ಕುಂಭಕರ್ಣನನ್ನು ಈ ರೀತಿ ಮಲಗಿಸಲಾಗಿ...

ಸರಳವಾಗಿ ಶಾಂತಿಯಿಂದ ಜೀವನ ನಡೆಸುವ ಎಲ್ಲಾ ಗುಣಗಳಿದ್ದರೂ ಹಿರಿಯಣ್ಣನ ಕಾರಣದಿಂದ ತನ್ನ ಮಕ್ಕಳಾದ ಕುಂಬ,ವಿಕುಂಬ ಮತ್ತು ಬೀಮರನ್ನೂ ಕಳೆದುಕೊಂಡು ಅಣ್ಣನ ಏಳಿಗೆಗಾಗೇ ತನ್ನ ಪ್ರಾಣವನ್ನೂ ತೆರುವ ಕುಂಭಕರ್ಣನ ಬಗ್ಗೆ ಮನಸ್ಸು ಮೂಕವಾಗುತ್ತದೆ. ಇಂತಹ ಹಲವು ಪಾತ್ರಗಳು ರಾಮಾಯಣ ಮತ್ತು ಮಹಾಭಾರತದಲ್ಲಿದ್ದು ಮನಸ್ಸನ್ನು ಕಲಕುತ್ತವೆ.

ಕುಂಭಕರ್ಣನನ್ನು ಈ ರೀತಿ ಮಲಗಿಸಲಾಗಿ...

ದಯಾ ಗಂಗನಗಟ್ಟ

 

         ಹೆಚ್ಚು ನಿದ್ದೆ ಮಾಡುವ ವ್ಯಕ್ತಿಗೆ ಅದೇನು ಕುಂಭಕರ್ಣನಂಗೆ ನಿದ್ದೆ ಮಾಡ್ತಿಯ ಎಂದು ಹಂಗಿಸುವುದನ್ನು ಕೇಳಿದ್ದೇವೆ.ಅತಿಯಾದ ನಿದ್ರಾವಸ್ಥೆ ಇವತ್ತಿನ ಕಾಲಕ್ಕೆ ಒಂದು ರೋಗವೆನಿಸಿಕೊಳ್ಳುತ್ತದೆ. ಹಾಗೆಯೇ ನಿದ್ರೆ ಬರದೇ‌ ಒದ್ದಾಡುವುದೂ ಒಂದು ದೊಡ್ಡ ಸಮಸ್ಯೆಯೇ. ಕುಂಭಕರ್ಣ ಪುರಾಣ ಇತಿಹಾಸದಲ್ಲಿ ಬರುವ ಒಂದು ಆಕ್ತಿದಾಯಕ ಪಾತ್ರ. ನಮಗೆಲ್ಲಾ‌ ಅವನು ಅತೀ ನಿದ್ದೆ ಮಾಡುತ್ತಿದ್ದ ಬೃಹದಾಕಾರದ ರಾಕ್ಷಸ ಎಂದಷ್ಟೇ ಗೊತ್ತು ಆದರೆ ಈ‌ ಕುಂಭಕರ್ಣನು ಹೆಚ್ಚು ಸಂಕೀರ್ಣ ವ್ಯಕ್ತಿಯಾಗಿದ್ದ. ರಾಕ್ಷಸ ಕುಲದವನಾದ ಇವನು ರಾವಣನ ಕಿರಿಯ ಸಹೋದರ. ದೈತ್ಯಾಕಾರದ ದೇಹ ಹಾಗೂ ಅತಿಯಾದ ಹಸಿವನ್ನು ಹೊಂದಿದ್ದ ವ್ಯಕ್ತಿ. ಇವನಿಗೆ ಹಸಿವಾದರೆ ಅದೊಂದು ಭಯಾನಕ ಸನ್ನಿವೇಶವಾಗುತ್ತಿತ್ತು. ಇದರ ಹೊರತಾಗಿಯೂ ಅವನು ಧರ್ಮನಿಷ್ಠ, ಬುದ್ಧಿವಂತ ಮತ್ತು ಧೈರ್ಯಶಾಲಿಯಾಗಿದ್ದ. ಅವನ ಧರ್ಮಜ್ಞಾನದ ಬಗ್ಗೆ ಇಂದ್ರನೇ ಅಸೂಯೆಗೆ ಒಳಗಾಗಿದ್ದನು ಎನ್ನಲಾಗುತ್ತದೆ. ಏಕೆಂದರೆ ಕುಂಭಕರ್ಣನು ಅಧಿಕಾರದಲ್ಲಿ ಸರ್ವೋಚ್ಚನು, ಅಸಾಧಾರಣ ಜ್ಞಾನ ಉಳ್ಳವನು ಮತ್ತೆ ನೀತಿವಂತನು ಆಗಿದ್ದನು. ಅವನು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಹಾಗೂ ವಿಷಯಗಳು ವಸ್ತುನಿಷ್ಟತೆಯಿಂದ ಕೂಡಿರುತ್ತಿದ್ದವು.

