ಎಡವಿದ ಬೆರಳೇ ಮತ್ತೆ ಮತ್ತೆ ಎಡವುತ್ತದೆ ಎನ್ನುತ್ತಾರೆ ಹಿರಿಯರು…, 

ಬೆವರಹನಿ ದಿನಪತ್ರಿಕೆಯ 6ನೇವಾರ್ಷಿಕೋತ್ಸವ ಸಮಾರಂಭ

ಎಡವಿದ ಬೆರಳೇ ಮತ್ತೆ ಮತ್ತೆ ಎಡವುತ್ತದೆ ಎನ್ನುತ್ತಾರೆ ಹಿರಿಯರು…, 

ಒಂದು ಗಳಿಗೆ 


ಕುಚ್ಚಂಗಿ ಪ್ರಸನ್ನ 

    ನಮ್ಮ ಸಮಾರಂಭ ಮುಗಿದು ವಾರವಾಗಿಬಿಟ್ಟಿತು. ಹೋದ ಭಾನುವಾರ ತುಮಕೂರಿನ ಕನ್ನಡ ಭವನದಲ್ಲಿ ʼ ಬೆವರ ಹನಿʼ ದಿನಪತ್ರಿಕೆ ಐದು ವರ್ಷಗಳನ್ನು ಪೂರೈಸಿದ ನೆನಪಿಗೆ ಪುಟ್ಟ ಸಮಾರಂಭವೊಂದನ್ನು ಏರ್ಪಡಿಸಿದ್ದೆವು. ಮೂರು ತಿಂಗಳ ತಯಾರಿ ಏನೇನೂ ಸಾಲದು ಅಂತ ಅನ್ನಿಸಿಬಿಟ್ಟಿತು. ನಾನು ಕರೆದಿದ್ದ ಎಲ್ಲರೂ ಪ್ರೀತಿಯಿಂದ ಬಂದಿದ್ದರು, ʼ ಕರೆಯೋಲೆ ಕೊಟ್ಟು ಕರೆದಾಗ , “ ತುಮಕೂರಿನಲ್ಲಿದ್ದರೆ ಬರುತ್ತೇನೆ ಪ್ರಸನ್ನ” ಅಂತ ಅಂದಿದ್ದ ಮಾಜಿ ಉಪ ಮುಖ್ಯಮಂತ್ರಿ, ಹಾಲಿ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರೇಕೋ ಸಮಾರಂಭಕ್ಕೆ ಬರುವ ಮನಸ್ಸು ಮಾಡಲಿಲ್ಲ, ದಿಲ್ಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಅವರು ಕಣ್ಣಿನ ಸರ್ಜರಿ ಮಾಡಿಸಿಕೊಳ್ಳುವುದನ್ನು ಮೊದಲೇ ಹೇಳಿದ್ದರು, ಗುಬ್ಬಿಯ ವಾಸಣ್ಣ ಕಾಲು ಪ್ರಾಕ್ಚರ್ ಆಗಿ ಬೆಡ್ ರೆಸ್ಟ್ನಲ್ಲಿದ್ದಾರೆ, ಪಾವಗಡದ ವೆಂಕಟೇಶ್ ಸಿಂಗಾಪುರ ಟೂರಿನಲ್ಲಿದ್ದರು, ಉದ್ಯಮಿ ಡಿ.ಟಿ.ವೆಂಕಟೇಶ್ ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೊಬ್ಬ ಗೆಳೆಯ ಜಿ.ಎಸ್.ಪ್ರಸನ್ನಕುಮಾರ್ ಜೀವದಲ್ಲೂ ಸೌಖ್ಯವಿರಲಿಲ್ಲ. ಆದರೆ ಬಂದಿದ್ದ ಎಲ್ಲ ಗಣ್ಯ ಸಹೃದಯರೂ ಅಕ್ಕರೆಯಿಂದ ಮಾತನಾಡಿದರು. ಸಭಾಂಗಣದಲ್ಲಿದ್ದವರಲ್ಲಿ ಬಹುಪಾಲು ಪತ್ರಿಕೆ ಹಾಗೂ ನನ್ನ ಮೇಲಿನ ಅಕ್ಕರೆಯಿಂದ ಬಂದವರೇ ಆಗಿದ್ದರು. 


