“ ಕಂಬಕ್ಕೆ ಕಟ್ಟಿ, ಕೆಂಡಕ್ಕೆ ಮೆಣಸನಕಾಯಿ ಊದ್ರ ಹಾಕಿದಾಗ !” ಡಾ.ಹೆಚ್.ವಿ.ರಂಗಸ್ವಾಮಿ
“ ಕಂಬಕ್ಕೆ ಕಟ್ಟಿ, ಕೆಂಡಕ್ಕೆ ಮೆಣಸನಕಾಯಿ ಊದ್ರ ಹಾಕಿದಾಗ !” ಡಾ.ಹೆಚ್.ವಿ.ರಂಗಸ್ವಾಮಿ
“ ಕಂಬಕ್ಕೆ ಕಟ್ಟಿ, ಕೆಂಡಕ್ಕೆ ಮೆಣಸನಕಾಯಿ ಊದ್ರ ಹಾಕಿದಾಗ !”
ಡಾ.ಹೆಚ್.ವಿ.ರಂಗಸ್ವಾಮಿ
ನಮ್ಮ ವಾಸ್ತವ್ಯಕ್ಕೆ ಚಿಕ್ಕಮಗಳೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯವಸ್ಥೆಯಾಗಿತ್ತು. ಮುಂದೆ ವಿಶಾಲ ಮೈದಾನದಲ್ಲಿ ಸ್ಕೌಟ್ ಕ್ಯಾಂಪ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ವಾತಾವರಣ ಆಹ್ಲಾದಕರವಾಗಿತ್ತು.ನಾವು ಇಲ್ಲಿಗೆ ತಲುಪುವಷ್ಟರಲ್ಲಿ ಬೇರೆಲ್ಲಾ ಕಡೆಯಿಂದ ಬಂದವರು ಆಗಲೆ ತಳ ಊರಿದ್ದರು. ರಾತ್ರಿ ಊಟಕ್ಕೆ ತಟ್ಟೆ ಹಿಡಿದುಕೊಂಡು ಎಲ್ಲರೊಂದಿಗೆ ಕೂತು ಊಟ ಮಾಡುವ ಹೊಸ ಅನುಭವವಾಯ್ತು. ನಾನು ಇದುವರೆಗೆ ಎಂದೂ ನಾನಾಗಿಯೇ ಊಟದ ತಟ್ಟೆ ತೊಳೆದದ್ದು ನನಗೆ ನೆನಪೇ ಇಲ್ಲ. ನಮ್ಮೂರಿನಲ್ಲಿ ಗಂಡಸರಾರೂ ತಟ್ಟೆ ತೊಳೆದದ್ದನ್ನು ನಾನು ನೋಡಿಯೇ ಇರಲಿಲ್ಲ. ನಮ್ಮ ಮನೆಯಲ್ಲಿಯೂ ಅಷ್ಟೆ ಬಡಿಸುವುದು, ತಟ್ಟೆ ತೊಳೆಯುವುದೆಲ್ಲ ಅಮ್ಮನ ಕೆಲಸವೆ. ಇಲ್ಲಿ ಹುಡುಗಿಯರು, ಹುಡುಗರು ಒಟ್ಟಾಗಿ ಊಟ ಮಾಡುವುದಲ್ಲದೆ ತಟ್ಟೆ ತೊಳೆಯುದನ್ನು ನೋಡಿದ ನಮಗೆ ಒಂದು ವಿಚಿತ್ರ ಅನುಭವವಾಯ್ತು. ಆದರೆ ನಮ್ಮ ಜೊತೆಯೇ ಬಂದಿದ್ದ ಹೆನ್ರಿ ಅನ್ನುವ ಕ್ರಿಶ್ಚಿಯನ್‌ಹುಡುಗ ಮಾತ್ರ ಯಾವ ಸಂಕೋಚವಿಲ್ಲದೆ ತಟ್ಟೆ ತೊಳೆಯುತ್ತಿದ್ದ. ಇವನಿಂದ ನಮಗೂ ಸ್ವಲ್ಪ ʼಟ್ರೇನಿಂಗ್ʼ ಆಯ್ತು.
