ಪ್ರಬಂಧ = ಬಿಳಿಗೆರೆ ಕೃಷ್ಣಮೂರ್ತಿ = ಕನಸು ಮನಸಿನಲ್ಲೂ ಕುಣಿದು ಕುಣಿಸುವ ಈ ಆಟ

ಪ್ರಬಂಧ ಬಿಳಿಗೆರೆ ಕೃಷ್ಣಮೂರ್ತಿ ಕನಸು ಮನಸಿನಲ್ಲೂ ಕುಣಿದು ಕುಣಿಸುವ ಈ ಆಟ

ಪ್ರಬಂಧ  = ಬಿಳಿಗೆರೆ ಕೃಷ್ಣಮೂರ್ತಿ  =   ಕನಸು ಮನಸಿನಲ್ಲೂ ಕುಣಿದು ಕುಣಿಸುವ ಈ ಆಟ

ಕತೆ, ಕಾವ್ಯ, ಕಾದಂಬರಿಗಳಷ್ಟೇ ಮಹತ್ವ ಪ್ರಬಂಧಗಳಿಗೂ ಇದೆ, ಕನ್ನಡದಲ್ಲಿ ಅತ್ಯುತ್ತಮ ಪ್ರಬಂಧಕಾರರಿದ್ದಾರೆ. ಇಂಥ ಸಮಕಾಲೀನ ಪ್ರಬಂಧಕಾರರಲ್ಲಿ ಮಹತ್ವದ ಸ್ಥಾನ ಬಿಳಿಗೆರೆ ಕೃಷ್ಣಮೂರ್ತಿಯವರಿಗೂ ಇದೆ. ಸದ್ಯ ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ಉನ್ನತ ಹುದ್ದೆಯಲ್ಲಿ ಕರ‍್ಯನಿರ್ವಹಿಸುತ್ತಿರುವ ಬಿಳಿಗೆರೆಯವರ ಕೆಲವು ಪ್ರಬಂಧಗಳನ್ನು ‘ಕಿನ್ನರಿ’ಯ ಓದುಗರಿಗಾಗಿ ಮಂಡಿಸಬಯಸಿದ್ದೇವೆ- ಸಂಪಾದಕ


ಪ್ರಬಂಧ


ಬಿಳಿಗೆರೆ ಕೃಷ್ಣಮೂರ್ತಿ

ಕನಸು ಮನಸಿನಲ್ಲೂ ಕುಣಿದು ಕುಣಿಸುವ ಈ ಆಟ


       ಎಲೆ ಕಲೆಸುತ್ತಿರುವಾಗಲೇ ಒಂದು ರೆಮ್ಮಿ ಎರಡು ಜೋಕರ್‌ಗಳು ಮನಸ್ಸಿನಲ್ಲಿ ತಕತಕ ಕುಣಿಯುತ್ತಿರುತ್ತವೆ. ಹಿಂದಿನ ಆಟದಲ್ಲಿ ನಾಲ್ಕು ಜೋಕರ್ಗಳು ಬಂದಿವೆಯೆಂದು ಆಡಿ ಬುಕ್ ಕೊಟ್ಟ ವಾಸ್ತವ ಸ್ಥಿತಿಯಿಂದ ಆದ ಗಾಯವನ್ನು ನೆಕ್ಕಿಕೊಳ್ಳುತ್ತಿರುವಾಗಲೆ ಹೊಸ ಕನಸೊಂದು ಬೀಳಲು ಶುರುವಾಗಿರುತ್ತದೆ. ನಾನು ಯಾವ ಎಲೆಯ, ಯಾವ ಬುಕ್ಕಿನ, ಯಾವ ಕನಸಿನ ಬಗ್ಗೆ ಹೇಳುತ್ತಿರುವೆ ಎಂಬುದು ಅಸಲಿ ಕಲಾವಿದರಿಗೆ ಅರ್ಥವಾಗಿರುತ್ತದೆ. ನಿಜ ನಾನು ಹೇಳುತ್ತಿರುವುದು ಬ್ರಿಟಿಷರು ತಮ್ಮ ವಸಾಹುತು ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿದ್ದಾಗ ಅವರಿಗೆ ಲಭಿಸಿದ ಪುಕ್ಕಟೆ ಕಾಲವನ್ನು ಕಳೆಯಲು ಆಡುತ್ತಿದ್ದ ಇಸ್ಪೀಟ್ ಆಟದ ಬಗೆಗೆ. ಅದ್ಯಾಕೋ ನನಗೆ ಬಾಲ್ಯ ಕಾಲದಿಂದಲೂ ಇಸ್ಪೀಟ್ ಎಂಬ ಪದವೇ ಲಾಯಕ್ಕಾದ ಪದ ಎನಿಸಿದೆ. ಕಾರ್ಡ್ಸ್ ಎಂದರೆ ಖದರ್ರೆ ಇಲ್ಲ, ಅದಕ್ಕೆ ನಾನು ಬಾಯಲ್ಲಿ ಕಾರ್ಡ್ಸ್ನ್ನೂ ಮನಸ್ಸಿನಲ್ಲಿ ಇಸ್ಪೀಟನ್ನೂ ಆಡಿಕೊಂಡು ಎಂಜಾಯ್ ಮಾಡುತ್ತೇನೆ. ಆದರೆ ನನ್ನ ಸಂಗಾತಿಗೆ ಈ ಪದ ಸುತಾರಾಮ್ ಇಷ್ಟವಿಲ್ಲ. ಬದಲಾಗಿ ಕಾರ್ಡ್ಸ್ ಅಂದರೆ ಪರವಾಗಿಲ್ಲ. ಇಸ್ಪೀಟ್ ಪದ ಬಳಸಿದೆನೋ ಇವಳಿಗೆ ಎಲ್ಲಿಲ್ಲದ ಕೋಪ. ಕಾರಣ ನಮ್ಮೂರಲ್ಲಿ ಈ ಆಟ ಆಡುವವರು ಅಷ್ಟೇನು ಘನಗೌರವಗಳನ್ನು ಸಂಪಾದಿಸಿಕೊAಡವರೇನಲ್ಲ. ಅವಳು ತನ್ನ ಬಾಲ್ಯ ಕಾಲದಿಂದಲೂ ಅಂತವರನ್ನು ನೋಡಿ, ಅವರ ಬಗೆಗಿನ ಕತೆಗಳನ್ನು ಕೇಳಿ ಬಲ್ಲಳು. ಇಸ್ಪೀಟ್ ಆಡುವವರು ಕಡ್ಡಾಯವಾಗಿ ಸಿಗರೇಟು ಸೇದುತ್ತಾರೆಂದೂ, ಕುಡಿಯುತ್ತಾರೆಂದು ಸುಳ್ಳು ಹೇಳುತ್ತಾರೆಂದೂ ಮೋಸ ಮಾಡುತ್ತಾರೆಂದು ಇವೆಲ್ಲಕ್ಕೂ ಮುಖ್ಯವಾಗಿ ತಮ್ಮ ಹೆಂಡAದಿರ ತಾಳಿ ಮಾರಿ ಇಸ್ಪೀಟ್ ಆಡಲು ಹಿಂದೇಟು ಹಾಕುವುದಿಲ್ಲವೆಂದು ಬಲವಾಗಿ ನಂಬಿದ್ದ ಕಾರಣ ಅಂತವರು ಆಡುತ್ತಿದ್ದ ಆಟವನ್ನು ತಾವೂ ಆಡುತ್ತಿರುವುದರಿಂದ ಆ ಪದದ ಬದಲಿಗೆ ಕಾರ್ಡ್ಸ್ ಎಂಬ ಬಲು ಮರ್ಯಾದೆಯ ಪದ ಬಳಸಬೇಕೆಂಬುದು ಅವಳ ನಿಖರ ನಿಲುವಾಗಿತ್ತು. ಹಾಗೆ ನೋಡಿದರೆ ನಮ್ಮೂರಲ್ಲಿ ಒಂದು ಮನೆಯನ್ನು ತಮ್ಮ ಅಡ್ಡಾ ಮಾಡಿಕೊಂಡು 'ಕಾರ್ಡ್ಸ್' ಆಡುತ್ತಿದ್ದ ಬಿಳಿ ಅಂಗಿಯ ಮಾನವಂತರೂ ಬೇಲಿ ಸಾಲಲ್ಲಿ ಇಸ್ಪೀಟ್ ಆಡುವವರಿಗಿಂತಾ ಯಾವುದರಲ್ಲೂ ಕಡಿಮೆ ಇರಲಿಲ್ಲ, ಇನ್ನು ಒಂದು ಕೈ ಮೇಲು ಎನ್ನಬಹುದಾಗಿತ್ತು. ನಮ್ಮ ಕಣ್ಣ ಮುಂದೆ ಇವರೆಲ್ಲ ಮಜಾವಾದಿಗಳಾಗಿ ಮನೆಯ ದುಡ್ಡಲ್ಲಿ ಸದರಿ ಆಟವಾಡುತ್ತಾ ಕಾಲಕಳೆಯುತ್ತಿದ್ದುದನ್ನು ನಾವಿಬ್ಬರೂ ಬಲ್ಲೆವು. 


