ನೀನು ದೊಡ್ಡ ಮನುಷ್ಯ ಕಣಪ್ಪಾ ಇಮ್ರೋಜ್..

ಅಮರ ಅಗಲಿಕೆ ಹೆಸರಾಂತ ಕವಿ ಅಮೃತಾ ಪ್ರೀತಮ್ ಅವರ ದೀರ್ಘಕಾಲದ ಸಂಗಾತಿ ಕವಿ, ಕಲಾವಿದ ಇಂದರ್‌ಜೀತ್ ಸಿಂಗ್ ಅಲಿಯಾಸ್ ಇಮ್ರೋe಼ï ಮುಂಬೈನ ನಿವಾಸದಲ್ಲಿ ತಮ್ಮ 97ರ ಇಳಿವಯಸ್ಸಿನಲ್ಲಿ ವಯೋಸಹಜ ಆನಾರೋಗ್ಯದಿಂದ ಮೊನ್ನೆ ಶುಕ್ರವಾರ ಕೊನೆಯುಸಿರೆಳೆದರು. ಇವರ ಅಮರ ಪ್ರೇಮ ಕಥಾನಕವನ್ನು ಗೆಳೆಯ ದಿಲಾವರ್ ತಮ್ಮ ಆಪ್ತ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ. ದಯಮಾಡಿ ಓದಿ- ಸಂಪಾದಕ 

ನೀನು ದೊಡ್ಡ ಮನುಷ್ಯ ಕಣಪ್ಪಾ ಇಮ್ರೋಜ್..


ದಿಲ್ 


(ದಿಲಾವರ್ ರಾಮದುರ್ಗ)


       ಇಮ್ರೋಜ್ ಒಬ್ಬ ಹೆಸರಾಂತ ಪೇಂಟರ್, ಚಿತ್ರ ಕಲಾವಿದ. ಕವಿ ಅಮೃತಾ ಪ್ರೀತಮ್ ಪ್ರೇಮದಲ್ಲಿ ತಾನೂ ಕವಿಯಾದ. ಉಪಖಂಡದ ಅಮರ ಪ್ರೇಮ ಕಥಾಗ್ರಂಥದಲ್ಲಿ ತನ್ನದೊಂದು 'ಇಷ್ಕ್ ಕೀ ದೀವಾನಗಿ' ಎಂಬ ಅಧ್ಯಾಯ ದಾಖಲಿಸಿ ಇದೀಗ ಹೊರಟು ಹೋದ. ಆತ ಖಂಡಿತ ಪಾಗಲ್ ಪ್ರೇಮಿ ಅಲ್ಲ. ಹಾಗೆ ಭಾವಿಸುವುದು ಪ್ರೀತಿಗೆ ಮಾಡುವ ಅಪಚಾರವಾದೀತು! ನೋ .. ಹಾಗೆ ಭಾವಿಸಲಾಗದು. ಎಲ್ಲಾ ಅರ್ಥದಲ್ಲೂ ಇಮ್ರೋಜ್ ಅಮರ ಪ್ರೇಮಿ. ಒಬ್ಬ ಅಪ್ಪಟ ಮನುಷ್ಯ ಮಾತ್ರ ಸಾಗಬಹುದಾದ ಉತ್ಕಟ ಜರ್ನಿಯಲ್ಲಿ ಸಾಗಿಹೋದ ದಿಲ್ದಾರಿ..


ಇಮ್ರೋಜ್ ವ್ಯಕ್ತಿತ್ವವನ್ನು ಅಮೃತಾ ಮತ್ತು ಕವಿ ಸಾಹಿರ್ ಅವರಿಂದ ಬಿಡಿಸಿಕೊಂಡು ಅರಿಯಲಾಗದು. ಇಮ್ರೋಜ್ ಒಬ್ಬ ಪೇಂಟರ್. ದೆಹಲಿಯಿಂದ ಪ್ರಕಟಗೊಳ್ಳುವ"ಶಮಾ" ಎಂಬ ಹೆಸರಾಂತ ಉರ್ದು ಪತ್ರಿಕೆಗೆ ಚಿತ್ರ ಬಿಡಿಸುತ್ತಿದ್ದ. 


ಈ "ಶಮಾ" ಪತ್ರಿಕೆ ನನ್ನ ತಾಯಿಗೂ ಇಷ್ಟದ ಪತ್ರಿಕೆ. ಒಂದೆರಡು ವರ್ಷಗಳ ಅವಧಿಗೆ ನನ್ನ ತಾಯಿಯನ್ನು ಈ ಪತ್ರಿಕೆಯ ಚಂದಾದಾರಳನ್ನಾಗಿಸಿದ್ದೆ. ಆಮೇಲೆ ರಿನಿವಲ್ ಮಾಡಿಸಲಾಗಲಿಲ್ಲ. ಆ ಸಂಚಿಕೆಗಳು ಈಗ ನನ್ನ ಅಮ್ಮಿ ಲೈಬ್ರರಿಯ ಭಾಗವಾಗಿವೆ. 


