"ದಲಿತ ಸಮುದಾಯದ ಮಹಾಮಾತೆ ರಮಾಬಾಯಿ ಅಂಬೇಡ್ಕರ್"

ಮಹಾತಾಯಿ ರಮಾಬಾಯಿಯವರ ಹುಟ್ಟುಹಬ್ಬದಂದು ಅವರನ್ನು ಪ್ರೀತಿ, ಗೌರವ, ಕೃತಜ್ಞತೆಯಿಂದ ಸ್ಮರಿಸಿಕೊಳ್ಳೋಣ.

"ದಲಿತ ಸಮುದಾಯದ ಮಹಾಮಾತೆ ರಮಾಬಾಯಿ ಅಂಬೇಡ್ಕರ್"

 

 

ವ್ಯಕ್ತಿ-ವ್ಯಕ್ತಿತ್ವ

ವಿ. ಎಲ್. ನರಸಿಂಹಮೂರ್ತಿ

 

      ಪ್ರಸಿದ್ಧ ಅಂಬೇಡ್ಕರ್‌ವಾದಿ ಚಿಂತಕಿ ಶರ್ಮಿಳಾ ರೇಗೆ ಅಂಬೇಡ್ಕರ್ ಅವರ ಬರಹಗಳ ಸಂಕಲನ 'Against the Madness of Manu' ಕೃತಿಗೆ ಬರೆದಿರುವ ದೀರ್ಘ ಮುನ್ನುಡಿಯಲ್ಲಿ ಅಂಬೇಡ್ಕರ್ ಅವರ ಕುರಿತು ಮೇಲ್ಜಾತಿಯ ಸ್ತ್ರೀವಾದಿಗಳು ಹೊಂದಿರುವ ಅಸಡ್ಡೆ ಎಂತಹದ್ದು ಎನ್ನುವುದಕ್ಕೆ ಒಂದು ಘಟನೆಯನ್ನು ಉದಾಹರಣೆಯಾಗಿ ನೀಡುತ್ತಾರೆ. ಖ್ಯಾತ ಮರಾಠಿ ಲೇಖಕಿ ಊರ್ಮಿಳಾ ಪವಾರ್ ಭಾಗವಹಿಸಿದ್ದ ಒಂದು ಮಹಿಳಾ ಹೋರಾಟಗಾರರ ಸಭೆಯಲ್ಲಿ ಮೇಲ್ಜಾತಿಯ ಸ್ತ್ರೀವಾದಿಯೊಬ್ಬರು ಅಂಬೇಡ್ಕರ್ ಅವರು ತಮ್ಮ ಹೆಂಡತಿಯನ್ನೇ ಶಿಕ್ಷಿತಳನ್ನಾಗಿ ಮಾಡಲಿಲ್ಲ ಇನ್ನು ಸ್ತ್ರೀವಾದಕ್ಕೆ ಏನು ಕೊಡುಗೆ ನೀಡಬಲ್ಲರು ಎಂದು ತಮಾಷೆ ಮಾಡುತ್ತಾರೆ. ಮುಂದುವರೆದು ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಜಾರಿಗೆ ತರಲು ಪ್ರಯತ್ನಿಸಿದ್ದು ಕೇವಲ ಒಂದು ರಾಜಕೀಯ ಪ್ರಹಸನ (ಪೊಲಿಟಿಕಲ್ ಸ್ಟಂಟ್) ಅಷ್ಟೇ ಅಂದುಬಿಡುತ್ತಾರೆ. ಈ ಘಟನೆಯಿಂದ ಆಘಾತಕ್ಕೆ ಒಳಗಾಗುವ ಊರ್ಮಿಳಾ ಪವಾರ್ ಇದರ  ಬಗ್ಗೆ ತಕರಾರು ಎತ್ತುವುದಕ್ಕೆ ಪ್ರಯತ್ನಿಸಿದಾಗ ಆ ಮೇಲ್ಜಾತಿಯ ಸ್ತ್ರೀವಾದಿ ಊರ್ಮಿಳಾ ಪವಾರ್ ಅವರನ್ನೇ ಗೇಲಿ ಮಾಡಿ ನಗಾಡುತ್ತಾರೆ.

