ಜೈ ಭೀಮ್ : ಚಿತ್ರ ಮಂಡಿಸಿರುವ ವಿಧಾನ ಇಷ್ಟವಾಯ್ತು - ಕೆ.ಪುಟ್ಟಸ್ವಾಮಿ

review of film jai bheem

ಜೈ ಭೀಮ್ : ಚಿತ್ರ ಮಂಡಿಸಿರುವ ವಿಧಾನ ಇಷ್ಟವಾಯ್ತು -  ಕೆ.ಪುಟ್ಟಸ್ವಾಮಿ

ಜೈ ಭೀಮ್ : ಚಿತ್ರ ಮಂಡಿಸಿರುವ ವಿಧಾನ ಇಷ್ಟವಾಯ್ತು

ಕೆ.ಪುಟ್ಟಸ್ವಾಮಿ

ಜೈ ಭೀಮ್ ಸಿನಿಮಾವನ್ನು ಮೊದಲದಿನವೇ ನೋಡಿದೆ. ದೀರ್ಘ ಅವಧಿಯ ಚಿತ್ರವಾದರೂ, ಸ್ವಲ್ಪ ಕತ್ತರಿಯಾಡಿಸಬಹುದಿತ್ತು ಅನಿಸಿದರೂ ಎಲ್ಲೂ ಬೇಸರ ಅನಿಸಲಿಲ್ಲ . ಒಂದು ದೃಶ್ಯದಲ್ಲಿ ನಾಯಕ "ಗಾಂಧಿ, ನೆಹರೂ ಎಲ್ಲ ಇದ್ದಾರೆ, ಅಂಬೇಡ್ಕರ್ ಯಾಕಿಲ್ಲ" ಎಂದು ಹಾಕುವ ಪ್ರಶ್ನೆಯನ್ನು ವಾಚ್ಯವಾಗಿಸದೇ ನಿರೂಪಿಸುವ ಸಾಧ್ಯತೆಗಳನ್ನು ಹುಡುಕಬಹುದಿತ್ತು ಎನಿಸಿದರೂ ಮುಖ್ಯ ಕೊರತೆ ಎನಿಸಲಿಲ್ಲ. ತಾಂತ್ರಿಕವಾಗಿಯೂ ಚಿನ್ನಾಗಿರುವ ಸಿನಿಮಾ. ಇರುಳರು, ಕೊರಚರಂಥ ಅಸಹಾಯಕ ಸಮುದಾಯಗಳನ್ನು ಅಪರಾಧಿ ಬುಡಕಟ್ಟಾಗಿ ನಾಮಕರಣ ಮಾಡುವ ಈ ಕ್ರೂರ ವ್ಯವಸ್ಥೆಯನ್ನು ವಿವರವಾಗಿ ಅನಾವರಣ ಮಾಡುವ ಸಿನೆಮಾ. ಪೊಲೀಸರ ಕ್ರೌರ್ಯದ ಬಗ್ಗೆ ಆಕ್ಷೇಪಣೆಗಳಿಲ್ಲ. ಅವು ಸಂಭವನೀಯ ಘಟನೆಗಳೇ. ಆ ದೃಶ್ಯಗಳು ಮನಕಲಕ್ಕಿದ್ದಂತೂ ಸತ್ಯ.

ನಾನು ಜೈ ಭೀಮ್ ನೋಡಿದಾಗ ಇದೇ ಮಾದರಿಯ ಹಿಂದಿನ ಅನೇಕ ಚಿತ್ರಗಳು ನೆನಪಿಗೆ ಬಂದವು. ಇಂಥ ಸಿನಿಮಾಗಳು ಕೆಲವು ಸಿದ್ಧಮಾದರಿಗಳನ್ನು ಅನುಸರಿಸುತ್ತವೆ. ಅಂದರೆ ಒಂದು ವಸ್ತು/ಆಶಯ ಕಲಾಮಾಧ್ಯಮದಲ್ಲಿ ಮತ್ತೆ ಮತ್ತೆ ನಿರೂಪಗೊಳ್ಳುವ ವಿದ್ಯಮಾನ ಅದಕ್ಕೆ Trope ಅಂತಾರೆ. ಅದನ್ನು formula ಅಥವಾ ಸೂತ್ರ ಅಂತ ಹೇಳೋಕ್ಕಾಗಲ್ಲ. ಎರಡೂ ಬೇರೆ ಬೇರೆ. ನಮ್ಮಲ್ಲಿ ಬಳಸಿರುವ ಬಹುಮುಖ್ಯ trope ಎಂದರೆ supremacy ಇರುವ ಸಮುದಾಯದ ವ್ಯಕ್ತಿ ಶೋಷಕರ ಪರ ನಿಲ್ಲುವುದು. ಆ ವಿಮೋಚನಕಾರನಿಗಾಗಿ (saviour) ಸಮುದಾಯ ಕಾಯುವುದು . ಅಲ್ಲಿಯವರೆಗೂ ಆ ಸಮುದಾಯ ಹಿಂಸೆ, ಅವಮಾನ ಎಲ್ಲವನ್ನೂ ಅಸಹಾಯಕತೆಯಿಂದ ಸಹಿಸುವುದು. ಕೊನೆಗೂ ಮೇಲ್ ಸಮುದಾಯಕ್ಕೆ ಸೇರಿದ ಉದಾರವಾದಿಗಳು ಬಂದು ಅವರ ಸಹಾಯಕ್ಕೆ ನಿಲ್ಲುವುದು. ಬಹುಶ: ಜಗತ್ತಿನ ಹಿಂದುಳಿದವರ ವಿಮೋಚನೆಗೆ, ಜನರನ್ನು ನಾಗರಿಕರನ್ನಾಗಿಸಲು ತನ್ನಿಂದ ಮಾತ್ರ ಸಾಧ್ಯ ಎಂದು ನಂಬಿದ್ದ white supremacy ಇದರ ಹಿಂದಿನ ಪ್ರೇರಣೆ ಎನ್ನಬಹುದು.

