ಶತಕ ಮುಟ್ಟಿದ ಈರುಳ್ಳಿ ಬೆಲೆ ಹರಾಜಿನಲ್ಲಿ ಕ್ವಿಂಟಲ್‌ಗೆ 6 ಸಾವಿರ ರೂ. ಗೆ ಮಾರಾಟ

ಈರುಳ್ಳಿ ಬೆಳೆಗಾರರಿಗೆ ಖುಷಿ, ಗ್ರಾಹಕರಿಗೆ ಸಂಕಟ

ಶತಕ ಮುಟ್ಟಿದ ಈರುಳ್ಳಿ ಬೆಲೆ ಹರಾಜಿನಲ್ಲಿ ಕ್ವಿಂಟಲ್‌ಗೆ 6 ಸಾವಿರ ರೂ. ಗೆ ಮಾರಾಟ

ಬೆವರಹನಿ:


ಎಚ್.ಬಿ.ಕಿರಣ್‌ಕುಮಾರ್

ಹುಳಿಯಾರು: ಬರದ ನಡುವೆ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಗ್ರಾಹಕರ ನಿದ್ದೆಗೆಡಿಸುತ್ತಿದೆ. ಕಳೆದ ತಿಂಗಳ ಹಿಂದಷ್ಟೆ ಬೆಲೆ ಏರಿಕೆಯಲ್ಲಿ ಟಮೋಟೊ ಬಾರಿ ಸದ್ದು ಮಾಡಿತ್ತು. ಈಗ ಟಮೊಟೊ ದಾರಿಯಲ್ಲೇ ಈರುಳ್ಳಿ ಬೆಲೆ ಸಾಗುತ್ತಿದ್ದು ಭಾನುವಾರ ಹುಳಿಯಾರಿನಲ್ಲಿ ಕೆಜಿಗೆ 100 ರೂ. ಹಾಗೂ ಕ್ವಿಂಟಲ್‌ಗೆ 6 ಸಾವಿರ ರೂ. ಮಾರಾಟ ಆಗಿದೆ. ಇದರಿಂದ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದಿರಲಿ ಖರೀಧಿಸುವಾಗಲೇ ಕಣ್ಣಲ್ಲಿ ನೀರು ಬರುವಂತ್ತಾಗಿದೆ.


         ಸಾಮಾನ್ಯವಾಗಿ ಈರುಳ್ಳಿಯನ್ನು ಎರೆ ಹೊಲದಲ್ಲಿ ಬೆಳೆಯಲಾಗುತ್ತದೆ. ಈ ವರ್ಷವೂ ಈರುಳ್ಳಿ ಬಿತ್ತನೆ ಆಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಮಳೆ ಆಗದ ಕಾರಣ ಕೆಲ ಕಡೆ ನಾಟಿ ಮಾಡಿದ ಬೀಜ ಮೊಳಕೆಯೊಡೆದಿಲ್ಲ. ಹೀಗಾಗಿ ಇಳುವರಿಯಲ್ಲಿ ಕುಸಿತ ಕಂಡಿದೆ. ಇದು ಬೆಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಸದ್ಯ ಲೋಕಲ್ ಈರುಳ್ಳಿ ದರ ಕ್ವಿಂಟಲ್‌ಗೆ 6 ಸಾವಿರ ಹಾಗೂ ಬಿಜಾಪುರ ಈರುಳ್ಳಿ ಕ್ವಿಂಟಲ್‌ಗೆ 9 ಸಾವಿರ ತಲುಪಿದ್ದು, ಇದು ಇನ್ನೂ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪರಿಣಾಮ ರೀಟೆಲ್ ಬೆಲೆಯೂ ಸಹ ಈಗ ದಿಡೀರ್ ಏರಿಕೆಯಾಗಿದೆ.


