“ಚುನಾವಣೆಯ ಹೊತ್ತಲ್ಲಿ ಅಂಬೇಡ್ಕರ್ ಧ್ಯಾನ”

ಇವತ್ತು ಭಾರತ ರತ್ನ ಬಾಬಾ ಸಾಹೇಬ ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನ, ಸಂಸದೀಯ ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿರುವ ಇಂಡಿಯಾ ಗಣರಾಜ್ಯ ಒಕ್ಕೂಟದ ಅಸ್ತಿತ್ವವನ್ನು ಆಮಿಷ, ಭಯ, ದ್ವೇಷಗಳೆಂಬ ಆಯುಧಗಳ ಮೂಲಕ ಬುಡಮೇಲು ಮಾಡಲು ಹೊರಟಿರುವ ಸಂದರ್ಭದಲ್ಲಿ ಇತಿಹಾಸವನ್ನು ಸರಿಯಾಗಿ ಅರಿತುಕೊಳ್ಳಲು ಈ ಪುಟದಲ್ಲಿರುವ ಎರಡು ಲೇಖನಗಳು ಸಹಕಾರಿಯಾಗಲಿವೆ, ಓದಿ -ಸಂಪಾದಕ 

“ಚುನಾವಣೆಯ ಹೊತ್ತಲ್ಲಿ ಅಂಬೇಡ್ಕರ್ ಧ್ಯಾನ”


ವರ್ತಮಾನ


ಎಚ್.ವಿ.ಮಂಜುನಾಥ


    ಈ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ಲೋಕಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ. ಚುನಾವಣೆಯ ಆಗು-ಹೋಗುಗಳ ಬಗ್ಗೆ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ನೋಡಿದಾಗ ಪ್ರಗತಿಪರ ಎನ್ನಿಸಿಕೊಂಡ ಜಾತ್ಯಾತೀತ ಮನಸ್ಸುಗಳು “ಸಂವಿಧಾನ ಮತ್ತು ಪ್ರಜಾಪ್ರಭುತ್ವ”ದ ಅಳಿವು ಉಳಿವಿನ ಪ್ರಶ್ನೆ ಈ ಚುನಾವಣೆಯಲ್ಲಿ ಅಡಗಿದೆ ಎಂದು ಮತದಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ “ಭಾರತ ಉಳಿಸಿ”, “ಸಂವಿಧಾನ-ಪ್ರಜಾಪ್ರಭುತ್ವ ಉಳಿಸಿ” ಮುಂತಾದ ಘೋಷವಾಕ್ಯಗಳ ಮೂಲಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದನ್ನು ದೇಶಾದ್ಯಾಂತ ಕಾಣಬಹುದು. 


    ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ನಡೆಸುತ್ತಿರುವ ಬಿಜೆಪಿಯ ನಡೆೆ ಇದಕ್ಕೆ ಬಹುಮುಖ್ಯ ಕಾರಣ. ಬಿಜೆಪಿ ಸಂವಿಧಾನಕ್ಕೆ ತನ್ನ ನಿಷ್ಠೆ ತೋರಿದ್ದು ಬಹಳ ಕಡಿಮೆ. ಬದಲಾಗಿ ಆ ಪಕ್ಷದ ಕೆಲವರು ಸಂವಿಧಾನದ ಬಗ್ಗೆ ಹಗುರವಾಗಿಯಷ್ಟೇ ಅಲ್ಲ, ಬದಲಾಯಿಸುವ ಬಗ್ಗೆಯೂ ಮಾತನಾಡಿದ್ದಾರೆ. ಇದರಲ್ಲಿ ಪ್ರಮುಖರೆಂದರೆ, ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಸಮಿತಿಯ ಆಧ್ಯಕ್ಷರಾದ ಬಿಬೇಕ್ ಡಿಬ್ರಾಯ್ ತನ್ನ ಇತ್ತೀಚಿನ ಸಂದರ್ಶನದಲ್ಲಿ “ಜಗತ್ತಿನ ಸಂವಿಧಾನಗಳ ಸರಾಸರಿ ಆಯಸ್ಸು 17 ವರ್ಷಗಳು ಮಾತ್ರ, ಆದರೆ ನಮ್ಮ ಸಂವಿಧಾನ 73 ವರ್ಷಗಳಷ್ಟು ಹಳೆಯದಾಗಿದ್ದು ಇವತ್ತಿನ ಕಾಲಮಾನಕ್ಕೆ ಅಷ್ಟಾಗಿ ಸರಿ ಹೊಂದುವುದಿಲ್ಲ. ನಮ್ಮದು ಭಾರತ ಸರ್ಕಾರ ಕಾಯ್ದೆ, 1935 ಅನ್ನು ಆಧರಿಸಿದ ವಸಾಹತು ಸಂವಿಧಾನದ ಮುಂದುವರಿಕೆ. ತಿದ್ದುಪಡಿಯಿಂದ ಪ್ರಯೋಜನವಿಲ್ಲ, ಸಂಪೂರ್ಣವಾಗಿ ಹೊಸದಾಗಿ ಬರೆಯಬೇಕು...”*1 ಎಂಬಂತಹ ಮಾತುಗಳನ್ನಾಡಿದ್ದಾರೆ. ಇನ್ನು ಕರ್ನಾಟಕದ ಬಿಜೆಪಿ ಸಂಸದರೊಬ್ಬರು ನಾವು ಬಂದಿರುವುದೇ “ಸಂವಿಧಾನ ಬದಲಿಸಲು” ಎಂದು ನೀಡಿದ ಹೇಳಿಕೆ ಎಲ್ಲರಿಗೂ ಗೊತ್ತೇ ಇದೆ. ಜಿ 20-ಶೃಂಗಸಭೆಯ ಸಂದರ್ಭದಲ್ಲಿ “ಇಂಡಿಯಾ” ಬದಲಿಗೆ “ಭಾರತ್” ಅಂತ ವಿಜೃಂಭಿಸಿದರೆ, ಸಂಸತ್ತಿನ ನೂತನ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ “ಜಾತ್ಯಾತೀತ” ಮತ್ತು “ಸಮಾಜವಾದ” ಎಂಬ ಪದಗಳನ್ನು ತೆಗೆದುಹಾಕಿದ ಸಂವಿಧಾನದ ಪ್ರತಿಗಳನ್ನು ಹಂಚಿದ ಘಟನೆಗಳನ್ನು ನೋಡಿದಾಗ ಬಿಜೆಪಿಯವರು ಸಂವಿಧಾನದ ನೈತಿಕತೆಯನ್ನು ಉದ್ದೇಶಪೂರ್ವಕವಾಗಿ ಪಾಲಿಸದೆ ಅದರ ಪಾವಿತ್ರ್ಯತೆಯನ್ನು ಹಾಳುಗೆಡವಿ ಸಂವಿಧಾನದ ಮಹತ್ವವನ್ನು ಕುಗ್ಗಿಸುವ ಯತ್ನದಲ್ಲಿ ತೊಡಗಿದ್ದಾರೆ ಎಂದು ಅನ್ನಿಸುತ್ತದೆ. ಸಂವಿಧಾನವನ್ನು ವಿರೋಧಿಸುವ ಮನಸ್ಸುಗಳು ಅದನ್ನು ರೂಪಿಸುವ ಕಾಲದಲ್ಲೂ ಇದ್ದರು. ಆಗ ಬಾಬಾ ಸಾಹೇಬರು 25.11.1949ರ ಸಂವಿಧಾನ ರಚನಾ ಸಮಿತಿಯ ಕೊನೆಯ ಸಭೆಯಲ್ಲಿ ಈ ರೀತಿ ಹೇಳಿದ್ದರು :- 


   “ಸಂವಿಧಾನದ ಬಗ್ಗೆ ದೊಡ್ಡ ಪ್ರಮಾಣದ ಟೀಕೆಗಳು ಕೇಳಿಬಂದಿದ್ದು, ಅವರು ಏಕೆ ಸಂವಿಧಾನವನ್ನು ಖಂಡಿಸುತ್ತಿದ್ದಾರೆ? ನಿಜವಾಗಿಯೂ ಇದು ಕೆಟ್ಟ ಸಂವಿಧಾನವೇ? ...ಅವರು ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ, ಏಕೆಂದರೆ ಇದು ಸಂಸದೀಯ ಪ್ರಜಾಪ್ರಭುತ್ವವನ್ನು ಆಧರಿಸಿದೆ. 


