ರಂಗಾಂತರಂಗ    -  ಕೇಶವ ಮಳಗಿ  ಆಷಾಢದ ಒಂದು ದಿನ

ರಂಗಾಂತರಂಗ    -  ಕೇಶವ ಮಳಗಿ  ಆಷಾಢದ ಒಂದು ದಿನ

ರಂಗಾಂತರಂಗ    -  ಕೇಶವ ಮಳಗಿ   ಆಷಾಢದ ಒಂದು ದಿನ

ಮಹಾಕವಿಯ ಮಳೆಗಾಲದ ಅಳಲು-ಅಳುವಿಗೆ ಕೊನೆಯೇ ಇಲ್ಲ. ಮಹಾಕಾವ್ಯ ಬರೆದ ಆತ ವಿಧಿಯ ಲೀಲೆಯನು ತಿದ್ದಿ ಬರೆಯಲಾರ! ಅಷ್ಟರಲಿ, ಒಳಗೆ ಮಗು ಅಳುವುದು ಕೇಳುತ್ತಿದೆ. ಮಲ್ಲಿಕಾ ಕೋಣೆಯೆಡೆ ನಡೆದು ಮಗುವನ್ನು ಎತ್ತಿಕೊಳ್ಳುತ್ತಾಳೆ. ಹೊಸಲಿನತ್ತ ನಡೆಯುತ್ತಾಳೆ. ಕುಸಿದವಳಂತೆ ಕಿಟಕಿಯತ್ತ ಹೆಜ್ಜೆ ಹಾಕುತ್ತಾಳೆ. ಸುಧಾರಿಸಿಕೊಳ್ಳಲು ಎನ್ನುವಂತೆ ಮಗುವನ್ನು ಇನ್ನಷ್ಟು ಇನ್ನಷ್ಟು ಹತ್ತಿರಕ್ಕೆ ಸೆಳೆದು, ಬಾಚಿ ತಬ್ಬುತ್ತಾಳೆ. ಮಗುವಿಗೆ ಮುತ್ತಿಡಗೊಡಗಿದಂತೆ ಸಶಬ್ದ ಕಣ್ಣಿರು ಹನಿಸತೊಡಗುತ್ತಾಳೆ. ಹೊರಗೆ ಆಷಾಢದ ಮಿಂಚು-ಗುಡುಗು-ಮತ್ತು ಮಳೆ.

ರಂಗಾಂತರಂಗ    -  ಕೇಶವ ಮಳಗಿ

 ಆಷಾಢದ ಒಂದು ದಿನ

(ಮಳೆಯ ಅಬ್ಬರದಲ್ಲಿ ಕೊಚ್ಚಿ ಹೋದ ಕವಿಯೊಬ್ಬನ ಮುಗ್ಧಪ್ರೇಮ!)

आषाढस्य प्रथमदिवसे मेघमाश्लिष्टसानुं

वप्रक्रीडापरिणतगजप्रेक्षणीयं ददर्श॥१.२॥

 

ತೆಂಕಣದ ಆಗಸದಲಿ ಆಷಾಢದ ಮೊದಲ ದಿನ ದಾಂಗುಡಿಯಿಟ್ಟಿದೆ

ತುಂಟ ಆನೆಯು ಸೊಂಡಿಲು ಕೆಳಗಿಳಿಸುವ ತೆರದಿ ಮೋಡ ದಟ್ಟೈಸಿದೆ

(ಮೇಘದೂತ)

"ಅವ್ವಾ! ಮುಂಗಾರಿ ಮೊದಲ ಮಳೆ! ಎಂಥಾ ಮಳೆ! ಎಂಥಾ ಭೋರ್ಗರೆವ ಮಳೆ! ಬಹುದೂರದ ಬೆಟ್ಟದ ಬುಡಗಳು ಕೂಡ ತೊಯ್ದು ತೊಪ್ಪಡಿಯಾದವು. ಅವ್ವಾ! ನೋಡಿಲ್ಲಿ, ನಾ ಹೇಗೆ ನೆನೆದು ಹೋಗಿದ್ದೇನೆ! ತೆಂಕಣದಿಂದ ಹಾರಿ ಬರುವ ಬೆಳ್ಳಕ್ಕಿಗಳನ್ನು ನೋಡೋಣವೆಂದು ಹೊರಗೆ ಹೋದವಳು. ಈಗ ನೋಡು, ಹೇಗೆ ನನ್ನ ಬಟ್ಟೆಯೆಲ್ಲ ತೊಯ್ದು ಹೋಗಿವೆಯೆಂದು!"

