ 17987/2022ನ್ನು ಸಲ್ಲಿಸಿದರು. ಮಾನ್ಯ ಹೈಕೋರ್ಟ್ ಈ ಪ್ರಕರಣದಲ್ಲಿ ದಿನಾಂಕ 16.09.2022ರಂದು ತೀರ್ಪು ನೀಡಿ, ತೀರ್ಪಿನ ಪ್ರತಿ ತಲುಪಿದ 3 ವಾರಗಳ ಒಳಗಾಗಿ ಅರ್ಜಿದಾರರ ಪ್ರಸ್ತಾವನೆಯನ್ನು ಹಾಲಿ ನಿಯಮಗಳ ಅನುಸಾರ ಹೊಸದಾಗಿ ಪರಿಶೀಲಿಸುವಂತೆ ನಿರ್ದೇಶನ ನೀಡಿ, ತುಮಕೂರು ಜಿಲ್ಲೆಯ ಅಬಕಾರಿ ಇಲಾಖೆಯ  ದಿ.24.08.2022ರ ಹಿಂಬರಹವನ್ನು ರದ್ದುಪಡಿಸಿತು.

ನ್ಯಾಯಾಲಯದ ನಿರ್ದೇಶನದಂತೆ ಪರಿಶೀಲಿಸಿ ಅಭಿಪ್ರಾಯ ನೀಡುವಂತೆ ತುಮಕೂರು ಉತ್ತರ ವಲಯ ಅಬಕಾರಿ ನಿರೀಕ್ಷಕರು ನಗರದ ಬಿಹೆಚ್ ರಸ್ತೆಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ದಿ.7.10.2022ರಂದು ಪತ್ರ ಹಾಗೂ 13, 20 ಮತ್ತು 27ರಂದು ನೆನಪೋಲೆಗಳನ್ನು ಬರೆಯಿತು. ಅದರಂತೆ ಕೆಐಎಡಿಬಿ ತನ್ನ ಬೆಂಗಳೂರು ಕೇಂದ್ರ ಕಚೇರಿಯಲ್ಲಿರುವ ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು, ಅದರಂತೆ ದಿನಾಂಕ 03.11.2022ರಂದು ಆದೇಶ ಸಂ. ಕಕೈಪ್ರಮ/ಅಆ/ತುಮ/1922/2022-23ರಲ್ಲಿ ಹಿಂಬರಹ ನೀಡಿದೆ.

ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿರುವ ನಿವೇಶನ ಸಂ. 1ಎ1 ಅನ್ನು ಮಂಜೂರಾತಿ ಹಾಗೂ ಕ್ರಯ ದಾಖಲೆಗಳ ಪ್ರಕಾರ ದಿ.9.7.2008ರಂದು ಮೆ.ಅನುಶ್ರೀ ಎಂಟರ್‍ ಪ್ರೈಸಸ್‍ನ ಹೆಚ್.ಪಿ.ಸುಮಿತ್ರ ಎಂಬುವವರಿಗೆ ಕೆಐಎಡಿಬಿ ನಿಯಮಗಳ ಪ್ರಕಾರ ಬೇಕರಿ ಪ್ರಾಡಕ್ಟ್ ಉತ್ಪಾದನೆಗಾಗಿ ಮಂಜೂರು ಮಾಡಿ ಶುದ್ದ ಕ್ರಯ ಮಾಡಿಕೊಡಲಾಗಿದೆ. ಆದರೆ ಅವರು ಸದರಿ ನಿವೇಶನವನ್ನು ದಿ. 11.9.2008ರಂದು ಟಿ.ಆರ್.ಕುಮಾರಸ್ವಾಮಿ ಎಂಬುವವರಿಗೆ ಮಾರಿದ್ದು, ಅವರು ದಿ.14.01.2016ರಂದು ಆಕರ್ಶ್ ಮತ್ತು ಸದಾಶಿವರಾಜು ಅಮಿನ್ ಎಂಬುವವರಿಗೆ ಮಾರಿದ್ದಾರೆ. ಮೂಲ ಹಂಚಿಕೆದಾರರಿಗೆ ವಿಧಿಸಿರುವ ಷರತ್ತು ಹಾಲಿ ಮಾಲೀಕರಿಗೂ ಅನ್ವಯಿಸುತ್ತದೆ ಎಂದು ಕೆಐಎಡಿಬಿ ದಿ.3.11.2022ರ ಹಿಂಬರಹದಲ್ಲಿ ಹೇಳಿದೆ.

