ಅರಮನೆ-ಗುರುಮನೆಗಳ ಗುಂಗಿನಲ್ಲಿ..,

ಅರಮನೆ-ಗುರುಮನೆಗಳ ಗುಂಗಿನಲ್ಲಿ..,

ಅರಮನೆ-ಗುರುಮನೆಗಳ ಗುಂಗಿನಲ್ಲಿ..,

ಒಂದು ಗಳಿಗೆ

 ಕುಚ್ಚಂಗಿ ಪ್ರಸನ್ನ

ಅರಮನೆ-ಗುರುಮನೆಗಳ ಗುಂಗಿನಲ್ಲಿ..,

“ ನಾವು ಕಾಲೇಜಿಗೆ ಹೋಗುವ ಕಾಲದಲ್ಲಿ ‘ರತಿ ವಿಜ್ಞಾನ ದರ‍್ಪಣ’ ಮತ್ತು ‘ಸುರತಿ’ ಎನ್ನುವ ಪಠ್ಯಪುಸ್ತಕಗಳ ನಡುವೆ ಕದ್ದು ಇರಿಸಿಕೊಂಡು ಓದಬೇಕಿದ್ದ ಎರಡು ಮಾಸಪತ್ರಿಕೆಗಳು ಬರುತ್ತಿದ್ದವು, ಅದರಲ್ಲಿ ‘ದೇವಾನುದೇವತೆಗಳ ಶೃಂಗಾರ ಲೀಲೆಗಳು’ ಅಂತ ಒಂದು ಅಂಕಣವನ್ನು ಪ್ರಕಟಿಸುತ್ತಿದ್ದರು, ಅದನ್ನು ಚಿಕ್ಕೇರೂರು ಧೀರೇಂದ್ರಾಚಾರ್ ಎನ್ನುವವರು ಬರೆಯುತ್ತಿದ್ದರು ಅಂತ ನೆನಪು, ಅದೇ ತರ ನಾನು ‘ಅರಮನೆ-ಗುರುಮನೆಗಳ ಶೃಂಗಾರ ಲೀಲೆಗಳು’ ಅಂತ ಬರೆಯೋಕೆ ಶುರು ಮಾಡಿದರೆ ಹೆಂಗಿರುತ್ತೆ, ಜೀವಮಾನ ಪೂರ‍್ತಿ ಬರೆಯೋವಷ್ಟು ದಾಸ್ತಾನು ಸೃಷ್ಟಿ ಆಗ್ತಾನೇ ಇರುತ್ತೆ ಅಲ್ವಾ” ಅಂತ ಬಾಯರ್ಸ್  ಹೋಟೆಲ್‌ನ ಗಸಗಸೆ ಹಣ್ಣಿನ ಮರದ ಕೆಳಗೆ ಕುಳಿತು ಹಿರಿಯರೊಬ್ಬರನ್ನು ಕೇಳಿದೆ.

ವೈನ್ ಶಾಪು, ಪೆಟ್ರೋಲ್ ಬಂಕು ಅಂತೆಲ್ಲ ಮಾಡಿಕೊಂಡು ಅರ್ಥಪೂರ್ಣ ಜೀವನ ನಡೆಸುತ್ತಿರುವ ಈ ಹಿರಿಯರು ಓದುವ ದಿನಗಳಲ್ಲಿ ಎಸ್‌ಎಫ್‌ಐನಂತ ಕಮ್ಯುನಿಸ್ಟ್ ಪಕ್ಷದ ವಿದ್ಯಾರ‍್ಥಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದವರು, ಜೊತೆಗೆ ಪದ್ಯ-ಗದ್ಯಗಳನ್ನೂ ಬರೆಯುತ್ತಿದ್ದವರು, ZEN  ಕುರಿತು ಬರೆದು ಪ್ರಕಟಿಸಿದ ನನ್ನ ‘ ಇದು ZEN ಅಲ್ಲ’ ಪುಸ್ತಕ ಓದಿ ಅದ್ಯಾಕೆ ಅಷ್ಟೊಂದು ಕಷ್ಟ ತಗಂಡ್ರಿ ಅಂತಲೂ ಮರುಕದಿಂದ ಕೇಳಿದವರು.

ತುಮಕೂರು ನಗರದ ಮುಂಜಾನೆಯ ಕಾಫಿ,ಟೀ ಅಡ್ಡೆಗಳ ಪೈಕಿ ಅಶೋಕನಗರದ ನಾಲ್ಕನೇ ಕ್ರಾಸಿನಲ್ಲಿ ಯೂನಿವರ‍್ಸಿಟಿ ಎದುರು ಸ್ಕೈವಾಕ್ ಮಗ್ಗುಲಲ್ಲಿರುವ ಬಾಯರ್ಸ್ ಹೋಟೆಲ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅದೇ ರಸ್ತೆಯಲ್ಲಿ ವಾಸವಿರುವ ಕಾರಣಕ್ಕೆ ಹೋಗುತ್ತ ಬರುತ್ತ ಅಲ್ಲೊಂದು ಬ್ರೇಕ್ ಹಾಕುವ ಅನಿವಾರ‍್ಯತೆಯೂ ನನ್ನದು,