***

***

ಮುಂಗಾಲು ಪುಟಿಗೆಯಲಿ ಕುಣಿಯುತ್ತ ಬಂದ ಮುಂಗಾರಿನ ಮೊದಲ ನಿತಾಂತ ಮಳೆಯಲ್ಲಿ ತನ್ನ ಇನಿಯನೊಂದಿಗೆ ನಲಿದು, ಕುಪ್ಪಳಿಸಿ ಬಂದು, ತನ್ನ ಅವ್ವನಿಗೆ ಅರೆಬರೆ ನಿಜವನಷ್ಟೇ ಅರುಹುತಿಹ ಈ ತರುಣಿಯ ಹೆಸರು ‘ಮಲ್ಲಿಕಾ’ ಎಂದುಕೊಳ್ಳೋಣ. ಬೆಟ್ಟ-ಕಣಿವೆಯ ಕೆಳಗಿನ ಹಾಡಿಯಲಿ ಬದುಕುತ್ತ, ಎದೆಯಲಿ ಎಂದೂ ಬತ್ತದ ಹಾಡುಗಳನು ತುಂಬಿಕೊಂಡು ಕವಿಯಾಗಲು ಹೊರಟ ಈಕೆಯ ಪ್ರಿಯಕರನಿಗೆ ‘ಕಾಳೀದಾಸ’ ಎಂದು ಹೆಸರಿಡೋಣ! ಹಳ್ಳಿಯ ಸಹಜ ಮುಗ್ಧತೆ, ಜನುಮಕ್ಕಾಗುವಷ್ಟು ಕನಸು ಮತ್ತು ಮಲ್ಲಿಕಾಳ ಬೆಟ್ಟದಂತಹ ಪ್ರೀತಿಯನು ಎದೆಯಲ್ಲಿ ಕಾಪಿಟ್ಟುಕೊಂಡ ಈ ಕವಿ ಈಗಷ್ಟೇ ‘ಋತುಸಂಹಾರ’ದ ಸಾಲುಗಳನು ಬರೆದು ಕಾವ್ಯದ ಕಮ್ಮಟದಲಿ ಕೈಯನು ಕಾಯಿಸಿ ಹದ ಮಾಡಿಕೊಳ್ಳುತಿರುವವನು.

ಕಾಲದ ಅಚ್ಚರಿ, ವಿಚಿತ್ರವೇ ಹಾಗೆ. ಈ ಗಾವಿಲ ಕಬ್ಬಿಗನ ಸಾಲುಗಳು ಅದು ಹೇಗೋ ರಾಜಧಾನಿ ಉಜ್ಜಯಿನಿಯ ಕಾವ್ಯ ರಸಿಕರನು ತಲುಪಿ ಅವರ ನಾಲಗೆಗಳಲಿ ಉಲಿದಿವೆ. ಅಲ್ಲಿನ ಅರಸು ಈತನನು ತನ್ನ ಒಡ್ಡೋಲಗದ ಕವಿಯನ್ನಾಗಿಸಿಕೊಂಡೇ ಸೈ ಎಂದು ಬೆಟ್ಟ-ಕಣಿವೆಗಳಿಂದ ಮರೆಯಾದ ಈ ಹಳ್ಳಿಗೆ ತನ್ನ ರಾಜದೂತನನು ಕಳಿಸಿದ್ದಾನೆ. ಮನೆಯಲ್ಲಿ, ಕವಿಯ ಮನದಲ್ಲಿ ಅಲ್ಲೋಲ-ಕಲ್ಲೋಲ. ತಾನು ಪ್ರೀತಿಸಿದ ನೆಲ, ಜನ, ಜಲ, ಮನದನ್ನೆಯರನು ಬಿಟ್ಟು ರಾಜಧಾನಿ ಸೇರಿ ದೊಡ್ಡ ಕವಿಯೆಂದು ಕರೆಯಿಸಿಕೊಳ್ಳುವುದು ಅವನಿಗೆ ಅಪಥ್ಯ.

"ನಾವಿಲ್ಲಿ ಮೊದಲಿಗಿಂತ ಸುಖವಾಗಿದ್ದೇವೆ. ನಮ್ಮ ನೋವೆಲ್ಲ ನಿಧಾನ ಕರಗುತಿವೆ. ನಮ್ಮ ಸ್ಥಿತಿ ಸುಧಾರಿಸುತಿದೆ. ಆತ ಅರಳೆಯಷ್ಟು ಮೃದುವಾದ ಬಾಣವನು ನನ್ನೆದೆಗೆ ಹೇಗೆ ಬಿಡಲು ಸಾಧ್ಯ? ಅದು ನನ್ನ ಮಡಿಲನ್ನು ಸುತ್ತಿದೆ. ನಾನು, ನಿನ್ನನ್ನು ನಿನ್ನ ಅಮ್ಮನ ಕಣ್ಣುಗಳಂತಿರುವ ಕಣ್ಣುಗಳಿವೆಯೊ, ಆಕೆಯ ಪ್ರೀತಿಯಂಥ ಪ್ರೀತಿ ಇದೆಯೋ ಅಲ್ಲಿಗೆ ನಿನ್ನನು ಕರೆದೊಯ್ಯುವೆ", ಎಂದು ಮಲ್ಲಿಕಾಳನ್ನು ನೋಡುತ್ತ ಹೇಳುತ್ತಾನೆ.