ಸರ್ಕಾರದ ದಿನಾಂಕ 26.10.2017ರ ಆದೇಶ ಸಂ. ಸಿಐ 81 ಐಎಪಿ 2014(ಪಿ)ರನ್ವಯ ಪ್ರಕರಣವನ್ನು ಪರಿಶೀಲಿಸಿದ್ದು, ಮೇಲ್ಕಂಡ ಕೈಗಾರಿಕಾ ನಿವೇಶನದಲ್ಲಿರುವ ಕಟ್ಟಡಕ್ಕೆ ಮದ್ಯದ ಮಳಿಗೆ ಸ್ಥಳಾಂತರಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಕೆಐಎಡಿಬಿ ಅಬಕಾರಿ ಇಲಾಖೆಗೆ ಸ್ಪಷ್ಟಪಡಿಸಿದೆ. ಹಾಗೂ ಅಂತಿಮವಾಗಿ ಕೆಳಗಿನಂತೆ ಸ್ಪಷ್ಟನೆಯನ್ನು ಕೆಐಎಡಿಬಿ ಅಬಕಾರಿ ಇಲಾಖೆಗೆ ನೀಡಿದೆ.

ಒಂದು ಪಕ್ಷ ಮಂಡಳಿಯ ನಿಯಮ & ನಿಬಂಧನೆಗಳು ಮತ್ತು ಮೇಲ್ಕಂಡ ಸರ್ಕಾರಿ ಆದೇಶದ ಅಂಶಗಳನ್ನು ಉಲ್ಲಂಘಿಸಿ ಅವುಗಳ ವಿರುದ್ಧವಾಗಿ ತಮ್ಮ ಇಲಾಖೆಯ ಕಛೇರಿಯಿಂದ ….. , ಮೇಲ್ಕಂಡ ನಿವೇಶನದಲ್ಲಿ ಬಾರ್ & ರೆಸ್ಟೋರೆಂಟ್ ಅನ್ನು ಸ್ಥಳಾಂತರಿಸಲು ಅನುಮತಿ ನೀಡಿದರೆ ಮುಂದಿನ ಎಲ್ಲಾ ಘಟನೆಗಳಿಗೆ ನಿಮ್ಮ ಇಲಾಖೆಯೇ ಜವಾಬ್ದಾರಿಯನ್ನು ವಹಿಸಿಕೊಳ್ಳ ಬೇಕಾಗಿರುತ್ತದೆ.  ಹಾಗೂ ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕ ತೊಂದರೆ, " ಅನಾಹುತ, ಸಂಘರ್ಷ ಇತ್ಯಾದಿಗಳು ಸಂಭವಿಸಿದಲ್ಲಿ ನಿಮ್ಮ ಕಛೇರಿಯೇ ನೇರ ಹೊಣೆಯಾಗುತ್ತದೆ ಎಂಬ ಸ್ಪಷ್ಟ ಮಾಹಿತಿಯನ್ನು ಪುನಃ ಉಚ್ಚರಿಸಲಾಗಿದ್ದು, ಪ್ರಸ್ತಾವನೆಯನ್ನು ಮುಕ್ತಾಯಗೊಳಿಸಲಾಗಿದೆ.”