    ಸಂವಿಧಾನವು ಎಷ್ಟೇ ಒಳ್ಳೆಯದಾಗಿರಬಹುದು. ಒಂದು ವೇಳೆ ಕೆಟ್ಟವರಿಗೆ ಅವರ ರೀತಿಕೆಲಸ ಮಾಡಲು ಬಿಟ್ಟರೆ ಕೆಟ್ಟ ಫಲಿತಾಂಶವೇ ಸಿಗುತ್ತದೆ. ಅದೇ ರೀತಿಯಲ್ಲಿ ಸಂವಿಧಾನವು ಎಷ್ಟೇ ಕೆಟ್ಟದಾಗಿರಬಹುದು. ಒಂದು ವೇಳೆ ತುಂಬಾ ಉತ್ತಮ ವ್ಯಕ್ತಿಗಳಿಗೆ ಇದನ್ನು ಪಾಲಿಸಲು ಬಿಟ್ಟರೆ ಅದರ ಫಲಿತಾಂಶವು ಬಹಳ ಉತ್ತಮವೇ ಆಗಿರುತ್ತದೆ. ಅಂದರೆ ಸಂವಿಧಾನದ ಕಾರ್ಯ ನಿರ್ವಹಣೆಯು ಅದರ ಗುಣ ಲಕ್ಷಣದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದಿಲ್ಲ”.*2 


    ಪ್ರಖ್ಯಾತ ರಾಜಕೀಯ ಶಾಸ್ತ್ರಜ್ಙನಾದ ಡೊನಾಲ್ಡ್ ಸ್ಮಿತ್ ತನ್ನ ‘ಇಂಡಿಯಾ ಯಾಸ್ ಎ ಸೆಕ್ಯುಲರ್ ಸ್ಟೇಟ್” ಎಂಬ ಪುಸ್ತಕದಲ್ಲಿ (1) ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ  ನೀಡುವುದು (2) ಧರ್ಮದ ಆಧಾರದ ಮೇಲೆ ನಾಗರಿಕತ್ವವನ್ನು ನಿರ್ಧರಿಸದಿರುವುದು (3) ಯಾವುದೇ ಧರ್ಮವನ್ನು ಉತ್ತೇಜಿಸುವುದಾಗಲಿ ಅಥವಾ ಹಸ್ತಕ್ಷೇಪ ಮಾಡುವುದಾಗಲಿ ಮಾಡದೆ ಧರ್ಮ ನಿರಪೇಕ್ಷತೆಯನ್ನು ಅನುಸರಿಸುವುದು...*3 ಈ ಮೂರು ಜಾತ್ಯತೀತ ರಾಷ್ಟ್ರದ ಪ್ರಮುಖ ಗುಣ ಲಕ್ಷಣಗಳು ಎಂದು ಹೇಳಿದ್ದಾನೆ. ಆದರೆ ಇಂದು ಹಿಂದುತ್ವದ ಹೆಸರಿನಲ್ಲಿ ಧಾರ್ಮಿಕ ಸ್ವಾತಂತ್ರö್ಯವನ್ನು ಹತ್ತಿಕ್ಕಲಾಗುತ್ತಿದೆ. ಸಿಎಎ ತಂದು ಧರ್ಮದ ಆಧಾರದ ಮೇಲೆ ನಾಗರಿಕತ್ವವನ್ನು ನಿರ್ಧರಿಸಲಾಗುತ್ತಿದೆ ಮತ್ತು ಒಂದು ಧರ್ಮವನ್ನು ಉತ್ತೇಜಿಸುತ್ತಾ ಮತ್ತೊಂದರಲ್ಲಿ ಹಸ್ತಕ್ಷೇಪ ಮಾಡುತ್ತಾ ಧರ್ಮ ನಿರಪೇಕ್ಷತೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ‘ಜಾತ್ಯತೀತ ರಾಷ್ಟ್ರ’ ಎಂಬ ಭಾರತದ ಬುನಾದಿಯನ್ನು ಮತ್ತು ಸಂವಿಧಾನದ ಮೂಲತತ್ವವನ್ನು ನಾಶಗೊಳಿಸುವ ಸಕಲ ಪ್ರಯತ್ನಗಳು ನಡೆಯುತ್ತಿವೆ. ಹುಸಿ ಹಿಂದುತ್ವವನ್ನು ಟ್ರಂಪ್ ಕಾರ್ಡ್ ಮಾಡಿಕೊಂಡು ಅದನ್ನೇ ರಾಷ್ಟ್ರೀಯತೆ  ಎಂದು ಬಿಂಬಿಸಲಾಗುತ್ತಿದೆ.


