ಮನಸು ಮನಸುಗಳ ಪೋಣಿಸುವ ಚಿತ್ರ ಚಿತ್ತಾರದ ಬಣ್ಣದ ಕೌದಿ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರಾಜ್ಯ ಪ್ರತಿನಿಧಿಯಾದ ವಾಣಿಪೆರಿಯಾಡಿರವರು ತಮ್ಮ ಎಂಟು ವರ್ಷದ ಪುಟ್ಟ ಗೆಳತಿಯ ಹುಟ್ಟು ಹಬ್ಬಕ್ಕೆಂದು ಎಂಟು ಮೀನು, ಎಂಟು ಚಿಟ್ಟೆ, ಎಂಟು ರೈಲು, ಎಂಟು ಬಳೆ, ಎಂಟು ಬಲೂನು ಹೀಗೆ ಎಂಟರ ನಂಟನ್ನು ಕೌದಿಯಲ್ಲಿ ಅರಳಿಸಿದ್ದರು. ಹಾಗೆಯೇ ಸ್ವತಃ ಅವರೇ ಅವರ ಅರವತ್ತನೇ ವರ್ಷ ಹುಟ್ಟುಹಬ್ಬಕ್ಕೆ ದಾರದಿಂದ ಚಿತ್ರಿಸಿಕೊಂಡ ದುಪ್ಪಟವು ಕೌದಿಗಳ ಸಾಲಿನಲ್ಲಿ ನಿಂತು ನಗುತ್ತಿತ್ತು.

ಮನಸು ಮನಸುಗಳ ಪೋಣಿಸುವ ಚಿತ್ರ ಚಿತ್ತಾರದ ಬಣ್ಣದ ಕೌದಿ.

 

ಶೈಲಜಾ.ಜೆ.ಕೆ

      ಅಂದು ಭಾನುವಾರ, ಅದೊಂದು ವಿಶಾಲವಾದ ಪಡಸಾಲೆ, ಹತ್ತು ಹಲವು ಮಹಿಳೆಯರು ಬಣ್ಣ ಬಣ್ಣದ ಚಚ್ಚೌಕಳಿ ಬಟ್ಟೆಗಳನ್ನು ಹಿಡಿದು ಕಾಮನ ಬಣ್ಣದಿಂದ ಆಚೆಯ ಅನನ್ಯತೆಯನ್ನೇ ಇದರಲ್ಲಿ ಅಡಗಿದೆಯೇನೋ ಎಂಬಂತೆ ಕೌದಿ ಹೆಣೆಯ ತೊಡಗಿದ್ದರು. ಸಂಸಾರದ ಜಂಜಾಟಗಳನ್ನು ಒಂದು ದಿನಕ್ಕೆ ಮಾತ್ರ ಮಾರಿಕೊಂಡಂತೆ ನಿರ್ಮ್ಮಳ ಮುಖಗಳು. ತಮ್ಮ ಅಸ್ತಿತ್ವವನ್ನು ಅದರೊಳಗೆ ಹುಡುಕುತಿದ್ದಂತೆ.

       ಕಣ್ಗಗಳ ಕ್ಯಾಮರಾದಲ್ಲಿ ಎಂದೋ ಸೆರೆಹಿಡಿದಿದ್ದೋ? ಅಥವಾ ಮನವು ಧ್ವನಿಸಿದ ಚಿತ್ರವನ್ನೋ ಬಟ್ಟೆಗಳ ಮೇಲೆ ಮೂಡಿಸುತ್ತಾ… ಹಾಡುತ್ತಾ, ಕಥೆ, ಕವಿಗೆಗಳನ್ನು ವಾಚಿಸುತ್ತಾ, ಚರ್ಚಿಸುತ್ತಾ ಕೌದಿ ಹೊಲಿಯುವುದರಲ್ಲಿ ತಲ್ಲೀನರಾಗಿದ್ದರು. ಕೆಲವರು ಅವರಿಗೆಂದೇ ವಿಟಮಿನ್ ಯುಕ್ತ ಅಡುಗೆ ಮಾಡುತ್ತಿದ್ದರು. ಚುಮುಚುಮು ಚಳಿಯಿಂದಾಗಿ ತುಟಿ ಆಗಾಗ ಕಾಫಿ ಕಪ್‌ಗಳನ್ನ ಚುಂಬಿಸುತ್ತಾ ಸಾಗುತ್ತಿತ್ತು.

