ಭೀಷ್ಮ ಪ್ರತಿಜ್ಞೆ ಮತ್ತು ಇತರೆ ಒಪ್ಪಂದಗಳ ಹಿಂದೆ...
"ಕೊಟ್ಟ ಮಾತಿಗೆ ತಪ್ಪಲಾರೆನು" ಎಂಬ ಗೋವಿನ ಹಾಡು,"ಸುಳ್ಳನ್ನೇ ಹೇಳುವುದಿಲ್ಲ" ಎಂಬ ಹರಿಶ್ಚಂದ್ರನ ನಿಲುವು ಇವೆಲ್ಲಕ್ಕೂ ಬೆಲೆಯೇ ಇಲ್ಲವೆಂದಲ್ಲ, ಆದರೆ ಪ್ರತೀ ಮೌಲ್ಯಗಳೂ ಕಾಲಕ್ಕನುಗುಣವಾಗಿ ಬದಲಾವಣೆಯನ್ನ ಕೇಳುತ್ತವೆ, ಮಾತೊಂದನ್ನು ಆಡಿದ್ದಷ್ಟಕ್ಕೇ ಹುಂಬತನದಲ್ಲಿ ತಗಲಾಕಿಕೊಳ್ಳುವುದಕ್ಕಿಂತ ಅದರಿಂದಾಗುವ ಎಡವಟ್ಟುಗಳ ಬಗ್ಗೆಯೂ ಯೋಚಿಸಬೇಕು, ಕ್ಷಮೆ, ಬದಲಾವಣೆ, ರೀ ಅನಲೈಸಿಂಗ್,ರೀ ಥಿಂಕಿಂಗ್ ಅನ್ನುವ ಕಾನ್ಸೆಪ್ಟೇ ಇಲ್ಲದೇ ಹೋದರೆ ಏನೆಲ್ಲಾ ಅನಾಹುತಗಳು ಆಗಿಬಿಡುವ ಸಾಧ್ಯತೆಗಳಿವೆ ಎನ್ನುತ್ತಾರೆ ಲೇಖಕಿ , ಕತೆಗಾತಿ ದಯಾ ಗಂಗನ ಘಟ್ಟ
ಚಿಂತನೆ

ದಯಾ ಗಂಗನಘಟ್ಟ
ತಿರುನೀಲಕಂಟ ಮತ್ತು ಮುತ್ತಯ್ದೆ ಎಂಬ ಹೆಸರಿನ ಗಂಡಹೆಂಡತಿ ಇದ್ದರು. ಇವರಿಬ್ಬರು ಶಿವನ ಪರಮಭಕ್ತರು, ಒಂದು ದಿನ ತಿರುನೀಲಕಂಟನು ನಡು ಇರುಳಿನವರೆಗೂ ದೇಗುಲದಲ್ಲಿ ಶಿವ ಪೂಜೆ ಮಾಡಿ ಮನೆಗೆ ಹಿಂತಿರುಗುವಾಗ, ವಿಳಾಸಿನಿಯೊಬ್ಬಳು ತಾನು ಊಟ ಮಾಡಿದ ತಟ್ಟೆಯ ಎಂಜಲ ನೀರನ್ನು ತನ್ನ ಮನೆಯ ಉಪ್ಪರಿಗೆಯಿಂದ ಹೊರಕ್ಕೆ ಎಸೆಯುತ್ತಾಳೆ, ಎಂಜಲನೀರು ಇವನ ಮೇಲೆ ಬೀಳುತ್ತದೆ. ವಿಳಾಸಿನಿಯು ತನ್ನ ತಪ್ಪಿಗಾಗಿ ನೊಂದು, ಉಪ್ಪರಿಗೆಯಿಂದ ಇಳಿದುಬಂದು, ಅವನನ್ನು ತನ್ನ ಮನೆಯೊಳಕ್ಕೆ ಕರೆದುಕೊಂಡು ಹೋಗಿ, ಕಂಪಿನಿಂದ ಕೂಡಿದ ವಸ್ತುಗಳನ್ನು ಮಯ್ಗೆಲ್ಲ ಸವರಿ, ಬಿಸಿನೀರಿನಿಂದ ಮೀಯಿಸಿ, ಬೆಲೆಬಾಳುವ ಬಟ್ಟೆಗಳನ್ನು ಉಡಿಸಿ, ಕಳುಹಿಸುತ್ತಾಳೆ. ಮನೆಗೆ ಬಂದ ತಿರುನೀಲಕಂಟನ ಸೊಗಸನ್ನು ಕಂಡು ಮಡದಿ ಮುತ್ತಯ್ದೆಯು ಗಂಡನ ನಡತೆಯ ಬಗ್ಗೆ ಅನುಮಾನಗೊಂಡು ಮನದೊಳಗೆ ಕಳವಳಪಡುತ್ತಾಳೆ. ಆದರೆ ಅದನ್ನು ಹೊರಗೆ ತೋರಿಸಿಕೊಳ್ಳದೆ, ಎಂದಿನಂತೆ ಗಂಡನಿಗೆ ಉಣಬಡಿಸಿ ಉಪಚಾರ ಮಾಡಿ ಮಲಗಿಕೊಂಡಾಗ, ತಿರುನೀಲಕಂಟನು ಮುತ್ತಯ್ದೆಯನ್ನು ತಬ್ಬಿಕೊಳ್ಳಲು ಹೋಗುತ್ತಾನೆ, ಸಿಟ್ಟಿನಲ್ಲಿದ್ದ ಮುತ್ತಯ್ದೆಯು ಕೆರಳಿ ಕೆಂಡವಾಗಿ,”ಮುಟ್ಟಿದೊಡೆ ಶಿವನಾಣೆ” ಎಂದುಬಿಡುತ್ತಾಳೆ. ಶಿವನ ಒಲವಿನ ಕಿಂಕರನಾಗಿದ್ದ ತಿರುನೀಲಕಂಟನಿಗೆ ಹೆಂಡತಿಯಿಕ್ಕಿದ ಆಣೆಯ ಮಾತು ಮನಕ್ಕೆ ದೊಡ್ಡ ಪೆಟ್ಟನ್ನು ನೀಡಿದರೂ, ಆ ಗಳಿಗೆಯಿಂದಲೇ ಅದರಂತೆಯೇ ನಡೆದುಕೊಳ್ಳಲು ತೀರ‍್ಮಾನಿಸುತ್ತಾನೆ. ಹೀಗೆ ಹಿಂದು ಮುಂದಿಲ್ಲದೆ ಇಟ್ಟಆಣೆಯ ಕಟ್ಟುಪಾಡಿಗೆ ಇಬ್ಬರೂ ಕಟ್ಟುಬಿದ್ದು,ತೊಂಬತ್ತು ವರ್ಷದ ವರೆಗೂ ಒಬ್ಬರನ್ನೊಬ್ಬರು ಮುಟ್ಟದೆ ಬಾಳುತ್ತಾರೆ.
ಇದು "ಹರಿಹರ" ನ "ತಿರುನೀಲಕಂಟ ರಗಳೆ"ಯ ಒಂದು ಕತೆ,
ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುವ ಜೀವಗಳೆರಡು,ಬದುಕನ್ನ ಬಂದಂತೆ ಜೀವಿಸುವ ಹುಡುಗ ಅವನಾದರೆ, ಬದುಕು ದೇವರ ಕೊಡುಗೆ ಎಂದುಕೊಳ್ಳುವ ಹುಡುಗಿ ಅವಳು, ಹೀಗಿರುವಾಗ ಆ ಹುಡುಗನಿಗೆ ಆಕ್ಸಿಡೆಂಟ್ ಆಗಿಬಿಡುತ್ತದೆ, ಸಾವಿನ ಜೊತೆ ಅವನು ಹೋರಾಡುತ್ತಿದ್ದ ಕಠಿಣ ಸಮಯದಲ್ಲಿ ಅವನು ಬದುಕುಳಿದರೆ ಮತ್ತೆ ಅದಕ್ಕೆ ಬದಲಾಗಿ ನನಗೆ ತುಂಬಾ ಇಷ್ಟವಾದದ್ದನ್ನ ಬಿಟ್ಟುಬಿಡುವುದಾಗಿ ದೇವರಿಗೆ ಮಾತು ಕೊಟ್ಟುಬಿಡುತ್ತಾಳೆ ಹುಡುಗಿ,, ಅವಳಿಗೆ ತುಂಬಾ ಇಷ್ಟ ಅಂದ್ರೆ ಅವನೇ,ಬದುಕುಳಿದ ಅವನು ಕೇಳುತ್ತಾನೆ ನೀನೇ ಇರದ ಮೇಲೆ ನನ್ನನ್ನು ಯಾಕಾದ್ರೂ ಬದುಕಿಸಿದೆ ಅಂತ,ಇದು ಮೂವಿಯೊಂದರ ಕತೆ.