   ಬಾಬಾ ಸಾಹೇಬರು ರಾಷ್ಟ್ರೀಯತೆಯ ಕುರಿತು “ನನ್ನ ಅಭಿಪ್ರಾಯದಲ್ಲಿ ಮೊದಲು ಭಾರತೀಯ ತದನಂತರ ಹಿಂದೂ, ಮಹಮ್ಮದೀಯ, ಸಿಖ್...ಇತ್ಯಾದಿ ಎನ್ನುವ ಮನಸ್ಥಿತಿಯ ಬದಲಿಗೆ ಇಂದಿಗೂ ಎಂದೆಂದಿಗೂ ಭಾರತೀಯ ಎನ್ನುವ ‘ಸಮಾನ ರಾಷ್ಟ್ರೀಯತೆ’ಯ ಪ್ರಜ್ಞೆಯನ್ನು ನಮ್ಮ ಜನ ಸಮುದಾಯದ ನಡುವೆ ಹುಟ್ಟು ಹಾಕುವುದು ಇವತ್ತಿನ ಅತಿ ಮುಖ್ಯವಾದ ಅವಶ್ಯಕತೆಯಾಗಿದೆ”*4 ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರೆ ಇಂದು ರಾಷ್ಟ್ರೀಯತೆಯ ಬಗ್ಗೆ ಇದಕ್ಕೆ ತದ್ವಿರುದ್ದವಾದ ಅರ್ಥವನ್ನು ನೀಡಿ ಅದನ್ನೇ ರಾಷ್ಟ್ರೀಯತೆ  ಎಂದು ಬಿತ್ತಿ ನಂಬಿಸಲಾಗುತ್ತಿದೆ. ಇದರ ಜೊತೆಗೆ ವ್ಯಕ್ತಿ ಆರಾಧನೆಯೂ ನಡೆಯುತ್ತಿದೆ. 


     ರಾಜಕೀಯದಲ್ಲಿ ವ್ಯಕ್ತಿ ಆರಾಧನೆ ಎಂತಹ ಅಪಾಯ ತಂದೊಡ್ಡಬಹುದು ಎಂಬುದನ್ನು ಬಾಬಾ ಸಾಹೇಬರು ಆಗಲೇ ಮನಗಂಡು “ವ್ಯಕ್ತಿ ಪೂಜೆಯು ಭಾರತದ ರಾಜಕೀಯದಲ್ಲಿ ವಹಿಸುವ ಪಾತ್ರವನ್ನು ವಿಶ್ವದ ಇತರ ಯಾವುದೇ ದೇಶದ ರಾಜಕೀಯದಲ್ಲಿ ಕಾಣುವುದು ಸಾಧ್ಯವಿಲ್ಲ. ಧರ್ಮದಲ್ಲಿನ ಭಕ್ತಿಯು ಆತ್ಮದ ಮೋಕ್ಷಕ್ಕೆ ಮಾರ್ಗವಾಗಬಹುದು. ಆದರೆ ರಾಜಕೀಯದಲ್ಲಿ ಭಕ್ತಿ ಅಥವಾ ವ್ಯಕ್ತಿ ಪೂಜೆಯು ಖಂಡಿತವಾಗಿ ಅವನತಿ, ಮಾನಹಾನಿ ಮತ್ತು ಅಂತಿಮವಾಗಿ ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ” ಎಂದು ತಮ್ಮ 25.11.1949 ರ ಭಾಷಣದಲ್ಲಿ ನುಡಿದಿದ್ದರು. ಇಂದು ಅವರ ಮಾತು ನಿಜವಾಗುತ್ತಿದೆ. ದೇಶದಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಲು ಅವರು ನೀಡಿದ ಎಚ್ಚರಿಕೆಯನ್ನು ಮರೆತಿದ್ದೇ ಕಾರಣ.