       ಪಡಸಾಲೆಯ ಕುರ್ಚಿಗಳ ಮೇಲೆ ಹಿಂದೆ ಹೆಣೆದ ಕೆಲವು ಚಿತ್ರ ಚಿತ್ತಾರದ ಕೌದಿಗಳನ್ನು ಪ್ರದರ್ಶಿಸಿದ್ದರು. ಅದರಲ್ಲೊಂದು ನನ್ನ ಗಮನ ಸೆಳೆದಿತ್ತು. ಒಂದು ಮಗ್ಗುಲಲ್ಲಿ ಕೌದಿ ಹೆಣೆದವರ ಸಹಿಗಳು ಫೀನಿಕ್ಸ್‌ ಪಕ್ಷಿಯನ್ನು ಸುತ್ತುವರೆದು ಅದರ ಜೊತೆ ಪೈಪೋಟಿಗಿಳಿದಂತೆ ಬೂದಿಯಿಂದೆದ್ದು ಹಾರುತ್ತಿದ್ದವು. ಇನ್ನೊಂದು ಮಗ್ಗುಲಲ್ಲಿ ಅವರ ಭಾವನೆಗಳನ್ನು ದಾರದಲ್ಲಿ ಹೊಲೆದು ಬಂದಿಸಿದ್ದರು. ಕಷ್ಟದ ಬಾಯನ್ನು ಹೊಕ್ಕರೂ ಫೀನಿಕ್ಸ್‌ ಪಕ್ಷಿಯಂತೆ ಮತ್ತೆ ಹುಟ್ಟಿ ಹಾರುತ್ತೇವೆ ಎಂದು ತೋರಿಸುವಂತಿತ್ತು.

       ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರಾಜ್ಯ ಪ್ರತಿನಿಧಿಯಾದ ವಾಣಿಪೆರಿಯಾಡಿರವರು ತಮ್ಮ ಎಂಟು ವರ್ಷದ ಪುಟ್ಟ ಗೆಳತಿಯ ಹುಟ್ಟು ಹಬ್ಬಕ್ಕೆಂದು ಎಂಟು ಮೀನು, ಎಂಟು ಚಿಟ್ಟೆ, ಎಂಟು ರೈಲು, ಎಂಟು ಬಳೆ, ಎಂಟು ಬಲೂನು ಹೀಗೆ ಎಂಟರ ನಂಟನ್ನು ಕೌದಿಯಲ್ಲಿ ಅರಳಿಸಿದ್ದರು. ಹಾಗೆಯೇ ಸ್ವತಃ ಅವರೇ ಅವರ ಅರವತ್ತನೇ ವರ್ಷ ಹುಟ್ಟುಹಬ್ಬಕ್ಕೆ ದಾರದಿಂದ ಚಿತ್ರಿಸಿಕೊಂಡ ದುಪ್ಪಟವು ಕೌದಿಗಳ ಸಾಲಿನಲ್ಲಿ ನಿಂತು ನಗುತ್ತಿತ್ತು.

       ತಮಟೆ ರಾಮಕ್ಕನವರು ಅವರ ಮೊಮ್ಮಕ್ಕಳಿಗೆ ಹೊದೆಯಲು ಅವರ ಸೀರೆಗಳನ್ನು ಜೋಡಿಸಿ ಕೌದಿ ಹೊಲೆದದ್ದನ್ನು ನೆನಪಿಸಿಕೊಂಡರು. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬಗೆಬಗೆಯ ಕೌದಿಗಳು ಬೆರಳುಗಳ ಮಧ್ಯೆ ಅರಳಿದ್ದಕ್ಕೆ ಇಲ್ಲಿನ ಕೌದಿಗಳೇ ಸಾಕ್ಷಿಯೆನ್ನುವಂತಿದ್ದವು.

