ಸ್ವರೂಪ
ಕತಾ ಸರಿತ್ಸಾಗರ
ಡಾ.ಮಿರ್ಜಾ ಬಶೀರ್
ಸ್ವರೂಪ
ಅವನು ಮೊದಲಿನಿಂದಲೂ ಹಾಗೆಯೇ. ಸ್ನೇಹಿತರು ಮತ್ತು ನೆಂಟರಿಷ್ಟರ ಬಳಗದಲ್ಲಿ ಮುಖ್ಯ ವ್ಯಕ್ತಿಯಂತಿದ್ದ. ಯಾರು ಸಿಕ್ಕರೂ ಇವನಿಗಿಂತ ಮೊದಲೇ ಕೈಮುಗಿಯುತ್ತಿದ್ದರು. ಅವನೆದುರು ಸಣ್ಣಪುಟ್ಟ ಮಾತು, ಸಡಿಲವಾದ ಟೀಕೆಗಳು, ಚಾಡಿಛಿದ್ರ, ಬೈಗುಳಗಳೆಲ್ಲ ಇರುತ್ತಿರಲಿಲ್ಲ. ಅವನು ಎದುರಿರುವವರೆಗೂ ಗಂಭೀರವಾಗಿರುತ್ತಿದ್ದರು. ಆಗ ಅವನು ಇನ್ನಷ್ಟು ಮುಖ ಬಿಗಿ ಮಾಡಿಕೊಂಡು ಎಂದೂ ನಕ್ಕಿಲ್ಲವೇನೋ ಎಂಬAತೆಯೂ, ಪ್ರಬುದ್ಧ ಚಿಂತಕನAತೆಯೂ ಪೋಸು ಕೊಡುತ್ತಿದ್ದ. ಎಷ್ಟು ಬೇಕೋ ಅಷ್ಟು ಮಾತು. ಒಂದು ಶಬ್ದ ಹೆಚ್ಚಿಲ್ಲ, ಒಂದು ಶಬ್ದ ಕಡಿಮೆಯಿಲ್ಲ - ಉಪನ್ಯಾಸವಿರಲಿ, ಆಶೀರ್ವಾದವಿರಲಿ, ದೇವರ ಪ್ರಾರ್ಥನೆಯೇ ಆಗಿರಲಿ.
ಅವನು ರಸ್ತೆಯಲ್ಲಿ ನಡೆಯುತ್ತ ಅಥವಾ ಕೆಲವೊಮ್ಮೆ ಸ್ಕೂಟರಿನಲ್ಲಿ ಹೊರಟನೆಂದರೆ, ಆಚೀಚೆ ಹೋಗಿ ಬರುತ್ತಿದ್ದ ಅನೇಕರು ನಮಸ್ಕರಿಸುತ್ತಾ ಸಾಗುತ್ತಿದ್ದರು. ಅನೇಕ ಅಪರಿಚಿತರೂ ಸಹ ಅವನ ಕಡೆ ನೋಡಿ ಉಟ್ಟ ಖಾದಿ ಬಟ್ಟೆಗಳನ್ನು ಗಮನಿಸಿ ‘ಯಾರೋ ಈ ಊರಿನ ಪ್ರಮುಖನೋ, ಸಜ್ಜನನೋ ಇರಬೇಕು’ ಎಂದುಕೊAಡು ನಮಸ್ಕರಿಸುತ್ತಿದ್ದರು. ನಮಸ್ಕರಿಸುವುದು ಸಾಂಕ್ರಾಮಿಕವಾಗಿ ನಮಸ್ಕಾರಗಳ ಸುರಿಮಳೆಯಾಗುತ್ತಿತ್ತು. ಮೈಯೆಲ್ಲಾ ಬಾಗಿಸಿ ಹಿಡಿ ಮಾಡಿಕೊಂಡು ಎರಡೂ ಕೈಗಳನ್ನು ಹಣೆ ಮೇಲಿರಿಸಿ, ಕಣ್ಮುಚ್ಚಿ, ವಿನಯವೇ ಮೈವೆತ್ತಂತಿದ್ದ ಅವನ ಪ್ರತಿ ನಮಸ್ಕಾರದ ರೀತಿಗೆ ಮರುಳಾಗದವರೇ ಇರಲಿಲ್ಲ. ಜನ ಎಂತಹ ಅವಸರದಲ್ಲಿದ್ದರೂ ಕ್ಷಣ ನಿಂತು