ಸಾಮಾನ್ಯವಾಗಿ ಹೊರ ಸಂಚಾರ, ಪಿಕ್ನಿಕ್ ಅಂತೆಲ್ಲಾ ಡಿ. ಹೊಸಹಳ್ಳಿ ಪ್ರೈಮರಿ ಶಾಲೆಯಿಂದ ಹೊರಗೆ ಕರೆದುಕೊಂಡು ಹೋದಾಗ ನಮ್ಮನ್ನ ಬೇರೆ ಪಂಕ್ತಿಯಲ್ಲಿ ಕೂರಿಸುತ್ತಿದ್ದುದು ನಮಗೆ ತುಂಬಾ ಕಸಿವಿಸಿಯಾಗುತ್ತಿತ್ತು. ಆದರೆ ಈ ಕ್ಯಾಂಪಿನಲ್ಲಿ ಅಂತಹ ಯಾವುದೇ ಬೇದ ಭಾವಗಳು ಗೋಚರಿಸಲೇ ಇಲ್ಲ. ಹೊರ ಜಗತು ನಾವು ಅಂದುಕೊಂಡದ್ದಕ್ಕಿಂತ ಭಿನ್ನವಾಗಿಯೂ ಇರುತ್ತದೆ ಅನ್ನುವುದು ಅನುಭವಕ್ಕೆ ಬಂತು.
ನನಗೆ ಪೇಟೆ ವಾತಾವರಣವೇ ಹೊಸತು! ನಮ್ಮ ಊರಿಗೆ ಹೊಸದಾಗಿ ಕರೆಂಟು ಕಂಬಗಳನ್ನು ನೆಟ್ಟು ಮನೆ-ಮನೆಗೆ ಬಲ್ಬುಗಳನ್ನ ಹಾಕಿ ಸ್ವಿಚ್‌ಹಾಕಿದರೆ ಪಕ್ಕನೆ ಬೆಳಕು ಹರಡಿಕೊಳ್ಳವುದೇ ಸೋಜಿಗವಾಗಿತ್ತು. ಆದರೆ ಈ ಊರಿನಲ್ಲಿ ಕತ್ತಲು ಆವರಿಸುತ್ತಾ, ಆವರಿಸುತ್ತಾ ಮೇಲೆ ಆಕಾಶದಲ್ಲಿ ಕಾಣುವ ಚುಕ್ಕಿಗಳಿಗಿಂತಲೂ ಜಾಸ್ತೀನೆ ಬಲ್ಬುಗಳು ಉರಿಯುತ್ತಾ ನಮ್ಮ ಸುತ್ತಲಿನ ಪರಿಸರವೆಲ್ಲಾ ಆ ಕಗ್ಗತ್ತಲಲ್ಲೂ ದ್ವೇದೀಪ್ಯಮಾನ್ಯವಾಗಿ ಬೆಳಗುತ್ತಿದ್ದಂತೆ ಯಾವುದೋ ಕಿನ್ನರ ಲೋಕಕ್ಕೆ ಬಂದಂತಹ ಅನುಭವವಾಗತೊಡಗಿತು. ನಾವು ವಾಸ್ತವ್ಯ ಹೂಡಿದ್ದ ರೂಮು ಮೊದಲನೆಯದೋ, ಎರಡನೆ ಮಹಡಿ ಇರಬೇಕು. ಆಗ ಈ ಪಾಲಿಟೆಕ್ನಿಕ್ ಕಾಲೇಜು ಊರಿನ ಸರಹದ್ದಿನಲ್ಲಿರಲಾಗಿ, ಚಿಕ್ಕಮಗಳೂರು ಪೇಟೆಯು ನಮ್ಮ ರೂಮಿನ ಬಲ ಭಾಗಕ್ಕೆ ಹರಡಿಕೊಂಡಿತ್ತು. ಅದು ಆ ಭಾಗದ ಕೊನೆಯ ರೂಮೂ ಆಗಿರಲಾಗಿ, ಮಹಡಿ ಭಾಗದಲ್ಲೂ ಇರಲಾಗಿ, ಕಾರಿಡಾರಿನ ಹೊರಗೆ ಬಂದು ಪೇಟೆ ಕಡೆ ಕಣ್ಣಾಯಿಸಿದರೆ ಬರೀ ಬೆಳಕೇ ಬೆಳಕು! ಅದು ವರ್ಣಣಾತೀತವಾದ ಅನುಭವ ನನಗೆ. ಎಲ್ಲಾ ಗಾಢ ನಿದ್ರೆಯಲ್ಲಿದ್ದರೆ ನಾನು ಈ ನಯನ ಮನೋಹರವಾದ ದೃಷ್ಯವನ್ನು ಕಣ್ಣು ತುಂಬಿಕೋಳ್ಳವುರಲ್ಲೇ ಮಗ್ನನಾಗಿದ್ದೆ. ಮಾರನೆ ದಿನ ಹೆನ್ರಿಗೆ ಇದೇ ರೀತಿ ರಾತ್ರಿ ಸೌಂದರ್ಯವನ್ನು ನೋಡಲು ಕರೆದರೆ, “ಅದೇನ್ ನೋಡ್ತೀಯ?” ಅಂತ ತಾತ್ಸಾರದಿಂದ ನನ್ನ ಕಡೆ ನೋಡಿ ಒಳಗೆ ಹೋಗಿ ಮಲಗಿಯೇ ಬಿಟ್ಟ.