       ದೆಹಲಿಯ ನಿರ್ಭಯ ಪ್ರಕರಣ ಮತ್ತು ಇದಕ್ಕೆ ಸಾಮ್ಯತೆಯುಳ್ಳವು ಪ್ರಜಾತಂತ್ರದ ಮೂಲ ಆಶಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿರುವುದು ಮಹಿಳಾ ಪರ ಮನಸ್ಸುಗಳಿಗೆ ಆಘಾತವನ್ನೊಡ್ಡಿತ್ತು. ಇದರ ಫಲದ ಕೂಸೆ ಈ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ. ಇದು ನಮ್ಮ ಸುತ್ತಲಿನ ಎಲ್ಲಾ ತರಹದ ಹೆಣ್ಣು ಮಕ್ಕಳ ಲಿಂಗಸೂಕ್ಷ್ಮತೆ ಮತ್ತು ರೂಪಾಂತರಿ ದೌರ್ಜನ್ಯಗಳನ್ನು ತಡೆಗಟ್ಟುವ ಕನಸಿನೊಂದಿಗೆ ಜಾತಿ, ಉದ್ಯೋಗ, ದೇಶ, ಧರ್ಮ, ಸಂಘಟನೆಗಳ ಬೇದವಿಲ್ಲದೆ ಎಲ್ಲರೂ ಒಟ್ಟಾಗಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯವರನ್ನು ಸ್ಮರಿಸುತ್ತಾ ಶಾಲಾ ಕಾಲೇಜುಗಳಲ್ಲಿ ಅರಿವನ್ನು ಬಿತ್ತುತ್ತಾ ಸಾಗುತ್ತಿತ್ತು. ಇದರ ಮೊದಲ ಹೆಜ್ಜೆ ೨೦೧೩ ರಂದು ಮಂಗಳೂರಿನಲ್ಲಿ “ಇನ್ನೂ ಸಾಕು” ಎಂಬ ಘೋಷ ವಾಕ್ಯದೊಂದಿಗೆ ಮೌನ ಪ್ರತಿಭಟನೆ ನಡೆಸಿತು. ಹೀಗೆ ಕೆಲ ಹಿರಿಯ ಮಹಿಳಾ ಮಣಿಗಳು ತಮ್ಮ ಕೈ ಕೈ ಹಿಡಿದು ಆಚೀಚೆ ಕೈಗಳನ್ನು ತೆರೆದು ನಡೆಯುತ್ತಾ ಆ ಕೈಗೆ ಮತ್ತೆ ಕೈ ಸೇರಿಸಿಕೊಳ್ಳುತ್ತಾ ತನ್ನ ಬಾಹುಗಳಿಂದ ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರ್ಗಿಯನ್ನು ಬಳಸಿಕೊಂಡು ೨೦೨೩ಕ್ಕೆ ತುಮಕೂರನ್ನು ತಲುಪಿ, ಇಲ್ಲಿನ ಎಲ್ಲಾ ತಾಲ್ಲೂಕುಗಳಲ್ಲಿ ಅರಿವನ್ನು ಮಿಂಚಿಸಿ ೨೦೨೩ ಮಾರ್ಚ ಎಂಟು ಮತ್ತು ಒಂಭತ್ತರಂದು ಬೃಹತ್‌ ಸಮಾವೇಶವನ್ನು ಮಾಡಲಾಯಿತು. ಇದರ ಮುಂದುವರಿದ ಭಾಗವೇ ಇಂದಿನ ಕೌದಿ ಹೆಣಿಗೆ.

