ನಮ್ಮ ಪರಿಸರ ಸೋಮಶೇಖರ ಬಿ ಎಸ್

ನಮ್ಮ ಪರಿಸರ  ಸೋಮಶೇಖರ ಬಿ ಎಸ್

 

ನಮ್ಮ ಪರಿಸರ

ಸೋಮಶೇಖರ ಬಿ ಎಸ್


     ಮನುಷ್ಯನಿಗೆ ತಾನು ಈ ಪರಿಸರದ ಕೂಸು ಎಂಬ ಅರಿವಿದ್ದರೂತಕ್ಷಣದ ಲಾಭಕ್ಕಾಗಿಎಲ್ಲವನ್ನೂ ನಾಶ ಮಾಡುತ್ತಕೃತಕ ಪರಿಸರವನ್ನು ಸೃಷ್ಟಿಸಿಕೊಳ್ಳುತ್ತಲೇ ಇದ್ದಾನೆ.ಮರವನ್ನುಕಡಿದುತಗಡಿನಅಥವಾ ಫೈಬರ್‌ನಛಾವಣಿ ನರ‍್ಮಿಸಿಕೊಳ್ಳುವುದು, ನಿಸರ್ಗದತ್ತ ಶುದ್ಧ ನೀರನ್ನು ಕಲುಷಿತಗೊಳಿಸಿ, ನಂತರಕುಡಿಯುವ ನೀರಿಗಾಗಿ ಬಾಟಲಿ ನೀರನ್ನು ಅವಲಂಬಿಸುವುದು ಹೀಗಾಗಿ ನಮ್ಮ ಬಾಲ್ಯದಲ್ಲಿಕಂಡ ಎಷ್ಟೋ ಸಂಗತಿಗಳು ಇವತ್ತಿನ ಪರಿಸರದಲ್ಲಿ ನಾಪತ್ತೆಯಾಗಿವೆ. ನಮ್ಮ ನಡುವಣ ಪರಿಸರವಿಜ್ಞಾನಿ, ವಿಜ್ಞಾನ ಲೇಖಕ ಸೋಮಶೇಖರ ಬಿ.ಎಸ್‌ಅವರ ಬರಹ ನಿಮಗೆ ನಮ್ಮ ನೈಜ ಪರಿಸರದ ಪರಿಚಯ ಮಾಡಿಕೊಡುತ್ತದೆ,  ಓದಿ -ಸಂಪಾದಕ

