ಕಟ್ಟುಪಾಡುಗಳ ಕಳಚಿದ  'ನಚ್ಚಿತಿರಂ ನಗರ್ಗಿರದು' - ನಾನು ಕಂಡಂತೆ  -ಹೆಚ್.ವಿ.ಮಂಜುನಾಥ

ಕಟ್ಟುಪಾಡುಗಳ ಕಳಚಿದ  'ನಚ್ಚಿತಿರಂ ನಗರ್ಗಿರದು' ನಾನು ಕಂಡಂತೆ  ಹೆಚ್.ವಿ.ಮಂಜುನಾಥ

ಕಟ್ಟುಪಾಡುಗಳ ಕಳಚಿದ  'ನಚ್ಚಿತಿರಂ ನಗರ್ಗಿರದು'    - ನಾನು ಕಂಡಂತೆ   -ಹೆಚ್.ವಿ.ಮಂಜುನಾಥ

ಪಾ.ರಂಜಿತ್ ರ "ನಚ್ಚತಿರಂ ನಗರ್ಗಿರದು" ಎಂಬ ಹೊಸ ಸಿಸಿಮಾ ಜಾತಿ ಮತ್ತು ಲಿಂಗಾಧಾರಿತ ಕಟ್ಟುಪಾಡುಗಳನ್ನು ಮೀರಿ ನಿಂತ ದಲಿತ ಹಿನ್ನೆಲೆ ಹಡುಗಿಯನ್ನು ನಾಯಕಿಯಾಗಿಟ್ಟುಕೊಂಡು ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿದ್ಯಮಾನಗಳ ಮೂಲಕ ಲಿಂಗ ಮತ್ತು ಜಾತಿಯ ಸಂಕೀರ್ಣತೆಗಳನ್ನು ಬಿಡಿಸಿಡುವ ಆಧುನಿಕ  ಪ್ರೇಮ ಕಥನ.

 

ಕಟ್ಟುಪಾಡುಗಳ ಕಳಚಿದ  'ನಚ್ಚಿತಿರಂ ನಗರ್ಗಿರದು'

ನಾನು ಕಂಡಂತೆ

 ಹೆಚ್.ವಿ.ಮಂಜುನಾಥ

ತಮಿಳಿನಿಲ್ಲಿ "ನಚ್ಚತಿರಂ ನಗರ್ಗಿರದು" ಎಂದರೆ ನಕ್ಷತ್ರ ಚಲಿಸುತ್ತಿದೆ ಎಂದರ್ಥ. ಇದು ಸಿನಿಮಾ ಮಂದಿರಗಳಲ್ಲೂ ಬಿಡುಗಡೆಯಾಗಿ ಇದೀಗ  ನೆಟ್ ಫ್ಲಿಕ್ಸ್ ನ ಓಟಿಟಿ ತಲುಪಿರುವ ನೀಲಂ ಪ್ರೊಡಕ್ಷನ್ಸ್‌ ರವರ ಪಾ. ರಂಜಿತ್ ನಿರ್ದೇಶನದ ಚಿತ್ರದ ಹೆಸರು.

 

ದಲಿತ ಪಾತ್ರಗಳು, ಮಹಿಳೆ, ದ್ವಿಲಿಂಗಿಗಳು ಅಥವಾ ಸಮಾಜದಿಂದ ನಿರ್ಲಕ್ಷ್ಯಗೊಳಗಾದ ವರ್ಗವನ್ನು ಸಹಜವೆಂಬಂತೆ ನೆಗೆಟಿವ್ ಆಗಿ ತೋರಿಸುವುದನ್ನು ಸಿನಿಮಾ ಮಾಧ್ಯಮ ಮಾಡುತ್ತಾ ಬಂದಿದೆ. ತಮಿಳು ಸಿನಿಮಾ ಮಾಧ್ಯಮದಲ್ಲೂ ಇದು ಹೊರತಾಗಿರಲಿಲ್ಲ. ಆದರೆ ಈಚೆಗೆ ಹೊಸ ರೀತಿ ಯೋಚಿಸುವ, ಹೊಸ ವ್ಯಾಕರಣವನ್ನು ರಚಿಸುವ ಯುವ ನಿರ್ದೇಶಕರ  ಪಡೆಯೊಂದು ತಮಿಳು ಸಿನಿಮಾ ರಂಗದಲ್ಲಿ ಬಂದಿದೆ. ಅವರಲ್ಲಿ ಪಾ.ರಂಜಿತ್ ಹೆಸರು ಪ್ರಮುಖವಾದದ್ದು.