ಬೆಳಗಿನ ಜಾವ ಐದು ಗಂಟೆಯ ಹೊತ್ತಿಗೆಲ್ಲ ಎದ್ದು ಬತ್ತಲೆ ಎದೆಯನ್ನು ನೀವಿಕೊಳ್ಳುತ್ತ ಇರುಳೆಲ್ಲ ಕದ್ದು ಮುಚ್ಚಿ ಬೀಟ್ ಮಾಡಿ ಮುಗಿಸುವ ಪೊಲೀಸರ ತಂಡಕ್ಕೆ, ಇಡೀ ಏರಿಯಾದ ಕಸ ತೆಗೆಯುವ ಪೌರ ಕಾರ‍್ಮಿಕರಿಗೆ ಉದಾರವಾಗಿ ಕಾಫಿ ಕೊಡುವ ಭಟ್ಟರು, ಐದೂವರೆಗೆ ಬಿಳಿ ಚಡ್ಡಿ ಹಾಕಿಕೊಂಡು ಟೌನ್ ಕ್ಲಬ್‌ಗೆ ಆಡಲು ಹೋಗುವ ಹಾದಿಯಲ್ಲಿ ಡಾಕ್ಟರ್ ಗೆಳೆಯರನ್ನು ಕಾಯಲು ಒಳಕ್ಕೆ ಕಾಲಿರಿಸುವ ಗುಬ್ಬಿ ಶಾಸಕ ವಾಸಣ್ಣನವರಿಗೆ ಎರಡು ಪೆಗ್ ಕಾಫಿ ಕೊಟ್ಟರು ಎಂದರೆ ಅವತ್ತಿನ ಬೋಣಿ ಆಯಿತು ಅಂತಲೇ ಅರ‍್ಥ. ಒಂಬತ್ತೂವರೆ ಹತ್ತರ ಹೊತ್ತಿಗೆ ಭಟ್ಟರ ಮಗ ಮುರಳಿ ಹಾಫ್ ಪ್ಯಾಂಟ್ ಹಾಕಿಕೊಂಡು ಕಾಫಿ ಅಳೆಯಲು ಬರುವ ಹೊತ್ತಿಗೆ ಒಂದು ಹಂತ ಮುಗಿದಿರುತ್ತದೆ. ಆನಂತರ ಯೂನಿವರ್ಸಿಟಿ ಕಾಲೇಜುಗಳ ಅಧ್ಯಾಪಕರ ತಂಡಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಂಡಗಳು ಕಾಲೂರತೊಡಗುತ್ತವೆ.

ವೃತ್ತಿವಾರು, ವಯೋ ಸಹಜವಾರು, ಜಾತಿವಾರು, ಒಳಪಂಗಡವಾರು, ಪಕ್ಷವಾರು ಗುಂಪುಗಳು ಇಲ್ಲಿ ಕಲೆಯುತ್ತವೆ, ದಿನವೂ ಸಿಗುತ್ತಿದ್ದ ನೀವು ಮೂರು ದಿನ ಕಾಣಿಸದೇ ಹೋದರೆ ನಿಮ್ಮ ಸಮಾನಮನಸ್ಕರ ವಾಟ್ಸಪ್ ಸಂದೇಶಗಳು, ಫೋನ್ ಕರೆಗಳು ಬರತೊಡಗುತ್ತವೆ.

ಬೆಳಗಿನ ಹೊತ್ತು ಬಾಯರ್ಸ್ ಹೋಟೆಲ್‌ಗೆ ಹೋದರೆ ಹೊತ್ತು ಹೋಗುವುದೇ ಗೊತ್ತಾಗಲ್ಲ, ಹತ್ತು ಗಂಟೆ ನಂತರ ಮನೆಗಳಲ್ಲಿ ಕುಳಿತು ಹೊತ್ತು ಹೋಗದವರೆಲ್ಲರೂ ಇಲ್ಲಿ ಬಂದು ನೆಲೆಗೊಳ್ಳುತ್ತಾರೆ. ಸಂಜೆ ಲೌಕಿಕರ ವ್ಯಾಪಾರ ಸಾಪಾರ ಎಲ್ಲ ಮುಗಿದ ಮೇಲೆ ಇದೇ ಭಟ್ಟರ ಹೋಟೆಲ್ ‘ಬೋದಿಲೇರನ ಸಖ’ನ ಅಡ್ಡೆಯೂ ಆಗಿ ರೂಪುಗೊಂಡುಬಿಡುತ್ತದೆ. ಹೀಗಾಗಿ ಒಂದು ಮಿನಿ ತುಮಕೂರು ಇಲ್ಲಿ ದಿನವೂ ಸಮಾವೇಶಗೊಳ್ಳುತ್ತದೆ ಎಂಬುದು ನನ್ನ ನಾಲ್ಕು ವರ್ಷಗಳ ಗ್ರಹಿಕೆ.

