ದಿವಾಲಿ ಮತ್ತು ದಿವಾಳಿ ಇವೆರಡರ ಅಂತರ ತಿಳಿಯಿರಿ - ಡಾ. ಶಿವಾನಂದ ಶಿವಾಚಾರ್ಯರು,
ದಿವಾಲಿ ಮತ್ತು ದಿವಾಳಿ
ಇವೆರಡರ ಅಂತರ ತಿಳಿಯಿರಿ
ಡಾ. ಶಿವಾನಂದ ಶಿವಾಚಾರ್ಯರು,
ಕೆಲವು ತಥಾಕಥಿತ ಮಹಾನುಭಾವರು ``ದಿವಾಳಿ'' ಮತ್ತು ``ದಿವಾಲಿ'' ಎಂಬೀ ಎರಡು ಪದಗಳಲ್ಲಿನ ಅಂತರವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಬೇರೆಯವರಿಗೆ ಪುಕ್ಕಟೆಯಾಗಿ ಬುದ್ಧಿಹೇಳಲು ಬರುತ್ತಾರೆ.
ದಿವಾಲಿನೇ ಬೇರೆ. ದಿವಾಳಿನೇ ಬೇರೆ.
``ದಿವಾಲಿ'' ಎಂದರೆ ``ದೀಪಾವಳಿ'' ಎಂದರ್ಥ.
``ದಿವಾಳಿ'' ಎಂದರೆ ತಲೆಯ ಮೇಲೆ ಟೊಪ್ಪಿಗೆ ಹಾಕಿಕೊಂಡು ``ದಿವಾಳಿ ಎದ್ದು ಹೋಗುವುದು'' ಎಂದರ್ಥ.
ಅದನ್ನು ಆಂಗ್ಲಭಾಷೆಯಲ್ಲಿ ``ಬ್ಯಾಂಕ್‌ರಪ್ಟ್ ಆಗುವುದು'' ಎನ್ನುತ್ತಾರೆ.
ಉತ್ತರ ಭಾರತದ ತುಂಬೆಲ್ಲ ಬಹುತೇಕ ಜನಗಳು ದೀಪಾವಳಿಯನ್ನು ``ದಿವಾಲಿ'' ಎಂದೇ ಕರೆಯುತ್ತಾರೆ.
ನಮ್ಮಲ್ಲಿನ ಕೆಲವು ಜನಗಳು ದಿವಾಲಿಯನ್ನು ``ದಿವಾಳಿ'' ಎಂದು ಅರ್ಥ ಮಾಡಿಕೊಂಡು ದಿವಾಲಿಗೆ ದಿವಾಳಿ ದೀಕ್ಷೆಯನ್ನು ಕೊಟ್ಟುಕೊಂಡಿರುತ್ತಾರೆ.
ತನ್ಮೂಲಕ ಅವರು ದಿವಾಳಿ ಮತ್ತು ದಿವಾಲಿಗಳ ಮಧ್ಯದಲ್ಲಿನ ಅಂತರವನ್ನು ಸರಿಯಾಗಿ ತಿಳಿದುಕೊಳ್ಳದೆ, ಮತ್ತದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿಕೊಂಡಿರುತ್ತಾರೆ.
ಕೆಲವರಿಗೆ ``ದಿವಾಲಿ'' ಎಂದರೆ ಅವರು ತಿಳಿದುಕೊಂಡ ``ದಿವಾಳಿಯಲ್ಲ'' ಎಂದು ತಿದ್ದಿಹೇಳಬೇಕಾಗುತ್ತದೆ.
ದಿವಾಳಿಯನ್ನು ``ದಿವಾಲಿ'' ಎಂದು ಕರೆಯಲು ಉತ್ತರ ಭಾರತದ ಜನರೇನು ದಡ್ಡರೇ?
``ದಿವಾಲಿ'' ಶಬ್ದವನ್ನು ಒಂದಷ್ಟು ವಿವರಣೆಗೆ ಒಳಪಡಿಸುತ್ತ ಹೇಳುತ್ತಿದ್ದೇವೆ.
ಹಿಂದಿಯಲ್ಲಿ ``ದಿಯಾ'' ಎಂದರೆ ``ದೀಪ'' ಎಂದರ್ಥ.
``ಅವಳಿ'' ಅಥವಾ ``ಅವಲಿ" ಎಂದರೆ ``ಸಮೂಹ'', ``ರಾಶಿ'' ಎಂದರ್ಥ.
ದಿಯಾ + ಅವಳಿ = ದಿಯಾವಳಿ.
``ದಿಯಾವಳಿ'' ಎಂಬ ತತ್ಸಮ ಶಬ್ದದ ತದ್ಭವ ರೂಪ ``ದಿವಾಲಿ''.