 

ದಲಿತ ಸಂವೇದನೆಯ ಸಾಹಿತಿಗಳು ಬರೆಯಲು ಶುರು ಮಾಡಿದ ಕೂಡಲೇ ಅಕ್ಷರ ಲೋಕವೇ ಬೆಚ್ಚಿ ಬಿದ್ದಂತೆ, ದಲಿತ ಜಗತ್ತನ್ನು ಪಾ.ರಂಜಿತ್ ಥರದವರು ತೆರೆಯ ಮೇಲೆ ಅನಾವರಣಗೊಳಿಸಲು ಶುರು ಮಾಡಿದ ಕೂಡಲೇ ಇಂಡಿಯಾದಲ್ಲಿ ಸಿನಿಮಾ ಪರಿಭಾಷೆ ಶುರುವಾದ ದಿನದಿಂದಲೂ ಜನಿವಾರಕ್ಕೇ ಜೋತು ಬಿದ್ದು ಸ್ವರ್ಣ ‘ಕಮಲ’ ಬಾಚಿಕೊಳ್ಳುತ್ತಿದ್ದ  ಸವರ್ಣರ ಸಿನಿಮಾ ಜಗತ್ತು ಬೆಚ್ಚಿ ಬಿದ್ದಿದೆ.

 

ಪಾ.ರಂಜಿತ್  ತನ್ನ ಮೊದಲ ಸಿನಿಮಾ ' ಅಟ್ಟಕತ್ತಿ' ಯಿಂದ ಹಿಡಿದು ಈಗಿನ 'ನಚ್ಚತಿರಂ ನಗರ್ಗಿರದು' ಸಿನಿಮಾವರೆಗೂ ನಿರಂತರವಾಗಿ ದಲಿತ ಜೀವನಗಳನ್ನು ಅನಾವರಣಗೊಳಿಸುತ್ತಾ ಜಾತಿ ವಿರೋಧಿ ನಿಲುವುಗಳನ್ನು ಪ್ರಕಟಿಸುತ್ತಾ ಅಂಬೇಡ್ಕರ್ ಚಿಂತನೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಕಟ್ಟಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

ಈ ಕಾರಣದಿಂದಲೇ ಈ ಹತ್ತು ವರ್ಷಗಳ ಅವಧಿಯಲ್ಲಿ ತಮಿಳು ಸಿನಿಮಾದ ಕೇಂದ್ರವಸ್ತು ಜಾತಿ ವಿರೋಧಿ ರಾಜಕಾರಣವೇ ಆಗಿ ಅಭಿವ್ಯಕ್ತಿಗೊಳ್ಳುತ್ತಿದೆ. ಮೇಲ್ಜಾತಿಯ ಪಾಳೇಗಾರಿಕೆ ಸಂಸ್ಕ್ರತಿಯನ್ನೇ ತೆರೆಯ ಮೇಲೆ ವಿಜೃಂಭಿಸಿ ತೋರುತ್ತಿದ್ದ ತಮಿಳು ಸಿನಿಮಾ ಇಂದು ಇಂತಹ ಒಂದು ಪಲ್ಲಟಕ್ಕೆ ಪಾ.ರಂಜಿತ್ ರಂತಹ ಹೊಸ ನೋಟದ ಪ್ರಯೋಗಶೀಲ ನಿರ್ದೇಶಕರು ಕಾರಣವಾಗಿದ್ದಾರೆ.