ಈ trope ನ ಬಹುಮುಖ್ಯ ಚಿತ್ರ ನಾನು ಮೊದಲು ನೋಡಿದ್ದು ಗೋವಿಂದ್ ನಿಹಲಾನಿ ಅವರ ಮೊದಲ ಚಿತ್ರ ಆಕ್ರೋಶ್. (1980). ಸುದ್ದಿಪತ್ರಿಕೆಯ ಮೂಲೆಯಲ್ಲಿ ಸಣ್ಣದಾಗಿ ಪ್ರಕಟವಾದ ಸುದ್ದಿಯೊಂದನ್ನು ಆಧರಿಸಿದ ಸಿನೆಮಾ ಅದು. ಅಸಹಾಯಕ ಬುಡಕಟ್ಟು ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿ, ಸಾಯಿಸಿ ಗಂಡನನ್ನೇ ಕೊಲೆಯ ಆರೋಪಿ ಮಾಡುವ ನಮ್ಮ ಭ್ರಷ್ಟ ಆಡಳಿತ, ನ್ಯಾಯಾಂಗ ಮತ್ತು ಪಾಳೇಗಾರಿಕೆ ವ್ಯವಸ್ಥೆಯ ಕ್ರೌರ್ಯವನ್ನು ಅನಾವರಣ ಮಾಡಿದ ಕತೆ. ಇಲ್ಲಿ ಅಸಹಾಯಕ ಗಂಡ ಲಾಹನ್ಯನ ಪರವಾಗಿ ವಾದಿಸುವವನು ಆದರ್ಶ ಬ್ರಾಹ್ಮಣ ಯುವ ವಕೀಲ ಭಾಸ್ಕರ ಕುಲಕರ್ಣಿ. ಪಾಳೇಗಾರ ಭೂಮಾಲೀಕರ ವಾದಿಸುವವವನು ಕುಲಕರ್ಣಿಯ ಗುರು ಮತ್ತು ಅದೇ ಬುಡಕಟ್ಟಿಗೆ ಸೇರಿದ, ವಿದ್ಯಾವಂತ ದುಸಾನೆ. ತನ್ನ ಬುಡಕಟ್ಟಿನ ಎದುರು ಅವನು ನಿಲ್ಲುತ್ತಾನೆ. ಇಲ್ಲಿರುವ ವ್ಯಂಗ್ಯ ಗಮನಿಸಿ.

ಹಾಲಿವುಡ್ ನಲ್ಲೂ ಇದೇ ಮಾದರಿಗಳು ಸಿಗ್ತವೆ. ಅಲನ್ ಪಾರ್ಕರ್ ನ ಪ್ರಖ್ಯಾತ ಸಿನೆಮಾ ಮಿಸಿಸಿಪಿ ಬರ್ನಿಂಗ್ (1988) ಸಹ 1964ರಲ್ಲಿ ಸಂಭವಿಸಿದ ಅಮೆರಿಕದ ಮೂವರು ಕರಿಯ ಮಾನವ ಹಕ್ಕು ಕಾರ್ಯಕರ್ತರ ಕಣ್ಮರೆ ಪ್ರಸಂಗದ ತನಿಖೆಯನ್ನು ಆಧರಿಸಿದ ಸಿನೆಮಾ. ಕರಿಯರ ಬಗ್ಗೆ ತನಿಖೆ ಮಾಡಲು ಬರುವವರೂ ಇಬ್ಬರು ಬಿಳಿಯ FBI ಏಜೆಂಟ್ ಗಳು. ಅವರು ವ್ಯವಸ್ಥೆಯನ್ನೇ ಎದುರು ಹಾಕಿಕೊಂಡು ಕರಿಯರಿಗಾದ ಅನ್ಯಾಯಗಳನ್ನು ಪೊಲೀಸರ ಕ್ರೌರ್ಯವನ್ನು ಬಯಲು ಮಾಡುತ್ತಾರೆ.