"ಶಮಾ" ಪತ್ರಿಕೆಯ ಕವಿತೆಗಳಿಗೆ ಇಲಸ್ಟ್ರೇಷನ್ ಬಿಡಿಸುತ್ತ ಕಾವ್ಯ ಮೋಹಿಯಾದವ ಇಮ್ರೋಜ್. ಬಹುಶಃ ಅಮೃತಾ ಕಾವ್ಯ ಗ್ರಹಿಸುತ್ತ ಮೊಹಬ್ಬತ್ ಕೊಳ ಸೇರಿರಬಹುದು.


ಅಮೃತಾ ಅವರಿಗೆ ಇಮ್ರೋಜ್ ಪರಿಚಯ ಆಗಿದ್ದರ ಹಿಂದೆ ಚಿತ್ರದ್ದೇ ಕಾರುಬಾರು. ಅಮೃತಾ ತಮ್ಮ "ಆಖರೀ ಖತ್" ಪುಸ್ತಕದ ಮುಖಪುಟವನ್ನು ಕಲಾವಿದರಿಂದ ರೂಪಿಸುವ ನಿರ್ಧಾರ ಮಾಡುತ್ತಾರೆ. ಆ ಸಂದರ್ಭದಲ್ಲಿ ಬಂದ ಸಲಹೆಯ ಮೇರೆಗೆ ಇಮ್ರೋಜ್ ನನ್ನು ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಾರೆ. ಮುಖಪುಟ ತುಂಬ ವರ್ಣರಂಜಿತವಾಗಿಯೇ ರೂಪುಗೊಳ್ಳುತ್ತದೆ. ಅದನ್ನು ರೂಪಿಸಿದವನ ಮನದ ರಂಗು ಬಹುಶಃ ಅದರಲ್ಲಿ ಜೀವತಳಿದಿತ್ತು. ಸಾಹಿರ್ ದೂರವಾದಂತೆನಿಸಿದ ಮೇಲೂ ಅಮೃತಾ ಬದುಕಿನ ಪ್ರೇಮ ಪಸೆ ಇನ್ನೂ ಆರಿರಲಿಲ್ಲ. ಇಮ್ರೋಜ್ ಆ ಸೆಲೆಯನ್ನು ಮತ್ತಷ್ಟು ಜಿನುಗಿಸಿಬಿಟ್ಟ. ಅಮೃತಾ ಅವರಿಗೆ ತುಂಬಾ ಹತ್ತಿರವಾದ. ಇಬ್ಬರೂ ದೆಹಲಿಯ ಒಂದೆಡೆ ಒಂದೇ ಮನೆಯಲ್ಲಿ ಜೊತೆಗೂಡಿದರು. ಆದರೆ ಇಬ್ಬರ ಬೆಡ್ ರೂಂ ಸದಾ ಪ್ರತ್ಯೇಕವಾಗಿಯೇ ಇದ್ದವು. 40 ವರ್ಷಗಳ ಕಾಲ ಜೊತೆಗಿದ್ದವರು. ಬಹುಶಃ ಸ್ವಾತಂತ್ರ‍್ಯೋತ್ತರ ಇಂಡಿಯಾದ ಪ್ರಪ್ರಥಮ ಲಿವಿಂಗ್ ಟುಗೆದರ್ ಜೋಡಿ ಇದಾಗಿದೆ.


ಅಮೃತಾ -ಸಾಹಿರ್ ಎಂಬ ಪ್ರೇಮಗ್ರಂಥದ ಪುಟಗಳನ್ನು ಓದದಿದ್ದರೆ ಇಮ್ರೋಜ್ ಅರ್ಥವಾಗುವುದಿಲ್ಲ. ಅಮೃತಾ ಬದುಕಿನಲ್ಲಿ ಸಾಹಿರ್ ಪಾತ್ರದ ಮುಂದುವರಿಕೆ ಎಂಬಂತಾಗಲು ಪ್ರಯತ್ನಿಸಿದ ಇಮ್ರೋಜ್! ಅಥವಾ ಅವಳ ಸಾಹಿರ್ ಆಗಬೇಕೆನ್ನುವ ಹಂಬಲ, ಉತ್ಕಟತೆ ಇಮ್ರೋಜ್ ನಲ್ಲಿ ಇದ್ದಿರಬಹುದು ಅನಿಸುತ್ತದೆ.


