ʼಹಿಂದಿʼ ಮಾತ್ರ ಎಂಬ ಆಲೋಚನೆಯೇ ತಪ್ಪು

ಕನ್ನಡಕ್ಕೆ ಅನುವಾದ-ನಾ-ದಿವಾಕರ

ʼಹಿಂದಿʼ ಮಾತ್ರ ಎಂಬ ಆಲೋಚನೆಯೇ ತಪ್ಪು

ದಕ್ಷಿಣ ಭಾರತದಲ್ಲಿ ಪ್ರಬಲವಾದ ಸಾರ್ವಜನಿಕ ಅಭಿಪ್ರಾಯವು ಆಂಗ್ಲ ಭಾಷೆಯು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಮುಂದುವರೆಯಬೇಕು ಎಂದೇ ಆಗಿದೆ. ಇಂದು ಒಕ್ಕೂಟವು ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಹೊಂದಿದೆ. ಕೆನಡಾದಲ್ಲೂ ಸಹ ಆಂಗ್ಲ ಮತ್ತು ಫ್ರೆಂಚ್‌ ಭಾಷೆಗಳು ಅಧಿಕೃತ ಭಾಷೆಗಳಾಗಿವೆ. ಈ ಸನ್ನಿವೇಶದಲ್ಲಿ, ಆಡಳಿತ ನೀತಿ ನಿರೂಪಕರು ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಗಳನ್ನಾಗಿ ಮುಂದುವರೆಸುವ ಸಾಂವಿಧಾನಿಕ ನಿಯಮ ರೂಪಿಸುವ ಬಗ್ಗೆ ಯೋಚಿಸಬೇಕಿದೆ.

 

‘ಹಿಂದಿ ಮಾತ್ರ’ - ಎಂಬ ಆಲೋಚನೆಯೇ ತಪ್ಪು

 ಕನ್ನಡಕ್ಕೆ : ನಾ ದಿವಾಕರ

 

ಸೆಪ್ಟಂಬರ್‌ 9 2022ರಂದು ಭಾರತದ ರಾಷ್ಟ್ರಪತಿಗಳಿಗೆ ಸಲ್ಲಿಸಲಾದ ಅಧಿಕೃತ ಭಾಷಾ ಸಮಿತಿಯ 11 ನೆಯ ಸಂಪುಟದ ಶಿಫಾರಸುಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಚರ್ಚೆಗೊಳಗಾಗಿಲ್ಲ. ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳ ಹೊರತಾಗಿ ಮತ್ತಾವುದೇ ರಾಜಕೀಯ ನಾಯಕರು ಈ ಶಿಫಾರಸುಗಳಿಗೆ ಪ್ತತಿಕ್ರಿಯೆಯನ್ನು ನೀಡಿಲ್ಲ.

 

ಮುದ್ರಣ ಮಾಧ್ಯಮದಲ್ಲಿ ವರದಿಯಾಗಿರುವಂತೆ, ಸಮಿತಿಯ ಪ್ರಮುಖ ಶಿಫಾರಸುಗಳೆಂದರೆ, ಕೇಂದ್ರ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಆಂಗ್ಲ ಬದಲು ಹಿಂದಿ ಭಾಷೆಯನ್ನು ಅಳವಡಿಸಬೇಕು, ಕೇಂದ್ರೀಯ ವಿದ್ಯಾಲಯಗಳಲ್ಲಿ, ಐಐಟಿಗಳಲ್ಲಿ, ಐಐಎಮ್‌ಗಳಲ್ಲಿ ಬೋಧನಾ ಮಾಧ್ಯಮವಾಗಿ ಹಿಂದಿ ಭಾಷೆಯೊಂದೇ ಇರಬೇಕು, ರಾಜ್ಯ ಸರ್ಕಾರಗಳು ಹಿಂದಿ ಭಾಷೆಯನ್ನು ಪ್ರಸಾರ ಮಾಡುವುದು ಸಾಂವಿಧಾನಿಕ ಹೊಣೆಯಾಗಿರಬೇಕು ಇತ್ಯಾದಿ. ಅಧಿಕೃತ ಭಾಷಾ ಸಮಿತಿಯು ಒಂದು ಶಾಸನವಿಹಿತ ಸಮಿತಿಯಾಗಿದ್ದು ಇದನ್ನು 1963ರ ಅಧಿಕೃತ ಭಾಷಾ ಕಾಯ್ದೆಯ ಅಡಿ ಸ್ಥಾಪಿಸಲಾಗಿತ್ತು. ಕೇಂದ್ರ ಸರ್ಕಾರದ ಆಡಳಿತ ನಿರ್ವಹಣೆಯಲ್ಲಿ ಹಿಂದಿ ಭಾಷಾ ಬಳಕೆಯ ಪ್ರಗತಿಯನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುವುದು ಈ ಸಮಿತಿಯ ಕರ್ತವ್ಯ. ಈ ಕಾಯ್ದೆಯ ಅನುಸಾರ                              ʼ ಈ ವರದಿಯ ಶಿಫಾರಸುಗಳಿಗೆ ಅನುಗುಣವಾಗಿ ಇಡಿಯಾಗಿ ಅಥವಾ ಭಾಗಶಃ ಅನುಸರಿಸುವಂತೆ ʼ ನಿರ್ದೇಶನ ನೀಡುವುದು ರಾಷ್ಟ್ರಪತಿಗಳ ಕರ್ತವ್ಯವಾಗಿರುತ್ತದೆ. (ಸೆಕ್ಷನ್‌ 4(4)) ಹಾಗಾಗಿ ಈ ಸಮಿತಿಯ ಶಿಫಾರಸುಗಳ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.

