ದಕ್ಷಿಣ ಭಾರತದ ಭವಿಷ್ಯ ಭಯಾನಕ !
ದಕ್ಷಿಣದ ಸ್ವಾಯತ್ತತೆಗಾಗಿ ಒತ್ತಾಯಿಸುವ ಕಾಲ ಬಂದಿದೆ. ನಾವು ನಮ್ಮ ಹಣದ ಮೇಲೆ ಮೊದಲ ಹಕ್ಕನ್ನು ಕೇಳಬೇಕು. ನಾವು ಹೊಸ ಸಂಸತ್ತಿನಲ್ಲಿ ಉತ್ತರಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಾತಿನಿಧ್ಯ ಕೇಳಬೇಕು.
ವರ್ತಮಾನ
ಡಾ ಬಸವರಾಜ್ ಇಟ್ನಾಳ
ದಕ್ಷಿಣ ಭಾರತದ ಭವಿಷ್ಯ ಭಯಾನಕ !
ನಮ್ಮನ್ನು ಉತ್ತರ ಭಾರತದ ಗುಲಾಮರನ್ನಾಗಿ ಮಾಡಲಿದೆ
ಬಿಜೆಪಿಯ ಖತರ್ನಾಕ್ ಲೆಕ್ಕಾಚಾರ
ಇದನ್ನು ಚೂರು ಚೂರಾಗಿ ಅಲ್ಲಿ ಇಲ್ಲಿ ಅನೇಕರು ಮಾತಾಡಿದ್ದಾರೆ. ಆದರೆ ಇದನ್ನು ಸಮಗ್ರವಾಗಿ ಗ್ರಹಿಸುವ ಮತ್ತು ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಆ ಮೂಲಕ ದಕ್ಷಿಣದ ರಾಜ್ಯಗಳಿಗೆ ಎದುರಾಗುವ ವಿರಾಟ್ ಅಪಾಯಗಳ ಅರಿತುಕೊಳ್ಳುವ ಅಗತ್ಯವಿದೆ. ಯಾಕೆಂದರೆ ಇದು ಎಲ್ಲೋ ಎಂದೋ ನಡೆದುಹೋಗಬಹುದಾದ ಸಂಭವನೀಯ ಘಟನೆ ಅಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಖಚಿತವಾಗಿ ನಡೆದೇ ಹೋಗುವ ಆ ಮೂಲಕ ದಕ್ಷಿಣದ ಅಸ್ತಿತ್ವವನ್ನೇ ಕೊಂದು ಹಾಕುವ ಅಪಾಯಕಾರಿ ಬೆಳವಣಿಗೆ ಇದು. ಬಿಜೆಪಿ ಇದನ್ನು ಸೂಕ್ಷ್ಮವಾಗಿ ಅರಿತುಕೊಂಡು ತನ್ನ ಭವಿಷ್ಯಕ್ಕೆ ಅನುಗುಣವಾಗಿ ತಾನು ಅನವರತವೂ ಅಧಿಕಾರದಲ್ಲಿರುವ ಸಕಲ ಸಿದ್ಧತೆ ಮಾಡಿಕೊಂಡಿದ್ದರೆ, ವಿರೋಧ ಪಕ್ಷಗಳು ಇದರ ಕುರಿತು ಅಷ್ಟಾಗಿ ತಲೇನೆ ಕೆಡಿಸಿಕೊಂಡಿಲ್ಲ. ಇದು ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯಗಳ ಅದರಲ್ಲೂ ದಕ್ಷಿಣದ ರಾಜ್ಯಗಳ ಯೋಗಕ್ಷೇಮದ ಬಗೆಗೆ ಇರುವ ಅಸಡ್ಡೆಯನ್ನು ತೋರುತ್ತದೆ. ಆದರೆ ಬಿಜೆಪಿ ಇದರ ಪೂರ್ವ ಸಿದ್ಧತೆ ಎಂಬಂತೆ ಹೊಸ ಸಂಸತ್ ಭವನವನ್ನು ತಮ್ಮ ಸಂಚಿಗೆ ಅನುಕೂಲ ಆಗುವ ಹಾಗೆಯೇ ಕಟ್ಟಿಕೊಂಡಿದ್ದಾರೆ.