"ಹೌದೇ? ಅವ್ವ ಇವತ್ತು ಮುನಿಸಿಕೊಂಡಿದ್ದಾಳೆ. ಮಳೆಯಲ್ಲಿ ನಾನು ನಿನ್ನೊಂದಿಗೆ ಕುಣಿಯುತ್ತಿದುದು ಆಕೆಗೆ ಗೊತ್ತಾಗಿರಬೇಕು. ಇಲ್ಲದಿದ್ದರೆ, ನಾನು ಹೇಗೆ ಪೂರ್ತಿ ನೆನೆದು ಹೋಗುತ್ತಿದ್ದೆ? ಗಾಳಿಸುದ್ದಿಗಳಿಂದ ಅವ್ವ ಚಿಂತೆ ಹಚ್ಚಿಕೊಂಡು ಕೂತಿದ್ದಾಳೆ . . ."

ಮಲ್ಲಿಕಾಳ ಅವ್ವ ಅಂಬಿಕಾಳಿಗೆ ಕಾಳೀದಾಸನ ಕುರಿತು ಅಂತಹ ಮೆಚ್ಚುಗೆ ಏನಿಲ್ಲ. ಆತನೊಬ್ಬ ಅಲೆಮಾರಿ ಕುರಿಗಾಹಿ! ಎಂಬ ಅಸಡ್ಡೆಯೇ ಹೆಚ್ಚು. ಹೊಣೆಗಾರಿಕೆಯಿಲ್ಲದ ಈ ಹಳ್ಳಿಗ, ಚಂಚಲಚಿತ್ತ, ತನ್ನ ಮಗಳನ್ನೇನು ಸಾಕಿಯಾನು? ಎಂಬ ಆತಂಕ! ಈ ವಿಷಯಗಳು ಮಲ್ಲಿಕಾಳಿಗೆ ಗೊತ್ತು. ಹಾಗೆಂದೇ,

"ಅವಕಾಶಗಳು ಯಾರನ್ನೂ ಕಾಯುತ್ತ ಕೂರುವುದಿಲ್ಲ. ಕಾಳೀದಾಸ ಈ ಹಳ್ಳಿಯನ್ನು ಬಿಟ್ಟು ಹೋಗದಿದ್ದರೆ ಅರಮನೆಯ ಒಡ್ಡೋಲಗ ಕಳೆದುಕೊಳ್ಳುವುದು ಏನೂ ಇರೋಲ್ಲ. ಆಸ್ಥಾನ ಕವಿಯ ಸ್ಥಾನ ಕೂಡ ಖಾಲಿಯಾಗಿ ಉಳಿಯೋದಿಲ್ಲ. ಆದರೆ, ಕಾಳೀದಾಸ ಮಾತ್ರ ತನ್ನ ಬದುಕಿಡೀ ಈಗ ಹೇಗಿದ್ದಾನೋ ಹಾಗೆಯೇ ಉಳಿದುಬಿಡುತ್ತಾನೆ. ಒಬ್ಬ ಸ್ಥಳೀಯ ಕವಿ! ಇವತ್ತು ನಿನ್ನ ‘ಋತುಸಂಹಾರ’ವನ್ನು ಹೊಗಳುವ ಜನ ಕೂಡ ಸ್ವಲ್ಪ ಕಾಲವಾದ ಮೇಲೆ ಮರೆತುಬಿಡುತ್ತಾರೆ. ನಿನಗೀಗ ಆಶ್ರಯ ಬೇಕು. ಬೆಳೆದು ಪರಿಣಿತನಾಗಲು ನಿನಗೊಂದು ಒಳ್ಳೆಯ ಸ್ಥಾನ ಬೇಕು!"

ಪ್ರೇಮಿಗಳ ಮಾತು, ವಾಗ್ವಾದ ಹೀಗೆಯೇ ಸಾಗುತ್ತಿದೆ. ಕವಿ ಈಗ ಜನವಿದೂರ ಹಳ್ಳಿಯಲ್ಲಿನ ಕುರಿಗಾಹಿತನ ಮತ್ತು ಅರಮನೆಯ ಆಸ್ಥಾನ ಕವಿ ಪದವಿಯ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಸರಿ, ಒತ್ತಡಕ್ಕೆ ಮಣಿವ ಕಬ್ಬಿಗ ಎರಡನೆಯದ್ದೇ ಆಯುವನು! ಜತೆಗೆ, ತಾನು ಮಲ್ಲಿಕಾಳನ್ನಲ್ಲದೇ ಬೇರಾರನ್ನೂ ವರಿಸುವುದಿಲ್ಲವೆಂದು ಸಂಕಲ್ಪ ಮಾಡಿಕೊಂಡು ರಾಜಧಾನಿ ಉಜ್ಜಯಿನಿಯೆಡೆ ಕವಿಪಥವನು ಸವೆಸುವನು.

