ಸಿದ್ಧರಾಮಯ್ಯ ಎಂಬ ವಿದ್ಯಮಾನ - ಒಂದು ಗಳಿಗೆ - ಕುಚ್ಚಂಗಿ ಪ್ರಸನ್ನ

ಸಿದ್ಧರಾಮಯ್ಯ ಎಂಬ ವಿದ್ಯಮಾನ

ಸಿದ್ಧರಾಮಯ್ಯ ಎಂಬ ವಿದ್ಯಮಾನ              -  ಒಂದು ಗಳಿಗೆ -  ಕುಚ್ಚಂಗಿ ಪ್ರಸನ್ನ

ಸಿದ್ಧರಾಮಯ್ಯ ಎಂಬ ವಿದ್ಯಮಾನ

ಒಂದು ಗಳಿಗೆ

-ಕುಚ್ಚಂಗಿ ಪ್ರಸನ್ನ

ಕೊಡಗಿನಲ್ಲಿ ಕೋಳಿ ಮೊಟ್ಟೆ ಎಸೆದ ಪ್ರಕರಣದ ಬಳಿಕ ಸಿದ್ಧರಾಮಯ್ಯನವರ ಇಮೇಜ್ ರಾಜ್ಯದಲ್ಲಿ ಕಾಂಗ್ರೆಸ್ಸನ್ನೂ ದಾಟಿ ರಾಜಕಾರಣವನ್ನೂ ಮೀರಿ ದೈತ್ಯವಾಗಿ ಬೆಳೆದು, ಸಿದ್ಧರಾಮಯ್ಯ ಎಂಬುದು ಒಂದು ವಿದ್ಯಮಾನವಾಗಿ ರೂಪುಗೊಂಡಿತೇ ?

ಮೊಟ್ಟೆ ಎಸೆತಕ್ಕೆ ರಾಜ್ಯದಾದ್ಯಂತ ಪ್ರಕಟವಾಗುತ್ತಿರುವ ಪ್ರತಿಕ್ರಿಯೆಗಳು ಹೌದು ಎನ್ನುತ್ತಿವೆ.

ಆಗಸ್ಟ್ ಮೂರರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯನವರ 75ನೇ ಜನ್ಮ ದಿನ ಆಚರಣೆಗೆ ಸಂಘಟಕರ ನಿರೀಕ್ಷೆಯನ್ನು ಮೀರಿ ಹದಿನೈದು ಲಕ್ಷಕ್ಕೂ ಹೆಚ್ಚು ಜನರು ಸಮಾವೇಶಗೊಂಡಿದ್ದು ಆಡಳಿತದಲ್ಲಿರುವ ಬಿಜೆಪಿ ಹಾಗೂ ಒಂದು ಕಾಲದ ಮೈತ್ರಿ ಪಕ್ಷ ಜೆಡಿಎಸ್‌ಗಳನ್ನಷ್ಟೇ ಅಲ್ಲದೇ ಸ್ವಪಕ್ಷೀಯರ ಗುಂಡಿಗೆಯಲ್ಲೂ ನಡುಕ ಹುಟ್ಟಿಸಿರುವುದನ್ನು ಹೇಗೆ ಅಲ್ಲಗೆಳೆಯುತ್ತೀರಿ.

ಇಂಡಿಯಾದ ಅಂದಿನ ಮತ್ತು ಇಂದಿನ ಎಲ್ಲ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಡಿಸ್‌ಕೋರ್ಸ್ ಗಳೂ (ಸಂಕಥನ ಎಂಬ ಪದ ಸಂವಾದಿಯಾಗಬಲ್ಲುದೇ ನೋಡಿ) ರಾಜಕೀಯ ಆಯಾಮದೊಂದಿಗೇ ಮಂಡನೆಯಾಗುತ್ತಿರುವ ಹೊತ್ತಿನಲ್ಲಿ ಸಿದ್ಧರಾಮಯ್ಯ ಎಂಬುದು ಕೇವಲ ರಾಜಕಾರಣಿ, ಆಡಳಿತಗಾರ, ಮುತ್ಸದ್ಧಿ ಎಂಬುದನ್ನು ಮೀರಿ ಒಂದು ವಿದ್ಯಮಾನವಾಗಿ ರೂಪುಗೊಳ್ಳಲು ದಾವಣಗೆರೆಯ ಸಮಾವೇಶ ನೆಪವಾಗಿಬಿಟ್ಟಿತು.

