ಮೂವರು ಲೋಕೋತ್ತರ ತಾಯಂದಿರು: ಪಿಲಗೇಯ, ಗಂಗವ್ವ ಮತ್ತು ಸಾಕವ್ವ
ಮೂವರು ಲೋಕೋತ್ತರ ತಾಯಂದಿರು: ಪಿಲಗೇಯ, ಗಂಗವ್ವ ಮತ್ತು ಸಾಕವ್ವ, bevarahani-keshav-malagi-pilageya-gangavva-sakavva
ಮೂವರು ಲೋಕೋತ್ತರ ತಾಯಂದಿರು:
ಪಿಲಗೇಯ, ಗಂಗವ್ವ ಮತ್ತು ಸಾಕವ್ವ
ಸಹನಶೀಲತೆ, ತ್ಯಾಗಮಯ ವ್ಯಕ್ತಿತ್ವ, ಯಾವುದನ್ನೂ ಸಾಮಾನ್ಯಕ್ಕೆ ಬಿಟ್ಟುಕೊಡದ, ಒಳಗೇ ಕಾಪಿಟ್ಟುಕೊಂಡ ಜಿಗುಟುತನ, ಸ್ವಾಭಿಮಾನ, ತನ್ನ ಸಾತ್ವಿಕತೆ ಮತ್ತು ಸಂಯಮದಿಂದ ತುಟಿ ಕಚ್ಚಿ ಹಿಡಿದಿಟ್ಟ ಒಳಗುದಿ ಹಾಗೂ ತಾನು ಪ್ರೀತಿಸುವವರ ಏಳಿಗೆ, ಸುಖ-ಸಂತೋಷಗಳೇ ತಮ್ಮ ಬದುಕು ಎಂದುಕೊಂಡ ನಿಸ್ವಾರ್ಥ ಜೀವ . . .
ತಾಯಿ ಎಂದೊಡನೆ ಈ ಎಲ್ಲ ಅಂಶಗಳು ಮುಪ್ಪರಿಗೊಂಡ ವ್ಯಕ್ತಿತ್ವ ನಮ್ಮ ಕಣ್ಣ ಮುಂದೆ ಬರಬಹುದು. ನಾನು ಬಹುವಾಗಿ ಮೆಚ್ಚಿದ ಮತ್ತೆ ಓದುವ ಅಂತಹ ಮೂವರು ಅಮ್ಮಂದಿರ ಕುರಿತು ಈ ಲಘು ಬರಹ.
ಈ ಮೂವರಲ್ಲಿ ನನ್ನ ಹರೆಯದಲ್ಲಿ ಕಣ್ಣೀರು ಹನಿಸುವಷ್ಟು ಭಾವುಕನನ್ನಾಗಿ ಮಾಡುತ್ತಿದ್ದವಳು ‘ಪಿಲಗೇಯ ನಿಲೋವ್ನ.’ ಈ ತಾಯಿ ವಿಶ್ವದ ಅನೇಕ ಭಾಷೆಗಳಲ್ಲಿ ಅವತರಿಸಿ ತಲೆಮಾರುಗಳಿಂದ ತರುಣ-ತರುಣಿಯರ ಹೃದಯವನ್ನು ರಶ್ಯಾದ ಸಮೋವರ್ ಚಹಾದಂತೆ ಚೆಚ್ಚಗಾಗಿಸುವವಳು. ಈಕೆಯ ಮುಗ್ಧತೆಗೆ ಉತ್ತರ ಓದುಗರ ಕಣ್ಣೀರು ಮಾತ್ರ. ಈಕೆಯ ಸೃಷ್ಟಿಕರ್ತ ಮಾಕ್ಸೀಂ ಗೋರ್ಕಿ, ಕಾದಂಬರಿ ಹೆಸರು: ‘ದಿ ಮದರ್’. ಮೇರು ಸಾಹಿತಿ, ಅನುವಾದಕ `ನಿರಂಜನ', ಪಿಲಗೇಯಳನ್ನು ಕನ್ನಡದಲ್ಲಿ ಅಜರಾಮರಗೊಳಿಸಿದವರು.