ಮನಸ್ಸಿನ ಏಕಾಗ್ರತೆಯನ್ನು ಸಾಧಿಸಿ, ವಂದಿಸಿ, ಮುನ್ನಡೆಯುತ್ತಿದ್ದರು. ಅವನಾದರೋ ಯಾವಾಗಲೂ ಸ್ಥಿತಪ್ರಜ್ಞನಂತಿರುತ್ತಿದ್ದ. ಊರಲ್ಲಿ ಅವನಿಗೆ ಆಗದವರೇ ಇಲ್ಲವೇನೋ ಎನ್ನುವಂತಿದ್ದ. ಸರಳಾತಿಸರಳ ಅವನು. ಕಾಲಲ್ಲಿ ಸಾಧಾರಣ ಚಪ್ಪಲಿ, ಖಾದಿಯ ಬಿಳಿ ಪ್ಯಾಂಟು ಶರ್ಟು, ತಲೆಯ ಮೇಲೊಂದು ಹ್ಯಾಟು. ಬಗಲಲ್ಲಿ ಯಾವಾಗಲೂ ಒಂದು ಚೀಲ ನೇತಾಡುತ್ತಿತ್ತು. ಅದರಲ್ಲಿ ಆಧ್ಯಾತ್ಮದ ಒಂದೆರಡು ಪುಸ್ತಕಗಳು ಇರುತ್ತಿದ್ದವು. ಪುಸ್ತಕಗಳೇ ಅವನ ಬಳಿಯಿದ್ದ ಹೆಚ್ಚು ಬೆಲೆಯ ವಸ್ತುಗಳಾಗಿರುತ್ತಿದ್ದವು.
ಎಷ್ಟೋ ವರ್ಷಗಳಿಂದ ಅವನು ಈ ರೀತಿ ಹಲ್ಲು ಕಚ್ಚಿ ವ್ರತದಂತೆ ಬದುಕಿದ್ದ. ಯಾವುದೇ ಆಕರ್ಷಣೆಗೆ ಒಳಗಾಗದಂತಿದ್ದ. ಭ್ರಷ್ಟತನದಿಂದ ದೂರವಿದ್ದ. ಮದುವೆಯಾದ ಮರ‍್ನಾಲ್ಕು ವರ್ಷಗಳಲ್ಲಿ ಅವನ ಹೆಂಡತಿ ಮತ್ತು ಮಗು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದರು. ಅದಾಗಿ ಕೆಲವು ವರ್ಷಗಳ ನಂತರ ಸರ್ಕಾರಿ ಇಂಜಿನಿಯರ್ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಿ ತಾನಾಯಿತು, ತನ್ನ ಮನೆಯಾಯಿತು ಎಂಬAತಿದ್ದ. ಸ್ನೇಹಿತರು, ನೆಂಟರಿಷ್ಟರ ಜೊತೆ ಇದ್ದೂ ಇಲ್ಲದಂತಿದ್ದನು. ಕಡಿಮೆ ಮಾತಿನವನಾದ್ದರಿಂದ ಅವನ ಮಾತಿಗೊಂದು ತೂಕವಿತ್ತು. ಅವನು ತಪ್ಪು ಮಾಡಲಾರ ಮತ್ತು ಮಾತಾಡಲಾರ ಎಂದು ಜನ ಹೇಗೋ ತೀರ್ಮಾನಿಸಿದ್ದರು. ಹೀಗಾಗಿ ಬೇಡವೆಂದರೂ ಸಲಹೆ, ಸೂಚನೆ, ಆಶೀರ್ವಾದ ಬೇಡಿ ಬರುವವರು ಪ್ರಾರಂಭವಾದರು. ಅವನ ದಿನಚರಿ ಮತ್ತು ಓದಿಗೆ ಜನ ಅಡ್ಡಿಯಾಗತೊಡಗಿದರು.
