ದೊಡ್ಡ ದೇಶದಲ್ಲಿ ನಡೆದ ಸಣ್ಣದೊಂದು ಘಟನೆ

ದೊಡ್ಡ ದೇಶದಲ್ಲಿ ನಡೆದ ಸಣ್ಣದೊಂದು ಘಟನೆ

ವಾಸ್ತವ 


ಪುರುಷೋತ್ತಮ ಬಿಳಿಮಲೆ 


    ದೆಹಲಿಯ ಅತ್ಯಂತ ಹಳೆಯ ಜಾಗಗಳಲ್ಲಿ ಮೆಹರೂಲಿ ಕೂಡಾ ಒಂದು. ಇತಿಹಾಸಕಾರರು ಗುರುತಿಸಿದ ದೆಹಲಿಯ ಹಳೆಯ ಏಳು ನಗರಗಳಲ್ಲಿ ಅರಾವಳಿಯ ತಪ್ಪಲಿನ ಮೆಹರೂಲಿಗೂ ಒಂದು ಸ್ಥಾನ ಇದೆ. ೧೧ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ರಜಪೂತ ಅರಸ ಎರಡನೇ ಅನಂಗ ಪಾಲ್ ತೋಮರನು ಕಟ್ಟಿಸಿದ ಲಾಲ್ ಕೋಟ್ ನ ಅವಶೇಷಗಳು ಇಲ್ಲಿವೆ. ಮೊಘಲ್ ಇತಿಹಾಸಕಾರ ಅಬುಲ್ ಫಜಲ್ ತನ್ನ ಮಹಾಕಾವ್ಯವಾದ 'ಐನ್-ಇ-ಅಕ್ಬರಿ' ಯಲ್ಲಿ ಲಾಲ್ ಕೋಟ್ ಬಗ್ಗೆ ವಿವರಣೆ ನೀಡಿದ್ದಾನೆ. ತೋಮರರ ಆನಂತರ ಈ ಪ್ರದೇಶನ್ನು ಆಳಿದವರು ಚೌಹಾನರು. ಚೌಹಾನರು ಕಟ್ಟಿದ ಗೋಡೆಗಳು ಈಗಲೂ ಇವೆ. ೧೧೯೨ರಲ್ಲಿ ಮೆಹರೂಲಿಯು ಗುಲಾಮ ರಾಜವಂಶದ ಕೈಗೆ ಹೋಯಿತು. ಈ ವಂಶದ ಮೊದಲ ಆಡಳಿತಗಾರ ಕುತುಬುದಿನ್ ಐಬಕ್ ಈಗ ಕಾಣುವ ಕುತುಬ್ ಮಿನರ‍್ನ್ನು ಕಟ್ಟಲು ಆರಂಭಿಸಿದ. ಮುಂದಿನ ದಿನಗಳಲ್ಲಿ ಇಲ್ತುಮಿಶ್, ರಜಿಯಾ ಸುಲ್ತಾನ್ ಮತ್ತು ಅಲಾವುದ್ದೀನ್ ಖಿಲ್ಜಿಯು ಇಲ್ಲಿ ಸುಂದರವಾದ ಅನೇಕ ಸ್ಮಾರಕಗಳನ್ನು ನರ‍್ಮಿಸಿದರು. ಮೆಹರೂಲಿಯು ಪ್ರಖ್ಯಾತವಾದ ವ್ಯಾಪಾರ ಕೇಂದ್ರವೂ ಆಗಿದ್ದುದರಿಂದ ಇದರ ಸುತ್ತ ಮುತ್ತ ಪ್ರಯಾಣಿಕರ ವಿಶ್ರಾಂತಿ ಗೃಹಗಳೂ, ಸೇತುವೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಬೆಳೆದುವು. 


ಸುಲ್ತಾನ್ ಜಲಾಲುದ್ದೀನ್ ಖಿಲ್ಜಿ (1290-1296) ಇಲ್ಲೊಂದು ಬಜಾರ್ (ಮಾರುಕಟ್ಟೆ) ನರ‍್ಮಿಸಿದ. ಅದು ಈಗಲೂ ಇದೆ. ಸೂಫಿ ಸಂತ ಹಜರತ್ ಕುತುಬುದ್ದೀನ್ ಭಕ್ತಿಯಾರ್ ಕಾಕಿ (ಕ್ರಿ.ಶ. 1173 -1235) ಇಲ್ಲಿ ಓಡಾಡಿದ್ದರು. ದೆಹಲಿಯ ಆಡಳಿತ ಮುಂದೆ ಉತ್ತರದ ಕಡೆಗೆ ರ‍್ಗಾವಣೆ ಆದರೂ ಮೆಹರೂಲಿಯ ಅನೇಕ ರ‍್ಗಾಗಳು ಮತ್ತು ಇತರ ಸ್ಮಾರಕಗಳು ಚರಿತ್ರೆಯ ನೆನಪುಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿವೆ. ಮೆಹರೋಲಿಯ ಕಾಸ್ಮೋಪಾಲಿಟನ್ ಸ್ಪಿರಿಟ್ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣಗಳ ಬಗ್ಗೆ ಅರಿವಿದ್ದ ನೆಹರೂ ಅವರು ಮೆಹರೋಲಿಯಲ್ಲಿ ʼಫೂಲ್ ವಾಲೋನ್ ಕಿ ಸೈರ್' ಅಥವಾ ಸೈರ್-ಎ-ಗುಲ್ಫರೋಶನ್ (ಹೂಗಳ ನಡಿಗೆ) ಎಂಬ ಮೂರು ದಿನಗಳ ವಾರ‍್ಷಿಕ ಉತ್ಸವವನ್ನು ಆರಂಭಿಸಿದ್ದರು. ಇದಕ್ಕೆ ದೇಶದಾದ್ಯಂತದಿಂದ ಕಲಾವಿದರು ಬರುತ್ತಿದ್ದರು. 


