ರಾಜಪ್ರಭುತ್ವ ಕಾಲಮಾನದ ಜೀವ ವಿರೋಧಿ ಕಾಯ್ದೆಗಳು  ಪ್ರಜಾಪ್ರಭುತ್ವದ ಕಾಲಕ್ಕೂ ಬೇಕಾ? ವರ್ತಮಾನ - ನಾ ದಿವಾಕರ

ರಾಜಪ್ರಭುತ್ವ ಕಾಲಮಾನದ ಜೀವ ವಿರೋಧಿ ಕಾಯ್ದೆಗಳು  ಪ್ರಜಾಪ್ರಭುತ್ವದ ಕಾಲಕ್ಕೂ ಬೇಕಾ? ವರ್ತಮಾನ ನಾ ದಿವಾಕರ

ರಾಜಪ್ರಭುತ್ವ ಕಾಲಮಾನದ   ಜೀವ ವಿರೋಧಿ ಕಾಯ್ದೆಗಳು    ಪ್ರಜಾಪ್ರಭುತ್ವದ ಕಾಲಕ್ಕೂ ಬೇಕಾ?   ವರ್ತಮಾನ  - ನಾ ದಿವಾಕರ

ರಾಜಪ್ರಭುತ್ವ ಕಾಲಮಾನದ


ಜೀವ ವಿರೋಧಿ ಕಾಯ್ದೆಗಳು 


ಪ್ರಜಾಪ್ರಭುತ್ವದ ಕಾಲಕ್ಕೂ ಬೇಕಾ?


ಎಲ್ಲ ಸರ್ಕಾರಗಳೂ ತನ್ನ ವಿರೋಧಿಗಳನ್ನು ದಮನಿಸಲು, ಪ್ರತಿರೋಧದ ದನಿಗಳನ್ನು ಅಡಗಿಸಲು ಮತ್ತು ಪ್ರಜಾಸತ್ತಾತ್ಮಕ ಮಾದರಿಯ ಶಾಂತಿಯುತ ಜನಾಂದೋಲನಗಳನ್ನು ಹತ್ತಿಕ್ಕಲು ವಸಾಹತು ಕಾಲದ ರಾಜದ್ರೋಹ ಕಾಯ್ದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಕಾಯ್ದೆಯನ್ನು ಬಳಕೆ ಮಾಡಿಕೊಂಡಿವೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಎರಡನೆಯ ಅವಧಿಯಲ್ಲಿ 316 ಪ್ರಕರಣಗಳು ದಾಖಲಾಗಿದ್ದರೆ 2014ರ ನಂತರದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 551 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಕ್ರಮವಾಗಿ 3988 ಮತ್ತು 9318 ಮಂದಿ ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ. 


2014ರ ನಂತರ ಸೃಷ್ಟಿಸಲಾದ ನಗರ ನಕ್ಸಲ್‌ ಮತ್ತು ತುಕಡೆ ತುಕಡೆ ಗ್ಯಾಂಗ್‌ ಎಂಬ ಪರಿಕಲ್ಪನೆಗಳಡಿಯಲ್ಲೇ ಹಲವು ಚಿಂತಕರ, ಹೋರಾಟಗಾರರ ಬಂಧನವಾಗಿದೆ. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಿದ 3800ಕ್ಕೂ ಹೆಚ್ಚು ಜನರ ವಿರುದ್ಧ ರಾಜದ್ರೋಹದ ಆರೋಪ ಹೊರಿಸಲಾಗಿದೆ. ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲೂ ಎಂಟು ಜನರ ವಿರುದ್ಧ ಈ ಕಾಯ್ದೆಯನ್ನು ಬಳಸಲಾಗಿದೆ. 

ರಾಜಪ್ರಭುತ್ವ ಕಾಲಮಾನದ


ಜೀವ ವಿರೋಧಿ ಕಾಯ್ದೆಗಳು 


ಪ್ರಜಾಪ್ರಭುತ್ವದ ಕಾಲಕ್ಕೂ ಬೇಕಾ?