 

"ನಚ್ಚತಿರಂ ನಗರ್ಗಿರದು" ಸಿನಿಮಾದಲ್ಲಿ ಒಂದು ನಾಟಕ ತಂಡವಿದೆ. ಅದು ಸಮಾಜದ ಭಿನ್ನ ಭಿನ್ನ ಪ್ರದೇಶ, ಹಿನ್ನಲೆ, ಅಭಿರುಚಿ ಮತ್ತು ಸಮುದಾಯಗಳಿಂದ ಕೂಡಿದ ನಾಟಕದ ತಂಡ. ದ್ವಿಲಿಂಗಿಯೂ,  ಸಲಿಂಗಕಾಮಿಗಳು ತಂಡದ ಭಾಗ. ಒಂದು ರೀತಿ ಇಂಡಿಯಾದ ವೈವಿಧ್ಯಮಯ ಜನ, ಸಂಸ್ಕೃತಿಯವರು ಒಂದೆಡೆ ಕಲೆಯ ಹೆಸರಿನಲ್ಲಿ ಬೆರೆತು "ಬಹುತ್ವ" ವನ್ನು ಪ್ರತಿನಿಧಿಸುವಂತಿದೆ. ಹಾಗೆಯೇ  ಕಲೆಗೆ ಜಾತಿ, ಧರ್ಮ, ಗಡಿ, ಭಾಷೆ, ಲಿಂಗ ತಾರತಮ್ಯ ಇಲ್ಲ ಎಂಬುದನ್ನು ಸಾಂಕೇತಿಸುತ್ತದೆ.

 

ಪ್ರೀತಿ ಪ್ರೇಮದ ಕತೆಯುಳ್ಳ ನಾಟಕದ ತಾಲೀಮು ಮಾಡುತ್ತಾ ಮಾಡುತ್ತಾ ಮತ್ತು ತಂಡದ 'ಇನಿಯನ್-ರೆನೆ' ನಡುವಿನ ಪ್ರೇಮದ ಕತೆಯನ್ನು ಹೇಳುತ್ತಾ ಹೇಳುತ್ತಾ ಜಾತಿ, ಅಂತಸ್ತು, ಧರ್ಮ ಹಾಗೂ ಲಿಂಗ ತಾರತಮ್ಯದ ಕಾರಣಕ್ಕೆ ಪ್ರೇಮಿಗಳು ಎದುರಿಸುವ ಸಮಸ್ಯೆ, ಸವಾಲುಗಳೊಂದಿಗೆ 'ಮರ್ಯಾದೆ ಹತ್ಯೆ' ಯಂತಹ ಕಥಾವಸ್ತುವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಮಾನವೀಯತೆಯನ್ನು ಬಿತ್ತಲಾಗಿದೆ.

 

ನಾಟಕದ ಥಿಯೇಟರಿನ ಕಸವನ್ನು ಎಲ್ಲರೂ ಸೇರಿಯೇ ಗುಡಿಸುತ್ತಾರೆ. ಪ್ರೀತಿ ಎಂದರೇನು? ಎಂದು ಕೇಳಿಕೊಳ್ಳುತ್ತಲೇ ಪ್ರೀತಿಯ ಕತೆಯುಳ್ಳ ಯಾವ ರೀತಿಯ ನಾಟಕ ಮಾಡಬೇಕು? ಎಂಬುದರ ಬಗ್ಗೆ ತಂಡದ ಎಲ್ಲರ ಅಭಿಪ್ರಾಯ ಕೇಳಲಾಗುತ್ತದೆ. ಭಿನ್ನ ಭಿನ್ನ ಅಭಿಪ್ರಾಯ, ವಾಗ್ವಾದಗಳ ನಡುವೆಯೂ ಪ್ರೀತಿ ಪ್ರೇಮದ ಕತೆಯ ಹಂದರ ಆಯ್ಕೆ ಮಾಡಿಕೊಂಡು ತಾಲೀಮು ಮಾಡಲಾಗುತ್ತದೆ. ತಾಲೀಮಿನ ಸಮಯದಲ್ಲೂ ಬರುವ ಅಭಿಪ್ರಾಯಗಳಿಗನುಸಾರವಾಗಿ ಮಾರ್ಪಾಡು ಮಾಡಲಾಗುತ್ತದೆ. ಇಲ್ಲೊಂದು ಪ್ರಜಾಪ್ರಭುತ್ವದ ನಡೆಯನ್ನು ಕಾಣಬಹುದು.