ತುಂಬ ಮುಂಚೆಯೇ ಅಮೃತಾ ಮತ್ತು ಸಾಹಿರ್ ಪ್ರೇಮಲೋಕದ ದಂತಕಥೆಯಂತಾಗಿದ್ದರು. ಹೀರ್ ರಾಂಜಾ ಅವರಂತೆ, ಚಂದಾ ಸೂರಜ್ ಅವರಂತೆ.


ಅಮೃತಾ ಕಾವ್ಯ ರಚನೆ ಜೊತೆ ತಾನು ಅತೀವ ಪ್ರೀತಿಸುವ ಸಾಹಿರ್ ನನ್ನು ಪ್ರೀತಿಸ್ತಾ ಪ್ರೀತಿಸ್ತಾ ಸಾಹಿರ್ ಲೋಕದಲ್ಲಿ ಮುಳುಗಿ ಹೋದವರು. ಇಬ್ಬರೂ ಪರಸ್ಪರ ತೀವ್ರವಾಗಿ ಪ್ರೀತಿಸಿದವರು. ಇಷ್ಕ್ ಮಜಲಿಗೇರಿ ನಿಂತವರು. ಆದರೆ ಆ ಸಂಬಂಧ ಎಲ್ಲಾ ಸಂಬಂಧಗಳಂತೆ ಒಂದು ಲೌಕಿಕ ಸುಖಾಂತ್ಯ ಕಾಣದೆ ಹೋಯಿತು. ಸಾಹಿರ್ ಅವರಿಗೆ ತಮ್ಮ ತಾಯಿ ಬಗ್ಗೆ ಅಪಾರ ಪ್ರೀತಿ, ಗೌರವ. ತಾಯಿ ತಮ್ಮ ಪತಿಯಿಂದ ದೂರವಾಗಿ ಏಕಾಂಗಿಯಾಗಿ ಮಗ ಸಾಹಿರನನ್ನು ಸಾಕಲು ತುಂಬ ಕಷ್ಟಪಟ್ಟವರು. ಆ ಕಷ್ಟದ ಅರಿವು ಸಾಹಿರ್ ಅವರಿಗಿತ್ತು. ಸಾಹಿರ್ ಒಮ್ಮೆ ತಮ್ಮ ತಾಯಿಗೆ ಅಮೃತಾ ಅವರನ್ನು ಪರಿಚಯಿಸುತ್ತಾರೆ. ಬಹುಶಃ ಸಾಹಿರ್ ತಾಯಿಗೆ ಈ ಸಂಬಂಧ ಇಷ್ಟವಾಗದೇ ಹೋಯಿತೇನೋ. ಮದುವೆ ಸಾಧ್ಯವಾಗಲಿಲ್ಲ . ಆದರೆ ಪ್ರೇಮ ಸಂಬಂಧಕ್ಕೆ ಯಾವುದೂ ಅಡ್ಡಿಯಾಗಲಿಲ್ಲ.


ದೇಶ ವಿಭಜನೆಯೂ ಆಯಿತು. ಅಮೃತಾ ಹಿಂದುಸ್ತಾನ್ ಸೇರಿದರು. ವಿಭಜನೆಗೂ ಈ ಹೃದಯಗಳ ಬೆಸುಗೆ ಬಿಡಿಸಲಾಗಲಿಲ್ಲ. ಸಾಹಿರ್ ಕೂಡ ಹಿಂದುಸ್ತಾನಕ್ಕೆ ಬಂದರು. ಸಿನಿಮಾ ಹಾಡು ಬರೆದರು. ಒಂದರ ಮೇಲೊಂದು ಹಿಟ್ ಹಾಡುಗಳನ್ನು ನೀಡಿದರು. ಪ್ರೇಮ ಜೀವಿಗಳ ದಿಲ್ ಕೀ ಧಡಕನ್ ಆದರು. ಪ್ರೇಮಿಗಳ ಪಾಲಿಗೆ ಅವರ ಸಾಲುಗಳೇ ಬೈಬಲ್ ವಾಕ್ಯಗಳಾದವು!


ಅಮೃತಾ ತಮ್ಮ ಆರನೇ ವಯಸ್ಸಿನಲ್ಲಿ ಬಾಲ್ಯ ವಿವಾಹ ಬಂಧಕ್ಕೆ ಒಳಗಾದವರು. ಹದಿನಾರನೇ ವಯಸ್ಸಿಗೆ ಒಂದು ಕವನ ಸಂಕಲನ ಪ್ರಕಟಿಸಿದವರು. ಅದರ ಬೆನ್ನಿಗೆ ಗಂಡನ ಮನೆ ಸೇರಿ ಮನಸ್ಸಿಲ್ಲದೇ ಸಂಸಾರದಲ್ಲಿ ಮುಂದುವರಿದವರು. ದೆಹಲಿ ಆಕಾಶವಾಣಿ ಉದ್ಘೋಷಕಿಯಾಗಿ ಕಾರ್ಯ ನಿರ್ವಹಿಸಲು ದೆಹಲಿ ಸೇರುವಷ್ಟೊತ್ತಿಗೆ ಎರಡು ಮಕ್ಕಳ ತಾಯಿ! 