ಬಿಕ್ಕೆ: ಮರೆತೇ ಹೋದ ಗುಡ್ಡಗಾಡಿನ ಕಾಡುಹಣ್ಣು

ಅಂದೊಮ್ಮೆ- ಕೆಲವು ರ‍್ಷಗಳ ಹಿಂದೆ: "ಈ ಎಳೆಕುಡಿ ನೋಡಿ ಸಾರ್.... ಇದರ ಮೇಲೆ ಹಳದಿ ಮೇಣ ಅಂಟಿಕೊಂಡಿದೆಯಲ್ಲ ಸಾರ್.... ಇದನ್ನು ಚಿವುಟಿಕೊಂಡು, ಬೆರಳಲ್ಲಿ ಮಿದ್ದುಕೊಂಡರೆ ಸಣ್ಣ ಕಡಲೆಕಾಳು ಗಾತ್ರದಷ್ಟು ಉಂಡೆ ಸಿಗುತ್ತೆ ಸಾರ್‌, ಇದನ್ನು ನಶ್ಯದ ಡಬ್ಬಿಯಲ್ಲಿ ಹಾಕಿಟ್ಟುಕೊಂಡರ‍್ತೀವಿ ಸಾರ್... ಆಗಾಗ ತಲೆನೋವು ಬರುತ್ತಲ್ಲ ಸಾರ್‌, ಆಗ ಇಂಥ ಒಂದು ಸಣ್ಣ ಉಂಡೆಯನ್ನ ಹಣೆಯ ಮೇಲೆ ಸವರಿಕೊಳ್ತಾ ನೀವಿಕೊಂಡರೆ, ತಲೆನೋವು ಮಾಯ ಸಾರ್‌... ಯಾವ ಮುಲಾಮು ಕೂಡ ಬೇಕಿಲ್ಲ ಸಾರ್‌, ಬೇಕಿದ್ರೆ ಒಂದು ಚಿಟಿಕೆ ರ‍್ಪೂರ ಸೇರಿಸಿಕೋಬಹುದು ಸಾರ್. ನಮ್ಮ ಹಳ್ಳಿಗಾಡಿನ ದನ ಮೇಯಿಸೋ ರೈತರ ಹತ್ತಿರ ಸದಾಕಾಲ ಈ ಔಷಧಿ ಇರುತ್ತೆ ಸಾರ್‌..."- ಎಂದು ಒಂದೇ ಉಸಿರಿಗೆ‌ ಆ ಕಾಡುಗಿಡದ ಎಳೆಕೊಂಬೆಯ ಚಿಗುರು ಕುಡಿಯನ್ನು ತೋರಿಸುತ್ತಾ ಅದರ ಗುಣಗಾನ ಮಾಡಿದ್ದರು ಆ ನಾಟಿವೈದ್ಯರು. ಅದು, ತುಮಕೂರು ಜಿಲ್ಲೆಯ ಸಿದ್ಧರಬೆಟ್ಟದ ಗುಡ್ಡಗಾಡಿನ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಸಸ್ಯ ಸಮೀಕ್ಷೆಯಲ್ಲಿ ತೊಡಗಿದ್ದ ಸಂದರ‍್ಭ.
ಮತ್ತೊಮ್ಮೆ- ಎರಡು ವರ‍್ಷಗಳ ಹಿಂದೆ: ಅಂಥದ್ದೇ ಸಂದರ‍್ಭ.. "ಓಹ್ಹೋ! ಇದು ನಮ್ಮ ಡಿಕಾಮಲಿ ಸಾರ್... ಅದ್ಭುತವಾದ ಔಷಧ. ಇಂಥ ಅಪರೂಪದ ಔಷಧ ಮತ್ತೊಂದಿಲ್ಲ. ನಮ್ಮ ತಾತನವರ ಕಾಲದಿಂದಲೂ ನಾವು ಇದರ ವ್ಯಾಪಾರ ಮಾಡ್ತಿದ್ದೇವೆ. ನಮ್ಮ ಅಚ್ಚುಮೆಚ್ಚಿನ ಕಚ್ಚಾ ಔಷಧ ಸಾಮಗ್ರಿ ಇದು. ನಮ್ಮ ದೇಶದ ಔಷಧ ತಯಾರಿಕಾ ಕಂಪನಿಗಳ ಮಟ್ಟಿಗೆ ಇದು ಒಂದರ‍್ಥದಲ್ಲಿ ಚಿನ್ನದ ಮೊಟ್ಟೆ ಇಡೋ ಕೋಳಿ ಇದ್ದ ಹಾಗೆ..." ಎಂದು ಅವರು ಸಂತೋಷದಿಂದ ಉದ್ಗರಿಸಿದ್ದರು. ನನ್ನ ಜೊತೆ ಇದ್ದವರು ಆ ನಾಟಿ ವೈದ್ಯರಲ್ಲ, ಬದಲಿಗೆ ಅರಣ್ಯದ ಕಚ್ಚಾ ಔಷಧ ಸಾಮಗ್ರಿಯನ್ನು ವಾಣಿಜ್ಯ ಉದ್ದಿಮೆಗಳಿಗೆ ಸರಬರಾಜು ಮಾಡುವ, ಲಕ್ಷ ಕೋಟಿಗಳಷ್ಟು ಮೌಲ್ಯದ ವಹಿವಾಟು ನಡೆಸುವ ದೇಶದ ಒಬ್ಬ ಹೆಸರಾಂತ ರಫ್ತು ವ್ಯಾಪಾರಿ.


ಇನ್ನೂ ಒಮ್ಮೆ- ಬಲು ಹಿಂದೆ, ಬಾಲ್ಯಕಾಲದ ಶಾಲಾದಿನಗಳಲ್ಲಿ:"... ನಿನ್ನೆ ನಮ್ಮಾವ ದೇವರಾಯನ ದರ‍್ಗದ ಬೆಟ್ಟಕ್ಕೆ ಹೋಗಿದ್ರಂತೆ... ಅಲ್ಲಿಂದ ಈ ಹಣ್ಣು ತಂದಿದ್ರು.... ತಗೋ ನಿಂಗೊಂದು ನಂಗೊಂದು, ಎಷ್ಟು ರುಚಿಯಾಗಿದೆ ಗೊತ್ತಾ...." ಎನ್ನುತ್ತಾ ತನ್ನ ಖಾಕಿ ಚಡ್ಡಿ ಜೇಬಿನಿಂದ ಸಣ್ಣ ಸೀಬೆಕಾಯಿ ಗಾತ್ರದ ಹಣ್ಣುಗಳನ್ನು ತೆಗೆದು ನನಗೆರಡು ಕೊಟ್ಟಿದ್ದ ನನ್ನ ಸಹಪಾಠಿ ಗೆಳೆಯ. 


ಮೇಲಿನ ಈ ಮೂರು ನೆನಪುಗಳ ಮರುಕಳಿಕೆಯ ಜೊತೆಗಿನ ಸಂರ‍್ಭಗಳು ವಿಭಿನ್ನವಾದವು, ಸ್ಥಳವೂ ಬೇರೆ, ಕಾಲಘಟ್ಟವೂ ಬೇರೆಬೇರೆ. ಆದರೆ ಇವುಗಳ ಜೊತೆಗಿನ ವಿಚಾರ ಮಾತ್ರ ಒಂದೇ ಗಿಡವನ್ನು ಕುರಿತದ್ದು: ಹಣ್ಣಿನ ಮೂಲಕ ಗುರುತಿಸುವುದಾದರೆ, ಇದು ಹಣ್ಣಿನ ಗಿಡ; ಅಥವಾ ವಿಶಿಷ್ಟ ಸಸ್ಯಸಾಮಗ್ರಿಯ ಮೂಲಕ ಗುರುತಿಸುವುದಾದರೆ ಇದು ವನಸ್ಪತಿ ಸಸ್ಯ; ಅಥವಾ ಕಚ್ಚಾ ಔಷಧ ಸಾಮಗ್ರಿಯ ಮೂಲಕ ಗುರುತಿಸುವುದಾದರೆ ಇದು ಉತ್ಕೃಷ್ಟ ಗುಣಗಳುಳ್ಳ ಔಷಧಿಸಸ್ಯ. 