 

ನಾಟಕದ ನಾಯಕಿ ಮನೆಯವರು ಆಕೆ ಪ್ರೀತಿಸಿದ ಹುಡುಗನ ಜಾತಿ ಯಾವುದು? ಎಂದು ಕೇಳುತ್ತಾರೆ. ಯಾವ ಜಾತಿ ಹೇಳಬೇಕು? ಎಂಬುದು ಸ್ಕ್ರಿಪ್ಟ್ ನಲ್ಲಿ ಇರುವುದಿಲ್ಲ. ಪಾತ್ರಗಳು ನಿರ್ದೇಶಕನನ್ನು ಕೇಳುತ್ತವೆ. ಪರಿಶಿಷ್ಟ ಜಾತಿಯಲ್ಲಿಯೇ ಅನೇಕ ಜಾತಿಗಳಿವೆ. ಅವುಗಳಲ್ಲೂ 'ನಾ ಮೇಲು ನೀ ಕೀಳು' ಎಂಬುದಿದೆ ಎಂದು ತಂಡದ ಸದಸ್ಯನೊಬ್ಬ ಪ್ರಶ್ನೆ ಇಡುತ್ತಾನೆ. ಹುಡುಗಿಯದು 'ಊರ ಬೆಕ್ಕು',  ಹುಡುಗನದು ' ಕಾಡು ಬೆಕ್ಕು' ಎಂದು ಜಾತಿ ಸೂಚಿಸಿ ನಮ್ಮ ನಡುವಿನ ಯಾವ ಜಾತಿಯನ್ನು ಎತ್ತಿಕೊಳ್ಳದೆ ನಿರ್ದೇಶಕ ಜಾಣ್ಮೆ ಮೆರೆಯುತ್ತಾನೆ.

 

ಊರ ಬೆಕ್ಕು ಜಾತಿಯ ಹುಡುಗಿಯ ಕಡೆಯವರು ಕಾಡುಬೆಕ್ಕು ಜಾತಿಯ ಹುಡುಗ ಕೀಳೆಂದು ಮದುವೆಗೆ ವಿರೋಧ ವ್ಯಕ್ತವಾದಾಗ ಹುಡುಗಿ ದೇವತೆಯ ಮೊರೆ ಹೋಗುತ್ತಾಳೆ. ದೇವತೆ ಮಾತಾಡುತ್ತಾಳೆ. 'ನಾನು ಮೇಲು ಜಾತಿ ಹುಡುಗನನ್ನು ಪ್ರೀತಿಸಿದೆ ಎಂಬ ಕಾರಣಕ್ಕೆ ಕುತ್ತಿಗೆ ತನಕ ಮರಳಲ್ಲಿ ಹೂತು ಕೊಂದು ಹಾಕಿ ನಂತರ ದೇವತೆ ಮಾಡಿ ಪೂಜಿಸುತ್ತಿದ್ದಾರೆ' ಅನ್ನುತ್ತಾಳೆ. ಗೋಡೆಗೆ ತಗುಲಾಕಿದ್ದ ಸತ್ತವರ ಪೋಟೋಗಳು ಪ್ರೀತಿಸಿದ ಕಾರಣಕ್ಕೆ ತಮ್ಮನ್ನ ಹೇಗೆ ಹತ್ಯೆ ಮಾಡಲಾಯಿತು ಎಂದು ಮಾತನಾಡುತ್ತವೆ. ತಂಡದ ಸದಸ್ಯರು ಮರ್ಯಾದಾ ಹತ್ಯೆಗೊಳಗಾದವರ ಸಂಗಾತಿಗಳನ್ನು ಭೇಟಿ ಮಾಡಿ ಸಂದರ್ಶಿಸುತ್ತಾ ನತದೃಷ್ಟರನ್ನು ಪರಿಚಯಿಸುತ್ತಲೇ ಹತ್ಯೆಯ ನೈಜ ಘಟನೆಯನ್ನು  ತೋರಿಸಲಾಗಿದೆ. ಆ  ಮೂಲಕ ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆದ ಮರ್ಯಾದೆ ಹತ್ಯೆಗಳ ಸಾಲು ಸಾಲು ಕತೆಗಳನ್ನು ದಾಟಿಸಲಾಗುತ್ತದೆ. ಇಲ್ಲಿ ಮನುಷ್ಯ ಪ್ರೇಮ ಮರೆತ ಜಾತಿ ಕ್ರೌರ್ಯವನ್ನು  ತಣ್ಣಗೆ ತೋರಿಸಲಾಗಿದೆ.