ಮನದನ್ನೆ ಮಲ್ಲಿಕಾ ಕೂಡ ಕಡಿಮೆಯೇನಲ್ಲ!

"ನಾನು ಮನಸ್ಸು ಹೇಳಿದಂತೆ ನಡೆದಿದ್ದೇನೆ. ಎಷ್ಟೋ ಸೆಳೆತಗಳ ನಡುವೆ ನನಗೆ ಬೇಕಿರುವುದನ್ನೇ ಆರಿಸಿಕೊಂಡಿದ್ದೇನೆ. ಉಳಿದೆಲ್ಲ ಬಂಧಗಳಿಗಿಂತ ನನಗೆ ಈ ಸಂಬಂಧವೇ ಅಂತಿಮ. ಅದು ಪರಿಶುದ್ಧ, ನವಿರು ಹಾಗೂ ಶಾಶ್ವತವಾದುದು" ಎಂದುಕೊಳ್ಳುವಳು.

********

ಸ್ವಲ್ಪ ಕಾಲ ಉರುಳಿತು. ಕವಿ ಅರಮನೆಯ ಸುಖದಲ್ಲಿ ಕಳೆದುಹೋಗಿದ್ದಾನೆ. ನೆಲದ ಋಣ, ಮನದೊಲವು ಮರೆತಿದ್ದಾನೆಂದು ಜನ ಆಡಿಕೊಳ್ಳುವರು. ಆದರೇನು? ಮಲ್ಲಿಕಾಳಿಗೆ ತಮ್ಮ ಪ್ರೀತಿಯ ಬಗ್ಗೆ ನಂಬಿಕೆ ಅಚಲ.

"ಅವನು ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವುದು ನನಗೆ ಸಂತೋಷವನ್ನೇ ಕೊಡುವುದು. ಇಲ್ಲಿದ್ದಾಗ ಆತ ಬರೆದುದು ‘ಋತುಸಂಹಾರದ’ದ ಸಾಲುಗಳನು ಮಾತ್ರ. ಇದೀಗ, ‘ಕುಮಾರ ಸಂಭವ’ ಮತ್ತು ‘ಮೇಘದೂತ’ಗಳನು ಬರೆದಿದ್ದಾನೆಂದು ಜನ ಹೇಳಿದಾಗ ನಾನೂ ಹೇಗೋ ಅವನ್ನು ಸಂಪಾದಿಸಿಕೊಂಡಿರುವೆ." ಎಂದು ಹೊರಗೆ ಹೇಳುತ್ತಿದ್ದಾಳಾದರೂ ಕಾಳೀದಾಸ ಪ್ರಯಾಂಗು ಮಂಜರಿ ಎಂಬ ತರುಣಿಯನ್ನು ಮದುವೆಯಾಗಿದ್ದಾನೆಂದೂ, ಆತನಿಗೆ ಅನೇಕ ಸಖಿಯರಿದ್ದಾರೆಂದೂ ಗಾಳಿಸುದ್ದಿ ಕೇಳಿ ತಲ್ಲಣಗೊಂಡಿದ್ದಾಳೆ. ಅವನು ಏನಾದರಾಗಲಿ ತಾನು ಮಾತ್ರ ತನ್ನ ಪ್ರೀತಿಯ ಹಣತೆ ಆರದಂತೆ ಕಾಪಿಟ್ಟುಕೊಳ್ಳುವೆನೆಂದು ಶಪಥ ಮಾಡಿದಂತೆ ಮದುವೆಯಾಗದೆ ಉಳಿದಿದ್ದಾಳೆ!

ಕಾಶ್ಮೀರಕ್ಕೆ ಹೋಗುವಾಗ ತನ್ನ ಹಳ್ಳಿಗೆ ಭೇಟಿ ನೀಡಿದರೂ ತನ್ನ ಮನದನ್ನೆ ಮಲ್ಲಿಕಾಳನ್ನು ಭೇಟಿಯಾಗುವುದನ್ನು ಕವಿ ತಪ್ಪಿಸಿಕೊಳ್ಳುತ್ತಾನೆ. ಆದರೆ, ಆತನ ಪತ್ನಿ ಪ್ರಿಯಾಂಗು ಮಂಜರಿ ಮಲ್ಲಿಕಾಳನ್ನು ಮುಖಾಮುಖಿಯಾಗುತ್ತಾಳೆ. ಕವಿ ನಿನ್ನನ್ನು, ನಿನ್ನ ಮನೆಯನ್ನು ಬಹುವಾಗಿ ನೆನಪಿಸಿಕೊಳ್ಳುತ್ತಾನೆ. ನಿಜ ಹೇಳಬೇಕೆಂದರೆ, ಮೇಘದೂತ ಬರೆಯುವಾಗ ಇಲ್ಲಿನ ಪ್ರತಿಯೊಂದನ್ನು ಆತ ಕಣ್ಣಿಗೆ ಕಟ್ಟಿದಂತೆ ಬಣ್ಣಿಸುತ್ತಿದ್ದ ಎನ್ನುತ್ತಾಳೆ. ಹಿಂದಿನ ಕಥೆ ಹೇಗಾದರೂ ಇರಲಿ ಪ್ರಿಯಾಂಗು ಬಂದಾಗ ಮಲ್ಲಿಕಾಳ ಮನೆ ಅಸ್ತವ್ಯಸ್ತವಾಗಿದೆ. ತಾಯಿ ಕಾಯಿಲೆಯಿಂದ ಜರ್ಜರಿತಳಾಗಿದ್ದಾಳೆ. ಕುಟುಂಬದ ರಕ್ಷಣೆ ಮಾಡುವವರು ಯಾರೂ ಇಲ್ಲದಿರುವುದರಿಂದ ಮನೆ-ಮನಗಳು ಸೊರಗಿ, ಖಾಲಿಯಾಗಿವೆ.