ವರ್ತಮಾನ

ನಾ ದಿವಾಕರ

1947ರಲ್ಲಿ ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ಭಾರತ 1950ರಲ್ಲಿ ಗಣತಂತ್ರವನ್ನು ಅಪ್ಪಿಕೊಂಡ ನಂತರವೂ ಅಧಿಕಾರ ರಾಜಕಾರಣದ ಪಾರಂಪರಿಕ ಪಳೆಯುಳಿಕೆಗಳಿಂದ ವಿಮೋಚನೆ ಪಡೆಯಲು ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಸಾಕ್ಷಿ, ಭಾರತದ ಪ್ರಜಾಪ್ರಭುತ್ವ ಇಂದಿಗೂ ಚಾಲನೆಯಲ್ಲಿಟ್ಟಿರುವ ಪ್ರಜಾತಂತ್ರ ವಿರೋಧಿ ಕರಾಳ ಶಾಸನಗಳು. ವಿಶ್ವದ ಶ್ರೇಷ್ಠ ಸಂವಿಧಾನ ಎಂದೇ ಭಾವಿಸಲಾಗುವ ಭಾರತದ ಸಂವಿಧಾನದಲ್ಲೂ, ಪ್ರಜಾತಂತ್ರ ವಿರೋಧಿ ಎನ್ನಲಾಗುವ ಶಾಸನಗಳಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಅನಿವಾರ್ಯವಾಗಿ ಒಪ್ಪಲೇಬೇಕಾದ ಕೆಲವು ಕಾರಣಗಳೂ ಇವೆ. ವಿಭಜನೆಯ ನಂತರ ಉಂಟಾದ ಕ್ಷೋಭೆ, ನೆರೆ ರಾಷ್ಟ್ರ ಪಾಕಿಸ್ತಾನದ ಉಪಟಳ, ಆಂತರಿಕವಾಗಿ ಈಶಾನ್ಯ ರಾಜ್ಯಗಳನ್ನೂ ಒಳಗೊಂಡಂತೆ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಕೇಳಿಬಂದ ಪ್ರತ್ಯೇಕತೆಯ ಕೂಗು, ತತ್ಪರಿಣಾಮ ಸೃಷ್ಟಿಯಾದ ತೀವ್ರಗಾಮಿ ಜನಾಂದೋಲನಗಳು, ಸಶಸ್ತ್ರ ಹೋರಾಟಗಳು, ಜಾಗತಿಕ ಭಯೋತ್ಪಾದನೆ, ಕಾಶ್ಮೀರದ ಬೆಳವಣಿಗೆಗಳು ಮತ್ತು 1980ರ ನಂತರ ಉಲ್ಬಣಿಸಿದ ಭಯೋತ್ಪಾದನೆ ಇವೆಲ್ಲವೂ ಪ್ರಭುತ್ವದ ದೃಷ್ಟಿಯಲ್ಲಿ ರಾಷ್ಟ್ರದ ಅಖಂಡತೆಗೆ ಮಾರಕವಾಗುವಂತಹ ಬೆಳವಣಿಗೆಗಳಾಗಿಯೇ ಕಾಣುತ್ತವೆ. ಈ ಕಾರಣಕ್ಕಾಗಿಯೇ ನ್ಯಾಯಾಂಗವೂ ಸಹ ಟಾಡಾ, ಪೋಟಾ ಮತ್ತು ಇವತ್ತಿನ ಯುಎಪಿಎ ಮುಂತಾದ ಕರಾಳ ಶಾಸನಗಳಿಗೆ ಷರತ್ತುಬದ್ಧ ಮಾನ್ಯತೆ  ನೀಡುತ್ತಾ ಬಂದಿದೆ. ದೇಶದ ಅಖಂಡತೆಗೆ ಭಂಗ ತರುವಂತಹ ವಿಚ್ಚಿದ್ರಕಾರಿ ಶಕ್ತಿಗಳು ಆಂತರಿಕವಾಗಿ ಸಕ್ರಿಯವಾಗಿರುವ ವಾಸ್ತವವನ್ನೂ ತಳ್ಳಿಹಾಕುವಂತಿಲ್ಲ.

ಆದರೆ ಭಯೋತ್ಪಾದನೆಯಾಗಲೀ, ಸಶಸ್ತ್ರ ಹೋರಾಟಗಳಾಗಲೀ, ಪ್ರತ್ಯೇಕತಾವಾದವಾಗಲೀ ಏಕೆ ಉದ್ಭವಿಸುತ್ತವೆ ಎಂಬ ಪ್ರಶ್ನೆಗೂ ಉತ್ತರ ಶೋಧಿಸಬೇಕಿದೆ. ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂಬ ಉದಾತ್ತ ಧ್ಯೇಯದೊಂದಿಗೆ ಸಮ ಸಮಾಜವನ್ನು ನಿರ್ಮಿಸುವ ಕನಸು ಹೊತ್ತ ಭಾರತದ ಸಂವಿಧಾನ, ಭಾರತೀಯ ಪ್ರಭುತ್ವಕ್ಕೆ ಒಂದು ಸುಂದರ ಸಮಾಜವನ್ನು ಕಟ್ಟಬೇಕಾದ ಎಲ್ಲ ಪರಿಕರಗಳನ್ನೂ ಒದಗಿಸುತ್ತದೆ. ಅಸಮಾಧಾನಕ್ಕೊಳಗಾದ ಜನಸಮುದಾಯಗಳಲ್ಲಿ ಹಲವು ರೀತಿಯ ಅಸಮ್ಮತಿಯ ಲಕ್ಷಣಗಳಿರುತ್ತವೆ. ಪ್ರಾಂತೀಯ, ಜನಾಂಗೀಯ, ಭಾಷಿಕ, ಸಾಮುದಾಯಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಅನೇಕ ಸಂದರ್ಭಗಳಲ್ಲಿ ಜನಸಮುದಾಯಗಳ ಅಸ್ತಿತ್ವದ ಮಾನದಂಡಗಳಾಗಿಬಿಡುತ್ತವೆ. ಈ ಅಸ್ಮಿತೆಗಳಿಗೆ ಧಕ್ಕೆ ಉಂಟಾಗುವ ಸಂದರ್ಭಗಳಲ್ಲಿ ಭುಗಿಲೇಳುವ ಆಕ್ರೋಶ ಮತ್ತು ಹೊರಹೊಮ್ಮುವ ಹತಾಶೆಯನ್ನು ಮಾನವೀಯ ನೆಲೆಯಲ್ಲಿ ಸಂಧಾನ ಸೂತ್ರಗಳ ಮೂಲಕ ಬಗೆಹರಿಸುವುದು ಪ್ರಜಾಸತ್ತಾತ್ಮಕ ಮಾರ್ಗ. ಸಂಧಾನ ಯತ್ನಗಳು ವಿಫಲವಾದಾಗ ಸಹಜವಾಗಿಯೇ ಪ್ರಭುತ್ವ ಬಲಪ್ರಯೋಗಕ್ಕೆ ಮುಂದಾಗುತ್ತದೆ. ವೈವಿಧ್ಯಮಯ ಸಂಸ್ಕೃತಿಯಷ್ಟೇ ಸಮಸ್ಯೆಗಳನ್ನೂ ಹೊತ್ತುಕೊಂಡು ಸ್ವಾತಂತ್ರ್ಯ ಗಳಿಸಿದ ಭಾರತ ಈ ಮಾರ್ಗಗಳನ್ನು ಅನುಸರಿಸುವಾಗ ಎದುರಾದ ಪರಿಹರಿಸಲಾಗದ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿಯೇ ಕೆಲವು ಪ್ರಜಾತಂತ್ರ ವಿರೋಧಿ ಕಾಯ್ದೆ ಕಾನೂನುಗಳನ್ನೂ ಚಾಲ್ತಿಯಲ್ಲಿರಿಸಿಕೊಂಡು ಬಂದಿದೆ. ಇಂತಹ ಕಾಯ್ದೆಗಳಲ್ಲಿ ವಸಾಹತು ಕಾಲದ ರಾಜದ್ರೋಹ ಕಾಯ್ದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ ಸಹ ಒಂದು. 