       ಅಬ್ಬಾ! ಎಷ್ಟೆಲ್ಲಾ ನಡಿಗೆ, ಹಿನ್ನೋಟ. ಕೌದಿ ಎಂದಾಕ್ಷಣ ನೆನಪಿಗೆ ಬರುವುದು ನಮ್ಮ ಜೋಗಪ್ಗೋಳು. ಹಳೆಯದಾದ ತುಂಡು ಬಟ್ಟೆಗಳನ್ನು ದಪ್ಪನೆಯ ದಾರದಿಂದ ಜೋಡಿಸಿ ಹೊಲೆದ ರಂಗುರಂಗಿನ ಜೋಳಿಗೆ ಹಾಗೂ ಕೌದಿಯ ಉಡುಗೆ, ಮೇಲೊಂದು ಕೌದಿಯ ದುಪ್ಪಟ ತೊಟ್ಟು ತಂಬೂರಿ ಹಿಡಿದು ; ಜೋಗಪ್ಪಾ… ಸಿಂಹ ಬಲವಾದ ಜೋಗಿ… ಹರನೇ ಬಾಗಿಸಿ ಕೇಳುತ್ತಾನೆ… ಎಂದು ಹಾಡುತ್ತಾ ಬರುತ್ತಿದ್ದರು. ಇವರು ಊರಿನ ಅಂಚಿನಲ್ಲಿ ತಾವೆ ಹೊಲೆದ ಕೌದಿಗಳಿಂದ ಹಾಕುತಿದ್ದ ರಂಗುರಂಗಿನ ಗುಡಾರಗಳನ್ನು ಮಕ್ಕಳು ದೊಡ್ಡವರೆನ್ನದೆ ಎಲ್ಲರೂ ಬೆರೆಗುಗಣ್ಣಿನಿಂದ ನೋಡುತ್ತಿದ್ದೆವು. ಈಗಲೂ ಸಹ ಜೋಗಪ್ಗೋಳು ಕೌದಿಗಳನ್ನು, ಕೌದಿ ಉಡುಪುಗಳನ್ನು ಬಳಸುವುದು ವಾಡಿಕೆ.ಹಳೆಯದಾದ ಹತ್ತಿ ಸೀರೆಗಳು ಮತ್ತು ಪಂಚೆಗಳನ್ನು ಐದಾರು ಮಡಿಕೆಯಲ್ಲಿ ಜೋಡಿಸಿ ಹೊಲಿಯಲಾಗಿ ಇದು ತುಂಬಾ ಬೆಚ್ಚಗಿರುತ್ತಿತ್ತು.

       ಪ್ರಸ್ತುತ ಕೌದಿ ಹೊಲೆದುಕೊಳ್ಳುವ ಜೋಗಪ್ಗೋಳು ಕಡಿಮೆಯಾಗಿದ್ದರೂ ಹೊಟ್ಟೆಪಾಡಿಗಾಗಿ ಊರೂರು ಸುತ್ತಿ ಯಂತ್ರಗಳನ್ನು ಬಳಸಿ ಕೌದಿ ಹೊಲೆದು ಕೊಟ್ಟು ಹಣ ಗಳಿಸುತ್ತಿರುವುದೂ ಉಂಟು. ಒಟ್ಟಾರೆ ಅವರಿಗೊಂದು ಉದ್ಯೋಗ ದೊರೆತಂತಾಗಿದೆ.

       ನಾನು ಸಹ ಕೌದಿಗೆ ಮಾರುಹೋಗಿ ವಿದ್ಯಾರ್ಥಿ ದೆಸೆಯಲ್ಲಿಯೇ ನನ್ನ ಹಳೆಯ ದುಪ್ಪಟಳನ್ನೆಲ್ಲಾ ಜೋಡಿಸಿ ನಾಲ್ಕಾರು ಕೌದಿಗಳನ್ನು ಹೊಲೆದಿದ್ದೆ. ಹಾಗೆಯೇ ಹೆಗ್ಗೋಡಿಗೆ ಭೇಟಿ ಕೊಟ್ಟಾಗ ಚರಕದಲ್ಲಿ ಖಾದಿ ಕೌದಿಯನ್ನು ಕೊಂಡು ತಂದಿದ್ದೆ. ಈಗ ಯಾವುದೋ ಟೈಲರ್‌ ಅಂಗಡಿಗೆ ತೆರಳಿ ಅಳಿದುಳಿದ ಹತ್ತಿ ಬಟ್ಟೆಯ ತುಂಡುಗಳನ್ನು ತಂದು ಮಡಗಿದ್ದೇನೆ. ಇದು ಹೊಸ ಕೌದಿ ಹೊಲೆಯುವ ತಯಾರಿ.