 

ಕಾಡು ಬೆಕ್ಕು ಎಂಬ ಕೀಳು ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ  ಮನೆಯ ಮರ್ಯಾದೆಯ ಹೆಸರಿನಲ್ಲಿ ಹುಡುಗಿಯನ್ನು ಆಕೆಯ ತಂದೆ ಕತ್ತು ಕಡಿಯುವ ದೃಶ್ಯ.  ಹುಡುಗಿಯ ಅಜ್ಜ " ಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾದ ನಿನ್ನ ತಂಗಿಯನ್ನು ಇದೇ ಕತ್ತಿಯಿಂದ ಕಡಿದುಕೊಂದೆ. ಅದೇ ಕತ್ತಿಯಿಂದ ನಿನ್ನ ಮಗಳನ್ನು ಕತ್ತರಿಸು" ಎಂದು ಉದ್ದನೆಯ ಕತ್ತಿ ತಂದು ಮಗನಿಗೆ ನೀಡುತ್ತಾನೆ. ಕತ್ತು ಕಡಿಯಲು ಸನ್ನದ್ದನಾಗಿ ನಿಂತ ಅಪ್ಪನ ಪಾತ್ರ ಕೊಲ್ಲಲು ಹಿಂಜರಿದು 'ನನ್ನ ಕೈಯಾರೆ ತುತ್ತು ತಿನ್ನಿಸಿ ಬೆಳೆಸಿದ ನನ್ನ ಮಗಳನ್ನು ನನ್ನಿಂದ ಕೊಲ್ಲಲು ಸಾಧ್ಯವಾಗುತ್ತಿಲ್ಲ'' ಎಂದು  ದುಃಖಿಸುತ್ತದೆ.  ಈಗೇನು ಮಾಡುವುದು? ಎಂಬ ಮತ್ತೊಂದು ಪ್ರಶ್ನೆ ತಂಡಕ್ಕೆ ಎದುರಾಗುತ್ತದೆ. ಆಗ ಹೊಳೆದದ್ದು- ಪರಿವರ್ತನೆ.  ಪೋಷಕರು ಹತ್ಯೆ ಮಾಡುವ ಬದಲಾಗಿ ಪರಿವರ್ತಿತರಾಗಿ ಪ್ರೇಮ ವಿವಾಹವನ್ನು ಒಪ್ಪಿಕೊಳ್ಳುವುದು. ಇಂತಹ ಮಾನವೀಯ ಆಶಯದ ಮೂಲಕ ನಾಟಕ ಕೊನೆಗೊಳ್ಳುವ ತಾಲೀಮು ನಡೆಯುತ್ತದೆ. ಇದು ಸಿನಿಮಾದೊಳಗಿನ ನಾಟಕ.

