ಜಯತೀರ್ಥ ಜೋಶಿ ಎಂಬ ರಂಗಾನ್ವೇಷಣೆಯನ್ನರಸಿ ... 

ಜಯತೀರ್ಥ ಜೋಶಿ ಎಂಬ ರಂಗಾನ್ವೇಷಣೆಯನ್ನರಸಿ ... 

ಜಯತೀರ್ಥ ಜೋಶಿ ಎಂಬ ರಂಗಾನ್ವೇಷಣೆಯನ್ನರಸಿ ... 


ವ್ಯಕ್ತಿ-ವ್ಯಕ್ತಿತ್ವ


ಬಿ.ರಾಜೇಶ್

ಜಯತೀರ್ಥ ಜೋಶಿ! ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ, ರಂಗಭೂಮಿಯೊಡನೆ ಒಡನಾಟವಿದ್ದವರಿಗೆ ಒಂದು ದಟ್ಟ ನೆನಪು. ಈಗ ಮೈಸೂರಿನ ರಂಗವಲ್ಲಿ ನಾಟಕ ತಂಡ ಅವರ ನೆನಪಿನಲ್ಲಿ ನಡೆಸುತ್ತಿರುವ ನಾಟಕ ಕಾರ್ಯಾಗಾರ 'ಭೂಮಿಕಾ' ದ ಕಾರಣದಿಂದ ಇಂದು ಮತ್ತೆ ಅವರನ್ನು ಸ್ಮರಿಸಿಕೊಳ್ಳುವ ಅವಕಾಶ ಒದಗಿದೆ. 


ಜಯತೀರ್ಥ ಜೋಶಿ ಎಂಬ ರಂಗಾನ್ವೇಷಣೆಯನ್ನರಸಿ ... 


ಜಯತೀರ್ಥ ಜೋಶಿಯವರು ಹುಟ್ಟಿದ್ದು 24 ಜುಲೈ 1957, ಗದಗ ಜಿಲ್ಲೆಯಲ್ಲಿ. ತಂದೆ ಸಂಸ್ಕೃತ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಕಾಂಡ ಪಂಡಿತರಾದ ಶ್ರೀ ಗುರಾಚಾರ್ಯ ಜೋಶಿ. ತಾಯಿ ಶ್ರೀಮತಿ ಗೋದಾವರಿ ಬಾಯಿ. ಭಾರತ ರತ್ನ ಪಂಡಿತ ಭೀಮಸೇನ ಜೋಶಿ ಇವರ ಅಣ್ಣ ಮತ್ತು ಖ್ಯಾತ ನಾಟಕಕಾರರಾದ 'ಜಡಭರತ' ಶ್ರೀ ಜಿ ಬಿ ಜೋಶಿ ಇವರ ಚಿಕ್ಕಪ್ಪ. ಮನೆಯಲ್ಲಿ ಸಾಹಿತ್ಯ ಮತ್ತು ಸಂಗೀತದ ದಟ್ಟ ವಾತಾವರಣವಿದ್ದರೂ ಇವರು ಆಯ್ದುಕೊಂಡಿದ್ದು ನಾಟಕರಂಗವನ್ನು. ಅಥವಾ ನಾಟಕರಂಗವೇ ಇವರನ್ನು ಆಯ್ಕೆ ಮಾಡಿಕೊಂಡಿತು ಎಂದು ಹೇಳಬಹುದು. ಶಾಲೆಯಲ್ಲಿ ಇವರು ಎಲ್ಲ ಹುಡುಗರಂತೆ ಪಠ್ಯೇತರ ಚಟುವಟಿಕೆಗಳಾದ ಹಾಡು ಮತ್ತು ನಾಟಕಗಳಲ್ಲಿ ಭಾಗವಹಿಸುತ್ತಿದ್ದರೂ, ಆಗ ಅವರು ನಾಟಕರಂಗವನ್ನೇ ತಮ್ಮ ಕರ್ಮಭೂಮಿಯಾಗಿಸಿಕೊಳ್ಳುತ್ತೇನೆಂದು ಅಂದುಕೊAಡಿರಲಿಲ್ಲವೇನೋ. 