ಇದು ಕಾರ್ಡ್ಸ್ ಆಟವೋ ಇಸ್ಪೀಟ್ ಆಟವೋ, ಏನೇ ಆಗಿರಲಿ ಮ್ಯಾಜಿಕಲ್ ಮಜಾ ಕೊಡುವ, ಎಂದೆಂದೂ ಮುಗಿಯದ, ಯಾರಿಗೂ ನಿಗೂಢಗಳನ್ನು ಬಿಟ್ಟುಕೊಡದ ಹಾವು ಏಣಿ ಆಟದಂತಾ ಅನಿರೀಕ್ಷಿತ ತಿರುವುಗಳ, ಎಂತೆAತವರನ್ನೂ ಅಂತ್ರಿಸುವ ಕಲೆಯಿದೆಂದು ಯಾರಾದರೂ ಒಪ್ಪಲೇ ಬೇಕು.


ಈ ಇಸ್ಪೀಟ್ ಅಥವಾ ಕಾರ್ಡ್ಸ್ನ ಇತಿಹಾಸ ದೊಡ್ಡದೇ ಇದೆ. ಚೀನಾದಲ್ಲಿ ಆರಂಭವಾಗಿ ಅರೇಬಿಯ, ಈಜಿಪ್ಟಗಳಲ್ಲಿ ಚಿಗುರಿ, ಯೂರೋಪು ಅಮೆರಿಕಾಗಳಲ್ಲಿ ಬೆಳೆದು ಹೆಮ್ಮರವಾಗಿ ಆನಂತರ ಜಗತ್ತಿನ ಎಲ್ಲಾ ದೇಶಗಳ ಬೇಲಿಸಾಲು, ಮುರುಕು ಧರ್ಮಶಾಲೆ, ಹಳೆಮನೆ, ಕ್ಲಬ್ಬು, ಬೇಲಿಸಾಲುಗಳನ್ನು ಬಿಡದೆ ಹಬ್ಬಿದ್ದು ಇದರ ಹೆಚ್ಚುಗಾರಿಕೆ ಎನ್ನಬೇಕು. ಪ್ರಾಚೀನ ಚೀನಾದ ರಾಜಕುಮಾರಿಯರು ಹಸಿರು ಎಲೆ ಜೋಡಿಸಿಕೊಂಡು ಆಟವಾಡಲು ಶುರುಮಾಡಿದ ಈ ಆಟ ಇಲ್ಲಿಯವರೆಗೆ ನೂರಾರು ಬಗೆಯ ರೂಪಾಂತರಗಳನ್ನು ಕಂಡಿದೆ, ಎಲೆಗಳು ಕಾರ್ಡ್ಸ್ಗಳಾಗಿ ಬದಲಾಗಿರುವುದು ನಿಜವಾದರೂ ಕಾರ್ಡ್ಸ್ಗಳನ್ನು ಎಲೆ, ಲೀಫ್ ಎಂಬ ನುಡಿಗಳು ಮುಂದುವರಿದೇ ಇವೆ ಇರಲಿ.