ಈ ಪ್ರಸಂಗಗಳಲ್ಲಿ ಒಬ್ಬರ ಒಂದು ನಿರ್ಧಾರದಿಂದ, ಮಾತಿಗೆ ತಪ್ಪುವುದಿಲ್ಲ ಎಂದು ನಿಂತುಬಿಡುವ ರೀತಿಯಿಂದ ಮುಂದೆ ಅವರು ಮತ್ತು ಅವರ ಸಂಪರ್ಕಕ್ಕೆ ಬರುವ ಎಲ್ಲರೂ ಅನುಭವಿಸುವ ನೋವಿದೆಯಲ್ಲ ಅದು ಮತ್ತು ಯಾರಿಗೂ ಒಳ್ಳೆಯ ಫಲಿತಾಂಶ ಕೊಡದ ಒಂದು ಕಳೆದುಕೊಳ್ಳುವಿಕೆ ಎಷ್ಟು ಸರಿ ಎಂಬ ವಿಷಯ ನನ್ನನ್ನ ಬಹಳಾ ಕಾಡಿದ ವಿಷಯ.
" ನಾನು ಮಗುವನ್ನು ಹೆರುವುದಿಲ್ಲ" ಎಂದು ಹೆಣ್ಣು ತೀರ್ಮಾನಿಸಿ ಅದಕ್ಕೆ ಪಕ್ಕಾಗಿ ಉಳಿದು ಬಿಟ್ಟರೆ ಅದೇ ಜೀನ್ ಮುಂದಿನ ಪೀಳಿಗೆಗೂ ಪಾಸ್ ಆಗುವ ಸಾಧ್ಯತೆಗಳ ಬಗ್ಗೆ ಒಮ್ಮೆ ಯೋಚಿಸಿ, ಬದಲಾವಣೆ,ಚಲನೆ ಪ್ರಕೃತಿ ನಿಯಮ,ನಾವೇ ಹಾಕಿಕೊಂಡ ಕಟ್ಟುಪಾಡುಗಳಿಗೆ ಕಟ್ಟುಬಿದ್ದು ನಮ್ಮ ಮುಂದಿನ ತಲೆಮಾರಿನವರೆಗೂ ಅವು ತಂದಿಡುವ ಅವಘಡಗಳ ಬಗ್ಗೆ ಯೋಚಿಸದೇ ಇರುವುದು ಹೆಡ್ಡತನವಾಗುತ್ತದೆ, ಚೇಂಜ್ ಎಂಬ ನ್ಯಾಚುರಲ್ ಫಿನಾಮಿನಾವನ್ನೇ ಬದಲಿಸುವುದು ಸ್ವತಃ ನಮ್ಮನ್ನೂ,ನಮ್ಮ ಸುತ್ತಲಿನವರ ಬದುಕನ್ನೂ ಅಲ್ಲಾಡಿಸಿ ಬಿಡಬಹುದು.
ಪ್ರತಿಜ್ಞೆ ಮಾಡುವುದನ್ನು ಒಂದು ಅತ್ಯುತ್ತಮ ಮೌಲ್ಯ ಎಂದು ಗುರುತಿಸುತ್ತೇವೆ,ಅಂತಹದ್ದೊಂದು ಮೌಲ್ಯದಿಂದ ಆದ ಡ್ಯಾಮೇಜ್ ಗಳೇನು ಎಂದು ಎಷ್ಟು ಯೋಚಿಸುತ್ತೇವೆ? ಅದೆಷ್ಟೇ ಒಳ್ಳೆಯ ನಿರ್ಧಾರವಾದರೂ ಅದು ನಿಂತ ನೀರಾದರೆ,ಮತ್ತದು ಮುಂದಿನ ಒಂದೊಂದು ತಲೆಮಾರಿಗೂ ಮುಂದುವರೆಯುತ್ತಾ ಹೋದರೆ, ಅದರ ಅಗತ್ಯವೆಷ್ಟು?