ಚಿಕ್ಕ ವಯಸ್ಸಿನಲ್ಲೇ ಇವರು ಓದುತ್ತಿದ್ದ ಗದಗಿನ ವಿದ್ಯಾದಾನ ಸಮಿತಿ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಕರಿಗೆಂದೇ ಒಂದು ನಾಟಕವನ್ನು ನಿರ್ದೇಶಿಸುವ ಅವಕಾಶ ಏಳನೇ ತರಗತಿಯನ್ನು ಓದುತ್ತಿದ್ದಾಗಲೇ ಸಿಕ್ಕಿತ್ತು. 1977 ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಇವರು ಸಾಕಷ್ಟು ನಾಟಕಗಳಲ್ಲಿ ಭಾಗವಹಿಸಿ ಒಳ್ಳೆಯ ಹೆಸರು ಗಳಿಸಿದರು. ಬಹುಶಃ ಅಲ್ಲಿಂದಲೇ ಇವರ ಮತ್ತು ರಂಗಭೂಮಿಯ ನಂಟು ಗಟ್ಟಿಯಾಗತೊಡಗಿತೆಂದು ಹೇಳಬಹುದು. ಬಿ.ಎಸ್ಸಿ. ಮುಗಿಸಿ ಹೈದರಾಬಾದಿನಲ್ಲಿ ಕೆಲಸಕ್ಕೆ ಸೇರಿ, ಒಮ್ಮೆ ಯಾವುದೋ ಕೆಲಸಕ್ಕೆ ಬೆಂಗಳೂರಿಗೆ ಬಂದಾಗ ಡೆಕ್ಕನ್ ಹೆರಾಳ್ದ್ ನಲ್ಲಿ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಜಾಹೀರಾತೊಂದನ್ನು ನೋಡಿ, ಚಿಕ್ಕಪ್ಪ ಶ್ರೀ ಜಿ.ಬಿ. ಜೋಷಿಯವರ ಬಳಿ ಸಲಹೆ ಕೇಳಿದರು. ಅವರ ಪ್ರೋತ್ಸಾಹದಿಂದ ರಾಷ್ಟ್ರೀಯ ನಾಟಕ ಶಾಲೆಯನ್ನು ಸೇರಿದರು. ಅಲ್ಲಿ 1981-82 ರಲ್ಲಿ 'ಡಿಪ್ಲೊಮಾ ಇನ್ ಅಡ್ವಾನ್ಸ್ಡ್ ಡ್ರಮಟಿಕ್ಸ್' ಮತ್ತು 'ಕೋರ್ಸ್ ಆನ್ ಥಿಯೇಟರ್ ಎಜುಕೇಶನ್' ಮುಗಿಸಿ 1987 ರಲ್ಲಿ ಬ್ರಿಟನ್ನಿನ ಲೆಂಕೆಸ್ಟೆರ್ ವಿವಿಯಿಂದ ನಾಟಕ ಅಧ್ಯಯನದಲ್ಲಿ ಎಂ.ಎ. ಪದವಿ ಪಡೆದರು. 

ಜಯತೀರ್ಥ ಜೋಶಿ ಹೇಳುತ್ತಾರೆ "ಎಷ್ಟೆಲ್ಲಾ ನಾಟಕಗಳನ್ನು ಮಾಡಿದ್ದೇನೆ. ಆದರೂ ಸಿದ್ಧ ಮಾದರಿಯ ರಂಗಭೂಮಿ ಅಥವಾ ಪ್ರೊಸೀನಿಯಂ ಗೆ ಹೊರತಾದ ವಿಧಾನ ನನ್ನದು ಎಂದೇ ಎಲ್ಲರೂ ಹೇಳುತ್ತಾರೆ. ಇದು ಬಹುಪಾಲು ಸತ್ಯವೂ ಹೌದು. ನನ್ನತನ ಇಲ್ಲದೆ, ಹತ್ತರ ಜೊತೆ ಹನ್ನೊಂದಾಗಲು ನನಗೆ ಇಷ್ಟವಿಲ್ಲ. ಈ ಕಾರಣದಿಂದಲೇ ಇರಬೇಕು ನನ್ನ ಎಲ್ಲಾ ಯಶಸ್ವಿ ನಾಟಕಗಳು ಸಿದ್ಧ ರಂಗಭೂಮಿಗೆ ಹೊರತಾದ ಹೊರಾಂಗಣದಲ್ಲಿ ವಿನ್ಯಾಸಗೊಂಡು ಪ್ರದರ್ಶನ ಕಂಡಿವೆ. ಇದರಲ್ಲೇ ನನಗೆ ಹೆಚ್ಚು ಕುತೂಹಲ ಹಾಗೂ ಆಸಕ್ತಿ. ಈ ರೀತಿಯ ಪ್ರಯೋಗಗಳಿಗೆ ಜನರಿಂದ ಸಿಕ್ಕ ಪ್ರೋತ್ಸಾಹ ಮತ್ತು ಈ ರೀತಿಯ ನಾಟಕ ಕಟ್ಟುವ ನನ್ನ ಅನುಭವಗಳು ನನ್ನನ್ನು ಇನ್ನಷ್ಟು ಗಟ್ಟಿ ಮಾಡಿವೆ." 

ಗದಗಿನ ಶ್ರೀ ವೀರನಾರಾಯಣನ ದೇವಸ್ಥಾನದ ಎದುರು ಇರುವ ಕಲ್ಯಾಣಿಯ ಹೆಸರು ಕೊನೇರಿ ಹೊಂಡ. ನೀರು ಸಂಪೂರ್ಣ ಬತ್ತಿಹೋಗಿ ಮೆಟ್ಟಿಲು, ಮಂಟಪ ಮುಂತಾದ ಅದ್ಭುತ ಶಿಲಾನ್ಯಾಸಗಳಿಂದ ಕೂಡಿದ ಪರಿಸರ ಇದೆ ಅಲ್ಲಿ. ಇದನ್ನೇ ವೇದಿಕೆ, ಪ್ರೇಕ್ಷಾಂಗಣ ಮತ್ತು ಗ್ರೀನ್ ರೂಂ ಇರುವ ಒಂದು ಸಂಪೂರ್ಣ ರಂಗಮAದಿರವನ್ನಾಗಿ ರೂಪಿಸಿಕೊಂಡು, ಭಾರತದ ಶ್ರೇಷ್ಟ ನಾಟಕಕಾರ ಗಿರೀಶ್ ಕಾರ್ನಾಡರ ಸುಪ್ರಸಿದ್ಧ ನಾಟಕ 'ತಲೆದಂಡ' ವನ್ನು ಜಯತೀರ್ಥ ಜೋಶಿ ಪ್ರದರ್ಶಿಸಿದರು. ಅವರು ಬರೀ ನಾಟಕವನ್ನಷ್ಟೇ ವಿನ್ಯಾಸ ಮಾಡಲಿಲ್ಲ, ಬದಲಾಗಿ ಇಡೀ ರಂಗಾವರಣ, ರಂಗಮAದಿರವನ್ನೇ ಅನ್ವೇಷಿಸಿದರು. 