ಎರಡನೆಯವಳು ಗಂಗವ್ವ. ಪವಿತ್ರ ಗಂಗಾಜಲಕ್ಕಿಂತ ತನ್ನನ್ನು ನಂಬಿದ ಮುಗ್ಧ ಮಗ ಕಿಟ್ಟಿಯ ಬದುಕೇ ಹೆಚ್ಚು ಮಹತ್ವದ್ದು ಎಂದು ಗಂಗೆಯ ಪವಿತ್ರ ಜಲವನ್ನು ವಿಸರ್ಜಿಸಬಲ್ಲ ಎದೆಗಾರಿಕೆಯಿರುವವಳು. ಅರವತ್ತರ ದಶಕದಲ್ಲಿ ಪ್ರಕಟಗೊಂಡಾಗಿನಿಂದ ಸಾಹಿತ್ಯ ಅಧ್ಯಯನಶೀಲರನ್ನು ಮಂತ್ರಮುಗ್ಧಗೊಳಿಸುತ್ತಿರುವವಳು. ಸಾಧಾರಣ ಬ್ರಾಹ್ಮಣ ವಿಧವೆಯಾದ ಈ ಗಂಗವ್ವ ಬದುಕಿನ ಹೋರಾಟದಲ್ಲಿ ಗಂಗಾಮಾಯಿಯಾಗುವುದನ್ನು ಕನ್ನಡಿಗರಿಗೆ ತಿಳಿಸಿ ಹೇಳಿದವರು ಶಂಕರ ಮೊಕಾಶಿ ಪುಣೇಕರ.
ಮೂರನೆಯವಳು ಹಸಿದವರ ಅನ್ನಯಜ್ಞದ ಯಜಮಾನಿ ಒಡಲಾಳದ ಸಾಕವ್ವ. ಕೆಲವು ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಶಿಗೆ ಅನುವಾದಗೊಂಡು ಓದುಗರ ಸಂವೇದನೆಯನ್ನು ವಿಸ್ತರಿಸುತ್ತಿರುವ ಅಯಸ್ಕಾಂತೀಯ ಪಾತ್ರ. ಈಕೆಯ ಸಾಹಸಿಗಾಥೆಯನು ಕಥಿಸಿದವರು ದೇವನೂರ ಮಹಾದೇವ.
ಎಂಥವರನ್ನೂ ಪ್ರಭಾವಿಸಬಲ್ಲ ಈ ಮೂರೂ ಕೃತಿಗಳು ವಾಸ್ತವ ಮಾರ್ಗದ ಅತ್ತ್ಯುತ್ತಮ ಕಾದಂಬರಿಗಳು ಎಂದು ನನಗನ್ನಿಸುತ್ತದೆ. ಮೊದಲನೆಯದ್ದು ಕನ್ನಡಕ್ಕೆ ಬಂದಿರುವುದಾದರೆ, ಇನ್ನೆರಡು ಕನ್ನಡದಿಂದ ಬೇರೆಡೆಗೆ ಪಯಣಿಸಲು ಸಿದ್ಧವಿರುವಂಥವು.