ಇದು ಅಂಬೇಡ್ಕರ್‌ರಂತಹ ತಳಸಮುದಾಯದಿಂದ ಬಂದ ಮೇರು ವ್ಯಕ್ತಿತ್ವವನ್ನು ಮಹಿಳಾ ಪರ ಅಲ್ಲ ಎಂದು ಬಿಂಬಿಸುವುದಕ್ಕೆ ಮತ್ತು ಮಹಿಳೆಯರ ಅಭಿವೃದ್ದಿಗೆ ಅಂಬೇಡ್ಕರ್ ಅವರ ಕೊಟ್ಟಿರುವ ಕೊಡುಗೆಯನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗದ ಮೇಲ್ಜಾತಿಯ ಮನಸ್ಥಿತಿಗೆ ಉದಾಹರಣೆ.

 

ಅಂಬೇಡ್ಕರ್ ಅವರನ್ನು ಗಾಂಧಿ, ನೆಹರು ಅಂತವರ ಜೊತೆ ಹೋಲಿಸಿ ಅವರ ಪತ್ನಿಯರಂತೆಯೇ ಅಂಬೇಡ್ಕರ್ ರಮಾಬಾಯಿಯವರನ್ನು ಶಿಕ್ಷಿತರನ್ನಾಗಿ ಮಾಡಬಹುದಿತ್ತು, ಸಾರ್ವಜನಿಕ ಬದುಕಿಗೆ ತರಬಹುದಿತ್ತು ಎನ್ನುವ ಪ್ರಶ್ನೆಯನ್ನು ಅಂಬೇಡ್ಕರ್ ಅವರ ಟೀಕಾಕಾರರು ಎತ್ತುತ್ತಲೆ ಇರುತ್ತಾರೆ. ಇದು ರಮಾಬಾಯಿಯವರ ಬಗ್ಗೆ ಇರುವ ಅಜ್ಞಾನವನ್ನು ತೋರಿಸುತ್ತದೆ. ಇನ್ನು ಗಾಂಧಿ, ನೆಹರು ಅವರಿಗಿದ್ದಂತಹ privileged ಹಿನ್ನಲೆಗೂ ಅಂಬೇಡ್ಕರ್ ಅವರಿಗಿದ್ದ underprivileged ಹಿನ್ನಲೆಗೂ ಇದ್ದ ವ್ಯತ್ಯಾಸ ಏನು ಎನ್ನುವುದನ್ನು ಗುರುತಿಸಲು ಸಾಧ್ಯವಾಗದೆ ಹೋದಾಗ ಈ ರೀತಿಯ ಬಿಡು ಬೀಸಾದ ಹೇಳಿಕೆ ಕೊಡಲು ಸಾಧ್ಯ.

 

ಅಂಬೇಡ್ಕರ್ ಅವರು ರಮಾಬಾಯಿಯವರು ಶಿಕ್ಷಿತರಾಗಬೇಕು ಎಂದು ಬಯಸಿದ್ದರು, ಅಕ್ಷರ ಕಲಿಸಲು ಪ್ರಯತ್ನ ಕೂಡ ಪಟ್ಟರು. ಆದರೆ ಔಪಚಾರಿಕವಾದ ಶಿಕ್ಷಣವನ್ನು ಪಡೆಯಲು ರಮಾಬಾಯಿಯವರು ನಿರಾಕರಿಸಿದರು‌. ರಮಾಬಾಯಿಯವರು ಅಕ್ಷರ ಕಲಿಯದೇ ಹೋದರೂ ಅಪ್ರತಿಮ ರಾಜಕೀಯ ಪ್ರಜ್ಞೆಯನ್ನು ರೂಢಿಸಿಕೊಂಡರು. ಈ ಪ್ರಜ್ಞೆ ಅವರ ಬದುಕಿನ ಭಾಗವಾಗಿದ್ದ ಬಾಬಾಸಾಹೇಬರ ಹೋರಾಟದಿಂದ ಮೂಡಿದ್ದಿದುದಾಗಿತ್ತು. ತಮ್ಮ ಬದುಕಿನ ಅನುಭವದಿಂದ ಕಲಿತಿದುದಾಗಿತ್ತು.