ಈಗ ವಿವರಗಳನ್ನು ಗಮನಿಸಿ. ಇದನ್ನು ಎಲ್ಲರಿಗೂ ತಿಳಿಯುವ ಹಾಗೆ ಹೇಳುವ ಅಗತ್ಯವಿದೆ. ಆದ್ದರಿಂದ ಸ್ವಲ್ಪ ಬಿಡಿ ಬಿಡಿಯಾಗಿ ಚಿಕ್ಕ ಮಕ್ಕಳಿಗೆ ಹೇಳುವ ಹಾಗೆ ಹೇಳುತ್ತಿದ್ದೇನೆ ಅನಿಸಿದರೆ ಕ್ಷಮೆ ಇರಲಿ.
ಪ್ರಜಪ್ರಭುತ್ವ ಅಂದರೆ ಏನು ? ಜನಗಳಿಂದ ಜನಗಳಿಗೋಸ್ಕರ ಜನರೇ ಆಯ್ಕೆ ಮಾಡುವ ಸರಕಾರ ಅಲ್ಲವೇ ? ಆದರೆ ಜನರ ಸಂಖ್ಯೆ ಎಲ್ಲಾ ಕಾಲದಲ್ಲೂ ಒಂದೇ ಇರುವುದಿಲ್ಲ. ದೇಶದ ಜನಸಂಖ್ಯೆ ಹೆಚ್ಚಾಗುತ್ತದೆ ಅಂದರೆ ಶಾಸಕ ಅಥವಾ ಸಂಸದನ ಮತಕ್ಷೇತ್ರದ ಮತದಾರರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಎರಡು ಲಕ್ಷ ಮತದಾರರ ವಿಧಾನಸಭಾ ಕ್ಷೇತ್ರ ಅಥವಾ ಎಂಟು ಲಕ್ಷ ಮತದಾರರ ಸಂಸದೀಯ ಕ್ಷೇತ್ರ ಇಂದು ಇದ್ದರೆ ಕೆಲ ವರ್ಷಗಳ ನಂತರ ಸದರೀ ಕ್ಷೇತ್ರಗಳ ಜನಸಂಖ್ಯೆ ಹೆಚ್ಚಾಗಿ ಮತದಾರರ ಸಂಖ್ಯೆ ಹೆಚ್ಚಾದರೆ ಮುಂದಿನ ಶಾಸನ ಸಭೆಗೆ ಆಯ್ಕೆ ಆಗುವ ಶಾಸಕ ಅಥವಾ ಸಂಸದ ತಾನು ಹಿಂದಿನ ಅವಧಿಯಲ್ಲಿ ಪ್ರತಿನಿಧಿಸಿದ ಮತದಾರರ ಸಂಖ್ಯೆಗಿಂತಲೂ ಹೆಚ್ಚಿನ ಮತದಾರರನ್ನು ಪ್ರತಿನಿಧಿಸುತ್ತಾನೆ. ಅಂದರೆ ಜನರ ಸರಾಸರಿ ಮತಗಳ ಮೌಲ್ಯ ಜನಸಂಖ್ಯೆಗೆ ಅನುಲೋಮವಾಗಿ ಕಡಿಮೆ ಆಗುತ್ತದೆ. ಇದರಿಂದ ಜನರ ತಲಾವಾರು ಪ್ರಾತಿನಿಧ್ಯದ ದರ ಕಡಿಮೆ ಆಗುತ್ತದೆ.
ಆದ್ದರಿಂದಲೇ ನಮ್ಮ ಸಂವಿಧಾನದಲ್ಲಿ ಪ್ರತಿ ಜನಗಣತಿಯ ನಂತರ ಹೊಸ ಜನಸಂಖ್ಯಾ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಮಾಡಬೇಕು ಅಂತ ಹೇಳಿದೆ. ದೇಶದ ಮೊದಲ ಚುನಾವಣೆ ನಡೆದ 1952ರಲ್ಲಿ 494 ಇದ್ದ ಲೋಕಸಭಾ ಸೀಟುಗಳು 1963ರಲ್ಲಿ 522 ಆದವು ನಂತರ 1973ರಲ್ಲಿ 543 ಆದವು. ಹಾಗೇಯೇ ವಿಧಾನ ಸಭಾ ಸೀಟುಗಳೂ ಕೂಡ ಬದಲಾದವು. ಈಗ ನಾವು ಸಂಸತ್ತಿನ ಬಗ್ಗೆ ಚರ್ಚೆ ಮಾಡುತ್ತಿರುವುದರಿಂದ ಸಂಸದೀಯ ಸೀಟುಗಳ ಬಗ್ಗೆ ಮಾತ್ರ ಗಮನಿಸೋಣ.
