ಈ ಊರಿಗೆ ‘ತಲಪುರಿಕೆ’ ಹೆಸರೇ ಉಳಿಯಲಿ  ನಮ್ಮ ನೆಲ -ನಮ್ಮ ನೆಲೆ  ಮಲ್ಲಿಕಾರ್ಜುನ ಹೊಸಪಾಳ್ಯ

talapurige-ide-hesaru-irali-mallikarjun-hosapalya-kinnnari-bevarahani, ಈ ಊರಿಗೆ ‘ತಲಪುರಿಕೆ’ ಹೆಸರೇ ಉಳಿಯಲಿ ನಮ್ಮ ನೆಲ -ನಮ್ಮ ನೆಲೆ ಮಲ್ಲಿಕಾರ್ಜುನ ಹೊಸಪಾಳ್ಯ

ಈ ಊರಿಗೆ ‘ತಲಪುರಿಕೆ’ ಹೆಸರೇ ಉಳಿಯಲಿ      ನಮ್ಮ ನೆಲ -ನಮ್ಮ ನೆಲೆ      ಮಲ್ಲಿಕಾರ್ಜುನ ಹೊಸಪಾಳ್ಯ

ಈ ಊರಿಗೆ ‘ತಲಪುರಿಕೆ’ ಹೆಸರೇ ಉಳಿಯಲಿ 

ನಮ್ಮ ನೆಲ -ನಮ್ಮ ನೆಲೆ 

ಮಲ್ಲಿಕಾರ್ಜುನ ಹೊಸಪಾಳ್ಯ


ತಲಪರಿಗೆ ಎಂಬ ಜಲಮೂಲಗಳು ನಮ್ಮ ಜಿಲ್ಲೆಯ ಹೆಗ್ಗುರುತುಗಳು. ಕಿರಿಯ ತಲೆಮಾರಿಗೆ ಆ ಹೆಸರು ಹೊಸದೆನಿಸಿದರೂ ಗ್ರಾಮೀಣ ಭಾಗದ ಹಿರಿಯರು ಈಗಲೂ ನೆನೆಸಿಕೊಳ್ಳುತ್ತಾರೆ. ಆದರೆ ತುಮಕೂರಿನ ಮಹಾ ನಗರದವರಿಗೆ ತಲಪರಿಗೆಗಳ ನೆನಪು ಮಾಸಿ ಹೋಗಿ ಎಷ್ಟೋ ಕಾಲವಾಗಿದೆ. ಆದರೆ ನೆನಪಿಡಿ! ನಮ್ಮ  ತುಮಕೂರಿಗೆ ಹೊಂದಿಕೊAಡೇ ಇರುವ ಬೆಳಗುಂಬದ ಬಳಿ ‘ತಲಪುರಿಕೆ’ ಹೆಸರಿನ ಒಂದು ಹಳ್ಳಿಯೇ ಇತ್ತು.  ತಲಪರಿಗೆ ನೀರಿನಾಸರೆಯಲ್ಲಿ ಬದುಕು ಕಟ್ಟಿಕೊಂಡಿದ್ದ  ತಲೆಮಾರುಗಳು ತಮ್ಮೂರಿಗೆ ಆ ಹೆಸರನ್ನೇ ಇಟ್ಟು ಗೌರವಿಸಿದ್ದರೆ, ಈಗಿನ ತಲೆಮಾರು ಆ ಸುಂದರವಾದ ಹೆಸರನ್ನು ತೆಗೆದು ‘ಭಾಗ್ಯನಗರ’ ಎಂದು ಇಟ್ಟಿದ್ದಾರೆ.

ಒಂದು ಕಾಲಕ್ಕೆ ನಮ್ಮ ಜನಮಾನಸದಲ್ಲಿ ತಲಪರಿಗೆಗಳು ಎಷ್ಟು ಹಾಸು-ಹೊಕ್ಕಾಗಿದ್ದವು ಎಂಬುದಕ್ಕೆ ಇಡೀ ಊರಿಗೇ ‘ತಲಪುರಿಕೆ' ಎಂಬ ಹೆಸರಿಟ್ಟಿರುವುದೇ ಸಾಕ್ಷಿ. ತುಮಕೂರು ನಗರಕ್ಕೆ ಕೇವಲ 4 ಕಿ.ಮೀ. ದೂರದಲ್ಲಿ ದೇವರಾಯನದುರ್ಗಕ್ಕೆ ಹೋಗುವಾಗ, ಬೆಳಗುಂಭಕ್ಕೂ ಮುಂಚೆ ಈ ಹಳ್ಳಿ ಸಿಗುತ್ತದೆ. ವಡೇರಹಳ್ಳಿ ಕೆರೆಯ (ಈಗ ಅಕ್ಕಿ-ತಂಗಿ ಕೆರೆ ಎನ್ನುತ್ತಾರೆ) ಅಚ್ಚುಕಟ್ಟು ಪ್ರದೇಶದಲ್ಲಿ ಸಿಗುವ ಈ ಹಳ್ಳಿಯಲ್ಲಿ 40-50 ವರ್ಷಗಳ ಹಿಂದೆ ಅಂದಾಜು 50 ಮನೆಗಳಿದ್ದುವಂತೆ, ಈಗ 100 ಮನೆಗಳಷ್ಟಾಗಿವೆ.

ಕೆರೆಯ ಕೋಡಿ ಪಕ್ಕದಲ್ಲೆ ತಲಪರಿಗೆ ಇದ್ದು ಅದರಿಂದ ಸದಾ ನೀರು ಹರಿಯುತ್ತಿತ್ತೆಂದು ಹಿರಿಯರು ನೆನಪಿಸಿಕೊಳುತ್ತಾರೆ. ಕೋಡಿ ಹಳ್ಳದಲ್ಲೇ ಸಾಗುತ್ತಿದ್ದ ತಲಪರಿಗೆ ನೀರು ಮುಂದೆ ಅಣ್ಣೇನಹಳ್ಳಿ ತೋಟಗಳಿಗೆ ನೀರುಣಿಸಿ ತುಮಕೂರಿನ ಅಮಾನಿಕೆರೆಗೆ ಸೇರುತ್ತಿತ್ತು. 50-60ರ ದಶಕದಲ್ಲಿ ಈ ತಲಪರಿಗೆ ಕಾಲುವೆ ನೀರಿನಲ್ಲಿ ಅಗಸರು ಬಟ್ಟೆ ಒಗೆಯುತ್ತಿದ್ದುದಾಗಿ ಇಲ್ಲಿನ ಹಿರಿಯರು ನುಡಿಯುತ್ತಾರೆ. ಇಲ್ಲಿ ತಿಗಳ ಜನಾಂಗದವರೇ ಜಾಸ್ತಿ ಇದ್ದು ತಲಪರಿಗೆ ನೀರು ಬಳಸಿ ಯತೇಚ್ಚ ತರಕಾರಿ ಬೆಳೆಯುತ್ತಿದ್ದರು. ನೀರಗಂಟಿ ದೊಡ್ಡನರಸಯ್ಯ ಎಂಬುವರು ಕೆರೆ ಮತ್ತು ತಲಪರಿಗೆ ನೀರಿನ ಹಂಚಿಕೆ ಮತ್ತು ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದರಂತೆ. ಕಾಲುವೆ ಅಕ್ಕ-ಪಕ್ಕ ಹೇರಳ ತಾಳೆ ಮರಗಳಿದ್ದವು. ಈಗ ಅವೊಂದೂ ಉಳಿದಿಲ್ಲ. ತಲಪರಿಗೆ ನೀರು ಹರಿಯುವಾಗ ಇಲ್ಲಿನ ಬಾವಿಗಳಲ್ಲೆಲ್ಲಾ ನೀರಿತ್ತು. ವೀಳ್ಯದೆಲೆ, ಅಡಿಕೆ, ಆಲೂಗೆಡ್ಡೆ, ಭತ್ತ, ರಾಗಿ ಎಲ್ಲವನ್ನೂ ಆಗ ಬೆಳೆಯುತ್ತಿದ್ದರು. 

ಕಾಲಾನುಕ್ರಮದಲ್ಲಿ ತಲಪರಿಗೆ ಇದ್ದ ಜಮೀನು ಹಲವರಿಗೆ ಮಾರಾಟವಾಗಿ 80ರ ದಶಕದಲ್ಲಿ ತಲಪರಿಗೆ ಇದ್ದ ಸ್ಥಳದಲ್ಲಿ ತೆರೆದ ಬಾವಿ ಬಂದಿತು. ಹಳ್ಳಿಯು ಹೊಸ-ಹೊಸ ವ್ಯವಹಾರಗಳಿಗೆ ತೆರೆದುಕೊಳ್ಳುತ್ತಿದ್ದುದರಿಂದ ತಲಪರಿಗೆ ಮುಚ್ಚಿದ್ದಕ್ಕೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಕಾಲುವೆಯಲ್ಲಿ ಬಟ್ಟೆ ಸ್ವಚ್ಚಗೊಳಿಸುತ್ತಿದ್ದ ಅಗಸರು ಬೇರೊಂದು ಕಡೆ ಹೋದರು.