ಸಿದ್ಧರಾಮಯ್ಯನವರು ಕೊಡಗಿಗೆ ಭೇಟಿ ನೀಡಿದಾಗ ಬಿಜೆಪಿ ಕಾರ್ಯಕರ್ತರು ಅವರ ಕಾರಿಗೆ ಕೋಳಿ ಮೊಟ್ಟೆ ಎಸೆದದ್ದನ್ನು ರಾಜ್ಯದೆಲ್ಲೆಡೆ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಖಂಡಿಸಿ ಹೇಳಿಕೆ ನೀಡುವ ಜೊತೆಗೆ ಪ್ರತಿಭಟನಾತ್ಮಕ ಪ್ರದರ್ಶನಗಳನ್ನೂ ನಡೆಸಿದರು. ಕಾಂಗ್ರೆಸ್‌ನ ಪ್ರತಿಭಟನೆಯನ್ನು ಅನುಲಕ್ಷಿಸಿ ಎಲ್ಲೆಡೆ ಹಿಂದುಳಿದ ವರ್ಗಗಳ ಸಂಘಟನೆಗಳು ಹಾಗೂ ಇನ್ನೂ ಮುಂದುವರೆದು ಸಿದ್ಧರಾಮಯ್ಯ ಅಭಿಮಾನಿಗಳು ಪ್ರತ್ಯೇಕವಾಗಿ ಪ್ರತಿಭಟನೆ ಮಾಡುತ್ತಿರುವುದನ್ನು ದಯಮಾಡಿ ಗಮನಿಸಿ.

ಜೊತೆಗೆ ಸಿದ್ಧರಾಮಯ್ಯನವರು ವಿರಾಜಪೇಟೆಯಲ್ಲಿ ಮಾಂಸದೂಟ ಮಾಡಿದ ಬಳಿಕ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂಬ ಅರ್ಥ ಹೀನ ವಿವಾದವೊಂದನ್ನು ಪತ್ರಕರ್ತರ ಮುಖಾಂತರ ಹುಟ್ಟುಹಾಕಲು ಹೋದ ಬಿಜೆಪಿ ಇನ್ನಷ್ಟು ಎಡವಟ್ಟು ಮಾಡಿಕೊಂಡಿತು. ಅವರು ಹಿಂದೊಮ್ಮೆ ಧರ್ಮಸ್ಥಳದಲ್ಲೂ ಮೀನಿನೂಟ ಸೇವಿಸಿ ಮಂಜುನಾಥನ ದರ್ಶನ ಮಾಡಿದ್ದರು ಎಂಬುದನ್ನು ವಿವಾದವನ್ನಾಗಿ ಸೃಷ್ಟಿಸಲು ಇದೇ ಜನರು ಪ್ರಯತ್ನಿಸಿದ್ದರು. ಆಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರೇ , “ಭಕ್ತರು ಸೇವಿಸುವ ಆಹಾರಕ್ಕೂ ದೇವರ ದರ್ಶನಕ್ಕೂ ಸಂಬAಧವಿಲ್ಲ” ಎಂದು ಹೇಳಿ ವಿವಾದವನ್ನು ನಿರಸನಗೊಳಿಸಿದ್ದರು.