********

ಆಮೇಲೆ ಎಷ್ಟೋ ವರ್ಷಗಳು ಉರುಳಿವೆ. ಋತುಚಕ್ರ ತಿರುಗುತ್ತ ಮತ್ತೆ ಭರೋ ಮಳೆಗಾಲ ದಾಂಗುಡಿಯಿಟ್ಟಿದೆ. ಮನೆ ಇನ್ನಷ್ಟು ಶಿಥಿಲವಾಗಿದೆ. ಆ ಅವ್ಯಾಹತ ಮಳೆಯಲ್ಲಿ ಮನೆಗೆ ಬಂದ ಮಾತುಲನನ್ನು ‘ವಿಷಯವೇನೆಂದು?' ಮಲ್ಲಿಕಾ ಕೇಳುತ್ತಾಳೆ. ’ಕಾಶ್ಮೀರದ ಅರಸ ಅಸುನೀಗಿದನಂತೆ. ಅಧಿಕಾರ ಬಂಡುಕೋರರ ಕೈಗೆ ಹೋಗಿದೆ. ಕಾಳೀದಾಸ ಕಾಶ್ಮೀರ ತೊರೆದು ಹೋಗಿದ್ದಾನಂತೆ! ಆತ ಎಲ್ಲವನ್ನೂ ತ್ಯಜಿಸಿದ್ದಾನೆಂದು ಜನ ಹೇಳುತ್ತಾರೆ. ಉಜ್ಜಯಿನಿಗೆ ಹೋಗುವ ಬದಲು ಕಾಶಿಗೆ ಪಯಣ ಬೆಳೆಸಿದ್ದಾನಂತೆ’ ಎಂಬ ಸುದ್ದಿಯನ್ನು ಹೇಳುತ್ತಾನೆ.

ಒಳಗೇ ದುಃಖಿತಳಾದ ಮಲ್ಲಿಕಾ ದುರ್ವಿಧಿಗಾಗಿ ಮರಗುತ್ತಾಳೆ. ಮಳೆ-ಗುಡುಗು-ಸಿಡಿಲುಗಳಿಂದ ಆಕೆಯ ಮನಸ್ಸು ಜರ್ಜರಿತವಾಗಿದೆ. ಅಷ್ಟರಲ್ಲಿ, ಹೇಗೋ ತನ್ನ ಹಳ್ಳಿಯನ್ನು ತಲುಪಿದ್ದ ಕಾಳೀದಾಸ ಆಕೆಯ ಮನೆಗೂ ಬರುತ್ತಾನೆ! ‘ನನ್ನನ್ನು ನೀನು ಗುರುತು ಕೂಡ ಹಿಡಿಯಲಾರೆ!’ ಎಂದು ದುಃಖಿಸುತ್ತಾನೆ. ಪಶ್ಚಾತ್ತಾಪದಿಂದ ಮಹಾಕವಿ ಕುದಿಯುತ್ತಿದ್ದಾನೆ. ವಿರಹದ ಬೆಂಕಿಯನು ಬೇಯುತ್ತಿದ್ದಾನೆ. ಮಾತುಗಳು ಉಗ್ಗಡಿಸುತಿವೆ. ದನಿ ನಡುಗುತಿದೆ.