 

ಭಾರತದಲ್ಲಿ ಅಧಿಕೃತ ಭಾಷಾ ನೀತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಸಮಿತಿಯ ಶಿಫಾರಸುಗಳಿಗೆ ಇರುವ ವಿಶೇಷ ಸ್ಥಾನವೇ ನಿರ್ಣಾಯಕವಾಗಿರುತ್ತದೆ.  ಸೆಕ್ಷನ್‌ 4 (4)ರಲ್ಲಿ ಹೇಳಿರುವ,                      ʼ ಅನುಗುಣವಾಗಿ ʼ ಎಂಬ ಪದಗಳೇ ಈ ಶಿಘಾರಸುಗಳಿಗೆ ಇರುವ ನಿಯುಕ್ತತೆಯನ್ನು ಸೂಚಿಸುತ್ತದೆ. ಸಂವಿಧಾನದ ಪರಿಚ್ಛೇದ 343ರಲ್ಲಿ ದೇವನಾಗರಿ ಲಿಪಿಯ ಹಿಂದಿ ಒಕ್ಕೂಟದ ಅಧಿಕೃತ ಭಾಷೆ ಎಂದು ಘೋಷಿಸುತ್ತದೆ. ಸಂವಿಧಾನ ರಚಕ ಮಂಡಲಿಯಲ್ಲಿ ಅಧಿಕೃತ ಭಾ಼ಷೆಯ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿರುವುದು ತಿಳಿದೇ ಇದೆ. ಸಂವಿಧಾನದಲ್ಲಿರುವ ಅಧಿಕೃತ ಭಾಷೆಯ ಅಧ್ಯಾಯವು ವೈವಿಧ್ಯಮಯ ಅಭಿಪ್ರಾಯಗಳ ಪ್ರತಿಪಾದಕರು ಮಂಡಿಸಿದ ವಾದಗಳ ನಡುವೆ ಮೂಡಿದ ರಾಜಿ ಸೂತ್ರದ ಹಿನ್ನೆಲೆಯಲ್ಲಿ ರಚಿಸಲ್ಪಟ್ಟಿದೆ. ಅಂತಿಮವಾಗಿ ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆ ಎಂದು ಘೋಷಿಸಲಾಗಿತ್ತು. ಸಂವಿಧಾನಕ್ಕೆ ಚಾಲನೆ ದೊರೆತ ದಿನದಿಂದ 15 ವರ್ಷಗಳ ಅವಧಿಗೆ ಆಂಗ್ಲ ಸಹ ಅಧಿಕೃತ ಭಾಷೆಯಾಗಿರಲಿದೆ ಎಂದೂ ಹೇಳಲಾಗಿತ್ತು.  ಅಗತ್ಯವಾದಲ್ಲಿ ಸಂಸತ್ತು ಸೂಕ್ತ ಶಾಸನದ ಮೂಲಕ 15 ವರ್ಷಗಳ ನಂತರವೂ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಮುಂದುವರೆಸಬಹುದು ಎಂದು ಹೇಳಲಾಗಿತ್ತು. ಇದರಂತೆಯೇ ಸಂಸತ್ತು 1963ರಲ್ಲಿ ಅಧಿಕೃತ ಭಾಷಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು.  ಈ ಕಾಯ್ದೆಯನ್ವಯ, ಒಕ್ಕೂಟದ ಅವಶ್ಯಕತೆಗಳಿಗೆ ಮತ್ತು ಸಂಸದೀಯ ವ್ಯವಹಾರಗಳಿಗೆ ಹಿಂದಿಯೊಡನೆ ಆಂಗ್ಲ ಭಾಷೆಯನ್ನೂ ಅನಿರ್ದಿಷ್ಟ ಕಾಲ ಅಧಿಕೃತವಾಗಿ ಬಳಸಬಹುದು ಎಂದು ಘೋಷಿಸಲಾಗಿತ್ತು.