ಆದರೆ ಪ್ರಕರಣ ಇಷ್ಟಕ್ಕೇ ಮುಗಿದರೆ ಪರವಾಗಿಲ್ಲ ಎನ್ನಬಹುದಿತ್ತು. “ ಆದರೆ ಮೇಲ್ಕಂಡ ಪ್ರಕರಣದಲ್ಲಿ ನ್ಯಾಯಾಲಯದ  ತೀರ್ಪಿನ ಪ್ರತಿ ಕೈ ಸೇರಿದ 3 ವಾರಗಳ ಗಡುವು ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ನ್ಯಾಯಾಲಯ ನಿಂದನಾ ಅರ್ಜಿ ದಾಖಲಿಸಿದ್ದಾರೆ, ಅದರ ಪ್ರಕಾರ ಬಾರ್ ಸ್ಥಳಾಂತರಿಸಲು ಅವಕಾಶ ನೀಡಬೇಕೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ” ಎಂದು ಅಬಕಾರಿ ಆಯುಕ್ತರು ‘ ಬೆವರ ಹನಿ’ಗೆ ಸ್ಪಷ್ಟಪಡಿಸಿದ್ದಾರೆ, ನ್ಯಾಯಾಲಯದ ತೀರ್ಪಿನ ಕುರಿತು ಕೆಐಎಡಿಬಿಯಿಂದ ಸರ್ಕಾರದ ಹಂತದಲ್ಲಿ ಅಭಿಪ್ರಾಯ ಪಡೆಯಬೇಕಿದ್ದು , ಸಾಕಷ್ಟು ಕಾಲಾವಕಾಶ ನೀಡುವಂತೆ ಮಾನ್ಯ ಹೈಕೋರ್ಟ್‍ನ್ನು ಕೋರುವ ಬದಲು, ಹಿಂಬರಹ ನೀಡುವ ಪ್ರಕ್ರಿಯೆ ಲಂಬಿಸಿ ನ್ಯಾಯಾಲಯ ನಿಂದನಾ ಅರ್ಜಿ ದಾಖಲಿಸಲು ಅವಕಾಶ ಕೊಟ್ಟಿದ್ದೇಕೆ? ಎಂಬ ಪ್ರಶ್ನೆಗೆ ಅವರು ಉತ್ತರ ನೀಡಬೇಕಿದೆ. ನ್ಯಾಯಾಲಯ ನಿಂದನಾ ಅರ್ಜಿಯ ಮಾಹಿತಿ ತಕ್ಷಣ ದೊರಕುವ ಅಬಕಾರಿ ಇಲಾಖೆಗೆ  ರಿಟ್ ಅರ್ಜಿ ತೀರ್ಪೇಕೆ ವಿಳಂಬವಾಗಿ ತಲುಪುತ್ತದೆ , ಅಬಕಾರಿ ಇಲಾಖೆ ಮಾಡುವ ತಪ್ಪಿಗೆ ಜಿಲ್ಲಾಧಿಕಾರಿಯವರು ಕಾನೂನಿನ ದೃಷ್ಟಿಯಲ್ಲಿ ತಪ್ಪೆಸಗುವಂತೆ ಮಾಡುವುದು ಎಷ್ಟು ಸರಿ ಎಂಬುದನ್ನೂ ಅವರೇ ಸ್ಪಷ್ಟನೆ ನೀಡಬೇಕಿದೆ.

ನ್ಯಾಯಾಂಗ ನಿಂದನೆ ಅರ್ಜಿ ಹಿನ್ನೆಲೆಯಲ್ಲಿ ಕೂಡಲೇ ಅನುಮತಿ ನೀಡುವಂತೆ ಸರ್ಕಾರದ ಉನ್ನತ ಹಂತದಿಂದ ಒತ್ತಡ ಬಂದಿದೆ ಎಂದು ಹೇಳಲಾಗುತ್ತಿದೆ, ಇಂಥ ಅಸಹಾಯಕ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡು ಅನುಮತಿ ನೀಡಿದಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಕೈಗಾರಿಕಾ ಪ್ರದೇಶದಲ್ಲಿ ಬಾರ್ ಆರಂಭಿಸಲು ನೀಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ ಸಂಬಂಧಿಸಿದವರು ಉತ್ತರ ನೀಡಬೇಕಿದೆ.

ಹಾಲಿ ಬಿಹೆಚ್ ರಸ್ತೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದ್ದ ಸಿಎಲ್ 9 ಪರವಾನಗಿಯನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಮುನ್ನವೇ ಅದೇ ಕಟ್ಟಡಕ್ಕೆ ಮೂರು ತಿಂಗಳ ಮೊದಲೇ ಸಿಎಲ್ -7 ಪರವಾನಗಿಯನ್ನು ಅದೇ ಮಾಲಿಕರಿಗೆ ನೀಡಿದ್ದು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬುದನ್ನು ಅದೇ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.