ಹೀಗೆ ಕಾಡುಹಣ್ಣು ಮತ್ತು ಔಷಧ ಸಾಮಗ್ರಿಯ ಸಂಚಯದ ಹಾಗೆ ಕಾಣುವ ಇದು ನಮ್ಮ ಬಿಕ್ಕೆ ಹಣ್ಣು. 


ನಮ್ಮ ಹಿಂದಿನ ಪೀಳಿಗೆಯ ಬಹುಪಾಲು ಜನರ ಬಾಲ್ಯಕಾಲದ ರಜಾದಿನದೊಂದಿಗೆ, ಗುಡ್ಡಗಾಡಿನ ಅಲೆತದೊಂದಿಗೆ, ಗೆಳೆಯರ ಜೊತೆ ಕಳೆದ ಸವಿಗಾಲದ ಮಧುರನೆನಪುಗಳೊಂದಿಗೆ ಬೆಸೆದುಕೊಂಡ ವಿಶಿಷ್ಟವಾದ ಹಣ್ಣು ಇದು. 


ಹಾಗೆ ನೋಡಿದರೆ ಬಿಕ್ಕೆ ನಮಗೆ ಮೊದಲಿನಿಂದಲೂ ಪರಿಚಿತವಾದ ಹಣ್ಣು. ದನಗಾಹಿಗಳ ಬಗಲುಚೀಲದಲ್ಲಿ ಸದಾಕಾಲವೂ ಇರುತ್ತಿದ್ದ ಹಣ್ಣು. ಮಾರುಕಟ್ಟೆಯಲ್ಲಿ ಇಂದು ವ್ಯಾಪಕವಾಗಿ ಮಾರಾಟವಾಗುವ ಹಣ್ಣುಗಳಿಗೂ ಮೊದಲು, ನಮ್ಮ ಊರಾಚೆಗಿನ ವನ್ಯ ಮತ್ತು ಅರೆವನ್ಯ ನೆಲೆಗಳಲ್ಲಿ ಸುಲಭವಾಗಿ ಕಾಣಸಿಗುತ್ತಿದ್ದ ಗಿಡ. ಪರಿಚಿತ ಹೆಸರಿದ್ದರೂ ಕೂಡ, ಇಂದಿನ ಪೀಳಿಗೆಯ ಪಾಲಿಗೆ ಬಹುಮಟ್ಟಿಗೆ ಮರೆತುಹೋಗಿ ಅಪರಿಚಿತವಾದ ಒಂದು ಅಪರೂಪದ ಕಾಡುಸಸ್ಯ. ಕಾಡು ಹಣ್ಣುಗಳ ವಿಚಾರ ಬಂದಾಗ ಅನ್ರ‍್ಥ ರೂಪದ ಹಾಗೆ ಥಟ್ಟನೆ ಹೊಳೆಯುವ ಎರಡು ಹೆಸರುಗಳು: ಬಿಕ್ಕೆಹಣ್ಣು ಮತ್ತು ಕಾರೆಹಣ್ಣು. ಹಾಗಿದ್ದರೂ ಆಡುಮಾತಿನಲ್ಲೂ, ಭಾಷೆಯ ಬಳಕೆಯಲ್ಲೂ ಬಹುಮಟ್ಟಿಗೆ ಒಂದು ರೂಪಕವಾಗಿ ಉಳಿದಿದೆ ಎಂಬುದು ಮಾತ್ರ ಇಲ್ಲಿನ ವಿಪರ‍್ಯಾಸ. 


