ಸ್ವಚ್ಚ ಭಾರತ, ಶುದ್ಧ ಜಲ - ಮಲಿನ ಮನಸುಗಳು- ನಾ ದಿವಾಕರ, ವರ್ತಮಾನ

ಸ್ವಚ್ಚ ಭಾರತ, ಶುದ್ಧ ಜಲ - ಮಲಿನ ಮನಸುಗಳು- ನಾ ದಿವಾಕರ, ವರ್ತಮಾನ
art by MG Doddamani

ವರ್ತಮಾನ

ನಾ.ದಿವಾಕರ


“ 21ನೆಯ ಶತಮಾನದ ಮೂರನೆಯ ದಶಕದಲ್ಲೂ ದೇವಾಲಯ ಪ್ರವೇಶಿಸುವ ಅಸ್ಪೃಶ್ಯನಿಗೆ ದಂಡ ವಿಧಿಸಲಾಗುತ್ತದೆ. ಎರಡು ವರ್ಷದ ಹಸುಳೆ ಮೆಟ್ಟಿದ ದೇವಾಲಯವನ್ನು ಶುದ್ಧೀಕರಿಸಲಾಗುತ್ತದೆ. ಈ ಶುದ್ಧೀಕರಣಕ್ಕೆ ಅದೇ ಅಸ್ಪೃಶ್ಯ ತನ್ನ ಶ್ರಮದಿಂದ ಗಳಿಸಿದ ಹಣವನ್ನೇ ದಂಡದ ರೂಪದಲ್ಲಿ ಬಳಸಲಾಗುತ್ತದೆ. ಅಸ್ಸಾಂನಲ್ಲಿ ಶವದ ಮೇಲೆ ನರ್ತಿಸಿದ ಮಾಧ್ಯಮ ಛಾಯಾಗ್ರಾಹಕ ಈ ಸಂದರ್ಭದಲ್ಲಿ ಒಂದು ರೂಪಕದಂತೆ ಕಾಣುತ್ತಾನೆ. ಕೊಪ್ಪಳದ ಶುದ್ಧೀಕರಿಸಿದ ದೇವಾಲಯದಲ್ಲಿ ಅಂತಹುದೇ ಸಂಭ್ರಮವನ್ನು ಕಾಣದೆ ಹೋದರೆ ಬಹುಶಃ ನಾವು ಭ್ರಮೆಗೆ ಜಾರಿರುವುದು ನಿಚ್ಚಳವಾಗುತ್ತದೆ.”

ಸ್ವಚ್ಚ ಭಾರತ, ಶುದ್ಧ ಜಲ - ಮಲಿನ ಮನಸುಗಳು

ಪಾಪಪ್ರಜ್ಞೆಯೊಂದಿಗೋ, ಅನಿವಾರ್ಯತೆಗೆ ಶರಣಾಗಿಯೋ ಅಥವಾ ಗೌರವಪೂರ್ವಕವಾಗಿಯೋ ಭಾರತ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಿಸುತ್ತದೆ. ಭಾರತದ ಸಾಮಾನ್ಯ ಜನತೆ ಅತ್ಯಮೂಲ್ಯವಾದ ಸ್ವಾತಂತ್ರö್ಯ ಗಳಿಸಿದ ಬೆನ್ನಲ್ಲೇ ತನ್ನೊಳಗಿನ ಒಂದು ಅಮೂಲ್ಯ ಚೇತನವನ್ನೂ ಕಳೆದುಕೊಂಡಿದ್ದನ್ನು ಗಾಂಧಿಯ ಹತ್ಯೆಯಲ್ಲಿ ಕಾಣಬಹುದು. ಇಂದು ಗಾಂಧಿ ಒಂದು ರೂಪಕವಾಗಿ ಉಳಿದಿದ್ದಾರೆ, ಕೆಲವೊಮ್ಮೆ ಸಂಕೇತದAತೆ ಕಾಣುತ್ತಾರೆ. ಅನಿವಾರ್ಯವಾಗಿ ರಾಜಕೀಯ ನಾಯಕರುಗಳಿಗೆ ಇಂದಿಗೂ ಒಂದು ಬಂಡವಾಳವಾಗಿಯೇ ಇದ್ದಾರೆ. ಗಾಂಧಿ ಹಂತಕನಿಗೆ ವಂದಿಸುತ್ತಲೇ ಮಹಾತ್ಮನಿಗೂ ಗೌರವ ಸಲ್ಲಿಸುವ ಒಂದು ಮಲಿನ ಮನಸ್ಥಿತಿಯ ನಡುವೆ ಭಾರತದ ರಾಜಕಾರಣ, ಗಾಂಧಿ ನಡೆದ ಹಾದಿಯನ್ನು ಸ್ವಚ್ಚತೆಯ ಮೂಸೆಯಲ್ಲಿ ಕಂಡುಕೊಳ್ಳುತ್ತಿದೆ. 