ಮೊದಮೊದಲು ಕಾಲಿಗೆ ಬೀಳಿಸಿಕೊಂಡು ಆಶೀರ್ವಾದ ಮಾಡಲು ಅವನು ನಿರಾಕರಿಸುತ್ತಿದ್ದ. ಆದರೆ ಜನ ಕೇಳಬೇಕಲ್ಲ? ಅವನ ಮನೆಯ ಪ್ರಶಾಂತ, ಸ್ವಚ್ಛ, ಪುಸ್ತಕಗಳಿಂದ ತುಂಬಿದ, ಮರಗಿಡಗಳಿಂದ ಸುತ್ತುವರೆದಿದ್ದ, ತಂಪಾಗಿದ್ದ ಮನೆ ಮತ್ತು ಅವನಿಗೆ ಅಪ್ಪಳಿಸಿದ್ದ ದುರಂತದಿAದ ಶೋಕಮಿಶ್ರಿತವಾಗಿದ್ದ ವಾತಾವರಣದಲ್ಲಿ ಜನರು ಆರ್ದ್ರ ಭಾವನೆಗೊಳಗಾದಂತೆಯೂ, ವಿಚಲಿತರಾದಂತೆಯೂ, ಕರಗಿದಂತೆಯೂ ಆಗಿ ಸಂತನAತಿದ್ದ ಅವನನ್ನು ಒತ್ತಾಯ ಮಾಡುತ್ತಿದ್ದರು. ಕಾಲು ಹಿಡಿದುಕೊಂಡು ಕುಳಿತುಬಿಡುತ್ತಿದ್ದರು. ವಿಧಿಯಿಲ್ಲದೆ ಆಶೀರ್ವಾದ ಮಾಡತೊಡಗಿದ. ಅವನಿಗೆ ಬರಬರುತ್ತ ಅದೇ ದಿನನಿತ್ಯದ ಕರ್ಮವಾಯಿತು. ಮೊದಮೊದಲು ಇದೆಲ್ಲ ಸುಳ್ಳು ಎಂದು ನಗು ಬರುತ್ತಿತ್ತು. ನಂತರ ಯಾಂತ್ರಿಕವಾಯಿತು. ಆದರೆ ವರ್ಷಗಳುರುಳಿದಂತೆ ತಾನು ಬರುಬರುತ್ತ ಪವಿತ್ರನೂ, ದಿವ್ಯ ಪುರುಷನೂ ಆಗುತ್ತಿದ್ದೇನೆಯೇ ಎನಿಸಿತಲ್ಲದೆ ತಾನು ಇನ್ನೂ ಸ್ವಚ್ಛನೂ, ನಿಷ್ಕಲ್ಮಶನೂ ಆಗಬೇಕೆಂಬ ತುಡಿತವೂ ಹೆಚ್ಚುತ್ತ ಆಯಿತು. ತಾನು ನಿಜಕ್ಕೂ ವಿಶೇಷ ವ್ಯಕ್ತಿಯೋ, ದೇವತಾ ಪುರುಷನೋ ಇರಬೇಕೆಂದೆನಿಸತೊಡಗಿತು.
ಅವನ ಮನೆಯಲ್ಲಿ ಯಾವುದೇ ದೇವರ ಫೋಟೋಗಳಿಲ್ಲದ ಕಾರಣ ಅವನಲ್ಲಿಗೆ ಎಲ್ಲ ಧರ್ಮದ, ಜಾತಿಯ ಜನರೂ ಬಂದು ಹೋಗುತ್ತಿದ್ದರು. ಗುರು ಕಾಣಿಕೆ, ಪ್ರಸಾದ ಮುಂತಾಗಿ ಸಹ ಏನೂ ಇರಲಿಲ್ಲ.
ಜಗಳ, ವೈಮನಸ್ಸು, ಮನೆ-ಮದುವೆ ಒಡಕುಗಳಷ್ಟೇ ಅಲ್ಲದೆ, ಮಕ್ಕಳಿಲ್ಲದ ದಂಪತಿಗಳು ಸಹ ಸಂತಾನ ಪ್ರಾಪ್ತಿಗೆ ಹಂಬಲಿಸಿ, ಆಶೀರ್ವಾದಕ್ಕಾಗಿ ಬರುತ್ತಿದ್ದರು. ಇಷ್ಟಾದರೂ ಅವನ ಮನೆಗೆ ಆಶ್ರಮದ ರೂಪವಿರಲಿಲ್ಲ ಮತ್ತು ಅವನೂ ಸಹ ವೇಷಭೂಷಣಗಳಲ್ಲಿ ಸಹ ಬದಲಾವಣೆ ಮಾಡಿಕೊಳ್ಳಲಿಲ್ಲ. ಪ್ಯಾಂಟು, ಶರ್ಟು ಧರಿಸಿ ಎಲ್ಲಿ ಬೇಕಲ್ಲಿ ಒಬ್ಬನೇ ಓಡಾಡಿಕೊಂಡಿದ್ದ ಮತ್ತು ದಿನಕ್ಕೆ ಹತ್ತಾರು ಜನಕ್ಕಿಂತ ಹೆಚ್ಚು ಬರದಂತೆ ನೋಡಿಕೊಂಡಿದ್ದ.
