ಹರ್ಷ ಮಂದರ್ ಜೊತೆ ಒಂದು ಆಪ್ತ ಸಂವಾದ
ಸಂವಾದ-ಆಪ್ತ-ಮಾತುಕತೆ
ಬಿ.ಎಂ.ಹನೀಫ್
ಹರ್ಷ ಮಂದರ್ ಜೊತೆ ಒಂದು ಆಪ್ತ ಸಂವಾದ
‘ಎಲ್ಲ ಭಾರತೀಯರೂ ಸಂಘಟಿತರಾಗಿ
ಎಲ್ಲರ ವಿರುದ್ಧದ ದೌರ್ಜನ್ಯ ಎದುರಿಸಬೇಕು’
ಶುಕ್ರವಾರ ರಾತ್ರಿ ಹರ್ಷ ಮಂದರ್ ಜೊತೆಗೆ ಒಂದು ಸಂವಾದ ಇತ್ತು. ಮುಸ್ಲಿಂ ಸಮುದಾಯದ ಸುಮಾರು 50 ಮಂದಿ ಬುದ್ಧಿಜೀವಿಗಳು/ ವೃತ್ತಿಪರರು ಭಾಗವಹಿಸಿದ್ದ ಈ ಪುಟ್ಟ ಸಭೆಗೆ ಹರ್ಷ ಮಂದರ್ ಒಂದು ಪ್ರಶ್ನೆ ಒಗೆದು ತಣ್ಣಗೆ ಕುಳಿತರು. 'ದೇಶದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳಿಂದ ನಿಮ್ಮಲ್ಲಿ ಭಯ, ಆತಂಕ ಉಂಟಾಗಿದೆಯೆ? ನಿಮ್ಮ ವೈಯಕ್ತಿಕ ಅನುಭವಗಳ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಹೇಗೆ ಅವಲೋಕಿಸುತ್ತೀರಿ?" ಎನ್ನುವುದು ಅವರು ಕೇಳಿದ ಪ್ರಶ್ನೆ.
ಸಭೆಯಲ್ಲಿ ಈ ಪ್ರಶ್ನೆಗೆ ಹಲವರು ಉತ್ತರಿಸಿದರು. ಬಹುತೇಕ ಗಂಡಸರು "ಪರಿಸ್ಥಿತಿ ಹಿಂದಿಗಿಂತ ಬದಲಾಗಿದೆ. ಮುಸ್ಲಿಮರನ್ನು ಎಲ್ಲದಕ್ಕೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಆದರೆ ನಾವು ಹೆದರಿಲ್ಲ, ಆತಂಕಿತರಾಗಿಲ್ಲ. ಪರಿಸ್ಥಿತಿಯನ್ನು ಎದುರಿಸಲು/ ಬದಲಾಯಿಸಲು ಎಲ್ಲ ಧರ್ಮಗಳ ಸಮಾನ ಮನಸ್ಕರ ಜೊತೆ ಸೇರಿ ಕೆಲಸ ಮಾಡಬೇಕಿದೆ" ಎಂದರು.
ಆದರೆ ಇಬ್ಬರು ಮಹಿಳೆಯರು ಸಭೆಯಲ್ಲಿ ವಿಭಿನ್ನವಾಗಿ ಮಾತನಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು. ಅದರಲ್ಲಿ ಒಬ್ಬರು ಗೃಹಿಣಿ/ ಉದ್ಯಮಿ ಮತ್ತು ಇನ್ನೊಬ್ಬರು ಡಾಕ್ಟರ್.
"ನಮಗೆ ಭಯವಾಗುತ್ತಿದೆ. ನಾವು ತುಂಬಾ ಆತಂಕದಲ್ಲಿದ್ದೇವೆ. ಎದುರಿಗೆ ಸಿಕ್ಕಿದಾಗ ನಮ್ಮ ಜೊತೆಗೆ ಆತ್ಮೀಯವಾಗಿ ಮಾತನಾಡುವವರೇ ಹಿಂದಿನಿಂದ ಮುಸ್ಲಿಮರ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ನಮ್ಮ ಬಗ್ಗೆ ವಿಪರೀತ ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ, ನಮ್ಮ ಸಮುದಾಯವನ್ನು ಹೀಗಳೆಯುತ್ತಾರೆ" ಎನ್ನುವುದು ಗೃಹಿಣಿಯ ನೇರ ಮಾತು.
ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಡಾಕ್ಟರ್ ಮಹಿಳೆ, ಮುಂದುವರಿದು ಹೇಳಿದ್ದು- "ಬೇರೆ ಸಮುದಾಯದವರ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ನಾವು ಸರಿಯಾಗಿ ಪ್ರಯತ್ನಿಸುತ್ತಿಲ್ಲ. ಬಹಳ ಸಂದರ್ಭಗಳಲ್ಲಿ ನಮಗೇ ಸರಿಯಾದ ಮಾಹಿತಿ ಇರುವುದಿಲ್ಲ. ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ನಿಜ ಸಂಗತಿಗಳನ್ನು ತಿಳಿಸಿ ಹೇಳುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ."