ಗಾಂಧಿ ಕಂಡಿದ್ದ ಸ್ವಚ್ಚ ಭಾರತದ ಕನಸಿಗೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮವಿತ್ತು, ಒಂದು ಬೌದ್ಧಿಕ ನೆಲೆಯೂ ಇತ್ತು. ಭಾರತದ ಸಮಾಜದಲ್ಲಿ ಶತಮಾನಗಳಿಂದಲೂ ಬೇರೂರಿದ್ದ ಅಸ್ಪೃಶ್ಯತೆ, ಅಸಮಾನತೆ ಮತ್ತು ಮನುಜ ದೌರ್ಜನ್ಯಗಳನ್ನು ತೊಡೆದು ಹಾಕಿ ಒಂದು ಸೌಹಾರ್ದತಯುತ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಸ್ವಚ್ಚ ಮಾರ್ಗಗಳನ್ನು ನಿರ್ಮಿಸುವುದು ಅವರ ಧ್ಯೇಯಗಳಲ್ಲೊಂದಾಗಿತ್ತು. ಇಂದು ಗಾಂಧಿ ಹಲವು ಆಯಾಮಗಳಲ್ಲಿ ಚರ್ಚೆಗೊಳಗಾಗುತ್ತಾರೆ, ಹಲವು ನೆಲೆಗಳಲ್ಲಿ ನಿಷ್ಕರ್ಷೆಗೊಳಗಾಗುತ್ತಾರೆ. ಬಹುಶಃ ದ್ವೇಷ-ಅಸೂಯೆ ಮತ್ತು ಪ್ರೀತಿ-ಗೌರವ ಇವೆರಡನ್ನೂ ಸಮಾನವಾಗಿ ಸಂಪಾದಿಸಿರುವ ಏಕೈಕ ನಾಯಕ ಗಾಂಧಿ ಎಂದರೆ ಅತಿಶಯವೇನಾಗಲಾರದು. 