    ಜನಪ್ರತಿನಿಧಿಗಳಲ್ಲಿ ಮುಖ್ಯರಾದ ಸಹಕಾರ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣನವರು, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡರ, ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಅವರ ಮಾತುಗಳು ಬಹಳ ಆಪ್ತವೂ ಅರ್ಥವತ್ತೂ ಆಗಿದ್ದವು. ನಾಲ್ಕು ದಶಕಗಳಿಂದ ನಾನು ಬಹುವಾಗಿ ಮೆಚ್ಚುವ ಹಿರಿಯ ನ್ಯಾಯವಾದಿ ಪ್ರೊಫೆಸರ್ ರವಿವರ್ಮಕುಮಾರ್ ಅಧ್ಯಕ್ಷೀಯ ಭಾಷಣದಲ್ಲಿ ಇವತ್ತಿನ ಇಂಡಿಯಾದ ದುರಿತ ಪರಿಸ್ಥಿತಿಯನ್ನು ವಿಷದವಾಗಿ ಬಣ್ಣಿಸಿದರು. ʼ ಬೆವರ ಹನಿʼ ನೈಜ ಅರ್ಥದಲ್ಲಿ ಒಂದು ದಿನಪತ್ರಿಕೆಯಾಗಿ ಹೊರಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


    ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯನವರು ಖುದ್ದು ಆಡಳಿತದಲ್ಲಿರುವ ಪಕ್ಷದವರೇ ಆಗಿದ್ದರೂ, ಬೆಸ್ಕಾಂ ಎಂಬ ವಿದ್ಯುತ್ ಮಾರುವ ಕಂಪನಿ ಟಿಸಿ ಮತ್ತು ಕಂಬಗಳಿಗೂ ರೈತರು ಲಕ್ಷಾಂತರ ರೂ. ಬಂಡವಾಳ ಹಾಕುವಂತೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿಯವರು ಶುಭ ಹಾರೈಸಿದರು.


    ಪತ್ರಿಕೆ ಕುರಿತ ಓದುಗರ ಸಂವಾದದಲ್ಲಿ ಜನ ಸಂಗ್ರಾಮ ಪರಿಷತ್‌ನ ಅಧ್ಯಕ್ಷ ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಂಡಿತ್ ಜವಹರ್ ಅವರಿಗೆ ವಿಚಾರ ಮಂಡಿಸಲು ಸಮಯ ಸಾಕಾಗಲಿಲ್ಲ ಅಂಥ ಅನಿಸಿದ್ದರೆ ಎರಡೂ ಸೆಶನ್‌ಗಳನ್ನು ಒಗ್ಗೂಡಿಸಿ ತಪ್ಪು ಮಾಡಿದ ನಾನೇ ಕಾರಣ ಅಂತ ಅನ್ನಿಸಿತು. ವಿವಿಧ ಕಮ್ಯುನಿಸ್ಟ್ ಪಕ್ಷಗಳ ಗೆಳೆಯರಾದ ಸೈಯದ್ ಮುಜೀಬ್, ಬಿ.ಉಮೇಶ್, ಎಸ್.ಎನ್.ಸ್ವಾಮಿ, ಕಾಂಗ್ರೆಸ್ ಮುಖಂಡರಾದ ರಾಯಸಂದ್ರ ರವಿಕುಮಾರ್, ರೂಪೇಶ್ ಎಸ್.ಎನ್.ಕೃಷ್ಣಯ್ಯ, ಮಾಜಿ ಶಾಸಕ ಹೆಚ್.ನಿಂಗಪ್ಪನವರು, ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಕಣ್ಣುಗಳಂತಿರುವ ಹಾಲಿ ಅಧ್ಯಕ್ಷ ವಿಶ್ರಾಂತ ಪ್ರಾಚಾರ್ಯ ಕೆ.ಎಸ್.ಸಿದ್ಧಲಿಂಗಪ್ಪ ಹಾಗೂ ಮಾಜಿ ಅಧ್ಯಕ್ಷೆ ಹಾಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಎಲ್ಲರೂ ತುಸು ಬೆಚ್ಚನೆಯ ಮಾತುಗಳಲ್ಲೇ ಪೊರೆದರು. ಗೆಳೆಯ ಹಾಗೂ ಭಾರತೀಯ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ ಪತ್ರಿಕೆ ಇನ್ನೂ ನಿಷ್ಟುರ ಗುಣವನ್ನು ರೂಡಿಸಿಕೊಳ್ಳಬೇಕೆಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಸರ್ಕಾರಿ ನೌಕರರಿಗೆ ಮುಂಬಡ್ತಿ ಮೀಸಲಾತಿಗೆ ಧಕ್ಕೆ ಬಂದಿದೆ, ಅದಕ್ಕಾಗಿ ಕಾನೂನು ಹೋರಾಟ ನಡೆಸಬೇಕು ಎಂಬ ಕಾರಣಕ್ಕೆ ಕೆಲ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಜಿಲ್ಲಾ ಎಸ್‌ಸಿ ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ರೇಷ್ಮೆ ಇಲಾಖೆ ಉಪ ನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಸಮಾರಂಭಕ್ಕೆ ಬಂದAತೆ ಮಾಡಿ ನಾಪತ್ತೆಯಾಗಿಬಿಟ್ಟ.ನನ್ನ ಗೆಳೆಯನೂ ಆಗಿರುವ ಈತನನ್ನು ನಾನು ಕಂಡದ್ದು 1982ರಲ್ಲಿ, ಆಗ ಬಾಲಕೃಷ್ಣಪ್ಪ ತುಮಕೂರು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮೊದಲ ಪಿಯು ಓದುತ್ತಿದ್ದ , ಎರಡನೇ ಪಿಯು ಓದುತ್ತಿದ್ದ ನಮ್ಮ ತರಗತಿಯ ಎದುರು ಪ್ಯಾರಾಪೆಟ್ ಮೇಲೆ ಎಗರಿ ಕೂತು ಈತ ಗದ್ದಲ ಎಬ್ಬಿಸುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.


   ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ವಿಶ್ರಾಂತ ಪಿಯು ಜಂಟಿ ನಿರ್ದೇಶಕ ಕೆ.ದೊರೈರಾಜ್ ಅವರು ಓದುಗರ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼ ಬೆವರ ಹನಿʼ ದಿನಪತ್ರಿಕೆಯನ್ನು ಉಳಿಸಿ ಬೆಳೆಸಿ ಎಂದರು. 


    ಹೀಗೆ ವೇದಿಕೆಯ ಮೇಲೆ ನಿಂತು ಮುಕ್ತವಾಗಿ ವಿಮರ್ಶಿಸಿ, ತಿದ್ದಿ ಬುದ್ದಿ ಹೇಳಿದ ಎಲ್ಲರಿಗೂ, ಸುಮ್ಮನೇ ಸಭಾಂಗಣದಲ್ಲಿ ಕೂತು ಎಲ್ಲರ ಮಾತುಗಳನ್ನು ಸವಿಯುತ್ತಿದ್ದ ಸಹೃದಯರಿಗೂ ನನ್ನ ಅನಂತ ವಂದನೆಗಳು. ಇನ್ನೂ ಬರಬೇಕಿದ್ದ ನೂರಾರು ಜನರಿದ್ದರು, ಏನೇನೋ ಯಾವ ಯಾವ ಕಾರಣಕ್ಕೋ ಎದುರು ಬಂದು ಕೂರಲೂ ಆಗದಿದ್ದರೂ ನನ್ನೆದೆಯೊಳಗೆ ಭದ್ರವಾಗಿ ಇದ್ದಾರೆ ಅಂತ ಭಾವಿಸುವೆ. ಪತ್ರಕರ್ತ ಗೆಳೆಯರೂ ಅಕ್ಕರೆಯಿಂದ ಬಂದು ಕೂತಿದ್ದರು. ಸಮಾರಂಭದ ವರದಿಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟ ವಾರ್ತಾ ಭಾರತಿ ವರದಿಗಾರ ರಂಗರಾಜುಗೆ ಕೃತಜ್ಞತೆಗಳು, ಅಪರೂಪಕ್ಕೆ ವೇದಿಕೆ ಹತ್ತುವ ನಾನು ಸ್ವಾಗತಿಸುವಾಗ ಸ್ಟೇಜ್ ಫಿಯರ್ ಅನ್ನುತ್ತಾರಲ್ಲ ಆ ಗಾಬರಿಯಲ್ಲಿ ಕೆಲವು ಮುಖ್ಯರಾದವರನ್ನು ನೆನಪಿಸಿಕೊಂಡಿಲ್ಲ, ದಯಮಾಡಿ ತಪ್ಪನ್ನು ನಿಮ್ಮ ಹೊಟ್ಟೆಗೆ ಹಾಕಿಕೊಳ್ಳಿ, 

