ಶಿರಾ: ಸಮರ್ಥ ‘ದಳ’ವಾಯಿ ಯಾರಾಗಬಲ್ಲರು?
ಶಿರಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅಷ್ಟು ಸುಲಭದಲ್ಲ ಎನಿಸಿದೆಯೇ?
ಶಿರಾ: ಸಮರ್ಥ ‘ದಳ’ವಾಯಿ ಯಾರಾಗಬಲ್ಲರು?
ತುಮಕೂರು: ಜಿಲ್ಲೆಯಲ್ಲಿ ಸಂಚರಿಸುತ್ತ ಒಂದೊಂದೇ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತಿರುವ ಜೆಡಿಎಸ್ ವರಿಷ್ಟ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ತುಮಕೂರು ನಗರ, ಮಧುಗಿರಿ, ಕೊರಟಗೆರೆ ಕ್ಷೇತ್ರಗಳಷ್ಟು ಸುಲಭವಾಗಿ ಶಿರಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅಷ್ಟು ಸುಲಭದಲ್ಲ ಎನಿಸಿದೆಯೇ? ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ನೋಡಿದರೆ ಅದು ನಿಜ ಎನಿಸುತ್ತದೆ.
ಈ ಮೊದಲು ತಾವೇ ಹುಮ್ಮಸ್ಸಿನಿಂದ ಎರಡು ಅವಧಿಗೆ ಆಯ್ಕೆ ಮಾಡಿದ ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ ಸಣ್ಣ ನೀರಾವರಿ ಸಚಿವರಾಗಿ ಸಾವಿರಾರು ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ತಾಲೂಕಿಗೇ ತಂದು ಸುರಿದಿದ್ದರೂ , ಉಪ ಚುನಾವಣೆ ನಡೆದರೂ ಪರವಾಗಿಲ್ಲ ಎನ್ನುತ್ತಲೇ 2018ರ ವಿಧಾನ ಸಭಾ ಚುನಾವಣೆಯಲ್ಲಿ ನಿರ್ದಾಕ್ಷಿಣ್ಯವಾಗಿ ಸೋಲಿಸಿ ಸತ್ಯಣ್ಣ / ಬೂವನಹಳ್ಳಿ ಸತ್ಯನಾರಾಯಣ/ ಬಿ. ಸತ್ಯನಾರಾಯಣ ಅವರನ್ನು ಗೆಲ್ಲಿಸಿದಂತ ಮತದಾರರಿರುವ ವಿಶಿಷ್ಟ ಕ್ಷೇತ್ರ ಶಿರಾ.
ಬೂವನಹಳ್ಳಿ ಸತ್ಯನಾರಾಯಣ ಅವರ ಅಕಾಲಿಕ ನಿಧನದ ಕಾರಣ 2020ರ ನವೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮನವರು ಗೆಲ್ಲಲಾಗಲಿಲ್ಲ. ಬಿಜೆಪಿಯ ಡಾ.ರಾಜೇಶ್ ಗೌಡರು ವಿಜಯೇಂದ್ರ ಅವರ ಹಣದ ಹೊಳೆ ಹಾಗೂ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಆಮಿಷಕ್ಕೆ ಬಲಿಯಾದ ಎಡಗೈ ಸಮುದಾಯದ ಓಟುಗಳು ಹಾಗೂ ಯಾವ ಕಾರಣಕ್ಕೂ ಕಾಂಗ್ರೆಸ್‍ಗೆ ಮತ ನೀಡದ ಜೆಡಿಎಸ್ ನಿಷ್ಟರ ಓಟುಗಳಿಂದಾಗಿ 13 ಸಾವಿರದಷ್ಟು ಮತಗಳ ಅಂತರದಿಂದ ಗೆದ್ದರು. ಕೇವಲ ಎರಡೇ ವರ್ಷದಲ್ಲಿ ಈಗ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆಗೆ ಸ್ವತಃ ಆ ಪಕ್ಷದವರೇ ಹೌದು ಎಂದು ಹೇಳುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್‍ನ ಅತ್ಯಂತ ಹಿರಿಯ ಎನಿಸಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರರಿಗೆ ಅವರದೇ ಪಕ್ಷದ ಚಿಕ್ಕನಾಯಕನಹಳ್ಳಿಯ ಸಾಸಲು ಸತೀಶ್ ಅವರು ಅಡ್ಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರವನ್ನು ಜೆಡಿಎಸ್ ಮರಳಿ ಪಡೆಯುವ ಹಂಬಲ ತೋರಿದೆ.