    ಇದರ ಜೊತೆ ಜೊತೆಗೆ ಪ್ರಜಾಪ್ರಭುತ್ವವನ್ನು ನಾಶಗೊಳಿಸುವ ಹುನ್ನಾರವೂ ನಡೆಯುತ್ತಿದೆ. ಏಕೆಂದರೆ ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಬಾಬಾ ಸಾಹೇಬರು 27ನೇ ಆಕ್ಟೋಬರ್ 1951 ರಂದು ಜಲಂಧರ್‌ನಲ್ಲಿ ಚುನಾವಣಾ ಪ್ರಚಾರವನ್ನು ಉದ್ಘಾಟಿಸಿದ ನಂತರ ಡಿಎವಿ ಕಾಲೇಜಿನಲ್ಲಿ ವಿಶೇಷ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಾ "ಮೊದಲನೆಯದಾಗಿ ವಿರೋಧ ಪಕ್ಷ, ಎರಡನೆಯದಾಗಿ ಮುಕ್ತ ಹಾಗೂ ನ್ಯಾಯಯುತ ಚುನಾವಣೆ; ಇವು ಸಂಸದೀಯ ವ್ಯವಸ್ಥೆ ಹೊಂದಿರುವ ಸರ್ಕಾರದ ಎರಡು ಪ್ರಮುಖ ಆಧಾರ ಸ್ತಂಭಗಳು. ಹಾಗೆಯೇ ಯಾವುದೇ ಕಾನೂನು ಅಥವಾ ಸಾರ್ವಜನಿಕ ಬದುಕಿಗೆ ಅನ್ವಯಿಸುವ ಯಾವುದೇ ನೀತಿಯನ್ನು ರೂಪಿಸುವಾಗ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ನೀಡುವ ಅಭಿಪ್ರಾಯದ ಮೇಲೆ ರೂಪಿತವಾಗಬೇಕು. ಅಧಿಕಾರದಲ್ಲಿರುವ ಪಕ್ಷದ ಕಾರ್ಯಕಾರಣದಿಂದಾಗಿ ಸಂಸದೀಯ ಪ್ರಜಾಪ್ರಭುತ್ವ ಸೋತು ಹೋದಲ್ಲಿ ಅರಾಜಕತೆ, ದಂಗೆ ಮತ್ತು ಕೋಮುವಾದ ಅದರ ಫಲಿತಾಂಶ ಆಗಿರುತ್ತದೆ. ಅಲ್ಲಿಗೆ ಈ ದೇಶದ ಭವಿಷ್ಯ ಅವನತಿ ಹೊಂದಿದಂತೆ”*5 ಎಂಬ ಎಚ್ಚರಿಕೆಯ ನುಡಿಗಳಾನ್ನಾಡುತ್ತಾರೆ. 


    ಇಂದು ಅಧಿಕಾರದಲ್ಲಿರುವ ಪಕ್ಷವು ಸಂಸತ್ತಿನಲ್ಲಿ ಚರ್ಚೆಗಳನ್ನೇ ನಡೆಸದೆ, ಜನ ಪ್ರತಿನಿಧಿಗಳ ಅಭಿಪ್ರಾಯ, ಮನ್ನಣೆ ಪಡೆಯದೆ ಕಾಯ್ದೆಗಳನ್ನು ತರುವ ಮೂಲಕ ಸಂಸದೀಯ ಪ್ರಜಾಪ್ರಭುತ್ವವನ್ನು ನಿರ್ಲಕ್ಷಿಸುತ್ತಿರುವುದು ಒಂದು ಅಪಾಯವಾದರೆ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುವ ಮೂಲಕ, ವಿರೋಧ ಪಕ್ಷದ ಪ್ರಮುಖ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ರಚನಾತ್ಮಕ ವಿರೋಧ ಪಕ್ಷವೇ ಇರದಂತೆ ಮಾಡಲು ಹೊರಟಿರುವುದು ಮತ್ತೊಂದು ಅಪಾಯ. ಅಪರಾಧಿ ಹಿನ್ನಲೆಯುಳ್ಳ ಅಭ್ಯರ್ಥಿಗಳಿರುವ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತಕೇಳುವ, ಚುನಾವಣಾ ಬಾಂಡ್ ಹೆಸರಿನಲ್ಲಿ ಹಲವಾರು ಕಂಪನಿಗಳಿಂದ ಕೋಟಿ ಕೋಟಿ ಪಡೆದಿರುವ ಹಣದಲ್ಲಿ ಚುನಾವಣೆ ಎದುರಿಸುತ್ತಿರುವ ಪಕ್ಷ ಅಥವಾ ಪಕ್ಷಗಳಿಂದ ಮುಕ್ತ ಹಾಗೂ ನ್ಯಾಯಯುತ ಚುನಾವಣೆಯನ್ನು ನಿರೀಕ್ಷಿಸುವುದು ಅಸಾಧ್ಯದ ಮಾತು. ಇದರಿಂದಾಗಿ ಬಾಬಾ ಸಾಹೇಬರು ಹೇಳಿದ ಸಂಸದೀಯ ಪ್ರಜಾಪ್ರಭುತ್ವ ಕುಸಿದು ಭಾರತ ಅವನತಿ ಕಡೆ ಸಾಗುತ್ತಿದೆ ಎಂಬುದನ್ನು ಅರಿತು ಎಚ್ಚರ ವಹಿಸಬೇಕಿದೆ. 


    ಸಂವಿಧಾನದ ಬಗ್ಗೆ ಬಿಜೆಪಿಯವರ ನಡೆಯನ್ನು ಪ್ರಶ್ನಿಸಿದಾಗ ‘ಅಂಬೇಡ್ಕರ್‌ರವರೇ ಸಂವಿಧಾನ ಸುಡುತ್ತೇನೆ ಎಂದಿದ್ದರು” ಎಂದು ಸಂವಿಧಾನ ಕುರಿತಾದ ತಮ್ಮ ಹೇಳಿಕೆ ಮತ್ತು ಕ್ರಿಯೆಗಳನ್ನು ಸಮರ್ಥಿಸಿಕೊಳ್ಳಲು ಅವರು ಸದಾ ಹೇಳುವುದನ್ನು ಕೇಳಿದ್ದೇನೆ. ಇವು ಪೂರ್ಣ ಸತ್ಯದ ಮಾತುಗಳಾಗಿರದೆ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಆಡುವ ಮಾತುಗಳು. ಈ ಹಿನ್ನಲೆಯಲ್ಲಿ ಬಾಬಾ ಸಾಹೇಬರು ಏನು ಹೇಳಿದ್ದಾರೆ ಎಂಬುದನ್ನು ನೋಡಿದರೆ ತಿಳಿಯುತ್ತದೆ.