       ಹೀಗೆ 17.02.20223 ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಒಕ್ಕೂಟದ ಸಂಗಾತಿಗಳು ಕೌದಿ ಹೊಲೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೇಳಿ ಸಂತೋಷದಿಂದಲೇ ನನ್ನ ಕಿರಿಯ ಮಗಳನ್ನು ಎಳೆದುಕೊಂಡು ನಡೆದೆ. ಹನ್ನೆರಡರ ಹರೆಯದ ಹೊಸ್ತಿಲಲ್ಲಿ ನಿಂತ ಒಕ್ಕೂಟ ಈಗ ಉಡುಪಿಯತ್ತ ಸಾಗಿದೆ. ಇಡೀ ವರ್ಷ ದೌರ್ಜನ್ಯಗಳ ವಿರುದ್ಧ ಅರಿವನ್ನುಂಟು ಮಾಡಿ ಮಹಿಳೆಯರ ಅಸ್ತಿತ್ವದ ಬಗ್ಗೆ ತಿಳಿಸುತ್ತಾ ಸಾಗಿ 2024 ರ ಮಾರ್ಚ್‌ ಎಂಟು ಮತ್ತು ಒಂಭತ್ತರಂದು ರಾಜ್ಯ ಮಟ್ಟದ ಮಹಿಳಾ ಸಮಾವೇಶ ಮಾಡಲು ತೀರ್ಮಾನಿಸಿರುತ್ತಾರೆ. ಅಂದು ಆ ವೇದಿಕೆಯನ್ನು ಅಲಂಕರಿಸುವ ಮುಖ್ಯ ಅತಿಥಿಗೆ ತುಮಕೂರಿನಲ್ಲಿ ಜನ್ಮ ತಾಳಿದ ಕೌದಿಯು ಗೌರವ ಸಮರ್ಪಣೆಯಾಗಲಿದೆ. ಇಲ್ಲಿನ ಹೆಂಗೆಳೆಯರ ದಾರದ ಬಿಸಿಉಸಿರು ಅವರನ್ನು ಬೆಚ್ಚಗಾಗಿಸಲಿದೆ.

       ಕೌದಿಯಲ್ಲಿ ರಂಗುರಂಗಿನ ಹೂಗಳು, ಪಾತರಗಿತ್ತಿಯರು, ಕಲ್ಪತರು ನಾಡಿನ ಕಲ್ಪವೃಕ್ಷಗಳು ಅರಳಿದ್ದವು. ಹೆಣ್ಣು, ಗಂಡು, ಮಕ್ಕಳು, ಅಧಿಕಾರಿ ಎಂಬ ಬೇಧವಿಲ್ಲದೇ ಎಲ್ಲ ವಯಸ್ಸಿನವರು ಇಲ್ಲಿ ಸೇರಿದ್ದರು. ಬೇರೆ ಬೇರೆ ಊರು, ತಾಲ್ಲೂಕು, ಜಿಲ್ಲೆಯಿಂದ ಬಂದ ಸಂಗಾತಿಗಳು ಮನಸು ಮನಸುಗಳ ಬೆಸೆಯುವ ಕೌದಿ ಹೊಲೆಯುತ್ತಿದ್ದರು.

       ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷರಾದ ಬಾ.ಹಾ.ರಮಾಕುಮಾರಿ ಮೇಡಂ ರವರ ʼಹೃದಯ ಹರಿದಿದೆ ಹೊಲೆಯುವ ಮನಸ್ಸುಗಳಿಲ್ಲʼ ಎಂಬ ಕವಿತೆಯ ಸಾಲನ್ನು ನೆನೆಯುತ್ತಾ ಇಂದು ಇವರೆಲ್ಲಾ ಬಣ್ಣಬಣ್ಣದ ದಾರದಿಂದ ಹರಿದ ಹೃದಕ್ಕೆ ಬಣ್ಣದ ಲೇಪನ ಮಾಡಿ ಉರಿದುಂಬಿಸುತ್ತಿದ್ದಾರೆ. ಎಲ್ಲರೂ ಕೌದಿ ಹೊಲೆಯುತ್ತಾ ಮನಸ್ಸು ಮನಸ್ಸುಗಳ ಪೋಣಿಸುತ್ತಿದ್ದಾರೆ.