75 ವರ್ಷಗಳ ಪ್ರಜಾಪ್ರಭುತ್ವವನ್ನು ಕಂಡಿರುವ ಒಂದು ದೇಶಕ್ಕೆ ರಾಜಪ್ರಭುತ್ವದ ಒಂದು ಕರಾಳ ಶಾಸನ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರ ಶೋಧಿಸುತ್ತಲೇ ಆರು ದಶಕಗಳನ್ನು ಕಳೆದಾಗಿದೆ. ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ, ರಾಜದ್ರೋಹ ಅಥವಾ ದೇಶದ್ರೋಹದ ಆರೋಪ ಹೊರಿಸಿ ಸೆರೆಮನೆಗೆ ತಳ್ಳಲು ಬಳಸಲಾಗುತ್ತಿದ್ದ ಈ ಶಾಸನ ವಸಾಹತು ಆಳ್ವಿಕೆಯೊಂದಿಗೇ ಅವಸಾನ ಕಾಣಬೇಕಿತ್ತು. ಆದರೆ ಮೇಲೆ ಹೇಳಿರುವ ಕೆಲವು ಕಾರಣಗಳಿಗಾಗಿ, ದೇಶದ ಅಖಂಡತೆ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಇದನ್ನು ಉಳಿಸಿಕೊಳ್ಳಲಾಯಿತು.  ಇದು ಅಗತ್ಯವೋ ಇಲ್ಲವೋ ಎನ್ನುವುದಕ್ಕಿಂತಲೂ, ಈ ಕಾಯ್ದೆಯಲ್ಲಿ ವ್ಯಾಖ್ಯಾನಿಸಲ್ಪಡುವ ʼದೇಶದ್ರೋಹʼದ ಪರಿಕಲ್ಪನೆ ಒಂದು ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯಲ್ಲಿ ಹೇಗೆ ಪರಿಗಣಿಸಲ್ಪಡಬೇಕು ಎನ್ನುವುದು ಮುಖ್ಯವಾಗುತ್ತದೆ. ರಾಜಪ್ರಭುತ್ವದಲ್ಲಿ ದೇಶ ಮತ್ತು ಪ್ರಭುತ್ವ ಒಂದೇ ಆಗಿರುತ್ತದೆ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಭುತ್ವವು ಭೌಗೋಳಿಕ ದೇಶವನ್ನು ಸಂರಕ್ಷಿಸಲು ಇರುವ ಒಂದು ಪ್ರಜಾಸತ್ತಾತ್ಮಕ ಸಂಸ್ಥೆಯಾಗಿರುತ್ತದೆ. ಹಾಗಾಗಿ ಪ್ರಭುತ್ವ ಜಾರಿಗೊಳಿಸುವ ಕಾಯ್ದೆ ಕಾನೂನುಗಳು, ಅನುಸರಿಸುವ ಆಡಳಿತ ನೀತಿಗಳು ಪ್ರಜೆಗಳ ಅಸಮಾಧಾನಕ್ಕೆ ಕಾರಣವಾದಾಗ ಉದ್ಭವಿಸುವ ಪ್ರತಿರೋಧಗಳನ್ನು ಸಾರಾಸಗಟಾಗಿ ದೇಶವಿರೋಧಿ ಎಂದು ಪರಿಭಾವಿಸಿ, ದೇಶದ್ರೋಹದ ಆರೋಪ ಹೊರಿಸಲಾಗುವುದಿಲ್ಲ. ಆದರೂ ಬಹುತೇಕ ಪ್ರಜಾಪ್ರಭುತ್ವ ದೇಶಗಳಲ್ಲಿ ಈ ಸಮೀಕರಣ ಜಾರಿಯಲ್ಲಿದ್ದು ಪ್ರಭುತ್ವ ವಿರೋಧಿ ದನಿಗಳನ್ನು ದೇಶ ವಿರೋಧಿ ಎಂದೇ ಭಾವಿಸಲಾಗುತ್ತದೆ.

ಭೌಗೋಳಿಕ ದೇಶದ ರಕ್ಷಣೆ ಪ್ರಭುತ್ವದ ಹೊಣೆಯಂತೆಯೇ ನಾಗರಿಕರ ಜವಾಬ್ದಾರಿಯೂ ಹೌದು. ಈ ರಕ್ಷಣೆಯ ಪ್ರಕ್ರಿಯೆಯಲ್ಲಿ ಕ್ಷೋಭೆ ಉಂಟುಮಾಡುವ ಮೂಲಕ ದೇಶದ ಅಖಂಡತೆ ಮತ್ತು ಏಕತೆಗೆ ಭಂಗ ತರುವಂತಹ ಯಾವುದೇ ಸಾಂಘಿಕ, ವ್ಯಕ್ತಿಗತ ಅಥವಾ ಸಾಂಸ್ಥಿಕ ಚಟುವಟಿಕೆಗಳನ್ನು ದೇಶವಿರೋಧಿ ಎಂದೇ ಪರಿಗಣಿಸಲಾಗುತ್ತದೆ. ಆದರೆ ಆಂತರಿಕವಾಗಿ ಪ್ರಭುತ್ವ ಜಾರಿಗೊಳಿಸುವ ಕೆಲವು ಕಾಯ್ದೆ ಕಾನೂನುಗಳನ್ನು ಈ ಪರಿಧಿಯಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ. ಏಕೆಂದರೆ ಪ್ರಭುತ್ವದ ನೀತಿಗಳನ್ನು ವರ್ತಮಾನದ ಆರ್ಥಿಕ ಸ್ಥಿತ್ಯಂತರಗಳು ಮತ್ತು ಇತರ ಕಾರಣಗಳು ನಿರ್ದೇಶಿಸುತ್ತವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ, ಕಾರ್ಪೋರೇಟ್‌ ಮಾರುಕಟ್ಟೆಯಿಂದಲೇ ನಿರ್ದೇಶಿತವಾಗುವ ಹಲವು ನೀತಿಗಳನ್ನು ಪ್ರಭುತ್ವ ಅನುಮೋದಿಸಿದಾಗ, ಈ ಸಾಮಾಜಿಕ-ಆರ್ಥಿಕ ನೀತಿಗಳಿಂದ ಅನ್ಯಾಯಕ್ಕೊಳಗಾಗುವ, ಸಾಮಾಜಿಕವಾಗಿ ವಂಚನೆಗೊಳಗಾಗುವ ಮತ್ತು ಅಭಿವೃದ್ಧಿ ಪಥದಿಂದ ಹೊರಗುಳಿಯುವ ಜನಸಮೂಹಗಳು ಪ್ರತಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿರುತ್ತವೆ. ಇಂತಹ ಪ್ರತಿರೋಧಗಳನ್ನೂ ದೇಶವಿರೋಧಿ ಎಂದು ಪರಿಗಣಿಸುವ ಆಡಳಿತಾರೂಢ ಸರ್ಕಾರಗಳ ಧೋರಣೆಯೇ ಕರಾಳ ಶಾಸನಗಳಿಗೂ ಕಾರಣವಾಗುತ್ತದೆ.  ಇಂತಹ ಪ್ರತಿರೋಧಗಳನ್ನು ತಡೆಗಟ್ಟಲು ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ಸಂಹಿತೆಯ ಕಾನೂನುಗಳಲ್ಲೂ ಸಾಕಷ್ಟು ಅವಕಾಶಗಳಿದ್ದಾಗ್ಯೂ, ಭಾರತದಲ್ಲಿ ಸರ್ಕಾರಗಳು ಪೋಟಾ, ಟಾಡಾ, ಯುಎಪಿಎ ಮತ್ತು ರಾಜದ್ರೋಹ ಕಾಯ್ದೆಯಂತಹ ಹಲವು ಕರಾಳ ಶಾಸನಗಳನ್ನು ಬಳಸುತ್ತಲೇ ಬಂದಿವೆ. 

