ಡಿಸೆಂಬರ್ ಅಂತ್ಯಕ್ಕೆ ಚಳಿಗಾಲದ ಅಧಿವೇಶನ?
ಡಿಸೆಂಬರ್ ಅಂತ್ಯಕ್ಕೆ ಚಳಿಗಾಲದ ಅಧಿವೇಶನ?
ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಡಿಸೆಂಬರ್ ಅಂತ್ಯಕ್ಕೆ ದಿನಾಂಕ ನಿಗದಿಯಾಗುವ ಸಂಭವವಿದೆ.
ಕಳೆದ ಎರಡು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನಮಂಡಲ ಅಧಿವೇಶನದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಡಿಸೆಂಬರ್ ಮೊದಲ ವಾರದಲ್ಲಿ ದಿನಾಂಕ ನಿಗದಿ ಮಾಡಿ ಕನಿಷ್ಟ 10 ರಿಂದ 15 ದಿನಗಳ ಕಾಲ ಅಧಿವೇಶನ ನಡೆಸುವ ಪ್ರಸ್ತಾವನೆ ಇತ್ತು. ಆದರೆ, ಕೇಂದ್ರ ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವುದರಿಂದ ನೀತಿ ಸಂಹಿತೆ ಜಾರಿಯಾಗಿದೆ.
ನ.16ರಿಂದ ಚುನಾವಣೆ ಅಸೂಚನೆ ಜಾರಿಯಾಗಿ ಡಿ.10ರಂದು ಮತದಾನ ನಡೆಯಲಿದೆ. 14ರಂದು ಮತ ಎಣಿಕೆ ನಡೆದು ಚುನಾವಣಾ ಪ್ರಕ್ರಿಯೆಗಳು 16ಕ್ಕೆ ಮುಕ್ತಾಯಗೊಳ್ಳಲಿವೆ. ಆವರೆಗೂ ಬೆಳಗಾವಿ ಅಧಿವೇಶನ ನಡೆಸಲು ನೀತಿ ಸಂಹಿತೆ ಅಡ್ಡಿಯಾಗಲಿದೆ.
ಮುಂದಿನ ಸಂಪುಟದಲ್ಲಿ ಅವೇಶನದ ದಿನಾಂಕ ನಿಗದಿ ಮಾಡುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದರು. ಆದರೆ, ಈಗ ಡಿಸೆಂಬರ್ 16ರ ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ. 17ರಂದು ಶುಕ್ರವಾರವಾಗಿದ್ದು, ಶನಿವಾರ ಮತ್ತು ಭಾನುವಾರ ಕಲಾಪಗಳಿಗೆ ರಜಾ ದಿನಗಳಾಗಲಿವೆ. ಹಾಗಾಗಿ ಡಿ.20ರ ನಂತರ ಅವೇಶನದ ದಿನಾಂಕ ನಿಗದಿಯಾಗಬಹುದು. ಮತ್ತೆ ಡಿ.25ರ ಶನಿವಾರ ಕ್ರಿಸ್‌ಮಸ್ ರಜೆ ಬರಲಿದೆ. ಎಂದಿನAತೆ ಭಾನುವಾರ ರಜಾ ದಿನ.
ಮುಂದಿನ 27 ರಿಂದ 31ರ ವರೆಗೂ ಅವಕಾಶಗಳಿದ್ದು, ಈ ನಡುವೆ ಅಧಿವೇಶನ ನಡೆಸಬಹುದಾಗಿದೆ. ಇಲ್ಲದೆ ಹೋದರೆ ಮುಂದಿನ ವರ್ಷಾರಂಭದ ಹೊಸ ಅಧಿವೇಶನ ನಡೆಸಬೇಕಾಗುತ್ತದೆ.