ಸ್ಥಾಪಿತ ಮೌಲ್ಯಗಳು ಅದೆಷ್ಟೇ ಮೌಲ್ಯಯುತವಾದವಾದರೂ ಕಾಲಘಟ್ಟಕ್ಕನುಗುಣವಾಗಿ ಅವುಗಳ ಅಮೆಂಡ್ಮೆಂಟ್ ಆಗದೇ ಹೋದರೆ ಅವು ಉಳಿಯುವುದಿಲ್ಲ, ಒಬ್ಬ ವ್ಯಕ್ತಿ ತೆಗೆದುಕೊಳ್ಳುವ ಯಾವ ನಿರ್ಧಾರಗಳೂ ವೈಯಕ್ತಿಕವಲ್ಲ,ಆಧ್ಯಾತ್ಮ ವನ್ನು ಬಿಟ್ಟು ಉಳಿದೆಲ್ಲವೂ ಪರ್ಸನಲ್ ಬಟ್ ಸೋಷಿಯಲ್ ನಡೆಗಳೇ.
ಇವತ್ತು ಇಷ್ಟೆಲ್ಲಾ ಯೋಚನೆಗಳೊಂದಿಗೆ ನಾನು ನಿಮ್ಮೊಂದಿಗೆ ಮಾತಿಗೆ ಇಳಿಯುತ್ತಿರುವುದು ನಮ್ಮ ಕವಿ ಪಂಪ 'ಅತ್ಯುನ್ನತಿಯೊಳ್ ಅಮರ ಸಿಂಧೂದ್ಭವಂ' ಎಂದು ಕೈವಾರಿಸಿದ ಭೀಷ್ಮ ನ ಬಗ್ಗೆ ಮತ್ತು ಅವನು ತೆಗೆದುಕೊಂಡ ಬಹುದೊಡ್ಡ ಪ್ರತಿಜ್ಞೆಯ ಬಗ್ಗೆ. ನಾನಿಲ್ಲಿ ಗಾಂಗೇಯನ ಕತೆ ಹೇಳುವುದಿಲ್ಲ, ತಂದೆಯ ಒಂದು ಸಣ್ಣ ಆಸೆಯನ್ನು ತೀರಿಸುವ ಸಲುವಾಗಿ ಹಿಂದೂ ಮುಂದೂ ಯೋಚಿಸದೆ ಬದುಕಿನ ಬಹುದೊಡ್ಡ ನಿರ್ಧಾರವನ್ನು ದೇವವ್ರತ ತೆಗೆದುಕೊಂಡು ಬಿಡುತ್ತಾನೆ, ಅದರಿಂದ ಭೀಷ್ಮನೆಂದೂ ಜನಪ್ರಿಯನಾಗಿಬಿಡುತ್ತಾನೆ, ಇಡೀ ಮಹಾಭಾರತ ಆಧರಿತ ಕಾವ್ಯಗಳನ್ನು ಹಿಡಿಯಾಗಿ ನೋಡಿದರೆ, ಪಂಪ,ರನ್ನ,ಕುಮಾರವ್ಯಾಸ ಇತ್ಯಾದಿ ಯಾವುದೇ ಕವಿಯ ಕಾವ್ಯದಲ್ಲೂ ಭೀಷ್ಮಪರ್ವ ಬಂದೇ ಬರುತ್ತದೆ, ಅಷ್ಟು ಪ್ರಧಾನವಾದದ್ದು ಭೀಷ್ಮನ ಪಾತ್ರ. ಮಹಾಭಾರತದ ಪ್ರತಿ ಘಟನೆಯು ಭೀಷ್ಮನ ನಿರ್ಧಾರದಿಂದ ಹೊರತಾಗದಷ್ಟು ಈ ಪಾತ್ರ ಮುಖ್ಯವಾಗಿದೆ. ಮಹಾಭಾರತ ಯುದ್ಧ ಆರಂಭಕ್ಕೂ ಅದರ ಅಂತ್ಯಕ್ಕೂ ಈ ಪಾತ್ರ ಪರೋಕ್ಷ-ಅಪರೋಕ್ಷವಾಗಿ ಕಾರಣವಾಗುತ್ತದೆ. ಇಂತಹ ಭೀಷ್ಮನಿಗೆ ಆ ರೀತಿಯಾದ್ದೊಂದು ಮಾತು ಕೊಡಲು ಇದ್ದ ಅಧಿಕಾರ ಯಾವುದು? ಅದು ಅವನ ವೈಯಕ್ತಿಕ ಅಂತಾದರೆ ಅದು ಅವನೊಬ್ಬನ ಬದುಕಿಗಷ್ಟೇ ಸೀಮಿತವಾಗಿ ಉಳಿಯಿತಾ? ಒಂದು ಗುರುತರ ಜಾಗದಲ್ಲಿದ್ದ ಭೀಷ್ಮ ಸಾಮಾಜಿಕವಾಗಿಯೂ ಯೋಚಿಸಬೇಕಿತ್ತಲ್ಲವಾ?