 

ಅಧಿಕೃತ ಭಾಷಾ ಸಮಿತಿಯು ನೀಡಲಾಗಿರುವ ಶಿಫಾರಸುಗಳಲ್ಲಿ ಸಮಿತಿಯು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, ಐಐಎಮ್‌ಗಳಲ್ಲಿ, ಐಐಟಿಗಳಲ್ಲಿ ಆಂಗ್ಲ ಬದಲು ಹಿಂದಿ ಭಾಷೆಯೇ ಬೋಧನಾ ಮಾಧ್ಯಮವಾಗಬೇಕು ಎಂದು ಹೇಳಿರುವುದು ರಾಷ್ಟ್ರಪತಿಗಳಿಗೂ ಒಂದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಸಮಿತಿಯ ವ್ಯಾಪ್ತಿಗೆ ಒಳಪಡಿಸಿದ ಅಂಶಗಳಲ್ಲಿ ಒಕ್ಕೂಟದ ಅಧಿಕೃತ ಭಾಷೆಯಾಗಿ ಹಿಂದಿ ಬಳಕೆಯ ಪ್ರಗತಿಯನ್ನು ರಾಷ್ಟ್ರಪತಿಗಳಿಗೆ ವರದಿ ಮಾಡುವುದಷ್ಟೇ ಮುಖ್ಯವಾಗಿರುತ್ತದೆ. ಇಲ್ಲಿ ವೃತ್ತಿಪರ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧನಾ ಮಾಧ್ಯಮಗಳ ಬಗ್ಗೆ ಶಿಫಾರಸು ಮಾಡುವುದು ಸಮಿತಿಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಸ್ಪಷ್ಟ. ಅಷ್ಟೇ ಅಲ್ಲದೆ, ಸಂಸತ್ತು ಕಾನೂನು ಜಾರಿ ಮಾಡುವ ಮೂಲಕ ಹಿಂದಿಯೊಂದಿಗೇ ಆಂಗ್ಲ ಸಹ ಅಧಿಕೃತ ಭಾಷೆಯಾಗಿ ಮುಂದುವರೆಯುತ್ತದೆ ಎಂದು ಹೇಳಿರುವಾಗ, ಇದೇ ಕಾಯ್ದೆಯಡಿ ರಚಿಸಲಾಗಿರುವ ಶಾಸನವಿಹಿತ ಸಮಿತಿಯೊಂದು ಆಂಗ್ಲ ಭಾಷೆಯನ್ನು ಕೈಬಿಡುವಂತೆ ಶಿಘಾರಸು ಮಾಡುವ ಅಧಿಕಾರ ಹೊಂದಿರುವುದಿಲ್ಲ.

 

ಹಿಂದಿಯೇತರ ರಾಜ್ಯಗಳಲ್ಲಿ ಪರಿಣಾಮ

 