ಇಂತಾ ಭಟ್ಟರ ಕಾಫಿ ಅಡ್ಡೆಯಲ್ಲಿ ಸಮಕಾಲೀನ ಸಂಗತಿಗಳ ಚರ್ಚೆ ನಡೆಯದೇ ಬೇರೆಲ್ಲಿ ನಡೆದಾತು ಹೇಳಿ. ಅಂಥ ಹಲವು ಚರ್ಚೆಗಳ ಪೈಕಿ ಚಿತ್ರದುರ್ಗದ ಮುರುಘಾಮಠ, ಸೋಲೂರಿನ ಕಂಚುಗಲ್ ಬಂಡೇ ಮಠಗಳೂ ಸೇರಿ ಕೊಂಡವು.

ಮಠದ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಪಾದನೆ ಮೇಲೆ ಮುರುಘಾ ಶರಣರು ಜೈಲು ಪಾಲಾಗಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ. ‘ನಿಧಾನವಾಗಿ ಚಲಿಸಿ-ಕಾಮಗಾರಿ ನಡೆಯುತ್ತಿದೆ’ ಎಂದು ರಸ್ತೆಗಳಲ್ಲಿ ಹಾಕುವ ಬೋರ್ಡನ್ನು ನಾನು ‘ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ - ನೀವು ಚಲಿಸಿ’ ಎಂದು ನಾನು ಓದಿಕೊಳ್ಳುತ್ತೇನೆ, ಅದೇ ತರ ಪೊಲೀಸರ ತನಿಖೆಯೂ ನಿಧಾನವಾಗಿ ನಡೆಯುತ್ತಿದೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು, ಪ್ರಮಾಣಿಸಿ ನೋಡಿದ ಮೇಲೆ ಆ ಪ್ರಕರಣವನ್ನು ಮುಚ್ಚಿ ಹಾಕಲು ಹುನ್ನಾರಗಳನ್ನು ನಡೆಸಬೇಕಲ್ಲ, ಹಾಗಾಗಿಯೇ ಚಿತ್ರದುರ್ಗದಲ್ಲಿ ಸ್ವಾಮೀಜಿಯ ಲೈಂಗಿಕ ತೃಷೆಗೆ ಬಲಿಯಾದ ಹೆಣ್ಣುಮಕ್ಕಳ ಅಮ್ಮನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಾರವಾಗಿದೆ, ಇವರಿಗೆ ಬೆಂಬಲವಾಗಿ ನಿಂತಿದ್ದ ಮಠದ ಆಡಳಿತಾಧಿಕಾರಿ ಎಸ್.ಬಸವರಾಜನ್ ಕೂಡಾ ಪೊಲೀಸ್ ವಶದಲ್ಲಿದ್ದಾರೆ ಎಂದು ಆಪಾದಿಸಿ ಮೈಸೂರಿನ ಒಡನಾಡಿ ಕಾರ್ಯಕರ್ತರು ಮೊನ್ನೆ ಅಲ್ಲಿ ಪ್ರತಿಭಟನೆ ಮಾಡಿದರು.

ಗೋಕರ‍್ಣಕ್ಕೆ ಅಮರಿಕೊಂಡಿರುವ ‘ಹೋರಿ’ ಕುಖ್ಯಾತಿಯ ಸ್ವಾಮೀಜಿಯ ವಿರುದ್ಧ ಆ ಮಠದ ಗಾಯಕಿ ಮಾಡಿದ್ದ ಅತ್ಯಾಚಾರ ಆಪಾದನೆ ಹೇಗೆ ಹಳ್ಳ ಹಿಡಿಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅವರ ನಡುವೆ ಸಮ್ಮತಿಯ ಲೈಂಗಿಕ ಸಂಬಂಧವಿತ್ತು ಎಂತಲ್ಲಿಗೆ ಮಂಗಳ ಹಾಡಲಾಯಿತು. ಸರ‍್ವ ಸಂಗ ಪರಿತ್ಯಾಗಿಗಳು ಎಂದ ಮೇಲೆ ಅವರ ಮೇಲಿನ ಗಂಭೀರ ಅಪರಾಧ ಆರೋಪಗಳನ್ನೂ ಪರಿತ್ಯಾಗ ಮಾಡಿದರೆ ತಪ್ಪೇನು ಅಂತ ಕೇಳಬೇಡಿ.