ಪ್ರಭುತ್ವದ ಅಥವಾ ಚುನಾಯಿತ ಸರ್ಕಾರದ ಆಡಳಿತ ನೀತಿಗಳನ್ನು, ಸಾಮಾಜಿಕಾರ್ಥಿಕ ನೀತಿಗಳನ್ನು ಪ್ರಶ್ನಿಸುವ, ಟೀಕಿಸುವ ಮತ್ತು ಖಂಡಿಸುವ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನ ಕೆಲವು ಷರತ್ತುಗಳೊಂದಿಗೆ ನೀಡಿದೆ. ಇಂತಹ ಪ್ರತಿರೋಧಗಳು ದೇಶದ ಏಕತೆ ಮತ್ತು ಅಖಂಡತೆಗೆ ಭಂಗ ತರುವಂತಹ ಚಟುವಟಿಕೆಗಳಿಗೆ ನೆರವಾಗಕೂಡದು ಅಥವಾ ಪ್ರಚೋದಕವಾಗಕೂಡದು ಎಂಬ ಅರಿವಿನೊಂದಿಗೇ ಸ್ವತಂತ್ರ ಭಾರತದಲ್ಲಿ ನೂರಾರು ಜನಾಂದೋಲನಗಳು ರೂಪುಗೊಂಡು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ನೆರವಾಗಿವೆ. ಇಂತಹ ಯಾವುದೇ ಪ್ರತಿರೋಧಗಳಲ್ಲಿ ಸಹಜವಾಗಿಯೇ ಆಡಳಿತಾರೂಢ ಸರ್ಕಾರದ ವಿರುದ್ಧ ದನಿ ಕೇಳಿಬರುತ್ತದೆ. ತಾವು ಚುನಾಯಿಸಿದ ಸರ್ಕಾರದ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧ ಮತ್ತು ಈ ಪ್ರತಿನಿಧಿಗಳಿಂದಲೇ ಆಯ್ಕೆಯಾಗುವ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ವಿರುದ್ಧ ಜನಸಾಮಾನ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ ಅದಕ್ಕೆ ಆಡಳಿತ ನೀತಿಗಳ ಅಸಮರ್ಪಕತೆಯೇ ಕಾರಣವಾಗಿರುತ್ತದೆ. ಭಾರತದ ಸಾರ್ವಭೌಮ ಪ್ರಜೆಗಳಿಗೆ ಸಂವಿಧಾನ ಈ ಪ್ರತಿರೋಧದ ಹಕ್ಕುಗಳನ್ನು ಸಂವಿಧಾನ ಅನುಚ್ಚೇದ 14, 19 ಮತ್ತು 19(1) ಮೂಲಕ ನೀಡಿದೆ. ಮೂಲಭೂತ ಹಕ್ಕುಗಳೊಂದಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೀಡಿರುವ ಈ ಸಾಂವಿಧಾನಿಕ ನಿಯಮಗಳು, ಕೆಲವು ಷರತ್ತುಗೊಳಪಟ್ಟಿದ್ದು, ದೇಶದ ಅಖಂಡತೆಗೆ ಧಕ್ಕೆ ಉಂಟುಮಾಡದ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಪ್ರಜೆಗಳಿಗೆ ನೀಡಿದೆ. ದುರಂತ ಎಂದರೆ ಭಾರತದಲ್ಲಿ ಚುನಾಯಿತ ಸರ್ಕಾರಗಳು ಇಂತಹ ಪ್ರತಿರೋಧಗಳನ್ನೂ ಸಹ ಯುಎಪಿಎ, ರಾಜದ್ರೋಹ ಕಾಯ್ದೆಯಂತಹ ಕರಾಳ ಶಾಸನಗಳ ವ್ಯಾಪ್ತಿಗೊಳಪಡಿಸಿ ಜನಸಾಮಾನ್ಯರ ದನಿಯನ್ನು ಹತ್ತಿಕ್ಕಲು ಯತ್ನಿಸುತ್ತಿವೆ. 