 

ತಮ್ಮ ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅಪಾರ ಕಷ್ಟಗಳ ನಡುವೆ ಬೆಳೆದ ರಮಾಬಾಯಿ ಅಂಬೇಡ್ಕರ್ ಅವರನ್ನು ವಿವಾಹವಾದ ನಂತರವೂ ಕಷ್ಟಗಳಿಂದ ವಿಮುಕ್ತರಾಗುವುದಿಲ್ಲ. ಅಂಬೇಡ್ಕರ್ ಅವರು ಉನ್ನತ ವ್ಯಾಸಾಂಗಕ್ಕಾಗಿ ವಿದೇಶಗಳಿಗೆ ಹೋದಾಗ ತಾವು ಕಷ್ಟಪಟ್ಟು ದುಡಿದು ಸಂಸಾರ ನಡೆಸುವುದರ ಜೊತೆಗೆ ಅಂಬೇಡ್ಕರ್ ಅವರ ಓದಿಗೆ ಹಣ ಕಳಿಸುತ್ತಾರೆ. ಅಂಬೇಡ್ಕರ್ ಅಮೇರಿಕಾದಿಂದ ಉನ್ನತ ಶಿಕ್ಷಣ ಪಡೆದು ವಾಪಸಾದ ಮೇಲೆ ಸಿಡ್ನಿಹ್ಯಾಮ್ ಕಾಲೇಜಿನಲ್ಲಿ ನೌಕರಿ ಹಿಡಿಯುತ್ತಾರೆ. ಆದರೆ ಕೆಲ ದಿನಗಳಲ್ಲೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಲು ನಿರ್ಧರಿಸುತ್ತಾರೆ. ಅಂಬೇಡ್ಕರ್‌ರ ಈ ನಿರ್ಧಾರದಿಂದ ಕೋಪಗೊಳ್ಳುವ ರಮಾಬಾಯಿ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದೆ ಇರುವಾಗ ತಮ್ಮ‌ ಪತಿ ಮತ್ತೆ ವಿದೇಶಕ್ಕೆ ಹೋಗುವುದು ಮನೆಯನ್ನು ಇನ್ನಷ್ಟು ಸಮಸ್ಯೆಗಳಿಗೆ ತಳ್ಳುತ್ತದೆ ಎಂದು ಆತಂಕಗೊಳ್ಳುತ್ತಾರೆ. ಆದರೆ ಬಾಬಾಸಾಹೇಬರು ವಿದೇಶಕ್ಕೆ ತೆರಳುವುದು ಎಷ್ಟು ಅಗತ್ಯ ಎಂದು ಮನಗಂಡು ಕೆಲದಿನಗಳಲ್ಲೆ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಅಂಬೇಡ್ಕರ್ ಅವರನ್ನು ಲಂಡನ್ನಿಗೆ ಕಳಿಸಿಕೊಡುತ್ತಾರೆ.

