ನಮ್ಮೂರಿನಲ್ಲಿ ಇಂದಿರಾಗಾಂಧಿ, ಮತ್ತು ಜಾರ್ಜ್ ಫರ್ನಾಂಡಿಸ್ !?
60ರ ಹಿನ್ನೋಟ-ಡಾ.ರಂಗಸ್ವಾಮಿ
60ರ ಹಿನ್ನೋಟ (9)
ಡಾ.ಹೆಚ್.ವಿ.ರಂಗಸ್ವಾಮಿ
ಇಂದಿರಾ ಗಾಂಧಿಯವರ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಆಗಿದೆಯೆಂದು ಯಾರೋ ಹೇಳಿದ್ದು ನನಗೆ ಆ ಕ್ಷಣಕ್ಕೆ ಜಾಗೃತವಾಯ್ತು. ಆ ಜನರ ಸಂದಿಯಲ್ಲಿ ತೂರಿಕೊಂಡು ನಾನು ಹೇಗೋ ಕಾರಿನ ಹತ್ತಿರ ಹೋಗಿ ಅವರು ಕೂತಿದ್ದ ಕಿಟಕಿ ಪಕ್ಕದಲ್ಲಿ ಎಲ್ಲರ ಮಧ್ಯದಲ್ಲಿ ಮೂಗಿನ ಕಡೆಗೆ ಕತ್ತು ಚಾಚುತ್ತಿದ್ದೆ. ಅಷ್ಟರಲ್ಲಿ ಯಾರೋ ಅನಾಮತ್ತು ಎತ್ತಿ ಹಿಂದಕ್ಕೆ ಎಸೆದು ಬಿಟ್ಟರು. ನಾನು ಜನರ ಮಧ್ಯದಿಂದ ಭೂಮಿಗೆ ನಿಧಾನಕ್ಕೆ ಜಾರಿದೆ.
ನಮ್ಮೂರಿನಲ್ಲಿ ಇಂದಿರಾಗಾಂಧಿ, ಮತ್ತು ಜಾರ್ಜ್ ಫರ್ನಾಂಡಿಸ್ !?
ನಮಗೆ ಆಗ ಚುನಾವಣೆ, ಗಿನಾವಣೆ ಗೊತ್ತಿರಲಿಲ್ಲ. ನಮ್ಮೂರಿಗೆ ಯಾವಾಗಲಾದರು ಒಂದು ಬಾರಿ ಇಂತಹ ಸಂದರ್ಭದಲ್ಲಿ ಅಂಬಾಸಿಡರ್ ಕಾರು ಬರುತ್ತಿತ್ತು. “ನಿಮ್ಮ ಮತ ಕಾಂಗ್ರೆಸ್ ಪಕ್ಷಕ್ಕೆ ಅಂತ ಮೈಕ್‌ನಲ್ಲಿ ಕೂಗುತ್ತಾ,” ಆ ಬೀದಿ, ಈ ಬೀದಿಗಳಲ್ಲಿ ಸುತ್ತಾಡಿ ಒಂದಷ್ಟು ಕಾಗದಗಳನ್ನು ಎರಚಲಾಗುತ್ತಿತ್ತು. ಆ ಕಾಗದಗಳನ್ನು ನಾವು ಹೆಕ್ಕಿ ದೊಡ್ಡವರ ಕೈಯಲ್ಲಿ ತಂದು ಕೊಡುತ್ತಿದ್ದೆವು. ಅವರು ಅದನ್ನು ಪೂರ್ತಿ ಓದಿ ಚರ್ಚಿಸುತ್ತಿದ್ದರು.