     ಇವನ ಇಂತಹ ಒಳ್ಳೆಯ ಗುಣಗಳನ್ನೆಲ್ಲಾ ಅತಿರೇಕದ ಹಸಿವು ಮತ್ತು ಸತ್ತಂತೆ ಭಾಸವಾಗುವ ನಿದ್ರೆಯು ನುಂಗಿಹಾಕಿದ್ದು ದುರಂತವೇ ಸರಿ.

     ಜನಪದ ಹಾಡುಗಬ್ಬವೊಂದರ ಪ್ರಕಾರ, ರಾವಣನು ಕುಬೇರನಿಗಿಂತ ಉತ್ತಮ ಸ್ಥಾನವನ್ನು ಪಡೆಯಬೇಕು ಎಂಬ ಆಸೆಯಿಂದ ತನ್ನ ಸಹೋದರರಾದ ವಿಭೀಷಣ ಮತ್ತು ಕುಂಭಕರ್ಣರಿಗೆ ಬ್ರಹ್ಮನನ್ನು ಮೆಚ್ಚಿಸುವಂತೆ ದೀರ್ಘಕಾಲದ ತೀವ್ರವಾದ ತಪಸ್ಸನ್ನು ಮಾಡಲು ಹೇಳುತ್ತಾನೆ. ಅಣ್ಣನ ಆಜ್ಞೆಯಂತೆ ಕುಂಭಕರ್ಣನು ದೀರ್ಘ ಸಮಯಗಳ ಕಾಲ ತಪಸ್ಸನ್ನು ಮಾಡುತ್ತಾನೆ,ತನ್ನ ಏಕಾಗ್ರ ಚಿತ್ತದ ಸಹಾಯದಿಂದ ಬ್ರಹ್ಮನನ್ನು ಮೆಚ್ಚಿಸುವುದರಲ್ಲಿ ಸಫಲನಾಗುತ್ತಾನೆ. ಆದರೆ ಇಂದ್ರನಿಗೆ ಇವನ ಶಕ್ತಿಯ ಅರಿವಿದ್ದದ್ದರಿಂದ ಈ ಮೊದಲೇ ಸರಸ್ವತಿಯ ಬಳಿ ಹೋಗಿ ವರವನ್ನು ಕೇಳುವ ಸಮಯಕ್ಕೆ ಸರಿಯಾಗಿ ಕುಂಭಕರ್ಣನ ನಾಲಿಗೆಯನ್ನು ಕಟ್ಟಿಹಾಕುವಂತೆ ಕೇಳಿಕೊಂಡಿರುತ್ತಾನೆ. ಅದರಂತೆ ಸರಸ್ವತಿಯು ಕುಂಭ ಕರ್ಣನ ನಾಲಿಗೆಯನ್ನು ಕಟ್ಟಿ ಹಾಕುತ್ತಾಳೆ. ಹಾಗಾಗಿ ಕುಂಭ ಕರ್ಣ ಬ್ರಹ್ಮನಲ್ಲಿ ವರ ಕೇಳುವಾಗ 'ಇಂದ್ರಾಸನ' ಬೇಕು ಎಂದು ಕೇಳುವ ಬದಲು 'ನಿದ್ರಾಸನ' ಎಂದು ಕೇಳುತ್ತಾನೆ. ಅವನು 'ನಿರ್ದೇವತ್ವಂ' ಅಂದರೆ ದೇವತೆಗಳ ಸರ್ವನಾಶವಾಗಲಿ ಎಂದು ಕೇಳಬೇಕಾಗಿತ್ತು,ನಾಲಿಗೆ ಹೊರಳದೇ ನಿದ್ರಾವತ್ವಾಮ್ ಎನ್ನುತ್ತಾನೆ. ಬ್ರಹ್ಮನು ತಥಾಸ್ತು ಎಂದುಬಿಡುತ್ತಾನೆ. ಈ ಹಾಡನ್ನು ಕೇಳಿದಾಗ ನನಗೆ ತಳಸಮುದಾಯಗಳು ಶಿಕ್ಷಣ ವಂಚನೆಯ ಕಾರಣದಿಂದ,ಶಿಕ್ಷಿತರು ಎನಿಸಿಕೊಂಡವರ ಹುನ್ನಾರಗಳಿಂದ ಉನ್ನತ ಅಧಿಕಾರಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದುದನ್ನು ಕುಂಭಕರ್ಣನ ಈ ಪ್ರಸಂಗವು ಹೇಳುತ್ತಿದೆ ಅನಿಸಿತು. ಕುಂಭಕರ್ಣನು ದೇವತೆಗಳ ರಾಜನಾದರೆ ಸ್ವರ್ಗಲೋಕದಲ್ಲಿ ತೊಂದರೆಗಳು ಉಂಟಾಗುತ್ತವೆ,ತನ್ನ ಪದವಿಗೆ ಕುತ್ತು ಬರುತ್ತದೆ ಎಂಬ ಇಂದ್ರನ ಹುನ್ನಾರದಿಂದ ಕುಂಭಕರ್ಣನ ತಪೋಸಾಧನೆಯು ವಿಫಲವಾಗಿ ಹೋಗುತ್ತದೆ.ರಾವಣನಿಗೆ ಈ ವಿಷಯ ತಿಳಿದ ತಕ್ಷಣ ಬ್ರಹ್ಮನಲ್ಲಿಗೆ ಹೋಗಿ ನನ್ನ ತಮ್ಮನಿಗೆ ಸಿಕ್ಕಿರುವುದು ವರವಲ್ಲ, ಶಾಪ. ಆ ಶಾಪದಿಂದ ಮುಕ್ತಿ ಗೊಳಿಸಬೇಕು ಎಂದು ಕೇಳಿಕೊಂಡನು. ಆಗ ಕುಂಭಕರ್ಣನು ಆರು ತಿಂಗಳು ನಿದ್ರೆ ಹಾಗೂ ಆರು ತಿಂಗಳು ಎಚ್ಚರದಿಂದ ಇರುವ ಶಕ್ತಿಯನ್ನು ಪಡೆದುಕೊಂಡನು. ಹಾಗಾಗಿ ಕುಂಭಕರ್ಣ ಆರು ತಿಂಗಳ ಕಾಲ ಮಲಗಿದ್ದನು. ಹೀಗೆ ಮಲಗಿ ಎದ್ದಾಗ ಅವನು ಅತಿಯಾದ ಹಸಿವಿನಿಂದ ಬಳಲುತ್ತಿದ್ದನು. ಅಂತಹ ಸಂದರ್ಭದಲ್ಲಿ ಅದೆಷ್ಟೇ ಆಹಾರವನ್ನು ಒದಗಿಸಿದರೂ ಅವನ ಹಸಿವು ತಣಿಯುತ್ತಿರಲಿಲ್ಲ, ಅವನಿಗೆ‌ಆಹಾರ ಒದಗಿಸುವುದೇ ಒಂದು ಬಹುದೊಡ್ಡ ಯಜ್ಞ ದಂತೆ ನಡೆಯುತ್ತಿತ್ತು. ಅಷ್ಟು ಆಹಾರ ಸೇವನೆ ಮತ್ತು ನಿದ್ರೆಯ ಕಾರಣದಿಂದಲೇ ಕುಂಭಕರ್ಣನು ಅತ್ಯಂತ ಶಕ್ತಿಶಾಲಿ. ಅವನನ್ನು ಸೋಲಿಸಲು ಹಾಗೂ ಸವಾಲು ಒಡ್ಡಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ಒಂದು ಹಂತದಲ್ಲಿ ಕುಂಭಕರ್ಣನು ನಿದ್ರೆಯಿಂದ ಎಚ್ಚರಗೊಂಡ ಬಳಿಕ 2000 ಕೊಡ ಅಥವಾ ಹೂಜಿ ನೀರನ್ನು ಕುಡಿಯುತ್ತಿದ್ದನು ಮತ್ತು ಅವನು ಎಚ್ಚರಗೊಂಡಾಗ ಅವನ ಸುತ್ತಲೂ ಅವ್ಯವಸ್ಥೆ ಹಾಗೂ ವಿನಾಶಗಳು ಸಂಭವಿಸುತ್ತಿದ್ದವು ಎಂದಿದೆ.