ತುಮರಿ, ಸುತ್ತಲೂ ನೀರು ಆವರಿಸಿದ ಒಂದು ಪುಟ್ಟ ದ್ವೀಪ. ಅಲ್ಲಿ ಧರ್ಮವೀರ ಭಾರತಿಯವರ ಪ್ರಸಿದ್ಧ ನಾಟಕ 'ಅಂಧಯುಗ' ವನ್ನು 1978 ರಲ್ಲಿ ಪ್ರಯೋಗ ಮಾಡಿದರು. ಅಲ್ಲೊಂದು ಕೊಳ್ಳದಲ್ಲಿ ರಂಗಮAದಿರ ನಿರ್ಮಿಸಿ ಒಂದು ಪಾರ್ಶ್ವವನ್ನು ಪ್ರೇಕ್ಷಕರು ಕೂರುವುದಕ್ಕೆ ಮತ್ತೊಂದು ಪಾರ್ಶ್ವವನ್ನು ನಾಟಕವಾಡಲು ವೇದಿಕೆಯಾಗಿ ಸಿದ್ದಪಡಿಸಿಕೊಂಡರು. ದೂರ ದೂರದಿಂದ ಚಕ್ಕಡಿ ಕಟ್ಟಿಕೊಂಡು, ಅಲ್ಲಿ ನಡೆದ ಈ ನಾಟಕವನ್ನು ನೋಡಲು ಜನ ಮುಗಿಬಿದ್ದು ಬಂದರು. ಮಾಡಿದ್ದು ಎರಡೇ ಪ್ರದರ್ಶನಗಳಾದರೂ ನೊಡಿದ್ದು ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರು. 
 
ನಾಟಕಗಳ ಪರಂಪರೆಯೇ ಇಲ್ಲವೆನ್ನುವಷ್ಟು ಐತಿಹಾಸಿಕ ಕ್ಷೇತ್ರವಾದ ಸವದತ್ತಿಯಲ್ಲಿ ಎಂ ಎಸ್ ಕೆ ಪ್ರಭು ಅವರ 'ಗುಲಾಮನ ಸ್ವಾತಂತ್ರ‍್ಯ ಯಾತ್ರೆ' ನಾಟಕವನ್ನು ಪ್ರದರ್ಶಿಸಿದರು. ಆ ಕಾಲದಲ್ಲಿ ಜನರು ಸುಳಿಯುವುದಕ್ಕೂ ಹೆದರುತ್ತಿದ್ದ ‘ಛಾಯಪ್ಪ ದೇಸಾಯಿ ಅವರ ಹಳೇಕೋಟೆ’ ಅಥವಾ 'ದೇಸಾಯಿ ಖಿಲ್ಲ' ಎಂಬ ಕೋಟೆಯನ್ನೇ ರಂಗವೇದಿಕೆಯನ್ನಾಗಿ ಬಳಸಿಕೊಂಡರು. ಅಲ್ಲಿ ಅರವತ್ತು ಅಡಿ ಎತ್ತರದ ನಲವತ್ತು ಅಡಿ ಅಗಲದ ಗೋಡೆ, ಒಂದು ಬುರುಜು ಮತ್ತು ಎತ್ತರದ ಕಮಾನಿನ ಕೆಳಗೆ ನಿರ್ಮಿಸಲಾದ ಮೂವತ್ತು ಅಡಿ ಉದ್ದ ಹಾಗೂ ಅಷ್ಟೇ ಅಗಲದ ವೇದಿಕೆ, ಪಕ್ಕದಲ್ಲಿ ಮೋಚಿಯ ಮತ್ತು ಸಾರಾಯಿಯ ಅಂಗಡಿ ನಿರ್ಮಿಸಲಾಗಿತ್ತು. ಈ ರಂಗಸ್ಥಳದಲ್ಲಿ ಧ್ವನಿವರ್ಧಕ ಬಳಸದೆಯೇ ನಾಟಕವನ್ನು ಪ್ರದರ್ಶಿಸಲಾಗಿತ್ತು. ನಾಟಕ ಐದು ಯಶಸ್ವಿ ಪ್ರದರ್ಶನಗಳನ್ನು ಕಂಡಿತು.