ಪಾಕಿಸ್ತಾನದಲ್ಲಿ ಇದ್ದಾಗಲೇ ಎಲ್ಲ ಬಂಧನಗಳಾಚೆ ಸಾಹಿರ್ ನನ್ನು ಕಂಡ ಮೊದಲ ನೋಟಕ್ಕೆ ಎಲ್ಲ ಸಂಕೋಲೆಗಳು ಕಳಚಿದಂತೆ ಒಳಗಿನ ಬಂದೀಖಾನೆಯಿಂದಲೇ ಬಿಡುಗಡೆ ಆದಂತೆ ಸ್ವತಂತ್ರಳಾಗಿ ಪ್ರೇಮಾಕಾಶದಲ್ಲಿ ರೆಕ್ಕೆ ಬಿಚ್ಚಿದವಳು. ಲಾಹೋರಿನ ಅದೊಂದು ಮುಶಾಯರಾದಲ್ಲಿ ಕವಿಯಾಗಿ ಭಾಗವಹಿಸಿದ ಸಂದರ್ಭದಲ್ಲಿ ಆ ಕಾಲದ ಕಾವ್ಯ ಸ್ಟಾರ್ ಸಾಹಿರ್ ಕಣ್ಣುಗಳಲ್ಲಿ ಕಣ್ಣಿಟ್ಟಿದ್ದೇ ತಡ ಅಮೃತಾ ದಿಲ್ ಒಳಗೆ ಪ್ರೇಮದ ಜಡಿಮಳೆ. ಕಾಕತಾಳೀಯ ಎಂಬಂತೆ ಹೊರಗೂ ಮಳೆ ಸುರಿಯುತ್ತಿತ್ತು. ಭೇಟಿ ಸುದೀರ್ಘವಾಯಿತು. ಈ ಮಳೆ, ಸಾಹಿರ್-ಅಮೃತಾ ಭೇಟಿ, ಪ್ರೇಮಕಾವ್ಯಕ್ಕೆ ಪೀಠಿಕೆ ಆಗುವಂತೆ ನಿಸರ್ಗವೇ ಹೂಡಿದ ಸಂಚಿನಂತೆ.


ಪ್ಯಾರ್, ಮೊಹಬ್ಬತ್ ಮತ್ತು ಇಷ್ಕ್ .. ಇವು ಭಾವಜಗದ ಮಜಲುಗಳು. ಮನಸು ಮತ್ತು ಆತ್ಮದ ಮಜಲುಗಳು. ಇವು ಪರಸ್ಪರ. ಭಿನ್ನವೂ ಮತ್ತು ಅಭಿನ್ನವೂ. ಪ್ಯಾರ್ ಎಲ್ಲರ, ಎಲ್ಲದರ ಬಗ್ಗೆ ಆಗಬಹುದು, ಮೊಹಬ್ಬತ್ ಹಾಗಲ್ಲ ಅದು ಒಂದನ್ನು ಕಚ್ಚಿಕೊಂಡುಬಿಡುವುದು ಅಂತಾರಲ್ಲ ಹಾಗೆ. ಆದರೆ ಇಷ್ಕ್ ಎನ್ನುವುದು ಉತ್ಕಟ. ಉತ್ಕೃಷ್ಟ ಮಜಲು. ಇಲ್ಲಿಂದಾಚೆ ಕದಲುವ ಪ್ರಶ್ನೆಯೇ ಇರದು. ಸೂಫಿ ನಂಬಿಕೆಯಲ್ಲಿ ಈ "ಇಷ್ಕ್ ಖುದಾ ಹೋತಾ ಹೈ.." ಅಲ್ಲಾಹುವಿನಲ್ಲಿ ಅನುರಕ್ತ ಆಗುವತ್ತಲಿನ ಪಯಣವಿದು.. ಖುದಾ ಕೆ ರಾಹ ಮೇ ಇಷ್ಕ್ ಖುರ್ಬಾನ್ ಎನ್ನುತ್ತಾರೆ ಸೂಫಿಗಳು. ಬಸ್ರಾದ ಅನುಭಾವಿ ಕವಿ ರಾಬಿಯಾ ಹೇಳುತ್ತಾಳೆ- 'ಹೇ ಅಲ್ಲಾಹು ನಿನ್ನ ಇಷ್ಕ್ ಹೊರತು ಇನ್ನಾರನ್ನಾದರು ಅರೇಕ್ಷಣವೂ ಮನದಲ್ಲಿ ಕಲ್ಪಿಸಿಕೊಂಡೆನೆಂದಾದರೆ, ನಿನ್ನ ನರಕದ ಬೆಂಕಿಯಲ್ಲಿ ನನ್ನ ಸುಟ್ಟು ಬಿಡು..' 