     ಈ ಐದಾರು ವರ್ಷದಲ್ಲಿ ನನ್ನೊಂದಿಗೆ ನನ್ನಷ್ಟೇ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಹಾಗೂ ಸಮಾರಂಭದಲ್ಲೂ ಅಷ್ಟೇ ಆಸ್ಥೆಯಿಂದ ಓಡಾಡಿ ಸಂಭ್ರಮಿಸಿದ ಪತ್ರಿಕೆಯ ಸಹ ಸಂಪಾದಕ ಎಂ.ಸತೀಶ್, ಹವ್ಯಾಸಿ ಪತ್ರಕರ್ತರಾದ ಆರ್.ರಾಧಾ, ತಾಲೂಕು ಪ್ರತಿನಿಧಿಗಳಾದ ಪಾವಗಡದ ರಾಜಕುಮಾರ್, ಮಧುಗಿರಿಯ ಚಂದ್ರಕಾಂತ್, ಕೊರಟಗೆರೆಯ ಲಕ್ಷ್ಮೀಕಾಂತ್‌, ಶಿರಾದ ಬಾಲಕೃಷ್ಣೇಗೌಡ, ಚಿಕ್ಕನಾಯಕನಹಳ್ಳಿಯ ಧನಂಜಯ್, ಗುಬ್ಬಿಯ ಸೋಮಸುಂದರ್, ಪ್ರಸನ್ನ ದೊಡ್ಡಗುಣಿ ಹಾಗೂ ಮುದ್ರಣಾಲಯ ‘ಮೈತ್ರೇಯ ಬುದ್ಧ ಪ್ರೆಸ್’ನ ಸಿಬ್ಬಂದಿಗಳಾದ ಕೃಷ್ಣ ಮೂರ್ತಿ, ಶಶಿಧರ್ ಹಾಗೂ ಲಕ್ಕಪ್ಪ ಇವರಿಗೆ, ನಿರೂಪಣೆ ಮಾಡಿದ ಗೆಳೆಯ ಜಿ.ಎನ್.ರಾಧಾಕೃಷ್ಣ, ಕನ್ನಡಭವನದಲ್ಲಿ ಸ್ಥಳಾವಕಾಶ ಮಾಡಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ಇವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರಿಗೂ ನಾನು ಸದಾ ರುಣಿ.

  

    ನೋಡಿ ಈಗ ʼ ಬೆವರ ಹನಿʼ ದಿನಪತ್ರಿಕೆಯ ತುಮಕೂರು ಎಡಿಷನ್ ನಿರಂತರ ಐದು ವರ್ಷಗಳನ್ನುಪೂರೈಸಿ, ಆರನೇ ವರ್ಷದಲ್ಲಿ ಆಗಲೇ ಒಂದು ತಿಂಗಳು ಕಳೆದಿದೆ. ಪತ್ರಿಕೋದ್ಯಮವನ್ನು ಇತರ ಯಾವ ಉದ್ಯಮಕ್ಕೂ ಹೋಲಿಸಲು ಬರುವುದಿಲ್ಲ. ಇಲ್ಲಿ ಎಲ್ಲ ಕೆಲಸವನ್ನೂ ಪ್ರತಿ ದಿನವೂ ಹೊಸದಾಗಿಯೇ ಮಾಡಬೇಕು ಮತ್ತು ಪತ್ರಿಕೆ ದಿನವೂ ಹೊಸತವನ್ನೇ ಹೊತ್ತು ತರಬೇಕು, ಇವತ್ತು ಮಾಡಿದ್ದು ನಾಳಿನ ಲೆಕ್ಕಕ್ಕೆ ಬರುವುದಿಲ್ಲ, ಎಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದರೂ ಒಂದು ಕ್ಷಣಾರ್ಧದಲ್ಲಿ ಎಲ್ಲವೂ ಮಣ್ಣುಪಾಲಾಗಿ ಬಿಡುತ್ತದೆ. ರಾಜಕಾರಣದಲ್ಲೂ ಅಷ್ಟೇ ,ಉದಾಹರಣೆಗೆ ನೋಡಿ ನಿನ್ನೆ ಸಂಜೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ಅವರನ್ನು ಆ ಪಕ್ಷ ನೇಮಕ ಮಾಡಿದ ಪ್ರಕಟಣೆ ಹೊರಬಿದ್ದ ಕೂಡಲೇ ತುಮಕೂರು ಲೋಕಸಭಾ ಕ್ಷೇತ್ರದ ಮುಂಬರುವ ಚುನಾವಣೆಯ ಆಕಾಂಕ್ಷಿಗಳು ಮಾಡಿಕೊಂಡಿದ್ದ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ ಬಿಟ್ಟವು.