1983-84 ರಲ್ಲಿ ನೀನಾಸಂ ಮತ್ತು ಅಮೆರಿಕದ ಫೋರ್ಡ್ ಫೌಂಡೇಶನ್, 'ಜನಸ್ಪಂದನ' ಎನ್ನುವ ಒಂದು ಯೋಜನೆಯನ್ನು ರೂಪಿಸಿದ್ದು ಜಯತೀರ್ಥ ಜೋಶಿಯವರು ಅದರ ನಿರ್ದೇಶಕರಾಗಿದ್ದರು. ಆಗ ರಂಗಮAದಿರವೇ ಇಲ್ಲದ ಕಿತ್ತೂರಿನಲ್ಲಿ ಒಂದು ರಂಗಸ್ಥಳವನ್ನು ನಿರ್ಮಿಸಲು ರಾತ್ರೋರಾತ್ರಿ ಊರಿನ ಜನ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದರು. ಯಾರೋ ಕಲ್ಲು ತಂದು ಕೊಟ್ಟರೆ, ಮತ್ತ್ಯಾರೋ ಟ್ರ‍್ಯಾಕ್ಟರ್‌ಗಳಲ್ಲಿ ದೂರ ದೂರದಿಂದ ಮರಳು ತರುತ್ತಿದ್ದರು. ಅದೊಂದು ಸಾಮುದಾಯಿಕ ಕ್ರಿಯೆಯಾಗಿ, ಇಡೀ ಊರಿನ ಚಟುವಟಿಕೆಯಾಯಿತು. ಇಡೀ ಜನಸಮುದಾಯವೇ ಕೈಜೋಡಿಸಿ ನಿರ್ಮಿಸಿದ ರಂಗವೇದಿಕೆಯಲ್ಲಿ ಪ್ರಯೋಗಗೊಂಡು ಯಶಸ್ಸು ಗಳಿಸಿದ್ದು ಬ್ರೆಕ್ಟ್ ನ 'ಕಕೇಶಿಯನ್ ಚಾಕ್ ಸರ್ಕಲ್' ನ ಕನ್ನಡ ರೂಪಾಂತರ 'ಧರ್ಮಪುರಿಯ ಶ್ವೇತ ವೃತ್ತ'. ಅದನ್ನು ಕನ್ನಡಕ್ಕೆ ಅಳವಡಿಸಿದವರು ಕನ್ನಡದ ಖ್ಯಾತ ಸಾಹಿತಿ ಗೋಪಾಲ ವಾಜಪೇಯಿ. ವೇದಿಕೆ ಹೇಗೂ ನಿರ್ಮಿಸಿಯಾಗಿತ್ತಾದ್ದರಿಂದ ಅದೇ ವೇದಿಕೆಯಲ್ಲಿ ಹತ್ತೊಂಬತ್ತನೇ ಶತಮಾನದ ಕವಿ ತಮ್ಮಣ್ಣನ 'ಶ್ರೀ ಕೃಷ್ಣ ಪಾರಿಜಾತ' ಕೂಡ ಪ್ರಯೋಗಿಸಿದರು. ಇಡೀ ರಾತ್ರಿ ಆಡಬಹುದಾದ ನಾಟಕವನ್ನು, ನಾಟಕೀಯ ಅಂಶಗಳನ್ನು ಮತ್ತು ಅದರ ಸತ್ವವನ್ನು ಉಳಿಸಿಕೊಂಡು, ಎರಡೂವರೆ ಗಂಟೆಗೆ ಜಯತೀರ್ಥ ಜೋಶಿಯವರು ಪರಿಷ್ಕರಿಸಿದ್ದರು. 

"ಸಿದ್ಧ ರಂಗಮAದಿರದಲ್ಲಾದರೆ ಎಲ್ಲಾ ಪ್ರೇಕ್ಷಕರಿಗೆ ಅದರ ವಿನ್ಯಾಸ ಚೆನ್ನಾಗಿ ತಿಳಿದಿರುತ್ತದೆ. ರಂಗಮAದಿರಕ್ಕೆ ಯಾವ ದಿಕ್ಕಿನಿಂದ ಪ್ರವೇಶ, ನಿರ್ಗಮನ, ನಾಟಕ ನಡೆಯುವ ಜಾಗ ಎಲ್ಲಾ ಸ್ಪಷ್ಟವಾಗಿ ನಿರೂಪಿತವಾಗಿರುತ್ತವೆ. ರಂಗಮAದಿರದ ಒಳಗೆ ಬಂದ ಪ್ರೇಕ್ಷಕ ವಿರಾಮ ಸ್ಥಿತಿಯಲ್ಲಿ ಅಕ್ಕಪಕ್ಕದವರೊಡನೆ ಮಾತನಾಡುತ್ತಿರುವಂತೆಯೇ ನಾಟಕ ಆರಂಭವಾಗುತ್ತದೆ. ಆದರೆ ನನ್ನ ಪ್ರಯೋಗಗಳಲ್ಲಿ, ಪ್ರೇಕ್ಷಕರ ಪ್ರವೇಶವನ್ನು ಕೂಡ ನಿರ್ದಿಷ್ಟವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಪ್ರೇಕ್ಷಕ ಸುಮಾರು ಇನ್ನೂರು ಮೀಟರ್ ನಡೆದು ಬರುತ್ತಾ ಆ ಹೊಸಾ ಪರಿಸರಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ಅವನ ಕಣ್ಣ ಮುಂದೆ ಧಿಗ್ಗನೆ ರಂಗವೇದಿಕೆಯ ಅನಾವರಣವಾಗುತ್ತದೆ. ಆ ಹೊಸ ಅನುಭವದ ಬೆರಗಿನೊಂದಿಗೆ ನಾಟಕ ಆರಂಭವಾಗುತ್ತದೆ. ಪ್ರೇಕ್ಷಕ ತಾನು ಪ್ರವೇಶಿಸುವ ದಾರಿಯಲ್ಲಿ ಇಟ್ಟ ಮೊದಲ ಹೆಜ್ಜೆಯಿಂದಲೇ ತನಗರಿವಿಲ್ಲದಂತೆಯೇ ನಾಟಕದಲ್ಲಿ ತೊಡಗಿಕೊಂಡುಬಿಟ್ಟಿರುತ್ತಾನೆ. ಗೋಡೆ ಮೇಲೆಯೋ, ಮಂದಿರದ ಹತ್ತಿರವೋ ಹೀಗೆ ತಾವೇ ಎಲ್ಲೆಲ್ಲೋ ಜಾಗ ಮಾಡಿಕೊಂಡು ಕುಳಿತುಬಿಡುತ್ತಾರೆ. ನಾಟಕ ಅವರನ್ನು ಸೆಳೆದರೆ, ಸೆಳೆಯುವಂಥ ಯೋಗ್ಯತೆ ಆ ನಾಟಕಕ್ಕಿದ್ದರೆ, ಜನ ತಮ್ಮ ಅನುಕೂಲತೆಯನ್ನು ತಾವೇ ವಿನ್ಯಾಸಗೊಳಿಸಿಕೊಂಡು ಕುಳಿತು ನಾಟಕ ನೋಡುತ್ತಾರೆ. ಇದು ನನ್ನ ಅನುಭವ. 