ಕ್ರಾಂತಿಗೆ ಹುಲ್ಲಿನ ದಳದ ಕಾಣಿಕೆ
ಮ್ಯಾಕ್ಸಿಂ ಗೋರ್ಕಿಯವರ ‘ದಿ ಮದರ್’
ಕಥಾವಸ್ತು ೧೯೦೫ರಲ್ಲಿ- ರಶ್ಯಾದಲ್ಲಿ- ಜರುಗಿದ ಕ್ರಾಂತಿಯಿಂದ ಪ್ರೇರೇಪಣೆ ಪಡೆದಿದೆ. ಪಿಲಗೇಯ ಯಾವುದೇ ದುಡಿಯುವ ವರ್ಗದ ಅಸಹಾಯಕ ಬಡ ಹೆಣ್ಣಿನಂತೆ ಗಂಡನ ಹಿಂಸೆ, ದಬ್ಬಾಳಿಕೆಗೆ ತುತ್ತಾಗಿ ರೋಸಿ ಹೋದವಳು. ಕಾರ್ಖಾನೆ ಕಾರ್ಮಿಕನಾಗಿದ್ದ ಗಂಡನ ಸಾವು ಆಕೆಗೆ ಒಂದರ್ಥದಲ್ಲಿ ಬಿಡುಗಡೆಯನ್ನೇ ನೀಡಿದೆ. ಆಕೆಯ ಹರೆಯದ ಮಗ ಪಾವೆಲ್ ಕುಟುಂಬ ನಿರ್ವಹಣೆಗೆ ಕಾರ್ಖಾನೆಗೆ ಕೆಲಸಕ್ಕೆ ಸೇರುತ್ತಾನೆ. ಹೊಸ ಪೀಳಿಗೆಯವನಾದ ಆತನಿಗೆ ಕಾರ್ಮಿಕರ ಒಗ್ಗಟ್ಟಿನಲ್ಲಿರುವ ಶಕ್ತಿಸಾಮರ್ಥ್ಯಗಳು ಅರಿವಾಗುತ್ತವೆ. ಬುದ್ಧಿಜೀವಿಯಾದ ಪಾವೆಲ್‌ನನ್ನು ಹುಡುಕಿ ಆತನ ಗೆಳೆಯರು ಮನೆಗೆ ಬರಲು ಆರಂಭಿಸುತ್ತಾರೆ. ಪುಸ್ತಕಗಳನ್ನು ಓದುವ ಗೆಳೆಯರ ಗುಂಪು ರೂಪುಗೊಳ್ಳುತ್ತದೆ. ಬೌದ್ಧಿಕ ಚರ್ಚೆ, ವಾಗ್ವಾದ, ಸಂವಾದಗಳು ನಡೆಯತೊಡಗುತ್ತವೆ. ನತಾಶಾ, ಸಾಶಾ, ಲುದ್ಮಿಲ್ಲ, ಸೋಫಿಯಾ ಈ ಗೆಳೆಯರ ಗುಂಪಿನ ಬುದ್ಧಿಜೀವಿಗಳು.
ತ್ಸಾರ್‌ನ ಕೊಳೆತ ಭ್ರಷ್ಟ ವ್ಯವಸ್ಥೆ, ಶೋಷಣೆ, ಅಸಮಾನತೆಯ ಕುರಿತು ಅದನ್ನು ಬದಲಾಯಿಸುವ ತುಡಿತದ ಯುವ-ಯುವತಿಯರ ಕುರಿತು ಕಥೆ ನಡೆಯುತ್ತಿದ್ದರೂ ಕಾದಂಬರಿಕಾರ ಮಾತ್ರ ಕೃತಿಗೆ ‘ತಾಯಿ’ ಎಂದು ಏಕೆ ಹೆಸರಿಟ್ಟ? ಒಂದು ಹೊಸ ಸಮಾಜ, ಹೊಸ ಕುಟುಂಬ, ಹೊಸ ವಿಚಾರಗಳನ್ನು ಕಟ್ಟಬೇಕಾದರೆ ಅಮ್ಮನ ಅಂತಃಕರಣ, ನಿಸ್ವಾರ್ಥ, ತರತಮವಿಲ್ಲದ ದೃಷ್ಟಿಕೋನ, ಯಾವುದೇ ಬೇಡಿಕೆಗಳಿಲ್ಲದೆ ಎಲ್ಲರನ್ನೂ ಪ್ರೀತಿಸಬಲ್ಲ ವಿಶಾಲ ಮನಸ್ಸು ಇರಬೇಕು, ಎಂದು ಒತ್ತಿ ಹೇಳುವುದು ಲೇಖಕನ ಉದ್ದೇಶ. ಹಾಗೆಂದೇ, ಪಿಲಗೇಯ ಕೇವಲ ಪಾವೆಲ್‌ನ ತಾಯಿ ಮಾತ್ರವಲ್ಲ, ಕ್ರಾಂತಿಯನು ಕನಸುವ, ಅದಕ್ಕಾಗಿ ಸೆರೆವಾಸವನ್ನೂ ಒಳಗೊಂಡು ಎಲ್ಲ ಬಗೆಯ ತ್ಯಾಗಕ್ಕೂ ಸಿದ್ಧರಾಗಿರುವ ಎಲ್ಲ ಸಂಗಾತಿಗಳ ‘ಅಮ್ಮ.’ ಅಕ್ಷರಸ್ಥಳಲ್ಲದ ಈ ಅಮ್ಮ ನಿಧಾನಕ್ಕೆ ಎಲ್ಲವನ್ನೂ ಗ್ರಹಿಕೆಯಿಂದಲೇ ಕಲಿಯತೊಡಗುತ್ತಾಳೆ. ನಿಷೇಧಿಸಿದ ಕರಪತ್ರಗಳನ್ನು ಹಂಚುತ್ತಾಳೆ. ಕ್ರಾಂತಿಕಾರಿ ಚಟುವಟಿಕೆಗಾಗಿ ಆಕೆಯ ಮಗನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಸೈಬಿರಿಯಕ್ಕೆ ಕಳಿಸುತ್ತದೆ. ಆದರೆ, ಮಗನ ಸೆರೆವಾಸದಿಂದ ಪಿಲಗೇಯಳ ಧೃತಿಗೆಡುವುದಿಲ್ಲ. ಕ್ರಾಂತಿಗಾಗಿಯೇ ತನ್ನ ಬದುಕು ಎಂದು ಮತ್ತೊಮ್ಮೆ ನಿರೂಪಿಸುತ್ತಾಳೆ.
ಆಕೆಯ ಮಗ ಪಾವೆಲ್‌ನ ಭಾವುಕ ಭಾಷಣವನ್ನು ಮುದ್ರಕ ಲುದ್ಮಿಲ್ಲ ಜತೆ ಸೇರಿ ಮುದ್ರಿಸುತ್ತಾಳೆ. ಕದ್ದುಮುಚ್ಚಿ ಅವನ್ನು ಹಂಚುವಾಗ ಪೊಲೀಸರಿಗೆ ಸಿಕ್ಕಿಬಿದ್ದು ಹೊಡೆತ ತಿನ್ನುತ್ತಾಳೆ. ಆಗ ಆಕೆ ಹೇಳುವ ಮಾತು:
"ನೆತ್ತರಿನ ಹೊಳೆಯೂ ಸತ್ಯವನು ಮುಚ್ಚಿಡಲಾರದು."
2
ಕೆಡುಕಿನ ವಿರುದ್ಧದ ಹೋರಾಟ ನಿರಂತರ
ಗಂಗವ್ವ-ಗಂಗಾಮಾಯಿ: ಶಂಕರ ಮೊಕಾಶಿ ಪುಣೇಕರ
ಗಂಡನನ್ನು ಕಳೆದುಕೊಂಡ ಗಂಗವ್ವಳಿಗೆ ತನ್ನ ಮಗ ಕಿಟ್ಟಿಯ ಬದುಕಿನ ಏಳಿಗೆಯ ಬಗೆಗೆ ಚಿಂತೆ. ಮುಕ್ತಿಯನರಸಿ ಕಾಶಿಗೆ ಹೋದವಳಿಗೆ ಮಗ ಸಂಕಟಕ್ಕೆ ಸಿಲುಕಿದ ದುಸ್ವಪ್ನ ಬಿದ್ದು ಗಂಗಾಜಲ ಮತ್ತು ತನ್ನ ಆಧ್ಯಾತ್ಮಿಕ ಮುಕ್ತಿಗಿಂತ ಮುಗ್ಧನಾದ ಮಗ ಕಿಟ್ಟಿಯ ಜೀವನವನ್ನು ಹಾದಿಗೆ ಹಚ್ಚುವುದೇ ಮುಖ್ಯವೆಂದು ಗಂಗೆಯನ್ನೇ ವಿಸರ್ಜಿಸುತ್ತಾಳೆ. ಊರಿಗೆ ಮರಳಿ ಬಂದೊಡನೆ ಆಕೆಯ ತಮ್ಮ ರಾಘೋಬಾ ಭರಾರಿ ಮನೆಗೆ ಭೇಟಿ ನೀಡಿದ್ದು ಆಕೆಯ ಮನಸ್ಸಿಗೆ ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತದೆ. ಆಕೆಯ ನಂಬಿಕೆಯಲ್ಲಿ ರಾಘಪ್ಪ ಮಹಾದುಷ್ಟ. ಗಂಡನ ಸಾವಿಗೆ ಕಾರಣನಾದವನು. ತಮ್ಮ ಇನ್ನೊಬ್ಬ ಸೋದರ ವೆಂಕಾಟಿ ದೇಶಾಂತರ ಹೋಗಲು ಕಾರಣನಾದವನು. ವಿಧಿಯ ಲೀಲೆ ಎಂಬಂತೆ ಮಹಾ ಚಾಲಾಕಿ ರಾಘಪ್ಪ, ಅಕ್ಕನ ಮಗ, ಸರ್ಕಾರಿ ನೌಕರ ಕೃಷ್ಣಾಜೀಯನ್ನು ಮರಳು ಮಾಡಿ ಮಗಳೊಂದಿಗೆ ಲಗ್ನ ಮಾಡಿಸುತ್ತಾನೆ.