20 ವರ್ಷಗಳ ಹಿಂದೆ ಅಕ್ಕ-ತಂಗಿ ಕೆರೆಯನ್ನು ಅರಣ್ಯ ಇಲಾಖೆಯವರು ವಹಿಸಿಕೊಂಡು ಅದರಲ್ಲಿ ಸಂಪೂರ್ಣ ಅರಣ್ಯ ಬೆಳೆಸಿದರು. ಗಿಡಗಳು ನೀರು ನಿಂತು ಹಾಳಾಗಬಾರದೆಂದು ಕೆರೆ ಕೋಡಿಯನ್ನು ಪೂರ್ತಿ ಕಿತ್ತು ಕೆರೆಯಲ್ಲಿ ನೀರು ನಿಲ್ಲದಂತೆಯೇ ಮಾಡಿದರು. ಯಾವಾಗ ಕೆರೆಯಲ್ಲಿ ನೀರು ನಿಲ್ಲದಾಯಿತೊ ತಲಪರಿಗೆ ಸ್ಥಳದಲ್ಲಿ ಕಟ್ಟಿದ್ದ ಬಾವಿಯೂ ಒಣಗಿತು. ಆನಂತರ ತಲಪರಿಗೆ ನೀರು ಹರಿಯುತ್ತಿದ್ದ ಹಳ್ಳದಲ್ಲಿ ಅಡಿಕೆ ಸಸಿ ನೆಟ್ಟರು. 

ತಲಪರಿಗೆ ಮತ್ತದರ ಕಾಲುವೆ ಈ ರೀತಿ ನಾಶವಾದರೂ ಊರಿಗೆ ತಲಪುರಿಕೆ ಹೆಸರಾದರೂ ಉಳಿದಿತ್ತು. ಆದರೆ 15 ವರ್ಷಗಳ ಹಿಂದೆ ಅದಕ್ಕೂ ಕಂಟಕ ಬಂದಿತು.  ಈ ಭಾಗದ ಕೌನ್ಸಿಲರು, ತುಮಕೂರಿನ ಗಣ್ಯರು, ಸ್ವಾಮೀಜಿಗಳು ಬಂದು ಸಮಾರಂಭ ಮಾಡಿ ಈ ಊರಿಗೆ ‘ಭಾಗ್ಯ ನಗರ’ ಎಂದು ಹೆಸರು ಬದಲಾಯಿಸಿದರು. ಆದರೂ ಜನಬಳಕೆಯಲ್ಲಿ ತಲಪುರಿಕೆ ಹೆಸರೇ ಇದ್ದುದರಿಂದ ಅದನ್ನು ಬ್ರಾಕೆಟ್ಟಿನಲ್ಲಿ ಹಾಕುತ್ತಾರೆ. ಇತ್ತೀಚೆಗೆ ಅದೂ ಸಹ ಕಡಿಮೆಯಾಗಿದೆ.

ತಲಪರಿಗೆ ನೀರಾವರಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಕರ್ನಾಟಕದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಆಂಧ್ರದ ಅನಂತಪುರ, ಚಿತ್ತೂರು ಭಾಗಗಳಲ್ಲಿ ಎಲ್ಲಿಯೂ ಒಂದು ಊರಿಗೆ ‘ತಲಪರಿಗೆ’ ಎಂಬ ಹೆಸರು ಇಟ್ಟಿರುವುದು ಕಂಡು ಬಂದಿಲ್ಲ. ಅಂತಹುದೊಂದು ಅಪರೂಪದ ಹೆಸರಿನ ಊರು ನಮ್ಮ ತುಮಕೂರು ಪಕ್ಕದಲ್ಲೇ ಇತ್ತು. ಈಗ ಅಲ್ಲಿನ ತಲಪರಿಗೆಗೆ ಮರುಜೀವ ಕೊಡಲು ಸಾಧ್ಯವಿಲ್ಲ.  ಕನಿಷ್ಟ ಈ ಹೆಸರನ್ನಾದರೂ ಉಳಿಸಿಕೊಳ್ಳೋಣ.