ತೋಮರರು, ಮೊಘಲರು ಮತ್ತು ಬ್ರಿಟಿಷರು ಮೆಹರೋಲಿಯಲ್ಲಿ ತಮ್ಮ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ದೆಹಲಿಗೆ ಬರುವವರು ಸಾಮಾನ್ಯವಾಗಿ ಕುತುಬ್ ಮಿನಾರ್ ನೋಡುತ್ತಾರೆ. ಆದರೆ ಅದರ ಸುತ್ತ ಇರುವ ಪ್ರಾಚೀನ ಗೋರಿಗಳು, ಮಸೀದಿಗಳು, ಅರಮನೆಗಳು, ಮತ್ತು ಮೆಟ್ಟಿಲು ಬಾವಿಗಳನ್ನು ನೋಡುವಷ್ಟು ವ್ಯವಧಾನ ಅವರಿಗಿರುವುದಿಲ್ಲ. ವಾಸ್ತವವಾಗಿ ಈ ಪುರಾತನ ಸ್ಮಾರಕಗಳು ಮಧ್ಯಕಾಲೀನ ಭಾರತದ ಸಾಮಾಜಿಕ, ಆರ‍್ಥಿಕ ಮತ್ತು ರಾಜಕೀಯ ಘಟನೆಗಳ ಅತ್ಯುತ್ತಮ ದಾಖಲೆಗಳಾಗಿವೆ. ಒಂದೊಂದು ಸ್ಮಾರಕವೂ ಸೈನಿಕನೊಬ್ಬನ ಶೌರ‍್ಯ, ಅಧಿಕಾರಿಗಳ ಒಳಸಂಚು, ಪ್ರೇಮಿಗಳ ಭಾವೋನ್ಮಾದ ಮತ್ತು ವ್ಯಾಪಾರಿಗಳ ವಂಚನೆಯ ಕತೆಗಳನ್ನು ಹೇಳುತ್ತವೆ. ಈ ಅರ‍್ಥದಲ್ಲಿ ಮೆಹರೂಲಿಯಲ್ಲಿ ಇತಿಹಾಸವು ವರ‍್ತಮಾನವನ್ನು ಸಂಧಿಸುತ್ತದೆ. 


ಇಂಥ ಇತಿಹಾಸ ಪ್ರಸಿದ್ಧ ಮೆಹರೂಲಿಯಲ್ಲಿ ಸುಮಾರು 600 ವರ‍್ಷ ಹಳೆಯದಾದ ಅಖೊಂಜಿ (Masjid Akhonji) ಹೆಸರಿನ ಮಸೀದಿಯೊಂದಿತ್ತು. ಮೊನ್ನೆ ಜನವರಿ 30 ರಂದು ಮುಂಜಾನೆ ಐದು ಗಂಟೆಯ ಚಳಿಯಲ್ಲಿ ಅಲ್ಲಿಗೆ ಆಗಮಿಸಿದ ಸುಮಾರು 10 ಬಲ್ಡೋಜರುಗಳು ಆ ಮಸೀದಿಯನ್ನು ನೆಲಸಮ ಮಾಡಿದುವು. ಅದಕ್ಕೆ ಅವರು ಕೊಟ್ಟ ಕಾರಣ ʼ ಮಸೀದಿಯನ್ನು ಅಕ್ರಮವಾಗಿ ಕಟ್ಟಲಾಗಿದೆʼ. 


600 ವರ‍್ಷಗಳ ಹಿಂದೆ ಮಸೀದಿಯನ್ನು ಅಕ್ರಮವಾಗಿ ಕಟ್ಟಿದ್ದು ಇವರಿಗೆ ಹೇಗೆ ಗೊತ್ತಾಯಿತೋ ಏನೋ? 
ವಿಷಯ ಈಗ ಕೋರ‍್ಟಲ್ಲಿ ಇದೆ. ಕೋರ್ಟ  ಏನು ಹೇಳಿದರೂ ಅದಕ್ಕೇನೂ ಅರ‍್ಥ ಇರುವುದಿಲ್ಲ.