ಕದಡಿದ ನೀರಲ್ಲಿ ಮೀನು ಹಿಡಿವ ಪ್ರಯತ್ನ

muneer katpalya

ಕದಡಿದ ನೀರಲ್ಲಿ ಮೀನು ಹಿಡಿವ ಪ್ರಯತ್ನ

ಮುನೀರ್ ಕಾಟಿಪಳ್ಳ

ವರ್ತಮಾನ


ಕದಡಿದ ನೀರಲ್ಲಿ ಮೀನು ಹಿಡಿವ ಪ್ರಯತ್ನ

'ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮುಸ್ಲಿಮರು ಮೀನು ಖರೀದಿಸುತ್ತಿಲ್ಲ' ಎಂಬ ಸುದ್ದಿ ಕರಾವಳಿ ಜಿಲ್ಲೆಗಳಲ್ಲಿ ದಶಕದಿಂದ ನಡೆಯುತ್ತಿರುವ ರಾಜಕೀಯ ಸಂಘರ್ಷದ ಪ್ರತಿಫಲನ. ಇದು ಹೊಸದಾಗಿ ಸಂಭವಿಸಿದ ವಿದ್ಯಮಾನ ಏನಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಪ್ರಥಮ ಅಲೆಯ ಸಂದರ್ಭವೂ ಸಹಿತ ಎರಡು ದಶಕದಿಂದ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರ ಹಾಕುವ ಯತ್ನ ಬಹಿರಂಗವಾಗಿಯೇ ಹಲವು ಬಾರಿ ನಡೆದಿದೆ. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಸಂತೆ ಅಂಗಡಿ ಹಾಕದಂತೆಯೂ ಹಲವು ಕಡೆಗಳಲ್ಲಿ ತಡೆಯಲಾಗಿದೆ. ಇದಕ್ಕೆ ಪ್ರತಿಕ್ರಿಯೆ ಎಂಬAತೆ ಮುಸ್ಲಿಮರ ಒಂದು ಸಣ್ಣ ಗುಂಪು ಹಿಂದು ವ್ಯಾಪಾರಿಗಳ ಅಂಗಡಿಗಳಲ್ಲಿ ಖರೀದಿಗೆ ಹೋಗದಂತೆ ಮುಸ್ಲಿಮರಿಗೆ ಕರೆ ನೀಡುವ ಯತ್ನವನ್ನೂ ಮಾಡಿದೆ. ಮಂಗಳೂರಿನ ಪ್ರಖ್ಯಾತ ಐಸ್ ಕ್ರೀಂ ಪಾರ್ಲರ್ ಐಡಿಯಲ್ ಅನ್ನೂ ಒಂದೂ ಬಾರಿ ಗುರಿ ಮಾಡಲಾಗಿತ್ತು. ಬಾಬರಿ ಮಸೀದಿ ಧ್ವಂಸದ ಸಂದರ್ಭ ಮಂಗಳೂರು ಸುತ್ತ ಮುತ್ತ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರದಲ್ಲಿ ಮೀನುಗಾರ ಸಮುದಾಯದವರು ಕಂಡು ಬಂದ ಸಿಟ್ಟಿನಲ್ಲಿ ಒಂದಿಷ್ಟು ದಿನ ಮೀನುಗಾರ ಸಮುದಾಯಕ್ಕೆ ಸೇರಿದ ಮೀನು ವ್ಯಾಪಾರಿ ಮಹಿಳೆಯರಿಂದ ಮುಸ್ಲಿಮರು ಮೀನು ಖರೀದಿಸಲು ಹಿಂದೇಟು ಹಾಕಿದ್ದೂ ನನಗೆ ನೆಪಪಿದೆ. ಅವೆಲ್ಲವೂ ಕೆಲವೇ ದಿನಗಳಲ್ಲಿ ಸರಿ ಹೋಗಿ ಮತ್ತೆ ಅದೇ ಕೂಡಿ ಬಾಳುವ ಅನ್ಯೋನ್ಯತೆಗೆ ಎರಡೂ ಸಮುದಾಯದವರು ಮರಳಿದ್ದರು.