ಈಗ ಮತ್ತೆ ಕೋಳಿ ಮೊಟ್ಟೆ ಎಸೆತದ ಪ್ರಕರಣವನ್ನು ಜನರ ಹಾಗೂ ಮಾಧ್ಯಮಗಳ ಕಣ್ಣಿಂದ ಮರೆ ಮಾಡಲು ಮಾಂಸದೂಟ ಮಾಡಿ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಲಾಯಿತು. ಹಾಗಂತ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಸಿದ್ಧರಾಮಯ್ಯನವರು “ ನೀ ಯಾವನಯ್ಯ ಕೇಳಕೆ?” ಎಂದು ಅಲ್ಲೇ ಕೊಡವಿಬಿಟ್ಟರು. “ ನನ್ನ ಫುಡ್ ಹ್ಯಾಬಿಟ್ ನನ್ನದು, ನಿನ್ನ ಫುಡ್ ಹ್ಯಾಬಿಟ್ ನಿನ್ನದು” ಎಂದು ಆಧುನಿಕ ನುಡಿಗಟ್ಟಿನಲ್ಲೂ ಕಿತಾಪತಿ ಮಾಡುವವರ ಬಾಯಿ ಮುಚ್ಚಿಸಿಬಿಟ್ಟರು.

ಮೊಟ್ಟೆ ಎಸೆತ , ಟೊಮಾಟೋ ಎಸೆತ ಹಾಗೂ ಗೋ ಬ್ಯಾಕ್ ಎನ್ನುವ ನುಡಿಗಟ್ಟುಗಳೆಲ್ಲ ಅರ್ಧ ಶತಮಾನದ ಹಿಂದಿನ ಬ್ರಿಟಿಷ್ ಮೂಲದ ಪ್ರತಿಭಟನಾ ಶೈಲಿಗಳಾಗಿದ್ದು, ಕಾಲಾನು ಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಘೆರಾವ್‌ಗಳು ಈ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಕೊಡಗಿನಲ್ಲಿ ಕೋಳಿ ಮೊಟ್ಟೆ ಎಸೆಯುವ ಮೂಲಕ ತಮ್ಮೆಲ್ಲ ಪ್ರತಿಭಟನಾ ಹತಾರಗಳು ಮೊಂಡು ಹಿಡಿದಿವೆ, ತುಕ್ಕು ಹಿಡಿದಿವೆ ಎಂಬುದನ್ನು ಬಿಜೆಪಿ ಒಪ್ಪಿಕೊಂಡAತಾಯಿತು.

ಸಿದ್ದರಾಮಯ್ಯನವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನೂ ಮೀರಿ ಸಿದ್ದರಾಮಯ್ಯ ಅಭಿಮಾನಿ ಬಳಗಗಳು ಪ್ರತ್ಯೇಕ ಪ್ರತಿಭಟನೆ ಮಾಡುವ ಮೂಲಕ ಸಿದ್ದರಾಮಯ್ಯ ಪಕ್ಷ ಮೀರಿದ ಜನನಾಯಕರಾಗಿ ಜಾತಿ ಮೀರಿದ ಮುತ್ಸದ್ಧಿಯಾಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಒಂದು ವಿದ್ಯಮಾನವಾಗಿ ರೂಪುಗೊಂಡಿದ್ದಾರೆ.

ಭಾರತವೆಂಬ ಉಪಖಂಡದ ಸಾವಿರಾರು ವರ್ಷಗಳ ಬಹು ಸಂಸ್ಕೃತಿಯ, ಬಹು ಭಾಷೆಯ ಮಂಡಲವನ್ನು ಕಮಂಡಲದಲ್ಲಿ ತುಂಬಿಸಿಡುವ ವೈದಿಕರ ವ್ಯರ್ಥ ಪ್ರಯತ್ನವೇ ಇವತ್ತು ಸಿದ್ದರಾಮಯ್ಯನವರನ್ನು ಒಂದು ವಿದ್ಯಮಾನವನ್ನಾಗಿ ರೂಪಿಸಿದೆ.