ಈ ರೀತಿ ಕಾರುಗಳು ಬಂದು ಹೋದ ಮೇಲೆ ನಮ್ಮೂರಿನ ಜನರೆಲ್ಲಾ ವೋಟು ಹಾಕಲು ಪಕ್ಕದ ಗರುಗದಹಳ್ಳಿಗೆ ಅನುಕೂಲಸ್ತರು ಗಾಡಿಗಳಲ್ಲಿ, ಬಡಬಗ್ಗರು ನಡಕೊಂಡು ಹೋಗುತ್ತಿದ್ದರು. ನಮ್ಮೂರಿನ ಮೇಲ್ಜಾತಿಯವರೆಲ್ಲಾ ಜನತಾ ಪಕ್ಷ ಮತ್ತು ಕೆಳವರ್ಗದವರೆಲ್ಲಾ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದನ್ನು ನಾವು ಕೇಳಿಸಿಕೊಳ್ಳುತ್ತಿದ್ದೆವು. ಅಪ್ಪ ಅಮ್ಮ ವೋಟು ಹಾಕಲು ಗರುಗದಹಳ್ಳಿಗೆ ಹೋಗುವಾಗ ನಾನೂ ಜೊತೆಯಲ್ಲಿ ಹೋಗಿದ್ದೆ. ಆಗ ಗಾಡಿಯ ಮೇಲೆ ಕೂತು ಹೋಗುತ್ತಿದ್ದ ನಮ್ಮೂರಿನವರು “ಓಹೋ ಏನೆಲ್ಲಾ ಕಾಂಗ್ರೆಸ್‌ಗೆ ಹಾಕೋದೋ?” ಅಂತ ಕೆಣಕಿದರು. “ನಾವು ಹಾಕೋದೆ ನಮ್ಮ ಅಮ್ಮುಂಗೆ. ಬೇರೇರೆಲ್ಲಾ ಏನ್ಮಾಡಿದಾರೆ ನಮಗೆ. ನೀವು ಹೊಟ್ಟೆ ತುಂಬಿರೋರು. ಯಾರಿಗೆ ಹಾಕಿದರೂ ನಡೆಯುತ್ತೆ” ಅಂತ ಅಪ್ಪ ತಿರುಗುಬಾಣ ಬಿಟ್ಟಿದ್ದು ನೆನಪಿದೆ. ಆದರೆ ಅಮ್ಮನಿಗೆ “ಎಲ್ಲಮ್ಮಾ ನಿಂದು ಯಾರಿಗೆ?” ಅಂದಾಗ, “ನೀವು ಯಾರಿಗೆ ಹೇಳ್ತೀರೋ ಅವರಿಗೆ ಹಾಕಾನ ಬಿಡ್ರಿ ಸ್ವಾಮಿ” ಅಂತ ತಟಸ್ಥವಾಗಿ ಉತ್ತರಿಸಿದ್ದು ನೆನಪಿದೆ. ನಾನು ಕುತೂಹಲದಿಂದ ಅಪ್ಪನಿಗೆ “ಯಾಕಪ್ಪ ನಾವು ಕಾಂಗ್ರೆಸ್‌ಗೇ ಓಟು ಹಾಕಬೇಕು” ಅಂತ ಕೇಳಿದ್ದೆ. “ಕಾಂಗ್ರೆಸ್‌ನೋರು ಫರಂಗಿಯವರ ಜೊತೆ ಗುದ್ದಾಡಿ ದೇಶ ಬಿಡಿಸಿಕಂಡರು. ಇವರೇನು ಕಿಸಿದಿದಾರೆ. ಗಾಂಧೀಜಿ ಅಂತಿದ್ನಲ್ಲ ಮುದುಕ, ಅವನೇನು ಸಾಮಾನ್ಯಕ್ಕೆ ಪೈಟ್ ಮಾಡಿದಾನೆ ಅವರ ಜೊತ್ಗೆ. ಆದರೂ ಫರಂಗಿಯವರು ಇರಬೇಕಿತ್ತು. ಅವರಿಗೆ ಹಂದಿ ಅಂದ್ರೆ ಪಂಚ ಪ್ರಾಣ. ಒಂದಕ್ಕೆರಡರಷ್ಟು ದುಡ್ಡು ಕೊಟ್ಟು ಹಂದೀ ಮರೀನ ಕಾರಲ್ಲೇ ಹಾಕ್ಕೊಂಡೋಗೋರು. ತೊಡೇ ಮೇಲೆ ಇಟ್ಟುಕೊಳ್ಳೋರು.” ಅಂದಿದ್ದರು.