      ರಾಮ ಮತ್ತು ರಾವಣನ ನಡುವಿನ ಯುದ್ಧ ಪ್ರಾರಂಭವಾದಾಗ ವಾನರ ಸೈನ್ಯವು ರಾವಣನ ಸೈನ್ಯದ ಅನೇಕ ಸೈನಿಕರನ್ನು ಕೊಂದುಹಾಕುತ್ತದೆ. ಆಗ ರಾವಣನಿಗೆ ತನ್ನ ಸಹೋದರನ ಸಹಾಯ ಅಗತ್ಯವಾಗುತ್ತದೆ. ಹಾಗಾಗಿ ಕುಂಭಕರ್ಣನನ್ನು ಎಬ್ಬಿಸುವ ಪ್ರಯತ್ನವನ್ನು ಮಾಡುತ್ತಾನೆ. ಕುಂಭಕರ್ಣನನ್ನು ಎಬ್ಬಿಸುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಆನೆಗಳ ಸೈನ್ಯವನ್ನು ಅವನ ಮೇಲೆ ಹತ್ತಿಸಿ,ಸಾವಿರಾರು ಈಟಿಗಳಿಂದ ತಿವಿಸಿ,ಕಿವಿಯ ಬಳಿ ಸಾವಿರಾರು ನಗಾರಿಗಳನ್ನು ಬಡಿಸಿ, ಅವನ ಸುತ್ತಲೂ ಘಮಘಮಿಸುವ ಆಹಾರದ ರಾಶಿಯನ್ನೇ ಸುರಿಸಿ ಹೀಗೆ ಹತ್ತು ಹಲವು ಹರಸಾಹಸ ಮಾಡಿ ಅವನನ್ನು ಎಚ್ಚರ ಗೊಳಿಸಲಾಗುತ್ತದೆ.

    ಅಂತೂ ಇಂತೂ ಎದ್ದ ಕುಂಭಕರ್ಣನಿಗೆ ರಾವಣ ಮತ್ತು ರಾಮನ ನಡುವಿನ ಯುದ್ಧ ಸಂಗತಿಯನ್ನು ತಿಳಿಸಲಾಯಿತು. ಆಗ ಧರ್ಮಜ್ಞಾನಿಯಾದ ಕುಂಭ ಕರ್ಣನು ರಾವಣನಿಗೆ ನೀನು ಮಾಡಿರುವುದು ತಪ್ಪು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಾನೆ. ಆದರೆ ರಾವಣನು ತಾನು ಮಾಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡನು. ಆಗ ಕುಂಭಕರ್ಣನು 'ಜಗತ್ ಜನನಿಯನ್ನು ಅಪಹರಿಸಿದ ನಂತರ ಸಂತೋಷವನ್ನು ನಿರೀಕ್ಷಿಸುತ್ತಿರುವ ನಿಮ್ಮಷ್ಟು ಮೂರ್ಖರು ಯಾರು ಇಲ್ಲ,'' ಎಂದು ಹೇಳುತ್ತಾನೆ.