ಬಿಕ್ಕೆಗೆ ಅಪರೂಪದ ಗುಣ ಲಕ್ಷಣಗಳು. ಮೊದಲಿಗೆ ಇದರ ನೈರ‍್ಗಿಕ ವ್ಯಾಪನೆಯನ್ನು ನೋಡೋಣ. ದಕ್ಷಿಣ ಭಾರತ ಪ್ರಸ್ಥ ಭೂಮಿಗೆ ಸೀಮಿತಗೊಂಡ ಅಂತಃಸ್ಸೀಮಿತ ಪ್ರಭೇದವಿದು. ಇಲ್ಲಿನ ಒಣಉದುರೆಲೆ ಮತ್ತು ಹಸಿ ಉದುರೆಲೆ ಕಾಡುಗಳು, ಹಾಗೂ ಕುರುಚಲು ಕಂಟಿಗಳುಳ್ಳ ಗುಡ್ಡಗಾಡುಗಳನ್ನು ಬಿಕ್ಕೆಯ ತವರು ಎನ್ನಬಹುದು. ಇಂಥ ಗುಡ್ಡಗಳ ತಪ್ಪಲು, ನೊರಜುಗಲ್ಲು ಪ್ರದೇಶ, ಜಂಬಿಟ್ಟಿಗೆಯ ಬಯಲು, ಅಥವಾ ತೆರೆದ ಕುರುಚಲು ಪ್ರದೇಶದಲ್ಲಿ ಬಿಕ್ಕೆಯ ನೈರ‍್ಗಿಕ ಸಂದಣಿ ಕಾಣುತ್ತದೆ. ಸಣ್ಣ ಬಂಡೆಗಲ್ಲುಗಳ ಸಂದುಗಳ ನಡುವೆ, ಕಲ್ಲುಗುಡ್ಡೆಗಳಲ್ಲಿ ಬಿಕ್ಕೆ ಕಂಡುಬರುತ್ತವೆ. ಕೆಲವೆಡೆ ಒತ್ತಾಗಿ ಬೆಳೆದ ಮೆಳೆಯ ರೂಪದಲ್ಲಿ, ಇನ್ನು ಕೆಲೆವೆಡೆ ಒಂಟಿ ಮರಗಳಾಗ ಕಂಡುಬರುತ್ತದೆ. ಹೇಗೇ ಬೆಳೆದರೂ ಎರಡಾಳೆತ್ತರಕ್ಕೆ ಬೆಳೆಯುವ ಮರಪೊದೆ ಅಥವಾ ಚಿಕ್ಕ ಮರ ಎನ್ನಬಹುದಾದ ನಿಲುವು ಬಿಕ್ಕೆಯದು.  


ಕಾಫಿ ಕುಟುಂಬ ಎಂದು ಗುರುತಿಸಿಕೊಳ್ಳುವ ರೂಬಿಯೇಸೀ ಸಸ್ಯ ಕುಟುಂಬಕ್ಕೆ ಸೇರಿದ್ದು ಬಿಕ್ಕೆ ಗಿಡ. ಗರ‍್ಡಿನಿಯಾ ಗಮ್ಮಿಫೆರಾ ಎಂಬ ಸಸ್ಯಶಾಸ್ತ್ರೀಯ ಹೆಸರು. ಕನ್ನಡದಲ್ಲಿ ಬಿಕ್ಕೆ, ಅಡವಿ ಬಿಕ್ಕೆ, ಚಿಟಬಿಕ್ಕೆ ಎಂಬ ಇತರ ಹೆಸರುಗಳೂ ರೂಢಿಯಲ್ಲಿವೆ. ಇದರ ಚಿಗುರುಮೊಗ್ಗಿನಲ್ಲಿರುವ ಮೇಣಕ್ಕೆ ತುಸುವೇ ಹಿಂಗಿನ ವಾಸನೆ ಇರುವುದರಿಂದ ಇದಕ್ಕೆ ನಾಡಹಿಂಗು, ನಾಟಿಹಿಂಗು ಎನ್ನುವ ಇತರ ಹೆಸರುಗಳು ಕೂಡ ಇವೆ. ಶುದ್ಧಹಿಂಗನ್ನು ಹೋಲುವುದರಿಂದ ಸಂಸ್ಕೃತದಲ್ಲಿ ಇದಕ್ಕೆ ಕ್ಷುದ್ರಹಿಂಗು ಎಂಬ ಮತ್ತೊಂದು ಹೆಸರಿದೆ.
ಚೆನ್ನಾಗಿ ಬೆಳೆದ ಬಿಕ್ಕೆಮರದಲ್ಲಿ ನೇರವಾಗಿ ಬೆಳೆದ ರಟ್ಟೆ ಗಾತ್ರದ ಒರಟು ಗಡಸು ಕಾಂಡ;  ಒಣಗಿದ ತೊಗಟೆ ಅಲ್ಲಲ್ಲಿ ಸೀಳು ಬಿಟ್ಟು ಹೆಕ್ಕಳಿಕೆಗಳಾಗಿ ಎದದಿರುತ್ತದೆ. ಕಾಂಡದ ಮೇಲೆ ನಸುಬೂದಿ ಬಣ್ಣದ ಮಚ್ಚೆಗಳು ಕಾಣುತ್ತವೆ. ವಾಸ್ತವವಾಗಿ ಇವು ಕಾಂಡದ ತೊಗಟೆಯ ಮೇಲೆ ಬೆಳೆದ ವಿವಿಧ ಕಲ್ಲುಹೂ ಪ್ರಭೇದಗಳು. ಇನ್ನುಳಿದ ಗಿಡಗಳಿಗೆ ಹೋಲಿಸಿದರೆ, ಇಂಥ ಕಲ್ಲಹೂಗಳ ಸಂದಣಿ ಬಿಕ್ಕೆಯಲ್ಲಿ ಹೆಚ್ಚಿರುತ್ತದೆ.  ದಪ್ಪ ಕಾಂಡದ ಮೇಲೆ ಅಂಕುಡೊಂಕು ಕೊಂಬೆಗಳು. ಅವುಗಳ ತುದಿಯಲ್ಲಿ ಕರಣೆಯಾಕಾರದ ಹೊಳಪು ಜೋಡಿ ಎಲೆಗಳು ಎದುರುಬದುರು ದಿಕ್ಕಿನಲ್ಲಿರುತ್ತವೆ. ಪೀಠೋಪಕರಣಗಳಿಗೆ ಹೊಳಪು ನೀಡುವ ವರ‍್ನಿಶ್‌ ಅನ್ನು ಇವಕ್ಕೂ ಬಳಿದಿರಬಹುದೇನೋ ಎನ್ನಿಸುವಷ್ಟು ಹೊಳಪು. ಇದಕ್ಕೆ ಕಾರಣ ಎಲೆಗಳಲ್ಲಿ ಸ್ರವಿಸುವ ಮೇಣವೇ. ರೆಂಬೆಯ ತುದಿಯ ಜೋಡಿ ಎಲೆಗಳು ಗುಂಪುಗೂಡಿ ಹಸಿರು ಗುಚ್ಛದ ಹಾಗೆ ತೋರುತ್ತವೆ, ರೆಂಬೆಯ ಕೆಳಭಾಗದಲ್ಲಿ ಎಲೆಗಳಿಲ್ಲ, ಬಡಕಲು ಕಡ್ಡಿ ಮಾತ್ರ. ಬೆಳೆಯುವ ಕವಲುಗಳ ತುದಿಯಲ್ಲಿ ನಕ್ಷತ್ರದಾಕಾರದ ಒಂಟಿ ಬಿಳಿ ಹೂಗಳು. ದೊಡ್ಡಸೂಜಿ ಮಲ್ಲಿಗೆ ಅಥವಾ ಚಿಕ್ಕ ನಂಜಬಟ್ಟಲು ಹೂವನ್ನು ಹೋಲುತ್ತವೆ. ಇವಕ್ಕೆ ಗಾಢವಾದ ಸುಗಂಧ.  