1952ರಲ್ಲಿ 36 ಕೋಟಿ ಇದ್ದ ಜನಸಂಖ್ಯೆ 1971ರ ಹೊತ್ತಿಗೆ 55ಕೋಟಿ ಆಗಿದ್ದನ್ನು ಗಮನಿಸಿದ ಇಂದಿರಾ ಸರಕಾರ ಈ ವೇಗದಲ್ಲಿ ದೇಶದ ಅಭಿವೃದ್ಧಿಗೆ ಮಾರಕವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಮೊದಲು ನಿಯಂತ್ರಣಕ್ಕೆ ತರಬೇಕು ಅಂತ ತೀರ್ಮಾನಿಸಿ ಮುಂದಿನ 25 ವರ್ಷಗಳ ಕಾಲ ಕ್ಷೇತ್ರ ಮರುವಿಂಗಡಣೆ ಮಾಡದಂತೆ ಕಾನೂನು ತರುತ್ತಾರೆ. ಈ ಕಾನೂನಿನಿಂದಾಗಿ ನಮ್ಮ ಲೋಕಸಭೆ ಸೀಟುಗಳು 543 ಕ್ಕೆ ಉಳಿದವು. ಹೇ ಇದು ಕಾಂಗ್ರೆಸ್ಸು ಅಥವಾ ಇಂದಿರಾ ಮಾಡಿದ ತಪ್ಪು ಇತ್ಯಾದಿ ಅಂತ ಓಡುವ ಮೊದಲು ಗಮನಿಸಿ ಈ 25 ವರ್ಷಗಳ ಅವಧಿ ಮುಗಿದದ್ದು 2002ರ ಸುಮಾರಿಗೆ. ಆಗ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಇಂಡಿಯಾ ಶೈನಿಂಗ್ ಸರಕಾರ ಇತ್ತು ಅಲ್ಲವೇ. ವಾಜಪೇಯಿ ಕೂಡ ಕಳೆದ 25ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬರದೇ ಇದ್ದುದನ್ನು ಗಮನಿಸಿ ಈ ಅವಧಿಯನ್ನು ಮತ್ತೆ 25ವರ್ಷಗಳ ಕಾಲ ವಿಸ್ತರಿಸುತ್ತಾರೆ.
ಈ ಜನಸಂಖ್ಯೆ ಮತ್ತು ಅದರ ಹರವು ಮತ್ತು ವಿತರಣೆ ಅಭಿವೃದ್ಧಿ ಮತ್ತು ಆರ್ಥಿಕತೆ ಮೇಲೆ ಎಷ್ಟು ಮಾರಕ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅನೇಕ ಪುಸ್ತಕಗಳೇ ಇವೆ. ಇಲ್ಲಿ ಸಂಕ್ಷಿಪ್ತವಾಗಿ ಆರ್ಥಿಕತೆಯ ಆಯಾಮವನ್ನು ಕೂಡ ಗಮನಿಸೋಣ. ಪ್ರಜಾಪ್ರಭುತ್ವ ಕೇವಲ ರಾಜಕೀಯ ಅಷ್ಟೇ ಅಲ್ಲ ಆರ್ಥಿಕ ಸಮಾನತೆಯನ್ನು ಕೂಡ ತರುವ ಗುರಿ ಹೊಂದಿದೆ. ಈ ಆರ್ಥಿಕ ಸಮಾನತೆ ರಾಜ್ಯ ರಾಜ್ಯಗಳ ನಡುವೆ ಕೂಡ ಸಾಧ್ಯಗೊಳಿಸುವುದು ಸಂವಿಧಾನದ ಉದ್ದೇಶ. ಆದ್ದರಿಂದ ಎಲ್ಲಾ ರಾಜ್ಯಗಳು ಸಂಗ್ರಹಿಸುವ ತೆರಿಗೆಯಲ್ಲಿ ಒಂದಷ್ಟು ಭಾಗ ಕೇಂದ್ರಕ್ಕೆ ಕೊಡುತ್ತೇವೆ. ಜೊತೆಗೆ ಕೇಂದ್ರ ಸರಕಾರವೇ ಹಾಕುವ ಆದಾಯ ತೆರಿಗೆ, ಎಕ್ಸೈಜ್ ಮತ್ತು ಕಸ್ಟಮ್ ಸುಂಕ ಇತ್ಯಾದಿ ಇತ್ಯಾದಿಗಳ ಸೆಂಟ್ರಲ್ ಪೂಲ್ ಎಂಬ ಕೇಂದ್ರದ ಆದಾಯದ ಗಂಟಿನಲ್ಲಿ ಒಂದು ಭಾಗ ಕೇಂದ್ರೀಯ ಖರ್ಚುಗಳಿಗೆ ಇಟ್ಟುಕೊಂಡು ಉಳಿಕೆ ಗಂಟನ್ನು ಡಿವಿಸಿಬಲ್ ಪೂಲ್ ಅಂತಾರೆ. ಅಂದರೆ ರಾಜ್ಯಗಳ ಅಭಿವೃದ್ಧಿ ಮತ್ತು ಜನಸಂಖ್ಯೆ ಆಧಾರದ ಮೇಲೆ ಯಾವ ರಾಜ್ಯಗಳಿಗೆ ಅಭಿವೃದ್ಧಿಯ ಹೆಚ್ಚು ಅಗತ್ಯವಿದೆಯೋ ಆ ರಾಜ್ಯಗಳಿಗೆ ಹೆಚ್ಚು ಮತ್ತು ಯಾವ ರಾಜ್ಯಗಳು ಅನುಕೂಲವಾಗಿವೆಯೋ ಅವುಗಳಿಗೆ ಕಡಿಮೆ ಅಂತ ಒಂದು ಸೂತ್ರದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಅಂದರೆ ಬಡತನ ಮತ್ತು ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದ ಉತ್ತರ ಪ್ರದೇಶ ಬಿಹಾರ ಇತ್ಯಾದಿ ರಾಜ್ಯಗಳಿಗೆ ಅವು ಕಡಿಮೆ ಕಂದಾಯ ಕೇಂದ್ರಕ್ಕೆ ಕೊಟ್ಟಿದ್ದರೂ ಕೂಡ ಅವರ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಪಾಲು ಹಾಗು ದಕ್ಷಿಣದ ರಾಜ್ಯಗಳು ಹೆಚ್ಚು ಸುಭಿಕ್ಷವಾಗಿ ಇದ್ದು ಹೆಚ್ಚು ತೆರಿಗೆ ಕೊಟ್ಟಿದ್ದರೂ ಕೂಡ ಈ ರಾಜ್ಯಗಳ ಜನಸಂಖ್ಯೆಯೂ ಉತ್ತರದ ರಾಜ್ಯಗಳಿಗೆ ಹೋಲಿಸಿದಾಗ ಕಡಿಮೆ ಇರುವುದರಿಂದ ಇವುಗಳಿಗೆ ಕಡಿಮೆ ಪಾಲು ಸಿಗುತ್ತದೆ. ಈ ಮೂಲಕ ರಾಜ್ಯಗಳ ಮಧ್ಯೆ ಆರ್ಥಿಕ ಮತ್ತು ಅಭಿವೃದ್ಧಿ ಸಮಾನತೆ ತರುವ ಪ್ರಯತ್ನ ಇದು.
ಆದ್ದರಿಂದಲೇ ಇಂದಿರಾ ಗಾಂಧಿ ಮತ್ತು ವಾಜಪೇಯಿ ಅಷ್ಟೇ ಅಲ್ಲ ಮನಮೋಹನ್ ಸಿಂಗ್ ಸರಕಾರದವರೆಗೂ ಕೂಡ ಈ ಸಂಪನ್ಮೂಲ ವಿತರಣೆಗೆ ಕೂಡ 1971ರ ಜನಸಂಖ್ಯೆಯನ್ನೇ ಆಧಾರವಾಗಿ ಬಳಸಿತ್ತು. ಯಾಕೆಂದರೆ ಹೊಸ ಜನಸಂಖ್ಯೆ ಬಳಸಿದರೆ ಜನಸಂಖ್ಯಾ ನಿಯಂತ್ರಣ ಮಾಡಿದ ರಾಜ್ಯಗಳಿಗೆ ವಿನಾಕಾರಣ ನಷ್ಟವಾಗಿ ತನ್ನ ಜವಾಬ್ದಾರಿಯಲ್ಲಿ ವಿಫಲವಾದ ಉತ್ತರದ ರಾಜ್ಯಗಳಿಗೆ ಬಹುಮಾನ ಕೊಟ್ಟಂತಾಗುತ್ತದೆ ಅಂತ. ಈ ಮೂಲಕ ಉತ್ತರದ ರಾಜ್ಯಗಳ ಮೇಲೆ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಒಂದು ಒತ್ತಡ ಕೂಡ ಏರ್ಪಾಡಾಗುತ್ತದೆ ಅಂತ ಕೂಡ.