ಗಂಗವ್ವಳ ನೈತಿಕ ಬೆಂಬಲವಾಗಿದ್ದ ದೇಸಾಯರ ಬಾಯಿ ಮುಚ್ಚಿಸುವಂತೆ ಕಿಲಾಡಿ ರಾಘಪ್ಪ ಅವರ ಕಿರಿಯ ಮಗ ವಸಂತನನ್ನು ಕೈವಶ ಮಾಡಿಕೊಳ್ಳುತ್ತಾನೆ. ಕೈ ಜಾರಿ ಹೋಗುತ್ತಿರುವ ಮಗ, ತನ್ನ ಬದುಕನ್ನು ಮತ್ತೊಮ್ಮೆ ಮೂರಾಬಟ್ಟೆ ಮಾಡಲು ಬಂದ ತಮ್ಮ ರಾಘಪ್ಪರ ನಡುವೆ ಗಂಗವ್ವ ನಲುಗಿ ಹೋಗುತ್ತಾಳೆ. ಇನ್ನೀಗ ಸೋತೆ ಎಂದು ಹತಾಶಳಾಗುತ್ತಾಳೆ. ಆದರೆ, ಆಕೆಯ ತಾಯಿಯ ಹೃದಯ ಸೋಲನ್ನೊಪ್ಪುವುದಿಲ್ಲ. ಮತ್ತೆ ಎದ್ದು ನಿಲ್ಲುತ್ತದೆ. ಒಳಿತು-ಕೆಡಕುಗಳ ನಡುವಿನ ಹೋರಾಟದಲ್ಲಿ ಮಹಾ ಚಾಣಾಕ್ಷ, ತಂತ್ರಿ, ಮರಳುಗಾರನಾದ ರಾಘೋಬ ಭರಾರಿ ಕಾಲದ ಮುಂದೆ ಸೋಲುತ್ತಾನೆ. ಅಸಹಾಯಕಳಾದ ಆದರೆ, ಸೋಲೋಪ್ಪದ ಗಂಗವ್ವ ನೈತಿಕವಾಗಿ ಗೆಲ್ಲುತ್ತಾಳೆ. ವಿಧಿಯ ಕ್ರೂರತೆಯ ಮುಂದೆ ಮನಮೆಚ್ಚಿದವಳನ್ನು, ಬಂಧುಗಳ ಅಂತಃಕರಣವನ್ನು ಕಳೆದುಕೊಳ್ಳುವ ರಾಘಪ್ಪ ಆತ್ಮಹತ್ಯೆಗೆ ಶರಣಾಗುತ್ತಾನೆ.
ಗಂಗವ್ವ ಅಸಹಾಯಕ ವಿಧವೆಯೇನೋ ಸರಿ. ಆದರೆ, ಗಂಗಾಮಾಯಿಯಷ್ಟು ಗಟ್ಟಿಗಳು. ಬದುಕಿನ ಏರು-ತಿರುವು, ಕಣಿವೆ, ಪ್ರಪಾತ, ಸಪಾಟು ನೆಲ ಹೀಗೆ ಎಲ್ಲವನ್ನೂ ಹಾದು ಗಮ್ಯವನು ತಲುಪಬಲ್ಲ ಮನೋಬಲ ಉಳ್ಳವಳು.