ಹೂಗಳು ಒಣಗಿ ಉದುರಿದ ಮೇಲೆ ಅಲ್ಲೊಂದು ಕಾಯಿ ನಿಧಾನವಾಗಿ ರೂಪತಾಳುತ್ತದೆ. ಪರ‍್ಣವಾಗಿ ಬೆಳೆದ ಕಾಯಿಗೆ ನೀಳವಾದ ಸೀಬೆ ಹಣ್ಣಿನ ಆಕಾರ. ಅಂಥದೇ ಉರುಟುರುಟಾದ ಮೈ, ಹಣ್ಣಿನ ಮೂತಿ ಒಡೆದು ಐದು ಸಣ್ಣ ಸೀಳಾಗಿರುತ್ತದೆ. ಎಷ್ಟೇ ದೊಡ್ಡದಾದರೂ ಬಲಿತ ಬಿಕ್ಕೆ ಹಣ್ಣಿನ ಗಾತ್ರ ಮಾತ್ರ ಚಿಕ್ಕದು. ಮಾಗಿದ ಹಣ್ಣಿಗೆ ನಸುಹಳದಿ ಅಥವಾ ಒಣಕಂದು ಬಣ್ಣ, ಅಲ್ಲಲ್ಲಿ ಕಪ್ಪು ಚುಕ್ಕೆಯೂ ಇದ್ದೀತು. ಒಟ್ಟಿನಲ್ಲಿ ಕಾಡು ಹಣ್ಣು ಎಂದು ಹೇಳಬಹುದಾದ ಅನಾರ‍್ಷಕ ರೂಪ. ಮಾಗಿದ ಹಣ್ಣಾದರೂ ಗಡುಸಾದ ಚಿಪ್ಪಿನಂಥ ಸಿಪ್ಪೆ. ಅದನ್ನು ಒಡೆದರೆ, ಒಳಗೆ ಬೇಲದ ಹಣ್ಣಿನ ತಿರುಳನ್ನು ನೆನಪಿಸುವ ತಿರುಳು. ಅದರಲ್ಲಿ ಸಣ್ಣಸಣ್ಣ ಬೀಜಗಳು ಹುದುಗಿರುತ್ತವೆ. ಹಣ್ಣಿನಲ್ಲಿ ತಿನ್ನಬಹುದಾದ ಭಾಗವೇ ಇದು. ಆದರೆ ತಿರುಳು ಹೆಚ್ಚಿನ ಪ್ರಮಾಣದಲ್ಲಿಲ್ಲ. ಒಂದು ಹಣ್ಣನ್ನು ಒಡೆದರೆ ಅದರಲ್ಲಿ ಒಂದು ಚಮಚದಷ್ಟು ಮಾತ್ರ ತಿರುಳು ಸಿಕ್ಕೀತು. ಆದರೇನು? ಇಷ್ಟು ಅಲ್ಪ ಪ್ರಮಾಣದ ಹಣ್ಣಿನ ಖಂಡದಲ್ಲಿ ಏನಿದ್ದೀತು ಎಂದು ಅಲ್ಲಗಳೆಯುವ ಹಾಗಿಲ್ಲ. ಯಾಕೆಂದರೆ ಹಣ್ಣಿನ ತಿರುಳಿಗೆ ಬಲು ಮಧುರವಾದ ರುಚಿ. ಗಣೇಶ ಚೌತಿಯಂದು ತಯಾರಾಗುವ ಸಿಹಿಕಡುಬಿನ ಹೂರಣದ ಸ್ವಾದ ಮತ್ತು ಮೃದುತನ ಯಾವುದಾದರೂ ಹಣ್ಣಿನಲ್ಲಿ ಇರಲು ಸಾಧ್ಯ ಎನ್ನುವುದಾದರೆ ಅದು ಬಿಕ್ಕೆ ಹಣ್ಣಿನಲ್ಲಿ ಮಾತ್ರ ಕಾಣಬಹುದು. ಹಣ್ಣುಗಳ ಗಡಸು ಸಿಪ್ಪೆಯನ್ನು ಒಡೆದು, ಎರಡು ಹೋಳು ಮಾಡಿ ಅದರ ತಿರುಳನ್ನು ಕೆರೆದು ಗೋರಿಕೊಂಡು, ತಿನ್ನುವುದು ಸಾಮಾನ್ಯವಾದ ವಿಧಾನ. ಗುಡ್ಡಗಾಡಿನ ಬಯಲಿನಲ್ಲಿ ಅಡ್ಡಾಡುವ ಹುಡುಗರು, ಬಿಕ್ಕೆಹಣ್ಣುಗಳನ್ನು ತಿನ್ನುವ ವೈಖರಿಯಿದು. ಮಳೆಗಾಲದ ದಿನಗಳಲ್ಲಿ, ಶ್ರಾವಣ ಮಾಸದಲ್ಲಿ ಬಿಕ್ಕೆ ಹಣ್ಣುಗಳು ತಿನ್ನಲು ಯೋಗ್ಯವಾಗಿರುತ್ತವೆ.