ಒಂದು ದಿನ ಅವನು ಸ್ಕೂಟರಲ್ಲಿ ಬಸ್ ನಿಲ್ದಾಣದಿಂದ ಮನೆಗೆ ಬರುತ್ತಿದ್ದ. ನಗರದ ಮುಖ್ಯ ವೃತ್ತವೊಂದಕ್ಕೆ ಅವನು ಬರುವ ವೇಳೆಗೆ ಕೆಂಪು ದೀಪ ಹೊತ್ತಿ ಕೆಲವು ಸೆಕೆಂಡುಗಳಾಗಿತ್ತು. ನಾಲ್ಕಾರು ವಾಹನಗಳು ಮುಂದೆ ನಿಂತಿದ್ದವು. ಬೆಳಗಿನ ಎಳೆ ಬಿಸಿಲಿತ್ತು. ಕೆಲಸಗಳಿಗೆ ಹೊರಟವರು ಉಲ್ಲಾಸದಿಂದ ಕೂಡಿದ್ದರು. ಹಿಂದಿನ ದಿನವಷ್ಟೆ ಮಳೆ ಸುರಿದದ್ದರಿಂದ ವಾತಾವರಣ ತೊಳೆದಿಟ್ಟಂತಿತ್ತು, ಹೊಸ ಚೈತನ್ಯದಿಂದ ಕೂಡಿತ್ತು. ಎಲ್ಲರೂ ತೆಳ್ಳಗೆ ಬೆವೆಯುತ್ತಿದ್ದರು.
ಹಿಂದೆ ಮುಂದೆ ನಿಂತಿದ್ದ ವಾಹನಗಳ ಗಮನಿಸುತ್ತಿದ್ದವನನ್ನು ಮುಂದಿನ ಸ್ಕೂಟರ್‌ನವರೊಬ್ಬರು ಚಕ್ಕನೆ ಗಮನ ಸೆಳೆದರು. ಆ ಸ್ಕೂಟರ್ ಅವನಿಂದ ಕೇವಲ ಎರಡಡಿಯಷ್ಟು ಮುಂದಿದ್ದು, ಅದರ ಸವಾರಳ ಹಿಂಭಾಗವಷ್ಟೇ ಅವನಿಗೆ ಕಾಣುತ್ತಿತ್ತು. ಅವಳು ಸೀರೆ ಉಟ್ಟಿದ್ದಳು. ಅವಳ ಕತ್ತು, ಬೆನ್ನು, ತೋಳುಗಳಿಂದ ಜೀವ ಉಕ್ಕುತ್ತಿತ್ತು. ಅವನು ಪುಳಕಿತನಾದ. ಅವಳ ಸೊಂಟದ ಭಾಗವು ಒಂದೂ ಮಡಿಕೆಯಿಲ್ಲದೆ ನಯಸ್ಸಾಗಿ, ತೆಳುವಾಗಿ, ಮಾಟವಾಗಿತ್ತು. ಅತಿ ಬಿಳುಪಿನವಳೇನಾಗಿರದೆ ಇಪ್ಪತ್ತರ ಹರೆಯದ ಗೋಧಿ ಬಣ್ಣದವಳಾಗಿದ್ದಳು. ಸೀರೆಯನ್ನು ಲೋಕಾರೂಢಿಗಿಂತ ಕೆಳಗೇ ಉಟ್ಟಿದ್ದಳು. ಅವಳ ಬೆನ್ನು ಮತ್ತು ಸೊಂಟದ ಹಿಂಭಾಗ ಬಹಳ ಕೆಳಗಿನವರೆಗೂ ಕಾಣುತ್ತಿತ್ತು. ಜಾಕೀಟು ಮತ್ತು ಸೀರೆ ಮಧ್ಯದ ಭಾಗವೆಲ್ಲ ಬಿಚ್ಚಿಟ್ಟಂತೆ ಅಮೋಘವಾಗಿತ್ತು. ಎಷ್ಟೋ ವರ್ಷಗಳಿಂದ ಸುಪ್ತವಾಗಿದ್ದ ಅವನ ಗಂಡಸುತನ ಒಮ್ಮೆಲೇ ಎಚ್ಚರವಾಯಿತು. ಯಾರನ್ನೋ ಆಕರ್ಷಿಸುತ್ತಿದ್ದೇನೆಂದು ಅರಿಯದ ಆಕೆ ಆಚೀಚೆ ನೋಡುತ್ತ ತನ್ನ ಲೋಕದಲ್ಲಿ ತಾನಿದ್ದಳು. ಇದರಿಂದ ಆಕೆಯ ಸೌಂದರ್ಯ ಇನ್ನೂ ಹೆಚ್ಚಾದಂತೆನಿಸಿತು. ಎಡ ಬಲ ದಿಕ್ಕಿಗೆ ತಿರುಗುತ್ತಿದ್ದಳೇ ವಿನಃ ಹಿಂದಕ್ಕೆ ತಿರುಗದ ಕಾರಣ ಅವಳ ಮುಖ ಪಾರ್ಶ್ವವಾಗಿ ಕಂಡಿತು. ಆಕೆಯ ಮುಖದಿಂದಲೂ ಸೌಂದರ್ಯ ಸುರಿಯುತ್ತಿತ್ತು. ಮತ್ತೊಮ್ಮೆ ಅವನ ದೃಷ್ಟಿ ಅವಳ ಬೆನ್ನಿನಿಂದ ಕೆಳಗಿಳಿಯಿತು. ಅವಳ ನಿತಂಬಗಳ ಆಕಾರ, ಗಾತ್ರದಿಂದ ಅವನ ಜೀವ ಝಲ್ಲೆಂದಿತು. ಸೀರೆಯನ್ನು ಆಕೆ ಬಿಗಿಯಾಗಿ ಉಟ್ಟಿದ್ದಳು. ಇದರಿಂದಾಗಿ ಅವಳ ದೇಹದ ಏರಿಳಿತಗಳು, ಹಿಂದೆಯೇ ಇದ್ದು ಉದ್ರೇಕಗೊಂಡಿದ್ದ ಅವನ ಉಸಿರುಗಟ್ಟಿಸಿದವು. ನೋಡಿದವರು ಏನೆಂದಾರು ಎಂಬ ವಿವೇಚನೆಯನ್ನು ಕಳೆದುಕೊಂಡವನAತೆ ಆಕೆಯನ್ನು ಕಣ್ಣು ಮಿಟುಕಿಸದಂತೆ ನೋಡತೊಡಗಿದ. ಅವನು ನೋಡು ನೋಡುತ್ತಿದ್ದಂತೆಯೇ ಅವಳ ಬೆನ್ನಿನ ಮೇಲೆ ಮುತ್ತಿನಂಥ ಬೆವರ ಹನಿಯೊಂದು ಚಾಲನೆ ಪಡೆದು ಬೆನ್ನುಹುರಿಯ ಕಾಲುವೆಗುಂಟ ಮೆಲ್ಲಮೆಲ್ಲನೆ ಕೆಳಗಿಳಿದು ನಿತಂಬಗಳ ಕಡೆ ಜಾರಿ ಮರೆಯಾಯಿತು. ‘ಬೆವರು ಹನಿಯ ಭಾಗ್ಯವೇ!’ ಎಂದು ತನಗೆ ತಾನು ಗಟ್ಟಿಯಾಗೇ ಹೇಳಿಕೊಂಡ.
ಅವನಿಗೆ ಅವಸರ ತಡೆಯಲಾಗಲೇ ಇಲ್ಲ. ಅವಳ ಸಂಪೂರ್ಣ ನೋಟವನ್ನು ಕಾಣಬೇಕೆಂತಲೂ, ಅವಳ ಸಂಗವೇ ತನ್ನ ಜೀವನದ ಅಂತಿಮ ಗುರಿಯೆಂತಲೂ ಅನಿಸಿತು. ಅವನಿಗೆ ಇದ್ದಕ್ಕಿದಂತೆಯೇ ಹುಚ್ಚು ಹಿಡಿದಂತಾಯಿತು. ಅವನು ಯಾವುದೋ ಶಕ್ತಿಗೆ ವಶವಾದಂತೆ, ಕಾಮದ ಹೊಡೆತಕ್ಕೆ ಸಿಕ್ಕು ತತ್ತರಿಸಿ ಹೋದ.