ಆ ಡಾಕ್ಟರ್ ತಾವು ಕೆಲಸ ಮಾಡುತ್ತಿರುವ ಆಸ್ಪತ್ರೆಯಲ್ಲಿ ಹಿಂದೂ ಸಹೋದ್ಯೋಗಿಯೊಬ್ಬರ ಜೊತೆಗೆ ನಡೆದ ಮಾತುಕತೆಯನ್ನು ವಿವರಿಸಿದರು. ಅದು ಹೀಗಿದೆ.
* ನಿಮ್ಮಲ್ಲಿ ಮುಸ್ಲಿಂ ಗಂಡಸರು ನಾಲ್ಕು ನಾಲ್ಕು ಮದುವೆಯಾಗಿ ನಿಮ್ಮ ಜನಸಂಖ್ಯೆ ಒಂದೇ ಸಮನೆ ಏರುತ್ತಿದೆ. ಅದಕ್ಕೇ ಕಾಮನ್ ಸಿವಿಲ್ ಕೋಡ್ ತರಬೇಕು
ಡಾಕ್ಟರ್: ಈಗ ಒಂದು ಮದುವೆಯಾಗಿ ಸಂಸಾರ ನಡೆಸುವುದೇ ಕಷ್ಟವಾಗಿದೆ. ನಾಲ್ಕು ಮದುವೆಯಾಗಲು ಸಾಧ್ಯವೇ? ನಿಮ್ಮ ಊರಲ್ಲಿ, ಪರಿಚಯದವರಲ್ಲಿ ನಾಲ್ಕು ಮದುವೆಯಾದ ಮುಸ್ಲಿಮರು ಯಾರಾದರೂ ಇದ್ದಾರಾ , ಗೊತ್ತಿದ್ದರೆ ಹೇಳಿ?
* ಇಲ್ಲ, ಗೊತ್ತಿಲ್ಲ.
ಡಾಕ್ಟರ್: ಮತ್ತೆ ಜನಸಂಖ್ಯೆ ಭಾರೀ ಹೆಚ್ಚಾಗುತ್ತಿದೆ ಎಂದು ಹೇಗೆ ಹೇಳುತ್ತೀರಿ?
* ಇಲ್ಲ, ಜಾಗತಿಕ ಮಟ್ಟದಲ್ಲಿ ಅದು ಆಗುತ್ತಿದೆ. ಸೌದಿ ಅರೇಬಿಯಾ ಮುಂತಾಗಿ ಮುಸ್ಲಿಂ ದೇಶಗಳಲ್ಲಿ ಮುಸ್ಲಿಂ ಗಂಡಸರು ನಾಲ್ಕು ಮದುವೆ ಆಗುತ್ತಿದ್ದಾರೆ...
ಡಾಕ್ಟರ್: ಸರಿ... ಯಾವ ಗಲ್ಫ್ ದೇಶದಲ್ಲಿ ಗಂಡಸರು ಮತ್ತು ಹೆಂಗಸರ ಜನಸಂಖ್ಯೆ ಅನುಪಾತ 1:4 ಇದೆ ಹೇಳಿ? ಸೌದಿಯಲ್ಲಾಗಲೀ, ಇತರ ಮುಸ್ಲಿಂ ದೇಶಗಳಲ್ಲಾಗಲೀ 1000 ಗಂಡಸರಿಗೆ 4000 ಸ್ತ್ರೀಯರು ಇದ್ದಾರಾ? ಜಗತ್ತಿನ ಯಾವ ದೇಶದಲ್ಲೂ ಗಂಡಸರಿಗಿಂತ ಹೆಂಗಸರ ಸಂಖ್ಯೆ ಹೆಚ್ಚಿಲ್ಲ. 1000 ಗಂಡಸರಿಗೆ 950 ಅಥವಾ ಅದಕ್ಕಿಂತ ಕಡಿಮೆಯೇ ಹೆಣ್ಣುಮಕ್ಕಳು ಇದ್ದಾರೆ. ಎಲ್ಲ ಗಂಡಸರಿಗೆ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ಇದೆ. ನಿಮ್ಮ ವಾದಕ್ಕೆ ಅರ್ಥ ಇದೆಯೇ?
ಆ ಮಹಿಳಾ ಡಾಕ್ಟರ್ ಮಾತಿಗೆ ಸಭೆಯಲ್ಲಿದ್ದ ಎಲ್ಲರೂ ತಲೆದೂಗಿದ್ದು ಸುಳ್ಳಲ್ಲ.
