ನಗರಾಭಿವೃದ್ಧಿಗೆ 125 ಕೋಟಿ ಅನುದಾನ – ಉಪನಗರವಾಗಿ ತುಮಕೂರು ಅಭಿವೃದ್ಧಿಗೆ ಆದ್ಯತೆ: ಸಚಿವ ಬೈರತಿ ಬಸವರಾಜು

tumkur-as-satellite-town-of-bengaluru-bhyrati-basavaraju

ನಗರಾಭಿವೃದ್ಧಿಗೆ 125 ಕೋಟಿ ಅನುದಾನ – ಉಪನಗರವಾಗಿ ತುಮಕೂರು ಅಭಿವೃದ್ಧಿಗೆ ಆದ್ಯತೆ: ಸಚಿವ ಬೈರತಿ ಬಸವರಾಜು



ನಗರಾಭಿವೃದ್ಧಿಗೆ 125 ಕೋಟಿ ಅನುದಾನ – ಉಪನಗರವಾಗಿ ತುಮಕೂರು ಅಭಿವೃದ್ಧಿಗೆ ಆದ್ಯತೆ: ಸಚಿವ ಬೈರತಿ ಬಸವರಾಜು


ತುಮಕೂರು: ನಗರದ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಮಾತ್ರವಲ್ಲದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ನೀಡಿದ್ದು, ತುಮಕೂರು ನಗರವನ್ನು ಬೆಂಗಳೂರಿನ ಉಪನಗರವನ್ನಾಗಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು.


  ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಮೊದಲನೇ ಸ್ಥಾನದಲ್ಲಿದ್ದು, ದೇಶದಲ್ಲಿ ಒಂಭತ್ತನೇ ಸ್ಥಾನ ಪಡೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.


ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಮೂಲಭೂತ ಸೌಕರ್ಯ ಹೆಚ್ಚಿಸಲು ಒತ್ತು ನೀಡಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳಿಗಾಗಿ ಈಗಾಗಲೇ 580 ಕೋಟಿ ರೂ.ಗಳ ವೆಚ್ಚ ಮಾಡಲಾಗಿದ್ದು, ಉಳಿದ ಕಾಮಗಾರಿಗಳಿಗೆ 420 ಕೋಟಿ ರೂ.ಗಳನ್ನು ಖರ್ಚು ಮಾಡಲು ಸಿದ್ಧವಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಒಟ್ಟು 109 ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮಾರ್ಚ್ ಮಾಹೆಯ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. 


ಸ್ಮಾರ್ಟ್ ಸಿಟಿಯಲ್ಲಿ ಅವ್ಯವಸ್ಥೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಮಾರ್ಟ್ ಸಿಟಿಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಲಾಗುವುದು. ಯೋಜನೆಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅರಿವಿದ್ದು, ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.


ಬರುವ ಫೆಬ್ರವರಿ ಮಾಹೆಯಲ್ಲಿ ನಗರ ಪರ್ಯಟನೆ ಮಾಡಿ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಡುತ್ತೇನೆ. ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.


ವಿಶೇಷ ಅನುದಾನ: 


ಮೂಲಸೌಕರ್ಯದಿಂದ ವಂಚಿತವಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಅನುದಾನ ನೀಡಲು ಸಾಧ್ಯವಾಗಿಲ್ಲ. ಈ ವರ್ಷ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಸ್. ಬಸವರಾಜು, ಮೇಯರ್ ಬಿ.ಜಿ. ಕೃಷ್ಣಪ್ಪ, ಉಪ ಮೇಯರ್ ನಾಜಿಮಾಬೀ ಇದ್ದರು.

ಅಕ್ರಮ ಕಟ್ಟಡಗಳ ಸಕ್ರಮ


ನಗರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ಜನರಿಗೂ ಅನುಕೂಲವಾಗುವುದಲ್ಲದೆ ಸರಕಾರಕ್ಕೂ ಆದಾಯ ಬರುವುದಲ್ಲದೆ, ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲೂ ಅನುಕೂಲವಾಗುತ್ತದೆ ಎಂದು ಸಚಿವ ಬೈರತಿ ಬಸವರಾಜು ಅಭಿಪ್ರಾಯಪಟ್ಟರು.