ಯಾವುದೇ ರೀತಿಯ ತತ್ವಕ್ಕೆ ಅಥವಾ ಸಿದ್ಧಾಂತಕ್ಕೆ ಅಂಟಿಕೊAಡವನಲ್ಲ ನಾನು. ನನ್ನನ್ನು ಕಾಡುವುದು ಮಾನವೀಯ ಕಾಳಜಿ, ಸಮಸ್ಯೆಗಳು, ಸಂಬAಧಗಳು. ಹಾಗೆಂದು ನಾನು ಮಾಡಿದ ಎಲ್ಲಾ ಪ್ರಯೋಗಗಳು ಸಫಲವಾಗಿವೆ ಎಂದು ಹೇಳುತ್ತಿಲ್ಲ. ಅಸಂಗತ ನಾಟಕಗಳಿಂದ ‘ಶ್ರೀ ಕೃಷ್ಣ ಪಾರಿಜಾತ’ ದವರೆಗೆ ನಾನು ಹಲವಾರು ಶೈಲಿಯ ನಾಟಕಗಳನ್ನು ಮಾಡಿಸಿದ್ದೇನೆ. ನಾನು ಮಾಡಿದ ಕೆಲವು ಪ್ರಯೋಗಗಳು ವಿಫಲವಾಗಿವೆ ಕೂಡ. ಹಾಗೆಂದು ನನ್ನ ಪ್ರಯೋಗಗಳನ್ನು ನಿಲ್ಲಿಸಿಲ್ಲ. ಈ ರಂಗಪಯಣದಲ್ಲಿ ನಿರಂತರವಾಗಿ 'ನನ್ನ ರಂಗಭೂಮಿ ಯಾವುದು?' ಎಂಬ ಹುಡುಕಾಟದಲ್ಲಿಯೇ ಇದ್ದೇನೆ. ಸಿದ್ಧ ದಾರಿಯಲ್ಲಿ ನಡೆಯದೆ, ಹೊಸ ದಾರಿ ರೂಪಿಸಿಕೊಂಡು ನಡೆಯುವವನೆಂಬ ಆಪಾದನೆಯೂ ನನ್ನ ಮೇಲಿದೆ. ಈ ಆಪಾದನೆಯ ಹೊಣೆಯನ್ನು ನಾನು ಸಂತೋಷದಿAದಲೇ ಹೊರುತ್ತೇನೆ." ಎಂದು ಜಯತೀರ್ಥ ಜೋಶಿ ಹೇಳುತ್ತಾರೆ. 