ಇದಕ್ಕೆ ಲೇಟೆಸ್ಟ್ ಉದಾಹರಣೆಯೆಂದರೆ ARTICLE 15. ಈ ಹಿಂದೀ ಸಿನೆಮಾದಲ್ಲೂ ಮೇಲ್ಜಾತಿಗೆ ಸೇರಿದ, ಉನ್ನತ ಶಿಕ್ಷಣ ಪಡೆದು ಬಂದ ಐಪಿಎಸ್ ಅಧಿಕಾರಿಯೇ ವ್ಯವಸ್ಥೆಯ ವಿರೋಧ ಕಟ್ಟಿಕೊಂಡು ತಬ್ಬಲಿ ಸಮುದಾಯದ ಪರ ನಿಲ್ಲುತ್ತಾನೆ. ಆರ್ಟಿಕಲ್ 15 ರಿಂದ ಮೀಸಲಾತಿ ಸೌಲಭ್ಯಪಡೆದು ಉದ್ಯೋಗಸ್ಥರಾದ ತಳಸಮುದಾಯದ ನೌಕರರು ತಮ್ಮ ತಮ್ಮ ಜಾತಿವ್ಯಸನದಲ್ಲಿ ಮುಳುಗಿರುವವರಂತೆ ತೋರಿಸಲಾಗಿದೆ. ಇದು ಸಹ ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರ.

ತಳಸಮುದಾಯಗಳ ವಿಮೋಚನೆಗೆ ಮೇಲ್ ಸಮುದಾಯದ ಉದಾರವಾದಿ ನಾಯಕರ ಆಗಮನ, ತಳಸಮುದಾಯದಲ್ಲಿ ನಾಯಕತ್ವ ಹುಟ್ಟದ ಈ ಟ್ರೋಪನ್ನು ಮಾರಿ ಸೆಲ್ವರಾಜ್, ಪ. ರಂಜಿತ್ ಅಂಥವರು ಮುರಿದರೂ ಅದು ಇನ್ನೂ ಜನಪ್ರಿಯ ಮಾದರಿಯೇ ಆಗಿದೆ. ತನ್ನ ಸಮುದಾಯದ ವಿಮೋಚನೆಗೆ ಖಚಿತ ತಾತ್ವಿಕತೆ ಯಿಂದ ಹೋರಾಡಿದ ಅಂಬೇಡ್ಕರ್ ಅವರಿಗಿಂತಲೂ ಮಹಾತ್ಮ ಗಾಂಧಿಯ ಕ್ರಿಯೆಗಳು ಹೆಚ್ಚು ಜನಪ್ರಿಯವಾದುದಕ್ಕೆ ಇಲ್ಲಿ ಹೊಳಹು ಸಿಗಬಹುದೇನೋ!?

ಇಲ್ಲಿನ ಟಿಪ್ಪಣಿಯು ಜೈಭೀಮ್ ಚಿತ್ರದ ಮಹತ್ವವನ್ನೇನೂ ಕಡೆಗಣಿಸುತ್ತಿಲ್ಲ. ಹೃದಯದ ಔದಾರ್ಯ, ಮನಪರಿವರ್ತನೆ ಮುಂತಾದ ಭಾವುಕ ಮಾರ್ಗಗಳ ಬದಲು ಜನಪರವಾದ ಕಾನೂನಿನ ಹಾದಿ ಮಾತ್ರ ಅಸಹಾಯಕ ವರ್ಗಗಳಿಗೆ ನ್ಯಾಯ ಒದಗಿಸಬಲ್ಲದು ಎಂಬ ಅಂಬೇಡ್ಕರ್ ತಾತ್ವಿಕತೆಯನ್ನು ಈ ಚಿತ್ರ ಮಂಡಿಸಿರುವ ವಿಧಾನ ನನಗೆ ಇಷ್ಟವಾಯ್ತು.

ತಳಸಮುದಾಯದಿಂದ ನಾಯಕತ್ವ ಮುನ್ನಲೆಗೆ ಬರುವಂಥ ಚಿತ್ರಗಳೂ ಬರುವುದು ಹೆಚ್ಚಾಗಲಿ