ನನ್ನ ಇಸ್ಪೀಟಿನ ನಂಟು ಶುರುವಾದದ್ದು ಸಿಂಧನೂರಿನಲ್ಲಿ. ಅದು ಜೋಡಿ ಕೂಡಿಸುವ ಆಟದಿಂದ. ಅದನ್ನು ಯಾರೂ ಇಸ್ಪೀಟ್ ಎಂದು ಕರೆಯದೆ ಕಿರುಗಣ್ಣಿನಿಂದ ನೋಡುತ್ತಿದ್ದುದು ನನ್ನ ಗಮನಕ್ಕೆ ಬಂದು ನೋವುಂಟು ಮಾಡಿತು. ಏನಾದರೂ ಮಾಡಿ ರಮ್ಮಿ ಆಟ ಕಲಿಯಬೇಕೆಂದು ಆಸೆಪಡುತ್ತಿದ್ದಾಗ ಸಿಕ್ಕಿದ ಗುರುವೇ ಈ ನನ್ನ ಸಂಗಾತಿ. ಇವಳೇ ನನ್ನ ಕಾರ್ಡ್ಸ್ ಗುರು. ಅದೇನು ಧೈರ್ಯವೋ ನಂಬಿಕೆಯೋ ಗೊತ್ತಿಲ್ಲ ನನಗೆ ಆ ಆಟ ಕಲಿಸಿದಳು. ಎಲೆ ಉದುರುದುರಿ ಹೋಗುತ್ತಿದ್ದವು, ಮೊದ ಮೊದಲು ಆ ಹದಿಮೂರು ಕಾರ್ಡ್ಗಳನ್ನು ಹತೋಟಿಯಲ್ಲಿಟ್ಟುಕೊಂಡು ರಮ್ಮಿಗೆ ಹೊದುವಂತೆ ಜೋಡಿಸುವುದು ಎಸ್ಸೆಲ್ಸಿ ಸೆಕೆಂಡ್ ಕ್ಲಾಸ್ ಜನರಿಗೆ ಸಾಧ್ಯವಿಲ್ಲವೆಂದೇ ತೋರುತ್ತಿತ್ತು. ಪ್ರತಿ ಕಾರ್ಡ್ನ್ನು ಅವಳು ಹೆಸರಿಡಿದು ಕರೆಯುತ್ತಿದ್ದರೆ ನನಗೆ ದಿಗ್ಬçಮೆಯಾಗುತ್ತಿತ್ತು. ಇಂದಿಗೂ ನಿಧಾನವಾಗಿ ಅವುಗಳ ಹೆಸರನ್ನು ಡೈಮಂಡ್ ಬದಾಮ್ ಕಳಾವರ ಎಂದು ಹೇಳಬಲ್ಲೆನಾದರೂ ಕಿಂಗ್ ಜಾಕಿ ಕ್ವೀನ್ ಆಸ್ ಎಂದು ಹೇಳಬಲ್ಲೆನೇ ಹೊರತು ಅವುಗಳ ಯೋಗ್ಯತೆಗನುಗುಣವಾಗಿ ದಿಢೀರನೆ ಜೋಡಿಸಿ ಆಟ ತೋರಿಸಲು ವರ್ಷಗಳೇ ಬೇಕಾದವು. ನಮ್ಮೂರಲ್ಲಿ ಯುಗಾದಿ ಹಬ್ಬದ ದಿನ ರಾಜಾರೋಷವಾಗಿ ಆಡುವ ಅಂದರ್ ಬಾಹರ್ ಆಟ ಒಮ್ಮೆ ನನ್ನ ಗಮನ ಸೆಳೆದದ್ದು ನಿಜ. ಪೊರೇಲ್ ಎಂಬ ಮೂರೆಲೆ ಆಡವೂ ಅಲ್ಲಿ ನಡೆಯುತ್ತಿತ್ತು. ಅಂದರ್ ಬಾಹರ್ ಆಟ ಬಹುಬೇಗ ಮನೆ ಮಠ ಕಳೆದುಕೊಳ್ಳಲು ಸುಲಭ ಮಾರ್ಗ ತೋರಿಸುತ್ತದೆಯೆಂಬ ಮಾತುಗಳು ಕಿವಿಗೆ ಬಿದ್ದ ಮೇಲೆ ಎಚ್ಚರಗೊಂಡೆನೆAದು ಕಾಣುತ್ತದೆ. ರಾಜ-ರಾಣಿ, ಬಂದ ಕೆಚ್ಚುವುದು, ಹುಣಿಸಿ ಬೀಜದಲ್ಲಿ ದುಡ್ಡಿನ ಆಟ, ಇವೆಲ್ಲಾ ನಾನಾ ಬಗೆಯ ದುಡ್ಡಿನ ಅಟಗಳು, ಈ ಆಟಗಳಲ್ಲಿ ನಾನು ಮುಚ್ಚಿಹೋಗಿ ನನ್ನಪ್ಪನ ಜೇಬು, ನಮ್ಮವ್ವನ ಹರಕೆ ದುಡ್ಡುಗಳಿಗೆ ಕೈ ಹಾಕಿ ಯಶಸ್ವಿ ಮನೆಗಳ್ಳ ಕಳ್ಳನಾಗಿ ಪರಿವರ್ತಿತವಾಗಿದ್ದೆ. ಇದರ ಜೊತೆ ಈ ಬಗೆಯ ದುಡ್ಡಿನಾಟಗಳಿಗ ದುಡ್ಡು ಹೊಂಚಲು ಸ್ವಾಗೆ ಕಡ್ಡಿ ಸಿಗಿಯುವುದು, ಸಗಣಿ ಆಯುವುದು, ಸೀಬೆ ಹಣ್ಣುಗಳನ್ನು ಸ್ಕೂಲಿಗೆ ಒಯ್ದು ಮಾರಾಟ ಮಾಡುವುದು, ಪಟಾಕಿ ಸರವನ್ನು ಬಿಚ್ಚಿ ರಿಟೈಲ್ ಆಗಿ ಮಾರುವುದೇ ಮುಂತಾದ ಕಾಯಕಗಳನ್ನು ಮಾಡುವುದಕ್ಕೆ ರೂಢಿ ಮಾಡಿಕೊಂಡೆ, ಇರಲಿ ಮತ್ತೆ ಆಂದರ್ ಬಾಹರ್ ಆಟಕ್ಕೆ ಗೌರವ ಸಲ್ಲಿಸೋಣ. ಈ ಆಟ ಆಡುಗರನ್ನು ನೋಡುಗರನ್ನು ಒಟ್ಟಿಗೆ ಮಂತ್ರ ಮುಗ್ಧರನ್ನಾಗಿ ಮಾಡಿ ಊಟ ತಿಂಡಿಗಳನ್ನು ಮನೆ ಮಠಗಳನ್ನು ಮರೆಯುವಂತೆ ಮಾಡುವ ಮಾಟದಂತಾ ಆಟವೆಂಬುದನ್ನು ಅನುಭವದಿಂದಲೇ ಅರಿತಿದ್ದೇನೆ. ಇದನ್ನು ಆಡುವುದು ಸುಲಭ ಅರ್ಥ ಮಾಡಿಕೊಳ್ಳುವುದೂ ಸುಲಭ. ಆದರೆ ಆಟಕ್ಕೆ ದುಡ್ಡು ಹೊಂಚುವುದು ಸುಲಭವಲ್ಲ. ನೋಡ ನೋಡುತ್ತಿದ್ದಂತೆ ರಂಗೇರುತ್ತದೆ. ಇದ್ದಬದ್ದ ನೋಟುಗಳು ಅಕಾಡಕ್ಕೆ ಬಂದು ಬೀಳುತ್ತವೆ. ನೋಡುಗರಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಎಲ್ಲ ಆಟಗಾರರ ಎದೆ ಢವಗುಟ್ಟತೊಡಗುತ್ತದೆ, ಒಂದೊAದೇ ಎಲೆ ಮಗುಚಿ ಬೀಳುತ್ತಿರುತ್ತವೆ, ದೀಢೀರನೆ ಫಲಿತಾಂಶ ಮುಖಕ್ಕೆ ಅಪ್ಪಳಿಸುತ್ತದೆ. ಒಂದಿಬ್ಬರು ಮೀಸೆ ತಿರುವುತ್ತಾ ಜೀವವಿಲ್ಲದಂತೆ ಬಿದ್ದಿದ್ದ ನೋಟುಗಳಿಗೆ ಜೀವಕೊಟ್ಟು ಬಾಚಿಕೊಳ್ಳುತ್ತಾರೆ, ಇನ್ನೊಂದಷ್ಟು ಜನ ಮಕಾಡೆ ಮಲಗಿದಂತೆ ಮಣ್ಣು ಒರೆಸಿಕೊಳ್ಳುತ್ತಾ ಬೆವರು ಲೆಕ್ಕಿಸದೆ ಕಣ್ಣು ಬಿಡುತ್ತಿರುತ್ತಾರೆ. ಆಟ ನಡೆಯುತ್ತಿರುವ ಜಾಗಗಳಲ್ಲಿ ನೋಡುಗರು ಆಡುವವರಿಗಿಂತಾ ಚಡಪಡಿಕೆ ಅನುಭವಿಸುವುದು ಈ ಆಟದ ಇನ್ನೊಂದು ಲಕ್ಷಣ. ಅವರ ಆಪ್ತರಿಗೆ ದುಡ್ಡುಬರಬೇಕೆಂದು ಹೊನ್ನಮ್ಮ ಇತ್ಯಾದಿ ಗ್ರಾಮ ದೇವತೆಯಲ್ಲಿ ಪ್ರಾರ್ಥಿಸುತ್ತಾ ತದೇಕ ಚಿತ್ತದಿಂದ ಕಾರ್ಡುಗಳನ್ನು ಗೇನಿಸುತ್ತಿರುವ ದೃಶ್ಯ ರೋಚಕವಾಗಿರುತ್ತದೆ. ಒಮ್ಮೊಮ್ಮೆ ಜೋರಾಗಿ ಕೂಗಿ ಪುಗಸಟ್ಟೆ ಸಂಭ್ರಮದಲ್ಲಿ ಮುಳುಗುವುದೂ ಉಂಟು. ಈ ಮಧ್ಯೆ ಆಟವಾಡುವವರಿಗೆ ಜಾಗ, ಜಮಖಾನ ಅಥವಾ ಚಾಪೆ ಒದಗಿಸಿ ಸದರಿ ಆಟದ ಏಜನ್ಸಿ ಪಡೆದವನು ಆಟಕ್ಕೆ ಇಷ್ಟು ಎಂದು ಕಮೀಶನ್ ರೂಪದ ಹಣ ಬಾಚುತ್ತಿರುತ್ತಾನೆ. ಇವನೊಬ್ಬನಿಗೆ ಮಾತ್ರ ಸೋಲು ಗೆಲುವುಗಳ ಹಂಗಿರುವುದಿಲ್ಲ, ದಿಲ್ದಾರ್. ಸೋತು ಸುಣ್ಣವಾದವರು ಮಾತ್ರ ಪಟ್ಟು ಬಿಡದೆ ಉಂಗುರ, ವಾಚು, ಕೊರಳ ಚೈನು, ಬೈಕು ಇತ್ಯಾದಿ ಅಡವಿಟ್ಟು ದುಡ್ಡು ತಂದು ಮತ್ತೆ ಅಖಾಡಕ್ಕಿಳಿಯುವ ಸಾಹಸ ನಡೆಯುತ್ತಿರುತ್ತವೆ. ಬೀಡಿ ಸಿಗರೇಟು ಹೊಗೆ ಅಲ್ಲಿನ ಆಟಗಾರರೊಳಗಿನ ಎದೆಗುದಿಯನ್ನು ಸಂಕೇತಿಸುತ್ತಿರುತ್ತದೆ. ಕಂಡೂ ಕಾಣದಂತೆ ಎಣ್ಣೆಯಂತಾ ಪರಿಕರಗಳನ್ನು ಸ್ಟೀಲ್ ಕಪ್ಪಿನಲ್ಲಿ ತಂದು ಕೊಡುವ ವ್ಯಕ್ತಿಯೊಬ್ಬ ವಿಶೇಷ ಗತ್ತಿನಲ್ಲಿ ಓಡಾಡುತ್ತಿರುವುದನ್ನು ನೋಡುವುದೇ ಒಂದು ಚಂದ. ನೋಡುಗರನ್ನು ಕಂಟ್ರೋಲ್ ಮಾಡುವುದೂ ಇವನ ಕೆಲಸವೇ ಅಗಿರುತ್ತದೆಯಾದ್ದರಿಂದ. ಮಿನಿ ಪೋಲಿಸ್ ಛಾಯೆಯನ್ನು ಅವನಲ್ಲಿ ಗುರ್ತಿಸುವುದೇನು ಕಷ್ಟವಲ್ಲ. ಹಾಗೆಂದು ನೋಡುಗರನ್ನು ಅಲ್ಲಿಂದ ಓಡಿಸುವುದೂ ಅವನ ಉದ್ದೇಶವಾಗಿರುವುದಿಲ್ಲ. ಈ ಅಂದರ್ ಬಾಹರ್ ಆಟ್ಟಕ್ಕೆ ನೋಡುಗರೇ ಬಂಡವಾಳ, ಆಟಗಾರರಲ್ಲಿ ಇನ್ನೂ ಇನ್ನು ದುಡ್ಡು ಕಟ್ಟಿ ಮುನ್ನುಗ್ಗಿ ಆಡಲು ಇವರೇ ಪ್ರೇರಣೆ. ಆಟಗಾರರು ಜಿದ್ದಿಗೆ ಬಿದ್ದು ದುಡ್ಡು ಕಟ್ಟುವುದು ಈ ಶ್ರೀಪ್ರೇಕ್ಷಕರನ್ನು ನೋಡಿಯೇ ತಾನೆ. ಒಮ್ಮೊಮ್ಮೆ ನಡೆಯುವ ಪೋಲೀಸ್ ದಾಳಿಗಳಲ್ಲಿ ಒದೆ ತಿನ್ನುವ ಹೆಚ್ಚಿನ ರಿಸ್ಕ್ ಇರುವುದು ಈ ಶ್ರೀಪ್ರೇಕ್ಷಕರಿಗೇ ಎಂಬುದನ್ನು ಮರೆಯುವಂತಿಲ್ಲ. 


ಹೀಗೆ ನೋಡುಗರು ಹಿಟ್ಟು ಸೊಪ್ಪು ಇಲ್ಲದೆ ಒಣಪರ ಅನುಭವಿಸಿ ಕೆಟ್ಟ ಮುಖ ಹಾಕಿಕೊಂಡು ಕಟ್ಟ ಕಡೆಗೆ “ಥೋ ಇವನವ್ವನ, ಆಡೋರು ಆರು ತಿಂಗಳಿಗೆ ಹೋದರೆ ನೋಡೋರು ಮೂರೆ ತಿಂಗಳಿಗೆ ಹೋದ್ರಂತೆ ನಡ್ರುಲ...” ಎಂದು ಅಲ್ಲಿಂದ ಕಳಚಿಕೊಂಡರೆ, ಇದನ್ನೆ ಕಾಯುತ್ತಿದ್ದವರಂತೆ ಆಟವನ್ನು ಹತ್ತಿರದಿಂದ ನೋಡಲು ವಾಕವಾದ ಜಾಗ ಸಿಕ್ಕಿತೆಂಬ ಖುಷಿಯಿಂದ ಹೊಸ ಪ್ರೇಕ್ಷಕರು ಆ ಜಾಗವನ್ನು ಆಕ್ರಮಿಸುವುದು ಮಾಮೂಲು.