ನನಗೆ ಅಪ್ಪನ ಈ ಮಾತನ್ನ ಕೇಳಿ ಆಶ್ಚರ್ಯವಾಯ್ತು. ಯಾಕೆಂದರೆ ಮಾಂಸ ತಿನ್ನೋದು ಕೀಳು ಜಾತಿಯವರು ಮಾತ್ರ ಅಂತ ಆಗಿನ ನಮ್ಮ ತಿಳುವಳಿಕೆ. ಯಾಕೆಂದರೆ ನಮ್ಮ ಊರಲ್ಲಿ ಲಿಂಗಾಯ್ತರು ಮತ್ತು ವೈಷ್ಣವ ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಾಗಿ ಪಾಯಸ, ಕೋಸಂಬರಿ, ಕಡುಬು, ಬೋಂಡಾಗಳು ಅತಿ ಶ್ರೇಷ್ಠ ಆಹಾರಗಳೆಂದು ನಾವು ಭಾವಿಸಿದ್ದೆವು. ಮದುವೆ ಮುಂಜಿಯAತ ಸಂದರ್ಭಗಳಲ್ಲಿ ಬಿಸಿ ಗಟ್ಟಕ್ಕಿ ಪಾಯಸಕ್ಕಾಗಿ ಜೊಲ್ಲು ಸುರಿಸುತ್ತಿದ್ದೆವು. ನಮ್ಮ ವಾರಗೆಯ ಮೇಲ್ಜಾತಿ ಹುಡುಗರು ನಾವು ಮಾಂಸ ತಿನ್ನುವ ಬಗ್ಗೆ ತಾತ್ಸಾರದಿಂದ ನೋಡುತ್ತಿದ್ದರಾಗಿ, ನಾವು ಕದ್ದು-ಮುಚ್ಚಿ ಮಾಂಸ ತಿನ್ನುವ ಪರಿಸ್ಥಿತಿ ಇತ್ತು. ಅದರಲ್ಲೂ ಕೆಲವರಂತೂ ಮಾಂಸವನ್ನ ಹಿತ್ತಿಲಲ್ಲೇ ಬೇಯಿಸುತ್ತಿದ್ದರು. ನಮ್ಮ ಪಕ್ಕದ ಆಣೇಗೆರೆಯ ಕೆಲವರು ಹಂದಿ ಮಾಂಸವನ್ನ ಕಾಯಂ ಆಗಿ ಹಿತ್ತಲಲ್ಲೇ ಬೇಯಿಸಿ, ಹೊರಗೇ ತಿಂದು ಆಮೇಲೆ ಮನೆ ಒಳಗೆ ಬರುತ್ತಿದ್ದರು. ಮಾಂಸ ತಿಂದು ದೇವಸ್ಥಾನದ ಒಳಗೆ ಹೋಗುವುದು ನಿಷಿದ್ದವಾಗಿತ್ತು. ಆದರೆ ಸ್ನಾನ ಮಾಡಿದ ಮೇಲೆ ನಿರಾಳವಾಗಿ ಒಳಗೆ ಹೋಗಬಹುದಿತ್ತು. ಕೆಲವರಂತೂ ʼಮಾಂಸ ಮಜ್ಜಿ ತಿನ್ನೋರುʼ, ʼತಿಂದುಣ್ಣೋರುʼ ʼಹೊಲಸು ತಿನ್ನೋರುʼ ಅಂತ ಹೇಳುತ್ತಿದ್ದರು. ಇದೆಲ್ಲ ಅನುಭವಿಸಿದ್ದ ನಾವು ನಮ್ಮನ್ನ ನಾವೆ ಕಚಡಾ ಜನಗಳು ಅಂದುಕೊಂಡು ಬಿಟ್ಟಿದ್ದೆವು. ಒಂದೊಂದು ಬಾರಿ ಮಾಂಸ ತಿನ್ನೋದು ಬಿಟ್ಟು ಬಿಡಬೇಕು ಅಂತ ಪಣ ತೊಟ್ಟಿದ್ದಿದೆ. ಆದರೆ ಪಾತ್ರೆಯಲ್ಲಿ ಮಾಂಸ ಕೊತ ಕೊತ ಶಬ್ದದೊಂದಿಗೆ ಬೇಯುತ್ತಿದ್ದರೆ, ಘಮ್ ಅಂತ ಮಾಂಸದ ಘಮಲು ಮೂಗಿಗೆ ಬಡಿದಾಗ ಮಾತ್ರ ಯಾವ ಶರತ್ತೂ ನೆನಪಾಗುತ್ತಿರಲಿಲ್ಲ. ತಟ್ಟೆಯಲ್ಲಿ ಒಂದು ತುಂಡು ಪಕ್ಕದವನಿಗಿಂತ ಕಡಿಮೆ ಬಿದ್ದರೆ ಹೊಟ್ಟೆ ಕಿಚ್ಚು ತಡೆಯಲಾಗುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಅಪ್ಪ ಫರಂಗಿಯವರೂ ಮಾಂಸ ತಿನ್ನುವ ಬಗ್ಗೆ, ಅದರಲ್ಲೂ ಹಂದಿ ತಿನ್ನುವ ಬಗ್ಗೆ ಹೇಳಿದಾಗ ನಾವೂ ಕೂಡ ಸ್ವಲ್ಪ ಪರವಾಗಿಲ್ಲ ಅನ್ನಿಸಿತ್ತು. ಅಷ್ಟೇ ಹೇಳಿ ಸುಮ್ಮನಿದ್ದರೆ ಸಾಕಿತ್ತು. ಒಂದೊಂದು ಬಾರಿ “ಹೇ ಅವರು ಕಿರಿಸ್ತಾನರು. ದನಾನೂ ತಿಂತಾರೆ” ಅಂದಾಗ ಮಾತ್ರ ಪಿಚ್ ಅನ್ನಿಸೋದು. ಆಮೇಲೆ ರಾಜ ಮಹಾರಾಜರುಗಳೂ ಕಾಡು ಮೇಡುಗಳಲ್ಲಿ ಬೇಟೆಗೆ ಹೋಗುತ್ತಿದ್ದರೆಂದು ಓದಿದ ಮೇಲೆ ಪರಿಸ್ಥಿತಿ ಮತ್ತಷ್ಟು ಹದವಾಯ್ತು.
ಮತ್ತೆ ಈಗ ಚುನಾವಣೆ ವಿಷಯಕ್ಕೆ ಬರೋಣ. ಗರುಗದಹಳ್ಳಿಯಲ್ಲಿ ನಮ್ಮೂರಿನ ಎಲ್ಲರೂ ಹೋಗಿ ವೋಟು ಹಾಕಿ ಬಂದಾದ ಸ್ವಲ್ಪ ದಿನಕ್ಕೆ ಜನತಾ ಪಕ್ಷ ಗೆಲ್ತು ಅಂತ ನಮ್ಮೂರಿನವರೆಲ್ಲಾ ಮಾತನ್ನಾಡುತ್ತಿದ್ದರು. ಸಾಮಾನ್ಯವಾಗಿ ಈ ರೀತಿ ಲೋಕಾಭಿರಾಮವಾಗಿ ನಮ್ಮೂರಿನ ಯಜಮಾನಿಕೆ ಜನ ಸೇರುತ್ತಿದ್ದುದು ಬಸವಣ್ಣನ ಗುಡಿ ಪಕ್ಕದ ಕಲ್ಲುಕಟ್ಟೆ ಮೇಲೆ. ಆಗ ಯಾರು ಪ್ರಧಾನಿಯಾಗಬಹುದು ಅಂತ ಒಂದು ಸ್ವಾರಸ್ಯಕರ ಚರ್ಚೆ ಜರುಗುತ್ತಿತ್ತು. ಚಂದ್ರಶೇಖರ್, ಮೊರಾರ್ಜಿ ದೇಸಾಯಿ ಮತ್ತು ಜಗಜೀವನ ರಾಂರವರ ಹೆಸರುಗಳು ದೆಹಲಿಯಲ್ಲಿ ಸಂಭವನೀಯವೆಂದು ಕೇಳಿಬರುತ್ತಿದ್ದ ಸಂದರ್ಭವದು. ಅವೆಲ್ಲಾ ಅಷ್ಟು ಜರೂರಾಗಿ ನಮ್ಮೂರಿನ ಜನಕ್ಕೆ ಹೇಗೆ ಗೊತ್ತಾಗುತ್ತದ್ದವೋ ಗೊತ್ತಿಲ್ಲ; ಆದರೆ ಅದೇ ಹೆಸರುಗಳು ನಮ್ಮೂರ ಕಲ್ಲುಕಟ್ಟೆಯ ಸುದ್ದಿಗಳಾಗಿರುತ್ತಿದ್ದವು.