         ಎರಡ್ಮೂರು ತಿಂಗಳಿಂದ ಕೆಜಿಗೆ 30 ರಿಂದ 35 ರ ವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ ದಿಢೀರನೇ ಶತಕದ ಸನಿಹ ಬಂದು ನಿಂತು ಗ್ರಾಹಕರಿಗೆ ಶಾಕ್ ನೀಡುತ್ತಿದೆ. ಗಾತ್ರ ಹಾಗೂ ಹವಾಗುಣ ಬೆಳೆಯ ಅನುಗುಣವಾಗಿ ಈರುಳ್ಳಿ ಬೆಲೆ ಇದ್ದು ದೊಡ್ಡ ಗಾತ್ರದು 70 ರಿಂದ 100, ಮಾಧ್ಯಮ ಗಾತ್ರ 50, ಚಿಕ್ಕ ಗಾತ್ರದು 40 ದರವಿದೆ. ಲೋಕಲ್ ಈರುಳ್ಳಿ 40 ರಿಂದ 65 ರೂ ಹಾಗೂ ಬಿಜಾಪುರ ಈರುಳ್ಳಿ 80 ರಿಂದ 100 ರೂ.ಗೆ ರೀಟೆಲೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಲೋಕಲ್ ಈರುಳ್ಳಿ ಐದರಿಂದ ಹತ್ತು ದಿನ ಇಟ್ಟುಕೊಳ್ಳಬಹುದಾಗಿದ್ದು ಬಿಜಾಪುರದ ಈರುಳ್ಳಿ ತಿಂಗಳುಗಟ್ಟಲೆ ಇಟ್ಟರೂ ಕೆಡುವುದಿಲ್ಲ. ಹಾಗಾಗಿ ಈ ಈರುಳ್ಳಿಗೆ ಬೆಲೆ ಜಾಸ್ತಿ ಎನ್ನುತ್ತಾರೆ ಹುಳಿಯಾರು ಈರುಳ್ಳಿ ವ್ಯಾಪಾರಿ ಶಹಬಾಜ್.


          ಹುಳಿಯಾರಿನಲ್ಲೇ ಈರುಳ್ಳಿ ಹರಾಜು ಕೇಂದ್ರವಿದ್ದು ಭಾನುವಾರದ ಲೋಕಲ್ ಈರುಳ್ಳಿ ಹರಾಜು ಕ್ವಿಂಟಲ್‌ಗೆ 3 ಸಾವಿರದಿಂದ ರಿಂದ 6 ಸಾವಿರ ರೂ. ವರೆವಿಗೆ ಆಯಿತು. 50 ಮಂದಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಭಾಗದ ರೈತರು ಹಾರಾಜಿನಲ್ಲಿ ಭಾಗವಹಿಸಿದ್ದರು. ಒಟ್ಟು 2000 ಸಾವಿರ ಪಾಕೆಟ್ ಈರುಳ್ಳಿ ಮಾರಾಟವಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಚಿಕ್ಕನಾಯಕನಹಳ್ಳಿ ತಾಲೂಕಿನ ಈರುಳ್ಳಿ ಬೆಳೆಗಾರರೆಲ್ಲರೂ ಅಡಿಕೆ ಬೆಲೆಗೆ ಆಕರ್ಷಿತರಾಗಿ ಅಡಿಕೆ ಬೆಳೆಗೆ ಶಿಫ್ಟ್ ಆಗಿದ್ದಾರೆ. ಬೀಜ ಹಾಕಿದ್ದ ಕೆಲವರಿಗೆ ಬರಗಾಲ ಬಂದು ಕೊಳವೆಬಾವಿ ಕೈ ಕೊಟ್ಟು ಬೆಳೆ ನಷ್ಟವಾಗಿದೆ. ಹಾಗಾಗಿ ಇಳುವರಿ ಕುಂಠಿತವಾಗಿ ಈರುಳ್ಳಿ ಬೆಲೆ ದಿಡೀರ್ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಈರುಳ್ಳಿ ಹರಾಜು ಕೇಂದ್ರದ ಮಾಲೀಕ ಹಾರೂನ್.


        ಟಮೋಟೊ ಬೆಲೆ ಹೆಚ್ಚಾದಾಗ ಅದರ ಬದಲಾಗಿ ಹುಣಸೆಹುಳಿ, ನಿಂಬೆಹಣ್ಣು ಇತ್ತು ಹಾಗಾಗಿ ಗ್ರಾಹಕರು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಅಡುಗೆಗೆ ಅದರಲ್ಲೂ ಮಾಂಸಹಾರಕ್ಕೆ ಅತ್ಯವಶ್ಯಕವಾಗಿ ಬೇಕಿರುವ ಈರುಳ್ಳಿ ಬೆಲೆ ದಿಡೀರ್ ಏರಿಕೆಯಾಗಿರುವುದು ಗ್ರಾಹಕರ ನಿದ್ದೆಗೆಡಿಸಿದೆ. ಈ ಬೆಲೆ ಮುಂದೆ ಎಷ್ಟಕ್ಕೆ ಹೋಗಿ ನಿಲ್ಲುತ್ತದೆ ಎನ್ನುವ ಆತಂಕ ಕಾಡುತ್ತಿದೆ. 