ಈ ಅಂದರ್ ಬಾಹರ್ಗೂ ರಮ್ಮಿ ಆಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ಆಡುವವರು ಅದನ್ನು ಆಡುವುದಿಲ್ಲ, ಅದನ್ನು ಆಡುವವರು ಇದನ್ನು ಆಡುವುದಿಲ್ಲ ಮತ್ತು ಪರಸ್ಪರ ಆಪಾದನೆಗೆ ಗುರಿಪಡಿಸಿ ತಮ್ಮ ಆಟವೇ ನಿಜವಾದ ಆಟ ಎಂದು ತಮ್ಮ ವಾದ ಮಂಡಿಸಿ ಗೆಲ್ಲಬಯಸುತ್ತಾರೆ. ಎರಡೂ ಬಗೆಯ ಆಟವಾಡುವವರು ಇದ್ದರೆ ಅಂಥವರನ್ನು ನೋಡುವ ಆಸೆ ನನಗೂ ಇದೆ. 


ರಮ್ಮಿ ನಿಧಾನವಾದ ಆಟ, ನಿಮಗೆ ಎಷ್ಟು ‘ಕಾಲ'ವಿದ್ದರೂ, ಎಷ್ಟು ಬುದ್ಧಿ ಇದ್ದರೂ ಖರ್ಚು ಮಾಡಬಹುದಾದ ಆಟವಿದು. ಈ ಆಟವನ್ನು ತುಂಬಾ ಕಲಾತ್ಮಕ ಎನ್ನುವವರೂ ಇದ್ದಾರೆ. ಈ ಆಟ ವಿದ್ವಾಂಸರನ್ನು, ರಾಜಕಾರಣಿಗಳನ್ನು, ಸಾಹಿತಿಗಳನ್ನು, ಇನ್ನಿತರ ಬಲು ಬುದ್ಧಿವಂತರನ್ನು ಸೆಳೆದುಕೊಂಡು ಅವರನ್ನೆಲ್ಲಾ ಸೋಲಿಸಿ ತಾನು ಮಾತ್ರ ಗೆದ್ದು ಕೇಕೆ ಹಾಕಿದೆ. ಅವರ ಸಮಯವನ್ನು, ಜವಾಬ್ದಾರಿಗಳನ್ನು ನುಂಗಿ ನೀರು ಕುಡಿದಿರುವುದನ್ನು ಅಲ್ಲಗಳೆಯಲು ಯಾರಿಗೆ ತಾನೆ ಸಾಧ್ಯ. ಅದಕ್ಕೆ ಖಂಡಿತ ಈ ಆಟವನ್ನು ದೂರುವುದು ಸರಿಯಲ್ಲ.