ಮುರಾರ್ಜಿ ದೇಸಾಯಿ ಅನ್ನೋನು ತುಂಬಾ ಚುರುಕಾಗಿದ್ದಾನೆ, ಎಷ್ಟೇ ಮೆಟ್ಟಿಲುಗಳಿದ್ದರೂ ಏದುಸಿರು ಬಿಡದಂಗೆ ಹತ್ತುತ್ತಾನಂತೆ. ಅದೂ ಇಂಗ್ಲೀಸೂ ಬೇರೆ ಚೆನ್ನಾಗಿ ಬರುತ್ತಂತೆ. ಅವನು ಚುರುಕಾಗಿರೋದಕ್ಕೆ ಕಾರಣ ಏನು ಅಂದ್ರೆ ಅವನು ಸ್ವಮೂತ್ರಪಾನ ಮಾಡುತ್ತಾನಂತೆ. ಇನ್ನು ಜಗಜೀವನರಾಮ ಅನ್ನೋನು ಬುದ್ಧಿವಂತನಂತೆ. ಆದರೆ ನಮ್ಮ ಮಾದಿಗರ ಕರಿಯಪ್ಪೋರ ಕಡೇನಂತೆ. ಧಡೂತಿ ಆಳು. ಅವುನ್ಗೆ ಅಗಲವಾದ ಕುರ್ಚಿ ಹಾಕಿ ಕುತ್ತಿಗೆ ಒರಗೋಕೆ ಒಂದು ದಿಮ್ಮಿ ಇಡ್ತಾರಂತಪ್ಪ. ಅದೂ ವಿಪರೀತ ರ‍್ರಗೆ ಬೇರೆ ಇದಾನೆ. ಪ್ರಧಾನ ಮಂತ್ರಿ ಅಂದ ಮೇಲೆ ಫಾರಿನ್ನು, ಗೀರಿನ್ನು ಅಂತ ಹೋಗಲೇಬೇಕು, ಆಗ ಈ ಮನುಷುನ್ನ ನೋಡಿ ನಮ್ಮ ದೇಶದಲ್ಲಿರೋರೆಲ್ಲಾ ಹಿಂಗೇ ಅಂದಕೊಂಡುಬಿಟ್ಟಾರು ಅನ್ನೋದೊಂದೇ ಯೋಚ್ನೆ ಅಂತ ಮಾತುಕತೆಗಳು ಜರುಗುತ್ತಿದ್ದವು.
ನಮಗೆ ಈ ಸ್ವಮೂತ್ರಪಾನ ಅನ್ನುವ ವಿಚಾರ ಕುತೂಹಲಭರಿತವಾಗಿತ್ತು. ಅದು ಹೇಗೋ ಅದರ ನಿಜಾರ್ಥವೇನು ಅಂತ ಶೋಧಿಸಿಬಿಟ್ಟಿದ್ದೆವು. ಆದರೆ ಅದನ್ನು ಕುಡಿಯುವ ವಿಚಾರ ಮಾತ್ರ ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಬುದ್ಧಿವಂತನಾಗೋದು ಯಾರಿಗೆ ತಾನೆ ಬೇಡ? ಈ ಕುರಿತಾದ ಪ್ರಯೋಗವನ್ನು ಮುಂದೆ ವಿಸ್ತಾರವಾಗಿ ಬರೆಯುವವನಿದ್ದೇನೆ.
ಇಂದಿರಾ ಗಾಂಧಿ ಬಂದು ಹೋದದ್ದು.
ನಾನು ಏಳನೇ ಕ್ಲಾಸಿನಲ್ಲಿದ್ದ ಸಂದರ್ಭ ಅಂದುಕೊAಡಿದ್ದೇನೆ. ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಜಿಲ್ಲೆಯಿಂದ ಲೋಕಸಬೆಗೆ ಸ್ಪರ್ಧಿಸಿದ್ದುದು ಜಗತ್ತಿಗೇ ತಿಳಿದ ವಿಚಾರ. ನಾವು ಮಂತ್ರಿ ಮಹೋದಯರು ಅಂತ ಕೇಳಿದ್ದು, ಓದಿದ್ದವರನ್ನೆಲ್ಲಾ ಪ್ರತ್ಯಕ್ಷ ನೋಡುವ ಅವಕಾಶ ಈ ಕಾರಣಕ್ಕಾಗಿ ನಮಗೆ ಲಭ್ಯವಾಯಿತು. ಆಗ ಎರಡು ಕಡೆ ಪಂಚನಹಳ್ಳಿಯಲ್ಲಿ ಸಭೆಗಳು ಜರುಗಿದವು. ಒಂದು ಕಾಂಗ್ರೆಸ್ ಪಕ್ಷದ್ದು, ಮತ್ತೊಂದು ಜನತಾ ಪಕ್ಷದ್ದು.