ನಾನು ಆಗ ಅದೆಷ್ಟು ಪೆದ್ದನಾಗಿದ್ದೆ ಅನ್ನುವುದಕ್ಕೆ ಈ ಹೆನ್ರಿಯ ಸಹವಾಸದಿಂದ ಆದ ಒಂದು ವಿಶಿಷ್ಠ ಅನುಭವವನ್ನ ಹೇಳಲೇಬೇಕು. ಮಾರನೆ ದಿನ ಬೆಳಿಗ್ಗೆ ಈ ಹೆನ್ರಿ ಒಂದು ಪೆಟ್ಟಿಗೆ ಅಂಗಡಿಗೆ ಕರೆದುಕೊಂಡು ಹೋಗಿ ಒಂದು ಕ್ರಶ್ ಕುಡಿಯೋಣ ಅಂದ-ಅಂದರೆ ಈಗಿನ ಸೋಡಾ ಬಾಟಲಿ ತರದ್ದು. ಅಂಗಡಿಯವನು ಬೆರಳಿನಿಂದ ಅದುಮಿ ಕ್ರಷ್‌ಬಾಟಲಿ ತೆರೆಯುತ್ತಿದ್ದಂತೆ ಮಾಂಬೇರಿ ಸದ್ದಿನೊಂದಿಗೆ ಬಾಟಲಿ ತೆರೆದುಕೊಂಡಿದ್ದಲ್ಲದೆ, ಠುಸ್ ಅಂತ ಶಬ್ದದೊಂದಿಗೆ ಹೊಗೆಯಾಕಾರದಲ್ಲಿ ಗಾಳಿಯೂ ಚಿಮ್ಮಲಾಗಿ ನನಗೆ ಏನೋ ಆತಂಕ ಶುರುವಾಗಿ ಹೆನ್ರಿ ಮುಖ ನೋಡಿದೆ. ಅವನು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡವನೆ ತನ್ನ ಕೈಲಿದ್ದ ಬಾಟಲಿಯನ್ನ ಬಾಯಿಗೆ ಆನಿಸಿ ಕತ್ತು ಮೇಲೆತ್ತಿ ಆಕಾಶದ ಕಡೆ ದೃಷ್ಟಿ ನೆಟ್ಟು ಗಟ-ಗಟ ಕುಡಿದು ಒಂದು ಬಾರಿ ತೇಗಿಬಿಟ್ಟ! ಈಗ ನನ್ನ ಸರದಿ. ನಾನು ಅವನು ಮಾಡಿದಂತಯೇ ಮಾಡಿದೆ, ಇನ್ನೇನು ಮುಗಿಯಬೇಕು ಅನ್ನವಷ್ಟರಲ್ಲಿ ಮೂಗಿನಿಂದ ಬಿಸಿ ಆವಿ ಒಂದೇ ಬಾರಿಗೆ ಹೊರ ನುಗ್ಗಬೇಕೆ? ಅಪ್ಪನ ಜೊತೆ ಸೇಂದಿ ಅಂಗಡಿಯಲ್ಲಿ ಸ್ವಲ್ಪ ಏರಿಸಿದ್ದಾಗ, ಹುಳಿ-ಹುಳಿ ಅನುಭವವಾಗಿತ್ತೇ ವಿನ: ಈ ರೀತಿ ಮೂಗು, ಮುಸುಡಿಯಿಂದೆಲ್ಲಾ ಏನೋ ನುಗ್ಗಿದ ಅನುಭವವಾಗಿರಲಿಲ್ಲ.