ಅಂಬೇಡ್ಕರ್ ಅವರ ಓದಿಗಾಗಿ ರಮಾಬಾಯಿಯವರು ಪಟ್ಟ ಪರಿಶ್ರಮ ಅವರಿಬ್ಬರ ವೈಯುಕ್ತಿಕ ಬದುಕಿಗೆ ಯಾವುದೇ ದೊಡ್ಡ ಲಾಭವನ್ನು ಕೊಡಲಿಲ್ಲ. ಯಾಕೆಂದರೆ ಅಂಬೇಡ್ಕರ್ ಉನ್ನತ ವ್ಯಾಸಂಗ ಪಡೆದು ಭಾರತಕ್ಕೆ ವಾಪಸ್ಸಾಗಿ ಸರ್ಕಾರದ ಕೆಲಸ ಹಿಡಿದು ಕೇವಲ ತಮ್ಮ ಸಂಸಾರಕ್ಕೆ ಸೀಮಿತವಾಗದೆ ಸಾಮಾಜಿಕ ಹೋರಾಟಕ್ಕೆ ಧುಮುಕಿದರು. ಉನ್ನತ ಶಿಕ್ಷಣ ಪಡೆದರೆ ದೊಡ್ಡ ಹುದ್ದೆ ಪಡೆದು ಸುಖಕರ ಜೀವನ ನಡೆಸಬಹುದು ಅನ್ನುವುದಕ್ಕಾಗಿ ಅಂಬೇಡ್ಕರ್ ಓದಿದವರೂ ಅಲ್ಲ. ಅಂಬೇಡ್ಕರ್ ತಮ್ಮ ಸರ್ವಸ್ವವನ್ನೂ ಈ ದೇಶದ‌ ದಲಿತ ದಮನಿತರಿಗಾಗಿ ಮುಡಿಪಾಗಿಟ್ಟವರು. ರಮಾಬಾಯಿಯವರಂತಹ ಪತ್ನಿ ಸಿಗದಿದ್ದರೆ ಅಂಬೇಡ್ಕರ್ ವಿದೇಶದಲ್ಲಿ ಓದುವುದಕ್ಕಾಗಲೀ ಅಷ್ಟು ದೊಡ್ಡ ಸಾಮಾಜಿಕ ಹೋರಾಟ ರೂಪಿಸುವುದಕ್ಕೆ ಆಗಲಿ ಸಾಧ್ಯವಿತ್ತೆ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.

 

ರಮಾಬಾಯಿ ಶಾಲೆಗೆ ಹೋಗದಿದ್ದರೂ ತಮ್ಮ ಕಣ್ಣಮುಂದೆ ನಡೆಯುತ್ತಿದ್ದನ್ನು ನೋಡಿ ಪ್ರಜ್ಞಾವಂತಿಕೆಯನ್ನು ರೂಢಿಸಿಕೊಂಡಿದ್ದರು ಎನ್ನುವುದಕ್ಕೆ ಒಂದೆರಡು ನಿದರ್ಶನಗಳನ್ನು ಗಮನಿಸಬಹುದು:

 

ಅಂಬೇಡ್ಕರ್ ತಾವು ಸಂಘಟಿಸುತ್ತಿದ್ದ ಹೋರಾಟಗಳಲ್ಲಿ ಮಹಿಳೆಯರನ್ನು ಮುನ್ನಡೆಸುವಂತೆ ರಮಾಬಾಯಿಯವರನ್ನು ಕೇಳಿಕೊಂಡರೂ ಅವರು ಮುನ್ನಲೆಗೆ ಬರಲಿಲ್ಲ. 'ಮಹಾಡ್ ಸತ್ಯಾಗ್ರಹದ' ಸಂದರ್ಭದಲ್ಲಿ ಮಹಿಳೆಯರ ಅಧಿವೇಶನವನ್ನು ಮುನ್ನಡೆಸಲು ಕೇಳಿಕೊಂಡಾಗ ಅದನ್ನು ನಿರಾಕರಿಸಿ ಮೊದಲು ಸತ್ಯಾಗ್ರಹಿಗಳಿಗೆ ಆಹಾರ ತಯಾರಿಸುವುದಕ್ಕೆ ನಿಂತರು. ಆ ನಂತರ ದಮನಿತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.