 
ಬಿಕ್ಕೆ ಹಣ್ಣಿನಲ್ಲಿ ಹಲವು ಪೋಷಕ ಖನಿಜಗಳಿವೆ. ಹದಿನೇಳಕ್ಕೂ ಹೆಚ್ಚಿನ ಫ್ಲೇವನಾಯ್ಡ್‌ಗಳು ಹಣ್ಣು ಮತ್ತು ಮೇಣದಲ್ಲಿ ಪತ್ತೆಯಾಗಿದ್ದು ಇದರ ಮಹತ್ವವನ್ನು ಹೆಚ್ಚಿಸಿವೆ. ಇದರ ಚಿಗುರೆಲೆ, ಬೆಳೆಯುವ ಕುಡಿ, ಮತ್ತು ಮೊಗ್ಗುಗಳಿಂದ ಅಂಟಿನಂಶವಿರುವ ಗೋಂದು ಸ್ರವಿಸುತ್ತದೆ. ಗೋಂದು ಹನಿ ಒಣಗಿ ಕೆನೆಗಟ್ಟಿರುತ್ತದೆ. ಇದಕ್ಕೆ ಕಂಬಿ ಮೇಣ ಎಂದು ಕರೆಯುವುದು ವಾಡಿಕೆ. ಡಿಕ್ಕಾಮಲ್ಲಿ ಅಥವಾ ಡಿಕಾಮಲಿ ಎಂಬ ಹೆಸರಿನಲ್ಲಿ ಕಚ್ಚಾ ಔಷಧ ಸಾಮಗ್ರಿಯಾಗಿ ಬಿಕರಿಯಾಗುತ್ತದೆ. ಈ ಗೋಂದಿನ ಹನಿಗಳು ಅಂಟಿಕೊಂಡಿರುವ ಒಣಪುರುಳೆ ಕಡ್ಡಿಗಳನ್ನು ಅಥವಾ ಗೋಂದಿನ ಉಂಡೆಯನ್ನು ದಕ್ಷಿಣಭಾರತದ ಉದುರೆಲೆ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಂಗ್ರಹಿಸುವುದು ವಾಡಿಕೆ. ಅಧಿಕ ಪ್ರಮಾಣದ ಸಂಗ್ರಹ ನಡೆಯುವ ಪ್ರದೇಶದಲ್ಲಿ ಇದರ ಸರ‍್ಪಕ ಸಂಗ್ರಹಣೆ ಮಾಡಲು, ಅರಣ್ಯ ಇಲಾಖೆಯೇ ಅಧಿಕೃತ ಅನುಮತಿ ನೀಡುತ್ತದೆ, ಹಲವು ನಿಯಮಗಳನ್ನು ಕೂಡ ವಿಧಿಸುತ್ತದೆ. 