 

ದಲಿತ ಹಿನ್ನೆಲೆಯ ಸಿನಿಮಾದ ನಾಯಕಿಯ  ಹೆಸರು 'ತಮಿಳ್'. ಅಮೆರಿಕನ್-ಸ್ಪಾನಿಶ್ ಪತ್ರಕರ್ತ-ಕತೆಗಾರ  ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್ ನ "ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್" ಕಾದಂಬರಿಯ ನಾಯಕಿ “ ರೆನ್ನೆಟಾ” ಹೆಸರನ್ನು ತುಂಡಾಕಿ  "ರೆನೆ" ಎಂಬ ಹೆಸರನ್ನು ಇಷ್ಟಪಟ್ಟು ತನಗೆ ತಾನೇ ಇಟ್ಟುಕೊಂಡಿರುತ್ತಾಳೆ. ತನ್ನನ್ನು ಅದೇ ಹೆಸರಿನಿಂದ ಗುರುತಿಸಿಕೊಳ್ಳುತ್ತಾಳೆ. ಆದುನಿಕ ಭಾರತದ ಸ್ವತಂತ್ರ ಚಿಂತನೆಯ ಸ್ವಾಭಿಮಾನಿ ಕ್ರಾಂತಿಕಾರಿ ಹುಡುಗಿ. ಅತ್ಯಂತ ಆತ್ಮವಿಶ್ವಾಸದ ವಿಸ್ತಾರವಾದ ಓದಿನ 'ರೆನೆ' ದಲಿತ ಹಿನ್ನೆಲೆಯಿಂದ ಬಂದ ಇಳೆಯರಾಜ ಸಂಗೀತದ ಅಭಿಮಾನಿ. 'ಇಳೆಯರಾಜನ ಒಂದು ಮ್ಯೂಸಿಕ್ ಪೊಲಿಟಿಕಲ್ ಸ್ಟೇಟ್ ಮೆಂಟ್ ಇದ್ದಂತೆ' ಎಂದು ಹೇಳುವಷ್ಟು ಗಟ್ಟಿತನದ ಹುಡುಗಿ. 

 

'ಅರ್ ಯೂ ಎ ಕಮ್ಯುನಿಸ್ಟ್?' ಎಂದರೆ 'ಐ ಯಾಮ್ ಅಂಬೇಡ್ಕರೇಟ್?' ಎಂದು ಉತ್ತರಿಸುತ್ತಾಳೆ. ಆ ಮೂಲಕ ದಲಿತ ಕ್ರಿಯಾಶೀಲತೆಯಿಂದ ಮುನ್ನೆಲೆಗೆ ಬರುತ್ತಿರುವ ಅಂಬೇಡ್ಕರ್ ವಿಚಾರವನ್ನು  ಮತ್ತಷ್ಟು ವಿಸ್ತರಿಸುವ ಪ್ರಯತ್ನ ಮಾಡಲಾಗಿದೆ.

 

ಸಿನಿಮಾದಲ್ಲಿ ಹೀರೋ ಆಗಬೇಕೆಂಬ ಕನಸು ಕಟ್ಟಿಕೊಂಡು ನಾಟಕದ ತಂಡ ಸೇರುವ ಅರ್ಜುನ್ ಎಂಬ ಇನ್ನೊಂದು ಪಾತ್ರ ಬರುತ್ತದೆ. ಹಳ್ಳಿಯ ಮೂಲದಿಂದ ಬಂದು ಅನೇಕ ಸಂಕೀರ್ಣತೆ, ಪೂರ್ವಾಗ್ರಹಗಳಿಂದ ಕೂಡಿದ ಈತ ತಾನು ಇಷ್ಟಪಟ್ಟ ಹುಡುಗಿಯ  ಉಡುಗೆ ತೊಡುಗೆ ಬಗ್ಗೆ ತಕರಾರು ಎತ್ತುತ್ತಿರುತ್ತಾನೆ. ಇಂತಹ ಅರ್ಜುನ್, ರೆನೆಯ ಆಕರ್ಷಣೆಗೆ ಒಳಗಾಗಿ ಪ್ರೇಮ ನಿವೇದನೆ ಮಾಡುತ್ತಾ 'ನೀನು ಯಾವ ರೀತಿಯ ಬಟ್ಟೆಯನ್ನಾದರೂ ತೊಡಬಹುದು,  ಅದಕ್ಕೆ ನನ್ನ ಅಭ್ಯಂತರವಿಲ್ಲ' ಎಂದವನಿಗೆ 'ಅದು ನಿನ್ನ ಪ್ರಾಬ್ಲಮ್ಮು' ಎಂದು ನಗುತ್ತಲೇ ಹೇಳುತ್ತಾಳೆ. ಪಾರ್ಟಿಯಲ್ಲಿ ಕುಡಿದ ಅಮಲಿನಲ್ಲಿ ತನ್ನನ್ನು ತಬ್ಬಿಕೊಂಡು ಮುತ್ತು ಕೊಡಲೆತ್ನಿಸದ ಆತನಿಗೆ ಸಿಟ್ಟಿನಲ್ಲಿ ಹೊಡೆಯುತ್ತಾಳೆ. ಆದರೆ ಆ ಕಾರಣಕ್ಕಾಗಿಯೇ ತಂಡದಿಂದ ಆತನನ್ನು ಹೊರಕಳಿಸಲು ಮುಂದಾದಾಗ  'ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು' ಎಂದು ಹೇಳಿ ತಂಡದಲ್ಲಿ ಉಳಿಸಿಕೊಳ್ಳುವ ಮೂಲಕ  ತಪ್ಪು ಮಾಡಿದವರ ಹೃದಯ ಪರಿವರ್ತನೆಗೆ ಅವಕಾಶ ಕೊಡಬೇಕೆಂದು ಪ್ರತಿಪಾದಿಸುತ್ತಾಳೆ. 