ವಿಶಾಲ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಕಾಂಗ್ರೆಸ್ ಪಕ್ಷದ ಎತ್ತರದ ವೇದಿಕೆ. ಇಂದಿರಾ ಗಾಂಧಿಯವರು ಬರುವುದಕ್ಕೂ ಮೊದಲೇ ದೇವರಾಜ ಅರಸು ಮತ್ತು ಕೆಂಪರಾಜು ಅರಸುರವರು ಬಂದು ಸ್ಥಳ ಪರಿಶೀಲನೆ ನಡೆಸಿದರು. ಈ ಕಾರಣಕ್ಕಾದರೂ ಗಣ್ಯ ಮಹನೀಯರೆಲ್ಲಾ ನಮ್ಮೂರಿಗೆ ಬಂದರಲ್ಲಾ ಅನ್ನೋ ಖುಷಿ ನಮ್ಮದು. ಈ ಅರಸುಧ್ವಯರು ಹೆಚ್ಚು ಕಡಿಮೆ ನಮ್ಮಂತೆಯೇ ಕಾಣುತ್ತಿದ್ದರಾದರೂ, ಅವರುಗಳ ಎತ್ತರದ ನಿಲುವು ಮತ್ತು ಶುಭ್ರ ಬಿಳಿ ಕಚ್ಛೆ ಪಂಚೆಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ಅವರ ನಡಿಗೆಯಲ್ಲಿ ಅದೆಂತದೋ ಗತ್ತು ಮತ್ತು ಮುಖದಲ್ಲಿ ರಾಜಗಾಂಭೀರ್ಯ! ಪಂಚನಹಳ್ಳಿ ದೊಡ್ಡವರೆಲ್ಲಾ ಇವರ ಹಿಂದೆ ಮುಂದೆ ತರಾತುರಿಯಲ್ಲಿ ಸುತ್ತುತ್ತಿದ್ದ ರೀತಿಯಿಂದಲೇ ಅವರು ಅದೆಷ್ಟು ದೊಡ್ಡ ಮನುಷ್ಯರಿರಬಹುದು ಅಂತ ನಮಗೆ ಗೊತ್ತಾಗುತ್ತಿತ್ತು. ನಮಗೆ ಚುನಾವಣೆಯ ಬಗ್ಗೆ ಅಸ್ಪಷ್ಟವಾಗಿ ಗೊತ್ತಿತ್ತೇ ವಿನ: ಇದರ ಆಳ ಅಗಲ ನಮಗೆ ಗೊತ್ತಾದ್ದು ಈ ಸಮಯದಲ್ಲೆ.
ಇಂದಿರಾ ಗಾಂಧಿ ಆಗಮಿಸುವ ಸಮಯಕ್ಕೆ ಸರಿಯಾಗಿ ಸುತ್ತೆಲ್ಲಾ ಊರುಗಳ ಜನರ ಜಾತ್ರೆಯೇ ಸೇರತೊಡಗಿತು. ಪೋಲೀಸರು ಜನಜಂಗುಳಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಮನೆ ಕಾಂಪೌAಡ್‌ಗಳ ಮೇಲೆಲ್ಲಾ ಜನ ಜಮಾಯಿಸಿದ್ದರು. ಜೂನಿಯರ್ ಕಾಲೇಜು ಮೈದಾನದ ವೇದಿಕೆಗೆ ಬರುವುದಕ್ಕೂ ಮೊದಲು ಕಡೂರು ಮಾರ್ಗವಾಗಿ ಬಂದ ಕಾರು ಪಂಚನಹಳ್ಳಿ ಸರ್ಕಲ್‌ನಿಂದ ಎಡಕ್ಕೆ ತಿರುಗಿತು. ಜಂಸಾರಿ ನಾಗಪ್ಪನವರ ಮನೆಗೆ ಹೋಗಿ ಫ್ರೆಶ್ ಆಗಿ ಆಮೇಲೆ ವೇದಿಕೆಗೆ ಬರುತ್ತಾರೆಂದು ನಮಗೆಲ್ಲಾ ತಿಳಿದದ್ದೆ ತಡ, ನಾವೆಲ್ಲಾ ಕಾರಿನ ಹಿಂದೆಯೇ ಅಲ್ಲಿಗೆ ದೌಡಾಯಿಸಿದೆವು. ಅಲ್ಲಿ ಸ್ಥಳ ಪರೀಕ್ಷೆ ಜರುಗುವವರೆಗೂ ಇಂದಿರಾ ಗಾಂಧಿಯವರು ಸ್ವಲ್ಪ ಹೊತ್ತು ಕಾರಿನಲ್ಲಿಯೇ ಕುಳಿತಿದ್ದರು.