ಈ ಗೋಂದಿಗೆ ಉತ್ಕೃಷ್ಟ ಔಷಧೀಯ ಗುಣಗಳಿರುವುದರಿಂದ ಇನ್ನಿಲ್ಲದ ಬೇಡಿಕೆಯಿದೆ. ಎಲ್ಲಕ್ಕಿಂತ ಮುಖ್ಯವಾದದ್ದು ಇದರ ದಂತಪೋಷಕ ಗುಣಗಳು. ಎಳೆಮಕ್ಕಳಲ್ಲಿ ಹಾಲುಹುಲ್ಲು ಮೂಡುವ ಸಂರ‍್ಭದಲ್ಲಿ ಉಂಟಾಗುವ ಕಿರಿಕಿರಿ, ನೋವಿನ ಶಮನಕ್ಕೂ ಹಾಗೂ ಪಶ್ಚಾತ್‌ ಆರೋಗ್ಯಪಾಲನೆಗೂ ದೊರೆಯುವ ಕೆಲವೇ ನಂಬರ‍್ಹ ಔಷಧ ಸಾಮಗ್ರಿಯ ಪೈಕಿ ಬಿಕ್ಕೆ ಗೋಂದು ಮೇಣವೂ ಒಂದು. ಹಾಲು ಹಲ್ಲು ಸರಿಯಾಗಿ ಬೆಳೆಯಲು ಬಿಕ್ಕೆ ಗೋಂದಿನ ಪುಡಿಯನ್ನು ನರ‍್ದಿಷ್ಟ ಅಲ್ಪ ಪ್ರಮಾಣದಲ್ಲಿ ಮಕ್ಕಳಿಗೆ ಕೊಡುವುದು ಒಂದು ಜನಪ್ರಿಯ ಮನೆಮದ್ದು. ಅಷ್ಟೇ ಅಲ್ಲ, ಹುಳುಕುಹಲ್ಲು, ದಂತಕುಳಿಯ ನಿವಾರಣೆಗೆ ಪುಟ್ಟ ಮಣಿಯಷ್ಟು ಗಾತ್ರದ ಮೇಣವನ್ನು ದವಡೆಗೆ ಒತ್ತರಿಸುವುದು ಇಂತಹ ಮತ್ತೊಂದು ಪರಿಣಾಮಕಾರಿ ಮನೆಮದ್ದು. ಇಂಥ ಅಪರೂಪದ ಗುಣಗಳಿರುವುದರಿಂದ ಜಗತ್ತಿನಾದ್ಯಂತ ದಂತಪೋಷಣೆಗೆ ಒದಗುವ ಎಷ್ಟೋ ಔಷಧಗಳ ತಯಾರಿಕೆಯಲ್ಲಿ ಬಿಕ್ಕೆ ಗೋಂದಿಗೆ ಮೊದಲಿನಿಂದಲೂ ಖಾಯಂ ಸ್ಥಾನವಿದೆ. ವಾಸಿಯಾಗದ ಹಳೆಗಾಯಗಳು, ವ್ರಣಗಳನ್ನು ಒಣಗಿಸಲು ಬಿಕ್ಕೆ ಹಸಿಗೋಂದನ್ನು ಸವರುವುದು ಇದರ ಮತ್ತೊಂದು ಪರಿಣಾಮಕಾರಿ ಔಷಧೀಯ ಬಳಕೆ. ಪಿತ್ತಪ್ರಕೋಪವನ್ನು ತಗ್ಗಿಸುವ ಹಾಗೂ ಕಫದೋಷವನ್ನು ನಿವಾರಿಸುವ ಅಪರೂಪದ ಗುಣವೂ ಇದಕ್ಕಿದೆ. ಇದಲ್ಲದೆ ಆಯರ‍್ವೇದದ ಹಲವು ಔಷಧಗಳಲ್ಲೂ ಬಿಕ್ಕೆ ಗೋಂದು ಬಳಕೆಯಾಗುತ್ತದೆ. ಇದೆಲ್ಲ ಗುಣಗಳಿರುವುದರಿಂದ ಬಿಕ್ಕೆಗೋಂದಿಗೆ ಅತೀವವಾದ ಬೇಡಿಕೆಯಿದೆ. ದೇಶದಲ್ಲಿ ವರ‍್ಷಿಕ ಅತಿ ಹೆಚ್ಚು ಪ್ರಮಾಣದಲ್ಲಿ ಬಿಕರಿಯಾಗುವ ಕೆಲವೇ ಅರಣ್ಯ ಉತ್ಪನ್ನಗಳ ಪೈಕಿ ಒಂದು. 


