ಮತ್ತೊಮ್ಮೆ ಮಹಿಳೆ ಕಸಾಪ ಅಧ್ಯಕ್ಷರಾಗಲಿ ಜಿಲ್ಲಾ ಲೇಖಕಿಯರ ಸಂಘದ ಪ್ರತಿಪಾದನೆ
lekhakiyara sangha
ಮತ್ತೊಮ್ಮೆ ಮಹಿಳೆ ಕಸಾಪ ಅಧ್ಯಕ್ಷರಾಗಲಿ
ಜಿಲ್ಲಾ ಲೇಖಕಿಯರ ಸಂಘದ ಪ್ರತಿಪಾದನೆ
ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲಿ ಈವರೆಗೆ ಇಬ್ಬರು ಮಹಿಳೆಯರಿಗಷ್ಟೇ ಅಧ್ಯಕ್ಷರಾಗುವ ಅವಕಾಶ ಲಭಿಸಿದೆ. ಆದ್ದರಿಂದ ಈ ಬಾರಿ ಮತ್ತೊಮ್ಮೆ ಜಿಲ್ಲಾ ಕ.ಸಾ.ಪ.ಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಜಿ. ಮಲ್ಲಿಕಾ ಬಸವರಾಜು ಪ್ರತಿಪಾದಿಸಿದರು.
ತುಮಕೂರು ನಗರದ ಜಿಲ್ಲಾ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಾರಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಲೇಖಕಿ ಬಿ.ಸಿ. ಶೈಲಾನಾಗರಾಜ್ ಅವರನ್ನು ಬೆಂಬಲಿಸಿ ಮಾತನಾಡುತ್ತಿದ್ದರು.
ಒಟ್ಟು 12 ಜನರು ಈವರೆಗೆ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಇಬ್ಬರು ಮಹಿಳೆಯರಿಗಷ್ಟೇ ಅಧ್ಯಕ್ಷರಾಗುವ ಅವಕಾಶ ಲಭಿಸಿದೆ. ಹಿಂದೊಮ್ಮೆ ದಿ. ಶಾಂತಾ ಸನ್ಮತಿಕುಮಾರ್ ಅಧ್ಯಕ್ಷರಾಗಿದ್ದರು. ಪ್ರಸ್ತುತ ಬಾ.ಹ. ರಮಾಕುಮಾರಿ ಅಧ್ಯಕ್ಷರಾಗಿದ್ದಾರೆ. ಆದಕಾರಣ ಈ ಬಾರಿ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಮಹಿಳೆಯೊಬ್ಬರು ಅಧ್ಯಕ್ಷರಾಗಲಿ ಎಂದು ಒತ್ತಿ ಹೇಳಿದರು.
ಬಿ.ಸಿ. ಶೈಲಾ ನಾಗರಾಜ್ ಹಲವು ಕೃತಿಗಳನ್ನು ರಚಿಸಿ ಸಾಹಿತಿಯಾಗಿ ಹೆಸರು ಮಾಡಿದ್ದಾರೆ. ಕಸಾಪ ತಾಲ್ಲೂಕು ಅಧ್ಯಕ್ಷರಾಗಿ ಗಮನಾರ್ಹ ಸೇವೆ ಸಲ್ಲಿಸಿ ಒಳ್ಳೆಯ ಸಂಘಟಕಿ ಎನಿಸಿದ್ದಾರೆ. ಶೈನಾ ಬಳಗದ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆಂದು ಪಟ್ಟಿ ಮಾಡಿದ ಅವರು, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸ್ಥಾನಕ್ಕೆ ಇವರು ಸೂಕ್ತ ಅಭ್ಯರ್ಥಿಯಾಗಿದ್ದು ಲೇಖಕಿಯರ ಸಂಘ ಇವರನ್ನು ಬೆಂಬಲಿಸುತ್ತಿದೆ. ಎಲ್ಲ ಮತದಾರರು ಸಹ ಬೆಂಬಲಿಸಬೇಕೆAದು ಮನವಿ ಮಾಡಿಕೊಂಡರು.