 

'ರೆನೆ-ಇನಿಯನ್' ನಡುವಿನ ಪ್ರೀತಿ ಧುಮ್ಮಿಕ್ಕಿ ಹರಿಯುವ ಜಲಪಾತದಂತಲ್ಲ, ಜುಳು ಜುಳು ಹರಿಯುವ ಝರಿಯಂತೆ ಸಾಗುತ್ತದೆ. ಉತ್ಕಟ ಪ್ರೇಮ, ಜಗಳ, ಮುನಿಸು, ಅಸೂಯೆ, ವಿರಹ ಎಲ್ಲವೂ ಇದೆ. ಹೆಣ್ಣು ಮತ್ತು ಗಂಡಿನ ನಡುವಿನ ಪ್ರೇಮವನ್ನು ಸಹಜವಾಗಿ ಸರಳವಾಗಿ ನಿರೂಪಿಸಿ ಮನಸ್ಸಿನ ತಾಕಲಾಟಗಳನ್ನು ಅಬ್ಬರವಿಲ್ಲದೆ ಅಭಿವ್ಯಕ್ತಗೊಳಿಸಲಾಗಿದೆ.

 

ಅಂತರ್ಜಾತಿ ಮದುವೆಯ ಪ್ರಸ್ತಾಪ ಮುಂದೆ ತರುವ ಮಗನ ನಿರ್ಧಾರವನ್ನು ವಿರೋಧಿಸಿ ತಮ್ಮ ಜಾತಿಯ ಹುಡುಗಿಯೊಂದಿಗೆ ಮದುವೆ ಮಾಡಲೆತ್ನಿಸುವ ಸನ್ನಿವೇಶವನ್ನು ನಿತ್ಯ ನಮ್ಮ ನಡುವೆ ನಡೆಯುವ ಘಟನೆಯಂತೆಯೇ ಡ್ರಮ್ಯಾಟಿಕ್  ಆಗಿ ಕಟ್ಟಿ ಕೊಡಲಾಗಿದೆ.

 

