ಸಾರ್ವಕರ್ ಪಾರ್ಕು ಸಾರ್ವಜನಿಕರಿಗೆ ಮುಕ್ತ

savarkar-park-tumakuru

ಸಾರ್ವಕರ್ ಪಾರ್ಕು ಸಾರ್ವಜನಿಕರಿಗೆ ಮುಕ್ತ


ಸಾರ್ವಕರ್ ಪಾರ್ಕು ಸಾರ್ವಜನಿಕರಿಗೆ ಮುಕ್ತ


ತುಮಕೂರು: ಸಾರ್ವಜನಿಕರು, ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ನಗರದ ಹೊಸಬಡಾವಣೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿದ್ದ ವೀರಸಾರ್ವಕರ್ ಉದ್ಯಾನವನ್ನು ಸ್ಮಾರ್ಟ್ಸಿಟಿ ವತಿಯಿಂದ ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ನಾಗರಿಕರು, ಶುಚಿತ್ವ ಕಾಪಾಡುವ ಮೂಲಕ ಪಾರ್ಕಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು 15ನೇ ವಾರ್ಡಿನ ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಮನವಿ ಮಾಡಿದ್ದಾರೆ.


ಸ್ಮಾರ್ಟ್ಸಿಟಿ ವತಿಯಿಂದ ಆಭಿವೃದ್ಧಿಪಡಿಸಲಾದ ವೀರ ಸಾರ್ವಕರ್ ಉದ್ಯಾನವನವನ್ನು ಜನರ ಉಪಯೋಗಕ್ಕೆ ಮುಕ್ತಗೊಳಿಸಿ ಮಾತನಾಡಿದ ಅವರು, ಇಡೀ ಪಾರ್ಕ್ನ್ನು ಅತ್ಯಂತ ವ್ಯವಸ್ಥಿತವಾಗಿ, ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದರ ನಿರ್ವಹಣೆಯನ್ನು ಪಾರ್ಕಿನ ಪಕ್ಕದಲ್ಲಿಯೇ ಇರುವ ಅಕ್ಷರ ಐ ಪೌಂಢೇಷನ್‌ನವರು ವಹಿಸಿಕೊಂಡಿದ್ದು, ಸೆಕ್ಯೂರಿಟಿಯವರನ್ನು ಇಟ್ಟು, ಬೆಳಗ್ಗೆ ಮತ್ತು ಸಂಜೆ ಪಾರ್ಕಿನ ಬಾಗಿಲು ತೆಗೆಯಲಿದ್ದಾರೆ. ಮಧ್ಯಾಹ್ನ ಯಾವುದೇ ಚಟುವಟಿಕೆಗಳು ಇರುವುದಿಲ್ಲ ಎಂದರು.


ಪಾರ್ಕಿನ ಅಂದ ಹೆಚ್ಚಿಸಲು 16 ಸಣ್ಣ ಮತ್ತು 18 ದೊಡ್ಡ ಲೈಟುಗಳನ್ನು ಹಾಕಲಾಗಿದೆ. ಅಲ್ಲದೆ 12 ಸಿಸಿ ಟಿ.ವಿ.ಕ್ಯಾಮರಗಳನ್ನು ಅಳವಡಿಸಲಾಗಿದೆ. ಇದರಿಂದ ಪಾರ್ಕಿನಲ್ಲಿ ಕಿಡಿಗೇಡಿಗಳು ನಡೆಸುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಅಲ್ಲದೆ ಟಿ.ಎಲ್. ಸ್ಮಾರ್ಟ್ ಬೆಂಜ್ ಎಂಬ ಹೊಸ ಬೆಂಚ್‌ನ್ನು ಅಳವಡಿಸಿದ್ದು, ವಾಯುವಿಹಾರಕ್ಕೆ ಬರುವವರು ಸ್ಮಾರ್ಟ್ಬೆಂಜ್‌ನಲ್ಲಿರುವ ವಿದ್ಯುತ್‌ನಿಂದ ತಮ್ಮ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದು. ಅಲ್ಲದೆ, ವೈ.ಫೈ ಸಂಪರ್ಕ ಪಡೆಯಬಹುದು. ಸ್ಮಾರ್ಟ್ಸಿಟಿಯವರು ಅತ್ಯಂತ ವ್ಯವಸ್ಥಿತವಾಗಿ ಪಾರ್ಕು ಅಭಿವೃದ್ಧಿ ಪಡಿಸಿದ್ದಾರೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಿದ ನಗರಪಾಲಿಕೆಯ ಆಡಳಿತ ಮಂಡಳಿ ಮತ್ತು ಶಾಸಕರಾದ ಜೋತಿಗಣೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದರು.


ಸ್ಮಾರ್ಟ್ಸಿಟಿ ಎಂ.ಡಿ. ರಂಗಸ್ವಾಮಿ ಮಾತನಾಡಿ, ಇಡೀ ಪಾರ್ಕಿಗೆ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಇದರಿಂದ ಬೆಳಗ್ಗೆ ಮತ್ತು ಸಂಜೆ ಹೊರತು ಪಡಿಸಿ, ಯಾರಾದರೂ ಕಿಡಿಗೇಡಿಗಳು ಪಾರ್ಕಿನ ಬೆಲಿ ಹಾರಿ ಒಳಬಂದಲ್ಲಿ ಕೂಡಲೇ ಸೈರನ್ ಮೊಳಗುತ್ತದೆ. ಇದರಿಂದ ಸೆಕ್ಯೂರಿಟಿ ಅವರು ತಕ್ಷಣವೇ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಪಾರ್ಕಿನ ಒಳಗೆ ಸೆಕ್ಯೂರಿಟಿಗಳು ಇರಲು ಸೆಕ್ಯೂರಿಟಿ ಕೊಠಡಿಯನ್ನು ನಿರ್ಮಿಸಲಾಗಿದೆ. ಈ ಭಾಗದ ನಾಗರಿಕರು ಮತ್ತು ಜನಪ್ರತಿನಿಧಿಗಳ ಆಶಯದಂತೆ ವ್ಯವಸ್ಥಿತವಾಗಿ ರೂಪಿಸಿರುವ ಪಾರ್ಕನ್ನು ಜನರು ಹಾಳು ಮಾಡದೆ, ಶುಚಿತ್ವ ಕಾಪಾಡಿಕೊಂಡು, ಸೂಚಿಸಲಾಗಿರುವ ಸೂಚನೆಗಳನ್ನು ಪಾಲಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಒಂದು ಉತ್ತಮ ವಾಯುವಿಹಾರ ಕೇಂದ್ರವಾಗಿ ಮಾರ್ಪಾಡಾಗಲಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.


ಈ ವೇಳೆ ಪಾಲಿಕೆಯ ಇಂಜಿನಿಯರ್ ಸ್ಮಿತಾ, ಅಕ್ಷರ ಐ ಪೌಂಢೇಷನ್‌ನ ಡಾ. ಶ್ರೀನಿವಾಸ್, ವಾರ್ಡಿನ ನಾಗರಿಕರಾದ ಸುರಭಿ ಫಣೀಂದ್ರ, ಧನಿಯಕುಮಾರ್ ಮತ್ತಿತರರು ಇದ್ದರು.