ಭಾರತದ ಪ್ರಧಾನಿಗಳು ತ್ಯಾಜ್ಯ ಮುಕ್ತ ಭಾರತಕ್ಕೆ ಸಂಕಲ್ಪ ತೊಟ್ಟಿದ್ದಾರೆ. ಹಾಗೆಯೇ ಪ್ರತಿಯೊಬ್ಬ ಪ್ರಜೆಗಳೂ ಶುದ್ಧ ಜಲ ನೀಡುವ ಛಲ ತೊಟ್ಟಿದ್ದಾರೆ. ಬಹಳ ಸಂತೋಷ. ಭಾರತ ತ್ಯಾಜ್ಯ ಮುಕ್ತವಾಗಬೇಕು. ಪ್ರತಿ ಮನೆಯಲ್ಲೂ ಹಸಿ ಕಸ-ಒಣ ಕಸವನ್ನು ಬೇರ್ಪಡಿಸುವ ಮೂಲಕ, ಶೌಚಾಲಯಗಳನ್ನು ಬಳಸುವ ಮೂಲಕ, ಬಯಲು ಶೌಚವನ್ನು ನಿರ್ಮೂಲ ಮಾಡುವ ಮೂಲಕ ಭಾರತದ ಪ್ರತಿ ರಸ್ತೆಯೂ, ಪ್ರತಿ ಮನೆಯೂ ನಳನಳಿಸಬೇಕು ಎನ್ನುವ ಕನಸು ಸಾಕಾರಗೊಳ್ಳಬೇಕಾದ್ದೇ. ಹಾಗೆಯೇ ಪ್ರತಿಯೊಬ್ಬ ಪ್ರಜೆಗೂ ಶುದ್ಧ ಜಲ ದೊರೆಯುವುದು ನಮ್ಮ ಹಕ್ಕೊತ್ತಾಯವೂ ಆಗಿರಬೇಕು. ತ್ಯಾಜ್ಯ ನಿರ್ಮೂಲನೆ ಮತ್ತು ಶುದ್ಧಜಲ ಪೂರೈಕೆಯೇ ಆಳುವ ವರ್ಗಗಳ ಸದುದ್ದೇಶಗಳಲ್ಲೊಂದಾದರೆ, ಸ್ವಾಗತಾರ್ಹವೇ.
ಆದರೆ ನಮ್ಮ ದೃಷ್ಟಿ ನೆಡಬೇಕಿರುವುದು ರಸ್ತೆ ಬದಿಯ ತ್ಯಾಜ್ಯದ ಮೇಲಲ್ಲ. ಹರಿವ ಗಂಗೆಯ ಶುದ್ಧತೆಯ ಮೇಲಲ್ಲ. ಸ್ವಚ್ಚ ಭಾರತ ಅಭಿಯಾನದಿಂದ ಭಾರತ ತ್ಯಾಜ್ಯಮುಕ್ತವಾಗಲು ಸಾಧ್ಯವಾಗಬಹುದು. ಆದರೆ ನಮ್ಮೊಳಗಿನ ಬೌದ್ಧಿಕ ತ್ಯಾಜ್ಯವನ್ನು ನಿರ್ಮೂಲ ಮಾಡುವುದಾದರೂ ಯಾರು ? ಪರಿಶುದ್ಧ ಜಲ ಸೇವಿಸುವ ಭಾರತದ ಪ್ರಜೆಗಳ ದೇಹ ಸ್ವಾಸ್ಥö್ಯ ಸುಧಾರಿಸಲು ಸಾಧ್ಯ. ಆದರೆ ನರನಾಡಿಗಳಲ್ಲಿ ಪ್ರವಹಿಸುತ್ತಿರುವ ಜಾತಿ ಪ್ರಜ್ಞೆಯ, ಮತಾಂಧತೆಯ ಮಾಲಿನ್ಯವನ್ನು ಒಂದು ತಂಬಿಗೆ ನೀರಿನಿಂದ ಹೋಗಲಾಡಿಸಲು ಸಾಧ್ಯವೇ ? ಈ ಮಾಲಿನ್ಯವನ್ನು ಲಜ್ಜೆಗೆಟ್ಟು ಪ್ರದರ್ಶಿಸುತ್ತಿರುವ ನಮ್ಮ ರಾಜಕೀಯ ನಾಯಕರು, ಸಾಂಸ್ಕೃತಿಕ ನೇತಾರರು, ಮತ ಪ್ರಚಾರಕರು, ಅಧ್ಯಾತ್ಮ ಗುರುಗಳು ಸುಧಾರಿಸಲು ಸಾಧ್ಯವೇ ?

ಹರಿವ ಗಂಗೆ ಸದಾ ಪರಿಶುದ್ಧವಾಗಿಯೇ ಇರುತ್ತಾಳೆ ಏಕೆಂದರೆ ಅದು ನೈಸರ್ಗಿಕ ನಿಯಮ. ಹರಿವ ನೀರು ಎಲ್ಲ ತ್ಯಾಜ್ಯಗಳನ್ನೂ ಬದಿಗೊತ್ತಿ ತನ್ನ ಪಥವನ್ನು ಕಂಡುಕೊಳ್ಳುತ್ತದೆ. ಆದರೆ ನಿಂತ ನೀರಿನಲ್ಲಿ ಬೆಳೆದ ಜೊಂಡು ಯಾರಿಗೆ ಸಲ್ಲಬೇಕು. ಹರಿವ ಜಲವನ್ನು ಮಲಿನಗೊಳಿಸುವ ಮನಸುಗಳನ್ನು ಯಾರು ಜಾಗೃತಗೊಳಿಸಬೇಕು ? ನಿಸರ್ಗ ಒದಗಿಸುವ ಜಲಸಂಪನ್ಮೂಲಗಳ ಮೇಲೆ ತಮ್ಮ ಒಡೆತನ ಸಾಧಿಸುವ ಮೂಲಕ, ವಂಚಕ ದಂಧೆಗೆ ಜಲಸಂಪತ್ತನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಬಂಡವಾಳಶಾಹಿಗಳನ್ನು ಯಾರು ಎಚ್ಚರಿಸಬೇಕು ? ಅಶುದ್ಧವಾದುದನ್ನು ಶುದ್ಧೀಕರಿಸಲು ಒಂದೆರಡು ಹನಿ ನೀರನ್ನು ಪ್ರೋಕ್ಷಣೆ ಮಾಡುವ ಮುನ್ನ ಯೋಚಿಸಬೇಕಾದ್ದು, ಈ ಪ್ರೋಕ್ಷಣೆ ಮಾಡುವ ಕೈಗಳು ಬೌದ್ಧಿಕ ತ್ಯಾಜ್ಯದಿಂದ ಮುಕ್ತವಾಗಿಯೇ ಎಂದು, ಅಲ್ಲವೇ ?

ಗಾಂಧಿ ಮತ್ತು ಶಾಸ್ತಿç ಈ ಎರಡು ದಿವ್ಯ ಚೇತನಗಳ ಜನ್ಮ ದಿನ ಆಚರಿಸುತ್ತಿರುವ ಸಮಸ್ತ ಭಾರತೀಯರು ಸ್ಮರಿಸಬೇಕಾದ್ದು 1965ರ ಯುದ್ಧೋನ್ಮಾದವನ್ನಲ್ಲ. ಹಲವು ಬರಹಗಳಲ್ಲಿ ಲಾಲಬಹದ್ದೂರ್ ಶಾಸ್ತಿçಯವರನ್ನು ಸ್ಮರಿಸುವಾಗ ಈ ಯುದ್ಧೋನ್ಮಾದವೇ ಪ್ರಧಾನವಾಗಿ ಕಾಣುತ್ತದೆ. ಪೇಲವ ದೇಹದ, ದುರ್ಬಲ ಕಾಯದ ಪ್ರಧಾನಿಯೊಬ್ಬರು ದಿಟ್ಟ ನಿರ್ಧಾರ ಕೈಗೊಂಡು ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ವಿಜಯಿಯಾದದ್ದನ್ನು ಸ್ಮರಿಸುವುದು ಸಾಮಾನ್ಯವಾಗಿದೆ. ಇದೊಂದು ಚಾರಿತ್ರಿಕ ವ್ಯಂಗ್ಯ. ಯುದ್ಧೋನ್ಮಾದ ಎನ್ನುವುದು ಹೇಗೆ ನಮ್ಮ ಸೂಕ್ಷö್ಮ ಸಂವೇದನೆಗಳನ್ನು ನಿಷ್ಕಿçಯಗೊಳಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ. 

ಆದರೆ #ಆತ್ಮನಿರ್ಭರ ಭಾರತ ಈಗಾಗಲೇ ಈ ಮನುಜ ಸೂಕ್ಷö್ಮತೆಯನ್ನು ಕಳೆದುಕೊಂಡಿದೆ. ಯುದ್ಧಗಳು ಸೃಷ್ಟಿಸುವ ಸಾವು ನೋವುಗಳನ್ನು ಹೇಗೆ ಸಂಭ್ರಮಿಸಬಹುದು ಎನ್ನುವುದಕ್ಕೆ ಅಸ್ಸಾಂನ ಒಬ್ಬ ಪತ್ರಿಕಾ ಛಾಯಾಗ್ರಾಹಕ ಪ್ರಾತ್ಯಕ್ಷಿಕೆಯನ್ನೇ ನೀಡಿ ಕೃತಾರ್ಥನಾಗಿದ್ದಾನೆ. ಇಷ್ಟು ದಿನ ಮೃತ ದೇಹಗಳನ್ನು ಜಾತಿ ಮತಗಳ ಮೂಸೆಯಲ್ಲಿ ಎಣಿಸುತ್ತಿದ್ದ ಭಾರತ ಈಗ ಶವಗಳ ಮೇಲೆ ನರ್ತಿಸಲು ಸಜ್ಜಾಗುತ್ತಿದೆ. ಈ ಮನಸುಗಳಿಗೆ ಶಾಸ್ತಿç ಒಬ್ಬ ವೀರಯೋಧನಂತೆ ಕಾಣುತ್ತಾರೆ. ಆದರೆ ಅವರ ಜೈ ಜವಾನ್ ಘೋಷಣೆಯೊಂದಿಗೇ ಬೆಸೆದಿದ್ದ ಜೈ ಕಿಸಾನ್ ನಮಗೆ ಬೇಡವಾಗಿದೆ. ಏಕೆಂದರೆ ಈ ಕಿಸಾನ್‌ಗಳು ಪ್ರಭುತ್ವದ ದೃಷ್ಟಿಯಲ್ಲಿ, ಆಳುವವರ ವಂದಿಮಾಗಧರ ದೃಷ್ಟಿಯಲ್ಲಿ ದೇಶದ್ರೋಹಿಗಳಾಗಿ ಕಾಣುತ್ತಿದ್ದಾರೆ. ಪಾಪ ಈ ಬೌದ್ಧಿಕ ವಿಕೃತಿಯ ನಡುವೆ ಶಾಸ್ತಿç ಪೇಲವವಾಗಿಯೇ ಕಂಡರೆ ಅಚ್ಚರಿಯೇನಿಲ್ಲ.