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124 ಎ ರಾಜದ್ರೋಹ ಎಂದರೆ ಏನು ಎನ್ನುವುದನ್ನು ವ್ಯಾಖ್ಯಾನಿಸುತ್ತದೆ. ಪ್ರಭುತ್ವದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸುವಂತಹ, ಅತೃಪ್ತಿ ಅಥವಾ ದ್ವೇಷ ಮೂಡಿಸುವಂತಹ,  ಯಾವುದೇ ಪ್ರಯತ್ನಗಳು, ಮಾತುಗಳ ಮೂಲಕ, ಬರವಣಿಗೆಯ ಮೂಲಕ ಅಥವಾ ಸಂಕೇತಗಳ ಮೂಲಕ ವ್ಯಕ್ತವಾದರೆ ಅಂತಹ ಚಟುವಟಿಕೆಗಳನ್ನು, ಸಾಹಿತ್ಯವನ್ನು ದೇಶದ್ರೋಹ ಅಥವಾ ರಾಜದ್ರೋಹ ಎಂದು ಈ ಕಾಯ್ದೆ ವ್ಯಾಖ್ಯಾನಿಸುತ್ತದೆ. ವಸಾಹತು ಆಳ್ವಿಕೆಯಲ್ಲಿದ್ದ ಪ್ರಭುತ್ವದ ಸ್ವರೂಪ ನಿರಂಕುಶಾಧಿಕಾರವಾಗಿದ್ದುದರಿಂದ ಈ ಕಾಯ್ದೆ ತರ್ಕಬದ್ಧವಾಗಿ ಕಾಣಬಹುದಿತ್ತೇನೋ. ಆದರೆ ವರ್ತಮಾನದ ಸಂದರ್ಭದಲ್ಲಿ ಭಾರತ ಒಂದು ಪ್ರಜಾಸತ್ತಾತ್ಮಕ ಸಂವಿಧಾನವನ್ನಾಧರಿಸಿದ ಗಣತಂತ್ರ ವ್ಯವಸ್ಥೆಯನ್ನು ಹೊಂದಿರುವಾಗ ಇದೇ ವ್ಯಾಖ್ಯಾನವನ್ನು ಇಂದಿಗೆ ಅನ್ವಯಿಸಲಾಗುವುದಿಲ್ಲ.  ಈ ನಿಟ್ಟಿನಲ್ಲಿ ಸೆಕ್ಷನ್‌ 124ಎ ಕುರಿತು, ಕೇಂದ್ರ ಕಾನೂನು ಆಯೋಗವು 2018ರಲ್ಲೇ “ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಏಕರೀತಿಯ ಅಭಿಪ್ರಾಯವನ್ನು ಹೊಂದಿರಬೇಕು ಎಂಬುದು ದೇಶಪ್ರೇಮವನ್ನು ಅಳೆಯುವ ಮಾನದಂಡವಾಗಕೂಡದು. ಪ್ರಭುತ್ವ ಅಥವಾ ಪ್ರಭುತ್ವದ ಸಂಸ್ಥೆಗಳನ್ನು ಕಟುವಾಗಿ ಟೀಕಿಸುವುದೇ ದೇಶದ್ರೋಹ ಆಗಲು ಸಾಧ್ಯವಿಲ್ಲ, ಕಾರಣ ಯಾವುದೇ ಒಂದು ನಿರ್ದಿಷ್ಟ ಸಂಸ್ಥೆ ಅಥವಾ ಲಾಂಛನವು ಸಮಸ್ತ ದೇಶದ ಮೂರ್ತ ರೂಪವಾಗಿ ಕಾಣಲಾಗುವುದಿಲ್ಲ ” ಎಂದು ಹೇಳಿರುವುದನ್ನು ಗಮನಿಸಬೇಕಿದೆ. 
ಈ ಹಿನ್ನೆಲೆಯಲ್ಲೇ ರಾಜದ್ರೋಹ ಕಾಯ್ದೆಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ 1962ರ ಕೇದಾರನಾಥ್‌ ಸಿಂಗ್‌ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನು ಪರಿಗಣಿಸಬೇಕಿದೆ. ರಾಜದ್ರೋಹ ಕಾಯ್ದೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಬಳಸಬೇಕು ಎಂದು ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯ ಈ ತೀರ್ಪಿನಲ್ಲಿ “ಸಾರ್ವಜನಿಕವಾಗಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಹಿಂಸಾ ಪ್ರಚೋದಕವಾಗಿದ್ದರೆ, ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡುವಂತಿದ್ದರೆ, ತಕ್ಷಣದ ಪರಿಣಾಮಗಳನ್ನು ಉಂಟುಮಾಡುವಂತಿದ್ದರೆ, ಕಾನೂನುಬಾಹಿರ ಮತ್ತು ಅಕ್ರಮ ಮಾರ್ಗಗಳಿಂದ ಸರ್ಕಾರವನ್ನು ಬುಡಮೇಲು ಮಾಡುವ ಉದ್ದೇಶ ಹೊಂದಿದ್ದರೆ ” ಅಂತಹ ಚಟುವಟಿಕೆಗಳನ್ನು ಸೆಕ್ಷನ್ 124 ಎ ವ್ಯಾಪ್ತಿಗೊಳಪಡಿಸಿ ರಾಜದ್ರೋಹ ಕಾಯ್ದೆಯನ್ನು ಅನ್ವಯಿಸಬಹುದು ಎಂದು ಹೇಳಿತ್ತು. ಕೇದಾರನಾಥ್‌ ಸಿಂಗ್‌ ಪ್ರಕರಣದಲ್ಲಿ ನ್ಯಾಯಾಂಗವು ರೂಪಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಸರ್ಕಾರಗಳು ಪಾಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು 2021ರಲ್ಲಿ ವಿನೋದ್‌ ದುವಾ ಪ್ರಕರಣದ ಸಂದರ್ಭದಲ್ಲಿ  ಪುನರುಚ್ಚರಿಸಿತ್ತು. 