ಶಂತನು ಚಕ್ರವರ್ತಿಯು ಯೋಜನಗಂಧಿಯ ಕೈ ಹಿಡಿದುಕೊಂಡುದನ್ನು ಪಂಪಕವಿಯು “ದಿಬ್ಯಂಬಿಡಿವಂತೆವೋಲ್” ಎನ್ನುತ್ತಾನೆ, ಕುರುಕುಲದ ರಾಜವಂಶವು ಮುಂದಿನ ದಿನಗಳಲ್ಲಿ ನಾನಾ ಬಗೆಯ ತೊಡಕುಗಳಿಗೆ ಗುರಿಯಾಗಲಿದೆ ಎಂದು ಈ ಉಪಮೆಯ ಮೂಲಕ ಸೂಚಿಸಿದ್ದಾನೆ, ಇದು ಆ ಪ್ರತಿಜ್ಞೆಯ ಎಡವಟ್ಟನ್ನು,ಜಾಳನ್ನು ತೆರೆದಿಡುತ್ತದೆ, ನಾನು ಅಂತ ಬಂದಾಗ ನಾನೊಬ್ಬಳೇ ಅಲ್ಲಿರುವುದಿಲ್ಲ,ನನ್ನ ಮಕ್ಕಳು ಮರಿ, ನನ್ನ ಕುಟುಂಬ, ನನ್ನ ಸುತ್ತಲಿನ ಸಮಾಜ ಇವೆಲ್ಲವನ್ನೂ ಒಳಗೊಂಡೇ ನಾನು,ಅದನ್ನು ಮರೆತು ಮನುಷ್ಯ ಯಾವತ್ತೂ ಮಾತಾಡಬಾರದು, ಭೀಷ್ಮ ಪ್ರತಿಜ್ಞೆ ಅನ್ನುವುದೊಂದು ವ್ಯಾಲ್ಯೂ ಹೌದು, ಆ ಮೌಲ್ಯ ಅನ್ನುವುದು ಸರಿಯಾದ ರೀತಿಯಲ್ಲಿ ಬಳಕೆ ಆಗಲಿಲ್ಲ ಅಂತಾದಾಗ ಅದೆಷ್ಟು ಸರಿ?
ಪ್ರಭಾವಳಿಗಳನ್ನೆಲ್ಲಾ ಬದಿಗಿರಿಸಿ ನೋಡಿದಾಗ ಧರ್ಮಬೀರು ಎನಿಸಿದ ಭೀಷ್ಮ, ಪ್ರತಿಜ್ಞೆ ಎಂಬ ಅರ್ಥವಿಲ್ಲದ ಹಳೆಯ ಸಿದ್ಧಾಂತಕ್ಕೆ ಕಟ್ಟುಬಿದ್ದು ಕೊನೆಯ ತನಕ ತನ್ನ ತಪ್ಪುಗಳನ್ನು ಬದಲಾವಣೆಗೆ ಒಳಪಡಿಸದೇ ಧರ್ಮ ಅಧರ್ಮಗಳ ಗೊಂದಲದಲ್ಲೇ ಉಳಿದ ಒಬ್ಬ ದುರಂತ ನಾಯಕನಾಗೇ ಕಾಣುತ್ತಾನೆ.
ಮನೆಯ ಹಿರಿಮಗನಾದ ಯುವರಾಜನಿಗೆ ತಂದೆಯು ಹೆಣ್ಣನ್ನು ಹುಡುಕಿದ್ದರೆ, ಮಗ ತನ್ನ ಮದುವೆಯ ಬಗ್ಗೆ ಯೋಚಿಸಿದ್ದರೆ ಇಡೀ ಕುರುವಂಶದ ಕತೆಯೇ ಬೇರೆ ಇರುತ್ತಿತ್ತೇನೋ, ಕುಮಾರವ್ಯಾಸನ ಭೀಷ್ಮ ಮಹಾಭಾರತದ ವೃದ್ಧ, ಜ್ಞಾನದಿಂದ, ವಯಸ್ಸಿನಿಂದ. ಹಿರಿಯನಾದವ ಸರಿಯಾದ ನಿಲುವನ್ನು ತೆಗೆದುಕೊಳ್ಳದೆ, ತಿಂದ ಉಪ್ಪಿಗೆ ತಪ್ಪಬಾರದೆಂಬ ಋಣದ ಒಣ ನಿರ್ಧಾರಕ್ಕೆ ಬಿದ್ದು ಸಂಕಟ ಪಡುವಂತೆ ಕಂಡು ಬರುತ್ತದೆ. ಹೀಗಾಗಿಯೇ "ವಟವೃಕ್ಷದಂತಿರಬೇಕಾದವನು ಸಣ್ಣ ಸಣ್ಣವರ ಬಿದಿರುಗಿಚ್ಚಿಗೆ ಮೇಹುಗಾಡಾದ" ಮಹಾದಾರುಣ ಸನ್ನಿವೇಶವನ್ನು ಮಹಾಭಾರತದಲ್ಲಿ ನೋಡುತ್ತೇವೆ, ಕವಿ ಕುಮಾರವ್ಯಾಸ ಹೇಳುವಂತೆ ತಾಯಿ ಜಾಹ್ನವಿಯ ಮೊಲೆವಾಲನುಂಡ ಇಂತಹವನ ಪಾತ್ರ ಒಮ್ಮೊಮ್ಮೆ ತೋಲನೆ ತಪ್ಪಿದಂತೆ ಇದೆ.ಪಟ್ಟಿಮಾಡುತ್ತಾ ಹೋದರೆ ಭೀಷ್ಮನ ಕುರಿತು ಹುಟ್ಟುವ ಪ್ರಶ್ನೆಗಳು ಹಲವಾರಿವೆ.
ಅದರಲ್ಲಿ ಮೊದಲನೆಯದಾಗಿ, ಭೀಷ್ಮನ ಮದುವೆಯಾಗದೆ ಉಳಿವ ಪ್ರತಿಜ್ಞೆಯಿಂದಾಗಿ ಸತ್ಯವತಿ ಇಡೀ ಜೀವನವನ್ನ ಇಂತದೊಂದು ನಿರ್ಧಾರ ನನ್ನಿಂದಲೇ ಆದದ್ದು ಎಂಬ ಗಿಲ್ಟ್ ನಲ್ಲೇ ಕಳೆದುಬಿಡುವಂತೆ ಮಾಡುತ್ತದೆ.