ಕಂಚುಗಲ್ ಬಂಡೆಮಠದ ಪ್ರಕರಣದ ಆಯಾಮವೇ ಬೇರೆ, ಪಾಪ ಇಲ್ಲಿ ಪಾಪದ ಸ್ವಾಮೀಜಿ ಪ್ರಾಣ ತ್ಯಾಗ ಮಾಡಬೇಕಾಗಿ ಬಂತು. ಕಂಚುಗಲ್ ಬಂಡೇಮಠ ರಾಮನಗರ ಜಿಲ್ಲೆ ಮಾಗಡಿ ತಾಲೂಕಿಗೆ ಸೇರಿದರೂ ತುಮಕೂರು ಜಿಲ್ಲಾ ಕೇಂದ್ರಕ್ಕೆ ಬಹಳ ಹತ್ತಿರ. ಕುದೂರು ಪೊಲೀಸ್ ಠಾಣೆಗೆ ಪೂರ‍್ವಕ್ಕೆ 15 ಕಿಮೀ ದೂರದಲ್ಲಿದೆ.  25 ವರ‍್ಷಗಳಿಂದ ಅಲ್ಲಿ ಪೀಠಾಧಿಪತಿಯಾಗಿದ್ದ ಶ್ರೀ ಬಸವಲಿಂಗ ಸ್ವಾಮೀಜಿ ಅಕ್ಟೋಬರ್ 23ರ ಸಂಜೆ 5 ಗಂಟೆಯಿಂದ ಮರುದಿನ ಮುಂಜಾನೆ ಆರು ಗಂಟೆಯೊಳಗೇ ಯಾವಾಗಲೋ ಅವರ ಕೋಣೆಯಲ್ಲಿ ಹಾಸಿಗೆ ಪಕ್ಕದಲ್ಲಿದ್ದ ಕಿಟಕಿಗೆ ಬಟ್ಟೆಯ ಬಳ್ಳಿಯಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದಾರೆಂದು ಆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎ.ಪಿ.ಕುಮಾರ್ ಅಸಹಜ ಸಾವಿನ ಎಫ್‌ಐಆರ್ ದಾಖಲಿಸಿ ಕೊಳ್ಳುತ್ತಾರೆ.

ಸ್ವಾಮೀಜಿ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಈ ಮೂವರಲ್ಲಿ ಎ1 ಆಗಿರುವುದು ಮತ್ತೊಂದು ಮಠದ ಸ್ವಾಮಿ ಮತ್ತು ಈತ ಮೃತ ಸ್ವಾಮೀಜಿಗೆ ಲೈಂಗಿಕ ಸಾಹಸದ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದು ಇದರಿಂದ ಮನನೊಂದು ಆ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡರು ಎಂಬುದೇ ಈ ಪ್ರಕರಣದ ವಿಶೇಷ.

ಹೊನ್ನುಡಿಕೆ ಸಮೀಪದಲ್ಲಿರುವ ಕಣ್ಣೂರು ಮಠ ಎಂದೇ ಹೆಚ್ಚು ಪರಿಚಿತವಾಗಿರುವ ಮಕ್ಕಳ ದೇವರ ಮಠದ ಅಧಿಪತಿ ಈತ. ಹಾಗಾಗಿ ಈತ ಕಣ್ಣೂರು ಸ್ವಾಮೀಜಿ ಎಂದೇ ಎಲ್ಲರಿಗೂ ಪರಿಚಿತ. ಮೃತ್ಯುಂಜಯ ಸ್ವಾಮೀಜಿ ಈತನ ವಿರಕ್ತಾಶ್ರಮದ ಹೆಸರು, ಎಸ್.ರೇಣುಕಾರಾಧ್ಯ ಎಂಬುದು ಈತನ ಹುಟ್ಟು ಹೆಸರು, ಇದೇ ಹೆಸರಿನಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ಪಡೆದು ಸಿದ್ಧಗಂಗಾ ಮಠದ ಶಾಲೆಯಲ್ಲಿ ಶಿಕ್ಷಕನೂ ಆಗಿದ್ದು, ಡಾ.ಶಿವಕುಮಾರ ಸ್ವಾಮೀಜಿಯವರ ಕಡೇ ವರ್ಷಗಳಲ್ಲಿ ಅವರಿಗೆ ಸಹಾಯಕನಾಗಿದ್ದ ಈತ. ಜೊತೆಗೆ ಮೃತ ಬಸವಲಿಂಗ ಸ್ವಾಮೀಜಿಯ ಸಂಬಂಧಿಯೂ ಹೌದು. ಈತನ ಜೊತೆ ಬಂಧನಕ್ಕೊಳಗಾಗಿರುವ ಮತ್ತೊಬ್ಬರು ಸಿದ್ಧಗಂಗಾ ಮಠದ ನಿವೃತ್ತ ಶಿಕ್ಷಕ ನಂತರ ವಕೀಲರೂ ಆಗಿದ್ದ ಮಹದೇವಯ್ಯ(62). ಇವರಿಬ್ಬರ ಜೊತೆಗೆ ಜೈಲು ಸೇರಿರುವ ನೀಲಾಂಬಿಕೆ ಅಲಿಯಾಸ್ ಚಂದು(21) ಇನ್ನೂ ಬಿಇ ಓದುತ್ತಿರುವಾಕೆ.