ಆದರೆ ಕಳೆದ ಆರು ದಶಕಗಳಲ್ಲಿ ರಾಜದ್ರೋಹ ಕಾಯ್ದೆಯನ್ನು ಬಳಸಿರುವ ವಿಧಾನವನ್ನು ಗಮನಿಸಿದಾಗ, ನ್ಯಾಯಾಂಗದ ಈ ಮಾನದಂಡಗಳನ್ನು ಯಾವುದೇ ಸರ್ಕಾರವೂ ಪಾಲಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಎಲ್ಲ ಸರ್ಕಾರಗಳೂ ತನ್ನ ವಿರೋಧಿಗಳನ್ನು ದಮನಿಸಲು, ಪ್ರತಿರೋಧದ ದನಿಗಳನ್ನು ಅಡಗಿಸಲು ಮತ್ತು ಪ್ರಜಾಸತ್ತಾತ್ಮಕ ಮಾದರಿಯ ಶಾಂತಿಯುತ ಜನಾಂದೋಲನಗಳನ್ನು ಹತ್ತಿಕ್ಕಲು ಈ ಕಾಯ್ದೆಯನ್ನು ಬಳಕೆ ಮಾಡಿಕೊಂಡಿವೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಎರಡನೆಯ ಅವಧಿಯಲ್ಲಿ 316 ಪ್ರಕರಣಗಳು ದಾಖಲಾಗಿದ್ದರೆ 2014ರ ನಂತರದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 551 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಕ್ರಮವಾಗಿ 3988 ಮತ್ತು 9318 ಮಂದಿ ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ 70ರಷ್ಟು ಆರೋಪಿಗಳು, ಯುಪಿಎ ಅವಧಿಯ ಶೇ 30ರಷ್ಟು ಆರೋಪಿಗಳು ಜಾಮೀನು ಪಡೆಯಲಾಗದೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.  2014ರ ನಂತರ ಸೃಷ್ಟಿಸಲಾದ ನಗರ ನಕ್ಸಲ್‌ ಮತ್ತು ತುಕಡೆ ತುಕಡೆ ಗ್ಯಾಂಗ್‌ ಎಂಬ ಪರಿಕಲ್ಪನೆಗಳಡಿಯಲ್ಲೇ ಹಲವು ಚಿಂತಕರ, ಹೋರಾಟಗಾರರ ಬಂಧನವಾಗಿದೆ. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಿದ 3800ಕ್ಕೂ ಹೆಚ್ಚು ಜನರ ವಿರುದ್ಧ ರಾಜದ್ರೋಹದ ಆರೋಪ ಹೊರಿಸಲಾಗಿದೆ. ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲೂ ಎಂಟು ಜನರ ವಿರುದ್ಧ ಈ ಕಾಯ್ದೆಯನ್ನು ಬಳಸಲಾಗಿದೆ. 

ಆಡಳಿತಾರೂಢ ಸರ್ಕಾರಗಳು ರೂಪಿಸುವ ಸಾಮಾಜಿಕ ಮತ್ತು ಆರ್ಥಿಕ ಆಡಳಿತ ನೀತಿಗಳು ಎಂದಿಗೂ ಸಾರ್ವತ್ರಿಕ ಸಮ್ಮತಿ ಪಡೆಯುವುದಿಲ್ಲ. ಇದು ಎಲ್ಲ ದೇಶಗಳಲ್ಲೂ ಕಾಣಬಹುದಾದ ವಿದ್ಯಮಾನ. ಜನಸಾಮಾನ್ಯರು ತಮ್ಮದೇ ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಮುದಾಯಿಕ ಕಾರಣಗಳಿಗಾಗಿ ಕೆಲವು ನೀತಿಗಳನ್ನು ವಿರೋಧಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಹಜ ಪ್ರಕ್ರಿಯೆ. ಇಂತಹ ಪ್ರತಿರೋಧಗಳನ್ನು ಸಹಾನುಭೂತಿಯೊಂದಿಗೆ, ಸಾಂವಿಧಾನಿಕ ಚೌಕಟ್ಟಿನಲ್ಲಿ, ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಪರಾಮರ್ಶೆಗೊಳಪಡಿಸಿ, ಬಿಕ್ಕಟ್ಟುಗಳನ್ನು ಮತ್ತು ಸಂದಿಗ್ದತೆಗಳನ್ನು ಪರಿಹರಿಸುವುದು ಒಂದು ಜವಾಬ್ದಾರಿಯುತ ಪ್ರಜಾಸತ್ತೆಯ ಕರ್ತವ್ಯ ಮತ್ತು ನೈತಿಕ ಹೊಣೆ. ಜನಸಾಮಾನ್ಯರು ತಮ್ಮದೇ ಆದ ಸೈದ್ಧಾಂತಿಕ, ತಾತ್ವಿಕ ಆಲೋಚನೆಗಳನ್ನು ಸಾಂಸ್ಥಿಕವಾಗಿಯೋ, ಸಂಘಟಿತರಾಗಿಯೋ ವ್ಯಕ್ತಪಡಿಸುವ ಸಂದರ್ಭದಲ್ಲಿ ಸಾಮುದಾಯಿಕ ಹಿತಾಸಕ್ತಿಗಳೇ ಪ್ರಧಾನವಾಗಿ ಕೆಲವೊಮ್ಮೆ ಹೋರಾಟದ ಹಾದಿಗಳು ಭಿನ್ನವಾದ ಆಯಾಮಗಳನ್ನು ಪಡೆದುಕೊಳ್ಳುತ್ತವೆ. ಪ್ರಭುತ್ವದ ಆಡಳಿತ ನೀತಿಗಳು ಅಥವಾ ಶಾಸನಗಳು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂಬ ಭಾವನೆ ಉಂಟಾದಲ್ಲಿ ಇಂತಹ ಹೋರಾಟಗಳು ತೀವ್ರತೆ ಪಡೆದುಕೊಳ್ಳುವುದೂ ಸಹಜ. ಪೌರತ್ವ ತಿದ್ದುಪಡಿ ಕಾಯ್ದೆ ಇದಕ್ಕೊಂದು ನಿದರ್ಶನ. 

