ಭಾವನಾತ್ಮಕ ಖುಷಿ ನೀಡಿದ ಯೋಜನೆಗಳು

  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಹಿಳೆಯರನ್ನು ಮುನ್ನೆಲೆಗೆ ತರುವ ಕಾಳಜಿ

ಭಾವನಾತ್ಮಕ ಖುಷಿ ನೀಡಿದ ಯೋಜನೆಗಳು

ಭಾವನಾತ್ಮಕ ಖುಷಿ ನೀಡಿದ ಯೋಜನೆಗಳು

ನಾಗೇಗೌಡ ಕೀಲಾರ

 

ಈ ಭಾಗ್ಯಗಳ ಬಗ್ಗೆ ಬರುತ್ತಿರುವ ಲೇವಡಿ, ವ್ಯಂಗ್ಯ,ಹಠಾತ್ತಾದ ಇಕಾನಮಿಯ ಕುರಿತಾದ ಕಾಳಜಿನೋಡಿದರೆ ಬಡವರ ಬಗ್ಗೆ ಇರುವ ಆಳದ ಪೂರ್ವಾಗ್ರಹ, ಮಹಿಳೆಯ ಬಗ್ಗೆ ಇರುವ ತಾತ್ಸಾರ ಕಣ್ಣಿಗೆ ಗಿಡಿಯುತ್ತದೆ.

ನಿಜಕ್ಕೂ ಈ ಭಾಗ್ಯ ಮಹಿಳೆಯರಿಗಷ್ಟೇ ಅಲ್ಲ, ಆದಾಯವಿಲ್ಲದೇ ಕುಟುಂಬ ಪೊರೆಯುವ ಗಂಡಸಿನ ಪಾರಂಪರಿಕ ಹೊರೆಯಲ್ಲಿ ಅತ್ತ ಅಸಹಾಯಕತೆಯನ್ನು ಹೇಳಲಾಗದೇ, ಇತ್ತ ಗಂಡಸಿನ ಅಹಂಕಾರವನ್ನೂ ಬಿಡಲಾರದೇ ಒದ್ದಾಡುತ್ತಿರುವ ಗಂಡಸರಿಗೂ ಬಿಡುಗಡೆ ನೀಡಿದೆ.( ಎಣ್ಣೆ ಪಾರ್ಟಿಗಳನ್ನು ಬಿಟ್ಟು)

೨ ಸಾವಿರ ಸಾಲಕ್ಕೆ ಅದೆಷ್ಟು ಗಿಂಜಬೇಕು ಎಂಬ ಅನುಭವ ಬಡ ಕುಟುಂಬದ ಗಂಡಸು- ಹೆಂಗಸು ಇಬ್ಬರಿಗೂ ಇದೆ.

ಬೆಲೆ ಏರಿಕೆಯ ಬಿಸಿ ತಟ್ಟದಂತೆ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ ನೀಡಿ ಪ್ರಯಾಣ ಭತ್ಯೆ+ ಊಟ ತಿಂಡಿ ವೆಚ್ಚವನ್ನೂ ಭರಿಸುವ ಸರಕಾರ, ಕಂಪೆನಿಗಳ ಉದ್ಯೋಗಸ್ಥರಿಗೆ ಇದು ಅರ್ಥವಾಗುವುದು ಕಷ್ಟ.

ಇದರ ಮೇಲೆ ರಜಾದಲ್ಲಿ ಪ್ರವಾಸ ಮಾಡಲೆಂದೇ ಒಂದು ಸವಲತ್ತು ಇದೆ!!

ಯಾವ ರೈತ, ಕೂಲಿಕಾರ, ಅವರ ಮನೆ ಹೆಂಗಸರು ಮನೆಗೆಲಸದ ಮಹಿಳೆಯರಿಗೆ ಇಂಥಾ ಕುಶನ್ ನೀಡಬೇಕೆಂದು ಸರಕಾರಕ್ಕೆ ಇಷ್ಟುದಿನ ಅನ್ನಿಸಿರಲಿಲ್ಲ. ಬಿಜೆಪಿ ಎಂಥಾ ವಿಕೃತಿ ತೋರಿದೆಯೆಂದರೆ ಗ್ಯಾಸ್ ಸಬ್ಸಿಡಿ ನಿಲ್ಲಿಸಿದ್ದು ಒಂದೆಡೆಯಾದರೆ, ಬಡವರು ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಇಂದಿರಾ ಕ್ಯಾಂಟೀನಿಗೂ ಕಲ್ಲು ಹಾಕಿತು. ರೈಲಿನಲ್ಲಿ ಹಿರಿಯ ನಾಗರಿಕರಿದ್ದ ಕನ್ಸೇಶನ್ನನ್ನೂ ಕಿತ್ತು ಹಾಕಿತು.

ಮಹಿಳೆಯರು ತಿರುಗುತ್ತಾರೆ ಅನ್ನುವ ಕಿಚ್ಚಿನ ಮಾತುಗಳು ಹರಡುತ್ತಲೇ ಇವೆ.