ಕಾಡುಹಣ್ಣು ಹಾಗು ಔಷಧದ್ರವ್ಯವಾಗಿ ಇಂಥ ಅಪರೂಪದ ಮತ್ತು ಉತ್ಕೃಷ್ಟ ಗುಣಗಳಿದ್ದರೂ ಕೂಡ, ಬಿಕ್ಕೆಹಣ್ಣು ಜನಸಾಮಾನ್ಯರ ಅರಿವಿನಿಂದ ಮರೆಯಾಗಿರುವುದು ಮಾತ್ರ ದೊಡ್ಡ ವಿರ‍್ಯಾಸ. ಮುಂದಿನ ಸಾರಿ ಮಳೆಗಾಲದ ದಿನಗಳಲ್ಲಿ ಬಯಲುಸೀಮೆಯ ಅರಣ್ಯಪ್ರದೇಶದಲ್ಲಿ ವನಸಂಚಾರ ಕೈಗೊಳ್ಳಿ, ಕಾಡಿನಂಚಿನ ಊರುಗಳನ್ನು ಹಾದುಹೋಗುವಾಗ, ಒಂದು ಕ್ಷಣ ನಿಲ್ಲಿ. ಅಲ್ಲಿಯ ಪುಟ್ಟ ಗೂಡಂಗಡಿಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಾರಾಟಕ್ಕೆ ಕೂಡ ಸಿಗಬಹುದು. ನೆನಪಿಟ್ಟುಕೊಂಡು ಬಿಕ್ಕೆಹಣ್ಣನ್ನು ಸವಿಯಲು ಪ್ರಯತ್ನಿಸಿ. 


ಪುಟ್ಟ ಮಡಿಕೆಯಲ್ಲಿ ಹಿಟ್ಟು ಮಾಡುವುದು" ಎಂದರೇನು?" 


ದೇಶಿ ಜ್ಞಾನದ ಹಲವು ಮಜಲುಗಳ ಪೈಕಿ ಒಗಟುಗಳಿಗೊಂದು ವಿಶಿಷ್ಟ ಸ್ಥಾನವಿದೆ. ವನ್ಯ ಸಸ್ಯಗಳ ವಿಶಿಷ್ಟ ಗುಣಲಕ್ಷಣಗಳನ್ನು ಚಮತ್ಕಾರಿಕ ಪದಗಟ್ಟುಗಳಲ್ಲಿ ಹಿಡಿದಿಟ್ಟು ಅದನ್ನು ಆಡುಮಾತಿನ ಜೊತೆ ಮರ‍್ಮಿಕವಾಗಿ ಹೊರಹಾಕುವ ಇಂಥ ಕೆಲವು ಒಗಟುಗಳು ರೈತಾಪಿ ಸಮುದಾಯದ ಜನಜಾಣ್ಮೆಯನ್ನು ಮೆರೆಯುವ ಒಂದು ಅದ್ಭುತ ಮಾದರಿ. ಜೊತೆಗೆ ಜನಸಮುದಾಯಗಳಲ್ಲಿ ಮಡುಗಟ್ಟಿದ ಪರಿಸರಜ್ಞಾನವನ್ನು ಹಿಡಿದಿಡುವ ಒಂದು ವಿಶಿಷ್ಟ ಹಂದರವಾಗಿಯೂ ಈ ಒಗಟುಗಳು ಕಾಣುತ್ತವೆ. ಅಂಥದೊಂದು ಒಗಟು ಬಿಕ್ಕೆಹಣ್ಣಿನ ಜೊತೆ ಕೇಳಿಬರುತ್ತದೆ. 


"ಪುಟ್ಟ ಮಡಿಕೆಯಲ್ಲಿ ಹಿಟ್ಟು ಮಾಡುವುದು" ಎಂದರೇನು?" ಎನ್ನುವ ಒಂದು ಒಗಟು ಬಯಲುಸೀಮೆಯ ಕೆಲವೆಡೆ ರೂಢಿಯಲ್ಲಿದೆ. ಇಲ್ಲಿ "ಪುಟ್ಟ ಮಡಕೆ" ಎಂಬುದು ಗಡಸು ಚಿಪ್ಪಿನಂಥ ಬಿಕ್ಕೆ ಹಣ್ಣನ್ನು ಒಡೆದಾಗ ದೊರೆಯುವ ಎರಡು ಹೋಳನ್ನು ತೋರಿಸುತ್ತದೆ; ಅದರಲ್ಲಿರುವ ಸಿಹಿ ಹೂರಣದಂಥ ಹಣ್ಣಿನ ಖಂಡವೇ "ಹಿಟ್ಟು". ಮಡಕೆಯಲ್ಲಿ ಹಿಟ್ಟನ್ನು ಬೇಯಿಸುವ ರೂಢಿಯಿದ್ದ ದಿನಗಳಲ್ಲಿ ಆ ಅಡುಗೆಯನ್ನು ನೆನಪಿಸುವ ಹಾಗಿದ್ದ ಬಿಕ್ಕೆಹಣ್ಣನ್ನು ನೋಡಿ ಈ ಓಗಟನ್ನು ಕಟ್ಟಿರುವ ಹಾಗೆ ಕಾಣುತ್ತದೆ. ಪುಟ್ಟ ಮಡಕೆ ಮತ್ತು ಹಿಟ್ಟನ್ನು ನೆನಪಿಸುವ ಬಿಕ್ಕೆ ಹಣ್ಣು ಇಲ್ಲಿ ಮತ್ತೊಮ್ಮೆ ರೂಪಕವಾಗಿದೆ.
##

ಲೇಖಕರ ಸಂಪರ್ಕ: 
ಮೊ: 7259284410

[email protected],