1960ರ ದಶಕದಲ್ಲಿ ಒಕ್ಕೂಟ ಸರ್ಕಾರವು ಆಂಗ್ಲ ಭಾಷೆಯನ್ನು ಕೈಬಿಟ್ಟು ಹಿಂದಿ ಭಾಷೆಯನ್ನು ಅಳವಡಿಸಲು ಪ್ರಯತ್ನಿಸಿದಾಗ ಭಾವನಾತ್ಮಕ ಪ್ರತಿರೋಧ ವ್ಯಕ್ತವಾಗಿದ್ದೇ ಅಲ್ಲದೆ ಹಿಂಸಾತ್ಮಕ ಪ್ರತಿಭಟನೆಗಳು, ಆತ್ಮಾಹುತಿಯ ಘಟನೆಗಳೂ ದಕ್ಷಿಣ ರಾಜ್ಯಗಳಲ್ಲಿ ನಡೆದಿದ್ದವು.  ಹಾಗಾಗಿ ಸಂಸತ್ತು ಆಂಗ್ಲ ಭಾಷೆಯನ್ನೇ ಮುಂದುವರೆಸಲು ನಿರ್ಧರಿಸುವ ಮೂಲಕ ದಕ್ಷಿಣದ ರಾಜ್ಯಗಳಲ್ಲಿ ಧಕ್ಕೆಗೊಳಗಾದ ಭಾವನೆಗಳನ್ನು ಶಮನಗೊಳಿಸಬೇಕಾಯಿತು.  ಆಂಗ್ಲ ಭಾಷೆಯನ್ನು ಅನಿರ್ದಿಷ್ಟ ಕಾಲ ಮುಂದುವರೆಸಬಹುದು ಎಂಬ ನಿಯಮವೇ ಆಕ್ರೋಶವನ್ನು ಶಮನಗೊಳಿಸಲು ನೆರವಾಗಿತ್ತು.  ಭಾಷೆಯ ವಿಚಾರವು ಭಾವನಾತ್ಮಕವಾಗಿ ಜನರ ನಡುವೆ ವಿಭಜನೆಯನ್ನು ಸೃಷ್ಟಿಸುತ್ತದೆ ಎಂದು ಗ್ರಹಿಸಲು ವಿಶೇಷ ಸಂಶೋಧನೆಯ ಅವಶ್ಯಕತೆ ಇಲ್ಲ. ಇಲ್ಲಿ ಯಾವುದೇ ಒಂದು ಪ್ರದೇಶದ ಜನರು ಹಿಂದಿ ಭಾಷೆಯನ್ನು ಕಲಿಯಲು ಒಪ್ಪುವುದು ಅಥವಾ ಒಪ್ಪದೆ ಇರುವುದು ಮುಖ್ಯ ಪ್ರಶ್ನೆಯಾಗುವುದಿಲ್ಲ. ಈ ವಿಷಯವು ಇನ್ನೂ ಸಂಕೀರ್ಣವಾದದ್ದು.  ಉದಾಹರಣೆಗೆ, ಒಮ್ಮೆ ಆಂಗ್ಲ ಭಾಷೆಯ ಬದಲು ಹಿಂದಿ ಅಳವಡಿಸಿದರೆ, ಅಖಿಲ ಭಾರತ ಸೇವೆಗಳ ನೌಕರಿಯ ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಒಂದೇ ಮಾಧ್ಯಮವಾಗಿರುತ್ತದೆ.

 

ಆದ್ದರಿಂದ, ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳು, ವಿಶೇಷವಾಗಿ ದಕ್ಷಿಣ ಭಾರತದವರು, ಹಿಂದಿ ಮಾತೃಭಾಷೆ ಇರುವವರಿಗೆ ಹೋಲಿಸಿದಾಗ ಹೆಚ್ಚು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಾರೆ.  ತತ್ಪರಿಣಾಮ,  ಅಖಿಲ ಭಾರತ ಸೇವೆಗಳಿಂದ ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳು ಹೊರಗೇ ಉಳಿಯುತ್ತಾರೆ.  ಈ ಸಮಸ್ಯೆಯನ್ನು ಸಂವಿಧಾನ ರಚಯಿತರು ಮನಗಂಡಿದ್ದರಿಂದಲೇ, ಸಂವಿಧಾನದ ಪರಿಚ್ಛೇದ 344 (3)ರಲ್ಲಿ, ಅಧಿಕೃತ ಭಾಷಾ ಸಮಿತಿಯು “ನಾಗರಿಕ ಸೇವೆಗಳಿಗೆ ಸಂಬಂಧಿಸಿದಂತೆ ಹಿಂದಿಯೇತರ ಪ್ರದೇಶಗಳಿಗೆ ಸೇರಿದ ವ್ಯಕ್ತಿಗಳ ಹಿತಾಸಕ್ತಿ ಮತ್ತು ನ್ಯಾಯಯುತವಾದ ಬೇಡಿಕೆಗಳಿಗೆ ಸೂಕ್ತ ಮನ್ನಣೆ ನೀಡಬೇಕು ” ಎಂದು ಹೇಳಲಾಗಿದೆ.