“ನೀನಿನ್ನೂ ಓದೋ ಹುಡುಗ, ನೀನೆಲ್ಲಿಯಾದ್ರೂ ಕುಡಿಯೋದು ಕಲ್ತು ಬಿಟ್ಟೀಯ?!” ಅನ್ನುವ ಅಪ್ಪನ ಮಾತು ನೆನಪಾಗಿ ಈ ಹೆನ್ರಿ ಮೇಲೆ ಗುಮಾನಿ ಶುರುವಾಯ್ತು. ನಾನೆಲ್ಲಿ ಅಪ್ಪನ ತರ ತೂರಾಡುವೆನೋ ಅಂತ ಬೇರೆ ಗಾಬರಿಯಾಯ್ತು. ಆದರೆ ನನ್ನ ಪರಿಸ್ಥಿತಿ ನೋಡಿ ಅವನಿಗೆ ನಗು ತಡೆಯಲಾಗುತ್ತಿಲ್ಲ. ಅವನು ನಕ್ಕಿದ್ದು ನನಗೆ ಕುಹಕದಂತೆ ಕಾಣಲಾಗಿ, ನಾನು ಅಲ್ಲಿಂದ ಅವನ ಮೇಲೆ ಮುನಿಸಿಕೊಂಡು ಜಿ ಆರ್‌ಎಂ ಮಾಸ್ತರಲ್ಲಿಗೆ ಬಂದು ದೂರಿದೆ. ಅವರು ಹೆನ್ರಿಯನ್ನ ಕರೆಸಿ ಅದೇನು ಅಂತ ವಿಚಾರಿಸಿ ತಿಳಿದುಕೊಂಡು, ಅವರೂ ಸಣ್ಣದಾಗಿ ನಕ್ಕು “ಅದೇನೂ ಆಗಲ್ಲ ಬಿಡು” ಅಂದ ಮೇಲೆಯೇ ನನಗೆ ಸಮಾಧಾನವಾದದ್ದು.
ಚಿಕ್ಕಮಗಳೂರಿಗೆ ಹೋಗಿ ಬಂದದ್ದು ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತು. ಹೊರ ಜಗತ್ತಿಗೆ ಹಳ್ಳಿಗಮಾರನೊಬ್ಬ ತೆರೆದುಕೊಂಡ ಸನ್ನಿವೇಶವಾಗಿತ್ತು. ಅಲ್ಲಿಯವರಗೂ ಮಾಲ್ಗುಡಿ ಡೇಸ್‌ನ ಹೀರೋ ತರವೇ ಇದ್ದವನು ನಾನು.
ಆಣೆಗೆರೆಯಲ್ಲಿದ್ದಾಗ ಬೆಲಗೂರಿನ ಟೆಂಟಿಗೆ ಸಂಪತ್ತಿಗೆ ಸವಾಲ್‌ಸಿನಿಮಾ ಬಂದಿತ್ತು. ಈ ಸಿನಿಮಾ ನೋಡಿ ಬಂದವರು ರಾಜಕುಮಾರ್ ತರ ಎಮ್ಮೆ ಮೇಲೆ ಕೂತು ʼ ನಗುವುದೋ, ಅಳುವುದೋ…. ʼ ಹಾಡು ಹೇಳುವುದನ್ನು ಶುರು ಮಾಡಿದರು. ಅದೂ ಸ್ಕೂಲಿನಲ್ಲಿ ಆಟಕ್ಕೆ ಬಿಟ್ಟಾಗ ಒಬ್ಬ ಎಮ್ಮೆಯಾಗಿ ಬಗ್ಗುತ್ತಿದ್ದ. ಇನ್ನೊಬ್ಬ ರಾಜಕುಮಾರನ ಪಾತ್ರಧಾರಿ ಒಂದು ಕಡ್ಡಿ ಹಿಡಿದುಕೊಂಡು ಅವನ ಮೇಲೆ ಹತ್ತಿ, ಸಂಪತ್ತಿಗೆ ಸವಾಲ್‌ಸಿನಿಮಾದಲ್ಲಿ ರಾಜಕುಮಾರ ಎಮ್ಮೆ ಮೇಲೆ ಕೂತು ಅದನ್ನು ಹುರಿದುಂಬಿಸುತ್ತಾ ಕೈ ಬೀಸಿಕೊಂಡು ದುಖ:ತಪ್ತನಾಗಿ ಹಾಡಲು ಶುರು ಮಾಡಿದರು. ಮತ್ತೆ ಕೆಲವರು ರಾಜಕುಮಾರ ಮತ್ತೆ ಮಂಜುಳಾರ ತರವೇ ʼ ಹಳೇ ಬೇವರ್ಸಿ……. ಹಳೆ ಬಿಕನಾಸಿ… ಹೋಗಲೇ…ʼ ಅಂತ ಹೇಳುತ್ತಾ ನಾಟಕೀಯ ವಾತಾವರಣ ಉಂಟು ಮಾಡಲಾಗಿ ನಮಗೆ ತಡೆಯಲಾರದಷ್ಟು ಕುತೂಹಲ ಉಂಟಾಯ್ತು. ನಾನು ಈ ಹಿಂದೆ ಹೇಳಿದಂತೆ, ಮತ್ತೆ ನಾನು ಮತ್ತೆ ಓಂಕಾರ ಈ ಹಿಂದಿನ ಕೃತ್ಯವನ್ನೇ ಪುನರಾವರ್ತಿಸಿದೆವು. ನಮಗೆ ಆಗ ಅಪ್ಪ-ಅಮ್ಮರ ಹತ್ತಿರ ಸಿನಿಮಾಕ್ಕೆ ಹೋಗುವ ಬಗ್ಗೆ ಪ್ರಸ್ತಾಪಿಸಲು ಸಾಧ್ಯವೇ ಇರಲಿಲ್ಲ. ಹಂಗಾಗಿ ಸ್ವಂತ ಸಂಪಾದನೆ ಇಲ್ಲದ ನಾವು ಕಳ್ಳ ಮಾರ್ಗಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಿತ್ತು. ಒಂದೊಂದು ಬಾರಿ ಭಕ್ತ ಕುಂಭಾರ, ಬಾಲನಾಗಮ್ಮ ಶ್ರೀನಿವಾಸ ಕಲ್ಯಾಣದಂತಹ ಸಿನಿಮಾಗಳಿಗೆ ಸಂಸಾರ ಸಮೇತವಾಗಿ ಗಾಡಿ ಕಟ್ಟಿಕೊಂಡು ಕೆಲವರು ಹೊರಡುತ್ತಿದ್ದರು. ಅಷ್ಟೇನು ದೈವಭಕ್ತಿ ಮೈಮೇಲೆ ಎಳೆದುಕೊಂಡಿರದ ನಮಗೆ ಈ ಸಿನಿಮಾಗಳಿಗಿಂತ ಸಾಮಾಜಿಕ ಹಿನ್ನೆಲೆ ಸಿನಿಮಾಗಳೇ ಹೆಚ್ಚು ಪ್ರಿಯವಾಗುತ್ತಿದ್ದವು. ಹಂಗಾಗಿ ಬಡ ಕೂಲಿಕಾರ ರಾಜಕುಮಾರ, ಸಿರಿವಂತ ವಜ್ರಮುನಿಯ ಗರ್ವಭಂಗ ಮಾಡುವ ವಿವರಣೆಯನ್ನೂ ನಮ್ಮೂರಿನ ಹಿರೀಕರೂ ಮಾತಾಡಿಕೊಳ್ಳುತ್ತಿರಲಾಗಿ ತಡೆಯಲಾದೀತೆ? ಸರಿ ತೆಂಗಿನ ಕಾಯಿ ಇಳಿಸಿದ್ದೆ, ಮಾರಿದ್ದೆ, ಬೆಲಗೂರು ದಾರಿ ಹಿಡಿದದ್ದೆ.
ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಬೆಲಗೂರಿನಲ್ಲಿ ಸಂಪತ್ತಿಗೆ ಸವಾಲ್‌ನೋಡಿಕೊಂಡು ಬಂದು, ನಮ್ಮೂರಿನ ದೇವಸ್ಥಾನದ ದ್ವಾರ ಬಾಗಿಲಿನ ಭಾಗದಲ್ಲಿ ನಾವೇ ಪಾತ್ರಧಾರಿಗಳಾಗಿ ಸಂಪತ್ತಿಗೆ ಸವಾಲ್ ಸಿನಿಮಾದ ತಾಲೀಮು ಮಾಡಿಬಿಟ್ಟೆವು. ಪಾತ್ರಧಾರಿಗಳ ಮನೆಯಲ್ಲಿದ್ದ ನಾಮ, ಕುಂಕುಮ, ಪೌಡರ್‌ಗಳು ಮಾಯವಾಗಲಾಗಿ ಕೆಲವರು ಅವರ ಮಕ್ಕಳಿಗೆ ಬಯ್ದು, ಗದರಿಸಿದ್ದರಲ್ಲದೆ ಇಂತವೆಲ್ಲಾ ತುಡುಗುತನಗಳು ನನ್ನ ನೇತೃತ್ವದಲ್ಲಿ ಜರುಗುತ್ತಿರುವ ಬಗ್ಗೆ ಕಲಿಯುಗದ ದೂರ್ವಾಸನಂತಿದ್ದ ನನ್ನ ಅಪ್ಪನಿಗೆ ಛಾಡಿ ಹೇಳಿಬಿಟ್ಟಿದ್ದರು. ಕದ್ದು ಸಿನಿಮಾಕ್ಕೆ ಹೋದದ್ದಲ್ಲದೆ, ಹುಡುಗರನ್ನು ಕಟ್ಟಿಕೊಂಡು ಪೋಲಿ ಆಟಗಳಲ್ಲಿ ಕಾಲ ಕಳೆಯುತ್ತಿರುವ ಬಗ್ಗೆ ಕುಪಿತನಾದ ಅಪ್ಪ ನಾವು ಸಿನಿಮಾಕ್ಕೆ ಹೋಗಿ ಬಂದ ಮಾರನೆ ಬೆಳಿಗ್ಗೆ ನೀರು ಸೇದುವ ಹಗ್ಗದಿಂದ ನಮ್ಮ ಗುಡಿಸಿಲಿನ ಕಂಭಕ್ಕೆ ಕಟ್ಟಿಬಿಡಬೇಕೆ?! ನಮ್ಮಮ್ಮ ಏನೇ ಪರಿ ಪರಿ ಬೇಡಿಕೊಂಡರೂ ಅಪ್ಪ ಕೇಳಲೇ ಇಲ್ಲ. “ಇವನ್ನ ಹಿಂಗೇ ಬಿಟ್ರೆ ಪೋಲಿ ಬಿದ್ದು ಹಾಳಾಗೋಗ್ತಾನೆ, ಇವನಿಗೆ ಈಗಲೆ ಸರಿಯಾದ ಪಾಠ ಕಲಿಸಬೇಕು” ಅಂತ ಬಿಡಿಸಲು ಬಂದ ಅಮ್ಮನಿಗೆ ಮೆಣಸನ ಕಾಯಿ, ಒಲೆಯಲ್ಲಿದ್ದ ಕೆಂಡ ತರಲು ಆದೇಶ ಮಾಡಲಾಯ್ತು. ಗತ್ಯಂತರವಿಲ್ಲದೆ ಅಮ್ಮ ಆ ಸಾಮಗ್ರಿಗಳನ್ನ ತರಲಾಗಿ ಒಂದು ಮಣ್ಣಿನ ಬೋಕಿಯಲ್ಲಿ ಅವನ್ನು ಒಟ್ಟಿಗೆ ಹಾಕಿ ನನ್ನ ಕಾಲ ಬುಡದಲ್ಲಿಟ್ಟು ʼಮೆಣಸನ ಊದರುʼ ಹಾಕಿ ಬಿಡಲಾಗಿ ಮೂಗು, ಕಣ್ಣುಗಳೆಲ್ಲಲ್ಲಾ ಉರಿ ಉರಿಯಾಗಿ ಕಣ್ಣುಗಳಲ್ಲಿ ನೀರೂರಲು ಶುರುವಾಯ್ತು. ಈ ಶಿಕ್ಷೆಯಷ್ಟೆ ಆಗಿದ್ದರೆ ಪರವಾಗಿರಲಿಲ್ಲ. ನಮ್ಮೂರಿನ ನನ್ನ ಗೆಳೆಯರೆಲ್ಲ ಆ ಹೊಸಹಳ್ಳಿ ಕಡೆಯಿಂದ ಆಣೇಗೆರೆ ಶಾಲೆಗೆ ನಡೆದು ಹೋಗುತ್ತಿದ್ದ ಬೆಳಗಿನ ಸಮಯ ಇದು. ಹೊಸಹಳ್ಳಿ-ಆಣೇಗೆರೆ ರಸ್ತೆಯ ಪಕ್ಕದಲ್ಲೇ ಇದ್ದುದು ನಮ್ಮ ಗುಡಿಸಿಲು. ಈ ರೀತಿ ಅವರೆಲ್ಲಾ ನಮ್ಮ ಮನೆಗೆ ಹತ್ತಿರವಾಗುತ್ತಿದ್ದಂತೆ ನಾನೂ ಅವರೊಟ್ಟಿಗೆ ಸೇರಿಕೊಂಡು ಶಾಲೆಯವರೆಗೆ ನಡೆದುಕೊಂಡು ಹೋಗುವುದು ನಿತ್ಯದ ಕ್ರಮ. ಆದರೆ ಈ ದುರ್ದಿನ ನಾನು ಯಾವಾಗ ಅವರ ಕಣ್ಣಿಗೆ ಬೀಳಲಿಲ್ಲವೋ, ಅವರೆಲ್ಲಾ ನಮ್ಮ ಮನೆ ಕಡೆಗೆ “ರಂಗಸ್ವಾಮಿ ಎಲ್ಲಿ?” ಅಂತ ಕೇಳಿಕೊಂಡು ಬರುವುದು ನನಗೆ ನಿಚ್ಛಳವಾಗಿ ಗೋಚರಿಸಲಾಗಿ ಮುಂದೆ ಆಗಬಹುದಾದ ಅವಮಾನದಿಂದ ಪರಿತಪಿಸುವಂತಾಯ್ತು. ನನ್ನ ಬಗ್ಗೆ ವಿಚಾರಿಕೊಂಡು ನಮ್ಮ ಮನೆ ಕಡೆ ಬರುತ್ತಿದ್ದ ಹುಡುಗರನ್ನು ಕಂಡು ಮತ್ತಷ್ಟು ಉತ್ತೇಜಿತನಾದ ಅಪ್ಪ “ ಬರ್ರೀ ಬರ್ರೀ, ರಾಜಕುಮಾರನ್ನ ನೋಡ ಬರ್ರೀ” ಅಂತ ಕರೆಯಬೇಕೆ? ನಾನಂತೂ ಸುತಾರಾಂ ಕತ್ತು ಎತ್ತಲೇ ಇಲ್ಲ. ಈ ದೃಶ್ಯದಿಂದ ಬಾರೀ ಮಜಾ ಅನುಭವಿಸಿದ ಈ ಗೆಳೆಯರು ಸುಮ್ಮನಿರಲಾರದೆ ನಡೆದು ಶಾಲೆ ಕಡೆ ಹೋಗುತ್ತಿದ್ದ ನಮ್ಮೂರಿನ ಹುಡುಗಿಯರಿಗೆ “ಅಮ್ಮೀ ಬರ್ರಿ, ಬರ್ರಿ, ರಂಗಸ್ವಾಮೀನ ಅವರಪ್ಪ ಕಂಬಕ್ಕೆ ಕಟ್ಟ ಊದ್ರಾಕೀತೆ, ನೋಡ ಬರ್ರಿ” ಅಂತ ಕರೆದುಬಿಡಬೇಕೆ? ಅವರೂ ಬಂದು ನೋಡಿ ಮುಸಿ ಮುಸಿ ನಕ್ಕಂಡು ಹೋಗಿದ್ದು, ತಲೆ ಬಗ್ಗಿಸಿಕೊಂಡು ಏಸುಕ್ರಿಸ್ತನ ಭಂಗಿಯಲ್ಲಿದ್ದ ನನಗೆ ಅದೆಷ್ಟು ಅವಮಾನವಾಗಿರ ಬೇಡ. ಒಂದು ವಾರ ಪೂರ್ತಿ ಇದು ಸ್ಕೂಲಿನಲ್ಲಿ ಸುದ್ದಿಯಾಗಿ ನನ್ನ ಪರಿಸ್ಥಿತಿ ಏನಾಗಿರಬೇಡ?!