ಸಭೆಯಲ್ಲಿ ಹರ್ಷ ಮಂದರ್ ಮುಸ್ಲಿಮರಿಗೆ ಕೇಳಿದ ಇನ್ನೊಂದು ಪ್ರಶ್ನೆ ಗಮನಾರ್ಹವಾಗಿತ್ತು. " ಈಗ ನಿಮ್ಮ ವಿರುದ್ಧ ಸಂಘಟಿತವಾಗಿ ದಾಳಿ, ಹಲ್ಲೆ, ಮಿಥ್ಯಾರೋಪಗಳೆಲ್ಲ ಬರುತ್ತಿರುವುದರಿಂದ ನೀವು ಪ್ರತಿರೋಧ ವ್ಯಕ್ತಪಡಿಸುತ್ತಿದ್ದೀರಿ. ಆದರೆ ದೇಶದಲ್ಲಿ ದುರ್ಬಲರು ಮತ್ತು ಆದಿವಾಸಿಗಳ ಮೇಲೆ ಹಿಂದಿನಿಂದಲೂ ದೌರ್ಜನ್ಯ ನಡೆಯುತ್ತಿದೆ. ಆಗ ಅದನ್ನು ಪ್ರತಿಭಟಿಸಬೇಕೆಂದು ನಿಮಗೆ ಯಾವತ್ತೂ ಏಕೆ ಅನ್ನಿಸಿಲ್ಲ?"
ಅಲ್ಲಿದ್ದ ಸಭಿಕರಲ್ಲಿ ಅದಕ್ಕೆ ಉತ್ತರ ಇರಲಿಲ್ಲ.
"ಸಹಜೀವಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಎಲ್ಲ ಪ್ರಜ್ಞಾವಂತರೂ ಒಗ್ಗಟ್ಟಾಗಿ ಪ್ರತಿಭಟಿಸಬೇಕಲ್ಲವೆ? ಇಲ್ಲಿ ಜಾತಿ, ಧರ್ಮಗಳಾಚೆಯೂ ಕೆಲಸ ಮಾಡಬೇಕಾದ ಅಗತ್ಯ ಇದೆಯಲ್ಲವೆ?" ಎಂದು ಹರ್ಷ ಮಂದರ್ ಹೇಳಿದ್ದು ಸಭೆಯಲ್ಲಿ ಎಲ್ಲರಿಗೂ ಸರಿ ಅನ್ನಿಸಿತ್ತು.
ಐಎಎಸ್ ಅಧಿಕಾರಿಯಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಆದಿವಾಸಿಗಳ ಆರೋಗ್ಯ ಮತ್ತು ಸಾಮಾಜಿಕ ಉನ್ನತಿಗಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ದುಡಿದ ಹರ್ಷ ಮಂದರ್, ಗುಜರಾತ್ ಗಲಭೆಯಲ್ಲಿ ಸರ್ಕಾರದ ನೇರ ಪಾತ್ರವನ್ನು ಪ್ರತಿಭಟಿಸಿ ಕೆಲಸಕ್ಕೆ ರಾಜೀನಾಮೆ ನೀಡಿದವರು. ಈಗ ದೇಶದಲ್ಲಿ ನಡೆಯುತ್ತಿರುವ ಜನಾಂಗೀಯ ವಿಭಜನೆ ಮತ್ತು ದ್ವೇಷ ಪ್ರಚಾರದ ಕುರಿತು ತೀವ್ರ ಆತಂಕವನ್ನು ವ್ಯಕ್ತಪಡಿಸುತ್ತಾರೆ.
"ದೇಶ ವಿಭಜನೆಯಾದಾಗ ನನ್ನ ಪೂರ್ವಜರು ಜೀವ ಕೈಯಲ್ಲಿ ಹಿಡಿದುಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರು. ಆಗ ಎರಡೂ ಕಡೆ ನಡೆದ ಮಾರಣಹೋಮಕ್ಕೆ ನನ್ನ ಕುಟುಂಬದ ಹಿರಿಯರು ಸಾಕ್ಷಿಗಳಾಗಿದ್ದರು. ದೇಶದಲ್ಲಿ ಈಗ ನಡೆಯುತ್ತಿರುವ ಹಿಂದೂ- ಮುಸ್ಲಿಂ ವಿಭಜನೆಯ ರಾಜಕೀಯದ ದುಷ್ಪರಿಣಾಮ ಮುಂದೆ ಏನಾಗಬಹುದು ಎನ್ನುವುದನ್ನು ನನ್ನಷ್ಟು ಚೆನ್ನಾಗಿ ಅರಿತುಕೊಳ್ಳಲು ಇನ್ಯಾರಿಗೆ ಸಾಧ್ಯ? ನನ್ನ ಕುಟುಂಬದ ಹಿರಿಯರಿಗೂ ನಾನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ.." ಎಂದರು ಹರ್ಷ ಮಂದರ್.
ದೇಶದಲ್ಲಿ ನಡೆಯುತ್ತಿರುವ ದುರ್ಬಲರ ಮೇಲಿನ ದೌರ್ಜನ್ಯ, ಮಾನವ ಹಕ್ಕುಗಳ ದಮನ, ಜನಾಂಗೀಯ ತಾರತಮ್ಯವನ್ನು ಎದುರಿಸಲು ಎಲ್ಲ ಭಾರತೀಯರೂ ಸಂಘಟಿತವಾಗಿ ಕೆಲಸ ಮಾಡಬೇಕು- ಎನ್ನುವುದು ಅವರ ಕೊನೆಯ ಮಾತಾಗಿತ್ತು