ಈಗ ಮೋದಿ ಸರಕಾರ ಈ ಕೇಂದ್ರದ ಸಂಪನ್ಮೂಲ ಅಂದರೆ ಡಿವಿಸಿಬಲ್ ಪೂಲ್ ಅನ್ನು ರಾಜ್ಯಗಳ ನಡುವೆ ವಿತರಣೆ ಮಾಡಲು ಇದ್ದ ಜನಸಂಖ್ಯೆಯ ಆಧಾರವನ್ನು 2011ರ ಜನಗಣತಿಗೆ ಬದಲಾಯಿಸಿದೆ. ಅಂದರೆ ಉತ್ತರ ಪ್ರದೇಶದ 1971ರ ಎಂಟೂವರೆ ಕೋಟಿ ಜನಸಂಖ್ಯೆಗೆ ಕೊಡ್ಡುತ್ತಿದ್ದ ಅನುದಾನ ಈಗಿನ ಅಂದರೆ 2011ರ ಇಪ್ಪತ್ತು ಕೋಟಿ ಜನಸಂಖ್ಯೆಗೆ ಆಗುವಷ್ಟು ಕೊಡಬೇಕು. ಇದು ಹೋಗುವುದು ಸುಭಿಕ್ಷ ಮತ್ತು ಜನ ಕಲ್ಯಾಣವನ್ನು ಸಾಧಿಸಿದ ದಕ್ಷಿಣ ರಾಜ್ಯಗಳ ಆದಾಯದಿಂದ. ದಕ್ಷಿಣದ ರಾಜ್ಯಗಳು ಕೇಂದ್ರಕ್ಕೆ ಕೊಟ್ಟ ಒಂದು ರೂಪಾಯಿಗೆ ಬದಲಾಗಿ ಪಡಯುವುದು ಇಪ್ಪತ್ತೋ ಮೂವತ್ತೋ ಪೈಸೆ. ಆದರೆ ಉತ್ತರದ ರಾಜ್ಯಗಳು ಕೇಂದ್ರಕ್ಕೆ ಕೊಡುವ ಒಂದು ರುಪಾಯಿಗೆ ಬದಲಾಗಿ ಪಡೆಯುವುದು ಎರಡರಿಂದ ಏಳು ರೂಪಾಯಿ.
ಅಂದರೆ ಒಳ್ಳೆಯ ಸಮಾಜ ಒಳ್ಳೆಯ ಸರಕಾರ ಮತ್ತು ಒಳ್ಳೆಯ ಅಭಿವೃದ್ಧಿ ಮಾಡಿಕೊಂಡ ದಕ್ಷಿಣದ ರಾಜ್ಯಗಳಿಗೆ ದಂಡ ಹಾಕಿ ಅಭಿವೃದ್ಧಿ ವಿಚಾರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ವಿಫಲವಾದ ಉತ್ತರದ ರಾಜ್ಯಗಳಿಗೆ ಬಹುಮಾನ ಅಂತಾಯಿತು. ಅಲ್ಲವೇ?