ಹೀಗಾಗಿ ಜೆಡಿಎಸ್‍ನಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಸತ್ಯನಾರಾಯಣ್ ಮಗ ಸತ್ಯಪ್ರಕಾಶ್, ಶಿರಾ ಜೆಡಿಎಸ್ ಅಧ್ಯಕ್ಷ ಉಗ್ರೇಶ್, ಜಿಪಂ ಮಾಜಿ ಸದಸ್ಯ ಸಿ.ಆರ್.ಉಮೇಶ್ ಜೊತೆಗೆ ಬಿಜೆಪಿಯಲ್ಲಿದ್ದು ಅಧಿಕಾರ ಅನುಭವಿಸಿ ಈಗ ಹಿಂದಿರುಗಿರುವ ಎಸ್.ಆರ್.ಗೌಡರು, ಕಾಂಗ್ರೆಸ್ ಬೆಂಬಲ ಪಡೆದು ಜಿಲ್ಲಾ ಪಂಚಾಯಿತಿ ಅವಧಿ ಪೂರ್ಣಗೊಳಿಸಿಕೊಂಡ ಅಧ್ಯಕ್ಷರ ಪತಿ ಕಲ್ಕೆರೆ ರವಿಕುಮಾರ್ ಕೂಡಾ ಮರಳಿ ಬಂದು ಪಟ್ಟಿ ಉದ್ದವಾಗಲು ಕಾರಣರಾಗಿದ್ದಾರೆ.
ಇವರೆಲ್ಲರ ಜೊತೆಗೆ ಹಿಂದೆ ತುಮಕೂರು ಜಿಲ್ಲೆಯಲ್ಲಿ ಡಿಡಿಪಿಐ ಆಗಿದ್ದ ದೊಡ್ಡಸಿದ್ದಯ್ಯನವರ ಸೋದರ ಬೆಸ್ಕಾಂ ನಿವೃತ್ತ ಎಂಜಿನಿಯರ್ ಶ್ರೀರಾಮೇಗೌಡರೂ ದಿಡೀರ್ ಆಕಾಂಕ್ಷಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದು, ಇವರು ಕುಮಾರಸ್ವಾಮಿ ಹಾಗೂ ದೇವೇಗೌಡರಿಬ್ಬರ ಆಶೀರ್ವಾದವನ್ನೂ ಹೊಂದಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಹನ್ನೊಂದು ಕ್ಷೇತ್ರಗಳಲ್ಲಿ ಹನ್ನೊಂದನ್ನೂ ಗೆಲ್ಲುತ್ತೇವೆ ಎಂದು ಸುದ್ದಿಗೋಷ್ಟಿಗಳಲ್ಲಿ ಸಮಾವೇಶಗಳಲ್ಲಿ ಕುಮಾರಸ್ವಾಮಿ ಹೇಳಿಕೊಳ್ಳುತ್ತಾರಾದರೂ, ಕನಿಷ್ಟ ಐದಾರು ಗೆಲ್ಲುವುದು ಕಷ್ಟವೇನಲ್ಲ, ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ಆ ಪಟ್ಟಿಯಲ್ಲಿ ಶಿರಾ ಕೂಡಾ ಸೇರಬಹುದು ಎಂದು ಕಾರ್ಯಕರ್ತರು ಹೇಳುತ್ತಾರೆ.
ಮೇಲೆ ಹೇಳಿದ ಎಲ್ಲರ ಜೊತೆಗೆ ಸತ್ಯಣ್ಣನವರ ಬೂವನಹಳ್ಳಿಯವರೇ ಆದ ಡಾ. ಬೂವನಹಳ್ಳಿ ನಾಗರಾಜ್ ಹೆಸರೂ ಕೂಡಾ ಎರಡು ವರ್ಷಗಳಿಂದ ಜೆಡಿಎಸ್ ವಲಯದಲ್ಲಿ ಹರಿದಾಡುತ್ತಲೇ ಇದೆ. ಡಾ. ಬೂವನಹಳ್ಳಿ ನಾಗರಾಜ್ ಅವರು ಸತ್ಯಣ್ಣನವರ ಸೋದರ ಸಂಬಂಧಿಯೇ ಆದರೂ ರಾಜಕೀಯವಾಗಿ ಕಾಂಗ್ರೆಸ್ ಬೆಂಬಲಿಗರ ಕುಟುಂಬಕ್ಕೆ ಸೇರಿದವರು. ಆದರೆ ಶಿರಾ ತಾ ಪಂ ಇಓ ಆಗಿ, ಸತ್ಯಣ್ಣನವರು ಸಚಿವರಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿ ಈ ಕುಟುಂಬದ ಆಪ್ತರು ಹಾಗೂ ನಿಷ್ಟರೂ ಆಗಿ ಉಳಿದವರು.