ಹಲವಾರು ರಸ್ತೆಗಳು ಕೂಡಿದ್ದ ದೊಡ್ಡ ವೃತ್ತವಾಗಿದ್ದರಿಂದ ಕೂಡಲೇ ಹಸಿರು ದೀಪ ಹೊತ್ತಲಿಲ್ಲ. ಅವನನ್ನು ಅಗೋಚರ ಶಕ್ತಿಯೊಂದು ಹಿಡಿದೆಬ್ಬಿಸಿದಾಗ ಅವನಿಗೆ ಎಚ್ಚರವಿದ್ದಂತಿರಲಿಲ್ಲ. ಕನಸಿನಲ್ಲೆಂಬAತೆ ಸ್ಕೂಟರಿಳಿದು ನಿಧಾನಕ್ಕೆ ಎರಡು ಹೆಜ್ಜೆ ಹಾಕಿದ. ಅವಳು ಸಿಗ್ನಲ್ ಲೈಟ್ ಮೇಲೆ ದೃಷ್ಟಿ ನೆಟ್ಟಿದ್ದಳು. ಯಾರದೋ ನಿರೀಕ್ಷೆಯಲ್ಲಿದ್ದಂತೆ ಎಡಕ್ಕೂ, ಬಲಕ್ಕೂ ಕತ್ತು ತಿರುಗಿಸುತ್ತ, ಚಡಪಡಿಸುತ್ತ, ಎರಡು ಕಾಲನ್ನೂ ನೆಲದ ಮೇಲಿಟ್ಟುಕೊಂಡು ಸ್ಕೂಟರ್ ಹ್ಯಾಂಡಲನ್ನು ಹಿಡಿದು ನಿಂತಿದ್ದಳು. ಅವಳ ತೆಳು ನಡು ಮತ್ತು ಅಗಲವಾಗಿ ಹಿಗ್ಗಲಿಸಿಕೊಂಡಿದ್ದ ಜಘನ ಪ್ರದೇಶವು ಅತ್ತ ತಿರುಗಿದ ನಾಗರಹೆಡೆಯಂತಿತ್ತು. ಮೋಪಾಗಿದ್ದ ನಿತಂಬಗಳು ಇಡೀ ಲೋಕದ ಕುರೂಪಕ್ಕೆ ಸವಾಲೆಸೆಯುವಂತೆ ಸೆಟೆದು ನಿಂತಿದ್ದವು. ಇಡೀ ಜಗತ್ತಿನಲ್ಲಿ ಅವನಿಗೆ ನಿತಂಬಗಳಲ್ಲದೆ ಬೇರೇನೂ ಕಾಣದಂತಾಯಿತು.
ಅವನು ಕಂಪಿಸುತ್ತಿದ್ದ ಕೈಗಳಿಂದ ಆಕೆಯ ತುಂಬು ನಿತಂಬಗಳನ್ನು ಹೌದೋ ಅಲ್ಲವೋ ಎಂಬAತೆ ಹೂದಂಡೆಯ ಮುಟ್ಟಿದಂತೆ ಮುಟ್ಟಿ ಸವರತೊಡಗಿದ. ಅನ್ಯಮನಸ್ಕಳಾದ ಆಕೆ ಒಮ್ಮೆಲೇ ಆಘಾತಗೊಂಡು ಚೀರತೊಡಗಿದಳು. ಮರುಗಳಿಗೆಯೇ ಹಲವಾರು ಜನ ಅವನನ್ನು ಎಳೆದಾಡಿ ಹೊಡೆಯತೊಡಗಿದರು. ಯಾರೋ ಅವನ ಶರ್ಟು ಎಳೆದರು. ಮತ್ತಾರೋ ಪ್ಯಾಂಟು ಎಳೆದೆಸೆದರು. ಅವನ ವಾಚು, ಜೇಬಲ್ಲಿದ್ದ ದುಡ್ಡು ಎಲ್ಲ ನಾಪತ್ತೆಯಾದವು. ಸ್ಕೂಟರನ್ನು ಜಜ್ಜಿ ಹಾಕಿದರು. ಜೋಲಾಡುತ್ತಿದ್ದ ಬಟ್ಟೆಯಲ್ಲಿ ರಸ್ತೆ ಬದಿ ಬಿದ್ದಿದ್ದ ಅವÀನು.