 

ಬಾಬಾಸಾಹೇಬರು ಇಂಗ್ಲೆಂಡಿಗೆ ಹೊರಡುವುದಕ್ಕೆ ಮೊದಲು ತಮ್ಮ ತಂದೆಯ ಶ್ರಾದ್ಧವನ್ನು ಮಾಡಲು ನಿರ್ಧರಿಸುತ್ತಾರೆ. ಆಗ ನಲವತ್ತು ಜನ ದಲಿತ ವಿದ್ಯಾರ್ಥಿಗಳನ್ನು ಊಟಕ್ಕೆ ಆಹ್ವಾನಿಸುತ್ತಾರೆ. ರಮಾಬಾಯಿಯವರು ರೂಢಿಯಂತೆ ಶ್ರಾದ್ಧಕ್ಕೆ ಸಿಹಿಯೂಟ ಮಾಡಲು ಮುಂದಾದಾಗ ಬಾಬಾಸಾಹೇಬರು ಆ ವಿದ್ಯಾರ್ಥಿಗಳಿಗೆ ಮೀನು ಮತ್ತು ಮಾಂಸದ ಊಟ ಮಾಡಿ ಬಡಿಸಲು ಇಚ್ಛಿಸುತ್ತಾರೆ. ಹಾಸ್ಟೆಲ್ಲಿನಲ್ಲಿ ಸಿಗದ ಪೌಷ್ಟಿಕ ಆಹಾರವನ್ನು ತಮ್ಮ ತಂದೆಯ ಶ್ರಾದ್ಧದ ನೆಪದಲ್ಲಿ ಮಕ್ಕಳಿಗೆ ಕೊಡಬೇಕು ಎನ್ನುವುದು ಬಾಬಾಸಾಹೇಬರ ಉದ್ದೇಶವಾಗಿರುತ್ತದೆ. ಇದನ್ನು ಅರ್ಥಮಾಡಿಕೊಂಡ ರಮಾಬಾಯಿ ಆ ವಿದ್ಯಾರ್ಥಿಗಳಿಗೆ ಮೀನು ಮತ್ತು  ಮಾಂಸದ ಊಟವನ್ನು ಮಾಡಿ ಬಡಿಸುತ್ತಾರೆ. ಮೊದಲಿಗೆ ಅಪಾರವಾದ ದೈವಶ್ರದ್ಧೆಯನ್ನು ಹೊಂದಿದ್ದ ರಮಾಬಾಯಿ ಬಾಬಾಸಾಹೇಬರಿಂದಾಗಿ ವೈಚಾರಿಕತೆಯನ್ನು ಬೆಳೆಸಿಕೊಳ್ಳುತ್ತಾ ಬದಲಾಗುತ್ತಾ ಹೋದರು.

 

ಸಾರ್ವಜನಿಕ ಬದುಕಿನಲ್ಲಿ ಹಿನ್ನಲೆಯಲ್ಲಿದ್ದುಕೊಂಡೆ ಕೆಲಸ ಮಾಡಲು ಬಯಸುತ್ತಿದ್ದ ರಮಾಬಾಯಿ ಬಾಬಾಸಾಹೇಬರು  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಧಾರವಾಡದಲ್ಲಿ ಸ್ಥಾಪಿಸಿದ್ದ ಹಾಸ್ಟೆಲ್ಲಿನಲ್ಲಿ ಆಯೋಜಿಸಿದ್ದ ದಲಿತ ಸಮುದಾಯದ ಉಪಜಾತಿಗಳ ಮಹಿಳೆಯರ ಸಹಭೋಜನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿ ಜಾತಿವಿನಾಶದ ಅಗತ್ಯದ ಕುರಿತು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಆ ಹಾಸ್ಟೆಲ್ಲನ್ನು ನಡೆಸುತ್ತಿದ್ದ ರಾಧಬಾಯಿ ವರಾಳೆಯವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಸ್ವತಃ ಬಾಬಾಸಾಹೇಬರು ರಮಾಬಾಯಿಯವರ ಈ ನಡೆಯನ್ನು ಹೆಮ್ಮೆಯಿಂದ ಹೇಳಿಕೊಂಡು ಬೀಗುತ್ತಿದ್ದರಂತೆ.