ಇದನ್ನೆಲ್ಲ ಓದುತ್ತಿದ್ದರೆ ಏನಿದೆಲ್ಲ, ಯಾರಿವರೆಲ್ಲ, ಹೊಟ್ಟೆಪಾಡಿಗೆ ನೂರೆಂಟು ವೃತ್ತಿ ಮಾಡುತ್ತ ಹಗಲಿರುಳೂ ಶ್ರಮಿಸುವ ಜನಸಾಮಾನ್ಯ ಭಕ್ತರು ಭಯ, ಭಕ್ತಿಗಳಿಂದ ಕಾಲು ಮುಟ್ಟಿ ನಮಸ್ಕರಿಸುವ, ವಿರಕ್ತರೂ, ಸರ‍್ವಸಂಗ ಪರಿತ್ಯಾಗಿಗಳೂ, ಸಮಾಜಕ್ಕೆ ಸರಿದಾರಿ ತೋರಬೇಕಾದವರೂ ಹೀಗೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೂ ಆತ್ಮಹತ್ಯೆಗೆ ಪ್ರೇರೇಪಿಸುವ ಹಂತಕ್ಕೆ ತಲುಪುವಷ್ಟು ಅಧೋಗತಿಗೆ ಇಳಿದಿದ್ದಾರೂ ಏತಕ್ಕೆ ಎಂದು ಆತಂಕಕ್ಕೆ ಒಳಗಾಗುವುದು ಖಂಡಿತಾ.

ಹಿಂದೆ ಚಾಣಕ್ಯನ ಕಾಲದಲ್ಲಿ ರಾಜರನ್ನು ಆಕರ್ಷಿಸಿ ಕೊಲ್ಲಲು ವಿಷ ಕನ್ಯೆಯರನ್ನು ತಯಾರು ಮಾಡಲಾಗುತ್ತಿತ್ತು, ಸೇನೆಯ ಗುಟ್ಟುಗಳನ್ನು ಅರಿತುಕೊಳ್ಳಲು ಶತ್ರು ದೇಶಗಳು ಇಂಥ ಮಹಿಳೆಯರನ್ನು ಬಳಸಿಕೊಳ್ಳುತಿತ್ತು ಎಂದು ಕೇಳಿರುತ್ತೀರಿ. ಇಂಥ ವಿಷ ಕನ್ಯೆಯರ ಜಾಲವನ್ನು ಮಾಧ್ಯಮಗಳ ಆಧುನಿಕ ಪರಿಭಾಷೆಯಲ್ಲಿ ‘ ಹನಿ ಟ್ರ್ಯಾಪ್ ‘ ಎಂದು ಬಣ್ಣಿಸಲಾಗುತ್ತಿದೆ.

ನೀಲಾಂಬಿಕೆ ಇಲ್ಲಿ ಮೃತ ಸ್ವಾಮೀಜಿಗೆ ಹನಿ ಟ್ರ್ಯಾಪ್, ಇದು ಇಲ್ಲಿಗೇ ಮುಗಿದಿಲ್ಲ, 400 ವರ್ಷಗಳ ಇತಿಹಾಸವಿರುವ ಕಂಚುಗಲ್ ಬಂಡೇಮಠದಲ್ಲಿ ವಿರಕ್ತಾಶ್ರಮ ಸ್ವೀಕರಿಸಿದ ಬೆಳ್ಳಿ ಹಬ್ಬ ಆಚರಿಸಿಕೊಂಡ ಬಸವ ಲಿಂಗ ಸ್ವಾಮೀಜಿ ಹೀಗೆ ಕಿಟಕಿಗೆ ನೇಣುಹಾಕಿಕೊಂಡು ಸಾಯುತ್ತಾರೆ ಎಂದರೆ ಭಕ್ತಾದಿಗಳಿಗೆ ಅಯ್ಯೋ ಎನಿಸುವುದಿಲ್ಲವೇ.

ಇವರು ಮೊಬೈಲ್ ಪೋನ್‌ನ ವಿಡಿಯೋ ಕಾಲ್‌ನಲ್ಲಿ ಯಾರನ್ನೂ ಬಹು ಮುದ್ದಾಗಿ ಮಾತನಾಡಿಸುತ್ತ ದೃಷ್ಟಿ ತೆಗೆಯುವ ರೀತಿಯಲ್ಲಿ ನೆಟಿಕೆ ಮುರಿಯುವ ಪುಟ್ಟ ದೃಶ್ಯ ಟಿವಿಗಳಲ್ಲಿ ಕಾಣಿಸಿಕೊಂಡಾಗಲೇ ಇದು ಲೈಂಗಿಕ ಸಾಹಸ ಅಂತ ಎಲ್ಲರಿಗೂ ಗೊತ್ತಾಗಿಬಿಟ್ಟಿತು.