ಮೋಟಾರ್ ಸೈಕಲ್ ನಲ್ಲಿ ಮನೆ ಮನೆ ತಿರುಗಿ ಮೀನು ಮಾರಾಟ ಮಾಡುವ ಬ್ಯಾರಿಗಳನ್ನು ಗುರಿಯಾಗಿಸಿ "ಹಿಂದು ಯುವಕರೂ ಮೀನು ವ್ಯಾಪಾರಕ್ಕೆ ಇಳಿಯ ಬೇಕು" ಎಂದು ಸಂಘ ಪರಿವಾರ ಇತ್ತೀಚಿನ ದಿನಗಳಲ್ಲಿ ಕೆಲವು ಹಿಂದು ಯುವಕರನ್ನು ಮೀನು ಮಾರಾಟಕ್ಕೆ ಇಳಿಸಿದ್ದು, ಅವರು ಕೇಸರಿ ಧ್ವಜ ಕಟ್ಟಿ ವ್ಯಾಪಾರ ನಡೆಸಿದ್ದು ಕಣ್ಣ ಮುಂದಿನ ಹಸಿ ಹಸಿ ದೃಶ್ಯ. ಆಗ ಮುಸ್ಲಿಮರಲ್ಲಿ ಮೀನು ಖರೀದಿಸಬೇಡಿ, ಸಂಘ ಪರಿವಾರ ಪ್ರಾಯೋಜಿತ ಹಿಂದು ವ್ಯಾಪಾರಿಗಳಿಂದಲೆ ಖರೀದಿಸಿ ಎಂದು ಕರೆ ಕೊಟ್ಟರೂ ಇದು ಬಹಳ ದಿನ ನಡೆಯಲಿಲ್ಲ. ಬಹುತೇಕ ಹಿಂದುಗಳು ಈ ಕರೆಗೆ ಸೊಪ್ಪು ಹಾಕಲಿಲ್ಲ. ಹೀಗೆ ಬದುಕುವ ದಾರಿಗೆ ಕಲ್ಲು ಹಾಕುವ, ಧರ್ಮಗಳ ಹಿನ್ನಲೆಯಲ್ಲಿ ವ್ಯಾಪಾರಕ್ಕೆ ಬಹಿಷ್ಕಾರ ಹಾಕುವ ಪ್ರಯತ್ನಗಳು ಹೊಸದಲ್ಲ. ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತದೆ.
ಈಗ ಗಂಗೊಳ್ಳಿ ಮಾರುಕಟ್ಟೆಯಲ್ಲಿ ಮೀನುಗಾರ ಸಮುದಾಯದ ಮಹಿಳೆಯರಿಂದ ಮುಸ್ಲಿಮರು ಮೀನು ಖರೀದಿಸುತ್ತಿಲ್ಲ, ಬಹಿಷ್ಕಾರ ಹಾಕಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಇದೇನೋ ಹೊಸದಾಗಿ ಸಂಭವಿಸಿದ್ದು ಎಂಬAತೆ ವರದಿ ಮಾಡುತ್ತಿವೆ. ಗಂಗೊಳ್ಳಿಯಲ್ಲಿ ಈ ರೀತಿಯ ಬೆಳವಣಿಗೆಗಳಿಗೆ ಕಾರಣ ಏನು ? ಎಂದು ಬೆಳಕು ಚೆಲ್ಲಲು ಮಾತ್ರ ಮಾಧ್ಯಮಗಳು ಸಿದ್ದವಿಲ್ಲ.
ಗಂಗೊಳ್ಳಿಯಲ್ಲಿ ವಾರದ ಹಿಂದೆ ಬಿಜೆಪಿ ಪರಿವಾರ ಗೋ ಹತ್ಯೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಸಾವಿರಾರು ಹಿಂದುಗಳು ಭಾಗವಹಿಸಿದ್ದ ಈ ಸಭೆ ಮುಸ್ಲಿಮರನ್ನು ಹಾಗೂ ಅವರ ನಂಬಿಕೆಗಳನ್ನು ಹೀನಾಮಾನವಾಗಿ ನಿಂದಿಸುವ ಸಭೆಯಾಗಿ ಮಾರ್ಪಾಡಾಯಿತು. ಮುಸಲ್ಮಾನರ ವಿರುದ್ದ ಅಸಭ್ಯವಾಗಿ ಘೋಷಣೆ ಕೂಗಲಾಯಿತು. ಗ್ರಾಮೀಣ ಪ್ರದೇಶದ ಒಂದು ಸಣ್ಣ ಊರಿನಲ್ಲಿ ಇದು ಸಹಜವಾಗಿ ಗಂಭೀರ ಪರಿಣಾಮ ಬೀರುತ್ತದೆ. ದೀರ್ಘಕಾಲೀನವಾಗಿ ಇದು ಮುಂದುವರಿಯುತ್ತದೆ.