"ನನ್ನ ಅಧಿಕಾರದ ಆಸೆ, ಸ್ಥಾನ ಎಲ್ಲ ಹೊರಟುಹೋಗಿದೆ. ವರ್ಷಗಳಿಂದ ಹಿಡಿದಿಟ್ಟ ಬಂಧನದಿಂದ ನಾನಿಂದು ಮುಕ್ತನಾಗಿರುವೆ. ಕಾಶ್ಮೀರದ ಜನ ನಾನು ಎಲ್ಲವನ್ನೂ ಪರಿತ್ಯಾಗ ಮಾಡಿದ್ದೇನೆಂದು ಅಂದುಕೊಳ್ಳುತ್ತಾರೆ. ಆದರೆ. ನಾನು ಎಲ್ಲದರಿಂದ ಬಿಡುಗಡೆಗೊಂಡು ಮತ್ತೆ ಕಾಳೀದಾಸನಾಗಿದ್ದೇನೆ. ಈ ಊರು ಬಿಟ್ಟಾಗಿನಿಂದ ಇಲ್ಲಿನ ತಂತುವೊಂದು ನನ್ನನ್ನು ಸದಾ ಎಳೆಯುತ್ತಲೇ ಇತ್ತು. ಈ ಮನೆಯ ಪ್ರತಿ ವಸ್ತುವಿನ ಆಕಾರವೂ ನನಗೆ ಗೊತ್ತು. ಮಡಿಕೆ, ಕುಡಿಕೆ, ದೀಪದ ಬತ್ತಿ ಮತ್ತು ನಿನ್ನ ಕಣ್ಣಿನ ಬೆಳಕು.

"ನಾನು ಅಲ್ಲಿ ಬದುಕುತ್ತ ಎಲ್ಲವನ್ನೂ ಬರೆದೆ ಎಂದು ಜನ ತಿಳಿದುಕೊಳ್ಳುತ್ತಾರೆ. ಆದರೆ, ನಾನು ಬರೆದದ್ದೆಲ್ಲ ಹಳ್ಳಿಯಲ್ಲಿ ಬದುಕಿದ್ದಾಗಿನ ಅನುಭವ. ಈ ಹಿಮಾಲಯದ ಬೆಟ್ಟಗಳು ನನ್ನ ‘ಕುಮಾರ ಸಂಭವ’ದ ಹಿನ್ನೆಲೆಯಾಗಿವೆ. ಆ ಕೃತಿಯ ದೇವತೆ ‘ಉಮಾ,’ ನೀನೇ ಆಗಿದ್ದೀಯ. ಮೇಘದೂತದ ಮೋಡಗಳ ಬಯಕೆ-ಭಯ ಎಲ್ಲವೂ ನನ್ನವೇ. ನನ್ನ 'ಶಾಕುಂತಲಾ' ನಾಟಕದ ನಾಯಕಿ ಶಾಕುಂತಲ ನೀನೇ. ನಾನು ಬರೆಯಲು ಆರಂಭಿಸಿದಾಗಲೆಲ್ಲ ನನ್ನ-ನಿನ್ನ ಪ್ರೀತಿ, ನಮ್ಮ ಬದುಕುಗಳೇ ಕಣ್ಣಿಗೆ ಕಟ್ಟುತ್ತಿದ್ದವು. 'ರಘುವಂಶ'ದಲ್ಲಿನ ನೋವು-ಯಾತನೆಗಳೆಲ್ಲವೂ ನನ್ನವೇ.

"ಇವೆಲ್ಲವನ್ನೂ ನೀನು ಓದಬೇಕು ಎಂದು ನಾನು ಬಯಸಿದ್ದೆ. ಆದರೆ, ಬೆಸುಗೆ ಹಾಕುವ ತಂತಿ ಹರಿದು ಹೋಗಿತ್ತು!"

- ಎಂದು ಕವಿ ಬಿಕ್ಕುತ್ತಿದ್ದಾನೆ. ಹಳೆಯ ಪ್ರೇಮಿ ತನ್ನ ನೋವು-ಯಾತನೆಯನ್ನು ಮಳೆಯಂತೆ ಸುರಿಸುತ್ತಲೇ ಇದ್ದಾನೆ. ಕಾಲ-ಬದುಕು ಬದಲಾಗಿರುವುದು ಕವಿಗೆ ಕಾಣುತ್ತಲೇ ಇಲ್ಲ! ಮಲ್ಲಿಕಾ ಈಗ ಮದುವೆಯಾಗಿದ್ದಾಳೆ. ಕಾಳೀದಾಸ ಮತ್ತು ಮಲ್ಲಿಕಾರ ಪ್ರೀತಿಯನು ಗೇಲಿ ಮಾಡುತ್ತಿದ್ದ ವಿಲೋಮನೀಗ ಆಕೆಯ ಪತಿ!