ಲೌಕಿಕ ಜಗತ್ತಿನಲ್ಲಿ ಅಮೃತಾ-ಸಾಹಿರ್ ನಡುವಿನ ಸಂಬಂಧ ತಲುಪಿದ ಮಜಲು ಕೂಡ ಒಂದರ್ಥದಲ್ಲಿ ಇಷ್ಕ್. ಇಷ್ಕ್ ಹಂತ ತಲುಪಿದರೆ ಮುಗೀತು. ಅದು ಅದರಾಚೆ ಈಚೆ ಕದಲದ ಅಚಲ, ಅಮರತ್ವದ ಉತ್ಕಟತೆ. ಮಾತಿಗೆ, ಕಾವ್ಯಕ್ಕೆ, ಸಂಗೀತಕ್ಕೆ ದಕ್ಕದು. ಅದನ್ನು ಆತ್ಮಾನುಸಂಧಾನ ಎನ್ನಬಹುದೇನೊ. ಅದರಲ್ಲಿ ಮುಳುಗಿದವರಿಗೆ ದಕ್ಕಬಹುದಾದ ಅನುಭೂತಿ..


ಅಮೃತಾ ಪ್ರೀತಿಯ ಉತ್ಕಟತೆ ಸಾರುವ ಒಂದು ಜನಪ್ರಿಯ ಪ್ರಸಂಗ: ಅಮೃತಾ ಸಿಗರೇಟ್ ಕಥೆ. ಎಲ್ಲರಿಗೂ ಗೊತ್ತೇ ಇದೆ. ಸಾಹಿರ್ ಸೇದಿ ಬಿಸಾಕಿದ ಸಿಗರೇಟ್ ಅನ್ನು ತುಟಿಗಿಟ್ಟು ಅವನ ತುಟಿಯ ಸವಿಯನ್ನು ಸವಿಯುತ್ತಿದ್ದ ಅಮೃತಾ ಅದಕ್ಕೆಂದೇ ಸಿಗರೇಟ್ ಸೇದುವ ಅಭ್ಯಾಸ ಮಾಡಿಕೊಂಡರು. ಆದರೆ ಯಾವತ್ತೂ ಸಿಗರೇಟ್ ಪ್ಯಾಕೆಟ್ ಖರೀದಿಸಲಿಲ್ಲ. ಸಾಹಿರ್ ಸೇದಿ ಬಿಸಾಕಿದ ಸಿಗರೇಟುಗಳ ಸಂಗ್ರಹವೇ ಅಷ್ಟೊಂದಿತ್ತು!
ಸಾಹಿರ್ ಪ್ರೀತಿ ಕೂಡ ಅಷ್ಟೇ ಉತ್ಕಟವಾದುದು. ಸಾಹಿರ್ ಮನೆಯಲ್ಲಿ ನಡೆದ ಒಂದು ಪ್ರಸಂಗ ಹೀಗಿದೆ: 


ಇಂಡಿಯನ್ ಸಿನಿಮಾದ ಸಂಗೀತ ನಿರ್ದೇಶಕ ಜಯದೇವ್ ಅವರು ಒಮ್ಮೆ ಸಾಹಿರ್ ಮನೆಗೆ ಹೋಗುತ್ತಾರೆ. ಒಂದು ಹಾಡಿನ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆಯುತ್ತಿದ್ದಾಗ ಜಯದೇವ್ ಕಣ್ಣು ಒಂದು ಚಹಾದ ಕಪ್ ಮೇಲೆ ಬೀಳುತ್ತದೆ. ಆ ಕಪ್ ತುಂಬಾ ದಿನಗಳಿಂದ ತೊಳೆಯದೆ ಹಾಗೇ ಇಡಲಾಗಿತ್ತು. ಇದೇನಿದು ಸಾಹಿರ್ ಜೀ ಇಲ್ಲಿಟ್ಟಿದ್ದೀರಲ್ಲಾ ಈ ಚಹಾದ ಕಪ್ ತುಂಬಾ ಗಲೀಜಾಗಿದೆ, ಇಲ್ಲಿ ಕೊಡಿ ನಾನು ತೊಳೆದಿಡ್ತೀನಿ ಎಂದರಂತೆ ಜಯದೇವ್. 