ಈ ಪ್ರಕರಣ ಇಲ್ಲಿಗೇ ಮುಗಿದಿಲ್ಲ, ಹಿಂದೊಮ್ಮೆ ಕರ‍್ನಾಟಕ ರಾಜ್ಯ ಸರ‍್ಕಾರಿ ನೌಕರರ ಸಂಘವನ್ನು ಒಡೆದು ಸರ‍್ಕಾರಿ ನೌಕರರ ಒಕ್ಕೂಟ ಕಟ್ಟಿದ್ದ ಸಚ್ಚಿದಾನಂದ ಮೂರ್ತಿ ಎಂಬಾತನ ಕೈವಾಡವೂ ಇದೆ ಎಂಬುದು ಬೆಳಕಿಗೆ ಬಂದಿದೆ. ಇಂಥ ವಿಡಿಯೋಗಳನ್ನು ಎಡಿಟ್ ಮಾಡಿಕೊಟ್ಟ ಆಪಾದನೆ ವಿಡಿಯೋ ಉದ್ಯಮದಲ್ಲಿ ತೊಡಗಿರುವ ತುಮಕೂರು ನಗರದ ಇಬ್ಬರ ಮೇಲೂ ಇದೆ. ಇವರಲ್ಲಿ ಒಬ್ಬಾತ ಈ ಮಠಗಳ ಆಪ್ತನೂ, ಫಲಾನುಭವಿಯೂ ಎಂಬ ಸುದ್ದಿ ಊರೆಲ್ಲ ಹರಡಿದೆ.ಇಂಥ ಐದು ಮಂದಿ ಪೊಲೀಸ್ ವಶದಲ್ಲಿದ್ದು ತನಿಖೆ ಮುಂದುವರೆದಿದೆ ಎನ್ನಲಾಗಿದೆ. ಪೊಲೀಸರು ಆಪಾದನೆ ಖಚಿತಗೊಂಡು, ಕನಿಷ್ಟ ಸಾಕ್ಷ್ಯಗಳು ದೊರಕಿ, ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವ ತನಕ ಎಲ್ಲವೂ ಗಾಸಿಪ್‌ಗಳ ರೂಪದಲ್ಲೇ ‘ ಇಲಿ ಹೋಯಿತು ಎಂದರೆ ಹುಲಿಯೇ ಹೋಯಿತು ‘ ಎಂಬ ಗಾದೆಯಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡತೊಡಗುತ್ತದೆ. ಇದು ನಮ್ಮ ವ್ಯವಸ್ಥೆ.

 ಇವು ಗುರುಮನೆಗಳ ಕತೆಯಾದರೆ, ಅರಮನೆಯೂ ತಾನು ಕಡಿಮೆ ಏನಲ್ಲ ಎಂದು ಕಾಂಪಿಟ್ ಮಾಡತೊಡಗಿದೆ. ನಾನು ಹತ್ತಾರು ವರ್ಷ ಕೆಲಸ ಮಾಡಿದ, ವಿಧಾನ ಸೌಧದಲ್ಲೇ  ಹನಿ ಟ್ರ್ಯಾಪ್ ಎಂದು ಬಣ್ಣಿಸಲಾಗುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಕರ‍್ನಾಟಕ ಸರ‍್ಕಾರ ಸಚಿವಾಲಯಕ್ಕೆ 2009ರಲ್ಲಿ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ  ಪರೀಕ್ಷೆಯಲ್ಲಿ ಆಯ್ಕೆಯಾಗಿ ನೇಮಕಗೊಂಡು, ಸಚಿವಾಲಯ ನೌಕರರ ಸಂಘದ ಚುನಾಯಿತ ಪದಾಧಿಕಾರಿಯೂ ಆಗಿದ್ದ, ಮೂರು ವರ್ಷಗಳ ಹಿಂದೆ ಬೊಮ್ಮಾಯಿಯವರು ಗೃಹ ಮಂತ್ರಿಯಾಗಿದ್ದಾಗ ಆಪ್ತ ಸಹಾಯಕನಾಗಿ ನೇಮಕಗೊಂಡು, ಅವರು ಮುಖ್ಯಮಂತ್ರಿಯಾದ ನಂತರವೂ ಅವರೊಂದಿಗೆ ಮುಂದುವರೆದಿದ್ದ ‘ಸಿ’ ವೃಂದದ ವಿವಾಹಿತ ನೌಕರನಿಗೆ ಅದೇ ಐತಿಹಾಸಿಕ ಭವ್ಯ ವಿಧಾನಸೌಧದಲ್ಲಿರುವ ವಿಧಾನ ಪರಿಷತ್‌ನ ಉದ್ಯೋಗಿ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಒಪ್ಪಿತ ಲೈಂಗಿಕ ಸಂಬಂಧವಿತ್ತೆಂದೂ, ಆಕೆ ಈತನೊಂದಿಗೆ ಕಳೆದ ಶೃಂಗಾರ ಕ್ಷಣಗಳ ಆಡಿಯೋ ವಿಡಿಯೋ ದಾಖಲೆಗಳನ್ನು ಇರಿಸಿಕೊಂಡು ಇತರರ ನೆರವಿನಿಂದ ಬ್ಲಾಕ್ ಮೇಲ್  ಮಾಡತೊಡಗಿದಾಗ ಪ್ರಕರಣ ಬಯಲಿಗೆ ಬಂದಿತೆಂದೂ ಹೇಳಲಾಗಿದೆ. ಮುಖ್ಯಮಂತ್ರಿಯವರ ತನಕ ವಿಷಯ ತಲುಪಿ, ಆತನನ್ನು ರಿಲೀವ್ ಮಾಡಿ ವಾಪಸ್ ಕಳಿಸಲಾಗಿದೆ. ಆಕೆ ಎಂದಿನಂತೆ ಏನೂ ಆಗಿಲ್ಲವೆಂಬಂತೆ ಆರಾಮವಾಗಿ ಇದ್ದಾಳೆ.