ಮತ್ತೆ ಅಂಬಾ ಪ್ರಕರಣ ಬಹಳ ಚರ್ಚೆಗೊಳಪಟ್ಟ ವಿಚಾರ. ಅಪ್ರತಿಮ ವೀರ ಭೀಷ್ಮ ತನ್ನ ಮಲಮಕ್ಕಳನ್ನ ತಮ್ಮ ಮದುವೆಯ ಸ್ವಯಂವರಕ್ಕೆ ಕಳಿಸದೇ ತಾನೇ ಯಾಕೆ ಹೋಗಬೇಕಿತ್ತು,ಸ್ವಯಂವರದ ಪದ್ಧತಿಯ ನಿಯಮದಂತೆ ವಧು ಆಕಾಂಕ್ಷಿ ಭಾಗವಹಿಸುವ ಜಾಗದಲ್ಲಿ ತಾನೇ ಹೋಗಿ ನಿಂತು, ಮೂವರು ರಾಜಕುಮಾರಿಯರನ್ನೂ ಹೊತ್ತು ತರುತ್ತಾನೆ,ಇಲ್ಲಿ ಭೀಷ್ಮನ ಈ ನಡೆಯಿಂದಾಗಿ ಬದುಕು ಕಳೆದುಕೊಳ್ಳುವ ಹೆಣ್ಣು ಅಂಬೆ,ಸ್ವಯಂವರಕ್ಕೆ ಬರುವ ತನ್ನ ಪ್ರೇಮಿ ಸಾಲ್ವನನ್ನು ವರಿಸುವ ಆಸೆಯಲ್ಲಿದ್ದ ಆಕೆಗೆ ಆಘಾತ, ಭೀಷ್ಮನಂತಾ ವೀರನ ಮುಂದೆ ಸಾಲ್ವ ಸೋತುಹೋಗುತ್ತಾನೆ, ಅಂಬೆ ತನ್ನ ಪ್ರೇಮದ ಬಗ್ಗೆ ಹೇಳಿದಾಗ ಭೀಷ್ಮ ಹೋಗು ಸಾಲ್ವನ ಬಳಿಗೆ ಅಂತ ಕಳಿಸಿಬಿಡುತ್ತಾನೆ,ಅಂಬೆ ಸಾಲ್ವರಾಜನನ್ನು ಭೇಟಿ ಮಾಡಿ ಮದುವೆಯ ಪ್ರಸ್ತಾಪ ಮುಂದಿಡುತ್ತಾಳೆ. ಆದರೆ ಭೀಷ್ಮನಿಂದಾದ ಸೋಲಿನಿಂದ ಅವಮಾನಿತನಾಗಿದ್ದ ಸಾಲ್ವನು, “ಭೀಷ್ಮ ಸ್ವಯಂವರದಲ್ಲಿ ಗೆದ್ದು ಕರೆದುಕೊಂಡು ಹೋದವಳನ್ನು ತಾನು ಮದುವೆಯಾಗುವುದಿಲ್ಲಾ, ಆತ ಕರೆದೊಯ್ಯುವಾಗ ಸಂತೋಷದಿಂದ ಆತನೊಡನೆ ಹೊರಟ ನೀನು, ಆತನ ಹೆಂಡತಿಯಾದ್ದರಿಂದ, ಮತ್ತೆ ನಾನು ಮದುವೆಯಾಗುವುದು ಕ್ಷತ್ರಿಯಧರ್ಮವಲ್ಲಾ” ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಸಾಲ್ವನ ನಿರಾಕರಣೆ, ತಾನು ಎಣಿಸದ ದೊಡ್ಡ ಆಘಾತವಾಗಿ ಅವಳ ಬದುಕನ್ನು ಆವರಿಸುತ್ತದೆ. ಸಾಲ್ವನನ್ನು ಒಪ್ಪಿಸಲಾಗದೆ ನೊಂದ ಮನಸ್ಸಿನ ಅಂಬೆ ಮತ್ತೆ ಹಸ್ತಿನಾಪುರಕ್ಕೆ ಬರುತ್ತಾಳೆ. ಆಕೆಯ ಬದುಕು ಆಕೆ ರಚಿಸಿ ಕೊಂಡಿದ್ದ ಎಲ್ಲ ಕನಸುಗಳು ನುಚ್ಚು ನೂರಾಗಿ, ತಾನು ಹಿಂದಿರುಗಿ ಹೋಗಲಾರದ ಗಳಿಗೆ ಬಂದು ನಿಂತು ,ಹೊತ್ತು ತಂದೆಯಲ್ಲಾ ಪತಿಯಾಗು ನೀನೇ ಭೀಷ್ಮ ಎನ್ನುತ್ತಾಳೆ,ಈತ ತನ್ನ ಪ್ರತಿಜ್ಞೆಯನ್ನು ಮುಂದಿಟ್ಟು ತಿರಸ್ಕರಿಸುತ್ತಾನೆ, ಅವಳೊಬ್ಬ ಪರಿತ್ಯಕ್ತೆಯಾಗಲು ಇದು ನಾಂದಿಯಾಗುತ್ತದೆ.