ಸಾಹಿರ್ ತುಂಬ ಖಡಕ್ ಆಗಿ ಹೀಗೆ ಹೇಳಿದರಂತೆ- ಹುಷಾರ್ ! ಆ ಕಪ್ ಮುಟ್ಟಬೇಡಿ. ಮುಟ್ಟಕೂಡದು. ಅದು ಅಂಥಿಂಥದ್ದಲ್ಲ ಅಮೃತಾ ಇಲ್ಲಿಗೆ ಕೊನೆಯ ಸಲ ಬಂದಾಗ ಚಹಾ ಹೀರಿಟ್ಟ ಕಪ್ ಅದು. ಅವಳ ತುಟಿಗಳ ಪಸೆ, ಕೈ ಸ್ಪರ್ಶ ಕಪ್ ಮೇಲೆ ಹಾಗೇ ಇರಲಿ ಬಿಡಿ..


ಅಮೃತಾ ಅವರನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲು ಸಾಹಿರ್ ಗೆ ಯಾವತ್ತೂ ಸಾಧ್ಯವಾಗಲಿಲ್ಲ. ಅಮೃತಾ ತಮ್ಮ ನಡುವಿನ ಸಂಬಂಧವನ್ನು ಮುಕ್ತವಾಗಿ ಹೇಳಿಕೊಳ್ಳುವಂತೆ ಸಾಹಿರ್ ಎಲ್ಲೂ ವ್ಯಕ್ತಪಡಿಸಲಿಲ್ಲ. ಇದರ ನಡುವೆ ಮತ್ತೊಂದು ಬೆಳವಣಿಗೆ ನಡೆದು ಹೋಗಿತ್ತು. ಬಾಲಿವುಡ್ ಗಾಯಕಿ ಸುಧಾ ಮಲ್ಹೋತ್ರಾ ಜೊತೆ ಸಾಹಿರ್ ಹೆಸರು ತಳಕು ಹಾಕಿಕೊಂಡಿತ್ತು. ಸಾಹಿರ್ ಸ್ವಲ್ಪ ಮೋಹಕ್ಕೊಳಗಾದಂತಿದ್ದರು. ಅಮೃತಾ ಅವರಿಗೆ ಇದು ತುಂಬಾ ನೋವಿನ ಸಂಗತಿಯಾಗಿತ್ತು. ಆದರೆ ಮನದೊಳಗಣ ಸಾಹಿರ್ ಮೇಲಿನ ಪ್ರೇಮ ಎನಿತೂ ಕಮ್ಮಿಯಾಗಲೇ ಇಲ್ಲ.


ಇನ್ನು ಇಮ್ರೋಜ್ ಪ್ರೇಮ ಕಥೆಯೂ ಅಷ್ಟೇ. ತಾನು ಪ್ರೇಮಿಸುತ್ತಿರುವುದು ಮುಂಚೆ ಸಾಹಿರ್ ಪ್ರೀತಿಸಿದವಳನ್ನು ಎಂಬ ಅರಿವು ಇಮ್ರೋಜ್ ಗೆ ಇತ್ತು. ತನ್ನದು ಸಾಹಿರ್ ಪಾತ್ರದ ಮುಂದುವರಿಕೆಯಂತಾದರೂ ಆಗಲಿ ಎನ್ನುವ ಒಂದು ಸಣ್ಣ ಆಸೆ ಇದ್ದಿರಬೇಕು. ಯಾಕೆಂದರೆ ಅಮೃತಾ ಮನದೊಳಗೆ ಸಾಹಿರ್ ಮಾತ್ರ ದಿಲ್ ಕೀ ಢಡಕನ್, ಮಿಡಿತದಂತಾಗಿದ್ದು ಸ್ಪಷ್ಟಗೊಂಡಿತ್ತು. ಆದರೂ ಅವಳ ಮೇಲಿನ ಪ್ರೀತಿ ಚೂರೂ ಕಡಿಮೆಯಾಗಲಿಲ್ಲ. 


ನನ್ನ ಕಲೆಕ್ಷನ್‌ನಲ್ಲಿ ಇಮ್ರೋಜ್ ನೀಡಿದ ಪತ್ರಿಕಾ ಸಂದರ್ಶನವೊಂದರ ಕಟಿಂಗ್ ಇತ್ತು. ಎಲ್ಲೋ ಇಟ್ಟಿರುವ ನೆನಪು. ಸಧ್ಯಕ್ಕೆ ಕೈಗೆ ಸಿಗುತ್ತಿಲ್ಲ. ಅದರಲ್ಲಿನ ಅವರೇ ನೆನಪಿಸಿಕೊಂಡ ಕೆಲ ಪ್ರಸಂಗಗಳು ದಿಲ್ ಒಳಗೆ ಅಚ್ಚಾದಂತಿವೆ.