ಆಕೆಯ ಹೆಸರಿಗೆ ಈತ ಕನಕಪುರ ರಸ್ತೆಯಲ್ಲಿ 13 ಎಕರೆ ಜಮೀನು ಖರೀದಿಸಿಕೊಟ್ಟಿದ್ದಾನೆ ಎಂದು ವೆಬ್ ಪೋರ್ಟಲ್  ಒಂದು ವರದಿ ಮಾಡಿದೆ. ಇದೇ ಅಂಶಗಳ ಜೊತೆಗೆ ಇನ್ನಷ್ಟು ಆರೋಪಗಳನ್ನು ಸೇರಿಸಿ ಅಮೃತೇಶ್ ಎಂಬ ಹೆಸರಾಂತ ವಕೀಲರು ಗೌರವ ಅಧ್ಯಕ್ಷರಾಗಿರುವ ಸಂಸ್ಥೆಯೊಂದು ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದೆ. ಈ ಪ್ರಕರಣದಲ್ಲಿ ಸರ‍್ಕಾರದ ಪ್ರಭಾವಿಗಳು ಮಧ್ಯಸ್ತಿಕೆ ವಹಿಸಿ ರಾಜಿ ಕಬೂಲಿ ನಡೆಸಿ ಮುಚ್ಚಿ ಹಾಕಿದ್ದಾರೆ, ಆದ್ದರಿಂದ ತನಿಖೆ ಆಗಬೇಕು ಎಂಬುದು ದೂರುದಾರರ ಆಗ್ರಹ. ಎಲ್ಲಿಗೆ ಮುಟ್ಟುತ್ತದೋ ನೋಡಬೇಕು.

ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಸಂಪಾದಕರು ಮಠ ಮತ್ತು ವಿಧಾನ ಸೌಧಗಳನ್ನು ಕುರಿತು ಅರಮನೆ-ಗುರುಮನೆಗಳಲ್ಲಿ ಇಂತದ್ದೆಲ್ಲ ಸಾಮಾನ್ಯ, ನಮಗೇನು ಬೇಕು, ಜಾಹಿರಾತು ಮಾತ್ರ, ಅಂತದ್ದೆನ್ನಲ್ಲ ಕಂಡರೂ ಕಾಣದಂತೆ ಸುಮ್ಮನಿರಬೇಕು ಎಂದು ಹಿತವಚನ ಹೇಳುತ್ತಿದ್ದರು, ಈಗಲೂ ಅವರು ಅದೇ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಮಾಧ್ಯಮಗಳು ಸಮಾಜದ ಕೈಗನ್ನಡಿ ಎಂದು ಪರಿಭಾವಿಸಿದಾಗ ಹಾಗೆ ಕಂಡೂ ಕಾಣದಂತೆ ಸುಮ್ಮನಿರುವುದು ಹೇಗೆ?

ಸಾವಿರಾರು ಜಾತಿ, ಉಪಜಾತಿ, ಒಳಪಂಗಡಗಳ ಕಾರಣಕ್ಕೆ ಮೇಲು ಕೀಳಿನ ಸಾಮಾಜಿಕ ಸನ್ನಿವೇಶದಲ್ಲಿ ಬದುಕುತ್ತಿರುವ ಭಾರತೀಯರಿಗೆ ಅನ್ನ, ಅಕ್ಷರ, ಆಶ್ರಯ ಕೊಟ್ಟು ಬೆಳೆಸಿದ ಅಸಂಖ್ಯ ಮಠಗಳಿವೆ. ಯಡಿಯೂರಿನ ತೋಂಟದ ಸಿದ್ಧಲಿಂಗ ಯತಿಗಳಿಂದ ಹಿಡಿದು, ನಮ್ಮ ನಿಮ್ಮಂತೆ ಕಣ್ಣಿನ ಪಾಪೆಗಳಲ್ಲಿ ಬೆಳಕಿನ ಕಿರಣ ತೂರದ ಗಾನ ಗಂಧರ್ವ ಪುಟ್ಟರಾಜಗವಾಯಿಗಳೂ ಮಠ ಕಟ್ಟಿ ಬೆಳೆಸಿದ್ದಾರೆ. ಈ ಎರಡು ಮೂರು ಪ್ರಕರಣಗಳ ಕಾರಣಕ್ಕೇ ಎಲ್ಲ ಮಠಗಳ ಸ್ವಾಮಿಗಳನ್ನು, ಎಲ್ಲ ಸರ‍್ಕಾರಿ ನೌಕರರನ್ನು, ಎಲ್ಲ ರಾಜಕಾರಣಿಗಳನ್ನು ಸಾರಾಸಗಟಾಗಿ ಹೀಗೇ ಅಂತ ಹೇಳಲು ಬರುವುದಿಲ್ಲ, ಹೇಳಲೂ ಬಾರದು.