ಇನ್ನೀಗ ಹುಡುಗಿಯರಿಗೆ ಓಡಿಹೋಗಲು ಸುಲಭವಾಯಿತು ಎಂಬಂಥಾ ಹೀನ ಪಾಳೇಗಾರಿ ವ್ಯಂಗ್ಯಗಳನ್ನೂ ಗಮನಿಸಿದ್ದೇನೆ

ತಿರುಗುವ ಚಾಳಿ ಹೆಚ್ಚಿದ್ದು ಕಾರ್ಪೊರೇಟ್ ಮೂಲದ ಉದ್ಯೋಗ ಪಡೆದವರಿಗೆ ಮಾತ್ರಾ! ಹಳ್ಳಿ ಹೆಂಗಸರು ಹೆಚ್ಚೆಂದರೆ ಧರ್ಮಸ್ಥಳ, ಸುಬ್ರಮಣ್ಯ ಹೋದಾರು. ಅದೂ ಕಂಡಕ್ಟಡ್ ಟೂರ್ ತರ ಗುಂಪಾಗಿ ಅಲ್ಲ. ಇನ್ನು ಅವರ ತಡೆಹಿಡಿದ ಖರ್ಚಿನ ಬಾಬುಗಳು ಸಾವಿರಾರು ರುಪಾಯಿಯದ್ದಲ್ಲ. ಮಗಳು/ ಮೊಮ್ಮಗುವಿಗೆ ಅಗ್ಗದ ಓಲೆ, ಫ್ರಾಕು, ಅಂಗಿ, ತನಗೆ ಸೂರತ್ ಸೀರೆ, ಪೇಟೆಗೆ ಹೋದಾಗ ಮಕ್ಕಳಿಗೆ ಕಪ್ ಐಸ್ ಕ್ರೀಂ. ಮುಖ್ಯವಾಗಿ ಸಣ್ಣಪುಟ್ಟ ಖರ್ಚಿಗೂ ಗಂಡಸಿನ ಹಂಗಲ್ಲಿರುವ ಗ್ರಾಮೀಣ ಹೆಂಗಸರಿಗೆ ಈ ಭಾಗ್ಯಗಳು ಬಿಡುಗಡೆ ನೀಡುತ್ತವೆ. ಮುಖ್ಯತಃ ಬೇಸಿಗೆಯ ವಲಸೆ, ಉದ್ಯೋಗ ಖಾತರಿಯ ಕೂಲಿ‌ಕೆಲಸ ಬೇಕಾಗಲಾರದು. Let them enjoy a few little joys. ಒಂದು ಒಡೆದ ಬಾತ್ ರೂಮ್ ರಿಪೇರಿ ಮಾಡಲು ದುಡ್ಡು ಹೊಂದಿಸಲಾರದೇ ತಿಂಗಳಾನುಗಟ್ಟಲೆ ಮುಂದೂಡಿದ ಕುಟುಂಬಗಳಿವೆ. ಯಾವ ಹಳ್ಳಿ ಹೆಂಗಸೂ unwind ಆಗಲು ಊರು ಸುತ್ತಲ್ಲ! ಒಂದು ವೇಳೆ ಅವರಿಗೆ ಹಂಪಿ, ಬಿಜಾಪುರ, ಜೋಗ ನೋಡಬೇಕೆನ್ನಿಸಿದರೆ ನೋಡಲಿ. ಪ್ರೇಕ್ಷಣೀಯ ಸ್ಥಳಗಳನ್ನು ಕಾಸಿದ್ದವರೇ ನೋಡಬೇಕೇ?

ಭಾವನಾತ್ಮಕ ಖುಷಿಯನ್ನು ಈ ಯೋಜನೆಗಳು ನೀಡಿವೆ. ಭೌತಿಕ ಲೆಕ್ಕಾಚಾರಕ್ಕಿಂತ ದೊಡ್ಡದಿದು.

 

 

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಮಹಿಳೆಯರನ್ನು ಮುನ್ನೆಲೆಗೆ ತರುವ ಕಾಳಜಿ

ಗುರುಪ್ರಸಾದ್ ಕಂಟಲಗೆರೆ

 

 

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸುವ ಮೂಲಕ ರಾಜ್ಯ ಸರ್ಕಾರ ನಿಜ ಅರ್ಥದಲ್ಲಿ ಮಹಿಳೆಯರನ್ನು ಮುನ್ನೆಲೆಗೆ ತರುವ ಕಾಳಜಿ ಹೊಂದಿದೆ ಎನಿಸುತ್ತದೆ.