 ಅಮೃತಾ ತಾವು ಅತಿಥಿಯಾಗಿ ಹೋದಲ್ಲೆಲ್ಲ ನನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಸ್ಕೂಟರಿನಲ್ಲಿ ಅವರನ್ನು ಕೂರಿಸಿಕೊಂಡು ಹೋಗುವಾಗೆಲ್ಲ ದಾರಿ ಮಧ್ಯದಲ್ಲಿ ಅಮೃತಾ ನನ್ನ ಬೆನ್ನ ಮೇಲೆ ತಮ್ಮ ಬೆರಳಿನಿಂದ ತುಂಬ ಗೀಚುತ್ತಿದ್ದರು. ಅದು ಬೇರೇನೂ ಅಲ್ಲ, ಸಾಹಿರ್ ಹೆಸರು ಮಾತ್ರ ಎನ್ನುವುದು ಪಕ್ಕಾ ಫೀಲ್ ಆಗುತ್ತಿತ್ತು.

ಅಮೃತಾಗೆ ರೊಟ್ಟಿ ತಟ್ಟುವುದು ಎಂದರೆ ತುಂಬ ಇಷ್ಟ. ಅದರಲ್ಲೂ ಮೊದಲ ರೊಟ್ಟಿಯನ್ನು ತುಂಬ ಪ್ರೀತಿಯಿಂದ ಮತ್ತು ತನ್ಮಯತೆಯೊಂದಿಗೆ ಮನಸಾರೆಯಾಗಿ, ಅತ್ಯಂತ ಮೃದುವಾಗಿ ತಟ್ಟಿ ಹೆಂಚಿನ ಮೇಲೆ ಅದರ ಮೈ ಕರಕಲಾಗದಂತೆ ಎಚ್ಚರವಹಿಸಿ ಸುಡುತ್ತಿದ್ದರು. ಅದನ್ನು ತಟ್ಟೆಯಲ್ಲಿ ನಾಜೂಕಾಗಿ ಇಡುತ್ತಿದ್ದರು. ನಾನು ಮುಟ್ಟಲು ಯತ್ನಿಸಿದರೆ ಕೈಗೆ ಬರೆ ಎಳೆದುಬಿಡುವಷ್ಟು ಕೋಪ ಮಾಡಿಕೊಳ್ಳುತ್ತಿದ್ದರು. ಯಾಕೆ ಎಂದರೆ "ಅದು ಸಾಹಿರ್ ಗೆ ಮಾಡಿದ್ದು. ಮೊದಲ ರೊಟ್ಟಿ, ಮೊದಲ ತುತ್ತು ಅದು ಅವನಿಗೆ ಮಾತ್ರ ಮೀಸಲು" ಎನ್ನುತ್ತಿದ್ದರು ಅಮೃತಾ.


 ಅಮೃತಾ ಒಮ್ಮೆ ಹೀಗೂ ಹೇಳಿದ್ದಿದೆ - ಇಮ್ರೋಜ್ ನನ್ನನ್ನು ಕ್ಷಮಿಸು. ನಿನ್ನ ಜೊತೆ ಇರುವಾಗೆಲ್ಲ ಮತ್ತು ನಿನ್ನ ಸ್ಪರ್ಶಿಸಿದಾಗೆಲ್ಲ ನಾನು ಸ್ಮರಿಸಿಕೊಂಡಿದ್ದು, ಕಲ್ಪಿಸಿಕೊಂಡಿದ್ದು ಸಾಹಿರ್ ನನ್ನು ಮಾತ್ರ.


ಎಂಥ ಅಪ್ಪಟ ಪ್ರೇಮಿ ಅವರು! ನಾನೆಂದೂ ಕಂಡಿಲ್ಲ. ಕಥೆಗಳಲ್ಲಿ ಕೇಳಿಲ್ಲ. ಇಷ್ಟು ಉತ್ಕಟವಾಗಿ ಪ್ರೇಮಿಸುವ ಪ್ರೇಮಿಯ ಸಾಂಗತ್ಯ ಸಿಕ್ಕಿದ್ದು ನನ್ನ ಅದೃಷ್ಟ.


ಇಂಥ ಜಂಟಲಮ್ಯಾನ್ ಕಂಡು ಅಮೃತಾ ತಮ್ಮ ಕವಿತೆಯೊಂದರಲ್ಲಿ, ಯಾಕಾದರೂ ಸಿಕ್ಕೆಯೊ ಜೀವನದ ಸಂಧ್ಯಾಕಾಲದಲ್ಲಿ, ಸಿಗೋದೇ ಆಗಿದ್ರೆ ಬದುಕಿನ ತಂಬಿಸಿಲಲ್ಲಿ ಸಿಗಬಾರದೆ.. ಎಂಬರ್ಥದಲ್ಲಿ ಮರುಗಿದ್ದರು. (ಅಜನಬಿ ತುಮ್ ಮುಝೆ ಜಿಂದಗೀ ಕೆ ಶ್ಯಾಮ್ ಮೇ ಕ್ಯುಂವ್ ಮಿಲೆ, ಮಿಲ್ನಾ ಥಾ ತೊ ದೊಪಹರ್ ಮೇ ಮಿಲ್ತೆ..)