ಈ ರಮ್ಮಿ ಆಡುವವರಿಗೆ ಪ್ರೇಕ್ಷಕರಿರುವುದಿಲ್ಲ, ಇರುವಂತಿಲ್ಲ. ಇದ್ದರೆ ಅದು ನಿಜವಾದ ರಮ್ಮಿ ಆಟವಲ್ಲ. ಈ ಆಟ ಮೌನವನ್ನು ಹಾಸಿ ಮೌನವನ್ನು ಹೊದ್ದಿರುತ್ತದೆ. ಲ್ಯಾಬೊರೇಟರಿಯಲ್ಲಿ ಕೂತು ಸೂಕ್ಷö್ಮದರ್ಶಕದಲ್ಲಿನ ಜೀವವೊಂದರ ಚಲನೆಯನ್ನು ಗಮನಿಸುವ ತದೇಕಚಿತ್ತತೆ ಆ ಆಟಗಾರರಲ್ಲಿ ಮನೆಮಾಡಿರುತ್ತದೆ. ಅವರಿಗೆ ಆಗ ಏನೂ ಬೇಡ, ಬೇಕಾದದ್ದು ಒಂದೇ ಅವರಿಗೆ ಅಗತ್ಯವಾಗಿ ಬೇಕಾದ ಎಲೆ. ಐವತ್ತೆರಡು ಎಲೆಗಳ ಈ ನಿಗೂಢ ಆಟದಲ್ಲಿನ ಸಾಧ್ಯತೆಗಳನ್ನು ತಮ್ಮ ಪರವಾಗಿ ಮಾಡಿಕೊಳ್ಳುವುದೊಂದನ್ನು ಬಿಟ್ಟರೆ ಅವರಿಗೆ ಯಾವ ಭೂಕಂಪ, ಪ್ರವಾವ, ರಾಜಕೀಯ ಅಲ್ಲೋಲ ಕಲ್ಲೋಲ, ದೇಶದ ಹಸಿವು, ಸ್ವಂತ ದೇಹದ ಹಸಿವು ಯಾವುವು ಮುಖ್ಯವಲ್ಲ, ಗಮನವಿಲ್ಲ, ಎಲೆ, ಎಲೆ, ಎಲೆ. ಇಲ್ಲೂ ತಿಂಡಿ ತೀರ್ಥ ವಗೈರೆಗಳು ಪರ್ಯಾಯವಾಗಿ ತಮ್ಮ ಕೆಲಸ ಮಾಡುತ್ತಿರುತ್ತವೆ.


ತಮ್ಮ ಪಾಲಿನ ಎಲೆಗಳನ್ನು ಜೋಡಿಸಿಕೊಳ್ಳುವಾಗಲೇ ಕೆಲವರು ತಮಗೆ ಬಿದ್ದಿರುವ ಕಾರ್ಡ್ಗಳು ಎಂತವು ಎಂಬುದನ್ನು ತಮ್ಮ ಉತ್ಕಟತೆ, ಅತ್ಯುತ್ಸಾಹ, ಬೇಸರ ಮುಂತಾದ ಭಾವಗಳಿಂದ ತೋರಿಬಿಡುತ್ತಾರೆ. ಇಂತವರು ಒಮ್ಮೊಮ್ಮೆ ತಮ್ಮ ವಿವಿಧ ಬಗೆಯ ಉದ್ಘಾರಗಳ ಮೂಲಕವೂ ತಮ್ಮ ಬಂಡವಾಳ ಬಯಲು ಮಾಡಿಕೊಳ್ಳುತ್ತಾರೆ. ಆದರೆ ಈ ಆಟವೇ ಮೈಂಡ್ ಗೇಮ್ ಎಂಬುದನ್ನು ತಿಳಿದ ಕಲಾವಿದರು ಮಾತ್ರ ತಮಗೆ ಮುಖವೇ ಇಲ್ಲವೇನೋ ಎನ್ನುವಂತೆ ಮುಖ ಮಾಡಿಕೊಂಡು ಯಾರು ಅಳೆಯಲಾಗದಂತೆ ಎಚ್ಚರ ವಹಿಸುತ್ತಾರೆ. ಇನ್ನು ಕೆಲವರು ನಟನೆ ಮಾಡುವುದರಲ್ಲಿ ಪ್ರವೀಣರಾಗಿ ಅದರ ಲಾಭ ಪಡೆಯುವಲ್ಲಿ ಒಮ್ಮೊಮ್ಮೆ ಮಾತ್ರ ಯಶಸ್ವಿಯಾಗುತ್ತಾರೆ.


ಡ್ರಾಪ್ ಮಾಡುವವರೆ ಬುದ್ಧಿವಂತರೂ ಎಂಬ ಮೂಢ ನಂಬಿಕೆಯಲ್ಲಿ, ನನ್ನ ಸಂಗಾತಿ ಜೊತಿಗಿನ ಈ ಆಟದಲ್ಲಿ ಸೋತು ಸುಣ್ಣವಾಗಿದ್ದೇನೆ. ಯಾವಾಗ ಡ್ರಾಪ್ ಮಾಡಬೇಕೆಂಬುದನ್ನು ಯಾರೂ ವಿವರಿಸಲು ಸಾಧ್ಯವಿಲ್ಲ. ಒಂದು ರಮ್ಮಿ ಕಾರ್ಡ್, ಐದು ಜೋಕರ್ ಬಂದಾಗಲೂ ಬುಕ್ ಕೊಟ್ಟಿರುವೆ. ಒಂದು ಜೋಕರ್ ಇಲ್ಲದೆ ಆಡಿದಾಗ ಗೆದ್ದ ಉದಾಹರಣೆ ಇದೆ. ಹೀಗೇ ಎಂದು ಹೇಳುವ, ಗೆದ್ದೇ ಗೆಲ್ಲುತ್ತೇವೆಂದು ಬೀಗುವವರನ್ನು ಈ ಆಟ ಮಗ್ಗ ಮಲಗಿಸಿದೆ. 


ರಮ್ಮಿ ಆಡುವಾಗ ಒಬ್ಬೊಬ್ಬರು ಒಂದೊAದು ಬಗೆಯಾಗಿ ವರ್ತಿಸುವ ಪರಿ ವಿಚಿತ್ರ, ಸೋಲು ಗೆಲುವುಗಳಿಗೆ ಪ್ರತಿಕ್ರಿಯಿಸುವ ರೀತಿಯೂ ಅಷ್ಟೇ. ಸಿಗರೇಟಿನ ಮೇಲೆ ಸಿಗರೇಟು, ಪೆಗ್ಗಿನ ಮೇಲೆ ಪೆಗ್ಗು- ಕೆಲವರ ಪ್ರತಿಕ್ರಿಯೆಯಾದರೆ, ಬೇಕಾದ ಕಾರ್ಡ್ ಬರದಿದ್ದಾಗ, ಒಂದೂ ಜೋಕರ್ ಬರದಿದ್ದಾಗ ಪುಂಕನು ಪುಂಕ ಬೈಗುಳ ಪ್ರಯೋಗ ಮತ್ತೆ ಕೆಲವರದು. ಕಾರ್ಡುಗಳನ್ನು ನೆಲಕ್ಕೆಸೆದು ಸಿಟ್ಟು ತೀರಿಸಿಕೊಳ್ಳುವವರು ಮತ್ತೆ ಕೆಲವರು. ಹಲ್ಲುಕಡಿದು ಸಡಿಲಮಾಡಿಕೊಳ್ಳುವವರು ಕೆಲವರಾದರೆ, ಒಳಗೊಳಗೇ ನೊಂದು ಬೆಂದು ಬೆವರುವವರು ಹಲವು ಜನ. ಎಲ್ಲೋ ಕೆಲವರು ಮಾತ್ರ ತಾವರೆಯ ಜಲಬಿಂದುವಿನAತೆ ತಮಗೂ ಸೋಲು ಗೆಲುವುಗಳಿಗೂ ಸಂಬಂಧವಿಲ್ಲದವರಂತೆ ನಿರುಮ್ಮಳವಾಗಿ ಆಟವಾಡುತ್ತಾ ನಗುತ್ತಿರುತ್ತಾರೆ. 