 

ಇನ್ನೊಮ್ಮೆ ಮಾಂಗ್ ಸಮುದಾಯದ ಹುಡುಗನೊಬ್ಬನಿಗೆ ಹಾಸ್ಟೆಲ್ ಸಿಗದಿದ್ದಾಗ ಆ ಹುಡುಗನನ್ನು ಮನೆಗೆ ಕರೆದುಕೊಂಡು ಬಂದು ಆಶ್ರಯ ಕೊಡುವುದಲ್ಲದೆ ತಮ್ಮ ಒಡವೆಯನ್ನು ಅಡವಿಟ್ಟು ಆ ಹುಡುಗನ‌ ಓದಿಗೆ ರಮಾಬಾಯಿ ಸಹಾಯ ಮಾಡುತ್ತಾರೆ.

 

ಈ ಘಟ‌ನೆಗಳು ಕೇವಲ ಶಿಕ್ಷಣ ಪಡೆದವರು ಮಾತ್ರವೇ ಮಾಡಬಹುದಾದ ಕೆಲಸಗಳಲ್ಲ. ಅದಕ್ಕೆ ಅಕ್ಷರವನ್ನು ಮೀರಿದ ಅಂತಃಕರಣ ಬೇಕಾಗುತ್ತದೆ. ರಮಾಬಾಯಿಯವರು ಅಂಬೇಡ್ಕರ್ ಅವರಷ್ಟು ಶಿಕ್ಷಿತೆಯಲ್ಲದಿದ್ದದ್ದು ಅವರಿಬ್ಬರ ನಡುವಿನ ಸಂಬಂಧದಲ್ಲಿ ದೊಡ್ಡ ಕೊರತೆಯಾಗಿರಲಿಲ್ಲ‌. ಅಂಬೇಡ್ಕರ್ ಮತ್ತು ರಮಾಬಾಯಿಯರ ಸಂಬಂಧ ಪರಸ್ಪರ ಗೌರವ, ಘನತೆ ಮತ್ತು ಪ್ರೀತಿ ತುಂಬಿದ್ದ ಅರ್ಥಪೂರ್ಣವಾದ ಸಂಬಂಧ‌. ಈ ದೇಶದ ದೊಡ್ಡ ದಮನಿತ ಸಮುದಾಯವನ್ನು ತಮ್ಮ ಮಕ್ಕಳೆಂಬಂತೆ ಕಂಡ ಸಂಬಂಧ.ಬಾಲ್ಯದಿಂದ ಕಷ್ಟಗಳಲ್ಲೆ ಬೆಳೆದಿದ್ದರಿಂದ ಸೊರಗಿದ್ದ ರಮಾಬಾಯಿ ಅನಾರೋಗ್ಯಕ್ಕೆ ಒಳಗಾದರು. ಜೊತೆಗೆ ತಮ್ಮ ನಾಲ್ಕು ಮಕ್ಕಳ ಸಾವು ರಮಾಬಾಯಿಯವರನ್ನು ಮಾನಸಿಕವಾಗಿ ಕುಗ್ಗಿಸಿತ್ತು.

ಅವರ ಕಡೆಯ ದಿನಗಳಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಧಾರವಾಡದಲ್ಲಿ ಕೆಲದಿನ ತಂಗಿದ್ದರು. ತೀವ್ರ ಅನಾರೋಗ್ಯಕ್ಕೆ ಒಳಗಾದ ರಮಾಬಾಯಿಯವರಿಗೆ ನೀಡಿದ ಯಾವ ಚಿಕಿತ್ಸೆಯೂ ಫಲಕಾರಿಯಾಗದೆ 1935ರ  ಮೇ 27 ರಂದು ತೀರಿಕೊಳ್ಳುತ್ತಾರೆ.