ಮತ್ತೊಂದು ಕವಿತೆಯಲ್ಲಿ ಅಮೃತಾ- ಇಮ್ರೋಜ್ ತನ್ನ ಮನೆಯ ಛಾವಣಿಯಂತೆ ಎಂದು ಬಣ್ಣಿಸಿದರೆ , ಸಾಹಿರ್ ಅವರನ್ನು ನನ್ನ ಸಾಹಿರ್ ತೆರೆದ ಆಕಾಶ ಎಂದು ಉದ್ಗರಿಸಿದ್ದರು.


(ಸಾಹಿರ್ ಮೇರಾ ಖುಲಾ ಆಸ್ಮಾನ್ ಹೈ, ಇಮ್ರೋಜ್ ಮೇರಿ ಘರ್ ಕಿ ಛತ್)


ಇಂಥ ಅದಮ್ಯ ಪ್ರೀತಿಯ ಅಮೃತಾ ಮತ್ತು ಇಮ್ರೋಜ್ ಜೊತೆಯಾಗಿ 40ವರ್ಷ ಬದುಕಿದ್ದು 'ಲಿವಿಂಗ್ ಟುಗೆದರ್- ರಿಲೇಷನ್ ಶಿಪ್. ಅದೂ ಆ ಕಾಲದಲ್ಲಿ!


2005ರಲ್ಲಿ ಅಮೃತಾ ತಮ್ಮ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಾಸಿಗೆ ಹಿಡಿದು ಕ್ಷಣ ಕ್ಷಣವೂ ನರಳುವಂತಾದಾಗ ಇಮ್ರೋಜ್ ಮಗುವಿನಂತೆ ಅವರ ಆರೈಕೆ ಮಾಡಿದರು.


ಅಮೃತಾ ತಮ್ಮ ಕೊನೆಯ ಕವಿತೆಯಲ್ಲಿ ಇಮ್ರೋಜ್ ಬಗ್ಗೆ ಬರೆಯುತ್ತಾ "ನಿನಗೆ ಮತ್ತೆ ಸಿಗುವೆ , ಎಲ್ಲೋ ಹೇಗೋ ನಾನರಿಯೆ..- " (ಮೈ ತುಮ್ಹೆ ಫಿರ್ ಮಿಲೂಂಗಿ, ಕಹ್ಞಾಂ ಕೈಸೆ ಪತಾ ನಹೀ ) ಎನ್ನುವ ಭರವಸೆ ನೀಡಿ ಸಾಹಿರ್ ಜೊತೆ ಪ್ರೇಮಲೋಕದ ನಕ್ಷತ್ರವಾಗಲು ಇಹಲೋಕ ತ್ಯಜಿಸುತ್ತಾರೆ.


ಆಗ ಇಮ್ರೋಜ್ ಕೂಡ ಅಮೃತಾ ಅವರಿಗೆ ಕವಿತೆಯ (ಉಸ್ ನೇ ಜಿಸ್ಮ್ ಛೋಡಾ ಹೈ ಸಾಥ್ ನಹೀ..) ಮೂಲಕ ಪ್ರೇಮನಮನ ಸಲ್ಲಿಸಿದ್ದು ಅವಿಸ್ಮರಣೀಯ.


ಸಾಹಿರ್, ಅಮೃತಾ ಮತ್ತು ಇಮ್ರೋಜ್.. ನೀವುಗಳು 'ಪ್ರೀತಿ ಎಂದರೆ ಮ್ಯುಚುವಲ್ ಬೆನಿಫಿಟ್ ಸ್ಕೀಂ ಅಲ್ಲ' ಎಂದು ನಿರೂಪಿಸಿದಿರಿ. ನಿಮ್ಮ ಪ್ರೇಮ ಪರಿಗೆ , ಅದರ ನಿಷ್ಠೆಗೆ ನನ್ನ ಸಾವಿರ ಸಲಾಂ.


ನೀನು ದೊಡ್ಡ ಮನುಷ್ಯ ಕಣಪ್ಪಾ ಇಮ್ರೋಜ್. ನಿನಗಿದೊ ದಿಲ್ ಸೇ ಆಖರೀ ಸಲಾಂ.

--*--