ರಾಜೇಂದ್ರ ಒಮ್ಮತದ ಅಭ್ಯರ್ಥಿ: ಡಿ.ಕೆ.ಶಿ ಕಾಂಗ್ರೆಸ್‌ನಲ್ಲಿ ಇರುವುದು ಒಂದೇ ಗುಂಪು: ಕೆಪಿಸಿಸಿ ಅಧ್ಯಕ್ಷರ ಸ್ಪಷ್ಟನೆ
ಡಿಕೆ ಶಿವಕುಮಾರ್ ಇಸ್ರೋ ಸ್ಥಳಾಂತರ ವಿರೋಧ , ರಾಜೇಂದ್ರ ಒಮ್ಮತದ ಅಭ್ಯರ್ಥಿ
ರಾಜೇಂದ್ರ ಒಮ್ಮತದ ಅಭ್ಯರ್ಥಿ: ಡಿ.ಕೆ.ಶಿ
ಕಾಂಗ್ರೆಸ್‌ನಲ್ಲಿ ಇರುವುದು ಒಂದೇ ಗುಂಪು: ಕೆಪಿಸಿಸಿ
ಅಧ್ಯಕ್ಷರ ಸ್ಪಷ್ಟನೆ
ತುಮಕೂರು: ವಿಧಾನ ಪರಿಷತ್ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ರಾಜೇಂದ್ರ ರಾಜಣ್ಣ ಕಾಂಗ್ರೆಸ್‌ನ ಒಮ್ಮತದ ಅಭ್ಯರ್ಥಿಯಾಗಿದ್ದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದ್ದು ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ಎಲ್ಲ ಹಂತದ ನಾಯಕರು ರಾಜೇಂದ್ರ ಅವರ ಹೆಸರನ್ನೇ ಅನುಮೋದಿಸಿದ್ದು ಅಭ್ಯರ್ಥಿ ಆಯ್ಕೆ ಮಾಡುವಾಗ ಎರಡನೇ ಹೆಸರೇ ಇರಲಿಲ್ಲ ಎಂದರಲ್ಲದೇ, ಆದರೆ ಪಕ್ಷದಲ್ಲಿ ಇತರ ಟಿಕೆಟ್ ಆಕಾಂಕ್ಷಿಗಳೂ ಇದ್ದರು ಮತ್ತು ಅವರಲ್ಲಿ ಅರ್ಹರೂ ಇದ್ದರು ಎಂದೂ ಹೇಳಿದರು ಶಿವಕುಮಾರ್.
ತುಮಕೂರು ವಿಧಾನ ಪರಿಷತ್ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದರೂ ನಾಲ್ಕೆöÊದು ಚುನಾವಣೆಗಳಿಂದ ಪರಿಶಿಷ್ಟ ಪಂಗಡಕ್ಕೇ ಅವಕಾಶ ನೀಡುತ್ತ ಬಂದಿರುವುದು ಪಕ್ಷದ ಸಾಮಾಜಿಕ ನ್ಯಾಯ ಬದ್ಧತೆಯನ್ನು ತೋರುತ್ತದೆ ಎಂದರು.
ದೇವೇಗೌಡರನ್ನು ಜಿಲ್ಲೆಯಲ್ಲಿ ಸೋಲಿಸಿದ ಕಾರಣ ಈ ಚುನಾವಣೆಯಲ್ಲಿ ಪ್ರತೀಕಾರದ ಮಾತುಗಳನ್ನು ಆಡುತ್ತಿದ್ದಾರೆ ಎಂಬ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿತ್ತು, ಈಗ ಅದು ಮುಗಿದ ಅಧ್ಯಾಯ, ಅವರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಅವರು ಸ್ವತಂತ್ರರಿದ್ದಾರೆ. ಆದರೆ ಅವರು ಪ್ರಧಾನಿ ಮೋದಿ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ ಬಗ್ಗೆ ನೋ ಕಾಮೆಂಟ್ಸ್ ಎಂದರು.
ಆದರೆ, ಅದೇ ದೇವೇಗೌಡರು ಅಲ್ಲಿಂದ ಬಂದ ನಂತರ ದೇಶದ ಭವಿಷ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಮಾರಕ ಎಂದು ಹೇಳಿದ ಬಗ್ಗೆ ಏಕೆ ನೀವು ಪ್ರಶ್ನೆ ಕೇಳುವುದಿಲ್ಲ ಎಂದು ಮರು ಪ್ರಶ್ನೆ ಹಾಕಿದರು.