ಮತ್ತೆ ಈಗ ಕ್ಷೇತ್ರ ಮರುವಿಂಗಡಣೆಗೆ ಬರೋಣ. ವಾಜಪೇಯಿ ವಿಸ್ತರಿಸಿದ ಇಪ್ಪತ್ತೈದು ವರ್ಷಗಳ ಗಡುವು 2026ಕ್ಕೆ ಮುಗಿಯುತ್ತದೆ. ಕೋವಿಡ್ ಕಾರಣದಿಂದ 2021ರ ಜನಸಂಖ್ಯೆ ಇನ್ನು ಬಾಕಿಯಿದೆ. ಆದರೆ ವಿಶ್ವ ಸಂಸ್ಥೆಯ ವರದಿ ಪ್ರಕಾರ ನಾವೀಗ ಚೈನಾವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ 150ಕೋಟಿ ದಾಟಿ ಜನಸಂಖ್ಯೆಯಲ್ಲಿ ವಿಶ್ವಗುರು ಆಗಿದ್ದೇವೆ. ಈಗ ಈ ಹೊಸ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆ ಮಾಡಿದರೆ ಲೋಕಸಭೆ ಮಿನಿಮಮ್ 848 ಸೀಟುಗಳನ್ನು ಹೊಂದಲಿದೆ.
ಲೋಕಸಭಾ ಕ್ಷೇತ್ರಗಳನ್ನು ಜನಸಂಖ್ಯೆಯ ಆಧಾರದಲ್ಲಿಯೇ ಮರುವಿಂಗಡಣೆ ಮಾಡುವುದರಿಂದ ಹೆಚ್ಚು ಜನಸಂಖ್ಯೆ ಇರುವ ಉತ್ತರದ ರಾಜ್ಯಗಳಲ್ಲಿ ಹೆಚ್ಚು ಸೀಟುಗಳೂ ಜನಸಂಖ್ಯೆ ನಿಯಂತ್ರಣ ಮಾಡಿಕೊಂಡ ಸಮರ್ಥ ಸರಕಾರಗಳ ದಕ್ಷಿಣದ ರಾಜ್ಯಗಳಲ್ಲಿ ಕಡಿಮೆ ಸೀಟುಗಳು ನಿರ್ಮಾಣ ಆಗಲಿವೆ. ಉತ್ತರ ಪ್ರದೇಶ ಮತ್ತು ಬಿಹಾರ ಎರಡೇ ರಾಜ್ಯಗಳು 222ಸೀಟುಗಳನ್ನು ಪಡೆಯಲಿವೆ. ದಕ್ಷಿಣದ ಎಲ್ಲಾ ಐದು ರಾಜ್ಯಗಳನ್ನು ಸೇರಿಸಿದರೆ 164 ಸೀಟುಗಳು ಬರಲಿವೆ. ಅಂದರೆ ಯಾವುದೇ ಸಂಸದೀಯ ತೀರ್ಮಾನಗಳಲ್ಲಿಯೂ ಕೂಡ ದಕ್ಷಿಣ ದನಿ ಗಣನೆಗೆ ಬರುವುದಿಲ್ಲ. ಈ ಮರು ವಿಂಗಡಣೆ ಅಭ್ಭಿವೃದ್ಧಿ ಹೀನ ಅಸಮರ್ಥ ಉತ್ತರದವರ ಕೇಂದ್ರ ಸರಕಾರಕ್ಕೆ ಅಭಿವೃದ್ಧಿ ಪರ ಸಮರ್ಥ ದಕ್ಷಿಣದವರನ್ನು ಗುಲಾಮರನ್ನಾಗಿಸುತ್ತದೆ.