 

ಭಾರತದಲ್ಲಿ ಪ್ರಮುಖವಾಗಿ ಎರಡು ಭಾಷಾ ಗುಂಪುಗಳಿವೆ. ಇಂಡೋ ಐರೋಪ್ಯ ಭಾಷಾ ಗುಂಪು ಮತ್ತು ದ್ರಾವಿಡ ಭಾಷಾ ಗುಂಪು. ಹಿಂದಿ ಮೊದಲನೆಯ ಗುಂಪಿಗೆ ಸೇರಿದ್ದು, ತಮಿಳು                                             (ಸಂಸ್ಕೃತಕ್ಕಿಂತಲೂ ಪ್ರಾಚೀನವಾದದ್ದು) ಎರಡನೆಯ ಗುಂಪಿಗೆ ಸೇರುತ್ತದೆ. ದ್ರಾವಿಡ ಸಮೂಹದಲ್ಲಿರುವ ಎಲ್ಲ ಭಾಷೆಗಳೂ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ, ಸಮೃದ್ಧ  ಸಾಹಿತ್ಯವನ್ನು ಹೊಂದಿವೆ. ಆದರೆ ಉತ್ತರ ಮತ್ತು ದಕ್ಷಿಣ ಭಾರತವನ್ನು ಒಂದುಗೂಡಿಸಿದ್ದು ಆಂಗ್ಲ ಭಾಷೆಯೇ ಆಗಿದೆ. ಸಂವಿಧಾನ ರಚಕ ಮಂಡಲಿಸಭೆಯಲ್ಲಿ ಮೌಲಾನ ಆಜಾದ್‌ “ಭಾಷೆಗೆ ಸಂಬಂಧಿಸಿದಂತೆ ಹೇಳುವುದಾದರೆ, ದಕ್ಷಿಣ ಮತ್ತು ಉತ್ತರ  ಎರಡೂ ಸಹ ಪ್ರತ್ಯೇಕ ಭಾಗಗಳೇ ಆಗಿವೆ, ದಕ್ಷಿಣ ಮತ್ತು ಉತ್ತರದ ಐಕ್ಯತೆಯನ್ನು ಅಂಗ್ಲ ಭಾಷಾ ಮಾಧ್ಯಮದ ಮೂಲಕ ಮಾತ್ರವೇ ಸಾಧಿಸಬಹುದಾಗಿದೆ. ಇಂದು ನಾವು ಆಂಗ್ಲ ಭಾಷೆಯನ್ನು ಕೈಬಿಟ್ಟರೆ ಈ ಭಾಷಾ ಸಂಬಂಧಗಳು ಉಳಿಯುವುದಿಲ್ಲ ” ಎಂದು ಹೇಳಿದ್ದರು.

 

 

ಒಕ್ಕೂಟಕ್ಕೆ ಒಂದೇ ಅಧಿಕೃತ ಭಾಷೆ ಇರಬೇಕು ಎನ್ನುವ ಆಲೋಚನೆ ಸ್ವಾತಂತ್ರ್ಯ ಸಂಗ್ರಾಮದ ಉತ್ಪನ್ನವಾಗಿದ್ದು ಆಗ ಹಿಂದಿ ಮತ್ತು ಉರ್ದು ಮಿಶ್ರಿತ ಹಿಂದುಸ್ತಾನಿ ಭಾಷೆಯನ್ನು ಪ್ರೋತ್ಸಾಹಿಸಲಾಯಿತು. ತದನಂತರ, ಸಂವಿಧಾ£Àವನ್ನು ರಚಿಸಿದಾಗ, ಹಿಂದುಸ್ತಾನಿಯ ಆಲೋಚನೆಯನ್ನು ಕೈಬಿಡಲಾಯಿತು ಬದಲಾಗಿ ದೇವ£Àಗರಿ ಲಿಪಿಯ ಹಿಂದಿ ಭಾಷೆಯನ್ನು ಏಕೈಕ ಅಧಿಕೃತ ಭಾಷೆಯಾಗಿ ಅಂಗೀಕರಿಸಲಾಯಿತು. ಎರಡು ಪ್ರಧಾನ ಭಾಷಾ ಗುಂಪುಗಳಿರುವ ಒಂದು ದೇಶದಲ್ಲಿ ಒಂದೇ ಅಧಿಕೃತ ಭಾಷೆಯ ಆಲೋಚನೆಯು ಜನತೆಯ ಐಕ್ಯತೆಯನ್ನು ಸಾಧಿಸಲು ನೆರವಾಗುವುದಿಲ್ಲ. ಕಾಲಾನುಕ್ರಮದಲ್ಲಿ ಇದು ತೀವ್ರತೆರನಾದ ಅಸಮತೋಲನಗಳಿಗೆ ಎಡೆಮಾಡಿಕೊಡಲಿದ್ದು ಅಖಿಲ ಭಾರತ ಸೇವೆಗಳಲ್ಲಿ ಪ್ರಾದೇಶಿಕ ಪ್ರಾತಿನಿಧ್ಯಕ್ಕೂ ಧಕ್ಕೆ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಅಷ್ಟೇ ಅಲ್ಲದೆ ಒಕ್ಕೂಟ ಸರ್ಕಾರದ ಸಿಬ್ಬಂದಿಯ ರಚನೆಯಲ್ಲೂ ವ್ಯತ್ಯಯಗಳನ್ನುಂಟುಮಾಡುತ್ತದೆ.