ಈಗ ಬೆಲೆ ಏರಿಕೆ ಪರಿಣಾಮ ಹೋಟೆಲ್ ಉದ್ಯಮಕ್ಕೂ ಪೆಟ್ಟು ನೀಡುತ್ತಿದೆ. ಈರುಳ್ಳಿ ಪಕೋಡ, ಪಾನಿಪುರಿ, ಈರುಳ್ಳಿ ದೋಸೆ, ಚಿತ್ರನ್ನಾ ಮಾಡುವವರು ಕಡಿಮೆ ಈರುಳ್ಳಿ ಬಳಸುವ ಅನಿವಾರ್ಯತೆ ಸೃಷ್ಠಿಯಾಗಿದೆ. ಈರುಳ್ಳಿ ಕಡಿಮೆ ಮಾಡಿದರೆ ರುಚಿ ಕಡಿಮೆಯಾಗಿ ಗ್ರಾಹಕರು ಬಾರದಂತ್ತಾಗುವ ಸಾಧ್ಯತೆ ಇದೆ. ಹಾಗಾಗಿ ಬೆಲೆ ಹೆಚ್ಚಳ ಮಾಡಬೇಕು ಇಲ್ಲವಾದಲ್ಲಿ ಈರುಳ್ಳಿ ಹಾಕಿ ಮಾಡುವ ಆಹಾರವನ್ನೇ ಮಾಡುವುದನ್ನು ಕೈ ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.


ಮಳೆ ಕೊರತೆ ಕಾರಣದಿಂದಾಗಿ ಈರುಳ್ಳಿಯ ಇಳುವರಿ ಅಷ್ಟಾಗಿ ಬಂದಿಲ್ಲ. ಮಳೆ ನೆಚ್ಚಿಕೊಂಡು ಈ ಸಲ ಕೆಲವರು ಈರುಳ್ಳಿ ಬೆಳೆಯಲು ಹಿಂದೇಟು ಹಾಕಿದರು. ಹಾಗಾಗಿ, ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಏಕಾಏಕಿ ದರ ಏರಿಕೆಗೆ ಇದು ಪ್ರಮುಖ ಕಾರಣ. ಸೋಲಾಪುರದಿಂದ 500 ಲಾರಿ ಈರುಳ್ಳಿ ಬರಬೇಕಿತ್ತು. ಆದರೆ ಬೆಳೆ ಇಲ್ಲದಾಗಿರುವುದರಿಂದ ಕೇವಲ 230 ಲಾರಿ ಬಂದಿದೆ. ಈಗ ಈರುಳ್ಳಿ ಬೆಳೆದವರಿಗೆ ಲಕ್ ಖುಲಾಯಿಸಿದಂತೆ ಕಾಣುತ್ತಿದೆ. 
             ಹಾರೂನ್, ಈರುಳ್ಳಿ ವ್ಯಾಪಾರಿ, ಹುಳಿಯಾರು


ಅನೇಕ ವರ್ಷದಿಂದ ಈರುಳ್ಳಿ ಬೆಳೆಯುತ್ತಿದ್ದೇನೆ. ರೋಗ ಬಂದು ಈರುಳ್ಳಿ ಹಾಳಾಗುತ್ತಿತ್ತು. ಬೆಳೆ ಬಂದರೂ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಈ ವರ್ಷ ರೀಗವೂ ಇಲ್ಲ, ಒಳ್ಳೆಯ ಇಳುವರಿಯೂ ಬಂದಿದ್ದು ಈಗ ಉತ್ತಮ ಬೆಲೆಯೂ ಸಿಕ್ಕಿದೆ. ಈ ವರ್ಷ 1 ಎಕರೆಯಲ್ಲಿ 100 ಪಾಕೀಟ್ ಈರುಳ್ಳಿ ಬೆಳೆದಿದ್ದೇನೆ. 1.5 ಲಕ್ಷ ರೂಗೆ ನನ್ನ ಈರುಳ್ಳಿ ಮಾರಾಟವಾಗಿದೆ. ಹಾಗಾಗಿ 40 ರಿಂದ 50 ಸಾವಿರ ಖರ್ಚಾಗಿದ್ದು ಬರೋಬ್ಬರಿ 1 ಲಕ್ಷ ರೂ. ಲಾಭ ಸಿಕ್ಕಿದಂತ್ತಾಗಿದೆ. 
           ಶೇಷಣ್ಣ, ರಂಗಾಪುರ, ಹಿರಿಯೂರು ತಾಲೂಕು