ಹಿಂದೆ ನಿಂತಿದ್ದ ಹಲವಾರು ವಾಹನಗಳ ಶಬ್ದಗಳು ಅವನನ್ನು ಎಚ್ಚರಿಸಿದವು. ಆಗ ಅವನು ಅವಳ ಮೇಲಿಟ್ಟಿದ್ದ ದೃಷ್ಟಿಯನ್ನು ಕದಲಿಸಿ ಎಚ್ಚರಗೊಂಡು ಸ್ಕೂಟರನ್ನು ಮನೆ ಕಡೆ ತಿರುಗಿಸಿದ. ಜಲಜಲನೆ ಬೆವೆತಿದ್ದ. ಸ್ಕೂಟರ್ ಓಡಿಸಲೂ ಶಕ್ತಿ ಸಾಲದಂತಾಗಿತ್ತು. ಅವಳ ದೇಹಸಿರಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬ ಯುವಕ, ಬಹುಶಃ ಅವಳ ಪ್ರಿಯಕರನಿರಬೇಕು, ಅವಳ ಸ್ಕೂಟರನ್ನೇರಿ ಹಿಂದೆ ಕುಳಿತ. ಅವನ ಕೈಯ್ಯಲ್ಲಿದ್ದ ಚೀಲದ ತುಂಬ ತಿಂಡಿ ಪೊಟ್ಟಣಗಳಿದ್ದವು. ಅವರು ಖುಷಿಯಾಗಿ ಸಣ್ಣ ಪ್ರವಾಸ ಹೊರಟಿದ್ದರೋ ಏನೋ!
ಸ್ಕೂಟರ್ ಓಡುತ್ತಾ ಮೈಯ್ಯಲ್ಲೆಲ್ಲಾ ತಣ್ಣನೆ ಗಾಳಿ ಆಡತೊಡಗಿದಂತೆ ಅವನ ವಿವೇಕ ಸಣ್ಣಗೆ ಮರಳತೊಡಗಿತು. ಗೊತ್ತುಗುರಿಯಿಲ್ಲದ ಹೆಣ್ಣಿನಲ್ಲಿ, ನಾಲ್ಕು ಜನರಿಗೆ ಬುದ್ಧಿ ಹೇಳುವ ತಾನು ಕಾಮಾಂಧನಾದ ಗಳಿಗೆಯನ್ನು ನೆನೆದು ಕಸಿವಿಸಿಗೊಂಡ. ಒಬ್ಬರ ಒಪ್ಪಿಗೆಯಿಲ್ಲದೆ ಅವರನ್ನು ಬಯಸುವುದು, ಮೈಮುಟ್ಟುವುದು ವ್ಯಭಿಚಾರಕ್ಕೆ ಸಮ ಎನಿಸಿತು. ೬೦ ರ ವಯೋವೃದ್ಧನಾದ ತಾನು ಇಷ್ಟು ವರ್ಷ ಜನರಿಗಿತ್ತ ಉಪನ್ಯಾಸ, ಆಶೀರ್ವಾದಗಳ ನೆನೆದುಕೊಂಡು ತನ್ನ ಬಗ್ಗೆಯೇ ಅಸಹ್ಯಪಟ್ಟುಕೊಂಡ. ತಾನು ವಿಶೇಷ ಪುರುಷನೆಂದು ಭಾವಿಸಿದ್ದು ಕೇವಲ ಅಹಂಕಾರ ಮಾತ್ರ ಎಂದು ತೋರಿತು. ತಾನು ಕನಿಷ್ಟ ಎಂಬ ಅರಿವು ಅವನ ಕಪಾಳಕ್ಕೆ ಬಿಗಿದಂತಾಯಿತು.
ಮನೆಯಲ್ಲಿ ತಾನು ಕುಳಿತು ಪ್ರವಚನ ನೀಡುತ್ತಿದ್ದ, ಆಶೀರ್ವದಿಸುತ್ತಿದ್ದ ಕುರ್ಚಿಯನ್ನು ಮುರಿದೆಸೆದ. ಜನರಿಗೆ ಹಾಸಿದ್ದ ಜಮಖಾನವನ್ನು ಹರಿದೆಸೆದ. ಯಾರೂ ಬರದಂತೆ ಕಾಂಪೌAಡಿನ ಗೇಟಿಗೆ ಬೀಗ ಜಡಿದ. ಮರದಡಿಯಲ್ಲಿ ತಣ್ಣಗೆ ಕಣ್ಮುಚ್ಚಿ ಕುಳಿತ.
**********