ಜವಾನ್ ಅಂದರೆ ನಮ್ಮ ಸೈನಿಕರು ದೇಶದ ಗಡಿ ಪ್ರದೇಶಗಳಲ್ಲಿ ಅನ್ನಾಹಾರಗಳನ್ನು ತೊರೆದು ದೇಶರಕ್ಷಣೆಯಲ್ಲಿ ತೊಡಗಿರುತ್ತಾರೆ, ಕಿಸಾನ್ ಅಂದರೆ ರೈತರು ತಮ್ಮ ಸ್ವಹಿತಾಸಕ್ತಿಗಳನ್ನು ಬದಿಗಿಟ್ಟು ದೇಶದ ಜನತೆಗೆ ಅವಶ್ಯವಾದ ಆಹಾರ ಉತ್ಪಾದಿಸುತ್ತಾರೆ. ಈ ಎರಡು ಚೈತನ್ಯಗಳನ್ನು ಸಂಭ್ರಮಿಸುವ ಮುನ್ನ ನಾವು ಯೋಚಿಸಬೇಕಿರುವುದು, ನಮ್ಮ ಸೈನಿಕರು ಎಂತಹ ದೇಶವನ್ನು ರಕ್ಷಿಸುತ್ತಿದ್ದಾರೆ ಎಂದು, ನಮ್ಮ ರೈತರು ಹೇಗೆ ಬದುಕು ಸವೆಸುತ್ತಿದ್ದಾರೆ ಎಂದು, ಅಲ್ಲವೇ ? ಈ ಆತ್ಮಾವಲೋಕನದ ಹಾದಿಯಲ್ಲಿ ಸಾಗುವಾಗ ನಮಗೆ ಕಾಣುವುದಾದರೂ ಏನು ? ದ್ವೇಷ, ಅಸೂಯೆ, ಈರ್ಷೆ, ಮತಾಂಧತೆ, ಜಾತಿ ದೌರ್ಜನ್ಯ, ಶೋಷಣೆ, ಅತ್ಯಾಚಾರ, ಭ್ರಷ್ಟಾಚಾರ, ಅಮಾನುಷತೆ, ಹಿಂಸೆ ಇವೆಲ್ಲವನ್ನೂ ಮಡಿಲ್ಲಿಟ್ಟುಕೊಂಡಿರುವ ಭಾರತಕ್ಕೆ ನಮ್ಮ ಸೈನಿಕರು ಜೀವ ಪಣಕ್ಕಿಟ್ಟು ರಕ್ಷಣೆ ನೀಡುತ್ತಿದ್ದಾರೆ. ಮತ್ತೊಂದೆಡೆ ತಮ್ಮ ಭೂಮಿ, ಫಸಲು, ಶ್ರಮದ ಬೆಲೆ ಮತ್ತು ಮೂಲ ನೆಲೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿ , ಆತ್ಮಹತ್ಯೆಗೆ ಶರಣಾಗಿರುವ ಮೂರೂವರೆ ಲಕ್ಷ ಹುತಾತ್ಮ ರೈತರ ಸ್ಮರಣೆಯಲ್ಲಿ ಅಸ್ತಿತ್ವಕ್ಕಾಗಿ ಹತ್ತು ತಿಂಗಳಿನಿAದ ಹೋರಾಡುತ್ತಿರುವ ಈ ದೇಶದ ರೈತ ಬಾಂಧವರು. ಹೌದಲ್ಲವೇ ?