ರಮ್ಮಿ ಆಟ ಅಷ್ಟು ಹಣ ಕೇಂದ್ರಿತವಾದುದಲ್ಲವೆAದರೆ ಪೂರ ಸುಳ್ಳಲ್ಲ. ಇದು ಮೌನ ಪ್ರೇರಿತ ಆಟ, ಕಾಲ ಕೇಂದ್ರಿತ ಕೂಟ. ಆಡುವವರ ಕಾಲವನ್ನು ಕಾಲಾತೀತದೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಈ ಆಟಕ್ಕಿದೆ. ಈ ಆಟವನ್ನು ಆಡುತ್ತಲೆ ಊಟ ತಿಂಡಿ ಅಷ್ಟೇ ಅಲ್ಲ ಮನೆಯನ್ನು ಮರೆತು ಹೂತುಹೋದವರಿದ್ದಾರೆ, ಆಡಾಡುತ್ತಲೆ ರಿಟೈರ್ಡ್ ಆದವರಿದ್ದಾರೆ, ರಮ್ಮಿಯ ರಮ್ಯ ಲೋಕದಲ್ಲಿ ಮುಳುಗಿ ಗೊತ್ತೇ ಆಗದಂತೆ ತೀರಿಕೊಂಡವರಿದ್ದಾರೆ. ತಮ್ಮ ಕಪ್ಪು ಕೂದಲು ಯಾವಾಗ ಬೆಳ್ಳಗಾಯಿತೆಂದು ನೋಡಿಕೊಳ್ಳದೆ ಆಟದಲ್ಲಿ ಮರುಗಿದವರಿದ್ದಾರೆ. ತಮ್ಮ ಮಕ್ಕಳ ಹೆಸರುಗಳನ್ನೇ ಮರೆತು ತೆಬ್ಬೆಬ್ಬೆ ಎನ್ನುವವರು, ಹೀಗೆ... ಒಟ್ಟಿನಲ್ಲಿ ಈ ಆಟ ಆಳ ಅಗಲ ದೊಡ್ಡದು. ಮಟ್ಕ, ಕ್ಯಾಸಿನೋಗಳಲ್ಲಿನ ವಿವಿಧ ಬಗೆಯ ಜೂಜುಗಳು, ಲಾಟರಿ, ಅಂದರ್ ಬಾಹರ್, ಪೊರೇಲ್‌ಗಳಿಗಿಂತಾ ಎಷ್ಟೋ ವಾಸಿ ಎನ್ನುವವರು ಬಹಳ ಜನರಿದ್ದಾರೆ. ಯಾರು ಏನು ಹೇಳಿಕೊಂಡರೂ ಇಸ್ಪೀಟು ಆಟ ಡೇಂಜರ್ ಎಂಬ ಈ ಗಂಡಾಟದ ಬಗೆಗಿನ ಹೆಂಗಸರ ನಿಲುವನ್ನು ತಳ್ಳಿ ಹಾಕುವುದು ಹೇಗೆ ಸಾಧ್ಯ. 