     ಕಳೆದ ಮೇ ತಿಂಗಳಲ್ಲಿ 135 ಸೀಟು ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ನಿನ್ನೆಯಷ್ಟು ಸುಲಭವಾಗಿ ಇವತ್ತು ತೆಗೆದುಕೊಳ್ಳಲಾಗುವುದಿಲ್ಲ. ವಿಜಯೇಂದ್ರರನ್ನು ಕಟೀಲ್ ರಷ್ಟು, ಯಡಿಯೂರಪ್ಪನವರನ್ನು ಬೊಮ್ಮಾಯಿಯಷ್ಟು ನೆಗ್ಲೆಕ್ಟ್ ಮಾಡಲಾಗುವುದಿಲ್ಲ, ಬಿಜೆಪಿ ಎಂಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿರುವ ಅಹಿಂದ ಹಿನ್ನೆಲೆಯಲ್ಲಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಕೇಳುತ್ತಾ ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿಯವರನ್ನು ಕಂಡು ಬಂದ ಮಾಜಿ ಎಂಎಲ್‌ಸಿ ಡಾ.ಹುಲಿನಾಯ್ಕರ್, ರಾಜ್ಯಪತ್ರಿಕೆಗಳಲ್ಲಿ ಪುಟಗಟ್ಟಲೆ ಸಂಪಾದನಾಕೀಯಗಳನ್ನು ಪ್ರಕಟಿಸುವ ರಿಯಲ್ ಎಸ್ಟೇಟ್ ಉದ್ಯಮಿ ಚಿದಾನಂದ್ , ನಾನೂ ಸಿದ್ಧ ಎನ್ನುತ್ತಿದ್ದ ಸಿದ್ದಗಂಗಾ ಮೆಡಿಕಲ್ ಕಾಲೇಜು ಎಂಡಿ ಡಾ.ಪರಮೇಶ್, ಟಿಕೆಟ್ ಕೊಟ್ಟರೆ ಬೇಡ ಎನ್ನಲ್ಲ ಎನ್ನುತ್ತಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ನಾನಿನ್ನೂ ಹೇಗೂ ರಿಟೈರ್ಡ್ ಎನ್ನುತ್ತಾ ಹೇಗಾದರೂ ಮಾಡಿ ವಿ.ಸೋಮಣ್ಣನವರನ್ನು ತುಮಕೂರಿಗೆ ತಂದು ನಿಲ್ಲಿಸಿ ರುಣಬಾರ ಕಳೆದುಕೊಳ್ಳಬೇಕೆಂದು ಕೊಂಡಿರುವ ಹಾಲಿ ಸಂಸದರು ಹೀಗೇ ಈ ಎಲ್ಲರೂ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಎದುರು ಹೊಸ ವರಸೆ ಮತ್ತು ಹೊಸ ಪಟ್ಟುಗಳನ್ನು ಹಾಕಬೇಕಿದೆ. ವಿವರಗಳನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ. 


ತ್ಯಾಂಕ್ಸ್ ಎ ಲಾಟ್