ಜಯತೀರ್ಥ ಜೋಶಿಯವರ ರಂಗಚಟುವಟಿಕೆ ಒಂದೇ ಕಡೆ ನಿಂತ ನೀರಾಗಲಿಲ್ಲ. ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಿತ್ತೂರು, ಸವದತ್ತಿ ಮುಂತಾದ ಊರುಗಳಲ್ಲಿ ನಾಟಕ ಪ್ರದರ್ಶನ ಮಾಡಿದರು. ಬೇರೆ ಬೇರೆ ಚಿಕ್ಕ ಪುಟ್ಟ ಊರುಗಳಲ್ಲಿ ಜನರೊಂದಿಗೆ ಬೆರೆತು, ಸಮೂಹದೊಂದಿಗೆ ಕೆಲಸ ಮಾಡುವ ಸಂತೋಷ ಕಂಡುಕೊAಡು, ಆ ಜನ ಅವರಿಗೆ ತೋರಿದ ವಿಶ್ವಾಸ ಪ್ರೀತಿಯ ಶಕ್ತಿಯನ್ನು ತುಂಬಿಕೊAಡು ರಂಗಭೂಮಿಯಲ್ಲಿ ಮುನ್ನಡೆದರು. ಪಾತಾಳಗರಡಿ, ಜೋಕುಮಾರಸ್ವಾಮಿ, ವೆನಿಸ್ ನಗರದ ವ್ಯಾಪಾರಿ, ಕಿಂಗ್ ಲಿಯರ್, ಶಾಂತಿ.... ಕೋರ್ಟ್ ಚಾಲೂ ಇದೆ, ಕೇಳು ಜನಮೇಜಯ, ಕದಡಿದ ನೀರು, ದೊರೆ ಈಡಿಪಸ್, ಪಂಜರ ಶಾಲೆ, ಹಯವದನ, ದಿ ಲೆಸನ್, ತಾಮ್ರಪತ್ರ, ಮೃಚ್ಛಕಟಿಕ, ನಂದಭೂಪತಿ, ಧರ್ಮಪುರಿಯ ಶ್ವೇತ ವೃತ್ತ, ಜಿ. ಕೆ. ಮಾಸ್ತರರ ಪ್ರಣಯ ಪ್ರಸಂಗ, ವಾಸಾಂಸಿ ಜೀರ್ಣಾನಿ, ದೊಡ್ಡಪ್ಪ, ಪೇಯಿಂಗ್ ಗೆಸ್ಟ್, ನಿಜದ ನೆಲೆ ನಿಜಕ್ಕಲ್ಲ ಮುಂತಾದ ಹಲವಾರು ನಾಟಕಗಳನ್ನು ಆಯ್ದುಕೊಂಡು ಪ್ರಯೋಗಿಸಿದರು. ವಿಫಲ ಸಫಲತೆಗೆ ಗಮನ ಕೊಡದೆ, ಪ್ರಯೋಗಗಳೇ ಅವರ ಮುಖ್ಯ ಗುರಿಯಾಗಿತ್ತು. ಅದರಿಂದ ಸಿಗುವ ಅನುಭವ ಮುಖ್ಯವಾಗಿತ್ತು. ಆ ಅನುಭವದ ಪಾಠದಿಂದ, ಮುಂದುವರೆದ ದಾರಿ ಅವರಿಗೆ ಮತ್ತಷ್ಟು ಸ್ಪಷ್ಟವಾಗಿ, ದಿಟ್ಟವಾಗಿ ಹೆಜ್ಜೆ ಇಡಲು ಸಾಧ್ಯವಾಯಿತು.  1989 ರಲ್ಲಿ ಕರ್ನಾಟಕ ಸರ್ಕಾರ ತನ್ನ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ 'ಸಂಗೀತ ಹಾಗು ನಾಟಕ' ವಿಭಾಗಕ್ಕೆ ಅಧಿಕಾರಿಯಾದ ಇವರನ್ನು ಮೈಸೂರಿನ ರಂಗಾಯಣಕ್ಕೆ ಮೊತ್ತ ಮೊದಲ ಆಡಳಿತಾಧಿಕಾರಿಯನ್ನಾಗಿ ನಿಯೋಜಿಸಿತು. ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ಮಹತ್ತರವಾದ ಕಾಲವೊಂದಕ್ಕೆ ಅದು ನಾಂದಿಯಾಗಿತ್ತು. ಕಾರಂತರ ಕನಸಿನ ರಂಗಾಯಣವನ್ನು ಅವರ ಜೊತೆ ಸೇರಿ ನನಸಾಗಿಸುವ ಜವಾಬ್ದಾರಿ ಇವರ ಮೇಲಿತ್ತು. ಕಾರಂತರು ಇವರ ಗುರುಗಳು. ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವುದು ಇವರಿಗೆ ಅಭಿಮಾನದ ವಿಷಯವಾಗಿತ್ತು. ರಂಗಾಯಣದ ಶೈಶವಾವಸ್ಥೆಯ ಆರಂಭದ ಐದು ವರ್ಷಗಳು ಕಾರಂತರೊAದಿಗೆ ಕೈಜೋಡಿಸಿ ದುಡಿದದ್ದು ಇವರ ಬದುಕಿನ ಅತ್ಯಂತ ಮಹತ್ವದ ಮಜಲು. ಕಲಾವಿದ ಹಾಗು ಅಧಿಕಾರಿ ಮಿಳಿತಗೊಂಡ ವಿಶಿಷ್ಟ ವ್ಯಕ್ತಿತ್ವವಾಗಿತ್ತು ಇವರದು. ಆದರೂ ಜಯತೀರ್ಥ ಜೋಶಿ, ಮೊದಲು ಕಲಾವಿದ ನಂತರ ಅಧಿಕಾರಿಯಾಗಿದ್ದರು. ಖ್ಯಾತ ನಿರ್ದೇಶಕರಾದ ಹಾಗು ರಂಗಶಿಕ್ಷಕರಾದ ಎಸ್ ರಘುನಂದನ, ಖ್ಯಾತ ನಿರ್ದೇಶಕರಾದ ಸಿ ಬಸವಲಿಂಗಯ್ಯ, ಖ್ಯಾತ ನಿರ್ದೇಶಕರಾದ ಪಿ ಗಂಗಾಧರ ಸ್ವಾಮಿ, ಪ್ರಸಿದ್ಧ ರಂಗವಿನ್ಯಾಸಕಾರರಾದ ಎಚ್. ಕೆ. ದ್ವಾರಕಾನಾಥ್, ಖ್ಯಾತ ಕವಿ ನಾಟಕಕಾರ ಚಲನಚಿತ್ರ ಸಂಭಾಷಣಾಕಾರ ಹಾಗು ರಂಗಸAಗೀತ ತಜ್ಞರಾದ ಶ್ರೀ ಎಚ್. ಕೆ. ಯೋಗಾನರಸಿಂಹ (ಯೋಗಣ್ಣ), ಕನ್ನಡ ರಂಗಭೂಮಿಯ ಖ್ಯಾತ ನಟ ದಿವಂಗತ ಏಣಗಿ ನಟರಾಜ್, ಖ್ಯಾತ ರಂಗಸAಗೀತ ತಜ್ಞ ಶ್ರೀನಿವಾಸ ಭಟ್ (ಚೀನಿ) ಹಾಗು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಸಿದ್ಧ ಶಿಕ್ಷಕ - ಪ್ರಶಿಕ್ಷಕರೊಡನೆ ರಂಗಾಯಣದ ಎಲ್ಲ ಕಲಾವಿದರಿಗೆ ಅತ್ಯಂತ ಸಮರ್ಥವಾದ ಹಾಗು ವಿಶಿಷ್ಟವಾದ ರಂಗಶಿಕ್ಷಣವನ್ನು ನೀಡಿ ಅವರನ್ನು ಪರಿಪೂರ್ಣ ಕಲಾವಿದರನ್ನಾಗಿ ರೂಪಿಸಿದರು. 
 