ಇಂತಹ ಸಂದರ್ಭಗಳಲ್ಲಿ ಒಂದು ಚುನಾಯಿತ ಸರ್ಕಾರ ಪ್ರಜಾಸತ್ತಾತ್ಮಕ ಮಾರ್ಗದಲ್ಲೇ, ಸಂವಿಧಾನದ ಚೌಕಟ್ಟಿನಲ್ಲೇ ವಿವೇಕಯುತವಾದ ಪರಿಹಾರ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ಕೋಟ್ಯಂತರ ಜನರ ಒಕ್ಕೊರಲ ವಿರೋಧಕ್ಕೆ ಒಂದು ತಾತ್ವಿಕ ನೆಲೆ ಇದ್ದೇ ಇರುತ್ತದೆ. ಇಂತಹ ಪ್ರತಿರೋಧಗಳ ಹಿಂದೆ ದೇಶದ ಭೌಗೋಳಿಕ ಅಖಂಡತೆಯೊಂದಿಗೇ ಆಂತರಿಕವಾಗಿ ಸಾಂಸ್ಕೃತಿಕ ಭಾವೈಕ್ಯತೆಯನ್ನೂ, ಬಹುಸಂಸ್ಕೃತಿಯ ಮೂಲ ಲಕ್ಷಣಗಳನ್ನೂ ಉಳಿಸಿಕೊಳ್ಳುವ ಉದ್ದೇಶವೂ ಇರುತ್ತದೆ. 2014ರ ನಂತರದಲ್ಲಿ ಭಾರತದ ಬಹುತ್ವ ಸಂಸ್ಕೃತಿಯನ್ನೇ ಬುಡಮೇಲು ಮಾಡುವಂತಹ ಕೆಲವು ಶಾಸನಗಳು ಜಾರಿಯಾದ ಸಂದರ್ಭದಲ್ಲಿ ಜನಸಾಮಾನ್ಯರ ಪ್ರತಿರೋಧವೂ ತೀಕ್ಷ್ಣವಾಗಿಯೇ ವ್ಯಕ್ತವಾಗಿವೆ.  ಇಂತಹ ಸನ್ನಿವೇಶಗಳಲ್ಲಿ ಒಂದು ಜವಾಬ್ದಾರಿಯುತ ಸರ್ಕಾರ ನಾಗರಿಕರೊಡನೆ ಅನುಸಂಧಾನ ನಡೆಸುವ ವ್ಯವಧಾನವನ್ನು ಹೊಂದಿರಬೇಕಾಗುತ್ತದೆ. ಆಡಳಿತ ವ್ಯವಸ್ಥೆಯಲ್ಲಿನ ಈ ವ್ಯವಧಾನದ ಕೊರತೆಯಿಂದಲೇ ಭಾರತ 1975ರ ತುರ್ತುಪರಿಸ್ಥಿತಿಯನ್ನು ಎದುರಿಸಬೇಕಾದ್ದನ್ನು ಇಲ್ಲಿ ಸ್ಮರಿಸಬಹುದು. ದೇಶದ ಪ್ರಗತಿ ಬಯಸುವ ಪ್ರತಿಯೊಬ್ಬ ಪ್ರಜೆಯೂ ತನ್ನ ವ್ಯಕ್ತಿಗತ ಮತ್ತು ಸಾಮುದಾಯಿಕ ಅಸ್ತಿತ್ವದ ಉಳಿವಿಗಾಗಿ ಹೋರಾಡುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾಣಬಹುದಾದ ಲಕ್ಷಣ. 

ಇಂತಹ ಅಭಿವ್ಯಕ್ತಿಯ ಮಾರ್ಗಗಳನ್ನು ರಾಜದ್ರೋಹ ಕಾಯ್ದೆ ಮತ್ತು ಯುಎಪಿಯ ಮುಂತಾದ ಕರಾಳ ಶಾಸನಗಳ ಮೂಲಕ ತಡೆಗಟ್ಟುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶಿಥಿಲಗೊಳಿಸುತ್ತದೆ. ಈ ಹಿನ್ನೆಲೆಯಲ್ಲೇ ಭಾರತದಲ್ಲಿ ಜಾರಿಯಲ್ಲಿರುವ ಕರಾಳ ಶಾಸನಗಳನ್ನು ಪರಾಮರ್ಶೆಗೊಳಪಡಿಸಿ ರದ್ದುಪಡಿಸುವ ಆಗ್ರಹವೂ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ನ್ಯಾಯಾಂಗ ತಜ್ಞರು, ಹಿರಿಯ ವಕೀಲರು, ನ್ಯಾಯವಾದಿಗಳು, ನಿವೃತ್ತ ನ್ಯಾಯಮೂರ್ತಿಗಳು, ಸಾಮಾಜಿಕ ಕಾರ್ಯಕರ್ತರು, ಚಿಂತಕರು, ಬುದ್ಧಿಜೀವಿಗಳು ಈ ನಿಟ್ಟಿನಲ್ಲಿ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ನ್ಯಾಯಾಲಯಗಳೂ ಸಹ ಅನೇಕ ಸಂದರ್ಭಗಳಲ್ಲಿ ಈ ಕರಾಳ ಶಾಸನಗಳನ್ನು ದುರ್ಬಳಕೆ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿವೆ. ಮುಖ್ಯಮಂತ್ರಿಗಳನ್ನು ಖಂಡಿಸಿದರೆ, ಪ್ರಧಾನಮಂತ್ರಿಯನ್ನು ಖಂಡಿಸಿದರೆ ರಾಜದ್ರೋಹ ಕಾಯ್ದೆಯಡಿ ಬಂಧಿಸುವುದನ್ನೂ ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಎಡಪಕ್ಷಗಳನ್ನು ಹೊರತುಪಡಿಸಿ ಇತರ ಯಾವುದೇ ಪಕ್ಷಗಳು ಈ ಶಾಸನಗಳ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿಲ್ಲ. ಆದರೆ ಎಡಪಕ್ಷಗಳ ಸರ್ಕಾರಗಳೂ ಸಹ ಇದೇ ಕಾಯ್ದೆಗಳನ್ನು ಬಳಸುತ್ತಿರುವುದೂ ವಾಸ್ತವ. ಏಕೆಂದರೆ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರಗಳಿಗೆ ಇರುವ ನಿಯಂತ್ರಣಾಧಿಕಾರ ವ್ಯಾಪ್ತಿ, ಪಕ್ಷಗಳ ತಾತ್ವಿಕ ತಳಹದಿಯನ್ನೂ ದುರ್ಬಲಗೊಳಿಸಿಬಿಡುತ್ತದೆ. 