ತಾಲೀಮು ಮುಗಿಸಿದ ನಂತರ ಪ್ರದರ್ಶನಗೊಳ್ಳುತ್ತಿದ್ದ ನಾಟಕವನ್ನು ಮುಖವಾಡ ಧರಿಸಿ ಬರುವ ವ್ಯಕ್ತಿ ತಡೆಯಲೆತ್ನಿಸುವುದಲ್ಲದೆ ನಾಟಕದ ಪಾತ್ರಗಳಿಗೆ ಥಳಿಸುವ ದೃಶ್ಯವೂ ಇದ್ದು ಸಮಕಾಲೀನ ಸಮಾಜದ ಫ್ಯಾಸಿಸ್ಟ್ ಮನಸ್ಥಿತಿಯ ವಿದ್ಯಮಾನವನ್ನು ಬಿಂಬಿಸಲಾಗಿದೆ. ಈ ದೃಶ್ಯ ಶಿವಮೊಗ್ಗದ ಸೊರಬ ತಾಲ್ಲೂಕಿನ ಆನವಟ್ಟಿ  ಪಟ್ಟಣದಲ್ಲಿ ಜುಲೈ ತಿಂಗಳಲ್ಲಿ ಕೋಮು ಸೌಹರ್ದತೆಗಾಗಿ ಪ್ರದರ್ಶನಗೊಳ್ಳುತ್ತಿದ್ದ ಜಯಂತ್ ಕಾಯ್ಕಿಣಿ ಯವರ 'ಜೊತೆಗಿರುವನು ಚಂದಿರ'  ನಾಟಕವನ್ನು ಕೋಮು ಸಾಮರಸ್ಯ ಕದಡುತ್ತದೆ ಎಂದು ಆರೋಪಿಸಿ  ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಯದಂತೆ ತಡೆದ ಘಟನೆಯನ್ನು ನೆನಪಿಸುತ್ತದೆ.

 

ಒಟ್ಟಾರೆಯಾಗಿ ಹೇಳುವುದಾದರೆ  ಪಾ.ರಂಜಿತ್ ರ "ನಚ್ಚತಿರಂ ನಗರ್ಗಿರದು" ಎಂಬ ಹೊಸ ಸಿಸಿಮಾ ಜಾತಿ ಮತ್ತು ಲಿಂಗಾಧಾರಿತ ಕಟ್ಟುಪಾಡುಗಳನ್ನು ಮೀರಿ ನಿಂತ ದಲಿತ ಹಿನ್ನೆಲೆ ಹಡುಗಿಯನ್ನು ನಾಯಕಿಯಾಗಿಟ್ಟುಕೊಂಡು ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿದ್ಯಮಾನಗಳ ಮೂಲಕ ಲಿಂಗ ಮತ್ತು ಜಾತಿಯ ಸಂಕೀರ್ಣತೆಗಳನ್ನು ಬಿಡಿಸಿಡುವ ಆಧುನಿಕ  ಪ್ರೇಮ ಕಥನ.

 

ಇಲ್ಲಿ ನಿರ್ದೇಶಕ ಪಾ.ರಂಜಿತ್ ಸಿನಿಮಾ ಮಾಧ್ಯಮವನ್ನು ತನ್ನ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡಿರುವುದನ್ನು ಕಾಣಬಹುದು.  ಸಿನಿಮಾದಲ್ಲೊದು ಕತೆ, ಕತೆಯೊಳಗೊಂದು ನಾಟಕ, ನಾಟಕದೊಳಗೊಂದು ಕತೆ…ಹೀಗೆ ಹಲವು ಹತ್ತು ಆಯಾಮಗಳನ್ನು ಇಟ್ಟುಕೊಂಡು ಸಿನಿಮಾವನ್ನು ಅದ್ಬುತವಾಗಿ ಪಾಂಡಿಚೇರಿಯ ವಾತಾವರಣದಲ್ಲಿ ಕಟ್ಟಿಕೊಟ್ಟಿದ್ದಾರೆ. ನಟರು ಸಹಜವಾಗಿ ನಟಿಸಿದ್ದಾರೆ. ಕ್ಯಾಮರಾ ಕೈ ಚಳಕ ಮತ್ತು ಸಂಗೀತ ಸಿನಿಮಾಕ್ಕೆ ಪೂರಕ ಎಂಬಂತೆಯೇ ಇವೆ. ಮನುಷ್ಯ ಸಂಬಂಧ ಮತ್ತು ಮಾನವ ಪ್ರೇಮ ಭಿತ್ತಿಯಾಗಿದೆ.

 

" ಮನುಷ್ಯ ಜಾತಿ ತಾನೊಂದೆ ವಲಂ"