ರಂಗಾಯಣಕ್ಕಾಗಿ ಅವರು 1990 ರಲ್ಲಿ ನಿರ್ದೇಶಿಸಿದ ಗೋಪಾಲ ಕೃಷ್ಣ ಅಡಿಗರ ಕವನ 'ಭೂಮಿಗೀತ', ಒಂದು ವಿಷಿಷ್ಟ ರಂಗಪ್ರಯೋಗವಾಗಿ ಮೂಡಿಬಂತು. ರಂಗಕರ್ಮಿಗಳು, ಸಾಹಿತಿಗಳು ಹಾಗು ಪ್ರೇಕ್ಷಕರೆಲ್ಲರೂ ಮುಕ್ತ ಕಂಠದಿAದ ಪ್ರಶಂಸಿಸಿದ ಕನ್ನಡ ರಂಗಭೂಮಿಯ ವಿನೂತನ ಪ್ರಯೋಗವಾಗಿತ್ತು. ರಂಗಾಯಣದಲ್ಲಿ ಇದಕ್ಕಾಗಿಯೇ ನಿರ್ಮಿತವಾದ ರಂಗಮAದಿರದಲ್ಲಿ ಪ್ರಥಮ ಪ್ರದರ್ಶನ ಕಂಡು, ಆ ರಂಗಮAದಿರಕ್ಕೆ 'ಭೂಮಿಗೀತ' ಎಂದು ಹೆಸರು ಬರಲು ಕಾರಣವಾಯಿತು. ಇಂದಿಗೆ ಸುಪ್ರಸಿದ್ಧವಾಗಿರುವ 'ಭೂಮಿಗೀತ' ರಂಗಮAದಿರದ ಜಾಗ ಅಲ್ಲಿಯವರೆಗೆ ಕಲಾಮಂದಿರದ ಕಟ್ಟಡ ಸಾಮಗ್ರಿಗಳನ್ನು ಶೇಖರಿಸಿ ಇಡುವ ಜಾಗವಾಗಿತ್ತು. 

ತದನಂತರ 1994 ರಲ್ಲಿ ರಂಗಾಯಣಕ್ಕಾಗಿ ಅವರು, ಅತ್ಯಂತ ಜನಪ್ರಿಯವಾಗಿಯೂ ಯಶಸ್ವಿಯಾಗಿಯೂ ಪ್ರದರ್ಶಿತವಾದ, ಗಿರೀಶ್ ಕಾರ್ನಾಡರ 'ತಲೆದಂಡ' ಮತ್ತು ಅಸಂಗತ ನಾಟಕ ತ್ರಿವಳಿಗಳಾದ, ಬೆಕೆಟ್ ರಚಿಸಿರುವ 'ಹ್ಯಾಪಿ ಡೇಸ್', 'ಎಂಡ್ ಗೇಮ್' ಮತ್ತು ಅಯೊನೆಸ್ಕೋ ರಚಿಸಿರುವ 'ದಿ ಚೇರ್' ನಾಟಕಗಳನ್ನು ನಿರ್ದೇಶಿಸಿದರು. ಖ್ಯಾತ ನಾಟಕಕಾರ ಚಂದ್ರಕಾAತ ಕುಸನೂರು ರಂಗರೂಪಕ್ಕೆ ತಂದ, ರಾವ್ ಬಹದ್ದೂರ್ ಅವರ ಜನಪ್ರಿಯ ಕಾದಂಬರಿ 'ಗ್ರಾಮಾಯಣ' ವನ್ನು ನಿರ್ದೇಶಿಸುವ ಪ್ರಕ್ರಿಯೆಯಲ್ಲಿ 'ಭೂಮಿಗೀತ' ರಂಗಮAದಿರದಲ್ಲಿ ಪೂರ್ವಭಾವಿ ಪ್ರಾತ್ಯಕ್ಷಿಕೆಯನ್ನೂ ರಂಗಾಯಣದ ಕಲಾವಿದರೊಂದಿಗೆ ನೀಡಿದರು. 