ಗಾಂಧಿಯನ್ನು ಕೊಂದವರು ನಾವೇ ಎಂದು ನಿರ್ಭಿಡೆಯಿಂದ ಘೋಷಿಸುವ ಮತಾಂಧರನ್ನು ಸ್ವತಂತ್ರ ಭಾರತ ಸೃಷ್ಟಿಸಿದೆ, ಹಾಗೆಯೇ ಗಾಂಧಿಯ ಹಂತಕನನ್ನು ವೈಭವೀಕರಿಸಿ ಗೌರವಿಸುವ ಪರಂಪರೆಗೆ ಸಾಂವಿಧಾನಿಕ ನೆಲೆಯಲ್ಲಿ ಮಾನ್ಯತೆ ನೀಡುವ ಒಂದು ಆಳುವ ವರ್ಗವನ್ನೂ ಸೃಷ್ಟಿಸಿದೆ. ಹಂತಕನಿಗೆ ವಂದಿಸುವವರು ಹುತಾತ್ಮರನ್ನು ನೆನೆಯುವ ನೈತಿಕ ಹಕ್ಕನ್ನು ಕಳೆದುಕೊಳ್ಳುವುದಿಲ್ಲವೇ ? ಆದರೆ ನಾವು ಎರಡನ್ನೂ ಪುರಸ್ಕರಿಸುತ್ತಿದ್ದೇವೆ. ಗಾಂಧಿ ಹಂತಕನನ್ನು ಪೂಜಿಸುತ್ತಲೇ ಸಹಜ ಸಾವಿಗೀಡಾದ ಶಾಸ್ತಿçಯವರ ‘ ಕಲ್ಪಿತ ’ ಹಂತಕರನ್ನು ಶೋಧಿಸುವ ನಿಟ್ಟಿನಲ್ಲಿ ವಾಟ್ಸಾಪ್ ವಿಶ್ವವಿದ್ಯಾಲಯದ ಸಂಶೋಧಕರು ನಿರತರಾಗಿದ್ದಾರೆ. ಗಾಂಧಿಯಲ್ಲಿ ಕೇವಲ ಸ್ವಚ್ಚತೆಯನ್ನು ಮಾತ್ರ ಕಾಣುವ ಮನಸುಗಳೇ ಶಾಸ್ತಿçಯಲ್ಲಿ ಒಬ್ಬ ಯೋಧನನ್ನು ಮಾತ್ರ ಕಾಣುತ್ತಿವೆ. ಗಾಂಧಿ ಬೋಧಿಸಿದ ಸತ್ಯಾನ್ವೇಷಣೆಯ ಮಾರ್ಗಗಳಾಗಲೀ, ಶಾಸ್ತಿç ಬಯಸಿದ ಸಮೃದ್ಧ ರೈತನ ಬದುಕು ಆಗಲೀ ನಮಗೆ ಗೋಚರಿಸುತ್ತಿಲ್ಲ.

ಹಾಗಾಗಿಯೇ 21ನೆಯ ಶತಮಾನದ ಮೂರನೆಯ ದಶಕದಲ್ಲೂ ದೇವಾಲಯ ಪ್ರವೇಶಿಸುವ ಅಸ್ಪೃಶ್ಯನಿಗೆ ದಂಡ ವಿಧಿಸಲಾಗುತ್ತದೆ. ಎರಡು ವರ್ಷದ ಹಸುಳೆ ಮೆಟ್ಟಿದ ದೇವಾಲಯವನ್ನು ಶುದ್ಧೀಕರಿಸಲಾಗುತ್ತದೆ. ಈ ಶುದ್ಧೀಕರಣಕ್ಕೆ ಅದೇ ಅಸ್ಪೃಶ್ಯ ತನ್ನ ಶ್ರಮದಿಂದ ಗಳಿಸಿದ ಹಣವನ್ನೇ ದಂಡದ ರೂಪದಲ್ಲಿ ಬಳಸಲಾಗುತ್ತದೆ. ಈ ವಿಪರ್ಯಾಸದ ನಡುವೆಯೇ ಭಾರತದಲ್ಲಿ ಅಸ್ಪೃಶ್ಯತೆಯನ್ನು ಇನ್ನೂ ಜೀವಂತವಾಗಿಡುವ ಒಂದು ಶಕ್ತಿ ನಮ್ಮೊಳಗೆ ಇರುವುದನ್ನು ಕಾಣಬೇಕಿದೆ. ಅಸ್ಸಾಂನಲ್ಲಿ ಶವದ ಮೇಲೆ ನರ್ತಿಸಿದ ಮಾಧ್ಯಮ ಛಾಯಾಗ್ರಾಹಕ ಈ ಸಂದರ್ಭದಲ್ಲಿ ಒಂದು ರೂಪಕದಂತೆ ಕಾಣುತ್ತಾನೆ. ಕೊಪ್ಪಳದ ಶುದ್ಧೀಕರಿಸಿದ ದೇವಾಲಯದಲ್ಲಿ ಅಂತಹುದೇ ಸಂಭ್ರಮವನ್ನು ಕಾಣದೆ ಹೋದರೆ ಬಹುಶಃ ನಾವು ಭ್ರಮೆಗೆ ಜಾರಿರುವುದು ನಿಚ್ಚಳವಾಗುತ್ತದೆ. 