2023ರ ವಿಧಾನ ಸಭಾ ಚುನಾವಣೆಗೆ ಒಂದು ವರ್ಷ ಮಾತ್ರ ಉಳಿದಿದೆ, ಆಗ ಪಕ್ಷದಿಂದ ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ,ಆಗ ಹಿಂದಿನ ಬಿಜೆಪಿ ಸರ್ಕಾರದ ಎಲ್ಲ ಹಗರಣಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದರು.
ಇಸ್ರೋ ಸ್ಥಳಾಂತರಕ್ಕೆ ವಿರೋಧ
ತುಮಕೂರು ಜಿಲ್ಲೆಯ ಹಿಂದಿನ ಹೆಚ್‌ಎಂಟಿ ಕಾರ್ಖಾನೆಯ 285 ಎಕರೆಯನ್ನು ಇಸ್ರೋಗೆ ಬಿಟ್ಟು ಕೊಡಲಾಗಿತ್ತು, ಆದರೆ ಈಗ ಈ ಯೋಜನೆಯನ್ನು ಖಾಸಗೀಕರಿಸಿ ಗುಜರಾತಿಗೆ ಸ್ಥಳಾಂತರಿಸಲಾಗುತ್ತಿದೆ. ಇಸ್ರೋ ಯೋಜನೆ ಸಮುದ್ರ ತೀರದ ಪಕ್ಕ ಇರಬೇಕೆಂದು ಇಸ್ರೋ ಮುಖ್ಯಸ್ಥ ಶಿವನ್ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಕರ್ನಾಟಕದಲ್ಲಿ ದಶಕಗಳಿಂದ ಇಸ್ರೋ ಹೇಗೆ ಅಭಿವೃದ್ಧಿಯಾಯಿತು. ಸಮುದ್ರ ತೀರವೇ ಬೇಕಿದ್ದರೆ ನಮ್ಮ ಮಂಗಳೂರು ಹಾಗೂ ಉತ್ತರ ಕನ್ನಡ ಇರಲಿಲ್ಲವೇ. ರಾಜ್ಯದ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಡಿ.ಕೆ.ಶಿವಕುಮಾರ್,
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು
ಮೇಕೆದಾಟು: ಜನವರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ
ತುಮಕೂರು: ರಾಜ್ಯದ ಯೋಜನೆಗಳನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ನಮ್ಮದು, ನಮ್ಮ ನೆಲ,ನಮ್ಮ ನೀರು, ನಮ್ಮ ಹಕ್ಕು, ಅಲ್ಲಿ ಬಫರ್ ಡ್ಯಾಮ್ ನಿರ್ಮಿಸುವಂತೆ ಆಗ್ರಹಿಸಿ ಜನವರಿ ಮೊದಲ ವಾರದ ನಂತರ ಕಾಂಗ್ರೆಸ್ 125 ಕಿಮೀ ಪಾದಯಾತ್ರೆ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರವೇ ಎಲ್ಲ ಅಂತಿಮಗೊಳಿಸಿತ್ತು, ಆದರೆ ತಮಿಳುನಾಡಿನ ವಿರೋಧ ಮತ್ತು ಪರಿಸರ ಇಲಾಖೆ ಅನುಮತಿ ನೆಪದಲ್ಲಿ ವಿಳಂಬಮಾಡಲಾಗುತ್ತಿದೆ ಎಂದು ಅವರು ದೂರಿದರು.
ಇಲ್ಲಿ ಬಫರ್ ಡ್ಯಾಮ್ ನಿರ್ಮಿಸಿದರೆ ಇಡೀ ಕಾವೇರಿ ಕಣಿವೆಯಿಂದ ನೀರು ಅನಗತ್ಯ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿಯುವುದು ನಿಲ್ಲುತ್ತದೆ ಮತ್ತು ವಿದ್ಯುತ್ ಉತ್ಪಾದನೆ ಕೂಡಾ ಆಗುತ್ತದೆ ಎಂದರು ಅವರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಎಸ್.ಷಡಕ್ಷರಿ, ಷಫಿ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಇದ್ದರು.