3
ಅಸಹಾಯಕತೆಯನ್ನೇ ಮೀರುವ ಮನೋಬಲ
ಒಡಲಾಳ: ದೇವನೂರ ಮಹಾದೇವ
ಎಲ್ಲವನ್ನೂ, ಎಲ್ಲರನ್ನೂ ಒಗ್ಗಟ್ಟಾಗಿ ಹಿಡಿದಿಡುವುದು, ಒಟ್ಟಾಗಿರುವಲ್ಲಿ ಸಾರ್ಥಕತೆಯನ್ನು ಪಡೆಯುವುದು; ತಮ್ಮ ನೆಲೆಯನ್ನು ಹುಡುಕುವುದು, ಕಳೆದುಕೊಳ್ಳುವುದು ಮತ್ತೆ ಹುಡುಕುವುದನ್ನು ಮುಖ್ಯ ಕಾಳಜಿಯನ್ನಾಗಿಸಿಕೊಂಡಿರುವ ಒಡಲಾಳದ ಸಾಕವ್ವ ಒಂದು ಕುಲದ ಅಧಿದೇವತೆಯನ್ನು ಸಂಕೇತಿಸುವ ಸಾಮರ್ಥ್ಯ ಪಡೆದವಳು. ಹೆಣ್ಣಾದರೂ ಗಂಡಿನಂತೆ ಕಚ್ಚೆ ಏರಿಸಿ ಮೈಬಗ್ಗಿಸಿ ದುಡಿದು ಗಂಡುಗಳನ್ನು ಸಲಹುವ ಛಲಗಾತಿ. ಕುಟುಂಬದ ಪಿಳ್ಳೆಗಳನ್ನು ತಾಯಿ ಕೋಳಿಯಂತೆ ತನ್ನ ಕಾಲ ನಡುವೆ ಆರೈಕೆ ಮಾಡಬಲ್ಲವಳು. ನಾಕು ಕಂಬದ ಹಟ್ಟಿಯನ್ನು ಕಟ್ಟಿರುವುದು ಮಕ್ಕಳು, ಮೊಮ್ಮಕ್ಕಳನ್ನು ಕಣ್ಣರಿಕೆಯಲ್ಲಿ ಇಟ್ಟಿರುವುದೂ ಆಕೆಯ ಸಾಧನೆಗಳೇ. ಮಕ್ಕಳು ಎಷ್ಟೇ ದೊಡ್ಡ ಮನುಷ್ಯರಾದರೂ ಸಾಕವ್ವನ ಮುಂದೆ ‘ಏನಿಲ್ಲ’ ಎಂಬುದೇ ಅವರ ಸ್ಥಿತಿ!
ಕಾದಂಬರಿಯಲ್ಲಿ ಈ ಕುಟುಂಬದ ದಿನನಿತ್ಯದ ರಗಳೆ, ಸಮುದಾಯದ ಸಂಕಟ, ಸಂಸಾರದೊಳಗಿನ ಆಶೋತ್ತರಗಳು, ಪಡಿಪಾಟಲುಗಳು, ಆಸ್ತಿಗಾಗಿ ನಡೆಯುವ ಕದನ ಇತ್ಯಾದಿಗಳು ತೆರೆದುಕೊಳ್ಳುತ್ತವೆ. ಆದರೆ, ಅದೇನೆಯಿದ್ದರೂ ಅವುಗಳ ನಿಯಂತ್ರಣ ಮಾತ್ರ ಸಾಕವ್ವಳದೇ. ಕಾದಂಬರಿಯಲ್ಲಿ ಒಂದು ಹಂತದಲ್ಲಿ ಬಿಚ್ಚಿಕೊಳ್ಳುವ ‘ಕಡಲೆಕಾಯಿ’ ತಿನ್ನುವ ಕ್ರಿಯೆಯನ್ನು ಕನ್ನಡ ಸಾರಸ್ವತ ಹಸಿದವರ ಅನ್ನಯಜ್ಞವೆಂದು ಕರೆದಿದೆ. ಕಲಾ ವಿಮರ್ಶಕ ಅನಿಲ್ ಕುಮಾರ್ ಈ ಕ್ರಿಯೆಯನ್ನು ವಾನ್ ಗೋನ ‘ಪೊಟ್ಯಾಟೋ ಈಟರ್‍ಸ್ ವರ್ಣಚಿತ್ರದ ಕಥಾನಕಕ್ಕೆ ಹೋಲಿಸಿದ್ದಾರೆ. ಇಲ್ಲಿನ ಬೆಂಕಿಯಲ್ಲಿ ಬೀಳುವ ಕಡಲೆಕಾಯಿ ಸಿಪ್ಪೆಗಳ ರೂಪಕವು ಕನ್ನಡ ಸಾಹಿತ್ಯವನ್ನು ಬಹುಕಾಲ ಕಾಡಬಲ್ಲದು. ಸ್ವಾಭಿಮಾನಿ ನಿರ್ಗತಿಕರ ಅಳಲನ್ನು, ಒಡಲ ಸಂಕಟದ ಆಳವನ್ನು ದಹಿಸುವ ಈ ಬೆಂಕಿಗೆ ಹೊರಗಿನ ಲೋಕವನು ಸುಡಬಲ್ಲ ಶಕ್ತಿಯಿದೆ. ಅಂತೆಯೇ, ಹಸಿವಿನ ಯಜ್ಞದಲಿ ಪಾಲ್ಗೊಂಡವರ ಒಡಲಾಳದ ನೋವು, ಮುಖದಲ್ಲಿ ಅಡಗಿರುವ ಅಸಹಾಯಕತೆ, ಸಿಟ್ಟು, ಭವಿಷ್ಯದ ಕನಸುಗಳನ್ನು ಪ್ರಖರವಾಗಿ ಕಾಣಿಸಬಲ್ಲ ಸಾಮರ್ಥ್ಯವಿದೆ.
ಆದರೆ, ವ್ಯವಸ್ಥೆಯ ಕ್ರೌರ್ಯಕ್ಕೆ ಈ ಜೀವಂತಿಕೆಯನ್ನು ಸದೆ ಬಡೆಯಬಲ್ಲ ರಾಕ್ಷಸ ಶಕ್ತಿಯಿದೆ. ಸಾಕವ್ವಳಂಥ ಸಾಕವ್ವಳೂ ವ್ಯವಸ್ಥೆಯ ದರ್ಪದ ಮುಂದೆ ಕುಗ್ಗಿದಂತೆ ಕಾಣುತ್ತಾಳೆ. ಅದೇನೆ ಇದ್ದರೂ ಆಕೆಯ ಅಹರ್ನಿಶಿ ಹುಡುಕಾಟ ನಿಲ್ಲುವುದಿಲ್ಲ. ತಾನು ಸೋತಿದ್ದೇನೆಂದು ಆಕೆ ಕೈಚೆಲ್ಲಲಾರಳು. ಆಕೆ ಅಸಹಾಯಕಳು, ನಿಜ. ಆದರೆ, ಅವಳ ಅದಮ್ಯ ಆಶಾವಾದದ ಮುಂದೆ ಸೋಲು ಕೂಡ ಮಂಡಿಯೂರಲೇ ಬೇಕು, ಎನ್ನುವ ಛಲಗಾತಿ.
ತಾಯ್ತನದ ಹೊಣೆಗಾರಿಕೆಯನ್ನು ಎಂದಿಗೂ ಬಿಟ್ಟುಕೊಡದ ಜಿಗುಟು ಒಂಟಿ ಹೆಂಗಸು.
ಪುರುಷ ಸಮಾಜದಲ್ಲಿ ಕೊಂಚವಾದರೂ ಭಾವುಕ ಬದಲಾವಣೆಯಾಗಿದ್ದರೆ ಅದಕ್ಕೆ ಇಂತಹ ತಾಯಂದಿರೆ ಕಾರಣ.
(ವರ್ಣಚಿತ್ರ: ಅಮೃತ ಶೆರ್‌ಗಿಲ್: ಕಾಪಿರೈಟ್‌ಗೆ ಒಳಪಟ್ಟಿರಬಹುದು)