ಗ್ರಾಮೀಣಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಯಾಗಿ ನಿವೃತ್ತಿಯಾಗಿದ್ದರೂ ಸರ್ಕಾರವು ಅವರನ್ನು ಬೆಂಗಳೂರು ವಿಭಾಗದ 9 ಜಿಲ್ಲೆಗಳಿಗೆ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಕು೦ದುಕೊರತೆ ನಿವಾರಣಾ ಪ್ರಾಧಿಕಾರಿಯಾಗಿ ಮರುನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಕಳೆದ ಉಪ ಚುನಾವಣೆಯಲ್ಲಿ ಕಣಕ್ಕಿಳಿಸಲು ದೇವೇಗೌಡರು ಹಾಗೂ ಕುಮಾರಸ್ವಾಮಿ ಆಸಕ್ತಿ ಹೊಂದಿದ್ದರಾದರೂ ನಾಗರಾಜ್ ಒಪ್ಪಿರಲಿಲ್ಲ , ಬೆಮೆಲ್ ಕಾಂತರಾಜು ಗೆದ್ದಿದ್ದ ಕ್ಷೇತ್ರವನ್ನುಉಳಿಸಿಕೊಳ್ಳುವುದು ಕಷ್ಟವಲ್ಲ ಎಂಬ ಲೆಕ್ಕಾಚಾರದಲ್ಲಿ ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಇವರನ್ನು ಕಣಕ್ಕಿಳಿಯುಂತೆ ಮನವೊಲಿಸುವ ಕೆಲಸ ನಡೆದಿತ್ತು. ಈಗ ಮತ್ತೊಮ್ಮೆ ಅವರ ಹೆಸರು ಕೇಳಿ ಬರುತ್ತಿದೆ. ಈ ಕುರಿತು ಪಕ್ಷದ ಉನ್ನತ ವಲಯದಲ್ಲೂ ಜನವರಿಯಿಂದಲೇ ಮಾತುಕತೆಗಳು ನಡೆದಿವೆಯಾದರೂ ಬೂವನಹಳ್ಳಿ ಸತ್ಯನಾರಾಯಣ ಅವರು ನಂಬಿ ವಹಿಸಿಕೊಟ್ಟ ಹುದ್ದೆಗಳನ್ನು ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಿರ್ವಹಿಸಿರುವ ಅವರಿಗೆ ಅಮ್ಮಾಜಮ್ಮನವರಾಗಲೀ ಅವರ ಮಗ ಸತ್ಯಪ್ರಕಾಶ್ ಆಗಲೀ ಕಣಕ್ಕಿಳಿದು ಗೆಲ್ಲಲಿ ಎಂಬ ಹಂಬಲವಿದೆ. ಆದರೆ ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕಿಳಿದ ಜೆಡಿಎಸ್ ಈ ಸಲ ಗೆಲ್ಲಬೇಕೆಂದರೆ ಹಾಲಿ ಬಿಜೆಪಿ ಶಾಸಕರನ್ನು ಹಾಗೂ ಕಾಂಗ್ರೆಸ್‍ನ ಮಾಜಿ ಸಚಿವರನ್ನು ಎದುರಿಸಿ ನಿಲ್ಲುವಷ್ಟು ಜನ ಸಂಪರ್ಕ ಹಾಗೂ ಕ್ಷೇತ್ರದ ಪರಿಚಯ ಹೊಂದಿರಬೇಕಾಗುತ್ತದೆ.
ಸ್ವತಃ ಕವಿ, ಲೇಖಕರೂ ಆಗಿರುವ ಜನರ ಕಷ್ಟಗಳಿಗೆ ಮರುಗುವ ಗುಣವುಳ್ಳ ಡಾ. ಬೂವನಹಳ್ಳಿ ನಾಗರಾಜ್ ಅವರನ್ನು ಇಡೀ ಪಕ್ಷ ಬೇಷರತ್ ಬೆಂಬಲ ಕೊಟ್ಟು ಬಿ ಫಾರಂ ಕೊಟ್ಟಲ್ಲಿ ಸಮರ್ಥ ಎದುರಾಳಿಯಾಗಬಲ್ಲರು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಜೆಡಿಎಸ್ ಗಟ್ಟಿ ನೆಲೆ ಹೊಂದಿರುವ ಜಿಲ್ಲೆಗಳ ಪೈಕಿ ತುಮಕೂರು ಹಾಸನಕ್ಕಿಂತಲೂ ಒಂದು ಹಂತ ಮೇಲಿರುವಾಗಿ ಕುಮಾರಸ್ವಾಮಿ ಶಿರಾ ಕ್ಷೇತ್ರವನ್ನೂ ಗೆಲ್ಲುವ ಲೆಕ್ಕ ಹಾಕದೇ ಇರಲಾರರು. ಕಾದು ನೋಡೋಣ.