ರಮಾಬಾಯಿಯವರು ತೀರಿಕೊಂಡಾಗ ಅಂಬೇಡ್ಕರ್ ವಾರಗಟ್ಟಲೆ ಮಗುವಿನಂತೆ ಅತ್ತಿದ್ದನ್ನು ದನಂಜಯ್ ಕೀರ್ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಅಂಬೇಡ್ಕರ್ ಅವರ ಹೋರಾಟ ಈ ದೇಶದ ದಮನಿತರ ಬದುಕಿಗೆ ಎಷ್ಟು ಅಗತ್ಯ ಎನ್ನುವುದನ್ನು ಅರ್ಥ ಮಾಡಿಕೊಂಡ ರಮಾಬಾಯಿ ತಮ್ಮ ಇಡಿ ಬದುಕನ್ನು ಅಂಬೇಡ್ಕರ್ ಅವರಿಗೆ ಹೆಗಲಾಗುವುದಕ್ಕೆ ಮೀಸಲಿಟ್ಟರು. ಅಂಬೇಡ್ಕರ್ ಕಂಡ ಸಮಾನತೆಯ ಕನಸಿನಲ್ಲಿ ಪಾಲುದಾರರಾಗಿ ಬದಲಾದರು. ಅಂಬೇಡ್ಕರ್ ಅವರ ಬದುಕಿನಲ್ಲಿ ದೊಡ್ಡ ಪಾತ್ರ ವಹಿಸಿದ್ದರಿಂದಲೇ ಅವರನ್ನು ದಲಿತ ಸಮುದಾಯದ ತಾಯಿಯ ಸ್ಥಾನಕ್ಕೆ ಏರಿಸಿತು. ರಮಾಬಾಯಿಯವರ ತ್ಯಾಗ, ಪರಿಶ್ರಮ ಮತ್ತು ಸಮುದಾಯದ ಕುರಿತ ಕಾಳಜಿ ಹಾಡು, ಲಾವಣಿಗಳಾಗಿ ಮಹಾರಾಷ್ಟ್ರದ ಜನಪದದ ಭಾಗವಾಗಿದೆ. ಅಂಬೇಡ್ಕರ್ ಮತ್ತು ರಮಾಬಾಯಿಯವರ ದಾಂಪತ್ಯದ ಕುರಿತು ಕಟ್ಟಿರುವ ಹಾಡು, ಲಾವಣಿಗಳಲ್ಲಿ ಅವರಿಬ್ಬರ ಸಂಬಂಧ ವೈಯುಕ್ತಿಕವಾದದ್ದನ್ನು ಮೀರಿ ದಲಿತ ಸಮುದಾಯದ ಏಳಿಗೆಗೆ ಹೇಗೆ ಮುಡಿಪಾಯಿತು ಎನ್ನುವುದನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುವುದು ಇದೆ.

ಮಹಾರಾಷ್ಟ್ರದ ಯಾವುದೋ ಒಂದು ಬಡಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳು ದೇಶಕ್ಕೆ ಅಂಬೇಡ್ಕರ್ ಅಂತಹ ದೊಡ್ಡ ವಿಮೋಚಕನನ್ನು ರೂಪಿಸಿಕೊಟ್ಟು ಭಾರತದ ಸಮಾಜದಲ್ಲಿ ದೊಡ್ಡ ಚಲನೆ ಕಾರಣರಾದರು. ಆ ಮೂಲಕ ಬಾಬಾಸಾಹೇಬರು ದಲಿತ ಸಮುದಾಯದ ತಂದೆಯಂತಾದರೆ ರಮಾಬಾಯಿ 'ರಮಾಯಿ' ಆಗುವ ಮೂಲಕ ದಲಿತ ಸಮುದಾಯದ ಮಹಾತಾಯಿ ಆಗಿ ಉಳಿದು ಹೋದರು.

ಇವರ ತ್ಯಾಗ, ಪರಿಶ್ರಮ, ಬದ್ಧತೆಗೆ ದೇಶದ ದಲಿತ ದಮನಿತ ಸಮುದಾಯ ಯಾವತ್ತೂ ಋಣಿಯಾಗಿರುತ್ತದೆ.

ಮಹಾತಾಯಿ ರಮಾಬಾಯಿಯವರ ಹುಟ್ಟುಹಬ್ಬದಂದು ಅವರನ್ನು ಪ್ರೀತಿ, ಗೌರವ, ಕೃತಜ್ಞತೆಯಿಂದ ಸ್ಮರಿಸಿಕೊಳ್ಳೋಣ.