ತಮ್ಮನ ಪ್ರೀತಿಯ ಕರೆಯನ್ನು ಮನ್ನಿಸಿ ಅಣ್ಣ ಪಂಡಿತ ಭೀಮಸೇನ ಜೋಶಿಯವರು ರಂಗಾಯಣಕ್ಕೆ ಭೇಟಿ ಕೊಟ್ಟು ಅತ್ಯದ್ಭುತವಾದ ವಿಶೇಷ ಸಂಗೀತ ಕಾರ್ಯಕ್ರಮ ನೀಡಿದ್ದು, ಮೈಸೂರಿನ ಸಂಗೀತ ರಸಿಕರ ನೆನಪಿನಲ್ಲಿ ಇನ್ನೂ ಹಸಿರಾಗಿ ಉಳಿದಿದೆ. ಪತ್ನಿ ಶ್ರೀಮತಿ ಕರುಣಾ ಜೋಶಿ ಸಹ ಅವರ ನಿರ್ದೆಶನದಲ್ಲಿ ನಟಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಗಳು ಶ್ರೀಮತಿ ಶ್ರೇಯಾ ಜೋಶಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮ್ಯುನಿಕೇಶನ್ ಪದವೀಧರೆಯಾಗಿದ್ದು ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯ ಆರ್ & ಡಿ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಉತ್ತಮ ಮೈಮ್ ಕಲಾವಿದೆಯಾಗಿದ್ದು, ರಂಗಭೂಮಿ ಹಾಗು ನೃತ್ಯದಲ್ಲಿ ಪರಿಣಿತರು. ಅವರ ಪತಿ ಕುಶಾಗ್ರ ಗುಪ್ತ ಬಿ.ಇ. ಮತ್ತು ಎಂ.ಬಿ.ಎ. ಪದವೀಧರರು ಹಾಗು ನೃತ್ಯ ಪರಿಣಿತರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 

ಜಯತೀರ್ಥ ಜೋಶಿಯವರ ಒಡನಾಡಿಗಳು ಹಾಗು ಶಿಷ್ಯರಾದ, ರಂಗಾಯಣದ ಕಲಾವಿದರಾದ ಪ್ರಶಾಂತ್ ಹಿರೇಮಠ, ನಿರ್ದೇಶಕರಾದ ಹಾಗು ವಸ್ತ್ರ ವಿನ್ಯಾಸಕರಾದ ಪ್ರಮೋದ ಶಿಗ್ಗಾಂವ್, ನಟ ಹಾಗು ನಿರ್ದೇಶಕರಾದ ಯಶವಂತ ಸರದೇಶಪಾಂಡೆ, ಖ್ಯಾತ ಜಾನಪದ ಮತ್ತು ರಂಗಸAಗೀತ ಕಲಾವಿದರಾದ ದಿವಂಗತ ಬಸವಲಿಂಗಯ್ಯ ಹಿರೇಮಠ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ, ರಂಗಾಯಣದ ಕಲಾವಿದರಾದ ನೂರ್ ಅಹಮ್ಮದ್ ಶೇಖ್ ಹಾಗು ಇನ್ನೂ ಹತ್ತು ಹಲವಾರು ಜನ ಅವರಿಂದ ಸ್ಫೂರ್ತಿಗೊಂಡು ರಂಗಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಸಾಧನೆಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ರಂಗಾಯಣದ ಹಿರಿಯ ರಂಗವಿನ್ಯಾಸಕಾರರಾದ ಎಚ್ .ಕೆ. ದ್ವಾರಕಾನಾಥ್ ಸಹ ಅವರ ಅನೇಕ ನಾಟಕಗಳಿಗೆ ರಂಗವಿನ್ಯಾಸ ಮಾಡಿ, ಅವರ ರಂಗಚಿAತನೆಗಳಿAದ ಪ್ರಭಾವಿತರಾದವರು. 

ಈ ಮಧ್ಯೆ, ಒಂದಾದ ನಂತರ ಒಂದರAತೆ ಬಂದೆರಗಿದ, ರಂಗಾಯಣದ ಕಲಾವಿದರಾದ ಬಸವರಾಜ ಕೊಡಗೆಯವರ ಹಾಗು ಗುರುಗಳಾದ ಕಾರಂತರ ಸಾವಿನಿಂದ, ಜಯತೀರ್ಥ ಜೋಶಿಯವರು ಬಹಳ ನೊಂದರು. ಇನ್ನೂ ಹಲವಾರು ವರುಷ ಬದುಕಿ ರಂಗಭೂಮಿಯಲ್ಲಿ ಅನೇಕ ನವೀನ ಪ್ರಯೋಗಗಳನ್ನು ಮಾಡಬೇಕಿದ್ದ ಇವರು, ತೀವ್ರ ಅನಾರೋಗ್ಯದಿಂದಾಗಿ 16 ನವೆಂಬರ್ 2002 ರಂದು, ತಮ್ಮ 46ನೇ ವಯಸ್ಸಿಗೇ, ಇಹಲೋಕದ ವ್ಯಾಪಾರವನ್ನು ಮುಗಿಸಿದರು. 

ಅನೇಕ ಗುರುತರವಾದ ರಂಗಸಾಧನೆಗಳನ್ನು ಮಾಡಿದ್ದರೂ, ಯಾವ ಪ್ರಚಾರದ ಆಸೆಯೂ ಇಲ್ಲದ, ಯಾವ ಮನ್ನಣೆಗಳನ್ನೂ ಅಪೇಕ್ಷೆ ಪಡದ, ಪ್ರಶಸ್ತಿ ಪುರಸ್ಕಾರಗಳಿಂದ ತುಂಬಾ ದೂರವೇ ಉಳಿದ ಒಂದು ಅದ್ಭುತ ರಂಗಚೇತನ ಜಯತೀರ್ಥ ಜೋಶಿಯವರನ್ನು ರಂಗವಲ್ಲಿ ತಂಡ 'ಭೂಮಿಕಾ' ರಂಗಶಿಬಿರದ ಮೂಲಕ ಸ್ಮರಿಸುತ್ತಾ ಯುವ ಪೀಳಿಗೆಗೆ ಪರಿಚಯಿಸುವುದು, ತನ್ನ ವಿನಮ್ರ ಕರ್ತವ್ಯವೆಂದು ಭಾವಿಸುತ್ತದೆ.