ನಿಜಕ್ಕೂ ಪ್ರಕಾಶ್‌ ರಾಜ್‌ ಹೊಡೆದದ್ದು ಯಾರ ಕೆನ್ನೆಗೆ ? -ದುರ್ಗದ ಹುಡುಗ ಕುಮಾರ್

ನಿಜಕ್ಕೂ ಪ್ರಕಾಶ್‌ ರಾಜ್‌ ಹೊಡೆದದ್ದು ಯಾರ ಕೆನ್ನೆಗೆ ?  -ದುರ್ಗದ ಹುಡುಗ ಕುಮಾರ್

ನಿಜಕ್ಕೂ ಪ್ರಕಾಶ್‌ ರಾಜ್‌ ಹೊಡೆದದ್ದು ಯಾರ ಕೆನ್ನೆಗೆ ?

ದುರ್ಗದ ಹುಡುಗ ಕುಮಾರ್

ನಿನ್ನೆಯಿಂದ ಪ್ರಕಾಶ್‌ ರಾಜ್‌ ಸುದ್ದಿಯಲ್ಲಿದ್ದಾರೆ. ಜಸ್ಟ್‌ ಆಸ್ಕಿಂಗ್‌ ಅಭಿಯಾನದ ಮೂಲಕ ಬಲಪಂಥೀಯರನ್ನು ಸಿಕ್ಕಾಪಟ್ಟೆ ಮುಜುಗರಕ್ಕೆ ಈಡು ಮಾಡಿದ್ದ ಪ್ರಕಾಶ್‌ ರಾಜ್‌ ಅವರು ಸ್ವಲ್ಪಕಾಲದಿಂದ ಸದ್ದಿಲ್ಲದೇ ಇದ್ದರು. ಆದರೆ ಜೈಭೀಮ್‌ ಚಿತ್ರದಲ್ಲಿ ಹಿಂದಿ ಮಾತಾಡಿದ ಮಾರ್ವಾಡಿಯ (ಅಮಿತ್‌ಷಾ ಕುಲಬಾಂಧವ) ಕೆನ್ನೆಗೆ ಬಾರಿಸಿ ಈಗ ಸುದ್ದಿಯಾಗಿದ್ದಾರೆ.

ಗೆಳೆಯ ಯತಿರಾಜ್‌ ತಮ್ಮ ಪೋಸ್ಟ್‌ನಲ್ಲಿ ಈ ನಿರ್ದಿಷ್ಟ ಸೀನ್‌ ಬಗ್ಗೆ ವಿವರಿಸುತ್ತಾ, ತಮಿಳಿನಲ್ಲಿ ಮಾತಾಡು, ಕನ್ನಡದಲ್ಲಿ ಮಾತನಾಡು, ತೆಲುಗಿನಲ್ಲಿ ಮಾತಾಡು, ಮಲಯಾಳಂನಲ್ಲಿ ಮಾತನಾಡು ಎಂದು ಆಯಾ ಭಾಷೆ ಸಿನಿಮಾದಲ್ಲಿ ಆಯಾ ಭಾಷೆಯನ್ನು ಮಾತಾಡು ಎಂದು ಪ್ರಕಾಶ್‌ ಅವರ ಪಾತ್ರ ಆಗ್ರಹಿಸುತ್ತದೆ. ಆದರೆ ಹಿಂದಿಯಲ್ಲಿ ಮಾತ್ರ ' ಸತ್ಯಹೇಳು' ಎನ್ನುತ್ತದೆ ಎಂದು ಬರೆದಿದ್ದರು.

ತಮಿಳರು ನಿರ್ಮಿಸಿದ ಸಿನಿಮಾ ಇದು. ದ್ರಾವಿಡ ಭಾಷೆಗಳಾದ್ದರಿಂದ ಎಲ್ಲ ಕಡೆಯೂ ತನ್ನ ಭಾಷೆಯಲ್ಲಿ ಮಾತನಾಡು ಎಂದು ಆ ಪಾತ್ರ ಆಗ್ರಹಿಸುತ್ತದೆ. ಈ ಎಲ್ಲ ಭಾಷೆಗಳಿಗೆ ಹಿಂದಿಯ ಬಗ್ಗೆ, ಅದರ ಹೇರಿಕೆಯ ಬಗ್ಗೆ ತಕರಾರಿದೆ. ಅದನ್ನು ಈ ಚಿತ್ರ ಸ್ಪಷ್ಟವಾಗಿ ಹೇಳುತ್ತದೆ. ಅದೀಗ ರಾಜಕೀಯ ಚರ್ಚೆಯಾಗಿ ಪರಣಮಿಸಿದೆ. ಇದಕ್ಕೆ ಮುಖ್ಯ ಕಾರಣ, ಕೆನ್ನೆಗೆ ಹೊಡೆಯುವ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಕಾಶ್‌ ರೈ.

ಆಗಲೇ ಹೇಳಿದಂತೆ ಬಲಪಂಥೀಯರನ್ನು ಮುಜುಗರಕ್ಕೆ ಈಡು ಮಾಡುತ್ತಲೇ ಬಂದಿದ್ದ ಪ್ರಕಾಶ್‌ರನ್ನು ಅವಮಾನಿಸುವುದಕ್ಕೆ ಸಿಕ್ಕ ಅವಕಾಶ ಎಂಬಂತೆ, ಮತ್ತೆ ಚರ್ಚೆಗೆ ಎಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಬೆಂಬಲಿಸುತ್ತಿರುವುದಾಗಿ ಸುದ್ದಿ ಮಾಡುತ್ತಿರುವ ಮಾಧ್ಯಮಗಳು ಪರೋಕ್ಷವಾಗಿ ಈ ಚರ್ಚೆಯನ್ನು ಮುನ್ನೆಲೆಗೆ ತರುವುದಕ್ಕೆ ಸುದ್ದಿ ಮಾಡುತ್ತಿರುವುದು.

ಎಳೆ ನಿಂಬೆಕಾಯಿಗಳು ಇದನ್ನೊಂದು ಅಸಾಂವಿಧಾನಿಕ ಎಂದು ಬರೆದುಕೊಂಡು ಪರಚಿಕೊಂಡಿದ್ದನ್ನೂ ನೋಡಿದೆ. ಇವರೆಂತಹ ಊಸುರುವಳ್ಳಿಗಳು ನೋಡಿ. ಹುಡುಗ ಹುಡುಗಿ ಜೊತೆಗೆ ಓಡಾಡಿದಾಗ, ಜಿಹಾದ್‌ ಎಂದೋ, ಅನೈತಿಕ ಎಂದೋ ಮಾರಲ್‌ ಪೊಲೀಸಿಂಗ್ ಮಾಡುವ ಇವರಿಗೆ ಸಂವಿಧಾನದ ಯಾವ ಆರ್ಟಿಕಲ್‌ ಅಧಿಕಾರ ಕೊಡುತ್ತದೆ? ಇದನ್ನು ತಿನ್ನಬಾರದು, ಇದನ್ನು ಉಡಬಾರದು ಎಂದು ಫರ್ಮಾನು ಹೊರಡಿಸುತ್ತಾರಲ್ಲ, ಆಗ ಇವರಿಗೆ ಸಂವಿಧಾನದ ಯಾವ ಆರ್ಟಿಕಲ್‌ ಅವಕಾಶ ಕೊಟ್ಟಿರುತ್ತದೆ? ಸಂವಿಧಾನ ಸುಟ್ಟುಹಾಕಬೇಕು ಎಂಬ ಸಂತತಿಗೆ ಸೇರಿದ ಇವರು ಪ್ರಕಾಶ್‌ ರೈ ಪ್ರಶ್ನೆ ಮಾಡುವುದಕ್ಕೆ 'ಸಂವಿಧಾನದ ಯಾವ ಆರ್ಟಿಕಲ್‌' ಅವಕಾಶ ಕೊಟ್ಟಿದೆ ಎಂದು ಕೇಳುತ್ತಾರೆ. ನಖಶಿಖಾಂತ ನಗಬೇಕು ಅನ್ನಿಸೊಲ್ವೆ?

ಪ್ರಕಾಶ್‌ ರೈ ಪಾತ್ರವೊಂದರ ಕೆನ್ನೆಗೆ ಹೊಡೆದಿದ್ದಕ್ಕೆ ಇವರೆಲ್ಲಾ ಕುಯ್ಯೋ ಅನ್ನುತ್ತಿರುವುದು ಯಾಕೆ? ಇವರೇ ಹೊಡೆಸಿಕೊಂಡಷ್ಟು ನೊಂದಿಕೊಳ್ಳುತ್ತಿದ್ದಾರೆ ಪಾಪ.

ಸಂವಿಧಾನವನ್ನು ಸದಾ ಅವಮಾನಿಸಲು ಹವಣಿಸುವ ಈ ಕುಬುದ್ಧಿಗಳು ಈಗ ಯಾವಾಗಲೂ ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ವ್ಯಕ್ತಿ ಅಥವಾ ವಿಚಾರವನ್ನು ಪ್ರಶ್ನೆ ಮಾಡಲು ಬರುತ್ತಿರುತ್ತಾರೆ.

ಸಿನಿಮಾ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲೂ ಇಂಥದ್ದೊಂದು ಕ್ಷುಲ್ಲಕ ವಿವಾದದ ಮೂಲಕ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನವೂ ಇದಾಗಿರಬಹುದು.