ಮುಸ್ಲಿಮರನ್ನು ಹೀಗಳೆಯುವ ಸಂಘಪರಿವಾರದ ರಾಜಕೀಯ ಉದ್ದೇಶದ ಈ ಸಭೆ ಹಿಂದು ಸಮಾಜದ ಸಭೆ ಎಂದು ಭಾವಿಸಿದ ಗಂಗೊಳ್ಳಿ ಸುತ್ತಮುತ್ತಲ ಪ್ರದೇಶದ ಹಿಂದುಗಳು ಈ ಸಭೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ. ಇದರ ಹಿಂದಣ ರಾಜಕಾರಣದ ಅರಿವಿರದ ಮೀನುಗಾರ ಸಮುದಾಯವಾದ ಖಾರ್ವಿ, ಮೊಗವೀರರೂ ಅಧಿಕ ಸಂಖ್ಯೆಯಲ್ಲಿ ಬಂದಿದ್ದಾರೆ. ಇದೇ ಸಮುದಾಯಕ್ಕೆ ಸೇರಿದ ಮೀನು ಮಾರಾಟ ಮಾಡುವ ಮಹಿಳೆಯರೂ ಗಂಗೊಳ್ಳಿ ಮೀನು ಮಾರುಕಟ್ಟೆಯನ್ನೇ ಬಂದ್ ಮಾಡಿ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇದು ಸಹಜವಾಗಿಯೇ ಊರಿನ ಮುಸಲ್ಮಾನರ ಭಾವನೆಗಳನ್ನು ಘಾಸಿಗೊಳಿಸಿದೆ. ತಮ್ಮೊಂದಿಗೆ ಅನ್ಯೋನ್ಯ ಸಂಬAಧ ಹೊಂದಿದ್ದ ಜನಗಳು ತಮ್ಮನ್ನು ನಿಂದಿಸಲು, ದ್ವೇಷಕಾರಲು ಹಮ್ಮಿಕೊಂಡ ಸಭೆಯಲ್ಲಿ ಸಾಮೂಹಿಕವಾಗಿ ಭಾಗವಹಿಸಿದ್ದು, ಮಾರುಕಟ್ಟೆಯನ್ನು ಮುಚ್ಚಿ ತೆರಳಿದ್ದು ಊರಿನ ಮುಸಲ್ಮಾನರನ್ನು ಕೆರಳಿಸಿದೆ. ಅದು ಪ್ರತಿಭಟನೆ ದಿನ ಬಂದ್ ಆಗಿದ್ದ ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡಬಾರದು ಎಂಬಲ್ಲಿಯವರಗೆ ತಿರುಗಿದೆ. ನನ್ನ ಅನುಭವದ ಪ್ರಕಾರ ಇದು ಬಹಳ ದಿನ ಮುಂದುವರಿಯುವುದಿಲ್ಲ. 
ಇಲ್ಲಿ ಪ್ರಧಾನವಾಗಿ ಗಮನಿಸಬೇಕಿರುವ ಅಂಶಗಳಿವೆ. ಬಿಜೆಪಿ, ಸಂಘ ಪರಿವಾರಕ್ಕೆ ಇಂತಹ ಬೆಳವಣಿಗೆಗಳು ಬೇಕಿತ್ತು. ಮುಸಲ್ಮಾನರು ಸಿಟ್ಟಿಗೆದ್ದು ಇಂತಹ ಪ್ರತಿಕ್ರಿಯೆ ನೀಡುತ್ತಾರೆ, ಅದನ್ನೇ ಬಳಸಿಕೊಂಡು ಹಿಂದು ವೋಟುಗಳ ಧ್ರುವೀಕರಣದ ಉದ್ದೇಶ ಯಶಸ್ವಿಗೊಳಿಸಬಹುದು ಎಂಬ ದೂರಾಲೋಚನೆ. ಅದೀಗ ಗಂಗೊಳ್ಳಿಯಲ್ಲಿ ಯಶಸ್ವಿಯಾಗುತ್ತಿದೆ. ಅಮಾಯಕ ಮೀನುಗಾರರು ಸೇರಿದಂತೆ ದುಡಿಮೆ ಮಾಡಿ ಬದುಕು ನಡೆಸುವ ಬಹುತೇಕರು ಹಿಂದು ಮುಸ್ಲಿಂ ಎಂಬ ಭೇದವಿಲ್ಲದೆ ಇಲ್ಲಿ ಬಲಿಪಶುಗಳಾದವು. ಬಿಜೆಪಿ ಮುಂದಿನ ಚುನಾವಣೆಯ ಗೆಲುವಿನ ಸಿದ್ದತೆಯಲ್ಲಿ ಒಂದು ಹೆಜ್ಜೆಯನ್ನು ಯಶಸ್ವಿಯಾಗಿ ಮುಂದಿರಿಸಿತು.