      ರಾಮನೊಂದಿಗೆ ಯುದ್ಧ ಮಾಡಿದರೆ ಯುದ್ಧದ ಬಳಿಕ ಉಂಟಾಗುವ ಪರಿಣಾಮಗಳ ಬಗ್ಗೆ ರಾವಣನಿಗೆ ತಿಳಿಸಲು ಪ್ರಯತ್ನಿಸುತ್ತಾನೆ. ರಾಮನಲ್ಲಿ ಕ್ಷಮೆ ಯಾಚಿಸಿ, ಸೀತೆಯನ್ನು ಒಪ್ಪಿಸುವಂತೆ ರಾವಣನಿಗೆ ಬುದ್ಧಿ ಹೇಳುತ್ತಾನೆ. ಹೀಗೆ ಮಾಡುವುದರಿಂದ ನಾವು ನಮ್ಮ ರಾಕ್ಷಸ ಕುಲವನ್ನು ಉಳಿಸಿಕೊಳ್ಳಬಹುದು. ಅಲ್ಲದೆ ನಮಗೆ ಉಳಿದಿರುವ ಏಕೈಕ ಮಾರ್ಗ ಇದು ಎಂದು ಹೇಳುತ್ತಾನೆ. ಆದರೆ ರಾವಣನು ಅವನ ಮಾತುಗಳನ್ನು ನಿರಾಕರಿಸುತ್ತಾನೆ ಆಗ ಅನಿವಾರ್ಯವಾಗಿ ತನ್ನ ಸಹೋದರನ ಪರವಾಗಿ ನಿಂತು ಯುದ್ಧ ಮಾಡಲು ಸಂಕಟದಿಂದಲೇ ಮುಂದಾಗುತ್ತಾನೆ. ಅವನಿಗೆ ರಾಮನ ವಿರುದ್ಧ ನಿಂತು ಯುದ್ಧ ಮಾಡುವುದು ಇಷ್ಟವಿರಲಿಲ್ಲ. ತಾವು ಮಾಡುವುದು ಅಧರ್ಮ ಎನ್ನುವುದು ತಿಳಿದಿತ್ತು. ಆದರೆ ಸಹೋಹದರನ ಜೊತೆ ನಿಂತು ಹೋರಾಡುವುದು ಅನಿವಾರ್ಯವಾಗಿತ್ತು. ರಾಮನು ವಿಷ್ಣುವಿನ ಅವತಾರ. ಯುದ್ಧದಲ್ಲಿ ಅವನನ್ನು ಸೋಲಿಸುವುದು ಅಸಾಧ್ಯವಾದ ಸಂಗತಿ ಎನ್ನುವುದು ತಿಳಿದಿತ್ತು. ಎಲ್ಲದರ ಹೊರತಾಗಿಯೂ ರಾವಣನ ಸೈನ್ಯ ಯುದ್ಧ ಭೂಮಿಗೆ ಹೋಗಿತ್ತು. ಕುಂಭಕರ್ಣನು ಅತ್ಯಂತ ಶಕ್ತಿ ಶಾಲಿಯಾಗಿದ್ದನು. ಅವನ ಶಕ್ತಿ ಹಾಗೂ ಯುಕ್ತಿಯಿಂದ ರಾಮನ ಸೈನ್ಯದ ಮೇಲೆ ಸಾಕಷ್ಟು ಹಾನಿ ಮಾಡುತ್ತಾನೆ. ಹನುಮಂತನನ್ನೇ ಗಾಯಗೊಳಿಸುತ್ತಾನೆ. ಸುಗ್ರೀವನನ್ನು ಪ್ರಜ್ಞಾಹೀನನಾಗುವವರೆಗೆ ಹೊಡೆದು, ಸೆರೆಯಲ್ಲಿ ಇಟ್ಟು ಆಟವಾಡಿಸುತ್ತಾನೆ. ಬಹಳ ದೊಡ್ಡ ಹೋರಾಟದ ನಂತರ ರಾಮನಿಂದ ಕೊಲ್ಲಲ್ಪಡುತ್ತಾನೆ.