ಇಂದಿರಾ ಗಾಂಧಿಯವರ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಆಗಿದೆಯೆಂದು ಯಾರೋ ಹೇಳಿದ್ದು ನನಗೆ ಆ ಕ್ಷಣಕ್ಕೆ ಜಾಗೃತವಾಯ್ತು. ಆ ಜನರ ಸಂದಿಯಲ್ಲಿ ತೂರಿಕೊಂಡು ನಾನು ಹೇಗೋ ಕಾರಿನ ಹತ್ತಿರ ಹೋಗಿ ಅವರು ಕೂತಿದ್ದ ಕಿಟಕಿ ಪಕ್ಕದಲ್ಲಿ ಎಲ್ಲರ ಮಧ್ಯದಲ್ಲಿ ಮೂಗಿನ ಕಡೆಗೆ ಕತ್ತು ಚಾಚುತ್ತಿದ್ದೆ. ಅಷ್ಟರಲ್ಲಿ ಯಾರೋ ಅನಾಮತ್ತು ಎತ್ತಿ ಹಿಂದಕ್ಕೆ ಎಸೆದು ಬಿಟ್ಟರು. ನಾನು ಜನರ ಮಧ್ಯದಿಂದ ಭೂಮಿಗೆ ನಿಧಾನಕ್ಕೆ ಜಾರಿದೆ.
ನನಗೆ ಆಗ ಪ್ಲಾಸ್ಟಿಕ್ ಸರ್ಜರಿಯೆಂದರೆ ಪ್ಲಾಸ್ಟಿಕ್ ಅನ್ನೇ ಮೂಗಿಗೆ ತೇಪೆ ಹಾಕಿರುತ್ತಾರೆಂಬ ಕುತೂಹಲ! ಇಂದಿರಾ ಗಾಂಧಿ ಮೂಗಿಗೆ ತೇಪೆ ಹಾಕಿರುವ ಪ್ಲಾಸ್ಟಿಕ್ ಹೇಗೆ ಹೊಂದಿಕೊಂಡಿರಬಹುದು ಅಂತ ನೋಡುವ ತವಕದಿಂದ ಪ್ರಯಾಸಪಟ್ಟು ಕಿಟಕಿಯವರೆಗೆ ಜನರ ಮಧ್ಯೆಯೇ ತೂರಿದ್ದೆ. ಆದರೆ ಈ ರೀತಿ ಭ್ರಮನಿರಸನವಾಗುತ್ತದೆ ಅಂತ ಅಂದುಕೊಂಡಿರಲಿಲ್ಲ.
ಅಲ್ಲಿಂದ ಹಿಂದಿರುಗಿದ ಮೇಲೆ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದಿರಾ ಗಾಂಧಿಯವರ ಭಾಷಣ ಹಿಂದಿಯಲ್ಲಿ. ಅದನ್ನು ಕನ್ನಡಕ್ಕೆ ಕೆಂಪರಾಜು ಅರಸರು ಅನುವಾದ ಮಾಡಿದರು ಅಂದುಕೊಂಡಿದ್ದೇನೆ.