ಶಾಸ್ತಿçಯವರ ಜೈ ಜವಾನ್ ಜೈ ಕಿಸಾನ್ ಘೋಷಣೆಯನ್ನು ಸಂಭ್ರಮಿಸುವ ಮನಸುಗಳೇ, ರೈತ ಮುಷ್ಕರದಲ್ಲಿ ರೈತರೇ ಇಲ್ಲ ಎಂದೂ ಹೇಳುತ್ತಿವೆ. ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತಾಪಿಯನ್ನು ದಲ್ಲಾಳಿಗಳೆಂದು ಹೀಗಳೆಯುವ ಮಟ್ಟಿಗೆ ಬೌದ್ಧಿಕ ಮಾಲಿನ್ಯ ನಮ್ಮನ್ನು ಆವರಿಸಿದೆ. ಇಡೀ ದೇಶಕ್ಕೆ ಅನ್ನಾಹಾರ ಒದಗಿಸುವ ಶ್ರಮಜೀವಿ ವರ್ಗ ತನ್ನ ಉಳಿವಿಗಾಗಿ ಹೋರಾಡುತ್ತಿರುವಾಗ, ರೈತರಲ್ಲದವರೂ ಪ್ರತಿಭಟಿಸಬೇಕಲ್ಲವೇ ? ಅದು ಕೇವಲ ರೈತ ಸಮಸ್ಯೆ ಎಂದು ಭಾವಿಸುವುದೇ ಭ್ರಷ್ಟ ಮನಸ್ಥಿತಿಯಲ್ಲವೇ ? ಶಾಸ್ತಿç ಇಂತಹ ಭಾರತದ ಕನಸು ಕಂಡಿರಲಿಲ್ಲ. ಅವರಿಗೆ ಪಾಕಿಸ್ತಾನದ ಮೇಲಿನ ಯುದ್ಧ ಸಾಂದರ್ಭಿಕ ಅನಿವಾರ್ಯತೆಯಾಗಿತ್ತು, ಆದರೆ ಭಾರತದ ರೈತರ ಹಸನಾದ ಬದುಕು ಅವರ ಕನಸಾಗಿತ್ತು. ಈ ಕನಸನ್ನು ಸಾಕಾರಗೊಳಿಸದೆ, ಅವರ ಪುತ್ಥಳಿಗೆ ಕೈಮುಗಿಯುವುದು, ಗಾಂಧಿಗೆ ಕೈಮುಗಿವ ಮುನ್ನ ಗೋಡ್ಸೆಗೆ ವಂದಿಸುವಷ್ಟೇ ಆತ್ಮದ್ರೋಹದ ಕೆಲಸ. 

ಹಿಂಸೆಯನ್ನು ಪ್ರಚೋದಿಸುವ, ಮಹಿಳೆಯನ್ನು ಅಪಮಾನಗೊಳಿಸುವ, ಶೋಷಿತರನ್ನು ನಿರ್ಲಕ್ಷಿಸುವ ಹಿಂಸೆಯ ರೂವಾರಿಗಳು #ಆತ್ಮನಿರ್ಭರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವುದನ್ನು ಕಂಡೂ ಕಾಣದಂತೆ, ಪ್ರಜ್ಞಾವಂತರಾದ ನಾವು ಸಂಭ್ರಮಿಸುತ್ತಿದ್ದೇವೆ. ಸಾವನ್ನು ಸಂಭ್ರಮಿಸುತ್ತಿದ್ದ ಮನಸುಗಳು ಈಗ ಕೊಲೆಯನ್ನೂ ಸಂಭ್ರಮಿಸುತ್ತಿವೆ. ಜಾತಿ ಶ್ರೇಷ್ಠತೆಯನ್ನು ಮೆರೆಯುತ್ತಿದ್ದ ವಿಕೃತ ಮನಸುಗಳು ಇಂದು ಅಸ್ಪೃಶ್ಯತೆಯನ್ನು ಮೆರೆಯುತ್ತಿವೆ. ಗಂಗೆಯಲ್ಲಿ ತೇಲಿಬಂದ ನೂರಾರು ಶವಗಳು ನಮ್ಮನ್ನು ವಿಚಲಿತಗೊಳಿಸಲಿಲ್ಲ ಹಾಗೆಯೇ ಬೀದಿಪಾಲಾದ ಲಕ್ಷಾಂತರ ವಲಸೆ ಕಾರ್ಮಿಕರೂ ನಮ್ಮನ್ನು ಬಾಧಿಸಲಿಲ್ಲ. ನವ ಉದಾರವಾದ, ಬಂಡವಾಳಶಾಹಿ ಆರ್ಥಿಕತೆ ಮತ್ತು ಕೋಮುವಾದಿ ಫ್ಯಾಸಿಸಂ ಈಗಾಗಲೇ ಮಲಿನಗೊಂಡಿರುವ ಮನಸುಗಳಿಗೆ ಸಾಂಸ್ಕೃತಿಕ ಇಂಧನವನ್ನು ಪೂರೈಸುವುದರಲ್ಲಿ ಯಶಸ್ವಿಯಾಗಿದೆ. ಅಸ್ಸಾಂನಿAದ ಕೊಪ್ಪಳದವರೆಗೆ, ದೆಹಲಿಯಿಂದ ಮೈಸೂರಿನವರೆಗೆ ಇದು ಕಾಣುತ್ತಲೂ ಇದೆ. 