ಅದಕ್ಕೆ ಈ ಆಪಾದನೆ ಅಪಾಯಗಳಿಂದ ತಪ್ಪಿಸಿಕೊಳ್ಳಲು ನನ್ನ ಸಂಗಾತಿಯೊAದಿಗೆ ರಮ್ಮಿ ಆಟಕ್ಕೆ ಅವಳ ಸಮ್ಮತಿಯ ಮೇರೆಗೆ ಒಂದು ಗಂಟೆ ಕಾಲವನ್ನು ಮೀಸಲಿರಿಸಿದ್ದೇನೆ. ಈ ಆಟ ಒಮ್ಮೊಮ್ಮೆ ನಮ್ಮನ್ನು ಯೇಮಾರಿಸಿ ಎರಡು ಮೂರು ಗಂಟೆಗಳನ್ನು ಕಬಳಿಸಿದ ಉದಾಹರಣೆಯೂ ಉಂಟು. ಇದೇ ಅದರ ಮೋಡಿ. ಏನೇ ಇರಲಿ ರಮ್ಮಿ ಆಟದ ಥ್ರಿಲ್ ವಿಚಿತ್ರವಾದುದು. ನಾವು ದುಡ್ಡು ಕಟ್ಟಿಕೊಂಡು ಆಟವಾಡುತ್ತೇವೆ. ದುಡ್ಡಿಲ್ಲದೆ ಆಡುವ ಆಟ ನೀರಿಗೆ ಹೆಪ್ಪು ಹಾಕಿಕೊಂಡು ಕುಡಿದಂತೆ ಎನ್ನುತ್ತಾಳೆ ಇವಳು. ಆದರೆ ಕ್ಯಾಷ್ ಇಟ್ಟುಕೊಂಡು ಆಡುವುದಿಲ್ಲ. ಎಲ್ಲಾ ಸಾಲದ ಲೆಕ್ಕ, ಏಕೆಂದರೆ ನಾವು ಆಡುವ ರಮ್ಮಿ ಆಟ ಒಂದು ದಿನಕ್ಕೆ ಮುಗಿಯುವುದಿಲ್ಲವಲ್ಲ ಅದಕ್ಕೇ ಈ ಸಾಲದ ಲೆಕ್ಕ, ಆದರೆ ಪಕ್ಕ ಲೆಕ್ಕ. ಈಗ ನನ್ನ ಮೇಲೆ ಐದು ಸಾವಿರ ರೂಪಾಯಿ ಸಾಲವಿದೆ. ಕೊರೋನಾ ಕಾಲವಿದಾಗಿರುವುದರಿಂದ ಬಚಾವಾಗಿದ್ದೇನೆ. ನಮ್ಮ ಕರಾರಿನ ಪ್ರಕಾರ ಐದು ಸಾವಿರ ಯಾರ ಮೇಲಾದರೂ ಹೊತ್ತರೆ ಅವರು ಕ್ಯಾಷ್ ಕಕ್ಕ ಬೇಕಾಗಿತ್ತು. ಆದರೆ ಈಗ ತಾತ್ಕಾಲಿಕ ತಡೆ ಅಷ್ಟೇ. ವಸೂಲಿ ಕಡ್ಡಾಯ. ಪರಿಸ್ಥಿತಿ ಹೀಗಿರುವುದರಿಂದಲೇ ಸೋತಾಗ ಅಹಂ ಕೊತಕೊತ ಕುದಿಯುತ್ತದೆ. ಬುಕ್ ಸಿಕ್ಕಿದಾಗ ಹಲ್ಲು ಕಟಕಟಿಸುತ್ತದೆ. ಗೆದ್ದಾಗ ಮೆರೆದಾಡುವುದನ್ನುತಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ನಿಜಕ್ಕೂ ಈ ಆಟ ಒಳಕುದಿಯನ್ನು ಎರಡರಿಂದ ಮೂರು ಡಿಗ್ರಿ ಸೆಲ್ಷಿಯಸ್ ಹೆಚ್ಚಿಸಬಲ್ಲದು. ಅಳುವಿನಂತಾ ಭಾವವನ್ನು ಸ್ರವಿಸಬಲ್ಲದು. ನಾನು ಗೆದ್ದಾಗ ಕುಣಿಯುವುದಕ್ಕಿಂತಾ ಬಿದ್ದಾಗ ಕುದಿಯುವುದು ಜಾಸ್ತಿ. ಇವಳು ಸ್ಥಿತಪ್ರಜ್ಞಳು. ಯಾವಾಗಲೂ ಗೆಲ್ಲುವವರು ಸ್ಥಿತಪ್ರಜ್ಞರಾಗಿರುವುದು ಹೆಚ್ಚೇನಲ್ಲ ಅಲ್ಲವೆ. ಹೀಗೆ ನಿರಂತರವಾಗಿ ಗೆಲ್ಲುವುದಕ್ಕೆ ಅಷ್ಟ ಅದೃಷ್ಟ, ದೆಸೆ, ಮಾಯಾ, ಕಾಲ, ನಕ್ಷತ್ರ, ಹಣೆಬರಹ ಎಂಬಿವೇ ಮುಂತಾದ ಅಂಶಗಳು ಕಾರಣ ಎಂದು ನಂಬುವವರೇ ಹೆಚ್ಚು. ಇವರು ಅನೇಕ ಬಾರಿ ಪಿಗ್ಗಿ ಬೀಳುತ್ತಾರೆ, ಅದಕ್ಕೆ ಬೇರೆ ಊಹಿಸಲಸಾಧ್ಯವಾದ ಆದರೆ ದುಖಃದಾಯಕ ಮೊಂಡು ವಾದ ಮಂಡಿಸುತ್ತಾರೆ. ಕೆಲವರು ತಮಗೆ ಬೀಳುವ ಕನಸುಗಳ ಆಧಾರದ ಮೇಲೆ ಆಟವಾಡುತ್ತಾರೆ. ಇನ್ನೂ ಕೆಲವರು ದೇವರಿಗೆ ಇಷ್ಟು ಕೊಡುತ್ತೇವೆಂದು ಹರಕೆ ಕಟ್ಟಿ ಆಡುತ್ತಾರೆ. ಇನ್ನೂ ಕೆಲವರು ತಮ್ಮ ಹಾವಭಾವಗಳ ಮೂಲಕ, ಊಹಿಸಲಸಾಧ್ಯವಾದ ನಡೆಗಳಿಂದ ಹೆದರಿಸಲು ಯತ್ನಿಸುತ್ತಾರೆ, ಆದರಿದಕ್ಕೆ ಮಿತಿಯಿದೆ. ನಿರಂತರವಾಗಿ ಗೆಲ್ಲುವುದಕ್ಕೂ ನಿರಂತರವಾಗಿ ಸೋಲುವುದಕ್ಕೂ ಕೊನೆಯಿದ್ದೇ ಇರುತ್ತದೆ. ಹೀಗಲ್ಲದಿದ್ದರೆ ಈ ಆಟಕ್ಕೆ ಬೆಲೆ ಇರುತ್ತಿರಲಿಲ್ಲ. ಒಬ್ಬರೇ ಗೆಲ್ಲುತ್ತಾ ಹೋಗಿದ್ದರೆ ಈ ಆಟವೇ ಸೋಲುತ್ತಿತ್ತು. ಇಷ್ಟರ ಮಧ್ಯೆಯೂ ಒಬ್ಬ ವ್ಯಕ್ತಿಯ ಬುದ್ಧಿವಂತಿಕೆ, ಮುಂಗಾಣ್ಕೆ, ತಾಳ್ಮೆ, ಇವೆಲ್ಲಾ ಮುಖ್ಯ ಎಂಬುದು ಸತ್ಯ. ಅನಿಶ್ಚಿತತೆ ಮತ್ತು ಶಾಕ್ ಕೊಡುವ ಗುಣ ಲಕ್ಷಣಗಳಿಂದಾಗಿಯೇ ಇದು ತನ್ನು ಆಟ ಮುಂದುವರಿಸಿದೆ. ಪ್ರತಿ ಆಟವೂ ಹೊಸ ಆಟವಾಗಿ ಮುಂದುವರಿಯುತ್ತಿದೆ. ಇಷ್ಟÀ್ಟರ ನಡುವೆ ಈ ಆಟವನ್ನು ಬಡಿದಿಟ್ಟುಕೊಂಡು ಆಡುತ್ತಾ ಇಂದಿಗೂ ಸಂತೋಷವಾಗಿ ಗೆಳೆಯರೊಂದಿಗೆ ಸಂತೋಷವಾಗಿರುವವರು ಇದ್ದೇ ಇದ್ದಾರೆ.