``ಕಾವ್ಯ'' ಪದದ ತದ್ಭವ ರೂಪ ಕಗ್ಗÀದ ಹಾಗೆ;
ಸ್ವರ್ಗ ಪದದ ತದ್ಭವ ರೂಪ ಸಗ್ಗದ ಹಾಗೆ.
ಇನ್ನೊಂದರ್ಥದಲ್ಲಿ,
ದಿವಾ + ಅಲಿ, ಅವಲಿ = ದಿವಾಲಿ ``ದಿವಾ'' ಎಂದರೆ ``ಹಗಲು'' ಎಂದರ್ಥ.
``ದಿವಾರಾತ್ರಿ'' ಎಂದರೆ ``ಹಗಲು, ರಾತ್ರಿ'' ಎಂದರ್ಥ.
``ದಿವಾ'' ಎಂದರೆ ``ಹಗಲು''; ``ಹಗಲು'' ಎಂದರೆ ``ಬೆಳಕು''.
``ರಾತ್ರಿ'' ಎಂದರೆ ``ಕತ್ತಲು''.
``ದಿವಾ'' ಎಂದರೆ ``ಹಗಲು'' ಎಂದಾದ ಮೇಲೆ ``ಹಗಲು'' ಎಂದರೆ ಬೆಳಕು ಎಂದಾಯಿತಲ್ಲವೆ?
``ಅಲಿ'' ಎಂದರೆ ``ರಾಶಿ, ಸಮೂಹ'' ಎಂದಾದ ಮೇಲೆ ``ದಿವಾಲಿ'' ಎಂದರೆ ಬೆಳಕಿನ ಸಮೂಹ,
ಬೆಳಕಿನ ರಾಶಿ ಎಂದರ್ಥ ತಾನೆ?
ಕೆಲವು ಜನಗಳು ಕೆಲವು ಪದಗಳಿಗೆ ``ಇರುವ'' ಅರ್ಥವನ್ನು ಬಿಟ್ಟು
``ಇಲ್ಲದ'' ಅರ್ಥವನ್ನು ಮಾಡಿಕೊಂಡು ಬೇರೆಯವರಿಗೆ ಉಚಿತವಾಗಿ ಮತ್ತು ಫುಲ್ ಡಿಸ್ಕೌಂಟ್‌ನಲ್ಲಿ ಬುದ್ಧಿಹೇಳಲು ಬರುತ್ತಾರೆ.
ಯಾರಾದರೂ ಸರಿ,
ಯಾವಾಗಲೂ ಆವೇಶದಲ್ಲಿ ಮಾತನಾಡುವುದಕ್ಕಿಂತ ಅರಿತುಮಾತನಾಡುವುದು ತುಂಬ ಒಳ್ಳೆಯದು
ಮತ್ತು ಅದು ತುಂಬ ಉತ್ತಮ. ಅದು ಶ್ರೇಯಸ್ಕರ ಕೂಡ ಅಹುದು.
ತಾವು ಅರ್ಥಮಾಡಿಕೊಳ್ಳಬೇಕಾದುದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅರ್ಥಕ್ಕೆ ಅನರ್ಥದೀಕ್ಷೆ ಮತ್ತು ಅಪಾರ್ಥದೀಕ್ಷೆಯನ್ನು ಕೊಟ್ಟುಬಿಟ್ಟು ಇನ್ನೊಬ್ಬರ ವಿಷಯದಲ್ಲಿ ದಿಢೀರನೇ ಹಗುರವಾಗಿ ಮಾತನಾಡಿಬಿಡುತ್ತಾರೆ.
ಯಾರೇ ಆಗಲಿ, ತಾವು ಮಾತನಾಡುವ ಮಾತುಗಳಿಗೆ ವಿವೇಕ, ವಿವೇಚನೆಗಳ ``ಬ್ಯಾರಿಕೇಡ್''ಗಳನ್ನು ಹಾಕಿಕೊಂಡಿರಬೇಕು.
ಆಡುವ ಮಾತುಗಳಿಗೆ ``ಬ್ರೇಕ್ '' ಹಾಗೂ ``ಬ್ಯಾರಿಕೇಡ್''ಗಳನ್ನು ಹಾಕದೆಯೇ ಹಾಗೆಯೇ ಬಿಟ್ಟಿಯಾಗಿ, ಬೇಕಾಬಿಟ್ಟಿಯಾಗಿ ಮಾತನಾಡುವುದು ಸಾಧುವೂ ಅಲ್ಲ; ಸಭ್ಯತೆಯೂ ಅಲ್ಲ. ಅದು ಸಂಸ್ಕೃತಿಯAತೂ ಅಲ್ಲವೇ ಅಲ್ಲ!!