ಮಹಾಕವಿಯ ಮಳೆಗಾಲದ ಅಳಲು-ಅಳುವಿಗೆ ಕೊನೆಯೇ ಇಲ್ಲ. ಮಹಾಕಾವ್ಯ ಬರೆದ ಆತ ವಿಧಿಯ ಲೀಲೆಯನು ತಿದ್ದಿ ಬರೆಯಲಾರ! ಅಷ್ಟರಲಿ, ಒಳಗೆ ಮಗು ಅಳುವುದು ಕೇಳುತ್ತಿದೆ. ಮಲ್ಲಿಕಾ ಕೋಣೆಯೆಡೆ ನಡೆದು ಮಗುವನ್ನು ಎತ್ತಿಕೊಳ್ಳುತ್ತಾಳೆ. ಹೊಸಲಿನತ್ತ ನಡೆಯುತ್ತಾಳೆ. ಕುಸಿದವಳಂತೆ ಕಿಟಕಿಯತ್ತ ಹೆಜ್ಜೆ ಹಾಕುತ್ತಾಳೆ. ಸುಧಾರಿಸಿಕೊಳ್ಳಲು ಎನ್ನುವಂತೆ ಮಗುವನ್ನು ಇನ್ನಷ್ಟು ಇನ್ನಷ್ಟು ಹತ್ತಿರಕ್ಕೆ ಸೆಳೆದು, ಬಾಚಿ ತಬ್ಬುತ್ತಾಳೆ. ಮಗುವಿಗೆ ಮುತ್ತಿಡಗೊಡಗಿದಂತೆ ಸಶಬ್ದ ಕಣ್ಣಿರು ಹನಿಸತೊಡಗುತ್ತಾಳೆ.

ಹೊರಗೆ ಆಷಾಢದ ಮಿಂಚು-ಗುಡುಗು-ಮತ್ತು ಮಳೆ.

*

ಮತ್ತೆ ಮಳೆ ಹೊಯ್ಯುತಿದೆ.

ಎಲ್ಲ ನೆನಪಾಗುತಿದೆ.

ಸುಖ-ದುಃಖ ಬಯಕೆ ಭಯ ಒಂದೆ ಎರಡೆ?

ನೆನಪುಂಟೆ ಇಕೋ ನನ್ನ ಉದ್ದನೆಯ ಹುಡುಗಿ?

(ಯು.ಆರ್. ಅನಂತಮೂರ್ತಿ)

******

‘ಆಷಾಢದ ಒಂದು ದಿನ’ ಸ್ವಾತಂತ್ರ್ಯೋತ್ತರ ಭಾರತೀಯ ರಂಗಭೂಮಿಯ ಕಟ್ಟೋಣದಲ್ಲಿ ಬುನಾದಿ ಕಲ್ಲಿನಂತೆ ಕೆಲಸ ಮಾಡಿದ ಕೃತಿ. ಬರೆದವರು ಭಾರತೀಯ ಸಾಹಿತ್ಯದ ಮೇರು ಲೇಖಕ ಮೋಹನ್‌ ರಾಕೇಶ್‌.

ಹುಟ್ಟಿದ್ದು ಪಂಜಾಬಿನ ಅಮೃತಸರದಲ್ಲಿ, ೧೯೨೫, ಜನವರಿ ೮ರಂದು. ೧೯೫೦ರ ದಶಕದ ಕೊನೆಯಲ್ಲಿ ಮೊದಲ ರಂಗಪ್ರಯೋಗ ಕಂಡ ಈ ನಾಟಕವನ್ನು 'ಪಾಶ್ಚಾತ್ಯ ರಂಗಭೂಮಿ' ಹಾಗೂ ಅದಾಗಲೇ ಅನುಷ್ಠಾನದಲ್ಲಿದ್ದ 'ಪಾರಂಪರಿಕ ರಂಗಭೂಮಿ'ಗಳ ಪ್ರಭಾವದಿಂದ ಬಿಡಿಸಿಕೊಂಡು ಸಂಪೂರ್ಣ ಹೊಸದಾದ ‘ವಸಾಹತೋತ್ತರ ರಾಷ್ಟ್ರೀಯ ರಂಗ ಪರಂಪರೆ’ಯನ್ನು ಹುಟ್ಟು ಹಾಕಿದ ನಾಟಕವೆಂದು ಗುರುತಿಸಲಾಗುತ್ತದೆ. ಮಾತ್ರವಲ್ಲ, ಉಪಖಂಡದ ಮೇರು 'ಅಭಿಜಾತ ಕವಿ' ಕಾಳೀದಾಸನ ಕುರಿತು ರಚಿತವಾದ, ರಂಗ ಪ್ರಯೋಗಗೊಂಡ ಇಪ್ಪತ್ತನೆಯ ಶತಮಾನದ ಅತ್ತ್ಯುತ್ತಮ ರಂಗಕೃತಿಯೆಂತಲೂ ಮಾನ್ಯಮಾಡಲಾಗುತ್ತದೆ. ಕನ್ನಡದಲ್ಲಿಯೂ ಅನೇಕ ರಂಗ ಪ್ರಯೋಗಗಳನ್ನು ಕಂಡ ಅತ್ಯಂತ ಯಶಸ್ವಿ ನಾಟಕ.