       ಕುಂಭಕರ್ಣನದು ಬಹಳ ಸರಳವಾದ ವ್ಯಕ್ತಿತ್ವ. ಆರು ತಿಂಗಳು ಮಲಗುವುದು. ಮತ್ತೆ ಆರು ತಿಂಗಳು ಎಚ್ಚರವಾಗಿ ಇರುವುದು, ಚನ್ನಾಗಿ ತಿನ್ನುವುದು ಇಷ್ಟೇ ಇದರಾಚೆಗೆ ಅವನಿಗೆ ಬೇರೇನೂ ಬೇಕಿಲ್ಲ. ಅವನು ಎಚ್ಚರವಾಗಿರುವಾಗ ತನ್ನ ಹೃದಯ ಹೇಳಿದ ಮಾತುಗಳನ್ನು ಕೇಳುತ್ತಿದ್ದ. ತನ್ನ ಸಂಬಂಧಿಗಳನ್ನು ಭೇಟಿಯಾಗಿ ಅವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಿದ್ದ. ರಾಕ್ಷಸ ಕುಲದಲ್ಲಿ ಜನಿಸಿರುವುದರಿಂದ ರಾಕ್ಷಸ ಪಟ್ಟ ದೊರೆತಿತ್ತೇ ಹೊರತು ರಾಕ್ಷಸರಿಗೆ ಆರೋಪಿತ ಎನ್ನಲಾಗುವ ಯಾವ ಕ್ರೂರ ಗುಣಗಳೂ ಅವನಿಗಿರಲಿಲ್ಲ. ಅವನು ಅನಗತ್ಯವಾದ ಯಾವುದೇ ಹಿಂಸೆಯನ್ನು ಮಾಡುತ್ತಿರಲಿಲ್ಲ. ಹಾಗಾಗಿ ನಾರದ ಮುನಿಗಳು ಅವನಿಗೆ ತತ್ವಶಾಸ್ತ್ರ ಎಲ್ಲಾ ಅಂಶಗಳನ್ನು ಕಲಿಸಿ ಕೊಡುತ್ತಿದ್ದರು ಎಂಬ ಕತೆಯೂ ಇದೆ.

      ಕುಂಭಕರ್ಣನ ಪಾತ್ರ ನನಗೆ ಮಹಾಭಾರತದ ದುರ್ಯೋದನನ ಸಹೋದರನಾದ ವಿಕರ್ಣನಂತೇ ಕಾಣುತ್ತದೆ. ಏಕೆಂದರೆ ವಿಕರ್ಣ ಹಾಗೂ ಕುಂಭಕರ್ಣ ಇಬ್ಬರಿಗೂ ತಮ್ಮ ತಮ್ಮ ಸಹೋದರರು ಅಧರ್ಮದಿಂದ ಯುದ್ಧಮಾಡುತ್ತಿದ್ದಾರೆ ಎನ್ನುವುದು ತಿಳಿದಿರುತ್ತದೆ. ಆದರೆ ಸಹೋದರ ಕರ್ತವ್ಯ ಎಂಬುದಕ್ಕೆ ಕಟ್ಟುಬಿದ್ದು ಅವರು ಸಹೋದರರ ಪರವಾಗಿ ನಿಂತು ಹೋರಾಡುತ್ತಾರೆ. ಯುದ್ಧದಲ್ಲಿ ಎದುರಾಳಿಗಳ ವಿರುದ್ಧ ಉತ್ತಮ ದಾಳಿಯನ್ನು ಸಹ ನಡೆಸುತ್ತಾರೆ. ನಂತರ ಯುದ್ಧದಲ್ಲಿಯೇ ಮರಣವನ್ನು ಹೊಂದುತ್ತಾರೆ. ಸಾವಿನ ಮೂಲಕ ತಮ್ಮ ಆತ್ಮಕ್ಕೆ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ವಿಭೀಷಣನೂ ಇದೇ ಧರ್ಮ ಸಂಕಟಕ್ಕೆ ಬಿದ್ದವನೇ.

    ಸರಳವಾಗಿ ಶಾಂತಿಯಿಂದ ಜೀವನ ನಡೆಸುವ ಎಲ್ಲಾ ಗುಣಗಳಿದ್ದರೂ ಹಿರಿಯಣ್ಣನ ಕಾರಣದಿಂದ ತನ್ನ ಮಕ್ಕಳಾದ ಕುಂಬ,ವಿಕುಂಬ ಮತ್ತು ಬೀಮರನ್ನೂ ಕಳೆದುಕೊಂಡು ಅಣ್ಣನ ಏಳಿಗೆಗಾಗೇ ತನ್ನ ಪ್ರಾಣವನ್ನೂ ತೆರುವ ಕುಂಭಕರ್ಣನ ಬಗ್ಗೆ ಮನಸ್ಸು ಮೂಕವಾಗುತ್ತದೆ. ಇಂತಹ ಹಲವು ಪಾತ್ರಗಳು ರಾಮಾಯಣ ಮತ್ತು ಮಹಾಭಾರತದಲ್ಲಿದ್ದು ಮನಸ್ಸನ್ನು ಕಲಕುತ್ತವೆ.