ದೂರ ಪ್ರಯಾಣ ಮಾಡುವುದು, ವ್ಯಾಪಾರ ನಿಮಿತ್ತ ಹಳ್ಳಿಯಿಂದ ನಗರಗಳಿಗೆ ಎಡೆತಾಕುವುದು, ಕೋರ್ಟು ಕಚೇರಿ ಅಲೆಯುವುದು, ಮನರಂಜನೆ ಅಥವ ಸಿನಿಮಾ ಸಭೆಗಳಲ್ಲಿ ಗಂಡಸರೆ ಇರುವುದು. ಇತ್ಯಾದಿ ಹೊರಗಿನ ವ್ಯವಹಾರಗಳಲ್ಲೆಲ್ಲ ಗಂಡಸರ ಪ್ರಾಬಲ್ಯವೇ ಹೆಚ್ಚಾಗಿರುವುದು ಸರ್ವೇಸಾಮಾನ್ಯ. ಗಂಡಸರಾದರೆ ಬೈಕು ಕಾರುಗಳಲ್ಲೂ ಪ್ರಯಾಣಿಸಿ ಈ ಎಲ್ಲಾ ಕ್ಷೇತ್ರಗಳಲ್ಲೂ ಓಡಾಡಿಕೊಂಡು ಬರುತ್ತಿದ್ದರು. ಈಗ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಮೂಲಕ ಯಾವ ಹೊರಗಿನ ವ್ಯವಹಾರಗಳು ಕೇವಲ ಗಂಡಸರದ್ದು ಮಾತ್ರವೇ ಎಂಬ ಅಲಿಖಿತ ಒಪ್ಪಂದವೇರ್ಪಟ್ಡಿತ್ತೊ, ಅಲ್ಲೆಲ್ಲ ಮಹಿಳೆಯರು ಖರ್ಚಿಲ್ಲದೆ ಪ್ರಯಾಣಿಸಿ ಕೆಲಸ ಮಾಡಿಕೊಂಡು ಬರುವ ಮತ್ತು ಆ ಕ್ಷೇತ್ರದಲ್ಲೂ ತಮ್ಮ‌ ಸ್ವಾವಲಂಭನೆಯನ್ನು ಸಾಧಿಸಲು ಸರ್ಕಾರ ಪ್ರೋತ್ಸಾಹಕವಾಗಿ ನಿಂತಂತಿದೆ. ಇದರ ಜೊತೆಗೆ ಇಂಥ ಕೆಲಸಗಳಲ್ಲಿ ಸ್ವಂತ ಬೈಕು ಕಾರ್ ಗಳನ್ನು ಅವಲಂಭಿಸುವ ಗಂಡಸರು ತಿಂಗಳಿಗೆ ಒಂದೆರಡು ದಿನವಾದರೂ ತಮ್ಮ‌ ಪತ್ನಿಯರನ್ನ ತಮ್ಮ‌ಕೆಲಸಗಳಿಗೆ ಉಚಿತ ಪ್ರಯಾಣದ ಬಸ್ ಗಳಿಗೆ ಕಳುಹಿಸಿದರೆ ಇಂದನ ಉಳಿತಾಯವು ಆಗುತ್ತದೆ ಮತ್ತು ಮಹಿಳೆಯರೂ ತೆರೆದುಕೊಳ್ಳುತ್ತಾರೆ.

ನಮ್ಮ‌ ಹಳ್ಳಿಗರಿಗೆ ಬಸ್ ಚಾರ್ಜ್ ಒಂದು ಮುಖ್ಯವಾದ ಸಂಗತಿ, ಅದಿಲ್ಲದ ಕಾರಣಕ್ಕೇ ಬಹುತೇಕ ಕುಟುಂಬದ ಮಹಿಳೆಯರು ದೂರದ ನೆಂಟರಿಷ್ಟರ ಸಾವಿಗೆ, ಮದುವೆ‌ ನಾಮಕಣಗಳಿಗೆ ಹೋಗುವ ಆಸೆಯನ್ನೆ ಕಟ್ಟಿಟ್ಟು ಗಂಡಸರಿಗೇ ಬಿಟ್ಟುಕೊಟ್ಟಿರುತ್ತಾರೆ. ಇನ್ನು ಅದು ಉಚಿತವಾದರೆ ಮಹಿಳೆಯರೂ ಸಂಬಂಧಗಳನ್ನು ಉಳಿಸಿಕೊಳ್ಳುವ ಇತ್ತ ವ್ಯವಹಾರ ಕಲಿಯುವ ಹಕ್ಕನ್ನು ಪಡೆಯುತ್ತಾರೆ. ಇನ್ನಾದರೂ ಶೇಕಡ 90 ರಷ್ಟು ಗಂಡಸರಿಂದಲೇ ತುಂಬಿತುಳುಕುವ ಗ್ರಾಮೀಣ ಸಾರಿಗೆಗಳಲ್ಲಿ ಹೆಂಗಸರ ಸಂಖ್ಯೆ ಬೆಳೆಯಲಿ.

ಅವರು ಸುಖಾಸುಮ್ಮನೆ ತಿರುಗಾಡುವವರಲ್ಲ. ಅವರು ಬಸ್ ಹತ್ತಿದ್ದಾರೆಂದರೆ ಏನೋ ಘಹನವಾದ ಉದ್ದೇಶ ಇದ್ದೆ ಇರುತ್ತದೆ. ಪಾಪ ಎಷ್ಟೋ ಸರ್ತಿ ಗಂಡನಿಂದ ದಾಳಿಗೊಳಗಾದ ಪತ್ನಿ ತವರಿಗೋಗಲೂ ಬಸ್ ಚಾರ್ಜ್ ಇಲ್ಲದೆ ನೋವು ನುಂಗಿಕೊಂಡು ಮೂಲೆಹಿಡಿದದ್ದಿದೆ.