ನಾನು ಈ ನಾಟಕವನ್ನು ಒಮ್ಮೆ ಮಾತ್ರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (೧೯೯೧-೯೨) ನೋಡಿದ್ದರೂ, ದಶಕಗಳಿಂದ ಕನಸು-ಕನವರಿಕೆಯಲ್ಲಿ ಕಾಡುತ್ತಲೇ ಇರುತ್ತದೆ. ಕ್ರಿಯಾಶೀಲತೆ, ಮುಗ್ಧತೆ, ಮನುಷ್ಯನ ಅಂತರಂಗದ ನೆಮ್ಮದಿ ಹಾಗೂ ಆತ ಬದುಕಿನಲ್ಲಿ ಮಾಡಿಕೊಳ್ಳುವ ಆಯ್ಕೆ, ಅದರಿಂದಾಗಿ ಉಂಟಾಗುವ ಚಲನಶೀಲತೆ, ಬದಲಾವಣೆಗಳು ನಿಜಕ್ಕೂ ಆತನ ಬಾಳನ್ನು ಬೆಳಗುವವೆ? ಆತ ಕಟ್ಟುತ್ತ, ಕಟ್ಟುತ್ತ ಏನು ಪಡೆದ ಅಥವ ಕಳೆದುಕೊಂಡ? ಎಂದು ಕೇಳಿಕೊಂಡಾಗ ಹುಟ್ಟುವ ಗಾಢ ವಿಷಾದ, ದುಃಖ, ಮೌನ, ಏಕಾಕಿತನ ಭಯಾನಕವಾದವು. ಇಲ್ಲಿನ ಮಹಾಕವಿ ಮತ್ತು ಮಲ್ಲಿಕಾ ಬದುಕು ಸೃಷ್ಟಿಸಿದ ಅಂಥ ಅಸಂಗತ, ಅಸಂಬದ್ಧ, ಅಮೂರ್ತತೆ ಸಿಲುಕಿ ಶಿಥಿಲವಾಗುವುದನ್ನು ಕಂಡು ಈ ಆಷಾಢದ ಮಳೆಗಾಲದಲ್ಲಿ ಮನಸ್ಸು ಖಜೀಲ ಎನ್ನುತ್ತಿದೆ. ಚಡಪಡಿಸುತ್ತಿದೆ. ಕವಿಗೆ ಮತ್ತು ಆತನ ಮನದನ್ನೆಗೆ ಸಾಂತ್ವನ ಹೇಳಲೋ, ಅಥವ ನಾನೇನಾಗಿದ್ದೇನೆ? ಕಳೆದು ಹೋಗಿದ್ದೇನೋ, ಹೋಗಬೇಕಾದರೆ ಗೆ ಹೆಜ್ಜೆ ಹಾಕುತ್ತಿದ್ದೇನೆಯೋ? ಎಂದು ನೋಡಿಕೊಳ್ಳಲೋ, ಎಂಬ ಗೊಂದಲಕ್ಕೆ ನೂಕುತ್ತಿದೆ.

ಇದೀಗ ನೆನಪಾಗುತ್ತಿರುವುದು. ರವೀಂದ್ರ ಕಲಾಕ್ಷೇತ್ರದ ಅಂದಿನ ಪ್ರದರ್ಶನದಲ್ಲಿ ಬಹುದೊಡ್ಡ ಗಾಯಕರಾದ ಹಾಸಣಗಿ ಗಣಪತಿ ಭಟ್‌ರ ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆಯಿತ್ತು. ನಾಟಕದ ಅಂತ್ಯದಲ್ಲಿ ಹಾಸಣಗಿಯವರ ತಲ್ಲೀನ ಹಾಡುಗಾರಿಕೆ ಹುಟ್ಟಿಸಿದ ಆರ್ದ್ರತೆ, ವಿಷಾದ, ಮನ ಕಲಕುವ ವಿರಹಕ್ಕೆ ನನ್ನ ಪಕ್ಕ ಕುಳಿತ ಯುವತಿ ಗಳಗಳನೆ ಅಳುತ್ತಿದ್ದರು.

*

ಮೋಹನ್‌ ರಾಕೇಶರ ‘ಆಷಾಢದ ಒಂದು ದಿನ’ ನಾಟಕವನ್ನೂ ಸೇರಿಸಿಕೊಂಡು ಅವರ ಇನ್ನಿತರ ಕೃತಿಗಳನ್ನು ಕನ್ನಡದ ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ನಾನಿಲ್ಲಿ ಅನುವಾದಕ್ಕೆ ಬಳಸಿದ್ದು ಮೋಹನ್‌ ರಾಕೇಶರ ಮೂರನೆಯ ಪರಿಷ್ಕರಣೆಯ ಹಿಂದಿ ಅವತರಣಿಕೆ.

(ಇಲ್ಲಿ ಬಳಸಿರುವ ಚಿತ್ರಗಳು ವಿಶಿಷ್ಟ ಪ್ರತಿಭೆಯ ಭಾರತೀಯ ಚಿತ್ರ ನಿರ್ದೇಶಕ ಮಣಿ ಕೌಲ್‌ರ ‘ಆಷಾಢ ಕಾ ಏಕ್‌ ದಿನ್‌’ (೧೯೭೧)