ಆದರೆ ಸಾಂಪ್ರದಾಯಿಕ ಹಂತದ ಶಿಕ್ಷಣ ನೀಡುತ್ತ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಮಠಗಳು ನಾಡಿನ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದು ಈ ಅರೆ ಧಾರ್ಮಿಕ ಕೇಂದ್ರಗಳು ಶಕ್ತಿ ಕೇಂದ್ರಗಳಾಗುವ ಮಟ್ಟಿಗೆ ಬೆಳೆಯಲು ನಾಂದಿ ಹಾಡಿತು ಎನ್ನಬಹುದು.

1962ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಮೈಸೂರು ರಾಜ್ಯದ ಮೊಟ್ಟ ಮೊದಲ ಚುನಾಯಿತ ಮುಖ್ಯಮಂತ್ರಿ, ಗಾಂಧಿವಾದಿ ಎಸ್.ನಿಜಲಿಂಗಪ್ಪ ಅವರ ಎದುರು ಪ್ರಜಾ ಸೋಷಲಿಸ್ಟ್ ಪಕ್ಷದ ಜಿ.ಟಿ.ರಂಗಪ್ಪ ಎಂಬ ರಾಜಕೀಯ ಅನಾಮಿಕ 5 ಸಾವಿರಕ್ಕೂ ಹೆಚ್ಚು ಲೀಡಿಂಗ್‌ನಿಂದ ಗೆಲ್ಲುತ್ತಾರೆ, ಅದೂ ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ 138 ಶಾಸಕರು ಗೆದ್ದ ಸನ್ನಿವೇಶದಲ್ಲಿ. ಈ ಫಲಿತಾಂಶಕ್ಕೆ ಕಾರಣ ಕುರುಬ ಸಮುದಾಯಕ್ಕೆ ಸೇರಿದ ರಂಗಪ್ಪನವರಿಗೆ ಸಿರಿಗೆರೆ ತರಳಬಾಳು ಮಠದ ಅಂದಿನ ಶ್ರೀ ಶಿವಕುಮಾರ ಶಿವಾಚಾರ‍್ಯ ಮಹಾಸ್ವಾಮೀಜಿ ನೀಡಿದ ಬೇಷರತ್ ಬೆಂಬಲ, ಮತ್ತು ನಿಜ ಕಾರಣ ನಿಜಲಿಂಗಪ್ಪನವರು ಲಿಂಗಾಯಿತರೇ ಆಗಿದ್ದರೂ ಅವರು ಬಣಜಿಗ ಉಪ ಪಂಗಡಕ್ಕೆ ಸೇರಿದ್ದುದು ಮತ್ತು ಸಿರಿಗೆರೆ ಮಠ ಸಾದರು ಉಪ ಪಂಗಡದ್ದು ಎಂದೆನಿಸಿಕೊಂಡದ್ದು, ಅದಾದ 2-3 ತಿಂಗಳಲ್ಲಿ ನಿಜಲಿಂಗಪ್ಪನವರು ಚಿತ್ರದುರ್ಗ ಜಿಲ್ಲೆಯ ಹೊರಗೆ ಉಪ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಅವಿರೋಧ ಆಯ್ಕೆಯಾಗುತ್ತಾರೆ ಎನ್ನುವುದು ವಾಸ್ತವ ಸಂಗತಿ.

ನೂರಾರು ಜಾತಿಗಳ ಜನರನ್ನು ಶರಣ ಲಿಂಗವಂತರನ್ನಾಗಿ ಮಾಡಿದ ಬಸವಣ್ಣ ಪೂರ್ಣಾಯಸ್ಸು ಬದುಕಿ ಬಾಳಿದ್ದರೆ ಈ ಉಪಪಂಗಡಗಳು ಇಲ್ಲವಾಗುತ್ತಿದ್ದವೇನೋ ಗೊತ್ತಿಲ್ಲ ಆ ಕೂಡಲ ಸಂಗಯ್ಯನನ್ನೇ ಕೇಳಬೇಕು.

ಎಲ್ಲಿಂದ ಎಲ್ಲಿಗೋ ಹೋಗಿ ಬಿಟ್ಟೆ ಅಂತ ಬೈಯ್ಯಬೇಡಿ, ಅರಮನೆ -ಗುರುಮನೆಗಳ ವಿಚಾರವೇ ಹೀಗೆ, ಮತ್ತೆ ಮತ್ತೆ ಅಲ್ಲಮನ ಈ ವಚನ ನೆನಪಾಗಿ ವಿಷಾದ ಆವರಿಸುತ್ತದೆ,

ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,

ಹೊನ್ನು, ಹೆಣ್ಣು ,ಮಣ್ಣಿಂಗೆ ಸತ್ತುದು ಕೋಟಿ,

ಗುಹೇಶ್ವರಾ, ನಿಮಗಾಗಿ ಸತ್ತವರನಾರನೂ ಕಾಣೆ.