ಇನ್ನು ಜನತಾ ಪಕ್ಷದವರ ವೇದಿಕೆ. ಇದು ಅಷ್ಟೇನು ದೊಡ್ಡದಲ್ಲದ ನಮ್ಮ ಮಾಧ್ಯಮಿಕ ಶಾಲೆಯ ಮೈದಾನದಲ್ಲಿ ಹಾಕಿದ್ದ ವೇದಿಕೆ. ಅಷ್ಟೇನೂ ಜನ ಜಂಗುಳಿ ಇರಲಿಲ್ಲವಾದರೂ, ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದಾದಷ್ಟು ವಾತಾವರಣ ತಿಳಿಯಾಗಿತ್ತು. ಜಾರ್ಜ್ ಫರ್ನಾಂಡೀಸ್ ಮುಖ್ಯ ಭಾಷಣಕಾರರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತನಗೆ ನೀಡಲಾದ ಶಿಕ್ಷೆಯ ಕುರಿತು ಭಾವಾವೇಷದಿಂದ ಮಾತನಾಡಿದರು. ತನ್ನನ್ನು ಜೈಲಿಗೆ ಹಾಕಿ ಸರಳುಗಳಿಂದ ಕೈ ಕಾಲುಗಳಿಗೆಲ್ಲಾ ಹೊಡೆದದ್ದು, ಕುಡಿಯಲು ನೀರು ಕೇಳಿದರೂ ಕೊಡದೆ ಸತಾಯಿಸಿದ್ದನ್ನ ಏಕಪಾತ್ರಾಭಿನಯ ಮಾಡಿ ತೋರಿಸಿ ಬಿಟ್ಟರು. ತುರ್ತು ಪರಿಸ್ಥಿತಿಯೆಂದರೆ ಅಷ್ಟು ಭಯಾನಕವೇ ಅನ್ನಿಸಿದ್ದು ಫರ್ನಾಂಡೀಸ್ ಭಾಷಣ ಕೇಳಿದ ಮೇಲೇನೆ. ಅನೇಕ ವಿರೋಧ ಪಕ್ಷದ ದಿಗ್ಗಜರು ಬಂದಿದ್ದರಾದರೂ ಅವರ ವಿವರಗಳು ಸರಿಯಾಗಿ ನೆನಪಿಗೆ ಬರುತ್ತಿಲ್ಲ.
ಇಂದಿರಾ ಗಾಂಧಿ ಗೆದ್ದರೆಂಬ ಏಕಮಾತ್ರ ಸುದ್ದಿಯಿಂದ ನಮ್ಮೂರಿನ ಒಂದೈದು ಕೆಳಜಾತಿಯವರ ಮನೆಗಳಲ್ಲಿ, ಆಣೆಗೆರ ಸುಕಾಲಿಗರ ಹಟ್ಟಿಯಲ್ಲಿ ಅದೆಂತದೋ ಸಂಭ್ರಮ. ಹೆಂಡದ ಅಂಗಡಿ ದೇವಣ್ಣನ ಗಡಂಗಿಯಲ್ಲಿ ಗಿರಾಕಿಗಳಿಂದ ಭರ್ಜರಿ ವ್ಯಾಪಾರ. ನನ್ನ ಅಪ್ಪನಿಗೆ ತಾನೇ ಪ್ರಧಾನಿಯಾದೆನೆಂಬಷ್ಟು ಸಡಗರದಲ್ಲಿ ಒಂದೆರಡು ಬಾಟಲಿ ಜಾಸ್ತೀನೆ ಒಳಹೊಕ್ಕಿದ್ದುದು ಹಾವಭಾವಗಳಲ್ಲಿ ನಿಚ್ಚಳವಾಗುತ್ತಿತ್ತು. ಅಮ್ಮ ಮಾತ್ರ ಅಯ್ಯೋ, ಯಾರು ಬಂದ್ರೂ ರಾಗಿ ಬೀಸಾದೇನೂ ತಪ್ಪಲ್ಲ ಬಿಡುʼ ಅಂದರೂ ಒಳಗೊಳಗೇ ಸಂಭ್ರಮಿಸುತ್ತಿದ್ದುದು ಗೊತ್ತಾಗುತ್ತಿತ್ತು. ಅಂದು ಅಪ್ಪ ಕುಡಿದು ಬಂದದ್ದಕ್ಕೆ ಬೈಗುಳಗಳಿಂದ ವಿನಾಯ್ತಿ ಇತ್ತು. ಆದರೆ ಅದೇಕೋ ನಮ್ಮೂರಿನ ಮೇಲು ಜಾತಿ ಅನ್ನಿಸಿಕೊಂಡವರ ಮನೆಗಳಲ್ಲಿ ಸೂತಕದಂತ ನೀರವ ವಾತಾವರಣ!
( ಮುಂದಿನ ‘ಕಿನ್ನರಿ’ಗೆ)