ಈ ರೀತಿ ಕಳೆದ ಎರಡು ದಶಕಗಳಿಂದ ಮುಸ್ಲಿಂ ದ್ವೇಷದ ರಾಜಕಾರಣವನ್ನು ಬಿಜೆಪಿ ಪರಿವಾರ ನಡೆಸಿಕೊಂಡು ಬಂದಿದ್ದರ ಪರಿಣಾಮ ಇದು. ಗಂಗೊಳ್ಳಿ ಇಂತಹ ನೂರಾರು ಘಟನೆಗಳಲ್ಲಿ ಒಂದು ಮಾತ್ರ ಎಂದು ಅರಿತಿದ್ದರೂ ಮಾಧ್ಯಮಗಳು ಅದನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಟ್ಟು ಗಂಗೊಳ್ಳಿ ಮಾರುಕಟ್ಟೆಯನ್ನು ಮಾತ್ರ ತೋರಿಸುತ್ತಿರುವುದು ಪೂರ್ವ ನಿರ್ಧರಿತ ಅಜೆಂಡಾದ ಭಾಗ. ಇದನ್ನು ಗಂಗೊಳ್ಳಿಯ ಮೀನುಗಾರ ಸಮುದಾಯ, ಮುಸಲ್ಮಾನ ಬಂಧುಗಳು ಅರ್ಥ ಮಾಡಿಕೊಂಡು ಸೌಹಾರ್ದ ಪರಿಹಾರವನ್ನು ಕಂಡುಕೊಳ್ಳಬೇಕು. ಕೂಡಿಬಾಳುವ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳಬೇಕು. ಬಿಜೆಪಿ ಇಂತಹ ಬದುಕಿಗೆ ಬೆಂಕಿ ಹಚ್ಚುವ ರಾಜಕಾರಣ ಮಾಡಿ ಚುನಾವಣೆ ಗೆಲ್ಲಬಹುದು. ಪಕ್ಷಾಂತರ, ಭ್ರಷ್ಟಾಚಾರ ಮಾಡಿ ಅದರ ಮುಖಂಡರು ಶ್ರೀಮಂತರಾಗಬಹುದು. ರಕ್ತ ಹರಿಸಿಕೊಂಡು ಬೀದಿಗೆ ಬೀಳುವ ಜನ ಸಾಮಾನ್ಯರು ಮಾತ್ರ ಮತ್ತೆ ಬದುಕು ಕಟ್ಟಿಕೊಳ್ಳಲು ತಲೆಮಾರುಗಳೇ ಬೇಕು.
ನಿಮಗೆ ತಿಳಿದಿರಲಿ ಗೆದ್ದು ಹೋಗಿರುವ ಬಿಜೆಪಿಯ ದೊಡ್ಡ ನಾಯಕರಿಗೆ ಮುಸ್ಲಿಂ ಶ್ರೀಮಂತರು, ಗುತ್ತಿಗೆದಾರರು, ದೊಡ್ಡ ವ್ಯಾಪಾರಿಗಳು ಅಂದರೆ ತುಸು ಹೆಚ್ಚೇ ಪ್ರೀತಿ. ಅವರೊಂದಿಗೆ ಗುಟ್ಟಿನ ಗೆಳೆತನ ರಹಸ್ಯ ಏನಲ್ಲ. ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದಾಗ ಮಂಗಳೂರಿನ ದೊಡ್ಡ ದೊಡ್ಡ ಮುಸ್ಲಿಂ ವ್ಯಾಪಾರಿಗಳು, ಕುಲೀನ ಮನೆತನಗಳಿಗೆ ಸೇರಿದವರು ಅಭಿನಂದನಾ ಸಭೆ ನಡೆಸಿದ್ದು. ನಳಿನ್ ಕುಮಾರ್ ಕಟೀಲ್ ಅವರನ್ನು (ಮುಸಲ್ಮಾನರು) ಬಾಯಿ ತುಂಬಾ ಹೊಗಳಿದ್ದು ಇದಕ್ಕೊಂದು ನಿದರ್ಶನ.