ಈಗ ಇಲ್ಲಿ ಬಿಜೆಪಿಯ ಹುನ್ನಾರ ಗಮನಿಸಿ. ಬಿಜೆಪಿಯ ಬಲ ಇರುವುದೇ ಈ ಹಿಂದಿ ಬೆಲ್ಟ್ ಅಥವಾ ಕೌ ಬೆಲ್ಟ್ ರಾಜ್ಯಗಳಲ್ಲಿ. ದಕ್ಷಿಣದಲ್ಲಿ ಅವರಿಗೆ ಅಸ್ತಿತ್ವವೇ ಇಲ್ಲ. ಈಗಲೂ ಕೂಡ ಬಿಜೆಪಿಐಯ ಅರ್ಧದಷ್ಟು ಸೀಟುಗಳು ಕೌ ಬೆಲ್ಟ್ ಸೀಟುಗಳೇ. ಮತ್ತೆ ಇವರ ಹಿಂದಿ ಮತ್ತು ಹಿಂದೂ ರಾಜಕಾರಣದ ರಾಮ ಮಂದಿರ ಇತ್ಯಾದಿ ಎಲ್ಲ ಕೌ ಬೆಲ್ಟ್ ಮೂಲದ ಪದಾರ್ಥಗಳೇ. ಸುಮಾರು ವರ್ಷಗಳ ಸರ್ಕಸ್ ನಂತರವೂ ಒಲಿಯದ ದಕ್ಷಿಣವನ್ನು ಗೌಣವಾಗಿಸಲು ಇದು ಸುವರ್ಣಾವಕಾಶ ಅಲ್ಲವೇ ? ಹೆಂಗೂ ಯೋಗಿ ಆದಿತ್ಯನಾಥ್ ಪ್ರಖರ ಹಿಂದುತ್ವ ರಾಜಕಾರಣ ವರ್ಕ್ ಔಟ್ ಆಗಿದೆ. ಮೋದಿಯ ಕೇಸರೀಕರಣ ಸಕ್ಸಸ್ ಆಗಿದೆ. ಹೀಗಿರುವಾಗ ಉತ್ತರದ ರಾಜ್ಯಗಳ ಮೇಲೆ ಫೋಕಸ್ ಮಾಡಿ ಅಧಿಕಾರಕ್ಕೆ ಬರುವುದು ಸುಲುಭ. ಆಮೇಲೆ ದಕ್ಷಿಣದ ರಾಜ್ಯಗಳು ಏನು ಮಾಡಿಕೊಂಡಾವು?
ದಕ್ಷಿಣದ ರಾಜ್ಯಗಳಿಗೆ ಮೋದಿ ಸರಕಾರ ಆರ್ಥಿಕ ವಿಚಾರದಲ್ಲಿ ದಂಡವನ್ನೂ ರಾಜಕೀಯ ವಿಚಾರದಲ್ಲಿ ತಲೆದಂಡವನ್ನೂ ಹಾಕಲು ತಯ್ಯಾರಿ ಮಾಡಿಯಾಗಿದೆ. ನಮ್ಮ ವಿರೋಧ ಪಕ್ಷಗಳು ಇನ್ನೂ ನಿದ್ದೆಯಿಂದ ಎದ್ದಿಲ್ಲ. ನಿದ್ದೆಯೇನು, ಅವು ಮೂರ್ಛೆ ರೋಗಕ್ಕೆ ಬಲಿಯಾಗಿವೆ.
ತನ್ನ ಸಂಪನ್ಮೂಲಗಳನ್ನು ಬ್ರಿಟಿಷ್ ಸರಕಾರ ಇಂಗ್ಲೆಂಡಿಗೆ ಸಾಗಿಸಿ ತನ್ನ ರಾಜಕೀಯ ಮತ್ತು ಸಂಸದೀಯ ಹಕ್ಕನ್ನು ಕಸಿದ ಕಾರಣಕ್ಕೆ ಭಾರತ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಹೂಡಿದ್ದು. ಈಗ ದಕ್ಷಿಣದ ಸಂಪನ್ಮೂಲವನ್ನು ಉತ್ತರಕ್ಕೆ ಸಾಗಿಸಿ ತನ್ನ ರಾಜಕೀಯ ಮತ್ತು ಸಂಸದೀಯ ಹಕ್ಕನ್ನು ಕಸಿದ ಒಕ್ಕೂಟ ಸರಕಾರದ ವಿರುದ್ಧ ಒಂದು ಸಧೃಡ ಹೋರಾಟ ರೂಪಿಸಿ, ದಕ್ಷಿಣದ ಸ್ವಾಯತ್ತತೆಗಾಗಿ ಒತ್ತಾಯಿಸುವ ಕಾಲ ಬಂದಿದೆ. ನಾವು ನಮ್ಮ ಹಣದ ಮೇಲೆ ಮೊದಲ ಹಕ್ಕನ್ನು ಕೇಳಬೇಕು. ನಾವು ಹೊಸ ಸಂಸತ್ತಿನಲ್ಲಿ ಉತ್ತರಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಾತಿನಿಧ್ಯ ಕೇಳಬೇಕು. ದಕ್ಷಿಣದ ಅಭಿವೃದ್ಧಿಗೆ ದಂಡ, ಉತ್ತರದ ವೈಫಲ್ಯಕ್ಕೆ ಬಹುಮಾನ ಕೊಡುವುದು ಯಾವ ನ್ಯಾಯ ಹೇಳಿ?