   2ನೇ ಸೆಪ್ಟಂಬರ್ 1953 ರಂದು ಆಂಧ್ರ ರಾಜ್ಯ ಮಸೂದೆ, 1953 ರ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಯುವಾಗ ಡಾ. ಕೆ.ಎನ್. ಕಟ್ಜು ರವರು ‘ನೀವೆ ಅಲ್ಲವೆ ಸಂವಿಧಾನ ರಚಿಸಿದ್ದು’ ಎಂಬ ತೀಕ್ಷ್ಣವಾದ ವ್ಯಂಗ್ಯದ ಮಾತಿಗೆ ಸಿಟ್ಟಿಗೆದ್ದ ಬಾಬಾ ಸಾಹೇಬರು “ನಿಮ್ಮೆಲ್ಲ ನ್ಯೂನ್ಯತೆಗಳಿಗೆ ನನ್ನನ್ನು ದೂರಲು ಬಯಸುತ್ತಿದ್ದೀರಿ... ಒಂದು ವೇಳೆ ಸಂವಿಧಾನವು ಯಾರಿಗೂ ಸರಿ ಹೊಂದುವುದಿಲ್ಲ ಎಂಬುವುದಾದರೆ ನನಗೂ ಅದು ಬೇಕಾಗಿಲ್ಲ. ಅದನ್ನು ಸುಟ್ಟು ಹಾಕುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ ಎಂದು ಹೇಳಲು ಸಿದ್ದಗೊಂಡಿದ್ದೇನೆ”*6 ಎಂದು ಉತ್ತರಿಸುತ್ತಾರೆ. 


   ಅದಾದ ಎರಡು ವರ್ಷಗಳ ನಂತರ ಸಂವಿಧಾನ(ನಾಲ್ಕನೆ ತಿದ್ದುಪಡಿ) ಮಸೂದೆ, 1954 ರ ಕುರಿತು 19ನೇ ಮಾರ್ಚ್ 1955 ರಂದು ರಾಜ್ಯಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆ ಡಾ.ಅನೂಪ್ ಸಿಂಗ್ ಎಂಬ ಸದಸ್ಯರು ಬಾಬಾ ಸಾಹೇಬರಿಗೆ ‘ಕಳೆದ ಸಾರಿ ಮಾತನಾಡುವಾಗ ಸಂವಿಧಾನವನ್ನು ಸುಟ್ಟು ಹಾಕುತ್ತೇನೆ ಎಂದು ಹೇಳಿದ್ರಿ’ ಎಂದು ಕೇಳುತ್ತಾರೆ. ಅದಕ್ಕೆ ಬಾಬಾ ಸಾಹೇಬರ ಉತ್ತರ ಹೀಗಿತ್ತು. 


“ಅದಕ್ಕೆ ನಿಮಗೆ ಉತ್ತರ ಬೇಕೆ? ಈಗಲೇ ಉತ್ತರಿಸುತ್ತೇನೆ. ಅವಸರದಲ್ಲಿ ನಾನಾಗ ಉತ್ತರಿಸಲಿಲ್ಲ, ನನ್ನ ಸ್ನೇಹಿತರು ಅದಕ್ಕೆ ಈಗ ಅವಕಾಶ ಒದಗಿಸಿ ಕೊಟ್ಟಿದ್ದಾರೆ. ನಾನು ಕಾರಣವನ್ನು ಕೊಡಲೇಬೇಕು. ಕಾರಣವೇನೆಂದರೆ; ನಾವು ದೇವರು ಬಂದು ನೆಲೆಗೊಳ್ಳಲಿ ಎಂದು ದೇವಸ್ಥಾನ ಕಟ್ಟಿದೆವು, ಆದರೆ ದೇವರು ಬಂದು ನೆಲೆಗೊಳ್ಳುವ ಮುನ್ನವೇ ದೆವ್ವ ಬಂದು ಅದನ್ನು ಆಕ್ರಮಿಸಿಕೊಂಡಿದೆ. ದೇವಸ್ಥಾನವನ್ನು ನಿರ್ನಾಮಗೊಳಿಸದೆ ಬೇರೇನನ್ನು ಮಾಡಲು ಸಾಧ್ಯ?. ಅಸುರರು ಅದನ್ನು ಆಕ್ರಮಿಸುವುದು ನಮ್ಮ ಉದ್ದೇಶ ಆಗಿರಲಿಲ್ಲ. ದೇವರುಗಳು ನೆಲೆಗೊಳ್ಳಬೇಕೆಂಬುದು ನಮ್ಮ ಉದ್ದೇಶ ಆಗಿತ್ತು. ಆ ಕಾರಣಕ್ಕಾಗಿ ನಾನು ಸುಟ್ಟು ಹಾಕುತ್ತೇನೆ ಎಂದು ಹೇಳಿದೆ”.*6