ಈ ನಡುವೆಯೇ ನಾವು ಇಬ್ಬರು ಮಹನೀಯರ ಜನ್ಮದಿನವನ್ನು ಸಂಭ್ರಮದಿAದ ಆಚರಿಸುತ್ತಿದ್ದೇವೆ. ಜಾತಿ ಶ್ರೇಷ್ಠತೆ , ಮತ ಭ್ರಾಂತಿ , ಮತಾಂಧತೆ, ಪುರುಷಾಧಿಪತ್ಯದ ಅಹಂ, ಶ್ರೀಮಂತಿಕೆಯ ಸೊಕ್ಕು ಮತ್ತು ‘ಅನ್ಯ’ರನ್ನು ದ್ವೇಷಿಸುವ ವಿಕೃತ ಮನಸ್ಥಿತಿ, ಇಷ್ಟೆಲ್ಲಾ ಅವಗುಣಗಳನ್ನು ಹೊತ್ತ ಮನಸುಗಳು ಇಂದು ಸ್ವಚ್ಚ ಭಾರತ-ಶುದ್ಧ ಜಲ ಎಂಬ ಸಂಭ್ರಮಾಚರಣೆಯಲ್ಲಿ ತೊಡಗಿವೆ. ಶತಮಾನಗಳಿಂದ ಜಡ್ಡುಗಟ್ಟಿರುವ ಈ ಬೌದ್ಧಿಕ ಮಾಲಿನ್ಯವನ್ನು ತೊಡೆದುಹಾಕದೆ ಇದ್ದರೆ ಭವಿಷ್ಯದ ಬಾರತದಲ್ಲಿ ಗೋಡ್ಸೆಯ ದೇವಾಲಯದಲ್ಲಿ ಗಾಂಧಿ ಒಂದು ಗರುಡಗಂಬವಾಗಿ ನಿಂತುಬಿಡುತ್ತಾರೆ. ರೈತರ ಬೆವರಿನ ಫಲದ ನಡುವೆ ಲೂಟಿಕೋರ ಉದ್ಯಮಿಗಳ ಭವ್ಯ ಮಹಲುಗಳು ತಲೆಎತ್ತುತ್ತವೆ. ಕಸಬರಿಗೆ ಹಿಡಿದ ನಾಯಕರು ದೇಶದ ರಸ್ತೆಗಳನ್ನು ತ್ಯಾಜ್ಯಮುಕ್ತವಾಗಿಸುತ್ತಿರುವಂತೆಯೇ ಆಳುವವರ ಇಂದಿನ ಬೌದ್ಧಿಕ ಮಾಲಿನ್ಯಕ್ಕೆ ಸಾಂವಿಧಾನಿಕ ಮಾನ್ಯತೆಯೂ ದೊರಕಿಬಿಡುತ್ತದೆ.

ಈ ಅಪಾಯಗಳ ಅರಿವು ಮೂಡಿಸುತ್ತಲೇ ಗಾಂಧಿಯನ್ನು ಸ್ಮರಿಸೋಣ, ಶಾಸ್ತಿçಯನ್ನು ನೆನೆಯೋಣ.
-0-0-0-