ಈ ಹಿನ್ನೆಲೆಯಲ್ಲೇ ಸೆಕ್ಷನ್‌ 124ಎ ವಿಧಿಸುವ ರಾಜದ್ರೋಹ ಕಾಯ್ದೆಯನ್ನು ಪುನರ್‌ ಪರಿಶೀಲನೆಗೊಳಪಡಿಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದ್ದು, ಮರುಪರಿಶೀಲನೆಯಾಗುವವರೆಗೂ ಈ ಕಾನೂನಿನಡಿ ಯಾವುದೇ ಪ್ರಕರಣಗಳನ್ನು ದಾಖಲು ಮಾಡದಂತೆ ಕಳೆದ ವಾರ ಆದೇಶಿಸಿರುವುದು ಸ್ವಾಗತಾರ್ಹ.  ಈ ಅವಧಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪ್ರಕರಣಗಳ ಮೇಲ್ಮನವಿ ಮತ್ತು ವಿಚಾರಣೆಗಳನ್ನು ಅಮಾನತಿನಲ್ಲಿರಿಸಿ, ಹೊಸ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಆದೇಶಿಸಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು, ಪ್ರಜಾಪ್ರಭುತ್ವದ ಸ್ವಾಸ್ಥ್ಯವನ್ನು ಕಾಪಾಡಲು ಹಾಗೂ ಭಾರತದ ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸಲು ಇಂತಹ ಕರಾಳ ಶಾಸನಗಳನ್ನು ರದ್ದುಪಡಿಸುವುದು ಅತ್ಯವಶ್ಯ. ಸರ್ವೋಚ್ಚ ನ್ಯಾಯಾಲಯ ಒದಗಿಸಿರುವ ಈ ಸದಾವಕಾಶವನ್ನು ಬಳಸಿಕೊಂಡು ಭಾರತದ ರಾಜಕೀಯ ನಾಯಕರು ಮತ್ತು ಸರ್ಕಾರಗಳು ಪ್ರಜಾಪ್ರಭುತ್ವದ ಬುನಾದಿಯನ್ನು ಮತ್ತಷ್ಟು ಬಲಪಡಿಸಬೇಕಿದೆ. ರಾಜಕೀಯ ಇಚ್ಚಾಶಕ್ತಿ, ನಿಸ್ವಾರ್ಥ ಜನಹಿತ ದೃಷ್ಟಿ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಕಾಳಜಿ ಇರುವ ಎಲ್ಲ ರಾಜಕೀಯ ಪಕ್ಷಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಜನಜಾಗೃತಿಯನ್ನು ಮೂಡಿಸುವ ಮೂಲಕ ಭಾರತದ ಸಂವಿಧಾನದ ಮೂಲ ಆಶಯಗಳನ್ನು ಸಾಕಾರಗೊಳಿಸಲು ಮುಂದಾಗಬೇಕಿದೆ.
-೦-೦-೦-೦-ಸಿಜೆಐ ಎನ್.ವಿ.ರಮಣ
ಒಂದು ಪುಟ್ಟ ಪರಿಚಯ

ಇಂಡಿಯಾದ ಸರ್ವೋಚ್ಚ ನ್ಯಾಯಾಲಯದ ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ( ನೂತಲಪತಿ ವೆಂಕಟ ರಮಣ) ಅವರು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನಾವರಂನ ಕೃಷಿ ಕುಟುಂಬದಲ್ಲಿ 27 ಆಗಸ್ಟ್ 1957ರಲ್ಲಿ ಜನಿಸಿದವರು. 
ಆಂಧ್ರ ಪ್ರದೇಶ ಹಾಗೂ ದಿಲ್ಲಿ ಹೈಕೋರ್ಟ್‍ಗಳ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಬಳಿಕ 24.04.2021ರಿಂದ ಸುಪ್ರೀಂ ಕೋರ್ಟ್ನ  48ನೇ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಿದರು.


1978-80ರಲ್ಲಿ ಈನಾಡು ತೆಲುಗು ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ರಮಣ ನಂತರ ಆಂಧ್ರಪ್ರದೇಶದ ಹೈಕೋರ್ಟಿನಲ್ಲಿ ನ್ಯಾಯವಾದಿಯಾಗಿ ಪ್ರಾಕ್ಟೀಸ್ ಆರಂಭಿಸಿದರು.ಎಲ್ಲ ಬಗೆಯ ನ್ಯಾಯಾಲಯ ಪ್ರಕರಣಗಳನ್ನು ನಿರ್ವಹಿಸುತ್ತ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದರು.ನಂತರ 27 ಜೂನ್ 2000ದಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ಖಾಯಂಗೊಂಡರು. 


ಕಳೆದ ವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಉಪಸ್ಥಿತಿಯಲ್ಲಿ ಮುಖ್ಯ ಭಾಷಣ ಮಾಡಿದ ಸಿಜೆಐ ರಮಣರವರು, “ಸರಕಾರದ ಮೂರು ಅಂಗಗಳು ಕಾರ್ಯನಿರ್ವಹಿಸುವಾಗ ‘ ಲಕ್ಷ್ಮಣ ರೇಖೆ’ಯನ್ನು ಗಮನದಲ್ಲಿ ಇರಿಸಿಕೊಂಡಿರಬೇಕು” ಎಂದಿದ್ದನ್ನು ನೆನಪಿಸಿಕೊಳ್ಳಬಹುದು. ಈ ನ್ಯಾಯಮೂರ್ತಿಯವರೇ ಈಗ ಬ್ರಿಟಿಷರ ಕಾಲದ ಕಾಯ್ದೆ ಐಪಿಸಿ 124 ಎ ಅನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಿದ್ದಾರೆ.