ಅಷ್ಟು ದೊಡ್ಡ ಪ್ರತಿಜ್ಞೆ ಮಾಡಿದ ಈತ ನ್ಯಾಯವಲ್ಲದ ವಿಷಯಗಳಿಗೆ ಕಂಠಿ ಹಿಡಿದು ಕೂರುವುದು ಹಿರಿತನದ ಲಕ್ಷಣವಲ್ಲ ಎಂದು ಯಾಕೆ ಬದಲಾವಣೆಗೆ ಮುಂದಾಗುವುದಿಲ್ಲ?
ಭೀಷ್ಮನ ಹಿನ್ನೆಲೆಯಲ್ಲಿ ಪ್ರತಿಜ್ಞೆ ,ಮಾತು, ಇವೆಲ್ಲ ಉಡದಂತೆ ಪಟ್ಟು ಹಿಡಿದು ಕೂರಬೇಕಾದ ವಿಷಯಗಳಲ್ಲ ಎನಿಸದಿರದು,"ಅರ್ಜುನನನ್ನ ಯಾರೂ ಸೋಲಿಸದ ಬಿಲ್ಲುಗಾರನಾಗಿಸುತ್ತೇನೆ" ಎಂಬ ದ್ರೋಣನ ಪ್ರತಿಜ್ಞೆ ಗೆ ಬಲಿಯಾದದ್ದು ಏಕಲವ್ಯನ ಇಡೀ ಬದುಕು, "ತೊಟ್ಟ ಬಾಣವ ತೊಡಲಾರೆ" ಎಂದು ಕರ್ಣನು ಕುಂತಿಗೆ ಕೊಟ್ಟ ಮಾತು ಅವನ ಸಾವಿಗೇ ಮುಳುವಾಗುತ್ತದೆ, " ಬೇಡಿದ ವರವನ್ನು ಕೊಡುವೆ" ಎಂದು ದಶರಥ ಕೈಕಯಿಗೆ ಕೊಟ್ಟ ಮಾತು ರಾಮಾಯಣವನ್ನೇ ನಡೆಸುತ್ತದೆ, "ಕೊಟ್ಟ ಮಾತಿಗೆ ತಪ್ಪಲಾರೆನು" ಎಂಬ ಗೋವಿನ ಹಾಡು,"ಸುಳ್ಳನ್ನೇ ಹೇಳುವುದಿಲ್ಲ" ಎಂಬ ಹರಿಶ್ಚಂದ್ರನ ನಿಲುವು ಇವೆಲ್ಲಕ್ಕೂ ಬೆಲೆಯೇ ಇಲ್ಲವೆಂದಲ್ಲ,ಆದರೆ ಪ್ರತೀ ಮೌಲ್ಯಗಳೂ ಕಾಲಕ್ಕನುಗುಣವಾಗಿ ಬದಲಾವಣೆಯನ್ನ ಕೇಳುತ್ತವೆ, ಮಾತೊಂದನ್ನು ಆಡಿದ್ದಷ್ಟಕ್ಕೇ ಹುಂಬತನದಲ್ಲಿ ತಗಲಾಕಿಕೊಳ್ಳುವುದಕ್ಕಿಂತ ಅದರಿಂದಾಗುವ ಎಡವಟ್ಟುಗಳ ಬಗ್ಗೆಯೂ ಯೋಚಿಸಬೇಕು, ಕ್ಷಮೆ,ಬದಲಾವಣೆ, ರೀ ಅನಲೈಸಿಂಗ್,ರೀ ಥಿಂಕಿಂಗ್ ಅನ್ನುವ ಕಾನ್ಸೆಪ್ಟೇ ಇಲ್ಲದೇ ಹೋದರೆ ಏನೆಲ್ಲಾ ಅನಾಹುತಗಳು ಆಗಿಬಿಡುವ ಸಾಧ್ಯತೆಗಳಿವೆ.
bevarahani1