ಜಿಲ್ಲಾ ಲೇಖಕಿಯರ ಸಂಘ ಅಪ್ಪಟ ಸಾಹಿತ್ಯಕ ಸಂಘಟನೆ. ಸಾಹಿತ್ಯದಲ್ಲಿ ಕೃಷಿ ಮಾಡಿರುವವರಷ್ಟೇ ಇಲ್ಲಿ ಸದಸ್ಯರಾಗಲು ಅವಕಾಶವಿದೆ. ಹೀಗಾಗಿ ಇಲ್ಲಿ ಈಗ 82 ಜನ ಸದಸ್ಯರಿದ್ದಾರೆ. ಸಂಖ್ಯೆಗಿAತ ಸಂಘದ ಪ್ರಭಾವ ದೊಡ್ಡದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಲ್ಲಿಕಾ ಬಸವರಾಜು, ಕ.ಸಾ.ಪ. ಇದಕ್ಕಿಂತ ಭಿನ್ನವಾದ ವಿಶಾಲ ವೇದಿಕೆ. ಕನ್ನಡಾಭಿಮಾನಿಗಳೆಲ್ಲರೂ ಅಲ್ಲಿ ಸದಸ್ಯರಾಗಿರುತ್ತಾರೆ. ಲೇಖಕಿಯರ ಸಂಘದಲ್ಲಿದ್ದ ಶಾಂತಾ ಸನ್ಮತಿಕುಮಾರ್ ಮತ್ತು ಬಾ.ಹ. ರಮಾಕುಮಾರಿ ಕ.ಸಾ.ಪ. ಅಧ್ಯಕ್ಷರಾಗಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಆ ಪರಂಪರೆ ಮುಂದುವರೆಯಲು ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರೂ ಆದ ಶೈಲಾ ನಾಗರಾಜ್ ಈ ಬಾರಿ ಅಧ್ಯಕ್ಷರಾಗಬೇಕು ಎಂದು ಆಶಿಸಿದರು. ಲೇಖಕಿಯರ ಸಂಘ ಜಂಪಿAಗ್ ಪ್ಯಾಡ್ ಏನೂ ಅಲ್ಲ ಎಂದೂ ಸ್ಪಷ್ಟವಾಗಿ ಹೇಳಿದರು.
ಜಾತಿ-ಹಣದ ಪ್ರಭಾವ ದುರಂತ:
ಬೇರೆ ಚುನಾವಣೆಗಳಂತೆ ಕ.ಸಾ.ಪ. ಚುನಾವಣೆಯಲ್ಲೂ ಜಾತಿ ಮತ್ತು ಹಣ ನಿರ್ಣಾಯಕ ಅಂಶಗಳಾಗುವುದಾದರೆ ಅದರಂತಹ ದುರಂತ ಬೇರೊಂದಿಲ್ಲ ಎಂದು ಮಲ್ಲಿಕಾ ಬಸವರಾಜು ಕಳವಳ ವ್ಯಕ್ತಪಡಿಸಿದರು.
ಶೇ.30 ರಷ್ಟು ಮಹಿಳಾ ಸದಸ್ಯರು:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಪ್ರಸ್ತುತ ಜಿಲ್ಲೆಯಲ್ಲಿ 13 ಸಾವಿರಕ್ಕೂ ಅಧಿಕ ಕ.ಸಾ.ಪ. ಸದಸ್ಯರುಗಳಿದ್ದಾರೆ. ಇವರಲ್ಲಿ ಶೇ. 30 ರಷ್ಟು ಮಹಿಳಾ ಸದಸ್ಯರುಗಳಿದ್ದಾರೆ ಎಂದರು. ತಮ್ಮ ಅವಧಿಯಲ್ಲಿ ಕ.ಸಾ.ಪ. ಕಟ್ಟಡ ನಿರ್ಮಾಣಕ್ಕೆ ಗಮನ ನೀಡಿದ್ದು, ನಂತರದಲ್ಲಿ ಎದುರಾದ ಕೋವಿಡ್‌ನಿಂದಾಗಿ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೇಖಕಿಯರ ಸಂಘದ ಉಪಾಧ್ಯಕ್ಷೆ ಸಿ.ಎ. ಇಂದಿರಾ, ಕಾರ್ಯದರ್ಶಿ ಡಾ. ಅರುಂಧತಿ, ಖಜಾಂಚಿ ಸುನಂದಮ್ಮ, ಪ್ರಮುಖರಾದ ಸುಗುಣಾದೇವಿ, ಮಮ್ತಾಜ್ ಉಪಸ್ಥಿತರಿದ್ದರು.