   ಬಾಬಾ ಸಾಹೇಬರ ಉತ್ತರಕ್ಕೆ ಪ್ರತಿಕ್ರಿಯಿಸಿದ ಬಿಹಾರದ ಸದಸ್ಯರಾದ ಬಿ.ಕೆ.ಪಿ.ಸಿನ್ಹಾರವರು “ದೇವಸ್ಥಾನದ ಬದಲಿಗೆ ದೆವ್ವವನ್ನು ನಿರ್ನಾಮ ಮಾಡಿ” ಎಂದು ಹೇಳುತ್ತಾರೆ.


ಈಗ ನಾವೇನು ಮಾಡೋಣ?


    ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ ದೇಶವನ್ನು ರಕ್ಷಿಸಬೇಕಾದರೆ ಮೌನ ಮುರಿದು ಮಾತನಾಡಲು ತೊಡಗಬೇಕು. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಯಾವ ರೀತಿ ಬುಡಮೇಲು ಮಾಡಲಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸಲು ಕಾರ್ಯೋನ್ಮುಖರಾಗಬೇಕು. ಆ ಮೂಲಕ ದೇಶದ ಈ ದುಸ್ಥಿತಿಗೆ ಕಾರಣರಾಗಿರುವವರನ್ನು ಈ ಚುನಾವಣೆಯಲ್ಲಿ ಕಿತ್ತೊಗೆಯಲು ಪಣತೊಟ್ಟು ಕೆಲಸ ಮಾಡುವ ಮೂಲಕ ಬಾಬಾ ಸಾಹೇಬರನ್ನು ಗೌರವಿಸಬೇಕಿದೆ. 


*1 - ಫ್ರಂಟ್ ಲೈನ್ ದಿನಾಂಕ;12.12024 ರ ವಿಶೇಷ ಸಂಚಿಕೆ. 
*2 - ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳು(ನಡಾವಳಿಗಳು)-ಸಂಪುಟ 10
*3- ಅಭಿನವ್ ಚಂದ್ರಚೂಡ್‌ರ ‘ರಿಪಬ್ಲಿಕ್ ಆಫ್ ರಿಲೀಜಿಯನ್’ ಪುಸ್ತಕ, ಪುಟ-175
*4- ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು-ಸಂಪುಟ-17(1), ಪುಟ-66
*5- ಡಾ. ಅಂಬೇಡ್ಕರ್ ಜೊತೆಗಿನ ಅನುಭವಗಳು-ಮೂಲ: ನಾನಕ್ ಚಂದ್ ರತ್ತು ಮತ್ತು ಡಾ.ಶಂಕರಾನAದ ಶಾಸ್ತಿç, ಸಂಪಾದಕರು: ಪ್ರೊ.ಎನ್.ಆರ್ ಶಿವರಾಂ,ಪುಟಗಳು-
 842-844.
*6- ಡಾ. ಅಂಬೇಡ್ಕರ್‌ರವರ ರಾಜ್ಯಸಭೆಯಲ್ಲಿನ ಭಾಷಣಗಳು-ಪುಟಗಳು 43-44 & 154. 

(ಲೇಖಕರು ರಾಜ್ಯ ಹೈಕೋರ್ಟ್ ನ್ಯಾಯವಾದಿಯಾಗಿ ಕರ‍್ಯನಿರ್ವಹಿಸುತ್ತಿದ್ದಾರೆ. ದೂರವಾಣಿ ಸಂ. 9448004461)