 

ಬದಲಾಗುತ್ತಿರುವ ಜಗತ್ತಿಗೆ ಆಂಗ್ಲ ಬಳಕೆ ಬೇಕಿದೆ

 

ಅಷ್ಟೇ ಅಲ್ಲದೆ ದಕ್ಷಿಣದ ರಾಜ್ಯಗಳು ದೆಹಲಿಯಿಂದ ಯಾರು ಆಳ್ವಿಕೆ ನಡೆಸುತ್ತಾರೆ ಎಂದು ನಿರ್ಧರಿಸಲು ಅಥವಾ ಒಕ್ಕೂಟದ ನಿರ್ಣಯಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲದಿರುವುದರಿಂದ, ಭಾಷೆಯ ವಿಚಾರದಲ್ಲಿ ಈ ಪ್ರದೇಶದ ಜನರ ಭಾವನೆ ಮತ್ತು ಕಾಳಜಿಗಳಿಗೆ ಮನ್ನಣೆ ನೀಡುವುದು ಅತ್ಯವಶ್ಯ. ಹಿಂದಿ ಒಂದು ಸರಳ ಮತ್ತು ಸುಂದರ ಭಾಷೆಯಾಗಿದ್ದು ಒಕ್ಕೂಟದ ಅಧಿಕೃತ ಭಾಷೆಯಾಗಿ ಸೂಕ್ತ ಸ್ಥಾನವನ್ನು ಪಡೆದುಕೊಂಡಿದೆ.  ಹೀಗೆ ನಿರ್ಧರಿಸುವಾಗ ಸಂವಿಧಾನ ರೂಪಿಸಿದವರು ಹಿಂದಿಯೊಡನೆ ಆಂಗ್ಲ ಭಾಷೆಯೂ ಅಧಿಕೃತ ಭಾಷೆಯಾಗಿ ಮುಂದುವರೆಯುವಂತೆ ಕಾಳಜಿ ವಹಿಸಿದ್ದಾರೆ. ಆಂಗ್ಲ ಭಾಷೆಯ ಭವಿಷ್ಯವನ್ನು ನಿಷ್ಕರ್ಷೆ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದ್ದು, ಸಂಸತ್ತು ಸಹ ಶಾಸನದ ಮೂಲಕ ಅನಿರ್ದಿಷ್ಟ ಕಾಲ ಅಂಗ್ಲ ಭಾಷೆಯನ್ನು ಬಳಸಲು ಅನುಮೋದನೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮ, ಅಲ್ಲಿ ಸೃಷ್ಟಿಯಾಗಿದ್ದ ರಾಷ್ಟ್ರೀಯತೆಯ ಭಾವನೆಗಳು ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ದೇಶಕ್ಕೆ ಒಂದು ರಾಷ್ಟ್ರಭಾಷೆಯ ಅಗತ್ಯತೆಯ ಬಗ್ಗೆ ಗಾಂಧೀಜಿಯ ಬಲವಾದ ಪ್ರತಿಪಾದನೆಯು ಸಂವಿಧಾನ ರಚಕ ಮಂಡಲಿಯ ಮನಸ್ಥಿತಿಯನ್ನು ಮೂಲತಃ ಪ್ರಭಾವಿಸಿತ್ತು.  ಭಾರತ ವಿಶ್ವದ ಇತರ ರಾಷ್ಟ್ರಗಳೊಡನೆ ಒಡನಾಟದಲ್ಲಿ ತೊಡಗಿದಂತೆಲ್ಲಾ ಈ ಮನಸ್ಥಿತಿಯು ಕಾಲಕ್ರಮೇಣ ಬದಲಾಗತೊಡಗಿತ್ತು. ಹಾಗಾಗಿ 1960ರ ಸಮಯಕ್ಕೆ ವಿಜ್ಞಾನ, ತಂತ್ರಜ್ಞಾನ ಮತ್ತು ಇತರ ಮಾನವ ಚಟುವಟಿಕೆಗಳಲ್ಲಿ  ಜ್ಞಾನಾರ್ಜನೆಗೆ ಆಂಗ್ಲ ಭಾಷೆಯ ನಿರ್ಣಾಯಕ ಅವಶ್ಯಕತೆಯನ್ನು ರಾಜಕೀಯ ವರ್ಗವೂ ಗ್ರಹಿಸಿತ್ತು. ಆದ್ದರಿಂದಲೇ ಸಂಸತ್ತು ಆಂಗ್ಲ ಭಾಷೆಯನ್ನು ಮುಂದುವರೆಸಲು ನಿರ್ಧರಿಸಿತ್ತು.

 

ದಕ್ಷಿಣ ಭಾರತದಲ್ಲಿ ಪ್ರಬಲವಾದ ಸಾರ್ವಜನಿಕ ಅಭಿಪ್ರಾಯವು ಆಂಗ್ಲ ಭಾಷೆಯು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಮುಂದುವರೆಯಬೇಕು ಎಂದೇ ಆಗಿದೆ. ಇಂದು ಒಕ್ಕೂಟವು ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಹೊಂದಿದೆ. ಕೆನಡಾದಲ್ಲೂ ಸಹ ಆಂಗ್ಲ ಮತ್ತು ಫ್ರೆಂಚ್‌ ಭಾಷೆಗಳು ಅಧಿಕೃತ ಭಾಷೆಗಳಾಗಿವೆ. ಈ ಸನ್ನಿವೇಶದಲ್ಲಿ, ಆಡಳಿತ ನೀತಿ ನಿರೂಪಕರು ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಗಳನ್ನಾಗಿ ಮುಂದುವರೆಸುವ ಸಾಂವಿಧಾನಿಕ ನಿಯಮ ರೂಪಿಸುವ ಬಗ್ಗೆ ಯೋಚಿಸಬೇಕಿದೆ. ನಾವು ಹಿಂದಿ ಮತ್ತು ಇತರ ಎಲ್ಲ ಭಾರತೀಯ ಭಾಷೆಗಳನ್ನೂ ಪ್ರೀತಿಸಿ, ಗೌರವಿಸುತ್ತೇವೆ.  ಆದ್ದರಿಂದ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಅವಶ್ಯಕತೆಗಳಿಗೆ ಅನುಗುಣವಾಗಿ  ಈ ಭಾಷೆಗಳ ಸ್ವಾಭಾವಿಕ ಬೆಳವಣಿಗೆಗಾಗಿ ಪ್ರಯತ್ನಗಳನ್ನು ಮಾಡಬೇಕಿದೆ.  ಇದೇ ವೇಳೆ, ವಿಜ್ಞಾನ ಮತ್ತು ಜಗತ್ತಿನ ಆಗುಹೋಗುಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ನಮಗೆ ಆಂಗ್ಲ ಭಾಷೆ ಅತ್ಯವಶ್ಯವಾಗಿದೆ.

 

(ಮೂಲ : This Hindi-and Hindi alone̲ counsel is flawed

ಪಿ. ಡಿ. ಟಿ. ಆಚಾರಿ -   ದ ಹಿಂದೂ 21 ಅಕ್ಟೋಬರ್‌ 2022

(ಪಿ. ಡಿ. ಟಿ. ಆಚಾರಿ ಲೋಕಸಭೆಯ ಮಾಜಿ ಮುಖ್ಯಕಾರ್ಯದರ್ಶಿಗಳು )

-೦-೦-೦-